ಪರಿಪರಿಯ ಭಾವಗಳು ಮನದೊಳಗೆ ಮೂಡುತಿರೆ ಗರಿಬಿಚ್ಚಿ ನವಿಲೊಂದು ಕುಣಿದ ಹಾಗೆ…ಹಿರಿಯ ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮನಸುಗಳ ಮಿಲನದಲಿ ಮಾತುಗಳು ಬೇಕಿಲ್ಲ
ಕನಸಿನೊಳ ಸಂಭ್ರಮವು ಇದಿರಿನಲ್ಲಿ
ನನಸಿನಲಿ ಕಣ್ಣುಗಳು ಕಲೆತಿರಲು ಮೌನದಲಿ
ಅನುರಾಗದಲೆಯಲೆಯು ಹೊಮ್ಮಿತಲ್ಲಿ
ಸಿರಿತನದ ಗುಂಗಿಲ್ಲ ಬಡತನದ ಹಂಗಿಲ್ಲ
ಕಿರಿಕಿರಿಯ ಜಂಜಾಟ ತೊಡೆದಹಾಗೆ
ಪರಿಪರಿಯ ಭಾವಗಳು ಮನದೊಳಗೆ ಮೂಡುತಿರೆ
ಗರಿಬಿಚ್ಚಿ ನವಿಲೊಂದು ಕುಣಿದ ಹಾಗೆ
ಸುರಧೇನು ಕರೆದಂಥ ನೊರೆಹಾಲ ಬಟ್ಟಲಿಗೆ
ಸುರಿದಂತೆ ಹಾಲ್ಜೇನು ಸಕ್ಕರೆಯನು
ಸಿರಿಗಂಧದೊಳ ಕಂಪು ಹೊಂಗೆ ನೆರಳಿನ ತಂಪು
ಹರಿದಂತೆ ಮಡಿಲೊಳಗೆ ಮಗುವೆ ನೀನು
ತರಣಿಯಿಳಿಸಿದ ಬೆಳಕ ಹೊಂಗಿರಣದೆಳೆಯೆಳೆಯು
ಹರಡಿ ಹೆಣೆದಿದೆ ಗೂಡು ಹರಣದೊಳಗೆ
ಸರಸಿನೊಳಗರಳಿರುವ ಕೆಂದಾವರೆಯ ಕೆಂಪು
ಬರೆದಂತೆ ಬಣ್ಣಗಳನೊಡಲಿನೊಳಗೆ
- ಬಿಟ್ಟೀರ ಚೋಂದಮ್ಮ – ಬೆಂಗಳೂರು.
