ಮಹಿಳೆ ಹಾಗೂ ಬಾಲಕಿಯರ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡುವವರು ಇದ್ದಾರೆ, ಧೈರ್ಯವಂತ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ನೀಡಿ ಇಂತಹ ತೊಂದರೆಗಳಿಂದ ಹೊರಬರುತ್ತಾರೆ. ಮೋಸದ ಬಲೆಗಳು ನವೀನ ರೀತಿಯಲ್ಲಿ ಹೇಗಿರುತ್ತೆ ಅನ್ನೋದನ್ನ ‘ನವೀನ ಮಾದರಿಯ ಅಪರಾಧಗಳು’ ಅಂಕಣದ ಮೂಲಕ ಪೊಲೀಸ್ ಹಾಗೂ ಲೇಖಕರು ಆದ ತಾರೇಶ ಡಿ ಈ ಅವರು ಓದುಗರಿಗೆ ತಿಳಿಸಿಕೊಡಲಿದ್ದಾರೆ, ಆಕೃತಿಕನ್ನಡದಲ್ಲಿ ತಪ್ಪದೆ ಅಂಕಣವನ್ನು ಓದಿ…
ನಮ್ಮ ನಡುವೆ ನಡೆಯುತ್ತಿರುವ ನವೀನ ಮಾದರಿಯ ಅಪರಾಧಗಳು….
1) ಮಕ್ಕಳ ಮತ್ತು ಮಹಿಳೆಯರ ಅಶ್ಲೀಲ ಭಾವಚಿತ್ರ/ವಿಡಿಯೋ : ಇಂದು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಕಾಮೆಂಟ್ ಪಡೆಯುವ ಗೀಳು ಯಾರನ್ನು ಬಿಟ್ಟಿಲ್ಲ ಇದು ಕೆಲವೊಮ್ಮೆ ಭಾರಿ ಅನಾಹುತಕ್ಕೆ ಕಾರಣವಾಗುತ್ತದೆ. ರವಿಚಂದ್ರನ್ ರವರ ದೃಷ್ಯ ಸಿನಿಮಾದಲ್ಲಿ ಆಗುವಂತೆ ಮಹಿಳೆಯರು ಮತ್ತು ಬಾಲಕಿಯರ ವಿಡಿಯೋಗಳನ್ನು ಇಟ್ಟುಕೊಂಡು ಮಾಡುವ ಬ್ಲಾಕ್‍ಮೇಲ್ ಗಳಿಂದ ತೊಂದರೆಗೆ ಒಳಗಾಗುವುದು ಸಾಮಾನ್ಯವಾಗಿದೆ. ಧೈರ್ಯವಂತ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ನೀಡಿ ಇಂತಹ ತೊಂದರೆಗಳಿಂದ ಹೊರಬರುತ್ತಾರೆ. ಆದರೆ ಬಹುತೇಖರು ಇಂತಹ ವ್ಯಕ್ತಿಗಳಿಂದ ಶೋಷಣೆಗೆ ಒಳಗಾಗುತ್ತಾರೆ. ಯಾರೇ ಆದರೂ ತಮ್ಮ ಭಾವಚಿತ್ರ ಮತ್ತು ವಿಡಿಯೋಗಳ ದುರುಪಯೋಗವಾಗುತ್ತಿರುವುದು ಕಂಡು ಬಂದ ತಕ್ಷಣ ಪೊಲೀಸರಿಗೆ ತಿಳಿಸಿದಲ್ಲಿ ಆ ವಿಡಿಯೋ ಮತ್ತು ಫೋಟೊಗಳ ಪ್ರಸಾರ ಮತ್ತು ದುರುಪಯೋಗವನ್ನು ತಡೆಗಟ್ಟುವಂತಹ ತಂತ್ರಜ್ಞಾನಗಳು ಇಂದು ಪೊಲೀಸ್ ಇಲಾಖೆಯಲ್ಲಿದ್ದು ಯಾರೂ ಭಯಪಡಬೇಕಾಗಿಲ್ಲ. ಆದಾಗ್ಯೂ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸಾಧ್ಯವಾದಷ್ಟು ಫೇಸ್‍ಬುಕ್‍ಗಳಲ್ಲಿ ಫೋನ್ ನಂಬರ್‍ಗಳನ್ನು ಹಾಕುವುದು ಇನ್ನಿತರ ಖಾಸಗಿ ಮಾಹಿತಿಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳದಿರುವುದೇ ಉತ್ತಮ. ನೆಗಡಿ ಬಂದಿದೆ ಎಂದು ಮೂಗನ್ನೇ ಕುಯ್ದುಕೊಳ್ಳುವುದೇ ಬೇಡ ಸಾಮಾಜಿಕ ಜಾಲತಾಣಗಳನ್ನು ಜಾಗರೂಕತೆಯಿಂದ ಬಳಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಯಾವುದೇ ಸಮಯದಲ್ಲಿ ಯಾರಿಂದಲಾದರೂ ತೊಂದರೆಯಾಗುತ್ತಿರುವುದು ಕಂಡುಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವುದನ್ನು ಮರೆಯಬಾರದು.
2) ಓ.ಎಲ್.ಎಕ್ಸ್ ನಲ್ಲಿ ಕಾರು/ಬೈಕು ಕೊಡುವುದಾಗಿ ನಂಬಿಸಿ ಮೋಸ: ಇಂದೆಲ್ಲಾ ಓ.ಎಲ್.ಎಕ್ಸ್ ನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲೂ ಮುಖ್ಯವಾಗಿ ಎರಡು ಕಡೆಯಿಂದಲೂ ಮೋಸ ನಡೆಯುವುದನ್ನು ಕಾಣಬಹುದಾಗಿದೆ. ಓ.ಎಲ್.ಎಕ್ಸ್ ನಲ್ಲಿ ಯಾವುದೋ ಗಾಡಿ ಹಾಕಿ ಅದನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಿರುವುದಾಗಿ ನಂಬಿಸಿ ಜನರನ್ನು ಯಾಮಾರಿಸುತ್ತಾರೆ. ಕೆಲವರು ಓ.ಎಲ್.ಎಕ್ಸ್ ನಲ್ಲಿನ ವಸ್ತುಗಳನ್ನು ಕೊಂಡುಕೊಳ್ಳುವುದಾಗಿ ಹೇಳಿ ಅವರಿಗೆ ಕೊಡಬೇಕಾಗಿರುವ ಹಣಕ್ಕಾಗಿ ಒಂದು ಕೋಡ್ ಕಳುಹಿಸುವುದಾಗಿ ಅದನ್ನು ಸ್ಕ್ಯಾನ್ ಮಾಡಿಕೊಂಡರೆ ತಮ್ಮ ಖಾತೆಗೆ ವಸ್ತುವಿಗೆ ನೀಡಬೇಕಾಗಿರುವ ಹಣ ನಿಮ್ಮ ಖಾತೆಗೆ ಬರುವುದಾಗಿ ಹೇಳಿ ನಂಬಿಸಿದಾಗ ನಾವು ಆ ಕ್ಯೂ.ಆರ್ ಕೋಡ್ ಅನ್ನು ನಮ್ಮ ಮೊಬೈಲ್‍ನಿಂದ ಸ್ಕ್ಯಾನ್ ಮಾಡಿದರೆ ನಮ್ಮ ಖಾತೆಯಲ್ಲಿರುವ ಸಂಪೂರ್ಣ ಹಣ ಸೈಬರ್ ಲೂಟಿಕೋರರ ಪಾಲಾಗುವುದು ಖಂಡಿತ. ಆದ್ದರಿಂದ ಯಾವುದೇ ಕಾರಣಕ್ಕೂ ಅತಿಯಾದ ಲಾಭಕ್ಕೆ ಎಂದೂ ಆಸೆ ಪಡಬಾರದು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆಯ ಮಾತಿನಂತೆ ಎಲ್ಲೋ ದೂರದಲ್ಲಿ ಕುಳಿತು ವ್ಯವಹಾರ ಮಾಡುವವರನ್ನು ನಂಬಲೇ ಬಾರದು. ಸಾಧ್ಯವಾದಷ್ಟು ಎದುರು ಬದುರು ವ್ಯವಹಾರ ಮಾಡಿಕೊಳ್ಳಬೇಕು ಆಗ ಇಂತಹ ಮೋಸಗಾರರಿಂದ ಮೋಸ ಹೋಗುವುದು ನಿಲ್ಲಬಹುದು.

3) ಇನ್ಸುರೆನ್ಸ್ ಕಂಪೆನಿಲ್ಲಿ ಹಣ ಕಟ್ಟುವಾಗ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಬಾಕಿ ಉಳಿದಿರುವ ವಿಮೆಯ ಅವಧಿಯ ಹಣವನ್ನು ಒಟ್ಟಾಗಿ ಕಟ್ಟಿದರೆ ಭಾರಿ ಲಾಭ ಕೊಡುವುದಾಗಿ ನಂಬಿಸಿ ವಂಚನೆ: ವ್ಯಕ್ತಿಗಳು ತಮ್ಮ ವಿಮೆಯ ಹಣವನ್ನು ಕಟ್ಟಲು ಬಂದವರನ್ನು ನೋಡಿಕೊಂಡು ತಮ್ಮ ಏಜೆಂಟ್‍ಗಳ ಮುಖಾಂತರ ಅವರುಗಳ ಕಾಂಟಾಕ್ಟ್ ನಂಬರ್‍ಗಳನ್ನು ಪಡೆದು ಅವರಿಗೆ ಕರೆಮಾಡಿ ತಾವು ಇನ್ಶುರೆನ್ಸ್ ಕಂಪೆನಿಯ ಮುಖ್ಯ ಬ್ರಾಂಚ್‍ನವರು ಎಂದು ಪರಿಚಯ ಮಾಡಿಕೊಂಡು ನೀವು ಒಮ್ಮೆಲೆ ಇಂತಿಷ್ಟು ಹಣವನ್ನು ಕಟ್ಟಿದರೆ ನಿಮಗೆ ತುಂಬಾ ಲಾಭ ದೊರಕಿಸಿಕೊಡುವುದಾಗಿ ನಂಬಿಸಿ ಅವರಿಂದ ಅಪಾರ ಹಣವನ್ನು ಪಡೆದು ವಂಚಿಸುತ್ತಾರೆ. ಕೆಲವೊಮ್ಮೆ ಅವರುಗಳ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನೆಲ್ಲಾ ಲೂಟಿ ಕೂಡ ಮಾಡಿರುವ ಉದಾಹರಣೆಗಳುಂಟು.
4) ಫೇಸ್ಬುಕ್‍ನಲ್ಲಿ ಪರಿಚಿತರಾಗಿ ಆಪ್ತತೆ ಬೆಳಸಿಕೊಳ್ಳುವ ವ್ಯಕ್ತಿಗಳು ಹುಟ್ಟುಹಬ್ಬದ ದಿನಾಂಕವನ್ನು ತಿಳಿದುಕೊಂಡು ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್ ಕಳಿಸುವುದಾಗಿ ವಿಶ್ವಾಸದಿಂದ ವಿಳಾಸ ಪಡೆದು ನಂಬಿಸಿ ನಂತರ ಅದೇ ಜಾಲದಿಂದ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ನಾನು ಏರ್‍ಪೋರ್ಟ್‍ನಿಂದ ಕರೆಮಾಡುತ್ತಿದ್ದೇನೆ ನಿಮ್ಮ ಪಾರ್ಸೆಲ್ ಪಡೆಯಲು ನಮ್ಮ ಅಕೌಂಟ್‍ಗೆ ಇಷ್ಟು ಹಣ ನೀಡಬೇಕೆಂದು ತಿಳಿಸಿ ಹಣಪಡೆದು ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಆದ್ದರಿಂದ ಅಪರಿಚಿತರಿಂದ ಯಾವುದೇ ಗಿಫ್ಟ್‍ಗಳ ನಿರೀಕ್ಷೆಯನ್ನು ಮಾಡದಿರುವುದು ಉತ್ತಮ.
5) ವ್ಯಾಪಾರಿಗಳ ಕಾಂಟಾಕ್ಟ್ ನಂಬರ್‍ಗಳನ್ನು ಪಡೆದುಕೊಂಡು ಅವರೊಂದಿಗೆ ಅವರಿಗೆ ನಂಬಿಕೆ ಬರುವಂತೆ ಮಾತನಾಡಿ ಉದಾಹರಣೆಗೆ ಈರುಳ್ಳಿ ವ್ಯಾಪಾರಿಯ ಬಳಿ ಈರುಳ್ಳಿ ಲೋಡ್ ಕಳುಹಿಸುತ್ತೇವೆ ಎಂದು ನಂಬಿಸಿ ಎಂದು ಮುಂಗಡ ಹಣ ಪಡೆದು ಈರುಳ್ಳಿ ಅಥವಾ ಮತ್ತಿತರ ವಸ್ತು/ತರಕಾರಿಗಳನ್ನು ಕಳುಹಿಸದೇ ವಂಚಿಸುವುದು ಕೂಡ ನಡೆಯುತ್ತಿರುತ್ತದೆ. ವ್ಯಾಪಾರಿಗಳು ಜಾಗೃತರಾಗಿ ತಮಗೆ ಪರಿಚಿತವಿರುವ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸುವುದು ಉತ್ತಮ ಒಂದು ವೇಳೆ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾದ ಸಂದರ್ಭ ಬಂದಾಗ ನೇರ-ನೇರ ವ್ಯವಹಾರ ನಡೆಸುವುದು ಒಳಿತು.
6) ಟೂರ್ ಪ್ಯಾಕೇಜ್: ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಪರಿಚಿತರು ಪರಿಚಿತರಾಗಿ ಕಡಿಮೆ ಬೆಲೆಗೆ ಆಕರ್ಷಕ ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯುವುದಾಗಿ ನಂಬಿಸಿ ಮುಗ್ಧ ಜನರನ್ನು ನಂಬಿಸಿ ಮೋಸ ಮಾಡುವ ಜಾಲಗಳನ್ನು ಕಾಣಬಹುದಾಗಿದೆ.
7) ಮೊಬೈಲ್ ಟವರ್: ಮುಗ್ಧ ಶ್ರೀಮಂತ ಜನರನ್ನು ಗುರುತಿಸಿ ಅವರುಗಳಿಗೆ ತುಂಬಾ ಲಾಭದ ಆಸೆ ತೋರಿಸಿ ನಿಮ್ಮ ಜಾಗದಲ್ಲಿ ಟವರ್ ನಿರ್ಮಿಸಿಕೊಡಿ ಬಾಡಿಗೆ ಕೊಡುತ್ತೇವೆ ಎಂದು ಹೇಳಿ ನಂಬಿಸಿ ಟವರ್ ಕೂಡಾ ನಾವೆ ಕಡಿಮೆ ಖರ್ಚಿನಲ್ಲಿ ನಿರ್ಮಿಸಿಕೊಡುತ್ತೇವೆ ಅದನ್ನು ನಿರ್ಮಿಸಲು ಸುಮಾರು ಹತ್ತು ಲಕ್ಷ ಖರ್ಚಾಗುತ್ತದೆ ಎಂದು ತಿಳಿಸಿ ನಂತರ ಹಂತ ಹಂತವಾಗಿ ಸಾಧ್ಯವಾದಷ್ಟು ಹೆಚ್ಚು ಹಣ ಪಡೆದು ವಂಚನೆ ಮಾಡುವ ತಂಡಗಳನ್ನೂ ಕೂಡ ನಾವು ಕಾಣಬಹುದಾಗಿದೆ.
8) ನಾಪ್ತಾಲ್ ಮತ್ತಿತ್ತರ ಖಾಸಗಿ ಕಂಪೆನಿಯವರು ಎಂದು ಪರಿಚಯಿಸಿಕೊಂಡು ನಿಮಗೆ ಗಿಫ್ಟ್ ಬಂದಿದೆ ಟ್ಯಾಕ್ಸ್ ಹಣವನ್ನು ನೀವು ಬರಿಸಬೇಕು ಎಂದು ಹೇಳಿ ಹಣ ಪಡೆದು ಗಿಫ್ಟ್ ನೀಡದೇ ಕಟ್ಟಿರುವ ಹಣವನ್ನು ನೀಡದೇ ವಂಚನೆ ಮಾಡುವ ತಂಡಗಳನ್ನು ನಾವು ಕಾಣಬಹುದಾಗಿದೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ.
