‘ಕಥೆಗಾರನ ಮಗಳು’ ಸಣ್ಣಕತೆ

ಕತೆಗಾರ ಎಂದಿನಂತೆ ಎರಡೂ ಹೆಗಲುಗಳಲ್ಲಿ ಪುಸ್ತಕದ ಚೀಲಗಳು. ಆದರೆ ಅವಳ ಮುಖದಲ್ಲಿ ಎಂದಿನ ಲವಲವಿಕೆಯಿರಲಿಲ್ಲ. ಯಾಕೆ ಏನಾಯ್ತು..ತುಂಬ ಮಂಕಾಗಿದ್ದೀಯಾ, ಕತೆಗಾರ ಕೇಳಿದ. ಅಮ್ಮ ಹೋಗ್ಬಿಟ್ಳು. ಹದಿನೈದು ದಿನ ಆಯ್ತು. ಅಮ್ಮ ಸಾಯುವ ಕೊನೆ ಗಳಿಗೆಯಲ್ಲೂ ನಿಮ್ಮ ಬಗ್ಗೆ ಕೇಳ್ತಾ ಇದ್ಳು. ಒಮ್ಮೆ ನಮ್ಮ ಮನೆಗೆ ಕರ್ಕೊಂಡು ಬಾರೆ ಅವ್ರನ್ನು. ಆ ನಿನ್ನ ಕತೆಗಾರರನ್ನು ಅಂತ. ಮುಂದೇನಾಯಿತು  ದಿವಾಕರ ಡೋಂಗ್ರೆ ಎಂ ಅವರ ‘ಕಥೆಗಾರನ ಮಗಳು’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಆತ ಕತೆಗಾರ. ಬರೆಯುವುದೊಂದೇ ಅವನ ಕೆಲಸ. ಕತೆಗಾರ ಅಂದ ಮೇಲೆ ವಿಚಾರ ಸಂಕಿರಣ, ಕಥಾ ಕಮ್ಮಟ, ಸಾಹಿತ್ಯಿಕ ಸಮಾರಂಭಗಳು ಹೀಗೆಲ್ಲ ಇದ್ದೇ ಇರತ್ತಲ್ಲ. ಇವೆಲ್ಲ ಕತೆಗಾರ ಎಂಬ ಪ್ರೀತಿಯಿಂದ ಬರುವ ಸಾಹಿತ್ಯಾಸಕ್ತಿಯ ಆಹ್ವಾನಗಳು. ಇವೆಲ್ಲಕ್ಕು ಆತ ಪ್ರಯಾಣ ಮಾಡುವುದು ರೈಲಿನಲ್ಲೇ. ರೈಲಿನ ಕಿಟಿಕಿಯ ಪಕ್ಕದಲ್ಲಿ ಕುಳಿತು ಪ್ರಯಾಣದುದ್ದಕ್ಕೂ ಹೊಲ, ಗದ್ದೆ, ಕಾಡುಮೇಡು, ಪರ್ವತ, ನದಿಕೊಳ್ಳಗಳ ಸೊಬಗನ್ನು ಸವಿಯುವುದೆಂದೆರೆ ಆತನಿಗಿಷ್ಟ. ಮನುಷ್ಯರ ಪರಿಚಯ, ಬದುಕಿನ ಸುಖ ದುಃಖಗಳು, ಸಮಸ್ಯೆಗಳನ್ನು ಆತ ರೈಲಿನಲ್ಲೇ ಅರಿತು ಕೊಳ್ಳುವುದು. ಬದುಕಿನ ಅನಿವಾರ್ಯತೆಗಳು, ಸಂಭ್ರಮಗಳು, ಬದುಕಿನ ಹೊಲಸು ಮುಖವಾಡಗಳೆಲ್ಲ ಅವನಿಗೆ ಸಿಗುವುದು ರೈಲಿನಲ್ಲೇ. ಹಲವೊಂದು ಸಲ ಅಂತಹ ಮಾತುಕತೆಗಳು, ಸಂವಾದಗಳು, ಪರಿಚಯಗಳು ಅವನ ಕಥೆಗಳಾಗುವುದುಂಟು. ಪಾತ್ರಗಳ ಹೆಸರು ಮತ್ತು ಸಂದರ್ಭಗಳು ಮಾತ್ರ ಬದಲಾಗುತ್ತವೆ. ಕತೆಗಾರ ಅಂದ್ಮೇಲೆ ಆತ ಭಾವುಕನಾಗಿರಲೇ ಬೇಕು. ಅಂತರ್ಮುಖವಾದಂತಹ ಭಾವನೆಗಳ ಸ್ಪುರಣವೇ ತಾನೇ ಅಕ್ಷರಗಳಲ್ಲಿ ಮೂಡಿ ಕತೆಗಳಾಗೊದು?

ನೀವು ಪರ್ವಾಗಿಲ್ಲ ಮಾರಾಯ್ರೇ ಕತೆಗಾರರು. ಜನ ತನ್ನನ್ನು ಹೊಗಳುವುದನ್ನು ಕೇಳಿದಾಗ ಅವನಿಗೆ ನಗು ಬರುತ್ತದೆ. ನಾನು ಅಂತೇನ್ರಿ? ಎಲ್ರೂ ಪ್ರತಿಯೊಬ್ಬರ ಬದುಕಿನಲ್ಲಿ ಅಕ್ಷರಗಳಲ್ಲಿ ಪೋಣಿಸಲಾಗದ, ಎದೆಯ ಹಾಳೆಯಲ್ಲಿ ಬರೆದಿಟ್ಟ ನೂರಾರು ಕಥೆಗಳಿರಬಹುದು. ನಾವು ಕತೆಗಾರರು ಅವರಿವರು ಹೇಳಿದ್ದನ್ನು, ನಾವು ಕಂಡು ಕೇಳಿದ್ದನ್ನು, ಕೆಲವೊಂದು ಸಲ ನಮ್ಮದೇ ಕಲ್ಪನೆಗಳನ್ನು ಕಥೆಗಳಾಗಿ ಬರೆಯುತ್ತೇವೆ. ಅವು ಪ್ರಕಟವಾಗುತ್ತವೆ. ಓದುಗ ಎಲ್ಲೊಆ ಕಥೆಯಲ್ಲಿ ತನ್ನ ಬದುಕಿನ ಕಥೆಯ ಎಳೆಯೊಂದು ನುಸುಳಿದೆ ಅಂತ ತಿಳಿದುಕೊಂಡು ಪರ್ವಾಗಿಲ್ಲ ಮಾರಾಯ್ರೇ ಚೆನ್ನಾಗಿಯೇ ಬರಿತಾರೆ. ಅವರ ಕಥೆಗಳೆಂದರೆ ಬದುಕಿಗೆ ತೀರ ಹತ್ತಿರವಾಗಿರುತ್ತವೆ, ಹೃದಯಸ್ಪರ್ಶಿಯಾಗಿರುತ್ತವೆ ಹೀಗೆಲ್ಲ ಪ್ರತಿಕ್ರಿಯೆ ನೀಡುವುದಕ್ಕೆ ಪ್ರಾರಂಭಿಸುತ್ತಾನೆ. ನಿಜ ಹೇಳ್ಬೇಕಂದ್ರೆ ಕಥೆ ಬರೆಯುವುದೆಂದರೆ ಮನಸ್ಸಿನ ಭಾವಗಳೊಡನೆ ನಡೆಸುವ ಹಾದರ. ಅವರಿವರ ಬದುಕನ್ನು ಕದ್ದುಮುಚ್ಚಿ ನೋಡಿ ಕಟೆದ ಶಿಲ್ಪ. ಪ್ರಕಟವಾದಾಗ ಮೈತುಂಬ ಸೆರಗು, ಲಜ್ಜೆ, ಸೌಂದರ್ಯ ಹೀಗೆಲ್ಲ ಒಟ್ಟಂದ. ಒಂದು ಕಥೆ ಹೇಳುವುದಕ್ಕೆ ಇಷ್ಟೆಲ್ಲ ಮಾತೆ? ಅಂತಿರಾ. ಹೌದಲ್ಲ..ನಾನು ನಿಮಗೆ ಕಥೆ ಹೇಳಬೇಕಲ್ಲ..?

ಫೋಟೋ ಕೃಪೆ : google

ಕಥೆಗಾರನಿಗೆ ಓದುವ ಹುಚ್ಚು. ಅದಿದ್ದರೆ ತಾನೆ ಕಥೆ ಬರೆಯೊಕ್ಕಾಗೊದು? ರೈಲಿನಲ್ಲಿ ಪುಸ್ತಕ ಮಾರುವವರ ಬಳಿ ಒಂದಲ್ಲೊಂದು ಪುಸ್ತಕ ಖರೀದಿಸುವುದು ಆತನ ಹವ್ಯಾಸ. ಅದು ಬಹುಶಃ ತಾನು ಪುಸ್ತಕ ಕೊಳ್ಳುವುದರಿಂದ ಸಿಗುವ ಒಂದಿಷ್ಟು ದುಡ್ಡು ಅವರ ಬದುಕಿಗಾಸರೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ಇಲ್ಲದಿದ್ದಲ್ಲಿ ಪುಸ್ತಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯಿರುವಾಗ ಇದೆಲ್ಲ ಬೇಕೆ? ಅಂತಹುದೆಲ್ಲ ಒಣ ವ್ಯವಹಾರ. ಒಂದು ಪುಸ್ತಕ ಖರೀದಿಯಲ್ಲಿ ಒಬ್ಬ ಮನುಷ್ಯನ ಪರಿಚಯವಾಗುತ್ತದೆ. ಅವನನ್ನು ತಿಳಿದು ಕೊಳ್ಳುವುದಕ್ಕಾಗುತ್ತದೆ. ಹಲವೊಂದು ಸಲ ನಾವು ಲೇಖಕರು ಅಂತ ಹೇಳಿ ಬೀಗುವವರಿಗಿಂತ ಇಂತಹ ಪುಸ್ತಕ ಮಾರುವವರ ಬಳಿ ಸಾಹಿತ್ಯದ ಕುರಿತಾದ

ಅಗಾಧವಾದ ಅರಿವಿರುತ್ತದೆ. ಅಂತಹ ಸಾಧ್ಯತೆಗಳೆಲ್ಲ ಇರುವುದು ರೈಲಿನಲ್ಲಿ ಪುಸ್ತಕಗಳನ್ನು ಮಾರುವವರ ಹತ್ರಾನೆ. ಅಂತಹ ಪುಸ್ತಕ ಖರೀದಿಯ ಅವನ ಹುಚ್ಚಿನಲ್ಲಿ ಆತನಿಗೆ ಪರಿಚಯವಾದವಳು ಕವಿತಾ ಅನ್ನುವ ಇನ್ನೂ ಹದಿನೆಂಟರಿಂದ ಇಪ್ಪತ್ತು ದಾಟಿರದ ಹುಡುಗಿ.

ಲಕ್ಷಣವಾಗಿ ಸಲ್ವಾರ್ ಕಮೀಜ್, ಮೇಲೊಂದು ದುಪ್ಪಟ್ಟ ಹೊದ್ದು ಎರಡು ಹೆಗಲುಗಳಿಗೆ ಜೋತುಬಿದ್ದ ಚೀಲಗಳಲ್ಲಿ ಮಾರಾಟಕ್ಕಾಗಿ ಪುಸ್ತಗಳನ್ನಿರಿಸಿಕೊಂಡ ಆಕೆ ಪುಸ್ತಕಗಳನ್ನು, ಅವುಗಳು ಬರೆದ ಸಾಹಿತಿಗಳನ್ನು ಪರಿಚಯಿಸುವುದೇ ಒಂದು ಸೊಗಸು. ಹೆಚ್ಚಿನವರೆಲ್ಲ ಅವಳ ಮಾತಿನ ಮೋಡಿಗೊಳಗಾಗಿಯೇ ಪುಸ್ತಕಗಳನ್ನು ಖರೀದಿಸುವವರು. ಇನ್ನು ಕೆಲವರು.., ಬಿಡಿ ಅದೆಲ್ಲ. ಪುಸ್ತಕ ಕೊಳ್ಳುವ ನೆವದಲ್ಲಿ ಆಕೆಯೊಡನೆ ಮಾತಾಡಿ ಅವಳಂದ ಸವಿಯುವವರು. ಪುಸ್ತಕ ಕೊಳ್ಳದಿರುವವರು! ಆದರೆ ಆಕೆ ಮಾತ್ರ ನಿಯತ್ತಿನ ಹುಡುಗಿ.

ಆಕೆಯ ಸಂಗ್ರಹದಲ್ಲಿರುವುದರಲ್ಲಿ ಹೆಚ್ಚಿನವು ಕತೆ, ಕಾವ್ಯಗಳೆ. ಮೊದಮೊದಲು ಆಕೆ ಬರೆ ಪುಸ್ತಕ ಮಾರುತಿದ್ದಾಳೆ, ಹೊಟ್ಟೆಪಾಡು ಅಂದುಕೊಂಡಿದ್ದ ಕತೆಗಾರ. ಅವಳ ಪರಿಚಯವಾದಂತೆ ಅವಳು ಬರಿಯ ಮಾರಾಟಗಾರಳಲ್ಲ ಆಕೆಯಲ್ಲಿ ಸಾಹಿತ್ಯದ ಬಗೆಗೆ ಅನನ್ಯ ಒಲವಿದೆ ಅನ್ನುವುದು ಕತೆಗಾರನಿಗೆ ಗೊತ್ತಾಯ್ತು ಪರಿಚಯ ಗಾಢವಾಗುತ್ತ ಹೋಯ್ತು.

ಕಥೆಗಾರನಿಗಿನ್ನು ಐವತ್ತು ದಾಟಿಲ್ಲ. ನೋಡಿದವರು ಅವನಿಗೆ ಐವತ್ತೆಂದರೆ ನಂಬುತ್ತಿರಲಿಲ್ಲ. ಮದುವೆಯಾಗಿದೆ, ಹೆಂಡತಿ ಕಾಲೇಜು ಉಪನ್ಯಾಸಕಿ. ಅವಳೂ ಕೂಡ ಸಾಹಿತ್ಯಾಸಕ್ತಳು. ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿದ್ದಾರೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೇನು ಮಾಡುವುದು. ದಾಂಪತ್ಯ ಫಲಿಸಲಿಲ್ಲ. ಹಾಗಂತ ಈ ವಿಚಾರದಲ್ಲಿ ಇಬ್ಬರೂ ಬೇಸರ ಪಟ್ಟಿಲ್ಲ. ಮುದಿತನಕ್ಕೆ ಯಾರೊ? ಬದುಕು ಹೇಗೋ ಏನೊ? ಯಾವೊಂದು ವಿಚಾರಗಳು ಅವರನ್ನು ಕಾಡಲಿಲ್ಲ.

ಫೋಟೋ ಕೃಪೆ : google

ತಾನು ಕತೆಗಾರ, ಕವಿ, ಸಾಹಿತಿ ಅನ್ನುವುದನ್ನು ತಿಳಿದುಕೊಂಡ ಹುಡುಗಿ ಹೆಚ್ಚು ಹೆಚ್ಚು ತನ್ನೊಡನೆ ಸಾಹಿತ್ಯ, ಕತೆ, ಕಾದಂಬರಿಗಳ ಬಗ್ಗೆ ಮಾತನಾಡುತ್ತಿದ್ದಳು. ಅವಳಲ್ಲಿರುವ ಸಾಹಿತ್ಯಿಕ ಜ್ಞಾನ ಅವಳ ಪ್ರತಿಭೆಯನ್ನು ತಿಳಿಸುತ್ತಿತ್ತು. ಅವಳಲ್ಲಿ ಹುದುಗಿರುವ ಒಬ್ಬ ಕವಿಯನ್ನೊ, ಕತೆಗಾರನನ್ನೋ ಕಂಡಾಗ ಕತೆಗಾರನಲ್ಲಿ ಒಂದಷ್ಟು ಮತ್ಸರ ಉಂಟಾದ್ದು ಸುಳ್ಳಲ್ಲ. ಇವಳೂ ಏನಾದರು ಬರೆಯ ತೊಡಗಿದರೆ ಗತಿಯೇನು? ಒಂದು ದಿನ ಆತ ಕೇಳಿಯೇ ಬಿಟ್ಟ. ನೀನು ಏನಾದರು ಬರಿತಿದ್ದಿಯೇನಮ್ಮಾ? ಯಾವುದಾದರು ಪುಸ್ತಕ, ಲೇಖನ, ಕತೆ, ಕವಿತೆ ಪ್ರಕಟವಾಗಿದೆಯೇ?.

ಎಲ್ಲಿ ಸಾರ್, ಬದುಕಿನ ಹೋರಾಟವೇ ದೊಡ್ಡದಾಗಿದೆ. ಇನ್ನೂ ಬರೆಯೊದೆಲ್ಲಿ? ಈಗಂತು ಅದಕ್ಕೂ ವಶೀಲಿ ಬಾಜಿಗಳ ಕಾಲ. ಸಾರ್ ಬರೆಯವುದು ಆತ್ಮತೃಪ್ತಿಗಾಗಿ ಇರಬೇಕಲ್ವ ಸಾರ್? ಹಿಂದಿನವರೆಲ್ಲ ಬರೆದದ್ದು ತಮ್ಮ ಆತ್ಮ ತೃಪ್ತಿಗಲ್ವೇ? ಕನ್ನಡ ನುಡಿಯ ಸೇವೆಯೆಂದಲ್ವೇ ಸಾರ್? ಯಾರನ್ನೋ ಮೆಚ್ಚಿಸುವುದಕ್ಕೊ, ಯಾವುದೊ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟೊ ಬರೆಯೊದು ಹಾದರ ಅನ್ಸಲ್ವೆ ಸಾರ್? ಕತೆಗಾರ ಬೆವರತೊಡಗಿದ, ಬತ್ತಲಾಗತೊಡಗಿದ. ಅಷ್ಟ್ರಲ್ಲಿ ಮೇಡಮ್.., ಕಾರಂತರ ‘ಮರಳಿ ಮಣ್ಣಿಗೆ’ ಇದ್ಯಾ ಯಾರೊ ಪ್ರಯಾಣಿಕರು ಕೇಳಿದ್ರು.ಇದೇ ಸಾರ್. ನಂ ಕಾರಂತಜ್ಜಂದು ಇಲ್ಲಾಂದ್ರೆ ಹೇಗೆ? ಒಂದು ನಿಮಿಷ; ಬಂದೆ ಸಾರ್ ಅನ್ನುತ್ತ ಆಕೆ ಹೊಸ ಗ್ರಾಹಕನೆಡೆ ನಡೆದಳು.

ಇನ್ನೊಂದು ದಿನ ಹೀಗಾಯ್ತು. ಸರ್, ಈ ಸರ್ ಗೀರ್ ಅಂತ ನಾನು ನಿಮ್ಮನ್ನು ಕರೆಯೊದು ನನ್ಗ್ಯಾಕೊ ಹಿತ ಅನ್ಸೊಲ್ಲ. ನಾನು ನಿಮ್ಮನ್ನು ಅಪ್ಪಾ ಅಂತ ಕರಿಲಾ ಸರ್? ಕವಿತೆ ಕತೆಗಾರನನ್ನು ಕೇಳಿದಳು.

ಮೊದಲ ಬಾರಿಗೆ ಕತೆಗಾರನೊಳಗೊಬ್ಬ ಅಪ್ಪ ಹುಟ್ಟಿಕೊಂಡ. ಇದು ತನ್ನನ್ನು ಕತೆಗಾರನಿಂದ ರಕ್ಷಿಸಿಕೊಳ್ಳುವ ಹುಡುಗಿಯ ಹಿಕ್ಮತ್ತಿರಬಹುದೇ? ಕತೆಗಾರ ಯೋಚಿಸಿದ. ಉತ್ತರ ಕೊಡಲೇ ಬೇಕಲ್ಲ ಅದೂ ಅವಳ ಆಶಯಕ್ಕೆ ಪೂರಕವಾಗಿ. ತೊಂದರಯೇನಿಲ್ಲ, ನನಗೂ ಅದು ಇಷ್ಟವೇ ಕಥೆಗಾರ ಉತ್ತರಿಸಿದ. ಅಷ್ಟರೊಳಗೆ ಕತೆಗಾರನೊಳಗಿನ ಹೆಣ್ಣನ್ನು ಅರಸುವ ಗಂಡಸು ಸತ್ತು ಹೋಗಿದ್ದ.

ಅದಿರ್ಲಿ ಯಾಕೀ ಪ್ರಶ್ನೆ? ನನ್ನನ್ನೇ ನೀನು ಅಪ್ಪನೆಂದು ಯಾಕೆ ಕರೆಯಬೇಕು? ಹಾಗಂತ ತಿಳಿದುಕೊಳ್ಳಬೇಕು? ಕತೆಗಾರ ಮರು ಸವಾಲೆಸೆದ.

ನಿಮಗಿಷ್ಟವಿಲ್ಲವಾದರೆ ಬಿಡಿಸರ್. ನೀವೊಬ್ಬ ಕತೆಗಾರನಾಗಿ, ನಾನೊಬ್ಬಳು ಪುಸ್ತಕ ಮಾರುವವಳಾಗಿಯೇ ಇರೋಣ. ಅದರಲ್ಲೇನಂತೆ ಅಂದಳು ಕವಿತೆ.

ಛೆ..ಛೇ.., ತಪ್ಪು ತಿಳಿದುಕೊಳ್ಳಬೇಡ. ನನಗೂ ನಿನ್ನನ್ನು ಮಗಳೆಂದು ಕರೆಯುವುದು ಇಷ್ಟವೇ..

ಅದು ಯಾಕೆ ಸರ್..?

ಅದು ಯಾಕೆಂದರೆ ನನಗೆ ಮಕ್ಕಳಿಲ್ಲ.

ಸಾರಿ ಸರ್.., ನಿಮ್ಮ ಮನಸ್ಸಿಗೆ ಬೇಸರವಾಯಿತೊ ಏನೊ?

ಇಲ್ವಲ್ಲ, ಮಗಳು ಸಿಕ್ಕಿದ್ಳು ಅಂದ್ಮೇಲೆ ಇನ್ನೆಲ್ಲಿಯ ಬೇಸರ? ಕತೆಗಾರ ನುಡಿದ. ಈ ಸಂಬಂಧಗಳೇ ಹೀಗೆ. ಒಮ್ಮೆ ಕುದುರಿದುವೆಂದರೆ ಮತ್ತೆ ಬಿಡಿಸಿಕೊಳ್ಳುವುದು ಕಷ್ಟ.

ಮತ್ತೊಂದು ದಿನ ಕತೆಗಾರ ಕೇಳಿದ. ನಾನೇನೊ ನಿನ್ನ ಮಾನಸ ಪಿತೃ. ಅಂದರೆ ನೀನು ನಿನ್ನ ತಂದೆಯೆಂದು ಭಾವಿಸಿಕೊಂಡಿರುವವನು. ಆದರೂ ನಿನಗೊಬ್ಬ ದೇಹ ಸಂಬಂಧದಿಂದ ತಂದೆ ಇರಬೇಕಲ್ಲ. ಐ ಮೀನ್ ನಿನ್ನ ಅಮ್ಮನನ್ನು ವರಿಸಿದವನು, ಮದುವೆಯಾದವನು. ಕೂಡಿದವನು, ಕಾಡಿದವನು. ಅವಳ ಬದುಕಿನ ಸುಖ ಕಷ್ಟಗಳಲ್ಲಿ ಭಾಗಿಯಾದವನು. ನಿನ್ನ ಹುಟ್ಟಿಗೆ ಕಾರಣನಾದವನು? ಕವಿತೆ ತಲೆ ತಗ್ಗಿಸಿದಳು. ಅಲ್ಲಿ ಮೌನ ಮುಸುಕಿತು. ಮುಖ ಕಳೆಗುಂದಿತು. ಕಣ್ಣುಗಳಲ್ಲಿ ಕಂಬನಿ.

ಕ್ಷಮ್ಸು, ನನ್ನ ಪ್ರಶ್ನೆ ನಿನಗೆ ನೋವುಂಟು ಮಾಡ್ತು ಅಂತ ಕಾಣತ್ತೆ. ಇರಲಿ ಬಿಡು ನಾವಿಬ್ಬರು ಹೀಗೇ ಇರೊಣ, ಕಥೆಗಾರನೆಂದ.

ವಿಷಯ ಅದಲ್ಲ ಸರ್. ನೀವು ತುಂಬ ಓದಿದವರು. ಬಹುಶಃ ಪುರಾಣಗಳನ್ನೂ ಓದಿರುತ್ತೀರಿ. ನಿಮಗೆ ಸತ್ಯಕಾಮ ಜಾಬಾಲಿ ಕತೆ ಗೊತ್ತಾ ಸರ್. ಗೊತ್ತಾ ಏನು, ಗೊತ್ತಿರಲೇ ಬೇಕು ನುಡಿದಳು ಕವಿತೆ. ಮನೆ ಮನೆಗಳ ಚಾಕರಿ ಗೈಯ್ಯವ ಜಾಬಾಲೆಗೆ ತನ್ನ ಮಗ ಯಾರಲ್ಲಿ ಹುಟ್ಟಿದವನು ಎಂದೇ ಗೊತ್ತಿರಲಿಲ್ಲ.

ಸರ್ ನಾನು ಹಾಗೆ ಒಂದರ್ಥದಲ್ಲಿ ಸತ್ಯಕಾಮನ ತಂಗಿ. ನನಗೂ ನನ್ನ ತಾಯಿ ನನ್ನ ತಂದೆ ಯಾರೆಂದು ತಿಳಿಸಿಲ್ಲ. ತಂದೆ ಅಂತ ಅಮ್ಮ ಹಿಂದೆ ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದವನೊಬ್ಬನಿದ್ದನಂತೆ. ಮದುವೆ ನಿಶ್ಚಯವಾಗಿ ದಾಂಪತ್ಯದ ಕನಸು ಕಾಣುತ್ತಿದ್ದವಳ ಕನಸು ಭಗ್ನಗೊಂಡಿತು. ಆತ ಅಪಘಾತವೊಂದರಲ್ಲಿ ತನ್ನೆರಡು ಕಾಲುಗಳನ್ನು ಕಳೆದುಕೊಂಡನಂತೆ.

ಅಮ್ಮ ಅವನಿಂದಲೇ ತಾಳಿ ಕಟ್ಟಿಸಿಕೊಂಡಳಂತೆ. ಹೆತ್ತವರು, ಅವನ ಮನೆಯವರು ಅಮ್ಮನ ಈ ನಿರ್ಧಾರದಿಂದ ಅವಳ ಕೈ ಬಿಟ್ಟರಂತೆ. ಅಮ್ಮ ಹೊರಗೆ ದುಡಿದು ತಂದು ಅವನನ್ನು ಸಾಕುತ್ತಿದ್ದಳಂತೆ. ಆದರೂ ಅಮ್ಮ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲವಂತೆ. ಅಪ್ಪನ ಫೊಟೊವೊಂದನ್ನು ತೋರಿಸಿ ಅಮ್ಮ ಹೇಳುತ್ತಿದ್ದುಂಟು. ನನ್ನ ಗಂಡ ಅಷ್ಟೆ. ಆದರೆ ನಿನ್ನಪ್ಪನಲ್ಲ! ಹಾಗಂತ ನಾನು ಜಾಬಾಲೆ ಅಂತಾನೂ ತಿಳ್ಕೊಬೇಡ. ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಅಮ್ಮ.

ಅಂದು ಕವಿತಾಳಿಂದ ಯಾವೊಂದು ಪುಸ್ತಕವನ್ನು ಮಾರಲಾಗಲಿಲ್ಲ. ಅಂದು ಕತೆಗಾರ ಕವಿತೆ ಮಾರಲೆಂದು ತಂದ ಎಲ್ಲ ಪುಸ್ತಕವನ್ನು ಖರೀದಿಸಿದ.

ಸರ್, ನೀವು ಇಂದು ಕೊಂಡ ಪುಸ್ತಕಗಳು ನನ್ನ ಹೊಟ್ಟೆಯ ಇಂದಿನ ಹಸಿವನ್ನು ನೀಗಿ ಸಬಹುದು. ಆದರೆ ನಾನು ಯಾರ ಮಗಳೆಂಬ ನನ್ನ ಪ್ರಶ್ನೆಯ ಹಸಿವು ಇನ್ನೂ ಹಾಗೆಯೇ ಉಳಿದಿದೆ. ಕತೆಗಾರ ಕವಿತೆಯ ಬೆನ್ನು ತಟ್ಟಿದ. ಮಗೂ ಯಾವುದಕ್ಕೂ ಕಾಲ ಕೂಡಿ ಬರಬೇಕು. ನಿನಗೆ ನಿನ್ನ ಹುಟ್ಟಿಗೆ ಕಾರಣನಾದ ಅಪ್ಪ ಸಿಗಬಹುದು, ಸಿಕ್ಕಿಯೇ ಸಿಗುತ್ತಾನೆ.

ಹಾಗಂತಿರಾ ಸರ್..ಕವಿತೆಯ ಕಣ್ಣುಗಳರಳಿದವು.

ಫೋಟೋ ಕೃಪೆ : google

ಅಂದು ರಾತ್ರಿ, ಹಾಸಿಗೆಯಲ್ಲಿದ್ದ ಕತೆಗಾರನನ್ನು ಅವನ ಹೆಂಡತಿ ತಬ್ಬಿಕೊಂಡಳು. ನನಗಿವತ್ತು ನೀವು ಬೇಕು. ದಾಂಪತ್ಯದಲ್ಲಿ ಹೀಗೊಂದು ಪಿಸುಗುಟ್ಟುವಿಕೆಯೆಂದರೆ ಅದು ಲೈಂಗಿಕತೆ ಎಂದರ್ಥ. ಸಾರಿ.. ಡೀಯರ್, ಇವತ್ತು ಯಾಕೊ ಮನಸ್ಸು ಸರಿ ಇಲ್ಲ. ನನಗೆ ತೊಂದರೆ ಕೊಡ್ಬೇಡ. ಗುಡ್ನೈಟ್..ಸ್ವೀಟ್ ಡ್ರೀಮ್ಸ್. ಹೆಂಡತಿ ದೂರ ಸರಿದಳು. ಅನ್ಯೋನ್ಯ ದಾಂಪತ್ಯದಲ್ಲಿ ಮಾತ್ರ ಇದು ಸಾಧ್ಯ.

ಕತೆಗಾರನಿಗೆ ನಿದ್ದೆ ಬರಲೇ ಇಲ್ಲ. ಇಲ್ಲ, ಈ ಕವಿತೆಯನ್ನು ನಾನೆಲ್ಲೊ ಹಿಂದೆ, ಬಹಳ ಹಿಂದೆ ಅಂದರೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನೋಡಿದ್ದೇನೆ. ತರ್ಕವೇ ಇಲ್ಲದ ಹುಚ್ಚು ಯೋಚನೆ ಅನ್ನೊದು ಇದನ್ನೆ. ಅದು ಹೇಗೆ ಸಾಧ್ಯ? ಕತೆಗಾರ ಎದ್ದು ತಾನು ಬರೆಯುವ ಕೋಣೆಗೆ ಹೋಗಿ ಕುಳಿತ. ಒಂದು ಕಪಾಟಿನಲ್ಲಿ ತನಗರಿವು ಬಂದಾಗಿನಿಂದ ತಾನು ಬರೆದಿಟ್ಟ ಡೈರಿಗಳು. ಆ ಡೈರಿಗಳಲೆಲ್ಲ ಇದ್ದದ್ದು ಅವನ ಬದುಕಿನ ತೆರೆದ ಪುಟಗಳು. ಆತ ಆ ಪುಟಗಳಲ್ಲಿ ಯಾವುದನ್ನು ಮರೆ ಮಾಚುತ್ತಿರಲಿಲ್ಲ. ತನ್ನ ಹೆಂಡತಿಯನ್ನು ತಾನು ಮೊದಲ ಬಾರಿ ನೋಡಿದ್ದು. ಅವಳನ್ನು ಪ್ರೀತಿಸಿದ್ದು ಹೀಗೆಲ್ಲ ಅವನ ಬದುಕಿನ ಪ್ರತಿಯೊಂದು ಸಂಗತಿಗಳು ಅಲ್ಲಿ ದಾಖಲಾಗಿರುತ್ತಿದ್ದವು. ಆತ ಇಪ್ಪತ್ತು ವರ್ಷಗಳ ಹಿಂದಿನ ಡೈರಿಯೊಂದನ್ನು ತೆರೆದ. ಅದು ಆ ವರ್ಷದ ಡಿಸೆಂಬರ್ ತಿಂಗಳ ಡೈರಿ.

ಆಗಿನ್ನೂ ಹರೆಯ. ಮದುವೆಯಾದ ಹೊಸತು. ಆಗಲೂ ರೈಲಲ್ಲಿ ಯಾವುದೊ ಸೆಮಿನಾರಿಗೆ, ಸೆಮಿನಾರು ನಡೆಯುವ ಸುತ್ತಲ ಪ್ರವಾಸಿ ತಾಣಗಳನ್ನು ನೋಡಲು ಕಥೆಗಾರ ಒಬ್ಬನೇ ಹೊರಟಿದ್ದ.

ಕಿಟಿಯ ಬದಿಯಲ್ಲಿ ಕುಳಿತು ರೈಲಿನಲ್ಲಿ ಪುಸ್ತಕವೊಂದನ್ನು ಓದುತ್ತಿದ್ದ. ಪುಸ್ತಕಕ್ಕೆ ಗಂಭಿರವಾದ ಹೊದಿಕೆ. ಒಳಗೆ ವಾತ್ಸಾಯನನ ಕಾಮಸೂತ್ರ. ಯಾರಾದರೂ ಮಾತಿಗೆಳೆದರೆ ಪುಸ್ತಕ ಅವನ ಚೀಲವನ್ನು ಸೇರುತ್ತಿತ್ತು. ಮಾತು ಗಂಡು, ಹೆಣ್ಣು, ದಾಂಪತ್ಯದ ಪರಿಭಾಷೆ, ದಾಂಪತ್ಯ ನಿಷ್ಠೆ ಹೀಗೆಲ್ಲ.

ಸರ್ ಒಳ್ಳೆ ಪುಸ್ತಕಗಳಿವೆ ತಕೊತಿರಾ..? ಇನ್ನೂ ಮೂವತ್ತು ದಾಟಿರದ ಚೆಲುವೆ. ಒಂದಷ್ಟು ಹೆಚ್ಚೇ ಅನಿಸುವಷ್ಟು ಸೌಂದರ್ಯ ಪ್ರಜ್ಞೆ. ಕಣ್ಣಲ್ಲಿ ಮಾದಕತೆ. ತುಟಿಗೆ ಹಚ್ಚಿದ ತಿಳಿಗೆಂಪು ಬಣ್ಣ. ಮೈಗೆ ಪೂಸಿದ ಸೆಂಟು. ಆಕೆ ಅವನ ಬಳಿ ಬಂದು ತನ್ನಲ್ಲಿರುವ ಪುಸ್ತಕಗಳ ಗಂಟು ಬಿಚ್ಚಿದಳು. ಕಥೆಗಾರ ಅಂದು ಅವನೋದುತ್ತಿದ್ದ ಪುಸ್ತಕವನ್ನು ಮರೆತು ಚೀಲದೊಳಗಿಡದೆ ಪಕ್ಕದಲ್ಲಿಟ್ಟು ಅವಳು ತಂದ ಪುಸ್ತಕಗಳನ್ನು ನೋಡುವುದರಲ್ಲಿ ಮಗ್ನನಾದ. ಆಕೆಯೂ ಸಮಯ ಕಳಿಯಬೇಕಲ್ಲ. ಆಕೆಯ ಕಣ್ಣು ಇವನ ಬಳಿಯಿದ್ದ ಪುಸ್ತಕದೆಡೆ ಹೋಯ್ತು. ಪುಟ ತೆರೆದವಳಿಗೆ ಅರ್ಥವಾಯ್ತು. ಹಾಗೆಯೇ ಅದನ್ನು ಮುಚ್ಚಿದಳು.

ಸ್ಸಾರಿ..ಯಾವ್ದು ಬೇಡ ಮೇಡಮ್. ಇದೆಲ್ಲ ನಾನು ಓದಿದ ಪುಸ್ತಗಳೆ. ಹಲವು ಬಾರಿ ಹೀಗೆ, ಹಾಯ್, ಹಲೊ, ಹೇಗಿದ್ದೀರಿ? ಹೊಸ ಪುಸ್ತಕಗಳು ಬಂದಿವೆ. ನೋಡ್ತೀರಾ ಹೀಗೆ ಪರಿಚಯ ಬೆಳೆಯಿತು. ಹಾಗೆ ನೋಡಿದರೆ ಅವನು ಅವಳಲ್ಲಿ ಪುಸ್ತಕ ಖರೀದಿಸಿದ್ದೇ ಕಮ್ಮಿ.

ಹೀಗೊಮ್ಮೆ ಪುಸ್ತಕಗಳು ಬೇಡೆಂದಾಗ ಪರವಾಗಿಲ್ಲ ಸರ್, ನಿಮ್ಮಿಷ್ಟ. ಸರ್ ಎಲ್ಲಿಗೆ ಹೊರಟಿದ್ದೀರಿ..? ಆಕೆ ಕತೆಗಾರನನ್ನು ಮಾತಿಗೆಳೆದಳು. ಆತ ಎಲ್ಲವನ್ನು ತಿಳಿಸಿದ. ಸೆಮಿನಾರು, ಸುತ್ತಲ ಪ್ರೇಕ್ಷಣೀಯ ಸ್ಥಳಗಳು. ಅಂದ ಹಾಗೆ ಅಲ್ಲಿ ನನಗೆ ಯಾರಾದರೂ ಗೈಡ್ ಸಿಗುತ್ತಾರೇನು?

ಹೆಣ್ಣೊ.. ಗಂಡೊ..ಆಕೆ ಕೇಳಿದಳು.

ಕಥೆಗಾರ ಆಕೆಯೆಡೆ ವಿಸ್ಮಯದಿಂದ ನೋಡಿದ.

ತಪ್ಪು ತಿಳ್ಕೊಬೇಡಿ.ಇಲ್ಲಿಯ ಸುತ್ತ ಮುತ್ತಲ ಸ್ಥಳಗಳೆಲ್ಲ ನನಗೆ ಚಿರಪರಿಚಿತ. ನಿಮಗೆ ಗೈಡ್ ಆಗುವ ಕೆಲಸ ನನ್ನಿಂದಲೂ ಸಾಧ್ಯ. ಹಾಗೇನೆ ನೀವು ಮನೆಗೆ ಬಂದರೆ ನಾನು ಮಾರಾಟಕ್ಕೆ ತಂದ ಪುಸ್ತಕಗಳ ಹತ್ತು ಪಾಲು ಪುಸ್ತಕಗಳು ನನ್ನ ಸಂಗ್ರಹದಲ್ಲಿವೆ. ನೀವು ತಪ್ಪು ತಿಳಿದು ಕೊಳ್ಳದಿದ್ದರೆ ನಮ್ಮ ಮನೆಯಲ್ಲೂ ಉಳಿದುಕೊಳ್ಳಬಹುದು.

ಇದೂ ಒಂದು ಅನುಭವ ಅಂದುಕೊಂಡ ಕತೆಗಾರ. ಸರಿ, ನಡಿ ನಿನ್ನ ಮನೆಗೆ ಹೋಗೋಣ. ಕತೆಗಾರ ಅವಳ ಮನೆಗೆ ನಡೆದ. ಅವಳ ಮನೆಯಲ್ಲಿ ಒಂದು ವಾರವಿದ್ದು ಅವಳ ಆತಿಥ್ಯ ಸ್ವೀಕರಿಸಿದ. ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ಆಕೆಯೊಂದಿಗೆ ಅಲೆದ. ಅವಳು ಹೇಳಿದಂತೆ ಆಕೆ ಒಬ್ಬ ಒಳ್ಳೆಯ ಗೈಡ್ ಕೂಡ. ವಾರವೊಂದು ಹೇಗೆ ಕಳೆಯಿತೆಂದೇ ಗೊತ್ತಾಗಲಿಲ್ಲ.

ಕೊನೆಯ ದಿನ ಕತೆಗಾರ ಆಕೆಯನ್ನು ಕೇಳಿದ. ನಾನು ಬಂದು ಇಷ್ಟು ದಿನವಾಯ್ತು. ಈ ಮನೆಯ ಯಜಮಾನ, ನಿನ್ನ ಗಂಡ ಎಲ್ಲಿ..?

ನೀವು ನೋಡಲೇ ಬೇಕೇನು..? ಬನ್ನಿ.. ಆಕೆ ಕತೆಗಾರನನ್ನು ಮನೆಯ ಒಂದು ರೂಮಿನೊಳಗೆ ಕರೆದುಕೊಂಡು ಹೋದಳು. ಹಾಸಿಗೆಯ ಮೇಲೆ ಕಾಲುಗಳೆರಡನ್ನು ಕಳೆದುಕೊಂಡ ಒಬ್ಬ ಯುವಕ.

ಮುಖದ ತುಂಬ ಗಡ್ಡ. ಆತ ಕತೆಗಾರನಿಗೆ ಕೈ ಮುಗಿದ. ಆತ ಮಾತನಾಡುತ್ತಿರಲಿಲ್ಲ. ಅವನ ದೃಷ್ಟಿ ಎಲ್ಲೋ ಶೂನ್ಯದಲ್ಲಿತ್ತು.

ಬನ್ನಿ ಹೋಗೋಣ ಕತೆಗಾರನೆಂದ..ಕತೆಗಾರ ತನ್ನ ಪರ್ಸಿನಿಂದ ನೂರರ ಒಂದಷ್ಟು ನೋಟುಗಳನ್ನು ತೆಗೆದ. ತಕೊಳ್ಳಿ ಇಟ್ಟುಕೊಳ್ಳಿ..

ಇಲ್ಲ ಸರ್, ಆಗಲೆ ಗೈಡಾಗಿ ನನ್ನ ಸೇವೆಗಿರುವ ಮೊತ್ತವನ್ನು ನೀವು ಕೊಟ್ಟಿದ್ದೀರಿ. ಇಲ್ಲಿಯ ಊಟ ತಿಂಡಿ ವಸತಿಗಾಗಿ ಬೇರೆನೇ ಕೊಟ್ಟಿದ್ದೀರಿ. ಉಪಕಾರವಾಯ್ತು ನಿಮ್ಮಿಂದ.

ಇಲ್ಲ.. ನೀವಿದನ್ನು ತೆಗೆದುಕೊಳ್ಳಬೇಕು.

ನನಗೆ ಭಿಕ್ಷೆ ತೆಗೆದುಕೊಂಡು ಗೊತ್ತಿಲ್ಲ. ಸೇವೆ ಮಾಡಿಯಷ್ಟೇ ಗೊತ್ತು. ನೀವೊಪ್ಪಿದರೆ. ನೀವು ನನ್ನ ಹಾಸಿಗೆಗೆ ಬರಬಹುದು.ಹೌದಲ್ಲ.., ಆಗಲೇ ನನ್ನ ಬಗ್ಗೆ ಇರುವ ಸದಭಿಪ್ರಾಯ ನಿಮ್ಮಿಂದ ದೂರವಾಯ್ತು ಅನ್ನೊದನ್ನು ನಿಮ್ಮ ಮುಖವೇ ಹೇಳುತ್ತಿದೆ. ಹಾಗಂತ ನನ್ನನ್ನು ಸೂಳೆ ಅಂತ ತಿಳಿಬೇಡಿ. ಕಾಲಿಲ್ಲದಿದ್ದರೂ ನನ್ನ ಗಂಡ ನನ್ನ ಮೈಯ್ಯ ಹಸಿವನ್ನು ನೀಗಿಸುವಷ್ಟು ಸಶಕ್ತ. ಕಾರಣ ಇಷ್ಟೆ, ಒಂದು ವಾರದಿಂದ ನಿಮ್ಮನ್ನು ಕಂಡಂದಿನಿಂದ ನಿಮ್ಮನ್ನು ಕೂಡುವ, ಕಾಡುವ ಮನಸ್ಸಾಗಿತ್ತು. ಇದು ಒಂದು ಅನುಭವಕ್ಕಾಗಿ ಮಾತ್ರ. ಇದು ಕೊನೆಯ ಅವಕಾಶ. ಅದು ನೀವೊಪ್ಪಿದರೆ ಮಾತ್ರ. ಡೈರಿ ಬೀರುವನ್ನು ಸೇರಿತು.

****

ಮತ್ತೆ ಮರುದಿನ ಆತ ಹೊರಟು ನಿಂತ. ಏನಿದು.. ಪೂರ್ವ ನಿಯೋಜಿತ ಕಾರ್ಯಕ್ರಮ ಏನು ಇರ್ಲಿಲ್ವಲ್ಲ? ಕತೆಗಾರನ ಹೆಂಡತಿ ಕೇಳಿದಳು.

ಇಲ್ಲ, ಇವತ್ತು ಹೀಗೆ ಹೊರಟಿದ್ದು. ಸತ್ಯದ ಅನ್ವೇಷಣೆಗೆ.

ಅಂದರೆ.., ಇಷ್ಟು ದಿನ ನೀವು ಸುಳ್ಳುಗಳಲ್ಲೇ ಬದುಕುತ್ತಿದ್ದವರು ಎಂದಾಯ್ತು ಹೆಂಡತಿಯಂದಳು.

ಕತೆಗಾರ ಒಂದಷ್ಟು ವಿಚಲಿತನಾದ. ಹಾಗೆ ಹೇಳಬಹುದೇನೋ ಅಂದ.

ನೀವು ಕತೆಗಾರರು ಒಂಥರಾ ವಿಚಿತ್ರ ಪ್ರಾಣಿಗಳಪ್ಪಾ. ಕೆಲವೊಂದು ಸಲ ನಿಮ್ಮ ಮಾತುಗಳೇ ಅರ್ಥವಾಗೊಲ್ಲ! ನಿಮ್ಮ ಸತ್ಯದ ಅನ್ವೇಷಣೆ ಆಗ್ಲಿ. ಬಂದ ಮೇಲೆ ನನಗೂ ಹೇಳಿಬಿಡಿಪ್ಪಾ. ಸಾಧ್ಯವಾದರೆ ಸತ್ಯವನ್ನು ಜತೆಯಲ್ಲೇ ಕರ್ಕೊಂಡು ಬನ್ನಿ. ಕತೆಗಾರನ ಹೆಂಡತಿ ಕೀಟಲೆ ಮಾಡಿದಳು. ಕತೆಗಾರ ರೈಲು ಹತ್ತಿದ. ಎಂದಿನಂತೆ ಕಿಟಿಕಿ ಪಕ್ಕ. ಅಂದು ಆತ ತನ್ನ ಮಗಳ ನಿರೀಕ್ಷೆಯಲ್ಲಿದ್ದ. ಆಕೆ ಬಂದೇ ಬಿಟ್ಟಳು. ಎಂದಿನಂತೆ ಎರಡೂ ಹೆಗಲುಗಳಲ್ಲಿ ಪುಸ್ತಕದ ಚೀಲಗಳು. ಆದರೆ ಅವಳ ಮುಖದಲ್ಲಿ ಎಂದಿನ ಲವಲವಿಕೆಯಿರಲಿಲ್ಲ.

ಯಾಕೆ ಏನಾಯ್ತು..ತುಂಬ ಮಂಕಾಗಿದ್ದೀಯಾ, ಕತೆಗಾರ ಕೇಳಿದ.

ಅಮ್ಮ ಹೋಗ್ಬಿಟ್ಳು. ಹದಿನೈದು ದಿನ ಆಯ್ತು. ಅಮ್ಮ ಸಾಯುವ ಕೊನೆ ಗಳಿಗೆಯಲ್ಲೂ ನಿಮ್ಮ ಬಗ್ಗೆ ಕೇಳ್ತಾ ಇದ್ಳು. ಒಮ್ಮೆ ನಮ್ಮ ಮನೆಗೆ ಕರ್ಕೊಂಡು ಬಾರೆ ಅವ್ರನ್ನು. ಆ ನಿನ್ನ ಕತೆಗಾರರನ್ನು ಅಂತ.

ನೀವು ಬರೊದನ್ನು ಮುಂದೂಡುತ್ತಲೇ ಹೋದ್ರಿ. ಹೌದು ನಿಮಗೂ ನಿಮ್ಮದೇ ಸಮಸ್ಯೆಗಳಿದ್ದಿರಬಹುದು.

ಬಾ.., ಇವತ್ತು ಹೋಗೋಣ. ಇವತ್ತು ನಾನು ಫ್ರಿಯಾಗಿದ್ದೀನಿ. ಪುಸ್ತಕ ಮಾರುವ ಹುಡುಗಿ ಮತ್ತು ಕತೆಗಾರ ರೈಲಿಳಿದು ಹೆಜ್ಜೆ ಹಾಕತೊಡಗಿದರು.. ಬಹಳ ದೂರ, ಊರಲ್ಲಿನ ಸಂದುಗೊಂದುಗಳಲ್ಲಿ ನಡೆಯಬೇಕಿತ್ತು. ನೀನು ಹೋಗುತ್ತಿರು. ನಾನು ಹಿಂದಿನಿಂದ ಬರುತ್ತೇನೆ ಕತೆಗಾರ ಕವಿತೆಗಂದ. ಆಕೆ ಮುನ್ನಡೆದಳು. ಅವನಿಂದ ಮರೆಯಾದಳು. ಕತೆಗಾರನ ನೆನಪುಗಳು ಅವನನ್ನು ಕೈ ಹಿಡಿದು ಕರೆದೊಯ್ಯತೊಡಗಿದವು. ಸಂಶಯವೇ ಇಲ್ಲ ಅದೇ ಊರು, ಅದೇ ರಸ್ತೆ, ಅದೇ ಓಣಿ, ಅದೇ ಹಳೆಯ ಮನೆ. ಒಂದು ಚೂರು ಬದಲಾಗಿಲ್ಲ. ನೆನಪುಗಳು ಕತೆಗಾರನನ್ನು ಆ ಮನೆಯ ಮುಂದೆ ತಂದು ನಿಲ್ಲಿಸಿದವು.

ಎಲ್ಲಿ ದಾರಿ ತಪ್ಪುತ್ತೀರೋ ಅಂದು ಕೊಂಡಿದ್ದೆ. ಅಂದಳು ಪುಸ್ತಕ ಮಾರುವ ಹುಡುಗಿ ಕವಿತೆ. ಮಗಳ ಮನೆಯ ದಾರಿ ತಪ್ಪುವುದಕ್ಕೇ ಸಾಧ್ಯವೇ ಇಲ್ಲ ಕತೆಗಾರನೆಂದ. ನಿಜವಾಗ್ಲೂ.., ಹುಡುಗಿ ಸಂತಸದಿಂದ ಕುಣಿದಾಡಿದಳು.

ಇದು ನಮ್ಮ ಮನೆ. ಇಲ್ಲಿ ನಮ್ಮಪ್ಪ ಇರ್ತಾ ಇದ್ರು. ಇದು ನಮ್ಮಮ್ಮನ ಕೋಣೆ. ಇವಳೇ ನನ್ನಮ್ಮ. ಪೊಟೊಗೆ ಹೂಮಾಲೆ ಹಾಕಿತ್ತು. ಊದುಬತ್ತಿಗಳನ್ನು ಹಚ್ಚಿದ್ದಳು ಹುಡುಗಿ. ಆತ ಆ ಸಣ್ಣಮನೆಯಲ್ಲಿ ಮತ್ತೆಮತ್ತೆ ಹೆಜ್ಜೆ ಹಾಕಿದ. ಅವಳ ಫೊಟೊದೆದುರು ಬಂದು ನಿಂತ.

ಕೊನೆಗೂ ಬಂದ್ರಲ್ಲ. ನನ್ನ ಜೀವ ತಿನ್ತಾ ಇದ್ಳು ನೋಡಿ. ನನ್ನಪ್ಪ ಯಾರೂ ಅಂತ ಹೇಳೆ ಅಂತ. ಪ್ಲೀಸ್, ನೀವು ಇವತ್ತಾದ್ರು ಅವ್ಳಿಗೆ ಹೇಳ್ಬೇಕು ಫೋಟೊದಲ್ಲಿಂದ ಅವಳು ಹೇಳಿದ ಹಾಗಾಯ್ತು.

ಸರ್, ಬನ್ನಿ ಟಿ ಕುಡಿರಿ. ಕವಿತೆ ಟಿ ಮಾಡಿದ್ದಳು. ಆತ ಟಿ ಕುಡಿದ. ಮೆಲ್ಲನೆ ಆ ಹುಡುಗಿಗಂದ ಕವಿತಾ, ಈ ಮನೆ..?

ಬಾಡಿಗೆದ್ದು ಸಾರ್. ಆಗ್ಲೇ ಮಾಲಿಕ ತಗಾದೆ ಮಾಡ್ತಿದ್ದಾನೆ. ಒಂದು ಆಪ್ಷನ್ ಬೇರೆ ಇಟ್ಟಿದ್ದಾನೆ. ಮನೆ ನಿಂದೇ ಆಗತ್ತೆ, ನನ್ನವಳಾಗು ಅಂತ. ಲೋಫರ್, ನನ್ನ ವಯಸ್ಸಿನ ಮಗಳಿದ್ದಾಳೆ ಸರ್ ಆತನಿಗೆ. ಬದುಕು ಕಷ್ಟ ಆಗ್ತಾ ಇದೆ ಸಾರ್.

ಕವಿತಾ..ಮಗಳೇ..

ಏನು ಸಾರ್..? ನಿನ್ನ ಸಾಮಾನೆಲ್ಲ ಪ್ಯಾಕ್ ಮಾಡು. ನನ್ನ ಜತೆ ಹೊರಡು.

ಸರ್ ಏನಿದೆಲ್ಲ? ಅವಳ ಕಣ್ಣಲ್ಲಿ ಸಂಶಯವಿತ್ತು.

ಕವಿತಾ, ಬಾ.. ಇಲ್ಲಿ.ಆಕೆ ಹೆದರುತ್ತಳೆ ಅವನ ಬಳಿ ಬಂದಳು. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳು. ಯಾರಾದ್ರು ಅಪ್ಪನ ಮೇಲೆ ಸಂಶಯ ಪಡ್ತಾರೇನು? ಇಲ್ಲ ಸರ್..ನೀನು ನನ್ನ ಮಗಳು. ಬಾ ಇಲ್ಲಿ. ಆತ ಅವಳ ಕೈಹಿಡಿದು ಅವಳನ್ನು ರೂಮಿಗೆ ಕರೆದೊಯ್ದ. ಫೊಟೊದಲ್ಲಿರುವ ಹೆಣ್ಣಿಗಂದ. ನೋಡು ಶೀಲಾ ನಾನಿವತ್ತು ನನ್ನ ನಿನ್ನ ಮಗಳನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದೇನೆ..

****

ಕತೆಗಾರನ ಮನೆಯ ಮುಂದೆ ಟೆಂಪೊ ನಿಂತ ಶಬ್ದ. ಕಥೆಗಾರನ ಹೆಂಡತಿ ಬಾಗಿಲು ತೆರೆದಳು.ಕತೆಗಾರ ತನ್ನ ಮಗಳನ್ನು ಕೈ ಹಿಡಿದು ತನ್ನ ಮನೆಗೆ ಕರೆದುಕೊಂಡು ಬರುತ್ತಿದ್ದಾನೆ. ಬಲಗಾಲಿಟ್ಟು ಒಳಗೆ ಬಾ.

ಏನ್ರೀ ಇದು, ಯಾರೀ ಹುಡುಗಿ? ಎಷ್ಟು ಮುದ್ದಾಗಿದ್ದಾಳೆ. ನಮಗೂ ಹೀಗೇನೆ ಒಬ್ಬಳು ಮಗಳು ಇದ್ದಿದ್ರೆ? ಹೆಂಡತಿಯ ಮಾತಿಗೆ ಕತೆಗಾರನೆಂದ. ಇವಳು ಕವಿತೆ ಅಂತ. ಇಂದಿನಿಂದ ಇವಳೇ ನಮ್ಮ ಮಗಳು.

ಮತ್ತೆ ಸತ್ಯಾನ್ವೇಷಣೆಗೆ ಹೊರಟಿದ್ದೇನೆ ಅಂದ್ರಿ? ಸಾಧ್ಯ ಆದ್ರೆ ಸತ್ಯವನ್ನು ಮನೆಗೆ ಕರೆದುಕೊಂಡೇ ಬರ್ತೀನಿ ಅಂದಿದ್ರೀ..?

ಹೌದು.. ಇದೇ ಸತ್ಯ. ಈಕೆ ನನ್ನ ಮಗಳೆಂಬುದೇ ಪರಮ ಸತ್ಯ ಕತೆಗಾರನೆಂದ.

ಅರ್ಥವಾಯ್ತು..ರೀ. ಬಾ ಮಗಳೆ.ಕತೆಗಾರನ ಹೆಂಡತಿ ಕವಿತೆಯನ್ನು ಅಲ್ಲಲ್ಲ ತನ್ನ ಮಗಳನ್ನು ಅಪ್ಪಿಕೊಂಡಳು. ಕೈ ಹಿಡಿದು ಮನೆಯೊಳಗೆ ಕರೆದುಕೊಂಡು ಹೋದಳು.


  •  ದಿವಾಕರ ಡೋಂಗ್ರೆ ಎಂ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW