ಗಿರೀಶ್ ಕಾರ್ನಾಡ್ ರ ಜನ್ಮದಿನದ ನೆನಪಿನ ಸಂದರ್ಭದಲ್ಲಿ ಅವರ ನಾಟಕಗಳ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
:
ಗಿರೀಶ ಕಾರ್ನಾಡರ ನಾಟಕಗಳಲ್ಲಿ ಒಡಲ ಮೀಮಾಂಸೆ:
” ಒಡಲು ಗೊಂಡವ ಹಸಿವ,ಒಡಲುಗೊಂಡವ ಹುಸಿವ, ಒಡಲುಗೊಂಡವನೆಂದು ನೀನೆನ್ನ ಜರಿದು ನುಡಿಯದಿರಾ, ನೀ ನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥಾ.” ಎಂದು ಶಿವನಿಗೇ ಸವಾಲು ಹಾಕುವ ಅದ್ಭುತ ವಚನ ಒಂದಿದೆ. ಇಂತಹ ಒಡಲನ್ನೇ ರೂಪಕವಾಗಿ ಮಾಡಿಕೊಂಡು, ಅದರ ವಿಭಿನ್ನ ನೆಲೆಗಳನ್ನು, ಹೊಸ ಅರ್ಥಗಳೊಡನೆ ವ್ಯಾಖ್ಯಾನಿಸಿದ ಶ್ರೇಯಸ್ಸು ಆಧುನಿಕ ಸಂದರ್ಭದಲ್ಲಿ ಗಿರೀಶ ಕಾರ್ನಾಡರಿಗೆ ಸಲ್ಲುತ್ತದೆ.

ಈ ಲೇಖನದ ಪ್ರಥಮ ಭಾಗದಲ್ಲಿ ಅವರ ನಾಟಕಗಳಲ್ಲಿ ಒಡಲು ಬಳಕೆಯಾಗುವ ಮೂರು ಬಗೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಮೊದಲನೆಯ ಹಂತದಲ್ಲಿ ದೈಹಿಕ ಹಸಿವು ಎನ್ನುವುದು ಉಪಭೋಗದ ನೆಲೆಯನ್ನು ಆಧರಿಸಿದೆ.ಈ ಹೊತ್ತಿನ ಅರ್ಥದಲ್ಲಿ ಅದನ್ನು ಗ್ರಾಹಕತ್ವ ಎಂದು ವ್ಯಾಖ್ಯಾನಿಸಬಹುದು.ಕಾರ್ನಾಡರು ತಮ್ಮ ‘ಯಯಾತಿ’ ನಾಟಕ ಬರೆದ ಸಂದರ್ಭದಲ್ಲಿ(1961) , ಇದು ಇಷ್ಟರ ಮಟ್ಟಿಗೆ ಬಳಕೆಗೆ ಬಂದಿರಲಿಲ್ಲ. ಯಯಾತಿಯ ಉಪಭೋಗದ ತೃಷೆ ಅನೈಸರ್ಗಿಕವಾದುದು.
ಅವನಿಗೆ ಎಷ್ಟು ಉಪಭೋಗಿಸಿದರೂ ತಣಿವು ಎನ್ನುವುದು ಇರಲಿಲ್ಲ.ಆದ್ದರಿಂದಲೇ ಅವನು ತನ್ನ ತೀರದ ಬಯಕೆಯನ್ನು ಈಡೇರಿಸಿಕೊಳ್ಳಲು ಯಾರೂ ತನ್ನ ವೃದ್ದಾಪ್ಯವನ್ನು ಸ್ವೀಕರಿಸಲು ಮುಂದೆ ಬರದಿದ್ದಾಗ,ತನ್ನ ಮಗ ಪುರುವಿನ ಯೌವನವನ್ನೇ ಬಲಿತೆಗೆದುಕೊಳ್ಳುತ್ತಾನೆ. ಇದರ ಪರಿಣಾಮವಾಗಿ ಪುರುವಿನ ಹೆಂಡತಿ ಚಿತ್ರಲೇಖೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ತಾನು ಮಾಡಿದ ಪಾಪದ ಘೋರ ಪರಿಣಾಮವನ್ನು ಯಯಾತಿ ಅರಿತರೂ ,ಪುರುವಿನ ಯೌವನವನ್ನು ಮರಳಿಕೊಟ್ಟರೂ, ಅದರಿಂದ ಆದ ದುರಂತವನ್ನು ಮಾತ್ರ ಅವನಿಂದ ತಪ್ಪಿಸುವುದು ಸಾಧ್ಯವಾಗುವುದಿಲ್ಲ.
ತಮ್ಮ ಅನೈಸರ್ಗಿಕ ಉಪಭೋಗವೆನ್ನುವುದು,ಇನ್ನೊಬ್ಬರ ನೈಸರ್ಗಿಕ ಉಪಭೋಗದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬ ಸತ್ಯ ದ ಅರಿವಾಗುವುದಾದರೂ ಆದ ಪರಿಣಾಮವನ್ನು ತಪ್ಪಿಸುವುದಂತೂ ಸಾಧ್ಯವಿಲ್ಲ. ಕೊಳ್ಳುಬಾಕ ಸಂಸ್ಕೃತಿಯ ದಾಸನಾಗಿರುವ ಮನುಷ್ಯ ಇದರಿಂದ ಕಲಿಯಬೇಕಾದ ಪಾಠ ಅಮೂಲ್ಯವಾದುದು. “ಇನ್ನೊಬ್ಬರ ಮಾನವ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ’ ಎನ್ನುವ ಸತ್ಯವನ್ನು ಲೇಖಕರು ಮನಗಾಣಿಸಿಕೊಡುತ್ತಾರೆ.

ಎರಡನೆಯ ಭಾಗದಲ್ಲಿ ದೇಹದ ಯಾವ ಭಾಗ ಶ್ರೇಷ್ಠ , ಯಾವ ಭಾಗ ಕನಿಷ್ಠ ಎನ್ನುವ ಜಿಜ್ಞಾಸೆಯನ್ನು ಹುಟ್ಟುಹಾಕುವ, ಅವರ ‘ ಹಯವದನ’ ನಾಟಕವನ್ನು ನೋಡಬಹುದು. ಆಧುನಿಕತೆ ಎನ್ನುವುದು’ ವಿಚಾರವಾದ’ ಮತ್ತು ಭೌಧ್ಧಿಕತೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವುದರ ಮೂಲಕ,ದೇಹದ ಇತರ ಭಾಗಗಳ ಬೆಳವಣಿಗೆಯನ್ನು ಕ್ಷುದ್ರವನ್ನಾಗಿ ಮಾಡಿತು.ಆದರೆ ನೈಸರ್ಗಿಕತೆಗೆ ದೇಹದ ಇನ್ನಿತರ ಭಾಗಗಳೇ ಹೊರತು ತಲೆಯಲ್ಲ.ಬುಧ್ಧಿಯ ಮೂಲಕ ಎಲ್ಲವನ್ನೂ ನಿಯಂತ್ರಿಸ ಹೊರಟ ಆಧುನಿಕ ಮನುಷ್ಯ ನಿಸರ್ಗದ ಪ್ರತೀಕವಾದ ಲೈಂಗಿಕತೆಯನ್ನು ಅಲಕ್ಷಿಸಿ, ಅದನ್ನು ತುಚ್ಚವೆಂದು ಭಾವಿಸುವುದರ ಹಿಂದಿನ ಅಮಾನವೀಯತೆಯನ್ನು ಈ ನಾಟಕ ಜಾನಪದ ಪರಿಕರಗಳ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ.ಇಲ್ಲಿ ಬರುವ ಕುದುರೆ ದೇಹದ ಶಕ್ತಿಯ ಪ್ರತೀಕವಾದರೆ, ಮನುಷ್ಯನ ಮುಖ ಬುಧ್ಧಿಯ ಪ್ರತೀಕವಾಗಿದೆ.ಪದ್ಮನಿಯು ಕಾಳಿ ಕೊಟ್ಟ ವರವನ್ನು ,ತನ್ನ ಇಚ್ಚೆಯನ್ನು ಪೂರೈಸಿಕೊಳ್ಳುವ ಸಾಧನವಾಗಿ, ಬಳಸಿಕೊಳ್ಳುತ್ತಾಳೆ.
ದೇಹದ ಭಾಗಗಳನ್ನು ಅದಲುಬದಲು ಮಾಡಿಕೊಳ್ಳುತ್ತಾಳೆ.ಅದು ಇಲ್ಲಿಯವರೆಗೂ ಜೀವದ ಗೆಳೆಯರಾಗಿದ್ದ,ಕಪಿಲ ಮತ್ತು ದೇವದತ್ತರನ್ನು ಶತ್ರುಗಳನ್ನಾಗಿ ಮಾರ್ಪಡಿಸುತ್ತದೆ. ಅವರಿಬ್ಬರೂ ಪರಸ್ಪರ ಹೋರಾಟದ ಕಣಕ್ಕೆ ಇಳಿಯುತ್ತಾರೆ. ಅದನ್ನು ನೋಡಲಾರದ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಬುಧ್ಧಿ ಮತ್ತು ದೇಹಗಳ ಹೋರಾಟದಲ್ಲಿ ಅಂತಿಮವಾಗಿ ಯಾವುದೂ ಪೂರ್ಣವಲ್ಲ ,ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವವಿಲ್ಲ,ಎನ್ನುವುದರ ಮೂಲಕ ಎರಡರ ನಡುವೆ ಇರಬೇಕಾದ ಸಮತೋಲನವನ್ನು ಎತ್ತಿಹಿಡಿಯುತ್ತದೆ.

ಮೂರನೆಯ ಭಾಗದಲ್ಲಿ ‘ಅಗ್ನಿ ಮತ್ತು ಮಳೆ’ ಯ ಭೂಲಕ ಎರಡು ಸಂಸ್ಕೃತಿಗಳ ಪ್ರತೀಕವನ್ನಾಗಿ ಮಾಡಿಕೊಂಡು,ವಿಶಾಲವಾದ ವ್ಯಾಪ್ತಿಯಲ್ಲಿ ಇದನ್ನು ಸಾಧಿಸುತ್ತಾರೆ.ಇಲ್ಲಿ ವಿಶಾಖ ಮತ್ತು ರೈಬ್ಯ ಆರ್ಯ ಸಂಸ್ಕೃತಿಯ ಪ್ರತೀಕವಾದರೆ, ನಿತ್ತಿಲೆ ಮತ್ತು ಅರವಸು ಶೂದ್ರ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಮೊದಲನೆಯದರಲ್ಲಿ ಬುಧ್ದಿಯ ಅಹಂಕಾರದ ಪ್ರಕಟಣೆ ಇದ್ದರೆ ಎರಡನೆಯದರಲ್ಲಿ ಮುಗ್ಧತೆ ಮತ್ತು ಪ್ರೀತಿಯ ಅನನ್ಯತೆಗಳು ಪ್ರಕಟವಾಗಿವೆ.ಅದು ತ್ಯಾಗದ ಮೂಲಕ ಗೆಲ್ಲುತ್ತದೆ.ಕೃತಕವಾದ ಆರ್ಯ ಸಂಸ್ಕೃತಿಗಿಂತ ನಿಸರ್ಗಕ್ಕೆ ಹತ್ತಿರವಾದ,ದೇಸೀ ಸಂಸ್ಕೃತಿಯು ಸಹಜವೆಂದು,ಇವೆರಡರ ಸಮ್ಮಿಳನದಿಂದ ಮಾತ್ರ ಸಂಸ್ಕೃತಿ ಪೂರ್ಣವಾಗಲು ಸಾಧ್ಯವೆಂಬ ಆರೋಗ್ಯಕರವಾದ ಮನೋಧರ್ಮವನ್ನು ಪ್ರಕಟಿಸುತ್ತಾರೆ.

ನಾಲ್ಕನೆಯ ಭಾಗದಲ್ಲಿ ಹೆಣ್ಢಿನ ದೇಹದ ಮೇಲೆ ಹತೋಟಿಯನ್ನು ಸಾಧಿಸಿ ನಿಯಂತ್ರಿಸಲು ಬಯಸಿದರೆ, ಹುಟ್ಟುವ ತೊಡಕುಗಳನ್ನು ‘ ನಾಗಮಂಡಲ’ ನಾಟಕ ಜಾನಪದ ಕಥೆಗಳ ಹಿನ್ನೆಲೆಯಲ್ಲಿ ವಿವೇಚಿಸುತ್ತದೆ.ಇಲ್ಲಿ ಬರುವ ಅಪ್ಪಣ್ಣ ಪುರುಷಪ್ರಧಾನ ಸಂಸ್ಕೃತಿಯ ಪ್ರತೀಕವಾದರೆ ರಾಣಿ ಅಸಹಾಯಕಳಾದ ಬಲಿಪಶುವಾಗಿದ್ದಾಳೆ.ನಾಗನ ಮೂಲಕ ಅವಳ ನೈಸರ್ಗಿಕ ಬಯಕೆ ಈಡೇರುತ್ತದೆ.ಇದನ್ನು ಅಪ್ಪಣ್ಣನಿಗೆ ತಪ್ಪಿಸಲು ಆಗುವುದಿಲ್ಲ.ನೈಸರ್ಗಿಕತೆಯ ಮೇಲೆ ಹೇರುವ ಯಾವ ಕೃತಕವಾದ ನಿರ್ಬಂಧಗಳು ‘ ಅಂತಿಮವಾಗಿ ವಿಫಲವಾಗಿ ಬಿಡುತ್ತವೆ.ಅವಳು ಹಾವನ್ನು ಕೈಯಲ್ಲಿ ಹಿಡಿಯುವುದರ ಮೂಲಕ ತಾನು ಪತಿವ್ರತೆಯೆಂದು ಘೋಷಿಸುವುದು,ಅವನ ಪುರುಷತ್ವದ ಅಹಂಕಾರಕ್ಕೆ ಮರ್ಮಾಘಾತವನ್ನುಂಟುಮಾಡುತ್ತದೆ.

ಅವರ ‘ ಹಿಟ್ಟಿನ ಹುಂಜ’ ನಾಟಕ ಕೂಡ ಇದೇ ವರ್ಗಕ್ಕೆ ಸೇರುವಂತಹದು. ಇದು ಜೈನ ಕಥೆಯಾದ ಯಶೋಧರ ಚರಿತೆಯನ್ನು ಆಧರಿಸಿದೆ.ಇಲ್ಲಿ ಬರುವ ಅಮೃತಮತಿ,ತನ್ನನ್ನು ಒಲಿದ ಷಂಡ ರಾಜನನ್ನು ನಿರಾಕರಿಸಿ,ತಾನು ಒಲಿದ ಮಾವುತನನ್ನು ಕೂಡುವುದರ ಮೂಲಕ,ಸ್ತ್ರೀಯೊಬ್ಬಳಿಗೆ ಇರಬೇಕಾದ ನೈಸರ್ಗಿಕ ಲೈಂಗಿಕ ಹಕ್ಕನ್ನು ಸಮರ್ಥಿಸುತ್ತಾಳೆ.ಮತ್ತು ಅವಳ ಮೇಲೆ ಹೇರಲಾದ ಪ್ರಭುತ್ವದ ಪಾತಿವ್ರತ್ಯದ ಮೌಲ್ಯಗಳನ್ನು ಗಾಳಿಗೆ ತೂರುತ್ತಾಳೆ ಹೀಗೆ ಅವರ ನಾಟಕಗಳಲ್ಲಿ, ಒಡಲನ್ನು ಕೇಂದ್ರವಾಗಿಟ್ಟುಕೊಂಡು,ಇದನ್ನು ವಿಭಿನ್ನ ನೆಲೆಗಳಿಗೆ ವಿಸ್ತರಿಸುವಾಗ, ಸ್ಥಾಪಿತವಾದ ಅನಾರೋಗ್ಯಕರವಾದ ಮೌಲ್ಯಗಳನ್ನು ನಿರಾಕರಿಸುವುದರೊಂದಿಗೆ, ಆರೋಗ್ಯಕರ ನೈಸರ್ಗಿಕ ಮೌಲ್ಯಗಳ ಆಯ್ಕೆ ಕಡೆಗೆ ಮುಖಮಾಡುತ್ತಾರೆ.ಇದು ಗಿರೀಶಕಾರ್ನಾಡರ ಜೀವಪರವಾದ ನಿಲುವುಗಳಿಗೆ ಸಾಕ್ಷಿಯಾಗಿದೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
