ಓದುವವರೆಲ್ಲರಿಗೂ ಬರೆಯುವುದಕ್ಕೆ ಪ್ರತಿಭೆ ಇರುತ್ತದೆಯೇ? ಏನನ್ನಾದರೂ ಬರೆಯುವುದನ್ನೂ ರೂಢಿಸಿಕೊಂಡರೆ ಭಾಷೆ ಕರಗತವಾಗುತ್ತದೆ ಎಂದು ಇದರ ಅರ್ಥ…ಖ್ಯಾತ ಮನಃಶಾಸ್ತ್ರಜ್ಞರಾದ ಶಾಂತಾ ನಾಗರಾಜ್ ಅವರು ಪುಸ್ತಕ ಹಾಗೂ ಓದಿನ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ನಿನ್ನೆ ‘ ವಿಶ್ವಪುಸ್ತಕದಿನ’ ವಂತೆ. ಪುಸ್ತಕಕ್ಕೆ ಸಹಜವಾಗಿ ಎರಡು ತುದಿಗಳಿವೆ. ಒಂದುಕಡೆ ಬರೆಯುವವರು ಮತ್ತೊಂದು ಕಡೆ ಓದುವವರು. ಈ ಇಬ್ಬರ ಸಾಧ್ಯಾಸಾಧ್ಯತೆಯನ್ನು ಕುರಿತು ನಮ್ಮ ಪ್ರಾಚೀನರು ಬಹಳ ಮಹತ್ವದ ಮಾತುಗಳನ್ನು ಹೇಳಿದ್ದಾರೆ. ‘ ಬರೆಯುವವರ ಮೊದಲ ಕರ್ತವ್ಯವೇ ಓದುವುದು’ ಎನ್ನುತ್ತಾನೆ ರಾಜಶೇಖರನೆಂಬುವ ಕಾವ್ಯಮೀಮಾಂಸಕ. ‘ ಸತತಾಭ್ಯಾಸಂ’ ಇದ್ದವರು ಮಾತ್ರ ಒಳ್ಳೆಯ ಬರಹವನ್ನೂ ಕೊಡಬಲ್ಲರು ಎಂದು ಪೂರ್ವಸೂರಿಗಳು ಬಲವಾಗಿ ನಂಬಿದ್ದರು. ಸರ್ವಜ್ಞ ಮಹಾಶಯ ‘ ಬರೀ ಓದಿದರೆ ಸಾಲದು ಬರೆಯುವುದೂ ಸಹ ಭಾಷೆ ಕಲಿಯಲು ಅಗತ್ಯ’ ಎನ್ನುವುದನ್ನು ಸ್ವಲ್ಪ ಕಟುವಾಗಿಯೇ ಹೇಳಿದ್ದಾನೆ. “ ಕರೆಯದೆಲೆ ಹೋಗುವವನ , ನಡೆಯದೆಲೆ ನುಡಿವವನ, ಬರೆಯದೆಲೆ ಓದುವವನ, ಕೆರತೆಗೆದು ಹೊಡೆ ಸರ್ವಜ್ಞ” ಎನ್ನುವ ಕಡುಶಿಕ್ಷೆ ವಿಧಿಸುತ್ತಾನೆ. ಇವೆರಡರಿಂದ ತಿಳಿಯುವುದೇನೆಂದರೆ, ಬರೆಯುವವನು ಓದುತ್ತಲೂ ಇರಬೇಕು, ಓದುವವನೂ ಆಗೊಮ್ಮೆ ಈಗೊಮ್ಮೆಯಾದರೂ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಭಾಷೆ ಎನ್ನುವುದು ಸರ್ವಾಂಗವಾಗಿ ಮನದಲ್ಲಿ ರೂಪುಗೊಳ್ಳುತ್ತದೆ. ಹಾಗಾದರೆ ಓದುವವರೆಲ್ಲರಿಗೂ ಬರೆಯುವುದಕ್ಕೆ ಪ್ರತಿಭೆ ಇರುತ್ತದೆಯೇ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಓದಿದವರು ಹೊಸ ಸಾಹಿತ್ಯವನ್ನೇ ಸೃಷ್ಟಿ ಮಾಡಬೇಕಿಲ್ಲ, ಏನನ್ನಾದರೂ ಬರೆಯುವುದನ್ನೂ ರೂಢಿಸಿಕೊಂಡರೆ ಭಾಷೆ ಕರಗತವಾಗುತ್ತದೆ ಎಂದು ಇದರ ಅರ್ಥ. ಹಿಂದಿನವರು ರಾಮಾಯಣ ಮಹಾಭಾರತಗಳನ್ನು ತಮ್ಮ ಮುಂದಿನ ಪೀಳಿಗೆಗಾಗಿ ಬರೆದಿಡುತ್ತಿದ್ದರು. ಮುದ್ರಣದ ವ್ಯವಸ್ಥೆ ಬಂದಮೇಲೆ, ಬರೆಯದೇ ಸುಮ್ಮನಿರಲು ಸಾಧ್ಯವಾಗದೇ ರಾಮನಾಮವನ್ನೇ ಪುಸ್ತಕಗಳಲ್ಲಿ ಬರೆಯುತ್ತಿದ್ದುದನ್ನು ನಮ್ಮಲ್ಲಿ ಅನೇಕರು ಕಂಡಿದ್ದೇವೆ.
ಬರೆಯುವವರ ಬಗ್ಗೆ ಮನೋವಿಜ್ಞಾನದ ಅಧ್ಯಯನ ಏನು ಹೇಳುತ್ತದೆಯೆಂದು ನೋಡೋಣ :
ಅದು ಓದುವ ಮತ್ತು ಬರೆಯುವ ಪ್ರತಿಭಾನ್ವಿತರನ್ನು ನಾಲ್ಕು ಗುಂಪುಗಳಲ್ಲಿ ಗುರುತಿಸುತ್ತದೆ
೧- ಹೆಚ್ಚು ಓದುವವರು ಮತ್ತು ಕಡಿಮೆ ಬರೆಯುವವರು ನಮ್ಮ ಪೂರ್ವಕವಿಗಳು ಹೀಗಿದ್ದರು. ಜೈನ ಕವಿಗಳಂತೂ ‘ ಬೆಳಗುವೆನಿಲ್ಲಿ ಲೌಕಿಕಮಂ, ಅಲ್ಲಿ ಜಿನಾಗಮಮಂ’ ಎಂದು ಎರಡೇ ಕಾವ್ಯವನ್ನು ಬರೆದೇ ಪ್ರಸಿದ್ಧರಾದರು.
೨- ಕಡಿಮೆ ಓದುವವರು ಮತ್ತು ಹೆಚ್ಚು ಬರೆಯುವವರು ನಂತರದ ಸಾಹಿತಿಗಳು ಈ ಗುಂಪಿಗೆ ಬರುತ್ತಾರೆ. ಕಡಿಮೆ ಓದುವುದು ಎಂದರೆ ಇಲ್ಲಿ ಹೀಗಿದನ್ನು ಅರ್ಥೈಸಬೇಕು. ಸಿಕ್ಕಿದ್ದನ್ನೆಲ್ಲಾ ಓದದೇ ಮೌಲಿಕವಾದದ್ದನ್ನು ಮಾತ್ರ ಓದಿ, ತಮ್ಮ ಅಸಾಧ್ಯ ಪ್ರತಿಭೆಯಿಂದಲೇ ಮೌಲಿಕವಾದ ಸಾಹಿತ್ಯವನ್ನು ಕೊಟ್ಟವರು.
೩- ಕಡಿಮೆ ಓದುವವರು ಮತ್ತು ಕಡಿಮೆ ಬರೆಯುವವರು ಇಂಥವರು ಕನ್ನಡ ಸಾರಸ್ವತ ಲೋಕದಲ್ಲಿ ಬಹಳ ಮಂದಿ ಇದ್ದರು ಮತ್ತು ಈಗಲೂ ಇದ್ದಾರೆ. ಆದರೂ ಇವರಲ್ಲಿಅಪ್ರತಿಭಾನ್ವಿತರು ಇಲ್ಲದೇ ಇಲ್ಲ. ಒಂದೋ ಎರಡೋ ಬರೆದರೂ ಅವರ ಬರವಣಿಗೆ ಆಚಂದ್ರಾರ್ಕವಾಗಿ ಉಳಿದಿದೆ. ಉದಾಹರಣೆಗೆ ಸಂಚಿ ಹೊನ್ನಮ್ಮ. ಈಕೆ ಏನೇನು ಓದುತ್ತಿದ್ದಳೆನ್ನುವುದಕ್ಕೆ ದಾಖಲೆ ಇಲ್ಲವಾದರೂ, ಈಕೆ ರಚಿಸಿದ ‘ಹದಿಬದೆಯ ಧರ್ಮ’ ಆ ಕಾಲಧರ್ಮವನ್ನು ಹೇಳುವ ಉತ್ತಮ ಕೃತಿ.

೪- ಓದುವಬಗ್ಗೆ ಕಾಳಜಿ ಇಲ್ಲದವರು ಮತ್ತು ಹೆಚ್ಚು ಬರೆಯುವವರು. ‘ಇದು ಈಕಾಲದ ಬರಹಗಾಗರರ ರೀತಿನೀತಿ‘ ಎನ್ನುತ್ತದೆ ಮನೋವಿಜ್ಞಾನ. ಕವಿ ನೇಮಿಚಂದ್ರ ತನ್ನ ಅರ್ಧನೇಮಿ ಪುರಾಣದಲ್ಲಿ “ ಬೆಲೆಯಿಂದಕ್ಕುಮೇ ಕೃತಿ ಭುವನದ ಭಾಗ್ಯದಿಂದಕ್ಕುಂ” ಎನ್ನುತ್ತಾನೆ. ನಿಜ ಹುಟ್ಟಿನೊಂದಿಗೇ ಅಪಾರ ಪ್ರತಿಭೆಯನ್ನು ಪಡೆದು ಹುಟ್ಟಿದವರಿಗೆ ಮತ್ತು ಬಾಲ್ಯದಿಂದಲೂ ಸಾಹಿತ್ಯದ ಪರಿಸರದಲ್ಲೇ ಬೆಳೆದವರಿಗೆ ಇಂಥಾ ‘ ಭಾಗ್ಯದ ಬರವಣಿಗೆ ‘ ಸಾಧ್ಯ. ಇಂಥವರ ಸಂಖ್ಯೆ ಕಡಿಮೆ. “ ನಮಗೆ ಓದುವುದೇನೂ ಬೇಕಿಲ್ಲ. ನಾವು ಬರೆದದ್ದೇ ಸಾಹಿತ್ಯ “ ಎನ್ನುವ ಭ್ರಮೆಯಲ್ಲಿ ಬರೆದು, ಒಂದೆರಡು ಕೃತಿಗಳು ಜನಪ್ರಿಯವೂ ಆಗಿಹೋದರೆ, ಇಂಥವರ ಹಾರಾಟವನ್ನು ಮನೋವಿಜ್ಞಾನ ‘ ಸೋಪಿನ ನೊರೆಯಂತೆ ಕೆಲವು ಕಾಲ ಕಾಮನಬಿಲ್ಲನ್ನು ಹೊಳೆಸುತ್ತದೆ ‘ ಎನ್ನುತ್ತದೆ. ಇಂಥಾ ಸಾಹಿತ್ಯ ಅನುಗಾಲವೂ ನಿಲ್ಲುವುದಿಲ್ಲ.
ಯಾರು ಹಿಂದಿನ ಮತ್ತು ಸಮಕಾಲೀನ ಸಾಹಿತ್ಯದಲ್ಲಿ ಒಳ್ಳೆಯದನ್ನು ಆರಿಸಿ ಓದುತ್ತಲೇ ಇರುತ್ತಾರೋ ಮತ್ತು ಜನಪ್ರಿಯತೆ ಮತ್ತು ಪ್ರಶಸ್ತಿಗಳ ಬೆನ್ನುಬೀಳದೇ ಆಯಾ ಸಮಾಜಕ್ಕೆ ಅಗತ್ಯವಾದ ಸಮಾಜಮುಖಿ ಬರವಣಿಗೆಯನ್ನು ಮಾಡುತ್ತಾರೋ ಅಂಥಾ ಸಾಹಿತ್ಯ ಗಟ್ಟಿಸಾಹಿತ್ಯವೆನ್ನುವುದು ಮನೋವಿಜ್ಞಾನದ ಹೇಳಿಕೆ.
ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯವನ್ನು ತಿಳಿಸುತ್ತಾ, ಹೆಚ್ಚು ಪುಸ್ತಕಗಳನ್ನು ಓದುತ್ತಾ ಅವುಗಳ ಸಂಖ್ಯೆಯನ್ನು ಬೆಳೆಸೋಣ ಎಂದು ಹಾರೈಸುತ್ತೇನೆ. ಈ ಕೆಳಗಿನ ಚಿತ್ರ ಯಾರೋ ಕ್ರೋಷಾ ಕಲಾವಿದರು ತಮ್ಮ ಕೈಚಳಕದಿಂದ ಸೃಷ್ಟಿಸಿದ ಬುಕ್ ಶೆಲ್ಫ್!!!
- ಶಾಂತಾ ನಾಗರಾಜ್
