‘ಬಾಳ ಪಯಣ’ ಕೃತಿ ಪರಿಚಯ – ದಿವಾಕರ್  ಡೋಂಗ್ರೆ

ಸಮುದಾಯದ ಹಿರಿಯರು, ಲೇಖಕರು, ಕತೆಗಾರರು, ಕವಿಗಳು ಮೇಲಾಗಿ ಹೃದಯವಂತರೂ ಆಗಿದ್ದ ಪ್ರಾಧ್ಯಾಪಕ ಎನ್. ಜಿ. ಪಟವರ್ಧನ್ ನಮ್ಮನಗಲಿದ್ದಾರೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಪ್ರೊ. ಎನ್.ಜಿ. ಪಟವರ್ಧನ್ ಅವರ ‘ಬಾಳಪಯಣ’ ಕೃತಿಯ ಕುರಿತು ದಿವಾಕರ್  ಡೋಂಗ್ರೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪ್ರೊ. ಎನ್.ಜಿ. ಪಟವರ್ಧನ್ ಅವರ  ಆತ್ಮ ಕಥನಗಳಲ್ಲಿ ಎರಡು ಬಗೆಯವು ಇವೆ. ಮೊದಲನೆಯವು ಬೇರೆಯವರಿಂದ ಬರೆಸಲ್ಪಡುವಂತಹವು. ಎರಡನೆಯವು ತಾನೇ ತನ್ನ ಆತ್ಮ ಕಥನವನ್ನು ಬರೆಯುವಂತಹದು. ಮೊದಲನೆಯದರಲ್ಲಿ ಸಾಧಕ ಲೇಖಕನಾಗದೇ ಇದ್ದಾಗ ತನ್ನ ಬಾಳ ಪಯಣದ ನೆನಪುಗಳನ್ನು ಮೌಖಿಕವಾಗಿ ಹೇಳುತ್ತ ಬೇರೆಯವರಿಂದ ಬರೆಸುವ ಕ್ರಮವಿದೆ.

ಇಲ್ಲಿ ಮೌಖಿಕವಾಗಿ ಹೇಳಿದುದನ್ನು ಬರವಣಿಗೆಗಿಳಿಸುವಾಗ ಅದು ಬರೆಯುವವನ ಶೈಲಿ, ಬರೆಯುವವನು ಸಾಧಕನನ್ನು ಅರ್ಥೈಸಿಕೊಂಡ ಪರಿ ಮತ್ತು ಬರೆಸುವವನ ಮತ್ತು ಬರೆಯುವವನ ನಡುವೆ ಅದು ಹೀಗೆಯೇ ಇರಬೇಕು ಅನ್ನುವ ಒಪ್ಪಂದಗಳು ಕೆಲವೊಂದು ಸಲ ಆತ್ಮ ಕಥನಗಳನ್ನು ವೈಭವೀಕರಿಸುತ್ತ ಅದರ ಒಟ್ಟಂದವನ್ನು ಕುಲಗೆಡಿಸುವ ಸಾಧ್ಯತೆಗಳೇ ಹೆಚ್ಚು. ಉಳ್ಳವರ ಹಲವು ಆತ್ಮ ಕಥನಗಳನ್ನು ಓದಿದ ನನ್ನ ಅನುಭವವಿದು. ಹಾಗಂತ ಕೆಲವೊಂದು ಇವಕ್ಕೆ ಅಪವಾದವೆನಿಸುವಂತೆ, ಇದ್ದುದನ್ನು ಇದ್ದಂತೆ ನಿರೂಪಿಸಿದ ಆತ್ಮ ಕಥನಗಳು ಇಲ್ಲವೆಂದಿಲ್ಲ. ಇದ್ದರೂ ಅವುಗಳ ಸಂಖ್ಯೆ ಕಮ್ಮಿ.

ಎರಡನೆಯವು ‘ಸಾಧಕ’ನೋರ್ವ ತನ್ನ ಬಾಳ ಪಯಣವನ್ನು ತಾನೇ ದಾಖಲಿಸುವ ಪ್ರಯತ್ನ. ಬಹುಶಃ ಈ ಪ್ರಯತ್ನದಲ್ಲಿ ಉಪಯೋಗಕ್ಕೊದಗಿ ಬರುವುದು ನಿಯಮಿತವಾಗಿ ಬಾಲ್ಯದಿಂದ ದಿನಚರಿ ಬರೆಯುವ ಅಭ್ಯಾಸ. ವಿವಿಧ ಕಾಲ ಘಟ್ಟಗಳ ನಿಖರವಾದ ಮಾಹಿತಿ. ತನ್ನ ಜನನದಿಂದ ಮೊದಲ್ಗೊಂಡು ತನ್ನ ಬದುಕಿನ ಏಳಿಗೆಗೆ ಕಾರಣರಾದ ಹೆತ್ತವರ, ಬಂಧು ಮಿತ್ರರ, ಸಹೋದ್ಯೋಗಿಗಳ, ಸಜ್ಜನರ ನೆನಪುಗಳೊಂದಿಗೆ ಅದನ್ನು ಇದ್ದುದು ಇದ್ದಂತೆ ದಾಖಲಿಸುವ ಪರಿ. ನನಗಂತೂ ಈ ಎರಡನೆಯ ಮಾದರಿಯ ಆತ್ಮ ಕಥನಗಳು ಹೆಚ್ಚು ಆಪ್ತವಾಗುತ್ತವೆ.

ಅಂತಹ ಆಪ್ತತೆಯನ್ನು ನೀಡಿದ, ಇತ್ತೀಚಿಗೆ ನಾನೋದಿದ ಆತ್ಮ ಕಥನ ಚಿತ್ಪಾವನ ಸಮುದಾಯ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ, ಕವಿ, ಕತೆಗಾರ ಶ್ರೀ ಎನ್. ಜಿ. ಪಟವರ್ಧನ್ ಅವರ ‘ಬಾಳ ಪಯಣ’. ಇದು ಬರಿಯ ಒಂದು ಆತ್ಮಕಥನವಾಗದೆ ಕಳೆದ ಎಪತ್ತೈದು ವರುಷಗಳ ಚಿತ್ಪಾವನ ಜನ ಸಮುದಾಯದ ಜೀವನ ಚಿತ್ರಣ ಮತ್ತು ಸಾಮಾಜಿಕ ಬದುಕನ್ನು ನಮ್ಮ ಮುಂದಿರಿಸುವ ಆತ್ಮಕಥನ. ಅಭಿನಂದನೆಗಳು ಶ್ರೀ ನಾರಾಯಣ ಗೋವಿಂದ ಪಟವರ್ಧನ್ (ಎನ್ಜಿ ಪಟವರ್ಧನ್) ಅವರಿಗೆ.

ನಮ್ಮದಿರಲಿ, ಬೇರೆಯವರಿದ್ದಿರಲಿ, ಬದುಕು ಒಂದು ನೋಟ. ನೋಟವೆಂದರೆ ಕಣ್ಣಿಗೆ ಕಂಡುದನ್ನು, ತಾನು ಅನುಭವಿಸಿದುದನ್ನು ದಾಖಲಿಸುವ ಪರಿ. ನೋಟವೆಂದರೆ ಮನಸ್ಸಿಗೆ ಮುದವನ್ನು ನೀಡುವ ಪರಿ. ಪಟವರ್ಧನ್ ಅವರು ತಮ್ಮ ‘ಬಾಳ ಪಯಣ’ ವನ್ನು ‘ನೋಟು’ಗಳಲ್ಲಿ ದಾಖಲಿಸಿಲ್ಲ! ಅವರದನ್ನು ತಾವು ಕಂಡ ನೋಟಗಳಲ್ಲಿ ದಾಖಲಿಸಿದ ರೀತಿ ಅನನ್ಯ. ಎಲ್ಲೂ ಅಸಂಗತ ಸಂಗತಿಗಳಿಲ್ಲ, ಸಾಧನೆಗಳ ವೈಭವೀಕರಣವಿಲ್ಲ. ತಾನೇರಿದ ಎತ್ತರವನ್ನು ತನ್ನ ನೋಟಗಳಲ್ಲೇ ಕಾಣುತ್ತ ತನ್ನ ಸಿದ್ಧಿ ಸಾಧನೆಗಳಿಗೆ ಕಾರಣರಾದ ಮಹನೀಯರನ್ನು ಸ್ಮರಿಸುತ್ತ ತನ್ನ ಬಾಳ ಪಯಣವನ್ನು ಅತ್ಯಂತ ನಾಜೂಕಾಗಿ, ಸಣ್ಣ ಸಣ್ಣ ವಿವರಗಳನ್ನು ಕೂಡ ಬಿಡದೆ ಅನುಭವಿಸಿ ದಾಖಲಿಸಿದ್ದಾರೆ ಎನ್ಜಿಪಿ. ಬಹುಶಃ ಜೀವನ ಪ್ರೀತಿಯಿರುವವರಿಂದ ಮಾತ್ರ ಹೀಗೆ ಬರೆಯಲು ಸಾಧ್ಯ.

೧೯೪೩ರಲ್ಲಿ ಜನಿಸಿದ ಪಟವರ್ಧನರಿಗೀಗ ಎಪ್ಪತ್ತೆಂಟು. ಬಹುಶಃ ಮೂರು ತಲೆಮಾರಿನ ಬದುಕನ್ನು ಕಂಡವರು ಪಟವರ್ಧನರು. ಬದುಕಿನ ಸ್ಥಿತ್ಯಂತರಗಳನ್ನು, ಸಾಮಾಜಿಕ ಬದಲಾವಣೆಗಳನ್ನು, ಶಾರೀರಿಕ ದುಡಿಮೆಯನ್ನು ನೆಚ್ಚಿ ನಿಂತ ಒಂದು ಜನ ಸಮುದಾಯದ ಬೌದ್ಧಿಕ ದುಡಿಮೆ ಮತ್ತು ಇತ್ತೀಚಿನ ವರ್ಷಗಳ ತಾಂತ್ರಿಕ ದುಡಿಮೆಗಳನ್ನು ಆವಾಹಿಸಿಕೊಂಡ ಸಮಗ್ರ ನೋಟ ಈ ಬಾಳ ಪಯಣದಲ್ಲಿದೆ.

ಉಣ್ಣುವುದಕ್ಕೇನು, ತಿನ್ನುವುದಕ್ಕೇನು ಅನ್ನುವ ಪರಿಸ್ಥಿತಿಯಿಲ್ಲದಿದ್ದರೂ ಆಗಿನ ಕಾಲವೆಂದರೆ ಒಂದು ಲೆಕ್ಕಾಚಾರದಲ್ಲಿ ನಡೆಯಬೇಕಾದ, ನಡೆಸಬೇಕಾದ ಜೀವನ ಕ್ರಮವಿತ್ತು. ಕುಟುಂಬ ವ್ಯವಸ್ಥೆಯಲ್ಲಿ ಹೆತ್ತವರು, ಬಂಧು ಬಳಗ ಹೀಗೆ ಒಂದು ವ್ಯವಸ್ಥೆಯೊಳಗೆ ತನ್ನನ್ನು ತಾನು ರೂಪಿಸಿಕೊಳ್ಳಬೇಕಾದ ಕಾಲವದು.

ಒಬ್ಬ ಹುಡುಗನ ಬೆಳವಣಿಗೆಯನ್ನು ಕಾಣುವ ನೂರು ಕಣ್ಣುಗಳು. ತಪ್ಪಿ ನಡೆದಾಗ ಕಿವಿ ಹಿಂಡುವ ನೂರು ಕೈಗಳು. ಇಂತಹ ಒಂದು ವ್ಯವಸ್ಥೆಯಲ್ಲಿ ಬೆಳೆದ ಪಟವರ್ಧನರಂತಹ ಅನೇಕರ ಬದುಕು ಸಮುದಾಯಕ್ಕೆ, ಸಮಾಜಕ್ಕೆ ಕೊಡುಗೆಯಾದುದನ್ನು ನಾವು ಕಾಣುತ್ತೇವೆ. ನನ್ನ ಬದುಕನ್ನು ನಾನು ರೂಪಿಸಿಕೊಂಡೆ ಅನ್ನುವ ಅಹಂನಿಂದ ಹೊರ ಬರುವ ವ್ಯಕ್ತಿ ಮಾತ್ರ ಸಾಧಕನಾಗಬಲ್ಲ. ಅಂತಹ ಮಹಾನ್ ಸಾಧಕರ ಪಾಲಿಗೆ ಸೇರಿದವರು ಪಟವರ್ಧನರು.

ಬದುಕಿನ ಸುದೀರ್ಘ ಪಯಣದಲ್ಲಿ ಕಂಡ ಮುಖಗಳೆಷ್ಟು, ಯಾರಿಂದೆಲ್ಲ ಉಪಕೃತರಾದೆವು. ವಿಭಿನ್ನ ಕಾಲಘಟ್ಟಗಳಲ್ಲಿ ಏನೆಲ್ಲ ನಡೆಯಿತು ಅನ್ನುವುದರ ಸಮೃದ್ಧ ಮಾಹಿತಿ ಪಟವರ್ಧನರ ‘ಬಾಳಪಯಣ’ದಲ್ಲಿದೆ. ನಾನೇ ಬರೆದ ಎರಡು ಸಾಲುಗಳ ಶಾಯರಿ ಮತ್ತೀಗ ನನಗೆ ನೆನಪಾಗುತ್ತಿದೆ :

‘ಎತ್ತರಕೇರಿದ ನನ್ನನು ಕಂಡು ಅಚ್ಚರಿ ಪಡುವರು ಎಲ್ಲ
ನನ್ನಯ ಕಾಲಿನ ಗಾಯಗಳೆಲ್ಲವ ಕಂಡವರಾರೂ ಇಲ್ಲ’

ಸಾಧನೆಯ ಹಾದಿ ಸುಲಭವಲ್ಲ. ಸಾಧಿಸಬೇಕೆಂಬ ಛಲ, ಗುರಿಮುಟ್ಟಬೇಕೆಂಬ ಅವಿರತ ಪ್ರಯತ್ನ, ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಸೋಲುಗಳನ್ನು ಅನುಭವವಾಗಿಸುತ್ತ ಗೆಲುವಿನೆಡೆ ಸಾಗುವುದೇ ಸಾಧಕನಿರಬೇಕಾದ ಲಕ್ಷಣ. ಪಟವರ್ಧನರ ಬದುಕಿನ ನಡೆಯನ್ನು ಗಮನಿಸುವಾಗ ಇಂತಹ ಒಂದು ನಡೆ ಅವರ ಬದುಕಿನಲ್ಲಿ ಎದ್ದು ಕಾಣುತ್ತದೆ.

ಕೃತಿಯುದ್ದಕ್ಕೂ ಎಲ್ಲೂ ಆತ್ಮಪ್ರಶಂಸೆಯಿಲ್ಲ, ಆತ್ಮ ರತಿಯಿಲ್ಲ. ನಾನು – ನನ್ನದು- ನನ್ನಿಂದ ಅನ್ನುವ ಉಕ್ತಿಯಿಲ್ಲ. ವಿದ್ಯಾಭ್ಯಾಸ, ಉದ್ಯೋಗ, ಕುಟುಂಬ ನಿರ್ವಹಣೆ ಹೀಗೆ ವಿವಿಧ ಕಾಲಘಟ್ಟಗಳಲ್ಲಿ ತಾನು ಯಾರಿಂದೆಲ್ಲ ಉಪಕೃತನಾದೆ ಎಂದು ನೆನಪಿಟ್ಟುಕೊಳ್ಳುವ ಯಾವುದೇ ವ್ಯಕ್ತಿ ತನ್ನ ಬದುಕು ತನ್ನಿಂದ ರೂಪಿತವಾಯಿತು ಅನ್ನುವುದನ್ನು ಹೇಳಲಾರ. ತನ್ನ ತಾನರಿಯುವುದೆಂದರೆ ಇದೇ ಅಲ್ಲವೆ?

ಈ ಕೃತಿಯಲ್ಲಿ ಇಂತಹ ಒಂದೇ ಒಂದು ಆತ್ಮರತಿಯ, ಆತ್ಮ ಪ್ರಶಂಸೆಯ ಉಲ್ಲೇಖವಿಲ್ಲ. ಬದಲಿಗೆ ಜಗದುಪಕೃತಿಯಿಂದ ತನ್ನ ಬದುಕು ಪರಿಪೂರ್ಣವಾಯಿತು ಅನ್ನುವ ಪ್ರಾಂಜಲ ಮನೋಸ್ಥಿತಿ ಪಟವರ್ಧನರದು. ಬಹುಶಃ ಇದೇ ಆದರ್ಶ. ಕನ್ನಡ ನಾಡಿನ ಮಹಾನ್ ಸಾಧಕರು, ಶ್ರೇಷ್ಠ ಸಾಹಿತಿಗಳನ್ನು ಗುರುಗಳಾಗಿ, ಸಹೋದ್ಯೋಗಿಗಳಾಗಿ,ಮಾರ್ಗದರ್ಶಕರಾಗಿ ಪಡೆದ ಪಟವರ್ಧನರ ಬದುಕು ಭಾಗ್ಯಮಯವೆಂದೇ ಹೇಳಬೇಕು.

ಬೆಚ್ಚನೆಯ ಮನೆಯಿರುವ, ಒಪ್ಪುವ ಸತಿಯಿರುವ, ವೆಚ್ಚಕ್ಕೆ ಹೊನ್ನಿರುವ ಪಟವರ್ಧನರ ಕೌಟುಂಬಿಕ ಬದುಕು ಅವರಿಗೆ ದೇವರಿತ್ತ ವರ. ‘ಆತ್ಮವೈ ಪುತ್ರ ನಾಮಾಸಿ’ ತಂತಮ್ಮ ಕ್ಷೇತ್ರಗಳಲ್ಲಿ ಸಿದ್ಧಿ ಸಾಧನೆಗೈದ ಪುತ್ರರು, ಅವರಿಗನುಕೂಲೆಯರಾಗಿ ಅರಿತು ನಡೆಯುವ ಸೊಸೆಯಂದಿರು. ಮನಕೆ ಮುದ ನೀಡುವ ಮೊಮ್ಮಕ್ಕಳು. ‘ನಾನೊಬ್ಬನೇ ಅಲ್ಲ, ಜಗವೆ ಅವಗಿಹುದಲ್ಲ’ ಅನ್ನುವ ಮನೋಸ್ಥಿತಿಯ ಪಟವರ್ಧನರು ನಿತ್ಯ ತೃಪ್ತರು.

ಸ್ವಸ್ಥ ಮನಸ್ಸಿನಿಂದ ಮಾತ್ರ ಸುಂದರ ಸಾಹಿತ್ಯ ನಿರ್ಮಿತಿ. ಅಧ್ಯಾಪನದ ಜತೆ ಜತೆಯಲ್ಲಿ ಸಾಹಿತ್ಯಾಸಕ್ತಿ. ಕತೆ, ಕವಿತೆ, ಪ್ರಬಂಧ, ಕಾದಂಬರಿ ಹೀಗೆ ಸಾಹಿತ್ಯ ರಚನೆ. ಕನ್ನಡ ನುಡಿಯ ಸೇವೆ, ಹಲವು ಸಮ್ಮೇಳನಾಧ್ಯಕ್ಷತೆಗಳು, ಮಾನ ಸಮ್ಮಾನಗಳು. ತೃಪ್ತ ಬದುಕಿಗೆ ಇನ್ನೇನು ಬೇಕು? ಪಟವರ್ಧನರ ‘ಬಾಳ ಪಯಣ’, ಅದು ಅವರ ಬಾಳಪಯಣ ಹೌದಾದರೂ ಅದು ಒಂದು ಸಮುದಾಯ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ ಹೀಗೆ ಹಲವು ವಿಷಯಗಳನ್ನು ನಮಗೆ ಪರಿಚಯಿಸುವ ಸುಂದರ ಆತ್ಮ ಕಥನ. ಮತ್ತೆ ಮತ್ತೆ ಓದಬೇಕೆಂದಿನಿಸುವ ಕೃತಿ.


  • ದಿವಾಕರ್  ಡೋಂಗ್ರೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading