ನಿನಗಾಗಿ ಕಾದರೆ ಯಾರ್ಯಾರೋ ಬಂದರು ಕಾದ ದಾರಿಯಲಿ ರಾಮನಿಲ್ಲ…ಶಿಕ್ಷಕರು, ಲೇಖಕರು ಆದ ಜ್ಯೋತಿ ಕುಮಾರ್.ಎಂ (ಜೆ.ಕೆ.) ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮೈ ಮುಟ್ಟದೆಯಿದ್ದರೂ
ದಿನವೂ ಮುಟ್ಟುತ್ತಿರುವೆ ನಿನ್ನ.
ಒಳ ಮನದ ಒಳ ತುಟಿಯ ತೆರೆದು
ಹರಟೆ ಕಟ್ಟೆಯಲಿ ಕೂತು
ಮನ ಮನದ ಮಾತುಗಳ
ಮಂದಾರವಲ್ಲಿಯ ರಂಗೋಲಿಗಳ ಚೆಲ್ಲಿ
ಗೆರೆಯೆನೋ ಬಿದ್ದಿತ್ತು, ಆದರೆ
ಗೆರೆಯಲಿ ಜೀವವೇ ಇರಲಿಲ್ಲ.||1||
ನೆನಪಿನ ಅಂಗಳದಲ್ಲಿ ಅಪ್ಪ ಅಮ್ಮ
ಇಣಿಕುತ್ತಾರೋ ಇಲ್ಲವೋ ಗೊತ್ತಿಲ್ಲ
ದಿನವೆಲ್ಲ ಅಲೆಲ್ಲ ನಿನದೆ ಕಂಪು
ಕಾದು ಕಾದು ನನ್ನದೆಯ ತಂಪು
ಕೊತಕೊತನೆ ಕುದಿಯುತಿದೆ
ವಿರಹ ಸುರಿದರೆ ಬೊಬ್ಬೆ ಕೀಳುವವು
ಎದೆಯಲಿ ಉಳಿಯುವುದು ಬರೀ ನೆನಪಾ ಬರೆ.||2||
ನಿನಗಾಗಿ ಕಾದರೆ ಯಾರ್ಯಾರೋ ಬಂದರು
ಕಾದ ದಾರಿಯಲಿ ರಾಮನಿಲ್ಲ.
ಕನಿಷ್ಟ ಅವನ ನೆರಳೂ ಇಲ್ಲ
ಕಾಯುವವರ ಪಾಡೆ ಹೀಗೆ
ಸುಖ ಉಣುತ್ತಾರೆ ಕಾಯುವುದರಲ್ಲೆ.
ಕಾಯಿಸುವವರ ದರ್ಪವೇ ಹಾಗೆ
ಕಾಯಿಸುವ ಕಷ್ಟದಲ್ಲೇ ದುಃಖ ನೀಡುತ್ತಾರೆ
ಅವರು ಮಾತ್ರ ಕೊನೆಗೂ ಸಿಗದೆ,ಸುಖಿಸುತ್ತಾರೆ.
ರಾಮನು ಬರುವುದಿಲ್ಲ, ಶಬರಿಗೆ ಮುಕ್ತಿ ಇಲ್ಲ.
ಪ್ರೀತಿಯಲ್ಲಿ ಸೋತವರು ಶಬರಿಗಿಂತ ಕಡು ಶಾಪಗ್ರಸ್ಥರು.||3||
- ಜ್ಯೋತಿ ಕುಮಾರ್.ಎಂ(ಜೆ.ಕೆ.)
ಜ್ಯೋತಿ ಕುಮಾರ್.ಎಂ(ಜೆ.ಕೆ.),ಇವರು ಓದಿದ್ದು, ಎಮ್ ಎಸ್ಸಿ ಎಮ್ ಇಡಿ. ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು. ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.ಸದ್ಯ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರು ಹವ್ಯಾಸಿ ಬರಹಗಾರರಾಗಿದ್ದು,ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು,ಮಂಗಳ,ನಿಮ್ಮೆಲ್ಲರ ಮಾನಸ,ಜೀವನಾಡಿ ಪತ್ರಿಕೆ,ಬುಕ್ ಬ್ರಹ್ಮ,ಸಂಗಾತಿ,ಕೆಂಡಸಂಪಿಗೆ,ಮಿಂಚುಳ್ಳಿ,ಪಂಜು,ಆಕೃತಿ,ಶ್ರಾವಣ ಮ್ಯಾಗಝೀನ್ ಇವುಗಳಲ್ಲಿ ಪ್ರಕಟವಾಗಿವೆ.
