ಆದರ್ಶ ಶಿಕ್ಷಕಿ ಮೇರಿ ಬಿ ಪಿಂಟೊ

ಲೇಖಕಿ ನಿವೃತ್ತ ಕನ್ನಡ ಶಿಕ್ಷಕಿ ಮೇರಿ ಬಿ ಪಿಂಟೊ ಮುಂಬೈಯಲ್ಲಿ ಎರಡು ಕನ್ನಡ ಶಾಲೆಗಳನ್ನು ಮತ್ತು ಒಂದು ತೆಲಗು ಶಾಲೆಯನ್ನು ತೆರೆದ ಕೀರ್ತಿ ಇವರದು, ದಿನಕರ ನಂದಿ ಚಂದನ್ ಎಂ ಎ ಅವರು ಆದರ್ಶ ಶಿಕ್ಷಕಿ ಮೇರಿ ಬಿ ಪಿಂಟೊ ಸಾಹಸಗಾಥೆಯನ್ನು ಪುಸ್ತಕರೂಪಕ್ಕೆ ತಂದಿದ್ದಾರೆ, ಈ ಕೃತಿಯ ಕುರಿತು ಲೇಖಕರು ರಘುನಾಥ್ ಕೃಷ್ಣಮಾಚಾರ್ ಅವರು ಓದುಗರಿಗೆ ಪರಿಚಯಿಸಿದ್ದಾರೆ. ತಪ್ಪದೆ ಮುಂದೆ ಓದಿ..

ಪುಸ್ತಕ : ಆದರ್ಶ ಶಿಕ್ಷಕಿ ಮೇರಿ ಬಿ ಪಿಂಟೊ
ಲೇಖಕರು : ದಿನಕರ ನಂದಿ ಚಂದನ್
ಪ್ರಕಾರ : ಸಂಪ್ರಬಂಧ

ಮಹಾನಗರ ನಗರ ಪಾಲಿಕೆ ಕನ್ನಡ ಶಾಲೆಗಳ ಸಾಧನೆ ಶ್ರೀಮತಿ ಮೇರಿ ಪಿಂಟೊ:

ದಕ್ಷಿಣ ಕನ್ನಡದ ಮೇರಿ ಪಿಂಟೊ ಅವರು ವಿವಾಹ ನಂತರ ಮುಂಬಯಿಗೆ ಬಂದು ನೆಲೆಸಿದರು. ಅಲ್ಲೆ ಶಿಕ್ಷಕಿಯಾಗಿದ್ದ ಇವರು, ಇಲ್ಲಿ ಯೂ ಅದನ್ನು ಮುಂದುವರಿಸುವ ಹಂಬಲದಿಂದ ವರ್ಲಿನಾಕ ಶಾಲೆ ಮಹಾನಗರ ಪಾಲಿಕೆ ಕನ್ನಡ ಶಾಲೆ ಗೆ ಅರ್ಜಿ ಸಲ್ಲಿಸಿದರು. ಇವರ ಊರಿನ ಶಿಕ್ಷಣ ದ ಅನುಭವವನ್ನು ಪರಿಗಣಿಸಿ ಅವರನ್ನು ತರಬೇತಿ ಪಡೆದ ಶಿಕ್ಷಕಿಯಾಗಿ ನೇಮಿಸಲಾಯಿತು. ಅವರು ಹೋದಲ್ಲೆಲ್ಲ ಬದ್ದತೆ ಮತ್ತು ಪ್ರೀತಿ, ವಾತ್ಸಲ್ಯಗಳಿಂದ ಕೆಲಸ ಮಾಡಿ ವಿದ್ಯಾರ್ಥಿಗಳ ಮನಗೆದ್ದರು.ಯಾವುದೇ ಸೌಲಭ್ಯ ಗಳಲ್ಲಿ ದ ಕಡೆಗಳಲ್ಲಿ ಸ್ವತಃ ತಮ್ಮ ವೇತನವನ್ನು ಬಡ ಮಕ್ಕಳ ಪೌಷ್ಟಿಕ ಆಹಾರ, ಬಟ್ಟೆ, ಇತ್ಯಾದಿಗಳನ್ನು ಬಳಸಲು ವ್ಯಯಿಸಿದರು. ಅಲ್ಲದೆ ಹಲವು ಕಡೆ ಕನ್ನಡದ ಶಾಲೆಗಳನ್ನು ಅಲ್ಲಿನ ಸ್ಥಳೀಯ ಗೂಂಡಾಗಳ ವಿರೋಧದ ನಡುವೆಯು ಸ್ಥಾಪಿಸಿದ ಶ್ರೇಯಸ್ಸು ಅವರದು. ಇವರ ಶಿಕ್ಷಣದ ಕನ್ನಡದ ಕೈಂಕರ್ಯವನ್ನು ಗಮನಿಸಿ ಮಹಾನಗರ ಪಾಲಿಕೆ ಮೇಯರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಹಲವಾರು ಸಂಘ ಸಂಸ್ಥೆಗಳು, ಕನ್ನಡ ಪ್ರಾಧ್ಯಾಪಕರಾದ ಡಾ.ಸಂಜೀವ ಶೆಟ್ಟಿ ಮುಂತಾದವರು, ಅವರ ಸಾಹಸಗಾಥೆಯನ್ನು ಕೊಂಡಾಡಿ ಸನ್ಮಾನ ಮಾಡಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು. ಅದೊಂದು ಅಪರಾಹ್ನ. ಮು.ವಿ.ವಿ.ಕನ್ನಡ ವಿಭಾಗದಲ್ಲಿ ಪಾಠ ನಡೆಯುತ್ತಿದೆ. ಒಬ್ಬರು ಹಿರಿಯ ಮಹಿಳೆ ರಾನಡೆ ಭವನದ ಮೊದಲ ಮಹಡಿಯಲ್ಲಿ ನಡೆಯುತ್ತಿದ್ದ ಆ ತರಗತಿಗೆ ಮೆಟ್ಟಲು ಹತ್ತಿಕೊಂಡು ಏದುಸಿರು ಬಿಡುತ್ತಾ ಪ್ರವೇಶಿಸುತ್ತಾರೆ. ಅವರನ್ನು ನೋಡಿದ ಕೂಡಲೇ ಪಾಠ ಮಾಡುತ್ತಿದ್ದ ಆ ಪ್ರಾಧ್ಯಾಪಕರು ಎದ್ದು ನಿಂತು, ಅವರನ್ನು ತಮ್ಮ ಕುರ್ಚಿಯಲ್ಲಿ ಕೂಡಿಸಿ, ಎದುರಿಗೆ ಇದ್ದ ತಣ್ಣನೆಯ ನೀರನ್ನು ಅವರಲ್ಲಿ ಕುಡಿಯಲು ಕೊಟ್ಟು, ಅವರು ಸುಧಾರಿಸಿಕೊಂಡ ನಂತರ ,ಅವರು ಬಂದ ವಿಷಯವನ್ನು ಕುರಿತು ವಿಚಾರಿಸುತ್ತಾರೆ. ಅವರು ಮೇಲೆ ಹೇಳಿದ ವಿವರಗಳನ್ನು ಅವರಿಗೆ ತಿಳಿಸಿ, ತಾನು ಕನ್ನಡದಲ್ಲಿ ಕತೆಗಳನ್ನು ಬರೆದಿರುವುದಾಗಿ, ಅವುಗಳನ್ನು ಪ್ರಕಟಿಸಲು ಸಾಧ್ಯವೆ ಎಂದರು. ಇದರಿಂದ ಪ್ರಭಾವಿತರಾದ ಆ ಪ್ರಾಧ್ಯಾಪಕರು ” ಅವಶ್ಯವಾಗಿ” ಎಂದು ಒಪ್ಪಿಕೊಂಡರು. ಮತ್ತು ತಮ್ಮ ವಿದ್ಯಾರ್ಥಿಯೊಬ್ಬರಿಗೆ ಅವರ ಸಾಹಸಗಾಥೆಯನ್ನು ಎಂ.ಎ. ಪತ್ರಿಕೆಯ ಭಾಗವಾಗಿ ಸಿದ್ದಪಡಿಸಬೇಕೆಂದು ಸೂಚಿಸಿದರು.

ಅವರು ತಮ್ಮ ಗುರುಗಳ ಆದೇಶದಂತೆ, ಆ ಮಹಿಳೆಯ ಮನೆಗೆ ತೆರಳಿ ,ಅವರನ್ನು ದೀರ್ಘವಾಗಿ ಸಂದರ್ಶನ ಮಾಡಿ, ಅವರಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಆಧಾರ ಸಮೇತ ಕಲೆಹಾಕಿ, ಅದನ್ನು ಕ್ರಮ ಪ್ರಕಾರ ವಿಂಗಡಿಸಿ, ತಮ್ಮ ಸಂಪ್ರಬಂಧವನ್ನು ಸಿದ್ದಪಡಿಸಿದರು. ಅದನ್ನು ನೋಡಿ ಸಂಪ್ರೀತರಾದ ಅವರ ಪ್ರಾಧ್ಯಾಪಕರು, ಅದನ್ನು ಒಪ್ಪಿಕೊಂಡರು. ಮತ್ತು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದರು. ಮೇಲೆ ಮು.ವಿ.ವಿ.ದ ಕನ್ನಡ ವಿಭಾಗಕ್ಕೆ ಬಂದ ಮಹಿಳೆಯೇ ಶ್ರೀಮತಿ ಆದರ್ಶ ಶಿಕ್ಷಕಿ ಮೇರಿ ಪಿಂಟೊ. ಅಲ್ಲಿ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕರು ನನ್ನ ಶಿಷ್ಯ ಡಾ.ಗಣೇಶ್ ಉಪಾಧ್ಯ. ಅವರ ಮಾರ್ಗದರ್ಶನದಲ್ಲಿ ಸಂಪ್ರಬಂಧ ಸಿದ್ದಪಡಿಸಿದವರೆ ನನ್ನ ಇನ್ನೊಬ್ಬ ಶಿಷ್ಯರಾದ ದಿನಕರ ಚಂದನ್. ಮೇಲಿನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಈಚೆಗೆ ಪ್ರಶಸ್ತಿಯನ್ನು ಘೋಷಿಸಿತು.

ಇದು ಮುಂಬಯಿ ಕನ್ನಡ ಶಿಕ್ಷಣ ಲೋಕಕ್ಕೆ ಸಂದ ಪ್ರಶಸ್ತಿಯೆ ಸರಿ. ಮೇಲಿನ ಎಲ್ಲದಕ್ಕೂ ಕಾರಣರಾದ ಶ್ರೀಮತಿ ಮೇರಿ ಪಿಂಟೊ ಅವರಿಗೆ, ಅವರನ್ನು ಕುರಿತು ಸಂಶೋಧನೆ ನಡೆಸಲು ಪ್ರೇರಣೆ ನೀಡಿ, ಮಾರ್ಗದರ್ಶನ ಮಾಡಿದ ಡಾ.ಗಣೇಶ್ ಉಪಾಧ್ಯಯರಿಗೂ, ಪರಿಶ್ರಮವಹಿಸಿ ಶ್ರದ್ಧೆಯಿಂದ ಅದನ್ನು ಸಿದ್ದಪಡಿಸಿದ ದಿನಕರ ಚಂದನ್ ಅವರಿಗೆ ಅಭಿನಂದನೆ.

ಇಂತಹವರಿಂದಲೆ ಮುಂಬಯಿಯಲ್ಲಿ ಕನ್ನಡ ಶಿಕ್ಷಣ ಇನ್ನೂ ಉಸಿರಾಡುತ್ತಿರುವುದು. ಅವರ ಪುಸ್ತಕ ಜೆ.ಪಿ.ನಾಯಕ ಭವನದಲ್ಲಿ ಬಿಡುಗಡೆಯಾದಾಗ ತುಂಬಿ ತುಳುಕುತ್ತಿದ್ದ ಸಭೆಗೆ ನಾನು ಸಾಕ್ಷಿ.


  •  ರಘುನಾಥ್ ಕೃಷ್ಣಮಾಚಾರ್ –   ಲೇಖಕರು,  ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading