ಬೆಂಗಳೂರಿನ ನಾರಾಯಣ ಹೃದಯಾಲಯದ ನಿರ್ದೇಶಕರು ಹಾಗೂ ವಿಶ್ವದ ಅಗ್ರಮಾನ್ಯ ಹೃದಯತಜ್ಞರಲ್ಲಿ ಒಬ್ಬರಾದ ಡಾ ದೇವಿಶೆಟ್ಟಿ ಯವರ ಸಂದೇಶ ಹೀಗಿದೆ. ತಾರೇಶ ಡಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
“ನನ್ನೆಲ್ಲಾ ಮಿತ್ರರೇ…
ಇತ್ತೀಚಿನ ಕೆಲ ವರ್ಷಗಳಿಂದ ನಾನು, ನನಗೆ ವೈಯಕ್ತಿಕವಾಗಿ ತೀರಾ ಪರಿಚಿತರಿದ್ದ 8-10 ಜನರನ್ನು ಕಳೆದು ಕೊಂಡಿದ್ದೇನೆ.. ಅದರಲ್ಲೂ 40 ರ ಆಸುಪಾಸಿನಲ್ಲಿದ್ದ ಕೆಲ ಸೆಲೆಬ್ರಿಟಿಗಳು ‘ಫಿಟ್ ‘ ಆಗಿರಲು ಅತೀ ಹೆಚ್ಚು ಶ್ರಮಿಸಿ ಮರಣಿಸಿದ್ದಾರೆ.. ಆದರೆ ಅವರೆಲ್ಲಾ ಕೇವಲ ಫಿಟ್ ಆಗಿರುವಂತೆ, ಸಿಕ್ಸ್ ಪ್ಯಾಕ್ ಹೊಂದಿರುವಂತೆ ಕಾಣುತ್ತಿದ್ದರಷ್ಟೆ….
ಜೀವನದಲ್ಲಿ ಎಲ್ಲದಕ್ಕೂ ‘ಮಿತ’ ವೇ ಮಂತ್ರ.. ಸೊನ್ನೆ ಅಥವಾ ನೂರು ಈ ಎರಡರಲ್ಲಿ ಯಾವುದರ ಕಡೆಗಿನ ತೀವ್ರ ತುಡಿತವಿದ್ದರೂ ಅದು ತಪ್ಪು. ಒಂದಿಪ್ಪತು ನಿಮಿಷಗಳ ಕಾಲದ ಮಿತವಾದ ವ್ಯಾಯಾಮ, ಎಲ್ಲವನ್ನೂ ತಿನ್ನುವುದು, ಅತಿ ಪಥ್ಯ ಬೇಕಿಲ್ಲ.. ಕಿವಿ ಹಣ್ಣು.. ಆಲೀವ್ ಎಣ್ಣೆ.. ಇವೆಲ್ಲಾ ಅಲ್ಲ.. ನಿಮ್ಮ ಪೂರ್ವಜರು ಏನೆಲ್ಲಾ ತಿನ್ನುವುದನ್ನು ರೂಢಿ ಮಾಡಿದ್ದಾರೋ ಅಂತಹ ಸ್ಥಳೀಯ, ಆಯಾ ಋತುಮಾನದಲ್ಲಿ ಸಿಗುವ, ನಿಮ್ಮ ಊರಿನಲ್ಲೇ ಲಭ್ಯವಾಗುವ ಎಲ್ಲವನ್ನೂ ಮಿತವಾಗಿ ತಿನ್ನಿ.. ಪೂರ್ಣ ಏಳು ಗಂಟೆಗಳ ನಿದ್ರೆ ಮಾಡಿ.. ನಿಮ್ಮ ದೇಹವನ್ನು ಸ್ಟೀರಾಯ್ಡ್ ಅಥವಾ ಸಾಧನೆ ಹೆಚ್ಚಿಸುವ ಔಷಧಗಳನ್ನು ಸೇವಿಸದೇ ಗೌರವಿಸಿ.

ನೀವು ಏನೆಲ್ಲಾ ತಿನ್ನುತ್ತಾ ಬೆಳೆದಿರೋ ಅವನ್ನೇ ಮಿತ ಪ್ರಮಾಣದಲ್ಲಿ ತಿನ್ನಿ . ದಿನನಿತ್ಯ 20 ರಿಂದ 30 ನಿಮಿಷಗಳ ಕಾಲ ವ್ಯಾಯಾಮ, ಒಂದು ಉತ್ತಮ ನಡಿಗೆ.. ಇವಿಷ್ಟು ಸಾಕು.. ಎಲ್ಲಾ ರೀತಿಯ ಶಕ್ತಿವರ್ಧಕ, ಪೂರಕ ಆಹಾರ ನಿಲ್ಲಿಸಿ..ಕುಡಿಯುವ ಅಭ್ಯಾಸವಿದ್ದರೆ ವಾರಕ್ಕೆ ಕೆಲವು ಪೆಗ್ ಗಳಿಗಷ್ಟೇ ಸೀಮಿತಗೊಳಿಸಿ.. ಧೂಮಪಾನ ಬಿಡಲು ಸಾಧ್ಯವೇ ಇಲ್ಲ ಎನ್ನುವುದಾದರೆ ದಿನಕ್ಕೆ ಒಂದೆರಡಕ್ಕೆ ಸೀಮಿತಗೊಳಿಸಿ. ನನ್ನ ಮಾತಿನ ಸಾರಾಂಶ ನಿಮಗೆ ಅರ್ಥವಾಗಿರಬೇಕು.. ಎಲ್ಲವೂ ಇರಲಿ.. ಮಿತವಾಗಿರಲಿ.. ನಿಮ್ಮ ನಿತ್ಯಕರ್ಮದಲ್ಲಿ ಸ್ವಲ್ಪ ಮೌನ ಧ್ಯಾನವನ್ನು ಸೇರಿಸಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ದೇಹದ ಮಾತಿಗೆ ಕಿವಿಗೊಡಿ.. ಅದನ್ನು ಅರ್ಥಮಾಡಿ ಕೊಳ್ಳಿ..
40 ಕ್ಕೆ ನಿಮ್ಮ ದೇಹ ಸಾಕಷ್ಟು ಬದಲಾವಣೆಗೊಳಗಾಗುತ್ತದೆ, 50 ಕ್ಕೆ ಇನ್ನಷ್ಟು ಹೆಚ್ಚು.. 60 ಮೀರಿದೊಡನೆ ದೇಹ ಮಂದವಾಗತೊಡಗುತ್ತದೆ.. 70 ಮೀರಿದೊಡನೆ ಅಂತ್ಯಕ್ಕೆ ಅಣಿಗೊಳ್ಳಲಾರಂಭಿಸುತ್ತದೆ..80 ಮೀರಿತೆಂದರೆ ಪ್ರತಿ ವರ್ಷವೂ ಒಂದೊಂದು ಬೋನಸ್.. ಆದ್ದರಿಂದ ಅರವತ್ತು ಎಂದರೆ ಹೊಸ ನಲವತ್ತು, ಐವತ್ತು ಎಂದರೆ ಹೊಸ ಮೂವತ್ತು, ಎನ್ನುವುದನ್ನೆಲ್ಲಾ ಬಿಟ್ಟು ಬಿಡಿ. ಅದು ಹಾಗಲ್ಲ..ನೀವು 40 ಅಥವಾ 50 ಮೀರಿ ಆರೋಗ್ಯವಂತರಾಗಿದ್ದರೆ ಅದಕ್ಕಾಗಿ ಧನ್ಯತೆ ಭಾವ ಹೊಂದಿರಿ.. ನಿಮ್ಮ ಹೃದಯದ ವೇಗಕ್ಕೆ ಹೊಂದುವಂತೆ ನಿಮ್ಮ ವೇಗವನ್ನೂ ವಯೋ ಮಾನಕ್ಕನುಗುಣವಾಗಿ ತಗ್ಗಿಸಿ ಸಂಯಮ ತೋರಿ. ನಿವೃತ್ತಿಯನ್ನು ಒಂದು ಸಕಾರಣಕ್ಕಾಗಿ ಸಲಹೆ ಮಾಡಲಾಗುತ್ತದೆ ಎಂಬುದನ್ನು ಅರಿಯಿರಿ.. ನೀವು ಹಿಂದೊಮ್ಮೆ ಸಹಿಸುತ್ತಿದ್ದ ಒತ್ತಡಗಳನ್ನು ಇದೀಗ ನಿಮ್ಮ ದೇಹ ಮತ್ತು ಮನಸ್ಸುಗಳು ಸಹಿಸಲಾರವು. ಹೊರಗಿನಿಂದ ನೀವು ಚೆನ್ನಾಗಿಯೇ ಕಾಣುತ್ತಿರಬಹುದು, ಅದಕ್ಕಾಗಿ ನಿಮ್ಮ ವಂಶವಾಹಿನಿಗೆ ಒಂದು ಕೃತಜ್ಞತೆ ಇರಲಿ.. ಆದರೆ ಒಳಗೆ, ನಿಮ್ಮ ಅಂಗಾಂಗಗಳಿಗೆ ವಯಸ್ಸಾಗುತ್ತಿದೆ.
- ತಾರೇಶ ಡಿ – ಪೊಲೀಸ್, ಲೇಖಕರು
