‘ಹಾವಳಿ’ ಕಾದಂಬರಿ ಪುಸ್ತಕ ಪರಿಚಯ

ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’  ಕಾದಂಬರಿ ಹೈದರಾಬಾದ್ ವಿಮೋಚನಾ ಚಳವಳಿಯನ್ನು ಕೇಂದ್ರ ವಸ್ತುವನ್ನಾಗಿ ಹೊಂದಿದೆ. ಇದನ್ನು ಅಧ್ಯಯನ ಮಾಡಲು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ರಘುನಾಥ್ ಕೃಷ್ಣಮಾಚಾರ್  ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಹಾವಳಿ
ಲೇಖಕರು : ಮಲ್ಲಿಕಾರ್ಜುನ ಹಿರೇಮಠ
ಪ್ರಕಾರ : ಕಾದಂಬರಿ
ಪ್ರಕಾಶನ : ಮನೋಹರ ಗ್ರಂಥ ಮಾಲಾ

೧: ಜಾಗೃತಿ ನೆಲೆ
೨: ಸಂರಕ್ಷಣಾ ನೆಲೆ
೩: ಹೋರಾಟದ ನೆಲೆ:

೧: ಜಾಗೃತಿ ನೆಲೆ: ಜನರಲ್ಲಿ ಹೈದರಾಬಾದ್ ನಿಜಾಮ ಆಡಳಿತದ ವಿರುದ್ಧ ಜಾಗೃತಿ ಮೂಡಿಸಲು ವಿವಿಧ ವಿಧಾನಗಳನ್ನು ಬಳಸಲಾಗುತ್ತದೆ ಅವು: ಅ) ಶಾಲೆ ಕಾಲೇಜ್ ಗಳ ಬಹಿಷ್ಕಾರ ಬ) ಜಯರಾಮಾಚಾರ್ಯರ ಕೀರ್ತನೆ ಮತ್ತು ಪ್ರವಚನಗಳು ಕ) ಲಾವಣಿಗಳು ಡ) ಕರಪತ್ರಗಳ ಹಂಚಿಕೆ ‌‌‌‌ ೨: ಸಂರಕ್ಷಣಾ ನೆಲೆ: ಗ್ರಾಮದಲ್ಲಿ ಸಂರಕ್ಷಣಾದಳ ಸ್ಥಾಪಿಸಿ ಊರಿನ ಹಿತವನ್ನು ಕಾಯುವುದು. ಅದಕ್ಕೆ ಧಕ್ಕೆ ತರುವವರನ್ನು ಗುರುತಿಸಿ ಊರಿನ ಹೊರಗೆ ಹಾಕುವುದು. ಹುಸೇನಿಯನ್ನು ಪತ್ತೆ ಹಚ್ಚಿ ಅವನನ್ನು ಹೊರಗೆ ಹಾಕಿದ್ದು ಇದಕ್ಕೆ ನಿದರ್ಶನ. ಭೀಮಪ್ಪ , ಭರಮಪ್ಪ ಮುಂತಾದವರು ಹೊರಗಿನ ದಾಳಿ ಆದಾಗ ಊರನ್ನು ರಕ್ಷಿಸುವ ಕೆಲಸ ಮಾಡುತ್ತಾರೆ.

೩: ಹೋರಾಟದ ನೆಲೆ: ಹೋರಾಟ ಅನಿವಾರ್ಯ ವಾದಾಗ ಅದಕ್ಕೆ ಬೇಕಾದ ತರಬೇತಿಯನ್ನು ಒದಗಿಸಿ ರಜಾಕಾರರ ಹಾವಳಿಯ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಒಂದು ತಿಂಗಳ ಕಾಲದ ತರಬೇತಿಯನ್ನು ಮಾಜಿ ಯೋಧರ ಸಹಾಯದಿಂದ ಏರ್ಪಡಿಸಿದ್ದು. ಅದರಲ್ಲಿ ಊರಿನ ಯುವ ಮುಖಂಡರಾದ ಶಂಕರ ಮತ್ತು ಶೇಖರ ಯಶಸ್ವಿಯಾಗಿ ಅದನ್ನು ಪೂರೈಸುತ್ತಾರೆ. ರಜಾಕಾರರ ವಿರುದ್ಧ ‌ಹೋರಾಟದಲ್ಲಿ ಪಾಲ್ಗೊಂಡು, ಪೋಲಿಸ್ ಠಾಣೆಯಲ್ಲಿ ಶೇಖರಿಸಿದ್ದ ಅವರ ಅಪಾರ ಶಸ್ತ್ರಗಳನ್ನು ವಶಪಡಿಸಿಕೊಂಡರು.ಆ ಹೋರಾಟದಲ್ಲಿ ಶಂಕರನ ಕಾಲಿಗೆ ಗುಂಡು ಹೊಕ್ಕು ಶಸ್ತ್ರ ಚಿಕಿತ್ಸೆಯ‌ ನಂತರ ವಾಸಿಯಾದರೆ ಅವನ ಮಿತ್ರ ಶೇಖರ ಪ್ರಾಣಾಪಾಯಕ್ಕೆ ತುತ್ತಾಗುತ್ತಾನೆ. ಅವನಲ್ಲಿ ಮರೆಯಲಾಗದ ‌ಗಾಯವನ್ನು‌ಂಟುಮಾಡುತ್ತದೆ. ಅಲ್ಲದೆ ಠಾಣೆಯಲ್ಲಿ ಇವರಿಗೆ ನೆರವಾಗಿದ್ದ ಅಮೀನ್ ರನ್ನು ಕೊಲ್ಲಬೇಕಾಗಿ ಬಂದದ್ದು ಇವನಲ್ಲಿ ಪಶ್ಚಾತ್ತಾಪ ಕ್ಕೆ ಕಾರಣವಾಗುತ್ತದೆ.ಅದರ ಬಿಡುಗಡೆಗೆ ಇಬ್ರಾಹಿಮ್ ಅವರ ಮೊರೆ ಹೋಗಬೇಕಾಗುತ್ತದೆ.
‌ರೂಪಕಗಳ‌ನೆಲೆ.

೧:ಮಹಾಭಾರತದ ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ನಾಟಕದೊಂದಿಗೆ ಪ್ರಾರಂಭವಾದ ಕಾದಂಬರಿ ಶಂಕರನು ಒಲಿದ ಉಮಾ ಮೇಲೆ ರಜಾಕಾರರ ಮಾನಭಂಗದಿಂದ ಕೊನೆಗೊಳ್ಳುತ್ತದೆ

೨: ಜಯರಾಮಾಚಾರ್ಯರು ಹೇಳುವ ಪಂಚತಂತ್ರ ಬಲೆಗೆ ಬಿದ್ದ ಪಾರಿವಾಳಗಳ ಕತೆ.‌ ಇಲ್ಲಿ ಬೇಡ ಹೈದರಾಬಾದ್ ನವಾಬನಾದರೆ, ಅವನ‌ ಬಲೆಗೆ ಸಿಕ್ಕವರು ಆ ಪ್ರಾಂತ್ಯದ ಜನರು. ಆ ಬಲೆಯಿಂದ ತಪ್ಪಿಸಿಕೊಳ್ಳಲು ಇರುವ ಉಪಾಯವೆಂದರೆ ಪಾರಿವಾಳಗಳೆಲ್ಲ‌ ಒಟ್ಟಿಗೆ ಬಲೆಯನ್ನು ಎತ್ತಿಕೊಂಡು ಹಾರುವುದು. ಇದು ಸಾಧ್ಯವಾಗುವುದು ಜನರ ಐಕ್ಯಮತ್ಯದಿಂದ. ಮೇಲೆ ಸೂಚಿಸಿದ ವಿಧಾನಗಳಿಂದ ಒಟ್ಟಿಗೆ ಸೇರಿ ಅವರು ಹೋರಾಟ ನಡೆಸಿದಾಗ ಅವರ ನೆರವಿಗೆ ಭಾರತದ ಸರ್ಕಾರ ದಾವಿಸಿ ಬಂದು ಹೈದರಾಬಾದ್ ವಿಮೋಚನೆಗೆ ಕಾರಣವಾಗುತ್ತದೆ. ಅವರು ಕೊನೆಗೆ ಕೊಟ್ಟ ಆಕರಗ್ರಂಥಗಳು ಕಾದಂಬರಿಯನ್ನು ಅಧಿಕೃತವಾಗಿಸುವಲ್ಲಿ ಸಹಕರಿಸಿವೆ. ಐತಿಹಾಸಿಕ ಪಾತ್ರಗಳೊಂದಿಗೆ ಕಾಲ್ಪನಿಕ ಪಾತ್ರಗಳ ಸುಮಧುರ ಹೆಣಿಗೆಯಿಂದಾಗಿ ಇದಕ್ಕೆ ಒಂದು ಬಗೆಯ ಅಧಿಕೃತತೆ ಪ್ರಾಪ್ತವಾಗಿದೆ. ಕೋಮುಸೌಹಾರ್ದತೆಯನ್ನು ಸಾರುವ ಸಲುವಾಗಿ ಶಂಕರ ಸ್ನೇಹ ಸೌಹಾರ್ದ ವರ್ಧನ ಟ್ರಸ್ಟ್ ಸಂಸ್ಥೆಯ ಸ್ಥಾಪನೆ ಮಾಡಲು ಯೋಜಿಸುತ್ತಾನೆ. ನಾವು ಸಮಕಾಲೀನ ಸಂದರ್ಭದಲ್ಲಿ ಇಡಬೇಕಾದ ಹೆಜ್ಜೆಯ ಕಡೆಗೆ ಇದು ತೋರುಗಂಭವಾಗಿದೆ.ಆದರೂ ಏನನ್ನು ಮಾಡದೆ ರಾಜಕೀಯ ಮಾಡಬಲ್ಲ ಅವಕಾಶ ವಾದಿಗಳಾದ ದೇಸಾಯಿಯವರ ನಡೆ ಸದ್ಯದ ವಸ್ತು ಸ್ಥಿತಿಗೂ ಕನ್ನಡಿ ಹಿಡಿಯುವಲ್ಲಿ ಕಾದಂಬರಿ ಯಶಸ್ವಿ ಯಾಗಿದೆ.

ಕಷ್ಟ , ದುವಾ, ಜಿಹಾದ್ ಮುಂತಾದ ಪದಗಳ ಬಳಕೆ ಯ ಮೂಲಕ ಹೈದರಾಬಾದ್ ನ ದ್ವಿಸಂಸ್ಕೃತಿಯ ಅಸ್ತಿತ್ವವನ್ನು ಅನಾವರಣ ಮಾಡಿದ್ದಾರೆ. ಕಷ್ಟ ಎನ್ನುವುದು ಇಲ್ಲಿ ಕೂದಲು ಕತ್ತರಿಸುವ ಕೆಲಸಕ್ಕೆ ಹೆಸರು.ದುವಾ ಮುಸ್ಲಿಂ ಪ್ರಾರ್ಥನೆ ,ಜಿಹಾದ್ ಧರ್ಮ ಯುದ್ಧದ ಎರಡು ಬಗೆಗಳ ಇದು ಪ್ರತಿನಿಧಿಸುತ್ತದೆ. ಮೊದಲನೆಯ ನಮ್ಮ ಒಳಗಿನ ಹಾವಳಿಯ ವಿರುದ್ಧ ನಾವು ಮಾಡಬೇಕಾದ ಮುಸ್ಲಿಂ ಸಂತರ ಪ್ರತೀಕವೆಂದು ಕರೆಯಬಹುದಾದ ಇಬ್ರಾಹಿಂರ ವ್ಯಾಖ್ಯಾನವಾದರೆ ಎರಡನೆಯ ನಬಿ ಪ್ರತಿನಿಧಿಸುವ ರಜಾಕಾರರ ಮತೀಯ ವ್ಯಾಖ್ಯಾನ. ‌ ಇವನ್ನು ಒಟ್ಟಿಗೆ ತರುವ ಮೂಲಕ ಲೇಖಕರು, ಎರಡನ್ನೂ ಮುಖಾಮುಖಿ ಯಾಗಿಸಿ ಅಂತಿಮವಾಗಿ ಗೆಲ್ಲುವುದು ಇಬ್ರಾಹಿಂ ಅವರ ಸೌಹಾರ್ದತೆಯ ವ್ಯಾಖ್ಯಾನ ಎಂದು ಮನಗಾಣಿಸುತ್ತಾರೆ.ಅದರ ಪ್ರತಿನಿಧಿಯಾಗಿ ಶಂಕರ ಶೇಖರನ ತಂದೆಯ ಸಹಾಯದಿಂದ ಪ್ರಾರಂಭಿಸುವ ಸ್ನೇಹ ಸೌಹಾರ್ದ ವರ್ಧನ ಟ್ರಸ್ಟ್ ಒಂದು ನಿದರ್ಶನ.

ಸ್ತ್ರೀ ಲೋಕ: ಗುರವ್ವ, ಶಾರದಮ್ಮ, ಗಂಗಾ, ಉಮಾ, ಹನುಮವ್ವ ,ಈ ಕಾದಂಬರಿಯ ಅನನ್ಯ ಪಾತ್ರಗಳು. ಗುರವ್ವ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಗಂಡು ಗಚ್ಚೆ ಹಾಕಿ ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ಧೀಮಂತ ಮಹಿಳೆ. ಕಿರಿಯ ಮಗ ಶಂಕರ ನಿಜಾಮರ ವಿರುದ್ಧ ಹೋರಾಟ ನಡೆಸಿದ ಸಂದರ್ಭದಲ್ಲಿ ತಾನು ಅವನಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಮೊದಲ ಮಗ ಮದುವೆ ಆದರೂ ಬೇರೆ ಹೆಣ್ಣಿನ ಮೋಹಕ್ಕೆ ಬಿದ್ದಾಗ, ಬೇಸರಿಸಿದರು ತನ್ನ ಮೊದಲ ಸೊಸೆ ಹೆರಿಗೆಯಲ್ಲಿ ತೀರಿಕೊಂಡಾಗ, ಮಗನ ಮೋಹದ ಹೆಣ್ಣು ಹನುಮವ್ವನಿಗೆ ಆಶ್ರಯ ಕೊಡುತ್ತಾಳೆ.ಅಲ್ಲದೆ ಅವಳು ಇವರ ಮಗನ ಮಕ್ಕಳನ್ನು ಅವಳ ಮಕ್ಕಳು ಎಂದು ಭಾವಿಸಿ ನೋಡಿಕೊಳ್ಳುವಳು.

ಶಾರದಮ್ಮ : ವಿರೂಪಾಕ್ಷ ‌ಮೇಷ್ಟ್ರ ಮಡದಿ

ಇವರು ಬಾಲ್ಯದಿಂದಲೇ ತಮ್ಮ ತಂದೆಯವರಿಂದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದನ್ನು ‌ಕಲಿತಿದ್ದರು.

ನಾಟಕದಲ್ಲಿ ದುಶ್ಯಾಸನ ಪಾತ್ರ ವಹಿಸಿದ್ದ ನಬಿ ವಸ್ತ್ರಾಪಹರಣದಲ್ಲಿ ಸೀರೆ ಹೆಚ್ಚು ಸೆಳೆದು ಮೇಷ್ಟ್ರು ಕೈಯಲ್ಲಿ ‌ಏಟು ತಿಂದು ‌ಹೋದವನು ಮರಳಿ ಬಂದು ‌ಕಾಯಿಲೆ ಬಿದ್ದಾಗ ಅವನಿಗೆ ಚಿಕಿತ್ಸೆ ಮಾಡಿ ಗುಣಪಡಿಸುತ್ತಾರೆ. ಇದರಿಂದ ಅವನು ರಜಾಕಾರರ ಪ್ರಭಾವದಿಂದಾಗಿ ಊರಿನ ಮೇಲೆ ದಾಳಿ ಮಾಡಿದರು‌ ಶಾರದಮ್ಮನವರನ್ನು ತನ್ನ ತಾಯಿ ಎಂದು ‌ಕರೆದು ಅವರಿಂದ ಕಾಪಾಡುತ್ತಾನೆ. ಇದು ಅವರ ವ್ಯಕ್ತಿತ್ವದ ಮಹತ್ವ.

ಗಂಗಾ ಶೇಖರನ ಮಡದಿಯಾಗಿ ಅವನ‌ ನಿರ್ಲಕ್ಷ್ಯಕ್ಕೆ ತುತ್ತಾದರು ಕ್ರಮೇಣ ಅವನ ಒಲವನ್ನು ಗಳಿಸುವಲ್ಲಿ ಸಫಲಳಾಗುತ್ತಾಳೆ. ಇದಕ್ಕೆ ಕಾರಣ ಅವಳ ಸೇವಾ ಮನೋಭಾವ. ಅದರಲ್ಲೂ ಅವನು ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿ ಗಾಯಗೊಂಡ ಸಮಯದಲ್ಲಿ ಆಸ್ಪತ್ರೆಯಲ್ಲಿ ಅವನ ನಿರಂತರವಾಗಿ ಸೇವೆ ಸಲ್ಲಿಸಿದಳು. ಶೇಖರನಿಗೆ ತಾನು ಇದುವರೆಗೂ ಅವಳನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಅವನಿಗೆ ಪಶ್ಚಾತ್ತಾಪ ಪಟ್ಟು’ ನಾನು ನಿನ್ನ ಪ್ರೀತಿಗೆ ತಕ್ಕವನಾಗಲಿಲ್ಲ” ಎಂದು ಹಲವರಿಯುತ್ತಾನೆ. ಇಲ್ಲಿ ಕೂಡ ಗಂಗಾಳ ಘನತೆ ವ್ಯಕ್ತವಾಗುತ್ತದೆ.

ಉಮಾ: ಶಂಕರನ‌ ಒಲವನ್ನು ಗಳಿಸಿದ ಇವಳು‌ ಅವನ ಕನಸುಗಳ ರಾಣಿ. ಆಗೀಗ ಅವನ‌ ಸರಸಗಳಿಗೆ ಇಂಬುಕೊಟ್ಟರು.ಅವನು ಚಳವಳಿಯಲ್ಲಿ ತೊಡಗಿ ಇನ್ನೂ ಒಂದು ವರ್ಷ ಮದುವೆಯಾಗಲು ಸಾಧ್ಯವಿಲ್ಲ ಎಂದರೂ ಅವನಿಗೆ ಕಾಯಲು ಸಿದ್ದಳಾಗುತ್ತಾಳೆ. ಹೋರಾಟದಲ್ಲಿ ಕಾಲಿಗೆ ಗುಂಡು ಹೊಕ್ಕು ಆಸ್ಪತ್ರೆ ಸೇರಿದಾಗ ,ರಜಾಕಾರರ ದಾಳಿಯಲ್ಲಿ ಅವಳ ಮಾನಾಪರಣಕ್ಕೆ ಒಳಗಾದಾಗ ,ಆತ್ಮಹತ್ಯೆ‌ಮಾಡಿ ಕೊಳ್ಳಲು‌ ಹೋದರೂ ಅತ್ತೆಯ ಬೆಂಬಲದಿಂದ ಉಳಿದು ಕೊಳ್ಳುತ್ತಾಳೆ. ಆದರೆ ಅವಳ‌ ಅಳುಕು ಮಾಯವಾಗುವುದಿಲ್ಲ. ಅವಳು ತಡೆಯಲಾರದೆ ಅವನ‌ ಮುಂದೆ ಅದನ್ನು ‌ಬಿಚ್ಚಿಡುತ್ತಾಳೆ. ಇದು ಅವಳ‌ ಪ್ರಾಮಾಣಿಕತೆಗೆ ನಿದರ್ಶನ.

“ರಜಾಕಾರರು ಮುಸ್ಲಿಂರು ಎಲ್ಲಾ ಮುಸ್ಲಿಮರು ರಜಾಕಾರರಲ್ಲ “ಎನ್ನುವ ಭರತ ವಾಕ್ಯ ನಮ್ಮ ಪ್ರಸ್ತುತ ಮತೀಯ ರಾಜಕಾರಣಕ್ಕೆ ಲೇಖಕರು ಕೊಟ್ಟ ದಿಟ್ಟ ಉತ್ತರ ಮಹತ್ವದ ಸಂದೇಶ. ಇದನ್ನು ಲೇಖಕರ ನಿಸ್ಪೃಹವಾದ ಪಾತ್ರ ಚಿತ್ರಣ ‌ನಿದರ್ಶನ( ರೆಹಮಾನ್, ಇಬ್ರಾಹಿಂ, ಅಮೀನ್) ರೆಹಮಾನ್ ಹಿಂದೂಗಳ ಸಮಕ್ಕೆ ಚಳವಳಿಯಲ್ಲಿ ‌ಪಾತ್ರವಹಿಸಿದರೆ.ಇಬ್ರಾಹಿಮ್ ನಿಜವಾದ ಮುಸ್ಲಿಮ್ ರ ಪ್ರತಿನಿಧಿ. ಅವರ‌ ಪಾಲಿಗೆ ಹಿಂದೂ ಮುಸ್ಲಿಂರ ನಡುವೆ ಯಾವುದೇ ಬೇಧವಿಲ್ಲ.ಅಮೀನ್ ರಂತೂ ಶಂಕರ ತಪ್ಪಿಸಿಕೊಂಡು ಹೋಗಲು ಸಹಕರಿಸುತ್ತಾರೆ.
ವಿರೂಪಾಕ್ಷಪ್ಪ ಮೇಷ್ಟ್ರು ಎಲ್ಲಾ ಯುವಕರಲ್ಲಿ ವಿಮೋಚನಾ ಚಳವಳಿಯ ಬೀಜ ‌ಬಿತ್ತುವುದರಲ್ಲಿ ಸಫಲರಾಗುತ್ತಾರೆ. ಅದರ ಪರಿಣಾಮವಾಗಿ ಅವರು ಸ್ವತಃ ‌ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಬಿಡುಗಡೆ ಯಾಗುವುದು ಚಳವಳಿಯ ಕೊನೆಯ ಭಾಗದಲ್ಲಿ. ಅವರು ಊರಿನವರಿಗೆ ಕೃತಜ್ಞತೆ ಅರ್ಪಿಸಿ ತಮ್ಮ ಪತ್ನಿ ಶಾರದಮ್ಮನವರ ಜತೆಗೆ ಊರಿಗೆ ಹೊರಡುವ ಸಂನಿವೇಶ ಆರ್ದ್ರವಾಗಿದೆ.

ಇಂತಹ ಮಹತ್ವದ ಕಾದಂಬರಿಯನ್ನು ಓದಲು ಕಳಿಸಿ ಓದಲು ಅವಕಾಶ ಮಾಡ ಲೇಖಕರಿಗೆ ವಂದನೆ ಅಭಿನಂದನೆ. ಟಿ.ಪಿ.ಅಶೋಕ ಅವರ ಮುನ್ನುಡಿ ಈ ಕಾದಂಬರಿಯ ಸಾಧನೆಗೆ ಕನ್ನಡಿ ಹಿಡಿಯುತ್ತದೆ. ಸ್ವಾತಂತ್ರ್ಯ ಚಳುವಳಿಯ ಕುರಿತ ಕನ್ನಡ ಕಾದಂಬರಿಗಳ ಪರಂಪರೆಯನ್ನು ವಿಸ್ತರಿಸಿದ ಶ್ರೇಯಸ್ಸು ಮಲ್ಲಿಕಾರ್ಜುನ ಹಿರೇಮಠ ಅವರ ‘ ಹಾವಳಿ’ ಕಾದಂಬರಿಗೆ ಸಲ್ಲುತ್ತದೆ. ಇದನ್ನು ಪ್ರಕಟಿಸಿದ ಮನೋಹರ ಗ್ರಂಥಮಾಲೆಯನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading