ನೀನಾದೆ ನನ್ನ ಒಲವಿನ ಸಿರಿ

ನನ್ನ ಪ್ರೇಮದೇವತೆಯೆಂದು ಆರಾಧಿಸಲು ಹೋದೆ ನನ್ನನವಳಲ್ಲಿರಿಸಿಕೊಂಡಳು ನಾ ಮೂಕನಾದೆ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಪ್ರೇಮಗೀತೆಯನ್ನು ತಪ್ಪದೆ ಮುಂದೆ ಓದಿ…

ಮೊಗ್ಗು ಬಿರಿಯುವ ಘಳಿಗೆ
ಕರೆದು ಎನ್ನನು ಬಳಿಗೆ
ಬಳಸಿ ಎನ್ನನು ಮೆಲ್ಲಗೆ
ತೇಲಿಸಿದಳು ಕಂಪಿನಲಿ ಹಾಗೆ

ಒಂದೊಂದು ಅಧರಗಳ
ದಳಬಿಚ್ಚಿ ಪಿಸು ನುಡಿದು
ಅವಳಾಡಿದ ನುಡಿಗಳ
ಸವಿಯನ್ನು ನೆನೆದು

ಒಲವಿನುಯ್ಯಾಲೆಯಲಿ
ನಾನು ಏರಿಳಿದು
ಸಂಭ್ರಮದ ಸಂಕ್ರಾಂತಿಯಲಿ
ನಾ ಮೈಯ ಮರೆದು

ಎಷ್ಟು ನಯವವಳ ಮೈ
ಮಾಣಿಕ್ಯದಾ ಕಾಂತಿ
ಬೆಲೆಯುಳ್ಳ ಚೆಲುವಿಗೆ
ಯಾವುದಿದೆ ಸಾಟಿ

ಇತ್ತವರು ಯಾರೋ
ಈ ರೂಪ ಲಾವಣ್ಯ
ಸೃಷ್ಟಿಕರ್ತನ ಅಭಿರುಚಿ
ರೂಪಾಂತ ಬಣ್ಣ

ಹೇಗೆ ಹೇಳಲಿ ಅವಳ
ಒಲವಿನಾ ಪರಿಯ
ಅರಿಯಬೇಕಿದೆಯಲ್ಲ
ಈ ಬೆಡಗಿಯಾ ಸಿರಿಯ

ಎದೆಗುಡಿಗೆ ಬಂದಳು
ನನ್ನ ಪ್ರೀತಿಯ ಹೂ ಹುಡುಗಿ
ಪಾರಾದೆ ಮುಳ್ಳಿಂದ
ಅವಳೇ ಒಲಿದು‌ ಬರಲಾಗಿ

ನನ್ನ ಪ್ರೇಮದೇವತೆಯೆಂದು
ಆರಾಧಿಸಲು ಹೋದೆ
ನನ್ನನವಳಲ್ಲಿರಿಸಿಕೊಂಡಳು
ನಾ ಮೂಕನಾದೆ

ಪ್ರೀತಿಯ ರೀತಿಯನು
ಬಲ್ಲವನೆ ಬಲ್ಲ
ಬಾಳನೆಲೆಯರಿವನು
ಒಲವರಿತ ಮಲ್ಲ


  • ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಲೇಖಕಿ , ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading