“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ?” ಇದು ದಾಸವರೇಣ್ಯರ ರಚನೆಯಲ್ಲ. ಗಜಾನನ ಶರ್ಮ ಎಂಬ ಶ್ರೀಸಾಮಾನ್ಯ ಭಕ್ತರೋರ್ವರ ರಚನೆ. ಇದರ ರಾಗ ಸಂಯೋಜನೆ ಅವರ ಪುತ್ರ ಸಾಕೇತ ಶರ್ಮ ಅವರದು. ಮಾಯಾಮಾಳವಗೌಳ ಎಂಬ ಅನುಪಮ ರಾಗವನ್ನು ಆಧರಿಸಿದ ಗೀತೆಯಿದು. ಈ ಗೀತೆಯ ಖ್ಯಾತಿ ಭಾಷೆಯ ಎಲ್ಲೆಯನ್ನು ದಾಟಿ ಇದೀಗ ಅಯೋಧ್ಯೆಯವರೆಗೂ ವಿಸ್ತರಿಸಿದೆ. – ಕೆ. ರಾಜಕುಮಾರ್ , ತಪ್ಪದೆ ಮುಂದೆ ಓದಿ…
ಶ್ರೀರಾಮನ ಕುರಿತಾದ ಗೀತೆಗಳು ಕನ್ನಡದಲ್ಲಿ ಕಡಿಮೆ. ಇಲ್ಲಿ ಏನಿದ್ದರೂ, ಬೇಡವೆಂದರೂ ಕಿಲಾಡಿ ಕೃಷ್ಣನದೇ ರಂಗಿನಾಟ. ಆದರೂ ಇಡೀ ರಾಮಾಯಣವನ್ನು ಒಂದೇ ಉಸುರಿನಲ್ಲಿ ರಾಗಮಾಲಿಕೆಯಲ್ಲಿ ಸಾರುವ ಸುದೀರ್ಘಗೀತೆ, ಸೀರ್ಕಾಳಿ ಗೋವಿಂದರಾಜನ್ ಅವರು ಸ್ತುತಿಸಿರುವ ‘ರಾಮನ ಅವತಾರ ರಘುಕುಲ ಸೋಮನ ಅವತಾರ’ ನನ್ನ ತಲೆಮಾರಿನವರಿಗೆ ಕಂಠಪಾಠ. ಇದು ಇದುವರೆಗೂ 66 ಶ್ರೀರಾಮನವಮಿಗಳನ್ನು ಕಂಡಿದೆ. ಹಾಗಾಗಿ ಎರಡು ಪೀಳಿಗೆಗಳನ್ನು ದಾಟಿದಂತಾಯಿತು. ಆದರೂ ಇದರ ಜನಪ್ರಿಯತೆ ಮುಕ್ಕಾಗಿಲ್ಲ.
ಕು.ರಾ.ಸೀ. (ಕು.ರ.ಸೀ. ಸರಿ: ಕುಮಾರಸ್ವಾಮಿ ರವಿ ಸೀತಾರಾಮಶಾಸ್ತ್ರೀ) ಎಂದೇ ಖ್ಯಾತರಾಗಿದ್ದ ಕು.ರ. ಸೀತಾರಾಮಶಾಸ್ತ್ರೀ ಅವರ ಕಲಮಿನಿಂದ ಭೂಕೈಲಾಸ ಎಂಬ ಚಿತ್ರಕ್ಕಾಗಿ ಹೊರಜಿಗಿದ ಏಳು ನಿಮಿಷಗಳ ಸುದೀರ್ಘ ಅವಧಿಯ ಸ್ಮರಣಾರ್ಹ ಚಿತ್ರಗೀತೆಯಿದು. ಇದು ಕರಿಯನ್ನು ಕನ್ನಡಿಯಲ್ಲಿ ಹಿಡಿದ ಯಶಸ್ವೀ ಪ್ರಯತ್ನ. ಮೊದಲು ಕನ್ನಡದಲ್ಲಿ ರಚನೆ. ಇದನ್ನೇ ಆಧರಿಸಿ ಅನಂತರ ತೆಲುಗಿನಲ್ಲಿ ರಚಿಸಲಾಯಿತು.
ಮಾಧುರ್ಯವೇ ಮೈದಾಳಿ ಬಂದಂತಹ ರಾಮನ ಕುರಿತಾದ ಇನ್ನೊಂದು ಹಾಡು ಇಲ್ಲಿದೆ. ಇದರಲ್ಲಿ ಭಕ್ತಿಯ ಪರಾಕಾಷ್ಠೆಯಿದೆ, ಸಮರ್ಪಣಾ ಭಾವವಿದೆ, ಮುದವಿದೆ, ಮೋದವಿದೆ. ಹಾಗಾಗಿ ಕೇಳುಗರಿಗೆ ಇದು ಸದಾ ಮನಸಾಮೋದ. ತಣ್ಣನೆಯ ಭಾವಸ್ಫುರಣವಿದೆ.

ತಾರಾಸ್ಥಾಯಿಯಲ್ಲಿ ಧಾಟಿ ಜೋಡಿಸಿದರೆ ಮಾತ್ರ ಭಕ್ತಿರಸ ಉಕ್ಕುತ್ತದೆ ಎಂಬ ರೂಢಿಗತ ನಂಬಿಕೆಯನ್ನು ನಿರಾಕರಿಸುವ ಗೀತೆಯಿದು. ಭಕ್ತಿಗೀತೆಯನ್ನು ಹೀಗೂ ಸಂಯೋಜಿಸಬಹುದು ಎಂದು ಸ್ವರಮಾಂತ್ರಿಕ ಉಪೇಂದ್ರಕುಮಾರ್ ತೋರಿಸಿಕೊಟ್ಟಿದ್ದಾರೆ. ಆರ್.ಎನ್. ಜಯಗೋಪಾಲ್ ಅವರ ಸೊಗಸಾದ ಈ ರಚನೆಯನ್ನು ಮಹಾಪ್ರಚಂಡರು ಚಿತ್ರಕ್ಕಾಗಿ ಎಸ್. ಜಾನಕಿಯವರು ಭಕ್ತಿಯನ್ನು ಆವಾಹನೆ ಮಾಡಿಕೊಂಡು ಭಾವ ತುಂಬಿ ಹಾಡಿದ್ದಾರೆ.
ಇದು ಬಂದು ನಾಲ್ಕು ದಶಕಗಳು ಉರುಳಿವೆ. ಒಂದು ತಲೆಮಾರು ಕಳೆದಿದೆ. ಆದರೂ, ಮಾಸದ ಮಾಧುರ್ಯ ಈ ಹಾಡಿನದು. ಕೇಳಿದವರು ಭಾವಪರವಶ ರಾಗುವುದು ಖಂಡಿತ. ಈ ಗೀತೆ ಒಂದು ದಿವ್ಯಾನುಭೂತಿಯಷ್ಟೇ ಅಲ್ಲ; ಮಧುರಾನುಭೂತಿಯೂ ಹೌದು. ಇದೊಂದು ವಿಳಂಬವಿಷ ! ಮತ್ತೆ ಮತ್ತೆ ಕೇಳಬೇಕೆಂಬ ಅಪೇಕ್ಷೆ ಮೂಡಿಸುತ್ತಲೇ ಇರುವ ಹಾಡು: ಶಿಲೆಯಲ್ಲು ನೀನೇ, ಅಲೆಯಲ್ಲು ನೀನೇ.
ಇತ್ತೀಚೆಗೆ ಶ್ರೀರಾಮನ ಕುರಿತಾದ ಇನ್ನೊಂದು ಆರ್ದ್ರ, ಆರ್ತ ಹಾಡು ಬಂದಿದೆ: “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ?” ಇದು ದಾಸವರೇಣ್ಯರ ರಚನೆಯಲ್ಲ. ಗಜಾನನ ಶರ್ಮ ಎಂಬ ಶ್ರೀಸಾಮಾನ್ಯ ಭಕ್ತರೋರ್ವರ ರಚನೆ. ಇದರ ರಾಗ ಸಂಯೋಜನೆ ಅವರ ಪುತ್ರ ಸಾಕೇತ ಶರ್ಮ ಅವರದು. ಮಾಯಾಮಾಳವಗೌಳ ಎಂಬ ಅನುಪಮ ರಾಗವನ್ನು ಆಧರಿಸಿದ ಗೀತೆಯಿದು. ಈ ಗೀತೆಯ ಖ್ಯಾತಿ ಭಾಷೆಯ ಎಲ್ಲೆಯನ್ನು ದಾಟಿ ಇದೀಗ ಅಯೋಧ್ಯೆಯವರೆಗೂ ವಿಸ್ತರಿಸಿದೆ. ಇದೀಗ ಅಲ್ಲಿನ ಶ್ರೀ ರಾಮಮಂದಿರದಲ್ಲಿ ಪ್ರತಿದಿನ ಮೊಳಗುವ ಭಾಗ್ಯ ಈ ಕನ್ನಡ ಗೀತೆಗೆ. ಇದು ಸಮರ್ಪಣಾ ಭಾವಕ್ಕೆ, ತಾದಾತ್ಮ್ಯಕ್ಕೆ ಚೆಂದದ ಉದಾಹರಣೆ. ಕೇಳಿದ ಕೂಡಲೇ ಮೈಮನಗಳಲ್ಲಿ ಭಕ್ತಿಯನ್ನು ಸ್ಫುರಿಸುವ ರಾಮನಾಮವಿದು. ರಚನೆಯಲ್ಲಿ ಸಂಕೀರ್ಣತೆಯಿಲ್ಲ. ಸರಳತೆ ಇದರ ಹೆಗ್ಗಳಿಕೆ. ಇದು ಚಲನಚಿತ್ರ ಗೀತೆಯಲ್ಲ. ಒಮ್ಮೆ ಕೇಳಿದರೆ ಮತ್ತೆ ಮತ್ತೆ ಸವಿಯಬೇಕೆನಿಸುವ ರಾಮನಾಮ ಪಾಯಸವಿದು!
ರಾಮನಿಗೆ ಸಂಬಂಧಿಸಿದ ಇನ್ನೂ ಕೆಲವು ಚಿತ್ರಗೀತೆಗಳಿವೆ. ಆದರೆ ಈ ಲೇಖನದಲ್ಲಿ ನಾನು ಉದಾಹರಿಸಿರುವುದು ಮೂರು ಗೀತೆಗಳನ್ನಷ್ಟೇ. ಇವು ಮೂರೂ ಬೇರೆ ಬೇರೆ ತಲೆಮಾರುಗಳಿಗೆ ಸೇರಿದವು. ತಲೆಮಾರು ಅಥವಾ ಪೀಳಿಗೆ ಎಂದರೆ 31 ವರ್ಷ. “ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು” ರಾಮನ ಬಗೆಗಿನ ಜನಮಾನಸದ ನಂಬಿಕೆ ಮತ್ತು ವಿಶ್ವಾಸ ದೃಢವಾಗುತ್ತಲೇ ಸಾಗಿವೆ. ಹಾಗಾಗಿಯೇ ರಾಮ ಆದರ್ಶಕ್ಕೊಂದು ರೂಪಕ. ಪ್ರಾಮಾಣಿಕತೆಯ ಪ್ರತೀಕ. ಲೆಕ್ಕವೆಂದರೆ ಅದು ರಾಮನ ಲೆಕ್ಕ ಮಾತ್ರ. ರಾಮ ಧೀರೋದಾತ. ಉದಾತ್ತ ಮೌಲ್ಯಗಳ ಪ್ರತಿನಿಧಿ. ಹಲವು ಅರೆಕೊರೆಗಳ ನಡುವೆಯೂ ರಾಮ ಎಂಬುದು ಹಲವರಿಗಿರುವ ಪರಿಹಾರದ ಮಾರ್ಗ.
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು.
