ಅವರ ಸೊಸೆ ಅಮೇರಿಕಾದಿಂದ ಮೂರು ತಿಂಗಳ ಮೊಮ್ಮಗಳನ್ನು ಎತ್ತಿಕೊಂಡು ಬಂದಾಗ ಹಲವಾರು ಶಾಸ್ತ್ರಗಳನ್ನು ಮಾಡುವ ಆತುರ. ತೊಟ್ಟಿಲು ಹಾಕುವ ಶಾಸ್ತ್ರದಿಂದ ಹಿಡಿದು, ನಾಮಕರಣ, ಅನ್ನಪ್ರಾಶನ ಇನ್ನು ಏನೇನು ಇದೆಯೋ ಅದೆಲ್ಲ ಮಾಡಲು ತಯಾರಿ ನಡೆಯಿತು. ಆಗ ತೊಟ್ಟಿಲಿಗೆ ರೇಷ್ಮೆ ಸೀರೆ ಕಟ್ಟಿದ್ದರು. ತೊಟ್ಟಲಿನಲ್ಲಿದ್ದ ಮೆತ್ತನೇಯ ಹಾಸಿಗೆಯ ಮೇಲೆ ನನ್ನನ್ನು ಹಾಕಿದರು. ನಾನು ಎಲ್ಲಾ ಫೋಟೋದಲ್ಲಿ ಮಿಂಚಿದ್ದೇ, ಮಿಂಚಿದ್ದು. ಎನ್.ವಿ.ರಘುರಾಂ ಅವರ ‘ರೇಷ್ಮೆ ಕಣದ ಕಥೆ-ವ್ಯಥೆ’ ವಿಭಿನ್ನ ಕತೆ ತಪ್ಪದೆ ಮುಂದೆ ಓದಿ..
ಮನೆಯೊಡತಿ ವ್ಯಾನಿಟಿ ಬ್ಯಾಗಿನಿಂದ ನನ್ನನ್ನು ತೆಗೆದು ಗಾಡ್ರೇಜ್ ಆಲ್ಮೇರಾದ ಕೆಳಗಡೆ ಖಾನೆಯಲ್ಲಿ ಇಟ್ಟಾಗ ಸುತ್ತಲೂ ನೋಡಿದೆ. ಅಲ್ಲಿ ನನ್ನ ಅನೇಕ ಅಕ್ಕ, ತಂಗಿಯರಿದ್ದರು. ಹಾಗೆ ನೋಡಿದರೆ ಇದೇನು ನನಗೆ ಹೊಸ ಜಾಗವಲ್ಲ. ಕಳೆದ ಆರು ತಿಂಗಳ ಹಿಂದೆ ಈ ಜಾಗದಲ್ಲೇ ಇದ್ದೆ. ನಂತರ ಬೆಂಗಳೂರು ಸುತ್ತಿಕೊಂಡು ಈಗ ಮತ್ತೆ ಇದೇ ಜಾಗಕ್ಕೆ ಬಂದಿದ್ದೇನೆ. ಬೇರೆಯವರ ಮನೆಗಿಂತ ಈ ಮನೆಯೇ ವಾಸಿ. ಗಾಡ್ರೇಜ್ ಅಲ್ಮೇರಾದಲ್ಲಿ ಸರಿಯಾಗಿ ಒಂದರ ಮೇಲೊಂದರಂತೆ ಜೋಡಿಸಿ ಇಡುತ್ತಾರೆ. ‘ಎನೇ ಹೇಗಿದ್ದೀಯಾ?’ ಎಂದು ನನ್ನ ಕೆಳಗೆ ಇದ್ದ ‘ಬಿಂಬ’ ಕೇಳಿದಳು. ‘ಓ, ನಾನು ಚೆನ್ನಾಗಿದ್ದೇನೆ. ನೀನು ಯಾವಾಗ ಇಲ್ಲಿಗೆ ಬಂದೆ?’ ಎಂದು ಕೇಳಿದೆ. ಅಷ್ಟರಲ್ಲಿ ಪಕ್ಕದ ಸಾಲಿನವರು ‘ತಮ್ಮ ಸವಾರಿ ಎಲ್ಲೆಲ್ಲಿ ಹೋಗಿತ್ತು? ಹೇಳು’ ಎನ್ನುತ್ತಾ ಒಟ್ಟಿಗೆ ಬೇಡಿಕೆ ಇಟ್ಟರು. ನಾನು ಚೆನ್ನಾಗಿ ಕಥೆ ಕಟ್ಟುತ್ತೇನೆಂದು ಹೋದಲ್ಲೆಲ್ಲ ಹೇಳುತ್ತಾರೆ. ಈಗ ಮತ್ತೆ ನನ್ನ ಪ್ರವಾಸ ಕಥನ ಪ್ರಾರಂಭ ಮಾಡಿದೆ.

ಹೌದು, ಆ ದಿನ ಗುರುವಾರ. ಸಂಕ್ರಾಂತಿ ಎಳ್ಳು ಕೊಡಲು ಯಜಮಾನಿಯ ಚಿಕ್ಕತ್ತೆ ಬಂದಿದ್ದರು. ಆಗ ‘ಏನೂ ತರಲು ಆಗಲಿಲ್ಲ, ತುರ್ತಾಗಿ ಆಗಿ ಹೊರಟುಬಿಟ್ರಿ’ ಎಂದು ಉಪಚರಿಸುತ್ತಾ ನನ್ನನ್ನು ಎಳ್ಳಿನ ಬಟ್ಟಲ ಜೊತೆ ಇಟ್ಟು ಕಳುಹಿಸಿದ್ದರು. ಈ ಸಾರಿ ಸಂಕ್ರಾಂತಿಗೆ ಹೊಸದೇನು ತರೋದು ಬೇಡ, ಇರುವುದರಲ್ಲೇ ಸರಿದೂಗಿಸೋಣ ಎಂದು ನಿರ್ಧಾರ ಮಾಡಿದ್ದು ಎಲ್ಲರಿಗೂ ಹೇಳುವ ಅವಶ್ಯಕತೆ ಆದ್ರು ಏನಿದೆ? ಆ ಚಿಕ್ಕತ್ತೆಯ ಮನೆ ದೂರವೇನೂ ಇರಲಿಲ್ಲ, ಅಲ್ಲೆ ಪಕ್ಕದ ರಾಜಾಜಿನಗರ. ಅವರ ಮನೆ ಊಟದ ಟೇಬಲ್ ಮೇಲೆ ಎರಡು ದಿನ ಇಟ್ಟುಕೊಂಡಿದ್ದರು. ಎರಡು ದಿನ ಆದರೂ ಅವರ ಮನೆಗೆ ಯಾರು ಬರಲಿಲ್ಲ! ಕೊನೆಗೆ ನನ್ನನ್ನು ಅವರ ಮನೆ ಅಲ್ಮೇರಾಗೆ ಸೇರಿಸಿದರು. ಅಲ್ಲೂ ನನ್ನ ಅಕ್ಕತಂಗಿಯರು ಬೇಕಾದಷ್ಟು ಜನ ಇದ್ದರು. ಆದರೆ ಅವರು ಪಾಲಿಯಸ್ಟರ್ ಬಟ್ಟೆ, ವಿನ್ಯಾಸಗಳಿರುವ ಬಟ್ಟೆ, ರೇಷ್ಮೆ ಕಣಗಳನ್ನು ಬೇರೆ, ಬೇರೆ ಮಾಡಿಟ್ಟಿದ್ದರು. ನಾನು ಮೈ ತುಂಬ ಸಣ್ಣ, ಸಣ್ಣ ಹೂವಿನ ಚಿತ್ತಾರ ಇರುವ ರೇಷ್ಮೆ ಕಣ. ಹಾಗಾಗಿ ಸ್ವಲ್ಪನಾದರೂ ಹೋದ ಕಡೆಯಲೆಲ್ಲಾ ಮರ್ಯಾದೆ ಸಿಗುತ್ತೆ. ಉಳಿದವರೆಲ್ಲಾ ಸ್ವಲ್ಪ ಹೊಟ್ಟೆ ಉರುದು ಕೊಂಡರೂ ತೋರಿಸಿಕೊಳ್ಳದೆ ‘ಅಮೇಲ್ ಏನಾಯ್ತು ಹೇಳಕ್ಕ’ ಎಂದರು.
ಆ ಯಜಮಾನಿ ಮಧ್ಯೆ, ಮಧ್ಯೆ ಅಲ್ಮೇರಾ ಬಾಗಿಲು ತೆಗೆಯೋರು. ನನ್ನನ್ನು ಕೈಗೆ ತೆಗೆದುಕೊಳ್ಳೋರು, ‘ಅಲ್ಲ ಅವ್ಳಿಗೆ ಯಾಕೆ ರೇಷ್ಮೆದು, ಹೋದ ಸಾರಿ ಅವರು ಮನೆಗೆ ಹೋದಾಗ ಅವರೇನು ಕೊಟ್ಟಿರಲಿಲ್ಲವಲ್ಲ’ ಎಂದು ಗೊಣಗಿಕೊಳ್ಳುತ್ತಾ, ನನ್ನನ್ನು ಮತ್ತೆ ಅಲ್ಲೆ ಇಟ್ಟು ‘ಸಾಕು ಬಿಡು ಇದೇನೆ’ ಅಂದುಕೊಳ್ಳುತ್ತಾ ಹಳೆಯ ಪಾಲಿಸ್ಟರ್ ‘ಟು ಬೈ ಟು’ ಪೀಸ್ ಎತ್ತಿಕೊಂಡು ಹೋಗುತ್ತಿದ್ದರು. ಅಂತೂ ಒಂದು ತಿಂಗಳು ಆ ಮನೆಯಲ್ಲಿ ಕಾಲ ಕಳೆದ ಮೇಲೆ ಅವರ ಚಿಕ್ಕಮ್ಮ ಜಯನಗರದಿಂದ ಬಂದಿದ್ದರು. ದೊಡ್ಡವರು, ಚಿಕ್ಕಮ್ಮ ಬೇರೆ, ರೇಷ್ಮೆದು ಕೊಡಲೇ ಬೇಕಲ್ಲ. ‘ಮೊದಲೇ ಗೊತ್ತಿದ್ದರೆ ಏನಾದ್ರೂ ತರಬಹುದಿತ್ತು’ ಎಂದು ಮಾಮೂಲಿ ರಾಗ ಹಾಡುತ್ತಾ ನನ್ನನ್ನು ಅವರಿಗೆ ಕೊಟ್ಟರೆ, ಅವರು ‘ಇದೆಲ್ಲಾ ಯಾಕೀಗ’ ಎನ್ನುತ್ತಾ ತೆಗೆದುಕೊಂಡರು. ಎಲ್ಲರ ಮನೆಯಲ್ಲಿ ಇದೇ ಮಾತು! ಅವರು ವ್ಯಾನಿಟಿ ಬ್ಯಾಗ್ ಒಳಗೆ ನನ್ನ ತುರುಕಿ ಇಟ್ಟುಕೊಂಡರು. ನನಗೆ ಅಲ್ಲಿ ವಿಪರೀತ ಸೆಖೆ ಆಗುತ್ತಿತ್ತು. ನೋಡ್ರೆ, ಆಗ ಅವರು ಮನೆಗೆ ಹೋಗಲು ಮೆಟ್ರೋ ಹತ್ತಿದರು. ‘ಹೌದು, ಕಣ್ರೋ ನಾನು ಮೆಟ್ರೋದಲ್ಲಿ ತಣ್ಣಗೆ ಪ್ರಯಾಣ ಮಾಡಿದ್ದೇನೆ’ ಎಂದು ಸ್ವಲ್ಪ ಜಂಬದ ಫೋಸ್ ಕೊಟ್ಟೆ. ‘ಅದೇನು ಬಾರಿ ಬಿಡು, ನಾನು ಬಿ.ಎಮ್.ಡಬ್ಲು. ಕಾರಿನಲ್ಲಿ ಹೋಗಿದ್ದೇನೆ’ ಎಂದು ಪಕ್ಕದಲ್ಲಿದ್ದ ನನ್ನ ಅಕ್ಕ ಹೇಳಿದಳು. ಬಾರಿ ಬೆಲೆಯ ಮೆಜಂಟಾ ಬಣ್ಣದ, ಮೈಯೆಲ್ಲಾ ಕಸೂತಿ ಮಾಡಿಕ್ಕೊಂಡಿದ್ದ ನನ್ನಕ್ಕ ದೊಡ್ಡ ಮನುಷ್ಯರ ಮನೆಯಿಂದ ಬಂದವಳೆಂದು ಹೊಸದಾಗಿ ಹೇಳ ಬೇಕಾಗಿಲ್ಲ. ಅವಳು ಹಾವ ಭಾವ ನೋಡಿದ್ರೆ ತಿಳಿಯುತ್ತೆ! ‘ನನ್ನ ಹಳೇ ಯಜಮಾನಿ ಸಾಫ್ಟವೇರ್ ಇಂಜನಿಯರ್. ಆಕೆ ತನ್ನ ಚಿಕ್ಕಮ್ಮನಿಗೆ ನನ್ನ ಕೊಟ್ಟು ಬೊಮ್ಮನಹಳ್ಳಿಯಿಂದ ಜಯನಗರದ ಅವರ ಮನೆಗೆ ಬಿ.ಎಮ್.ಡಬ್ಲು. ಕಾರಿನಲ್ಲಿ ಡ್ರಾಪ್ ಮಾಡಿ ಬರಲು ಒಮ್ಮೆ ಕಳುಹಿಸಿದ್ದರು’ ಎನ್ನುತ್ತಾ ಮುಖವನ್ನು ಆಗಲ ಮಾಡಿಕೊಂಡು ಹೇಳಿದಳು. ದೊಡ್ಡ ಕಾರಿನಲ್ಲಿ ಪ್ರಯಾಣ ಮಾಡುವುದು ಯಾರಿಗುಂಟು ಯಾರಿಗಿಲ್ಲ! ‘ಎನಾದ್ರೆ ಏನು? ಈ ರೀತಿ ಬಂಧಿಯಾಗಿ ಕೂತಿರುವುದು ತಪ್ಪಲ್ಲವಲ್ಲ’ ಎಂದು ಇತರರಿಗೆ ಅನಿಸಿದರೂ ಯಾರು ಬಾಯಿ ಬಿಟ್ಟು ಹೇಳಲಿಲ್ಲ.
ಆದರೆ ನೋಡ್ರೆ, ಈ ಸಾರಿ ಹೊರಗಡೆ ಬರಲು ಜಾಸ್ತಿ ದಿನ ಕಾಯಲಿಲ್ಲ. ಆ ಹೊಸ ಯಜಮಾನಿಗೆ ಸ್ನೇಹಿತರು ಜಾಸ್ತಿ. ಮನೆಯ ಹತ್ತಿರದ ಗಣೇಶನ ದೇವಸ್ಥಾನದಲ್ಲಿ ನಿತ್ಯ ಸಂಜೆ ಹೋಗಿ ಅವರ ಸ್ನೇಹಿತರ ಜೊತೆ ದೇವರನಾಮ ಹೇಳಿಬರುತ್ತಿದ್ದರು. ಅಲ್ಲಂತೂ ಅರಷಿನ, ಕುಂಕುಮ ಕೊಡಲು ಹಬ್ಬಗಳೇ ಬರಬೇಕೆಂದಿಲ್ಲ. ಶುಕ್ರವಾರ, ಮಂಗಳವಾರಗಳೇ ಸಾಕು. ಹಾಗೇ ದೇವಸ್ಥಾನದಲ್ಲಿ ಒಂದು ಶುಕ್ರವಾರ ಅದೇ ಬಡಾವಣೆಯ ಮೂರನೇಯ ಅಡ್ಡರಸ್ತೆಯಲ್ಲಿದ್ದ ಆಕೆಯ ಸ್ನೇಹಿತೆ ದೇವಿಕಾ ಕೈಗೆ ನಾನು ತಲುಪಿದೆ. ಅವರ ಮನೆಯಲ್ಲಿ ಇಂಟೀರಿಯರ್ ಡಿಜೈನರ್ ಮಾಡಿದ ಚಿತ್ತಾರದ ಅಲ್ಮೇರಾಗಳಿದ್ದವು. ಆದರೆ ನನ್ನನ್ನು ಅಲ್ಲಿಡಲಿಲ್ಲ, ಮಂಚದ ಕೆಳಗಿಂದ ಒಂದು ಹಳೇ ಸೂಟ್ ಕೇಸ್ ತೆಗೆದರು. ಅಲ್ಲಿ ಕಟ್ಟಿಟ್ಟಿದ್ದ ಹಳೆಯ ಟವಲ್ ಬಿಚ್ಚಿದರು. ಅಲ್ಲಿ ನನ್ನ ಅಕ್ಕ ತಂಗಿಯರ ಜೊತೆ ನನ್ನನ್ನು ಸೇರಿಸಿ, ಮತ್ತೆ ಟವಲ್ ಕಟ್ಟಿ, ಸೂಟ್ ಕೇಸ್ ಮಂಚದ ಕೆಳಗೆ ದೂಡಿದರು. ಮತ್ತೆ ಕತ್ತಲಮನೆ ವಾಸ ಪ್ರಾರಂಭವಾಯಿತು ಎಂದು ನಕ್ಕೆ.
ಆ ದಿನ ಯಜಮಾನಿ ಹಳೇ ಸೂಟ್ ಕೇಸ್ ನಿಧಾನವಾಗಿ ತೆಗೆದಿದ್ದು ನೋಡಿದರೆ ಬಹಳವೇ ಸಮಾಧಾನದಿಂದ ಇದ್ದರೆಂದು ಹೇಳಬಹುದು. ಟವಲ್ ಗಂಟು ಬಿಚ್ಚಿ, ಎಲ್ಲಾ ಬ್ಲೌಸ್ ಪೀಸ್ ನೋಡಲು ಪ್ರಾರಂಭ ಮಾಡಿದರು. ಎಳು ಬೇರೆ ಬೇರೆ ಬಣ್ಣದ ಚಿತ್ತಾರಗಳಿಲ್ಲದ ರೇಷ್ಮೆ ಕಣಗಳನ್ನು ತೆಗೆದುಕೊಂಡರು. ‘ಏ ಆಶಾ, ಬಾಯಿಲ್ಲಿ’ ಎಂದು ಮಗಳಿಗೆ ಕರೆದರು. ‘ ನೋಡು, ಈ ತರಹ ಜೋಡಿಸಿ ಮಗು ನವ್ಯ ಪುಟ್ಟಿಗೆ ಲಂಗ ಹೊಲಿಸು. ಚೆನ್ನಾಗಿ ಕಾಣುತ್ತೆ’ ಎಂದರು. ಒಂದೇ ಸಾರಿಗೆ ಎಳು ಕಣಗಳಿಗೆ ಮುಕ್ತಿ ದೊರೆಯಿತು. ಅದನ್ನು ಕೇಳಿ ನಮಗೂ ಯಾವಾಗಲಾದರೂ ಮುಕ್ತಿ ಸಿಗುತ್ತದೆಯೆಂಬ ಆಶಾಭಾವನೆ ಮೂಡಿತು. ಹೊರಟವರಿಗೆ ಬೈ, ಬೈ ಹೇಳಿದೆವು. ಒಂದು ನಿಮಿಷದ ನಂತರ ‘ಮುಂದೇನಾಯ್ತು ಹೇಳಕ್ಕ’ ಪಕ್ಕದ ಸಾಲಿನಲ್ಲಿದ್ದ ನನ್ನ ತಂಗಿ ಕೇಳಿದಳು.

ಅಲ್ಲೂ ಜಾಸ್ತಿ ದಿನ ಇರಲಿಲ್ಲ. ಅವರ ಸೊಸೆ ಅಮೇರಿಕಾದಿಂದ ಮೂರು ತಿಂಗಳ ಮೊಮ್ಮಗಳನ್ನು ಎತ್ತಿಕೊಂಡು ಬಂದಳು. ಈಗ ಇವರಿಗೆಲ್ಲಾ ಶಾಸ್ತ್ರ ಮಾಡುವ ಆತುರ. ತೊಟ್ಟಿಲು ಹಾಕುವ ಶಾಸ್ತ್ರದಿಂದ ಹಿಡಿದು, ನಾಮಕರಣ, ಅನ್ನಪ್ರಾಶನ ಇನ್ನು ಏನೇನು ಇದೆಯೋ ಅದೆಲ್ಲ ಮಾಡಲು ತಯಾರಿ ನಡೆಯಿತು. ಆಗ ತೊಟ್ಟಿಲಿಗೆ ರೇಷ್ಮೆ ಸೀರೆ ಕಟ್ಟಿದ್ದರು. ತೊಟ್ಟಲಿನಲ್ಲಿದ್ದ ಮೆತ್ತನೇಯ ಹಾಸಿಗೆಯ ಮೇಲೆ ನನ್ನನ್ನು ಹಾಕಿದರು. ನಾನು ಎಲ್ಲಾ ಫೋಟೋದಲ್ಲಿ ಮಿಂಚಿದ್ದೇ, ಮಿಂಚಿದ್ದು. ಈಗೆಲ್ಲಾ ಮಕ್ಕಳಿಗೆ ಹಗ್ಗೀಸ್ ಹಾಕಿರುತ್ತಾರೆ. ಹಾಗಾಗಿ ನಾನೇನು ಒದ್ದೆಯಾಗಲಿಲ್ಲ! ಎಷ್ಟು ಚೆಂದದ ದಿವಸವದು! ಬಹಳವೇ ಸಂತೋಷ ಪಟ್ಟೆ. ಆದರೆ ನಂತರ ರಾತ್ರಿಗೆ ಮತ್ತೆ ಕತ್ತಲೆ ಗೂಡು ಸೇರಿದೆ.
ಸಣ್ಣ ಮಗು ನೋಡಲು ಬರುವವರು ಇದ್ದೇ ಇರುತ್ತಾರೆ. ಹಾಗಾಗಿ ಅಲ್ಲಿಂದ ಎರಡೇ ದಿನದಲ್ಲಿ ಮಗು ನೋಡಲು ಬಂದಿದ್ದ ಸೊಸೆಯ ಸ್ನೇಹಿತೆಯ ಮನೆಗೆ ವರ್ಗಾವಣೆಯಾದೆ. ಆಕೆ ಈ ಕಾಲದ ಹುಡುಗಿ. ಆಕೆ ಸೀರೆ ಉಡುವುದು ಎಥಿನಿಕ್ ಡೇ, ವರ ಮಹಾಲಕ್ಷ್ಮೀ ವೃತ, ಗೌರಿ ಹಬ್ಬಗಳಲ್ಲಿ ಮಾತ್ರ. ಆದರೂ ಬೇಕಾದಷ್ಟು ಸೀರೆಗಳು ಅವಳ ಬಳಿಯಿದ್ದವು. ನನ್ನನ್ನು ಎಲ್ಲಾ ಸೀರೆಗಳ ಪಕ್ಕ ಇಟ್ಟು ಮ್ಯಾಚ್ ಆಗುತ್ತಾ ಎಂದು ಪರಿಶೀಲಿಸಲು ಪ್ರಾರಂಭ ಮಾಡಿದಳು. ಈ ಹೊಸಕಾಲದವರು ಅದೇ ಬಣ್ಣ ಇರಬೇಕೆಂದು ಬಯಸಲ್ಲ. ಕಾಂಟ್ರಾಸ್ಟ್ ಕಲರ್ ಕೂಡ ಇವರು ಟ್ರೈ ಮಾಡುತ್ತಾರೆ. ಹಾಗಾಗಿ ಬೇಗ ಮುಕ್ತಿ ಸಿಗುತ್ತೆ ಎಂದು ಖುಷಿ ಆಯಿತು. ‘ಜ್ಯೋತಿ ಬೋಟಿಕ್’ ಗೆ ನನ್ನನ್ನು ಸೀರೆ ಜೊತೆಯಲ್ಲಿ ತೆಗೆದುಕೊಂಡು ಹೋದಳು. ‘ನೋಡಿ, ರೌಂಡ್ ನೆಕ್, ಕೋಲ್ಡ್ ಶೋಲ್ಡರ್, ಅರ್ಧ ತೋಳು, ಲೋ ಬ್ಯಾಕ್…’ ಎಲ್ಲಾ ಮಾತನಾಡಿದ ಮೇಲೆ, ಹೊಲಿಗೆ ದರ ಸಾವಿರದ ನಾನೂರು ಎಂದು ಟೈಲರ್ ಅಲ್ಲಾ ವಿನ್ಯಾಸಕಾರ ಹೇಳಿದಾಗ ಆಕೆ ಯೋಚನೆ ಮಾಡುತ್ತಾ ನಿಂತಳು. ‘ನನ್ನ ಫ್ಯಾನ್ಸಿ ಸೀರೆಗೆ ಆನ್ ಲೈನ್ ನಲ್ಲಿ ರಿಯಾಯಿತಿ ದರವಿದ್ದಾಗ ಆರು ನೂರು ಕೊಟ್ಟು ತೆಗೆದು ಕೊಂಡಿದ್ದು. ಈಗ ಅದರ ದುಪ್ಪಟ್ಟಿಗಿಂತ ಹೆಚ್ಚು ಬ್ಲೌಸ್ ಹೊಲಿಯಲು ಕೊಡೋದಾ? ಮಿಶೋದಲ್ಲಿ ರೆಡಿಮೇಡ್ ಬ್ಲೌಸ್ ಮೂನ್ನೂರು ರೂಪಾಯಿಗೆ ಒಳ್ಳೆದೇ ಸಿಗುತ್ತೆ’ ಎಂದುಕೊಂಡು ‘ಇನ್ನೊಮ್ಮೆ ಬೇರೆ ಕಣ ತರುತ್ತೇನೆ’ ಎಂದು ಟೈಲರ್ ಗೆ ಸುಳ್ಳು ಹೇಳಿ ನನ್ನನ್ನು ಮತ್ತೆ ಬ್ಯಾಗಿಗೆ ತುರುಕಿಕೊಂಡಾಗ, ಸುಂದರ ಬ್ಲೌಸ್ ಆಗುವೆನೆಂದು ಉಬ್ಬಿದ್ದ ನಾನು ಟಪ್ ಎಂದು ಒಡೆದ ಬಲೂನಿನಂತೆ ಆಗಿದ್ದೆ.
ಅಲ್ಲಿಂದ ಒಂದು ವಾರದಲ್ಲೆ ಆಕೆಯ ಮದುವೆ ನಿಶ್ಚಯವಾಯಿತು. ಅಮೇರಿಕಾದ ಗಂಡು. ಆತನಿಗೆ ಇನ್ನು ಎರಡು ವಾರ ಮಾತ್ರ ರಜವಿದೆ. ತುರಾತುರಿಯಲ್ಲಿ ಮದುವೆಯ ತಯಾರಿ ನಡೆಯಲು ಪ್ರಾರಂಭವಾಯಿತು. ‘ಹುಡುಗಿ ಬಟ್ಟೆಗಳ ಜೊತೆ ಉಳಿದುಕೊಂಡರೆ ನಾನು ಅಮೆರೀಕಾಗೆ ಹೋಗಬಹುದಾ’ ಅಂದುಕೊಂಡಾಗ ಒಮ್ಮೆ ಮೈ ಜುಮ್ ಎಂದಿತು. ನಾನು ಅಮೇರಿಕಾದ ಕನಸು ಕಾಣುವುದರೊಳಗೆ ‘ಅಮ್ಮಾ, ಇದೆಲ್ಲಾ ಇಟ್ಟುಕೊಂಡು ನಾನೇನು ಮಾಡ್ಲಿ, ತೊಗೋ’ ಎನ್ನುತ್ತಾ ನನ್ನನ್ನು ಇತರ ನಾಲ್ಕೈದು ಕಣಗಳ ಜೊತೆ ಅವರ ಅಮ್ಮನಿಗೆ ಕೊಟ್ಟಳು. ಆಗ ನಾವೆಲ್ಲಾ ಮದುವೆ ಮನೆ ಸೇರಿದೆವು. ಹೊಸದಾಗಿ ತಂದಿದ್ದ ಒಂದಿಷ್ಟು ಕಣಗಳ ಜೊತೆ ನಮ್ಮನ್ನು ಸೇರಿಸಿದರು. ಅಲ್ಲಿ ನೋಡಿ ಸಾವಿತ್ರಮ್ಮ ಬಂದಿದ್ದರು. ಹುಡುಗನ ಅಪ್ಪ, ಸಾವಿತ್ರಮ್ಮನ ಯಜಮಾನರು ಸಹೋದ್ಯೋಗಿಗಳಂತೆ. ಮೊದಲೆಲ್ಲಾ ‘ಆಮೇಲೆ ಕುಂಕುಮ ಇಟ್ಟುಕೊಂಡು ಹೋಗಿ’ ಎಂದು ಹೇಳಿ, ಊಟವಾದ ಮೇಲೆ ಕುಂಕುಮ ಕೊಟ್ಟು ಕೆಲವರಿಗೆ ಬ್ಲೌಸ್ ಪೀಸ್, ಇನ್ನು ಕೆಲವರಿಗೆ ಸೀರೆ ಮನೆಯವರು ಯಾರಾದ್ರು ಕೊಡುತ್ತಿದ್ದರು. ಈಗ ಊಟಕ್ಕೆ ಕೂತಾಗ ಅಲ್ಲೇ ಎಲ್ಲರಿಗೂ ನೀಟಾಗಿ ಸೀರೆ ಉಟ್ಟುಕೊಂಡು ಬಂದ ಕಂಟ್ರಾಕ್ಟರ್ ಕಡೆಯವರು ಬ್ಲೌಸ್ ಪೀಸ್ ಎಡಗೈ ಮೇಲೆ ಇಡುತ್ತಾ ಹೋಗುತ್ತಾರೆ. ಆಗ ನಾನು ಸಾವಿತ್ರಮ್ಮನ ಎಡಕೈಗೆ ಸಿಕ್ಕಿ ಮಂಜುನಾಥನಗರಕ್ಕೆ ಬಂದೆ. ಕಥೆ ಹೇಳುವುದನ್ನು ನಿಲ್ಲಿಸಿ, ಒಮ್ಮೆ ಎಲ್ಲರೂ ಮುಖ ನೋಡಿದೆ. ಎಲ್ಲರೂ ಕುತೂಹಲದಿಂದ ನನ್ನ ಮುಖವನ್ನೇ ನೋಡುತ್ತಿದ್ದರು. ನಾನು ಕಥೆ ಮುಂದುವರೆಸಿದೆ.
ಆ ದಿನ ಸಾವಿತ್ರಮ್ಮನ ಮನೆಯ ಬೀರುವಿನ ಬಾಗಿಲು ಮತ್ತೆ ತೆರೆಯಿತು. ಪ್ರತಿ ಬಾರಿ ಅಲ್ಮೇರಾ ಬಾಗಿಲು ತೆಗೆದಾಗ ಎಲ್ಲರಿಗೂ ಕಾತರದ ಕ್ಷಣಗಳು ಎದುರಾಗುತ್ತದೆ. ‘ಬಂದಿರುವುದು ದೊಡ್ಡ ನಾದಿನಿ, ಅವರಿಗೇನು ಕೊಡೋದು? ಪ್ರತಿಸಾರಿ ಅವರು ಮನೆಗೆ ಹೋದಾಗ ಏನಾದ್ರು ಕೊಟ್ಟೆ ಕೊಡುತ್ತಾರೆ’ ಎನ್ನುತ್ತಾ ಯಜಮಾನಿ ಮೇಲಿನ ಸಾಲಿನಿಂದ ಒಂದು ಒಳ್ಳೆಯ ಸೀರೆ ತೆಗೆದುಕೊಂಡರು. ‘ಅದರಲ್ಲೇ ಬ್ಲೌಸ್ ಬಟ್ಟೆ ಇರುತ್ತೆ, ಆದ್ರೂ ಅವರು ಸಂಪ್ರದಾಯಸ್ಥರು, ಒಂದು ಸೀರೆ ಮಾತ್ರ ಕೊಡಬಾರದು’ ಎಂದುಕೊಳ್ಳುತ್ತಾ ಹೆಚ್ಚು ಕಡಿಮೆ ಅದೇ ಬಣ್ಣದ ಪಾಲಿಯಸ್ಟರ್ ಪೀಸ್ ಒಂದನ್ನು ಹುಡುಕಿ ತೆಗೆದು ಆ ಸೀರೆಯ ಜೊತೆಗೆ ಇಟ್ಟುಕೊಂಡರು. ಮತ್ತೇನು ಅನಿಸಿತೋ, ಪಾಲಿಯಸ್ಟರ್ ಪೀಸ್ ತೆಗೆದಿಟ್ಟು, ನನ್ನನ್ನು ಸೀರೆಯ ಜೊತೆಗೆ ಕಾಣುವಂತೆ ಇಟ್ಟು ಅವರಿಗೆ ಕೊಟ್ಟರು. ನಾನು ಅವರ ದೊಡ್ಡ ನಾದಿನಿ ಭಾಮಮಣಿಯ ಮಲ್ಲೇಶ್ವರದ ಮನೆ ಸೇರಿದೆ.
ಮಾರನೇ ದಿನವೆ ಅಲ್ಮೇರಾದಲ್ಲಿ ಕುಳಿತ ನಮಗೂ ಅವರ ಮನೆಯವರು ಬಿಕ್ಕಿ, ಬಿಕ್ಕಿ ಅಳುವ ಶಬ್ದ ಕೇಳುತ್ತಿತ್ತು. ಈಗ ನಮಗೂ ಯಾವ ಶಬ್ದ ಬಂದರೆ ಎನಾಗಿದೆ ಎಂದು ತಿಳಿಯುತ್ತದೆ. ಇನ್ನು ಹತ್ತು ದಿನ ಯಾರು ಅಲ್ಮೇರಾ ಕಡೆ ಬರಲ್ಲ ಎಂದು ಗೊತ್ತು. ನಾವು ಬೇಸರದಿಂದಲೇ ಮಲಗಿಕೊಂಡೆವು.
ಹದಿನಾಲ್ಕನೆಯ ದಿನ ಭಾಮಮಣಿ ಅವರ ಅತ್ತೆಯ ವೈಕುಂಠ ಸಮಾರಾಧನೆಗೆ ನಮ್ಮನ್ನು ಕರೆದುಕೊಂಡು ಹೋದರು. ಹೊಸದಾಗಿ ತಂದಿದ್ದ ಒಂದಿಷ್ಟು ಕಣಗಳ ಜೊತೆ ನಮ್ಮನ್ನು ಇಟ್ಟರು. ಮುತ್ತೈದೆ ಸಾವು. ಬಂದ ಎಲ್ಲ ಮುತ್ತೈದೆಯರಿಗೆ ಗೋಪುರ ಕಂಪನಿಯ ಅರಿಷಿಣ, ಕುಂಕುಮದ ಚೀಟಿಗಳ ಜೊತೆ ನಾನು ಈ ಯಜಮಾನಿಯ ಕೈಗೆ ಮತ್ತೆ ವಾಪಾಸು ಬಂದೆ. ಇವರು ಭಾಮಮಣಿ ಮಾವನ ಮಗಳಂತೆ ಎನ್ನುತ್ತಾ ನಿಟ್ಟುಸಿರು ಬಿಟ್ಟೆ.
ಇನ್ನೊಂದು ತಿಂಗಳು ಆಷಾಢ ಮಾಸ. ಹಾಗಾಗಿ ಜಾಸ್ತಿ ಓಡಾಟ ಇರಲ್ಲ. ಭೀಮನ ಅಮಾವಾಸ್ಯೆಯಿಂದ ಪ್ರಾರಂಭವಾದರೆ ದೀಪಾವಳಿ ಮುಗಿಯುವ ತನಕ ನಾವು ನಿರಂತರ ಓಡಾಡ ಬೇಕು. ಈಗ ವಿಶ್ರಾಂತಿ ತೆಗೆದುಕೊಳ್ಳಿ ಎಂದೆ. ಈ ಮಧ್ಯೆದಲ್ಲಿ ನಮಗೆ ಯಾರಾದ್ರು ಕಣದಿಂದ ಕುಪ್ಪಸಕ್ಕೆ ಬಡ್ತಿ ಕೊಡಬಹುದು ಎಂಬ ಆಶಾಭಾವನೆಯಿಂದ ನಿದ್ದೆಗೆ ಜಾರಿದೆ.
- ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು

ಸೂಪರ್👌