ಮಗು ಹಸಿವಿನಿಂದ ಅಳುವಾಗ ತಾಯಿ ಹಾಲೂಡುವುದನ್ನು ಗಮನಿಸಿದ್ದ ಆಫ್ಘಾನಿಸ್ಥಾನದ ಆ ಪುಟ್ಟ ಬಾಲಕಿ ಭೂಕಂಪದಿಂದ ಅವಳ ತಂದೆ ತಾಯಿ ಅಸುನೀಗಿದಾಗ, ತನ್ನ ಪುಟ್ಟ ತಂಗಿಗೆ ತನ್ನ ಎದೆಯ ತೆಕ್ಕೆಗೆ ಮಗುವನ್ನು ಎಳೆದುಕೊಂಡು ಮೂಡದ ಮೊಲೆಯನ್ನು ಮಗುವಿನ ಬಾಯಿಗೆ ತುರುಕುತ್ತಿದ್ದಳು, ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಮೊಲೆ ಮೂಡದ ಹೊತ್ತಿನಲ್ಲಿ..’ ತಪ್ಪದೆ ಮುಂದೆ ಓದಿ …
ಇತ್ತೀಚೆಗೆ ಆಫ್ಘಾನಿಸ್ಥಾನದಲ್ಲಿ ನಡೆದ ಪ್ರಬಲ ಭೂಕಂಪನದ ಪರಿಣಾಮವಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ಥಗೊಂಡಿದ್ದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಮನ ಕಲಕುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ನನ್ನನ್ನು ಅದೆಷ್ಟು ಕಂಗೆಡಿಸಿತ್ತೆಂದರೆ ಎರಡು ಮೂರು ರಾತ್ರಿ ಕಣ್ಣಿಗೆ ಕಣ್ಣು ಹತ್ತಲಿಲ್ಲ. ಕೊಲ್ಲುವವನು ಒಬ್ಬನಾದರೆ ಕಾಯುವವನು ಒಬ್ಬನು ಇರುತ್ತಾನೆ ಎಂಬುದಕ್ಕೆ ಸಾಕ್ಷಿ ಯಂತಿತ್ತು ಆ ವಿಡಿಯೋ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವನೇ ಎಂಬುದು ಸಾಮಾನ್ಯ ಗಾದೆ ಮಾತಾದರೂ ಪರಮ ಸತ್ಯದ ನುಡಿ.
ಕೇವಲ ಎರಡು-ಮೂರು ವರ್ಷದ ಚಿಕ್ಕ ಬಾಲಕಿ ಏಳೆಂಟು ತಿಂಗಳ ಹಸುಗೂಸನ್ನು ತನ್ನೆದೆಯ ತೆಕ್ಕೆಗೆ ಎಳೆದುಕೊಂಡು ಸಂತೈಸುವ ಪರಿಯ ವಿಡಿಯೋ ಹೃದಯವನ್ನೇ ಕಲಕಿಬಿಟ್ಟಿತ್ತು. ಅಮ್ಮನಂತೆ ಸಾಂತ್ವನ ಗೈಯ್ಯುವ ದೃಶ್ಯ ಮನ ಮಿಡಿಯುವಂತಿತ್ತು. ಭೂಕಂಪನದ ದುಷ್ಪರಿಣಾಮಕ್ಕೆ ಒಳಗಾಗಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಹಸು ಮಕ್ಕಳಿಬ್ಬರಿಗೂ ಬಿದ್ದು ಹೋದ ತಮ್ಮ ಮನೆಯ ಮುಂದಿನ ಅವಶೇಷಗಳ ಅಡಿಯಲ್ಲಿ ಸಿಲುಕಿ ಅಳುತ್ತಿದ್ದರು. ಅದೃಷ್ಟವಶಾತ್ ಆ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು. ಕೇವಲ ಮೂರು ವರ್ಷದ ಬಾಲಕಿ ಅವಳೇ ಪುಟ್ಟ ಮಗುವಿನಂತೆ ಇದ್ದಳು.ಆದರೆ ವಯಸ್ಸಿಗೂ ಮೀರಿದ ಪ್ರಬುದ್ಧತೆ ಅವಳಲ್ಲಿ ಮೂಡಿದ್ದಾದರೂ ಹೇಗೆ ? ಹೊಟ್ಟೆ ಹಸಿವಿನಿಂದ ಕಂಗಾಲಾಗಿ ತನ್ನ ಪುಟ್ಟ ತಂಗಿ ಅಳುತ್ತಿದ್ದರೆ ಆಕೆಯ ಒಡಲ ಬೇಗೆಯನ್ನು ತಣಿಸಲು ತಾನೇ ತಾಯಾಗ ಹೊರಟವಳನ್ನು ಮುಗ್ಧ ಬಾಲಕಿ ಎನ್ನಲು ಸಾಧ್ಯವೇ ? ಜಗತ್ತಿಗೇ ತಾಯಾಗಿದ್ದಳು ಅವಳು. ತನ್ನ ಎದೆಯ ತೆಕ್ಕೆಗೆ ಮಗುವನ್ನು ಎಳೆದುಕೊಂಡು ಮೂಡದ ಮೊಲೆಯನ್ನು ಮಗುವಿನ ಬಾಯಿಗೆ ತುರುಕಲು ಪ್ರಯತ್ನಿಸುವ ಆ ಬಾಲಕಿಯು ಸಾಕ್ಷಾತ್ ಜಗನ್ಮಾತೆ ಪಾರ್ವತಿಯಂತೆ ಕಂಡಿದ್ದಳು.

ಫೋಟೋ ಕೃಪೆ : google
ಮಗು ಹಸಿವಿನಿಂದ ಅಳುವಾಗ ತಾಯಿ ಹಾಲೂಡುವುದನ್ನು ಗಮನಿಸಿದ್ದ ಆ ಪುಟ್ಟ ಹೆಣ್ಣು ಜೀವ ಅದನ್ನೇ ಯಥಾವತ್ತಾಗಿ ಅನುಕರಿಸಿದ ರೀತಿ ಅನನ್ಯ. ಹೆಣ್ಣು ಜೀವಕ್ಕೆ ತಾಯಾಗುವುದನ್ನು, ತಾಯ್ತನದ ಅನುಭೂತಿಯನ್ನು ನೀಡುವ ಮಧುರ ಬಾಂಧವ್ಯವನ್ನು ಯಾರೂ ಹೇಳಿ ಕೊಡಬೇಕಾಗಿಲ್ಲ. ಅದು ಹೆಣ್ಣು ಜೀವಕ್ಕೆ ದೇವನಿತ್ತ ವರ, ದೈವದತ್ತ ಕೊಡುಗೆ. ಅವಳು ಚಿಕ್ಕ ಬಾಲಕಿಯಾಗಿರಲಿ, ಹಣ್ಣು ಹಣ್ಣು ಮುದುಕಿಯಾಗಿರಲಿ ತಾಯ್ತನದ ಮಾತೃ ಹೃದಯ ಸದಾ ಮಿಡಿಯುತ್ತಿರುತ್ತದೆ. ತಾಯಾದವಳಿಗೆ ತನ್ನ ಉದರದಲ್ಲಿ ಜನಿಸಿದ ಮಕ್ಕಳಷ್ಟೇ ಮಕ್ಕಳಲ್ಲ. ಇತರ ಮಕ್ಕಳ ಕಷ್ಟ ನೋವು ಹಸಿವಿಗೆ ಸ್ಪಂದಿಸುವ ಹೂ ಮನಸಿರುತ್ತದೆ ಇದಕ್ಕೆ ಉದಾಹರಣೆಯಾಗಿ ಇತ್ತೀಚಿಗಿನ ಘಟನೆಯೊಂದನ್ನು ಸ್ಮರಿಸಬಹುದು. ಅನಾಥ ಶಿಶುವೊಂದಕ್ಕೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಎದೆ ಹಾಲುಣಿಸಿ ಮಗುವಿನ ಹಸಿವನ್ನು ನೀಗಿಸಿದ ವಿಡಿಯೋ ವೈರಲ್ ಆಗಿತ್ತು. ಹಾಗೆ ನೋಡಿದರೆ ನಮ್ಮ ಬಾಲ್ಯಕಾಲದಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತಿದ್ದವು. ಆಗಿನ ಕಾಲದ ಕೂಡು ಕುಟುಂಬಗಳಲ್ಲಿ ತಾಯಿ ಹೊಲದ ಕೆಲಸದಲ್ಲೋ , ಮತ್ಯಾವುದೋ ಕೆಲಸಗಳಲ್ಲಿ ತೊಡಗಿದ್ದಾಗ ಮನೆಯಲ್ಲಿ ಮಗು ಹಸಿವಿನಿಂದ ಅಳುತ್ತಿದ್ದರೆ ಯಾರಾದರೂ ಬಾಣಂತಿಯರು ಆ ಮಗುವಿಗೆ ಹಾಲೂಡಿ ಸಂತೈಸುತ್ತಿದ್ದರು. ಮನೆಯಲ್ಲಿ ಇಪ್ಪತ್ತು ಮೂವತ್ತು ಜನ ಇರುತ್ತಿದ್ದರಿಂದ ವರ್ಷಕ್ಕೆ ಎರಡು ಮೂರು ಬಾಣಂತನಗಳು ಸಾಮಾನ್ಯವಾಗಿದ್ದವು.
ಪ್ರಕೃತಿಯ ಮುಕ್ಕೋಟಿ ಜೀವ ಸಂಕುಲಗಳಲ್ಲೂ ಸಕಲ ಪ್ರಾಣಿ-ಪಕ್ಷಿಗಳಲ್ಲೂ ಹೆಣ್ಣು ಜೀವ ಮಾತ್ರವೇ ತನ್ನ ಸಂತಾನವನ್ನು ಹೆತ್ತು ಹೊತ್ತು ಸಾಕಿ ಸಲಹುವ, ಹಸಿವನ್ನು ನೀಗಿಸುವ ಮಹತ್ತರ ಜವಾಬ್ದಾರಿ ಹೊತ್ತಿರುತ್ತದೆ. ತಾಯ್ತನ ಎಂಬುದು ಕಾಲ, ದೇಶ, ಧರ್ಮ, ಭಾಷೆಯನ್ನೂ ಮೀರಿದಂತಹ ಭಾವನಾತ್ಮಕ ಬಂಧ. ತಾಯಿ ಮಗುವಿನ ನಡುವೆ ಉದಯಿಸುವ ಅನೂಹ್ಯ ಅನುಬಂಧ.

ಫೋಟೋ ಕೃಪೆ : google
ಪುಟ್ಟ ಹೆಣ್ಣು ಮಗು ಹುಟ್ಟುವಾಗಲೇ ತಾಯ್ತನದ ಲಕ್ಷಣಗಳನ್ನೂ, ಹೆಣ್ತನದ ಛಾಯೆಯನ್ನು ಒಡಲಲ್ಲಿ ಹೊತ್ತು ಜನಿಸಿರುತ್ತದೆ. ಕೇವಲ ಹತ್ತು ಹನ್ನೊಂದು ತಿಂಗಳಿಗೆ ತಪ್ಪು ಹೆಜ್ಜೆ ಹಾಕುತ್ತಾ ನಡೆದಾಡುವುದನ್ನು ಕಲಿಯುವ ಪುಟ್ಟ ಮಗಳು ಒಂದು ವರ್ಷ ತುಂಬುವುದರೊಳಗೆ ಅಮ್ಮನ ಕೈಯಿಂದ ಪೊರಕೆ ತೆಗೆದುಕೊಂಡು ಕಸ ಗುಡಿಸಲು ಪ್ರಾರಂಭಿಸುತ್ತಾಳೆ. ತೊದಲು ಮಾತನಾಡುತ್ತಾ ಅಮ್ಮ ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಭಾಗಿಯಾಗುತ್ತಾಳೆ. ನಾನು ರೊಟ್ಟಿ ಮಾಡುತ್ತಿದ್ದರೆ ಮಮ್ಮಿ ನಾನು ರೊಟ್ಟಿ ಮಾಡುತ್ತೇನೆ ಎಂದು ಮೂರು ವರ್ಷದ ಮಗಳು ಜೊತೆಯಾಗುತ್ತಿದ್ದಳು. ಇನ್ನು ದೇವರ ಪೂಜೆ ಮಾಡುವಾಗ, ಹೊಸಿಲಿಗೆ ಅರಿಶಿನ ಕುಂಕುಮ ಹಚ್ಚಲು ಕೊಡಬೇಕಿತ್ತು. ಎಲ್ಲಾ ದೇವರ ವಿಗ್ರಹಗಳಿಗೂ ಅರಿಶಿನ ಕುಂಕುಮ ಹಚ್ಚಿ ಊದುಬತ್ತಿ ಹಚ್ಚಿ ಪೂಜೆ ಮಾಡುತ್ತಿದ್ದಳು. ಅಕ್ಕಿ ಸ್ವಚ್ಛ ಮಾಡಲು ಕುಳಿತರೆ ನಾನು ಮಾಡುತ್ತೇನೆ ಎಂದು ಮೊರ ಹಿಡಿದು ಅಕ್ಕಿ ಕೇರುವುದು, ಅಮ್ಮನ ಸೀರೆ ಉಟ್ಟು ನಲಿಯುವುದು. ಹೀಗೆ ಹೆಣ್ಣು ಮಕ್ಕಳಿದ್ದರೆ ಮನೆಯಲ್ಲಿ ಸಂಭ್ರಮ, ಸಂತೋಷ.
ನೀವು ಯಾವುದೇ ಚಿಕ್ಕ ಹೆಣ್ಣು ಮಗುವನ್ನು ಗಮನಿಸಿ, ಅವಳ ಬಳಿ ಪುಟ್ಟ ಅಡುಗೆ ಪರಿಕರಗಳ ಸೆಟ್ಟು ಇರುತ್ತದೆ, ಹಾಗೆಯೆ ಗೊಂಬೆಗಳು ಇರುತ್ತವೆ. ಅದರಲ್ಲೂ ಹೆಣ್ಣು ಗೊಂಬೆಗಳು, ಅವುಗಳಿಗೆ ಸೀರೆ ಉಡಿಸುವುದು, ಅಲಂಕಾರ ಮಾಡುವುದು, ಮದುವೆ ಮಾಡುವುದು ಇತ್ಯಾದಿ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತದೆ. ಜಾತ್ರೆಯಲ್ಲಿಯೋ ಸಂತೆಯಲ್ಲೋ ಅಮ್ಮನನ್ನು ಕಾಡಿ ಬೇಡಿ ಅಡುಗೆ ಸೆಟ್, ಬೊಂಬೆಗಳನ್ನು ಕೊಡಿಸಿಕೊಂಡಿರುತ್ತಾಳೆ. ಮತ್ತೆ ಮನೆಯಲ್ಲಿ ಅಡುಗೆ ಆಟ ಆಡುವುದು. ಆ ಪುಟ್ಟ ಬಾಲಕಿ ಅಮ್ಮನ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಅಮ್ಮನಂತೆ ವರ್ತಿಸುವುದು, ಹೀಗೆ ಹೆಣ್ಣಿಗೆ ತಾಯ್ತನ ಎಂಬುದು ಯಾರೂ ಕಲಿಸಬೇಕಾಗಿಲ್ಲ. ಹುಟ್ಟುತ್ತಲೇ ತಾನಾಗಿಯೇ ರಕ್ತಗತವಾಗಿ ಹರಿದು ಬಂದಿರುವ ಗುಣ ಅದು. ಇಷ್ಟೇ ಅಲ್ಲದೆ ಹೆಣ್ಣು ಸಹನ ಶೀಲಳು, ಕ್ಷಮಯಾ ಧರಿತ್ರಿ, ಸೇವಾ ಮನೋಭಾವದವಳು, ಸೃಜನಶೀಲಳು, ಭೂಮಿಯಷ್ಟೇ ತಾಳ್ಮೆ ಉಳ್ಳವಳೂ ಆಗಿದ್ದಾಳೆ. ಆದ್ದರಿಂದಲೇ ಸ್ತ್ರೀಯನ್ನು
- ಕಾರ್ಯೇಶು ದಾಸಿ – ಸೇವಕನಂತೆ ಕೆಲಸ ಮಾಡುವವಳು.
- ಕರಣೇಶು ಮಂತ್ರಿ – ಮಂತ್ರಿಯಂತೆ ಸಲಹೆ ನೀಡುವವಳು.
- ಭೋಜೇಶು ಮಾತಾ – ತಾಯಿಯಂತೆ ಆಹಾರ ನೀಡಿ ಸಲಹುವವಳು.
- ಶಯನೇಶು ರಂಭ – ಸ್ವರ್ಗ ಕನ್ಯೆ ರಂಭೆಯಂತೆ ಸಂತೋಷ ಪಡಿಸುವವಳು.
- ರೂಪೇಶು ಲಕ್ಷ್ಮಿ- ಮಹಾಲಕ್ಷ್ಮಿಯಂತೆ ಸುಂದರ ರೂಪ ಉಳ್ಳವಳು.
- ಕ್ಷಮಯಾ ಧರಿತ್ರಿ- ಭೂಮಿಯಂತೆ ಸಹನಾಶೀಲಳು.
- ಷಟ್ ಧರ್ಮಯುಕ್ತೆ- ಈ ಆರೂ ಗುಣಗಳನ್ನು ಹೊಂದಿರುವ ಸಂಪೂರ್ಣ ಮಹಿಳೆ.
- ಕುಲ ಧರ್ಮ ಪತ್ನಿ- ಒಳ್ಳೆಯ ಮನೆತನದ ಸದ್ಗೃಹಿಣಿ.
ಎಂದು ವರ್ಣಿಸಲಾಗಿದೆ.
ಮೊಲೆ ಮೂಡದ ಹೊತ್ತಿನಲ್ಲಿ ಆ ಮುಗ್ಧ ಬಾಲಕಿ ತನ್ನ ತಂಗಿಗೆ ಹಾಲೂಡಲು ಯತ್ನಿಸಿ ಜಗತ್ತಿಗೇ ತಾಯಿಯಾದವಳ ಪ್ರತಿನಿಧಿಯಂತೆ ಪ್ರಬುದ್ಧ ನಡವಳಿಕೆಯನ್ನು ತೋರಿದ ಪರಿ ನನ್ನಿಂದ ಈ ಲೇಖನವನ್ನು ಬರೆಯಿಸಿತು. ಏನಾದರಾಗಲಿ ಆ ಮಕ್ಕಳಿಬ್ಬರಿಗೂ ಭವಿಷ್ಯ ಉಜ್ವಲವಾಗಲಿ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ಸರ್ವಮಂಗಳ ಜಯರಾಂ – ಶಿಕ್ಷಕಿ , ಗೌರಿಬಿದನೂರು.
