ನಾವು ಮನುಜರು, ಇರುವುದು ಎರಡೇ ಜಾತಿ ಹೆಣ್ಣು ಮತ್ತು ಗಂಡು. ಜಾತಿ, ಕುಲ, ಗೋತ್ರಗಳು ನಾವಾಗಿಯೇ ಹಾಕಿಕೊಂಡಿರುವ ಬೇಲಿಗಳು. ಆ ಬೇಲಿಯನ್ನು ಕಿತ್ತೋಗೆದು ನಾವು ಭಾರತೀಯರಾಗಿ ಪ್ರೀತಿಯಿಂದ ಎಲ್ಲರೊಂದಿಗೆ ಬಾಳೋಣ – ಡಾ. ಕೃಷ್ಣವೇಣಿ. ಆರ್. ಗೌಡ ಅವರ ಒಂದು ವಿಚಾರವನ್ನು ಓದುಗರಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬಿಸಿಲ ಧಗೆ ಮನೆಯಲ್ಲಾ ಉಗಿ ತುಂಬಿ ಕಿಟಕಿ ಬಾಗಿಲು ತೆರೆದರೂ ಆವ್ರಿ ತಡೆಯದೇ ಮಗನ ಜೊತೆಗೆ ರಾತ್ರಿ ಹೊರಗಡೆ ವಾಕ್ ಮಾಡುತ್ತಿರುವಾಗ ಗೃಹಿಣಿಯೊಬ್ಬರು ನನಗೆ ಊಟ ಆಯಿತೇ? ಎಂದು ವಿಚಾರಿಸಿ, ನಿಮ್ಮ ಪಕ್ಕದ ಮನೆಯವರು ಯಾತ್ರು? ಅಂದರು. ಅಂದ್ರೆ ಹೊಸಪೇಟೆ ಭಾಷೆಯಲ್ಲಿ ಯಾವ ಜಾತಿಯವರು ಎಂದು ಕೇಳಿದರು.
ಇದಕ್ಕೆ ನಾನು ಬಹಳ ಬೇಜಾರು ಮಾಡಿಕೊಂಡು ಚಿಂತನೆಗೈಯುತ್ತ ಇರುವಾಗ ಹೊಸ ಆಲೋಚನೆ ಹೊಮ್ಮಿತು. ಬಂದಿರೋದು ತಾಯಿ ಗರ್ಭದಿಂದ ಆದರೂ ಭೂತಾಯಿಯ ಮಕ್ಕಳಾದರೂ ಮತ್ತೆ ಮರಳಿ ಮಣ್ಣಿಗೆ ಸೇರುವವರಾದರೂ ಜಾತಿ ಕೇಳಿದ್ರಲ್ಲ ಎನ್ನುವ ತಳಮಳ ಹೇಮಾವತಿ ಸಿನಿಮಾದತ್ತ ಒಂದು ಕ್ಷಣ ಕರೆದೊಯ್ಯಿತು.. ಯಾಕೆಂದರೆ ಸಾಕಷ್ಟು ಬಾರಿ ಈ ಸಿನಿಮಾ ನಾನು ಕಾಲೇಜ್ ಇರುವಾಗಿನಿಂದ ಗಮನಿಸಿದ್ದೇನೆ, ಮತ್ತು ಇಂದು ಶ್ರೀ ರಾಮ ನವಮಿ ಕೂಡಾ, ವಿಚಾರಗಳು ಜಗತ್ತಿನ ವಾಣಿಯಲಿ ಒಂದು ರೀತಿ ಇದ್ದರೂ ಸಿನಿಮಾದ ರಾಜಕೀಯ ತಾಂತ್ರಿಕತೆಯಲ್ಲಿ ಮೈ ಮನ ಸೆಳೆದಿರುತ್ತೆ ಅಲ್ಲವೇ..
ರಾಮ ನಾಮ ಪಾಯಸಕೆ
ಕೃಷ್ಣ ನಾಮ ಸಕ್ಕರೆ ಬೆರೆಸಿ
ಬಾಯ ಚಪ್ಪರಿಸಿರೋ ಎನ್ನುವ ದಾಸರ ವಾಣಿಯಿಂದ ಹರಿದಿರುವ ಈ ಪದ ಹೇಮಾವತಿ ನಾಲುಗೆಯಲ್ಲಿ ರಾಗವಾಗಿ ಪಾನಕಕ್ಕೆ ಬೆಲ್ಲ ಕುಟ್ಟುತ್ತ ಮಲತಾಯಿ ಹತ್ತಿರ ಬೈಸಿಕೊಂಡು ದೇವರ ನೈವೇದ್ಯಕ್ಕೆ ಸಿದ್ಧ ಮಾಡುತ್ತಾ, ತಂದೆ ದೇವರ ಗುಡಿಯ ಅರ್ಚಕರು ಎಲ್ಲ ಮನುಜ ಮತಕ್ಕೆ ಆ ನೈವೇದ್ಯ ಹಂಚಲು ಮನಸಿರುವಾಗ ಕುಲ ಪುರೋಹಿತರು ಅವರ ಮೇಲೆ ಸಲ್ಲದ ಅಪವಾದ ಹೊರಿಸುತ್ತಾರೆ. ಕೀಳು ಕುಲದ ಚೆನ್ನಿ ಸಗಣಿ ಎತ್ತುತ್ತಾ ದೂರದಿಂದಲೇ ಸಂಗೀತ ಆಲಿಸಿ ಮುಂದೆ ಹರಿ ಜನೋದ್ಧಾರ ಸಮಿತಿಯಲಿ ಸಂಗೀತ ಕಚೇರಿ ನಡೆಸಿ ಊರಿನ ಜನರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ. ಈ ಸಿನಿಮಾದ ಕೊನೆಗೆ ದೇವರ ಗುಡಿಯೊಳು ಎಲ್ಲರಿಗೂ ಸಮಾನ ಅವಕಾಶ ಸಿಗಲಿ ಎನ್ನುವ ಹೋರಾಟದೊಳು ಜಿ. ವಿ. ಅಯ್ಯರ್ ಅವರಿಗೆ ಏಟು ಬಿದ್ದು ರಕ್ತ ಇಲ್ಲದಾದಾಗ ಹರಿಜನರ ಚೆನ್ನ ರಕ್ತ ಕೊಟ್ಟು ಅವರನ್ನು ಕಾಪಾಡಿದಾಗ ಮನಸ್ಸಿನ ಕಣ್ಣು ತೆರೆಯುತ್ತಾ
“ಮಾನವ ಜಾತಿ ತಾನೊಂದೇ ವಲಂ ” ಮನುಜ ಮತ ವಿಶ್ವ ಪಥ ಎನ್ನುವ ನುಡಿಗಳು ಅಲ್ಲದೇ 12 ನೇ ಶತಮಾನದ ಶರಣರ ಆಸ್ಥಾನ ದೊಳು ಕುಲಕ್ಕೊಂದು ಕೆಲಸ ಎನ್ನುವ ಹಾಗೇ ಎಲ್ಲರನ್ನು ಸಮಾನತೆಯೊಳು ಕಾಣುವ ಬಸವಣ್ಣ ನ ವಚನದ ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ? ಅರ್ಥ ಮನುಷ್ಯ ಒಳ ಅರ್ಥದಲಿ ಭಾಗಿಯಾಗಿ ಸಕಲರಲ್ಲೂ ಲೇಸನ್ನು ಬಸುವ ಮಾನವ ಮತ, ಇಂದಿನ ಜಾಗತಿಕ ಜಾತ್ರೆಯ ಸಂತೆಗೆ ಒಂದು ಉದಾಹರಣೆ….
ಮತ ಚಲಾವಣೆಗೋಸ್ಕರ ಜಾತಿಯ ಒಕ್ಕೂಟ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ದ ಭಾಗಗಳ ರಾಜಕೀಯ ಆಗು ಹೋಗುವಿಕೆ ಒಂದು ತರ ಬೇಸತ್ತು ಹೋಗಿದೆ. ಇನ್ನೂ ಮನೆ ಸಿಕ್ಕರೆ ಸಾಕಪ್ಪ ಎನುವಾಗ ಸಸ್ಯಾಹಾರಿಗಳಿಗೆ ಮಾತ್ರ ನಾವು ಮನೆ ಕೊಡೋದು ಎನ್ನುವುದು ಅಲ್ಲಿಯೂ ಜಾತಿಯ ಗೋಡೆ ಏಳುತಿದೆ.. ಜಾತಿಗೊಂದು ಮರ ಬೇರು ಹುಟ್ಟಿದರೂ ಅಡ್ಡಿಯಿಲ್ಲ ಅನ್ನುವ ವಿಚಾರ ಇಂದು ಒಡಮೂಡುತ್ತಿದೆ. ಸಮಾಜದ ಸಮಾನ ಹಕ್ಕಿಗೆ ಹೋರಾಡಿದ ಸಂವಿಧಾನದ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಮೊನ್ನೆಯ ಹುಟ್ಟುಹಬ್ಬದ ವಿಶಾಲ ಮನದ ಪರಿಧಿಯ ವಿಚಾರಗಳು ಜನರ ಕಿವಿಗೆ ತಲುಪಿದರು. ಧಾರಾವಾಹಿಯ ಸಂಕಟದ ನೋಟ ಇನ್ನೂಕಣ್ಣು ತೆರೆಯಲು ಒದ್ದಾಡುತ್ತಿವೆಯೇನೋ ಎನ್ನುವ ಭ್ರಮೆ ಮನದಲ್ಲಿ ಕಾಡುತ್ತಿದೆ.
ಜನವಾಣಿಯ ಒಂದು ನಾಲಗೆ ಎಷ್ಟೊಂದು ವಿಚಾರಕ್ಕೆ ಕರೆದುಕೊಂಡು ಹೋಗುತ್ತದೆ ಅಲ್ಲವೇ?.. ತಿಳಿದು ಕೊಂಡರೆ ಎಲ್ಲಾನು ಸುಂದರ ಆದರೂ ಕೇಳುತ್ತಾರಲ್ಲ ಜಾತಿಯ ವಿಚಾರ… ಅವರವ ಮನೆಯ ಸಂಪ್ರದಾಯ ಆಚರಣೆ ಬೇರೆ ಇರಬಹುದು,, ಸತ್ತಾಗ ಮಲಗಿಸುವ ವಿಧಾನ ಬೇರೆ ಇರಬಹುದು, ಆದರೆ ಸಾವು ಮಾತ್ರ ಮಾನವನಿಗೆ ಮತ್ತು ಮನುಷ್ಯರಿಗೆ ಅಲ್ಲವೇ?. ಹೂಳುವ ಅಥವಾ ಸುಡುವ ವಿಧಾನವಿದ್ದರೂ ಹೋಗುವುದು ಪರಲೋಕಕ್ಕೆ ಅಲ್ಲವೇ ಎಲ್ಲಾ ಗೊತ್ತಿದ್ದೂ ನೀವು ಯಾವ ಜನ ಎಂದು ಕೇಳಿದಾಗ ಆಗುವ ಬೇಜಾರು ಅದು ಅನಿಸಿ ಕೊಂಡವರಿಗೆ ಮಾತ್ರ ಗೊತ್ತಿರುತ್ತೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಜನ ಇದ್ದರೂ ತಾಯಿ ಮಾತ್ರ ಭಾರತಿ ಅಲ್ಲವೇ, ರಕ್ತ ಪರೀಕ್ಷೆಯಲ್ಲಿ ಎ ಬಿ ಎಂದು ಗುರುತಿಸಿದರು ಕಾಣುವ ರಕ್ತದ ಬಣ್ಣ ಕೆಂಪು ಅಲ್ಲವೇ?.
ಆದ ಕಾರಣ ಜ್ಞಾನದ ಕಣ್ಣು ತೆರೆದರೆ ಕತ್ತಲೊಳು ಬೆಳಕಿದೆ ಮತ್ತು ಓಟಿಗೋಸ್ಕರ ಸ್ಲಂ ಜಾತಿ ನೋಡಿ ಇಲ್ಲಿ slum ಅನ್ನೋದು ಒಂದು ಜಾತಿಯಾಗಿ ಬಿಟ್ಟಿದೆ ಕೇರಿಯ ಜನಗಳು ಚುನಾವಣೆ ಹತ್ತಿರ ಬರುತ್ತಾರೆ ಎನ್ನುವಾಗ ಪಕ್ಷದ ಜಂಡಾ ಹಿಡಿದು ಕೊಡುವ 200 ರೂಪಾಯಿಗೆ ಬಿಸಿಲೊಳು ತಿರುಗಾಡಿ ಬರುವ ನೋಟ ಬೆಳಕಿನ ದಾರಿಯಲ್ಲೇ ಕಾಣುತ್ತಿದೆ. ಹೀಗಿರುವಾಗ ಒಂದರ ಹಿಂದೆ ಒಂದರಂತೆ ಜಾತಿ ಎನ್ನುವ ಎರಡಕ್ಷರದ ಪದ ಪದ ಕಾಣಿಸುತ್ತಿದೆ. ಯಾವ ನದಿಯು ಯಾರ ಜಾತಿಗೋಸ್ಕರ ಹುಕ್ಕಿ ಹರಿಯುತ್ತಿಲ್ಲ, ಪ್ರಕೃತಿಯ ಬೀಜಗಳು ಬದುಕಿ ಬಾಳಲೆಂದು ಹರಿಯುತ್ತಿದೆ. ಗಾಳಿ ಕೂಡ ಅಷ್ಟೇ….
ಎಲ್ಲರೂ ‘ನಾವು ಭಾರತೀಯರು’ ಎನ್ನೋಣ
ವಂದೇ ಮಾತರಂ…..
- ಡಾ. ಕೃಷ್ಣವೇಣಿ. ಆರ್. ಗೌಡ
