ಬಣ್ಣದಲಿ ಅಳೆದರೊ ಹುಟ್ಟಿರುವ ಶಿಶುವನ್ನು ಮತ್ತೆ ಕುಲ ಗೋತ್ರದಲಿ ವಂಶ ಘನತೆಯಲಿ… ದಿವಾಕರ ಡೋಂಗ್ರೆ ಎಂ ಅವರ ಪ್ರಶ್ನೆ ಕವನವನ್ನು ತಪ್ಪದೆ ಮುಂದೆ ಓದಿ…
ಬೆಳಕ ಕಂಡೊಡನೆಲ್ಲ ಮೊದಲು ಕೇಳಿದ ಮಾತು
ಮಗುವು ಗಂಡೋ ಹೆಣ್ಣೊ ಲಿಂಗ ನಿಶ್ಚಯಕೆ
ಚೀರಿ ಹೇಳಿತು ಆತ್ಮ ಹೆಣ್ಣು ಗಂಡೆಂದೆನುವ
ನನಗಿರದ ಭೇದವದು ನಿಮಗೇಕೆ ಇಲ್ಲಿ.
ದಿನ ಕಳೆಯೆ ಹಲವೊಂದು ಮತ್ತೆ ರೂಪದ ಮಾತು
ಯಾರನ್ನು ಹೋಲುತಿದೆ ಹೆತ್ತ ಮಗು ತಾನು
ತಂದೆಯಂತಿದೆ ನೋಡಿ ಇನಿತು ಸಂಶಯವಿಲ್ಲ
ಕೇಳಿ ಮಾತನು ಮನದಿ ನಕ್ಕಳ್ಹೆತ್ತಬ್ಬೆ
ತಾಯಿಯೆಂಬುದು ಸತ್ಯ ತಂದೆಯೆಂಬುದು ಊಹೆ
ಹಡೆದವಳು ಅರಿತಿಹಳು ಪರಮ ಸತ್ಯವನು
ಬಣ್ಣದಲಿ ಅಳೆದರೊ ಹುಟ್ಟಿರುವ ಶಿಶುವನ್ನು
ಮತ್ತೆ ಕುಲ ಗೋತ್ರದಲಿ ವಂಶ ಘನತೆಯಲಿ.
ಮಗುವಿಲ್ಲಿ ಅಳುತಲಿದೆ ಯಾಕೆ ಹುಟ್ಟಿದೆ ನಾನು
ಯಾಕೆ ತಂದರೊ ನನ್ನ ಭವದ ಬಂಧನಕೆ
ಉತ್ತರಿಸಲಾಗದಿಹ ನೂರೆಂಟು ಪ್ರಶ್ನೆಗಳು
ತಬ್ಬಿ ಅಮ್ಮನ ಕಂದ ಮಲಗಿಹುದು ನೋಡಿ.
- ದಿವಾಕರ ಡೋಂಗ್ರೆ ಎಂ
