ಜಬೀವುಲ್ಲಾ ಎಂ. ಅಸದ್ ಅವರ ರಚನೆಯ ಗಜಲ್ ಸಂಗ್ರಹವನ್ನು ತಪ್ಪದೆ ಮುಂದೆ ಓದಿ….
ನೋವು ಹೂ ಮುಡಿದು ನಗುವ ಪ್ರೆಮೆಯ ಓ… ಇನಿಯ
ಕವಿದಿದೆ ಇರುಳು ಅಂತರಂಗದ ಮನೆಯ ನೀ… ಬಾರೆಯ
ಮುಗಿದ ಹಾಡ ಮರಳಿ ಕೇಳುವ ಸುಯೋಗ ಹೊರಳಿ ಬರುವುದೇನು
ಹೇಳಿ ಹೋಗೆಯಾ ಸಾಂತ್ವನದ ಹಿತ ನುಡಿಯ ಹೋ… ಗೆಳೆಯ
ನೆನಪಾದ ಘಳಿಗೆಗೆ ಹತ್ತಿದೆ ಒಲವ ಮದಿರೆಯ ಅಮಲು
ಹೆಸರಿಡಿದು ಕರೆಯುತಿದೆ ನಿನ್ನನೇ ಈ ಹೃದಯ ಹೇ… ಕೇಳೆಯ
ಇನ್ನೂ ತಾಳೇನು ವಿರಹ ವೇದನೆಯನು ಬಾ ಬೇಗ ಸನಿಹ
ಬಯಲಾಗಿದೆ ಭಾವ ಕರುಣಿಸು ಒಲವ ಮಳೆಯ ಈ… ಸಮಯ
ಸನಿಹ ಕಾಣದ ಗುರಿ, ನಡೆದಷ್ಟು ದೂರ ಮುಗಿಯದ ದಾರಿ ಅಸದ್
ಮೌನ ತಬ್ಬಿದೆ ಮಗುವ ಹಾಗೆ ಬಿಡದೆ ಎದೆಯ ಎ… ನೋಡೆಯ
****
ಇರುಳ ಅಲೆಮಾರಿ ಜಂಗಮ ನಾನಾಗಿರುವೆನಿಲ್ಲಿ
ಅವಳ ಕಣ್ಣ ತಿರುವಿನ ಕನಸ ಬೆಳಕ ಬೀದಿಯಲ್ಲಿ
ಹೆಜ್ಜೆಗಳ ಗೆಜ್ಜೆ ನಾದ ಬಳಸಿ ಒಲವ ಅರಸಿ ಚಲಿಸಿ
ಸಜನಿಯ ಮನದ ಅರಸ ನಾನಾಗುವ ಇಚ್ಛೆಯಲ್ಲಿ
ಭುವಿಗೆ ಬಾನ ದಾಹ, ಎನಗೆ ಆಕೆಯ ಮೋಹ
ಭರದಿ ಬರಸೆಳೆದು ಅವಳ ಅಪ್ಪುವ ಜುಲ್ಮಿನಲ್ಲಿ
ನಗು ಮಂದಾರ, ಸಿರಿ ಸಿಂಧೂರ ಮೋಹನವಲ್ಲಿ
ಮೈ ಮೃದು ಶ್ರೀಗಂಧ, ದೇವ ಶಿಲ್ಪಿ ಕಡೆದ ಶಿಲ್ಪವಿಲ್ಲಿ
ಪ್ರೇಮದ ಪರಾಕು ಅಸದ್ ನ ಹೃದಯ ತುಂಬಿ
ಇದ್ದರೂ ಇಲ್ಲದಂತೆ ಉಳಿದಿರುವಳು ನೆನಪಿನಲ್ಲಿ
****
ಬಯಲ ಕುದುರೆ ಏರಿ ಶೂನ್ಯದ ಸವಾರಿಯಾಗಬೇಕಿದೆ
ಪ್ರೇಮ ಮದಿರೆಯ ಹೀರಿ ಆಲಯವ ತೊರೆಯಬೇಕಿದೆ
ನೋವಿನ ಚಿಟ್ಟೆ ಸಂತಸದ ಸುಮಗಂಧವ ಅರಸುತಿದೆ
ಇರುವುದ ಕಳೆಯುವ ಸಮಯ ಖಾಲಿಯಾಗಬೇಕಿದೆ
ಜಗದ ತಮ ಕಣ್ಣಿಗದುವೆ ಹೃದಯದ ತುಂಬಾ ಬೆಳಕಿದೆ
ಆತ್ಮಕ್ಕೆ ರೆಕ್ಕೆ ಹಚ್ಚಿ ಅಲ್ಲಾಹನ ಅಷರ್ ಮುಟ್ಟಬೇಕಿದೆ
ಇಲ್ಲಿರುವುದು ನಶ್ವರಕ್ಕೆ ಅಗೋ ಅಲ್ಲಿಗೆ ತೆರಳಬೇಕಿದೆ
ಇಹದ ಬಂಧಗಳ ಕಳಚಿ ಒಂಟಿಯಾಗಿ ಸಾಗಬೇಕಿದೆ
ಹಚ್ಚಿಟ್ಟ ದೀಪ ಆರಿಸಿದೆ ಗಾಳಿ ಕಾರಣ ಹೇಳದೆ ಅಸದ್
ಜ್ಞಾನದ ಪ್ರಭೆ ಅಳಿಯುವುದಿಲ್ಲ ದಾಹಿಯಾಗಬೇಕಿದೆ
- ಜಬೀವುಲ್ಲಾ ಎಂ. ಅಸದ್
