ಸುಪ್ರೀತ್ ಕೆ ಎನ್ ಅವರ ತರ್ಕ ಕೃತಿಯು ತ್ರಿಕೋನ ಪ್ರೇಮ ಕಥೆಯಂತೆ ಕಂಡುಬರುತ್ತದೆ. ಕಾದಂಬರಿಯಲ್ಲಿ ಅನೇಕ ತರ್ಕವಾದ ಪ್ರಶ್ನೆಗಳು ಉದ್ಭವವಾಗುತ್ತದೆ. ಪಾರ್ವತಿ ಜಗದೀಶ್ ಅವರ ತರ್ಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ತರ್ಕ
ಲೇಖಕರು : ಸುಪ್ರೀತ್ ಕೆ ಎನ್
ಪ್ರಕಾಶಕರು : ಸಾಹಿತ್ಯ ಲೋಕ ಪ್ರಕಾಶನ.
ಬೆಲೆ : 250 ರೂಪಾಯಿ
ಪುಟ : 217
ಅಧ್ವೈತ ಸಿದ್ಧಾಂತ, ಮನಶಾಸ್ತ್ರ, ಶ್ರೀಚಕ್ರ ಉಪಾಸನೆ ಇವುಗಳನ್ನು ತಾರ್ಕಿಕವಾಗಿ ಕೆಲವು ಪಾತ್ರಗಳ ಮೂಲಕ ನಮ್ಮನ್ನ ತಾರ್ಕಿಕತದತ್ತ ಕೊಂಡೊಯ್ಯುವ ಕೃತಿ ತರ್ಕ.ಮನುಷ್ಯನಿಗೆ ಸಹಜವಾಗಿ ಸನ್ನಿವೇಶಕ್ಕೆ ಅನುಗುಣವಾಗಿ ತಾರ್ಕಿಕ ಆಲೋಚನೆಗಳು ಮೂಡುತ್ತಾ ಇರುತ್ತವೆ..ಕೆಲವರು ಅದನ್ನ ಗಂಭೀರವಾಗಿ ಪರಿಗಣಿಸಿ ಉತ್ತರ ಪಡೆಯುವ ಹಂಬಲದಲ್ಲಿ, ಮುಂದುವರೆಯುತ್ತಾರೆ. ಮತ್ತೆ ಕೆಲವರು ಅದನ್ನ ಉಪೇಕ್ಷೆ ಮಾಡಿ ಮುಂದೆ ಸಾಗುತ್ತಾರೆ. ಏನೇ ಆಗಲಿ ಈ ಜಗತ್ತು ಅಣು,ಕಣ, ಗ್ರಹ, ಪರಮಾಣು, ಬ್ರಹ್ಮಾ0ಡ, ವಿಶ್ವ,ಬ್ರಹ್ಮ ಇವು ಯಾವವೂ ಸುಳ್ಳಲ್ಲ ಎಲ್ಲವೂ ಸತ್ಯ ಅನ್ನುವುದನ್ನು ಆಯಾಯ ಸನ್ನಿವೇಶ ಹಾಗೂ ಪಾತ್ರಗಳ ಮೂಲಕ ತಿಳಿಸುತ್ತಾ ಹೋಗುತ್ತಾರೆ ಲೇಖಕರು.
********
ಮನುಷ್ಯ ಜೀವನದಲ್ಲಿ ಮನಸಿಗೆ ಸಂಬಂಧ ಪಟ್ಟಂತೆ ಅನೇಕ ಭಾವನಾತ್ಮಕ ಅಂಶಗಳು ನಿಯಂತ್ರಿಸಲ್ಪಡುವುದು ಆಧ್ಯಾತ್ಮಿಕತೆಯ ತಳಪಾಯದಲ್ಲೇ ಅನ್ನುವುದು ನಿರ್ವಿವಾದ. ಆಧ್ಯಾತ್ಮಿಕತೆಯ ಮೂಲವೇ ಮನಸು ಅಂತಾದರೆ ಮನಸಿನಲ್ಲಿ ಉದಯಿಸುವ ಪ್ರೀತಿ, ಭಯ, ಭಕ್ತಿ, ಅಸೂಹೆ, ಕಾಮ ಕೋಪ, ಅನುಮಾನ ಜಿಗುಪ್ಸೆ, ತಾತ್ಸಾರ ಇವೆಲ್ಲವೂ ಆಧ್ಯಾತ್ಮಿಕ ವಿಚಾರಗಳೇ.
ಕೃತಿಯಲ್ಲಿ ಸಣ್ಣ ಪಾತ್ರಗಳ ಮೂಲಕವೂ ಒಂದೊಂದು ಸಂದೇಶ ಕೊಡುವ ಲೇಖಕರ ಬರಹ ಶೈಲಿ ಇಷ್ಟವಾಗುವುದು ಸತ್ಯ. ಆದರೇ ಒಂದಷ್ಟು ಬೇರೆ ತರದಲ್ಲಿ ಆಲೋಚನೆ ಮಾಡಿ ನೋಡಿದಾಗ,ಆ ಸಣ್ಣ ಪಾತ್ರಗಳಿಂದಲೇ ಕಾದಂಬರಿ ಅರ್ಧಕ್ಕೆ ಅಂತ್ಯಕಾಣುವ ರೀತಿಯಲ್ಲಿಯೂ ಇದೆ ಅದರ ಕಡೆಗೆ ಇನ್ನೂ ಸ್ವಲ್ಪ ಗಮನವಹಿಸಿದ್ದರೆ ಇನ್ನೂ ಸಶಕ್ತವಾಗಿ ಮೂಡಿ ಬರುವ ಸಾಧ್ಯತೆ ಇತ್ತು ಕೃತಿ.
ಕೃತಿಯು ತ್ರಿಕೋನ ಪ್ರೇಮ ಕಥೆಯಂತೆ ಕಂಡುಬರುತ್ತದೆ. ಕಥಾ ನಾಯಕಿ ಮಾನಸ ವೃತ್ತಿಯಲ್ಲಿ ವೈದ್ಯೆ ಆದರೂ ತನ್ನ ಅಜ್ಜ, ಅತ್ತೆ, ಮಾವ, ತಂದೆ, ತಾಯಿ ಆಚರಿಸುವ ಸಂಪ್ರದಾಯ, ಸಂಸ್ಕೃತಿಗಳ ನೆರಳಲ್ಲಿಯೇ ಬೆಳೆದ ಅವಳಿಗೆ ದೇವರು, ದೈವ ನಿರ್ಣಯದ ಬಗ್ಗೆ ನಂಬಿಕೆ. ಅವಳ ತಂದೆ ಮಂಜುನಾಥ್, ತಾಯಿ ಸರಸ್ವತಿ. ಸರಸ್ವತಿಯ ಅಣ್ಣನವರೇ ಚಂದ್ರಶೇಖರ್ ದೀಕ್ಷಿತ್ ಫಿಜಿಕ್ಸ್ ಉಪನ್ಯಾಸಕರು. ದೇವಿ ತ್ರಿಪುರ ಸುಂದರಿ, ರಾಜ,ರಾಜೇಶ್ವರಿಯ ಆರಾಧಕರು.ಶ್ರೀ ಚಕ್ರ ಉಪಾಸಕರು. ಅವರ ಹೆಂಡತಿ ಪದ್ಮ ಗಂಡನಿಗೆ ತಕ್ಕ ಅನುರೂಪ ಸತಿ. ದೈವ ನಿರ್ಣಯದ ಆಣತಿಗೆ ಒಳಪಟ್ಟು ಮಕ್ಕಳೇ ಬೇಡವೆಂದು ದೈವದ ಆರಾಧನೆಯಲ್ಲೇ ಕಾಲ ಕಳೆಯುವ ದಂಪತಿಗಳು. ಕೊನೆಗೆ ದೈವ ಪ್ರೇರಣೆಯಂತೆ ದೇವಿ ಆರಾಧನೆ ಮಾಡುವಾಗಲೇ ಮುತ್ತೈದೆ ಸಾವು ಪಡೆಯುವ ಪದ್ಮ.
********
ವೃತ್ತಿಯಲ್ಲಿ ಶೆಟ್ಟಿ ಆದರೂ ಚಂದ್ರಶೇಖರ್ ದೀಕ್ಷಿತ್ ಅವರ ಉಪದೇಶದನ್ವಯ ಬ್ರಾಹ್ಮಣನಾಗಿ ತೋಟದ, ಅವರ ಮನೆಯ ಅಡುಗೆ ಕೆಲಸ ಮಾಡುವ ಶೆಟ್ಟಿ. ಹೆಂಡತಿಯನ್ನು ಕಳೆದುಕೊಂಡ ನಂತರ ಇದ್ದೋಬ್ಬ ಮಗ ಸೊಸೆಯರಿಂದ ಉಪೇಕ್ಷೆಕ್ಕೊಳಪಟ್ಟ ವೆಂಕಟೇಶಶಾಸ್ತ್ರೀಗಳಿಗೆ ದೀಕ್ಷಿತ್ ರೆ ಅವರ ತೋಟದಲ್ಲೆ ಒಂದು ಪುಟ್ಟ ಮನೆ ಮಾಡಿಕೊಟ್ಟು ಅವರ ವಾಸಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.

ರಾಘವ ಶ್ರೀಮಂತ ದೈವ ಭಕ್ತ ದಂಪತಿಗಳ ಏಕೈಕ ಮಗ ಶ್ರೀಮಂತಿಕೆಗೆ ಯಾವ ಕೊರತೆಯಿಲ್ಲ…ದೇವರ ದರ್ಶನಕ್ಕೆ0ದು ಕಾರಿನಲ್ಲಿ ಹೊರಟ ಆ ಕುಟುಂಬಕ್ಕೆ ಗ್ರಹಚಾರ ಒಕ್ಕರಿಸಿ ಕುಟುಂಬದ ಮುಖ್ಯಸ್ಥ ರಾಘವನ ತಂದೆಯ ದುರ್ಮರಣದ ನಂತರ ಅತಿಯಾಗಿ ಮನಸಿಗೆ ತೆಗೆದುಕೊಂಡ ಆತನ ತಾಯಿಯೂ ತಂದೆಯ ಹಾದಿಯನ್ನೇ ಹಿಡಿದ ನಂತರ ರಾಘವನಿಗೆ ದೇವರ ಮೇಲಿನ ನಂಬಿಕೆ ಸಂಪೂರ್ಣ ನಶಿಸಿ ಹೋಗಿ ಹಾಕಿದ್ದ ಜನಿವಾರ ಕಿತ್ತೆಸೆದು ದೇವರ ಫೋಟೋ ಎಲ್ಲಾ ಬಿಸಾಕಿ ಅಂದಿನಿಂದ ದೇವರಿಗೆ ನಮಸ್ಕಾರ ಸಹ ಮಾಡುವುದನ್ನೇ ಬಿಟ್ಟ. ಅಂತಹ ರಾಘವನಿಗೆ ಮುಂದೆ ದೈವ ಸಾಕ್ಷಾತ್ಕಾರವಾಗಿ ದೈವ ಬಲದಿಂದಲೇ ಅವನ ಜೀವನ ಸುಖಾ0ತ್ಯವಾಗುತ್ತದೆ. ಇಲ್ಲಿ ರಾಘವನಿಗೆ ತನ್ನ ತಂದೆಯ ಸಾವಿನ ನಂತರ ಅನೇಕ ಜಿಗ್ನಾಸೆಯ ತಾರ್ಕಿಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.ಅವುಗಳಿಗೆಲ್ಲ ಸಮರ್ಪಕವಾದ ಉತ್ತರಗಳು ಪಿಂಡಾಂಡ, ಚಂದ್ರಶೇಖರ್ ದೀಕ್ಷಿತ್, ವೆಂಕಟೇಶೇಶ್ವರ ಶಾಸ್ತ್ರಿ, ಡಿಸೋಜ ಹೃಶಿಕೇಶದ ಯತಿಗಳ ಮೂಲಕ ಸಿಗುತ್ತಾ ಹೋಗುತ್ತವೆ.
********
ತಂದೆ, ತಾಯಿ ಕಳೆದುಕೊಂಡ ಅನಾಥ ಭಾವದಲ್ಲಿ ತೊಳಲಾಡುವ ರಾಘವನಿಗೆ ಆ ಸಂದರ್ಭದಲ್ಲಿ ಆತ್ಮೀಯ ಜೀವದ ಅವಶ್ಯಕತೆ ಇರುತ್ತದೆ. ಬಿ. ಕಾಮ್ ಪದವೀಧರ. ಹವ್ಯಾಸಿ ಫೋಟೋಗ್ರಾಫರ್ ಆದ ರಾಘವ ಸ್ಥಳೀಯ ಡಾಕ್ಯೂಮೆಂಟರಿ ನೆಪದಲ್ಲಿ ಕೆಲವು ಹುಡುಗಿಯರಿಗೆ ಹತ್ತಿರವಾಗಲು ಬಯಸಿ. ಆತ್ಮೀಯತೆ ಹೆಚ್ಚಾದಾಗ ಪ್ರೇಮ ನಿವೇದನೆ ಕೂಡ ಮಾಡುತ್ತಾನೆ ಆದರೂ ಕಾರಣಾ0ತರಗಳಿಂದ ಅವನಿಗೆ ಯಾವೊಬ್ಬ ಹುಡುಗಿಯೂ ಒಲಿಯುವುದಿಲ್ಲ. ಹಾಗಾಗಿ ತನ್ನ ಒಂಟಿತನ ಹೋಗಲಾಡಿಸಿಕೊಳ್ಳೋಕೆ ನಯನ ಅನ್ನುವ ಫೇಕ್ ವ್ಯಕ್ತಿಯನ್ನ ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಂಡು ಕೆಲವು ದಿನ ಸಂತೋಷಪಡುತ್ತಾನೆ. ಆದರೆ ಅದೇ ಫೇಕ್ ಸೃಷ್ಟಿಯ ನಯನನೇ ಅವನ ದಾಂಪತ್ಯ ಜೀವನ ಕೆಲ ಕಾಲ ವಿರಸಕ್ಕೂ ಕಾರಣವಾಗುತ್ತದೆ. ಹಾಗಾದ್ರೆ ನಯನ ಯಾರೂ? ನಯನ ಸೃಷ್ಟಿಗೆ ಕಾರಣವೇನು? ಅವಳ ಕಾರಣಕ್ಕೆ ಆದ ತೊಂದ್ರೆಗಳು ಏನು? ಅವಳಿಂದ ಆದ ಸಮಸ್ಯೆ ಯಾರಿಂದ ಬಗೆ ಹರೆಯಿತು? ನಯನ ಸೃಷ್ಟಿಯ ಬೇಧಿಸಿದವರು ಯಾರು? ಇವೆಲ್ಲವೂ ತರ್ಕದಲ್ಲಿಯ ಓದುಗರ ತರ್ಕಗಳು.
*******
ವೃತ್ತಿಯಲ್ಲಿ ವೈದ್ಯೆಯಾಗಿರುವ ಮಾನಸ ಒಮ್ಮೆ ವೃತ್ತಿ ನಿರತಳಾಗಿದ್ದಾಗ ಕಮಲಮ್ಮ ಅನ್ನುವ ಪೇಶಂಟ್ ಸಂಬಂಧಿ ಕಡೆಯಿಂದ ರಾಘವನ ಪರಿಚಯವಾಗಿ ಆತ್ಮೀಯತೆ ಬೆಳೆದು ತನ್ನೆಲ್ಲ ವಿಚಾರಗಳನ್ನೂ ಮಾನಸಳಿಗೆ ಹೇಳುತ್ತಾನೆ. ಅವನ ಅನಾಥ ಪರಿಸ್ಥಿತಿ ಗೆ ಮರುಗಿದ ಮಾನಸ ಅವನೊಂದಿಗೆ ಮತ್ತಷ್ಟು ಆತ್ಮೀಯಳಾಗಿ ಇರ್ತಾಳೆ. ಅಂತೆಯೇ ಒಂದು ದಿನ ತನ್ನ ಮಾವ ಆರಾಧನೆ ಮಾಡುವ ನವರಾತ್ರಿ ಪೂಜೆಗೆ ರಾಘವ ಎಲ್ಲರೊಂದಿಗೆ ಬೆರೆಯಲಿ ಎಂದು ಅವನನ್ನು ಪೂಜೆಗೆ ಕರೆಯುತ್ತಾಳೆ. ಅದೇ ಪೂಜೆಗೆ ಅವನ ಡಿಗ್ರಿ ಸ್ನೇಹಿತ ಶಶಾಂಕ್ ಕೂಡ ಬಂದಿರುತ್ತಾನೆ. ಶಶಾಂಕ್ ದೀಕ್ಷಿತ್ ರ ಶಿಷ್ಯ ಫಿಜಿಕ್ಸ್ ನಲ್ಲಿ ಪಿ. ಎಚ್. ಡಿ ಮಾಡುವ ಕಾರಣಕ್ಕೆ ದೀಕ್ಷಿತ್ ರ ಮಾರ್ಗದರ್ಶನ ಪಡೆಯಲು ಆಗಾಗ ಅವರಲ್ಲಿಗೆ ಹೋಗುತ್ತಾ ಇರುತ್ತಾನೆ ಅಂದೂ ಕೂಡ ಪೂಜೆಗೆ ಅವನೂ ಅಹ್ವಾನಿತ. ಅದರಂತೆ ಡಿಸೋಜ, ಶಾಸ್ತ್ರಿ, ಪದ್ಮ ಅವರ ತಮ್ಮ ಗಣೇಶ, ಮಾನಸ ತಂದೆ, ತಾಯಿ ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ನಿರ್ವಿಜ್ಞವಾಗಿ ನೆರವೇರಿದ ನಂತರ ಅಲ್ಲಿಯೇ ಉಳಿದು ಆ ಪರಿಸರ, ಅವರ ಕೂಡು ಕುಟುಂಬದ ಸಾಮರಸ್ಯ ಅವರ ಸಂಭ್ರಮ ಕಂಡ ರಾಘವನಿಗೆ ತಾನೂ ಆ ಕುಟುಂಬದ ಒಬ್ಬ ಸದಸ್ಯನಾಗುವ ಆಸೆ ಮೊಳಕೆಯೊಡೆಯುತ್ತದೆ. ತಿರುಗಿ ಪೂಜೆ ಮುಗಿಸಿ ಹೋಗುವಾಗ ಅವನ ಮನೆಯ ಹತ್ತಿರ ಮರದ ಕೊಂಬೆ ಮುರಿದು ಬಿದ್ದು 20 ವರ್ಷದ ಹುಡುಗಿ ಸಾವಿನ ಘಟನೆಯನ್ನು ಅಡುಗೆಯ ಕಮಲಮ್ಮ ಹೇಳುತ್ತಾಳೆ.ಅದನ್ನೇ ನೆಪವಾಗಿ ಬಳಸಿಕೊಂಡು, ಮಾನಸಳ ಮೇಲೆ ಅಂಕುರಿಸಿದ ಪ್ರೀತಿಯನ್ನು ತನ್ನದಾಗಿಸಿಕೊಳ್ಳಲು ತಾನು ಸೃಷ್ಟಿಸಿದ ನಯನಾ ಪಾತ್ರಕ್ಕೆ ಅಂತ್ಯ ಕಾಣಿಸಿ ಅದನ್ನೇ ಮಾನಸಳಲ್ಲೂ ಹೇಳುತ್ತಾನೆ. ಇತ್ತ ಮಾನಸಳಿಗೂ ಅವಳ ತಂದೆ,ತಾಯಿ, ಅವಳ ಮದುವೆಗಾಗಿ ಸೂಕ್ತ ವರನ ಅನ್ವೇಷಣೆಯಲ್ಲಿ ಇರುತ್ತಾರೆ. ಅಂತಹ ಸಂದರ್ಭದಲ್ಲಿಯೇ ರಾಘವ ಮಾನಸಳಿಗೆ ಪ್ರೇಮ ನೀವೇದನೆ ಮಾಡುತ್ತಾನೆ. ಸಾಕಷ್ಟು ತಾರ್ಕಿಕ ಆಲೋಚನೆ ಮಾಡಿ ಮಾನಸಳೂ ರಾಘವನೊಂದಿಗೆ ಮದುವೆಗೆ ಒಪ್ಪಿಗೆ ಕೊಟ್ಟು ಮದುವೆ ಆಗುತ್ತೆ. ಆ ನಡುವೆ ಮದುವೆ ಮಾತುಕತೆ ಮುನ್ನ ಶಶಾಂಕ್ ನೂ ಮಾನಸಳಿಗೆ ಆಕರ್ಷಣೆ ಆಗಿ ಅವಳಿಗೆ ಪ್ರೇಮ ನೀವೆದನೆ ಮಾಡಿದಾಗ ಮದುವೆ ನಿಶ್ಚಯ ಆದ ವಿಷಯ ತಿಳಿಸಿ ಅವನ ನಿವೇದನೆಯನ್ನು ತಳ್ಳಿಹಾಕುತ್ತಾಳೆ.
ಮುಂದೆ ಚಂದಾದ ಸಂಸಾರ ಅಡೆ ತಡೆ ಇಲ್ಲದೆ ಸಾಗಿತ್ತು ದೀಕ್ಷಿತ್ ರ ನಿತ್ಯ ಪೂಜೆ, ಆರಾಧನೆಯನ್ನ ನೋಡುತ್ತಾ ಕ್ರಮೇಣ ರಾಘವನಿಗೂ ದೇವರಲ್ಲಿ ನಂಬಿಕೆ ಬಲಿಯತೊಡಗಿತ್ತು. ಅದಕ್ಕೆ ಪೂರಕವೆಂಬ0ತೆ ಪದ್ಮ ಅವರು ತೀರಿಕೊಂಡ ದಿನದಂದು ಪಿಂಡಾ0ಡನ ಮೂಲಕ ದೈವ ಸಾಕ್ಷಾತ್ಕಾರದ ಅನುಭವವಾಗಿತ್ತು. ಮುಂದೆ ತಾನೂ ತನ್ನ ಮಾವನಂತೆ ದೈವಿ ಸಾಕ್ಷಾತ್ಕಾರ ಪಡೆಯಬೇಕು ಶ್ರೀ ಚಕ್ರ ಯಂತ್ರ ಪೂಜೆ ಮಾಡಬೇಕು. ದೇವಿ ಉಪಾಸನೆ ಮಾಡಬೇಕು ಮಂತ್ರೋಪದೇಶ ತನಗೂ ಆಗಬೇಕು ಅಂತ ದೀಕ್ಷಿತ್ ರಲ್ಲಿ ಕೇಳಿದಾಗ ದೇವಿಯ ಪ್ರೇರಣೆ ಆಗದ ಹೊರತು ನಾನು ಏನನ್ನೂ ಮಾಡುವುದಿಲ್ಲವೆಂದು ನಿರಾಕರಿಸಿಬಿಡುತ್ತಾರೆ ದೀಕ್ಷಿತ್ ರು. ಆದರೆ, ರಾಘವ ದೇವಸ್ಥಾನದಲ್ಲಿ ಸಿಕ್ಕ ಕಾರ್ಯಗಾರದ ಚೀಟಿಯ ಜಾಹೀರಾತಿನಂತೆ ಭವಾನಿ ಶಂಕರ ಭಟ್ ಅನ್ನುವವರಲ್ಲಿ ವಿಷ್ಣು ಸಹಸ್ರ ನಾಮದ ಉಪದೇಶ, ಅದರ ಅಂಗನ್ಯಾಸ, ಕರನ್ಯಾಸ, ಮಹಾ ಗಣಪತಿ ಮಂತ್ರ ಉಪದೇಶ, ಮಹಾಲಕ್ಷ್ಮಿ, ಮಹಾ ಸರಸ್ವತಿ, ಗಾಯಿತ್ರಿ ಮಂತ್ರ, ಬಾಲ ತ್ರಿಪುರ ಸುಂದರಿ, ದಂಡಕ, ಮಂತ್ರಿಣಿ, ಶೋಡಶಾಕ್ಷರಿ ಮಂತ್ರಗಳ ಉಪದೇಶ ಪಡೆದು ನಂತರ ಅವರಲ್ಲೇ ಒಂದು ಸ್ಪಟಿಕದ ಶ್ರೀ ಚಕ್ರ ಯಂತ್ರವನ್ನೂ ಖರೀದಿಸಿ ಮನೆಗೆ ಬಂದು ಪ್ರತಿಷ್ಠಾಪನೆ ಮಾಡಿ ಗುರುಗಳು ಹೇಳಿಕೊಟ್ಟಂತೆ ಜಪ, ತಪ, ಪೂಜೆ, ಧ್ಯಾನ, ಯೋಗ ಮಾಡುತ್ತಾ ಇರುತ್ತಾನೆ. ಪೂರ್ತಿ ತನ್ನನ್ನೇ ತಾನು ಬದಲಾವಣೆ ಮಾಡಿಕೊಂಡು.

ಹೀಗಿರುವಾಗ ಅದೊಂದು ದಿನ ಕಮಲಮ್ಮನ ಭೇಟಿಯಾದ ಮಾನಸಳಿಗೆ ರಾಘವನ ಬಗ್ಗೆ ಕೆಲವು ಅನುಮಾನಕರ ವಿಷಯ ತಿಳಿದು ಅದನ್ನ ಸ್ಪಷ್ಟ ಪಡಿಸಿಕೊಳ್ಳಲು ಶಶಾಂಕ್ ಹಾಗೂ ಆತನ ತಂದೆ ಸಬ್ ಇನ್ಸ್ಪೆಕ್ಟರ್ ನ ಸಹಾಯ ಕೇಳಿ ಹೋದಾಗ ಅಲ್ಲಿ ಶಶಾಂಕ್ ನಿಂದ ರಾಘವನ ಕೆಲವು ವಿಚಾರ ತಿಳಿದು ಅದನ್ನ ಸರಿಯಾಗಿ ದೃಢ ಪಡಿಸಿಕೊಳ್ಳದೆ ಆತುರದಿಂದ ಅವನನ್ನು ತೊರೆಯಲು ನಿರ್ಧಾರ ಮಾಡಿ ಪತ್ರ ಬರೆದಿಟ್ಟು ತವರ ಮನೆ ಸೇರುತ್ತಾಳೆ. ಇಲ್ಲಿ ನನಗೊಂದು ವಿಚಾರಕ್ಕೆ ಸ್ಪಷ್ಟನೆ ಸಿಗಲಿಲ್ಲ. ಕಮಲಮ್ಮ ಅಡುಗೆ ಕೆಲಸದವಳೇ ಆದರೂ ಅವಳು ಮನೆಯವಳಂತೆ ಕಾಣುತ್ತಿದ್ದ ರಾಘವನ ವಿಚಾರಗಳೆಲ್ಲ ಅವಳಿಗೆ ಗೊತ್ತಿದ್ದೇ ಇರುತ್ತದೆ ಅಂತಹ ಸೂಕ್ಷ್ಮ ಎಳೆ ಹಿಡಿದು ಕಮಲಮ್ಮನಲ್ಲೆ ರಾಘವನ ಬಗ್ಗೆ ಇರುವ ಗೊಂದಲಗಳನ್ನು ಪರಿಹಾರ ಮಾಡಿಕೊಳ್ಳುವ ಆಯ್ಕೆ ಇತ್ತು ಆದರೂ ಅವಳು ಯಾಕೆ ಶಶಾಂಕ್ ನ ಹತ್ತಿರ ಹೋದಳು? ಇದು ಕಥೆ ಮುಂದುವರೆಸಲು ಆ ಸನ್ನಿವೇಶ ಸೃಷ್ಟಿ ಅನಿಸಿತು.
ರಾಘವನನ್ನು ತೊರೆದ ಮಾನಸ ಶಶಾಂಕ್ ನೊಂದಿಗೆ ಭಾವನಾತ್ಮಕವಾಗಿ ಹತ್ತಿರ ಆಗಿತ್ತಾಳೆ ಎಷ್ಟರ ಮಟ್ಟಿಗೆ ಅಂದರೆ, ರಾಘವನೊಂದಿಗೆ ಮುಂದೆ ಸಂಸಾರ ಮಾಡಲು ಸಾಧ್ಯವಿಲ್ಲ ಅವನಿಗೆ ವಿಚ್ಚೆದನ ಕೊಟ್ಟು ಎರಡನೇ ಮದುವೆ ಆದರೆ ಅದು ಶಶಾಂಕ್ ನೊಂದಿಗೆ ಅನ್ನುವ ಮಟ್ಟಿಗೆ.
ಈ ನಡುವೆ ಮಾನಸಳ ಆಗಲುವಿಕೆಯಿಂದ ಬೇಸತ್ತ ರಾಘವ ದೀಕ್ಷಿತ್ ರೊಂದಿಗೆ ಪೂಜೆ, ಶೆಟ್ಟಿಯೊಂದಿಗೆ ತೋಟದ ಕೆಲಸ, ಶಾಸ್ತ್ರೀ ಗಳ ಜೊತೆಗೆ ಮಾತು ಕಥೆಯಲ್ಲಿ ಕಾಲ ಕಳೆದು ಒಮ್ಮೆ ದೀಕ್ಷಿತ್ರೊಂದಿಗೆ ಶೃಂಗೇರಿಗೆ ಹೋಗಿ ಅಲ್ಲಿ ಶಿಷ್ಯ ಸ್ವೀಕಾರದ ಕಾರ್ಯಕ್ರಮಗಳನ್ನೆಲ್ಲ ನೋಡಿದ ಅವನಿಗೆ ಸನ್ಯಾಸ ದೀಕ್ಷೆ ಪಡೆಯುವ ಹಂಬಲವಾಗುತ್ತದೆ.ಅದರಂತೆ ಹೃಶಿಕೇಶದ ಯೋಗ ನಾಥ ತೀರ್ಥರಲ್ಲಿ ಸನ್ಯಾಸ ದೀಕ್ಷೆ ಬೇಡಿ ಹೋಗುತ್ತಾನೆ. ಅಲ್ಲಿ ಗುರುಗಳು 20 ದಿವಸ ಅವನನ್ನು ಇರಿಸಿಕೊಂಡು ಸನ್ಯಾಸ ದೀಕ್ಷೆಯ ಮಹತ್ವ ಅದರ ಸಿದ್ಧಿ, ಸಾಧನೆಗಳ ಬಗೆಗೆ ಮನವರಿಕೆ ಮಾಡಿ ದೇವಿ ಪ್ರೇರಣೆಯಂತೆ ಅವನನ್ನು ಪುನಃ ಊರಿಗೆ ವಾಪಸ್ ಕಳಿಸಿಕೊಡುತ್ತಾರೆ.
ಇತ್ತ ಮಾನಸಳಿಗೆ ಮನೋವೈದ್ಯರಾದ ಡಿಸೋಜರ ಮೂಲಕ ರಾಘವನ ವಿಚಾರ ಎಲ್ಲಾ ಸ್ಪಷ್ಟವಾಗಿ, ಪಿಂಡಾ0ಡನ ಸಲಹೆಯಂತೆ ಶಶಾಂಕ್ ನಿಗೆ ತನ್ನ ನಿರ್ಧಾರ ತಿಳಿಸಿ ರಾಘವನೊಂದಿಗೆ ಸಂಸಾರ ಮಾಡಲು ತೀರ್ಮಾನ ಮಾಡುತ್ತಾಳೆ. ಅಲ್ಲಿ ಶಾಸ್ತ್ರೀಗಳ ಅಂತಿಮ ಆಸೆಯೂ ಇರುತ್ತದೆ.
ಹೀಗೆ ಕಾದಂಬರಿಯಲ್ಲಿ ಅನೇಕ ತರ್ಕವಾದ ಪ್ರಶ್ನೆಗಳು ಉದ್ಭವವಾಗುತ್ತಾ ಅವುಗಳಿಗೆ ಪಿಂಡಾಡನೆಂಬ ಆಧ್ಯಾತ್ಮಿಕ ಸಾಧಕ, ದೀಕ್ಷಿತ್ ರ ದೇವಿ ಉಪಾಸನ ಕ್ರಮ, ಹಾಗೂ ವೈಜ್ಞಾನಿಕ ತತ್ವ ಆಧಾರಿತ ಡಿಸೋಜರ ಮನೋವೈಜ್ಞಾನಿಕ ವಿಶ್ಲೇಷಣೆ, ಶಾಸ್ತ್ರೀ ಗಳ ಯಂತ್ರ, ತಂತ್ರ, ಕುಂಕುಮ, ನಿಂಬೆಹಣ್ಣು ಮಂತ್ರಿಸುವುದರ ಮೂಲಕ ಕೊನೆಗೆ ನಾಸ್ತಿಕರಾದ ದೇವರನ್ನೇ ಸುಳ್ಳು ಅನ್ನುವ ಪವಾಡ ಬಯಲು ಮಾಡುವ ವಿಭoಕರ ಮಿಶ್ರ ಅವರ ಒಬ್ಬಳೇ ಮಗಳು ಹೃದಯದ ಸಮಸ್ಯೆಯಿಂದ 99% ಡಾಕ್ಟರ್ ಉಳಿಯುವ ಭರವಸೆ ಕೈ ಚೆಲ್ಲಿ ದೇವರ ಮೇಲೆ ಭಾರ ಹಾಕಿದಾಗ ಅವರ ಪತ್ನಿಯ ಕೋರಿಕೆಯಂತೆ ದೀಕ್ಷಿತ್ ರಿಂದ ಕುಂಕುಮ ಮಂತ್ರಿಸಿ ತೆಗೆದುಕೊಂಡು ಹೋದ ನಂತರ ಆಶ್ಚರ್ಯಕರ ರೀತಿಯಲ್ಲಿ ಅವರ ಮಗಳು ಅಂಜಲಿ ಸಾವಿನಿಂದ ಪಾರಾಗ್ತಾಳೆ. ಇವೆಲ್ಲದರ ನೈಜ ಓದಿನ ಅನುಭವಕ್ಕಾಗಿ ಪುಸ್ತಕ ಓದಲೇ ಬೇಕು. ಕೊನೆಯಲ್ಲಿ ನಾನು ಆಧರಿಸಿದ 10 ಬುಲೆಟಿನ್ ಅಂಶಗಳು.
1) ವೈಜ್ಞಾನಿಕ ಹಾಗೂ ಮನೋವೈಜ್ಞಾನಿಕ ವಿಚಾರಗಳೊಂದಿಗೆ ಲೋಕಿಕ ಅನೇಕ ತಾರ್ಕಿಕ ಪ್ರಶ್ನೆಗಳಿಗೆ ಪರಿಹಾರ ಕಾಣಸಿಗುತ್ತದೆ.
2) ಶ್ರೀ ಚಕ್ರ ಉಪಾಸನೆಯಲ್ಲಿ ಅನುಸರಿಸಬೇಕಾದ ಪದ್ದತಿ, ಕ್ರಮಗಳ ವಿವರಣೆ.
3) ದೇವಿ ಆರಾಧನೆಯಲ್ಲಿ ಉಪಾಸಕರು ಅನುಸರಿಸಬೇಕಾದ ನಿತ್ಯ ನಿಯಮಗಳು ಪಂಚದಶಿ, ಶೋಡಸಿ, ಅಷ್ಟಾವರಣ, ಆವರಣ ಪೂಜಾ ಕ್ರಮಗಳ ವಿವರಣೆ.
4) ಮಂತ್ರ ಉಪದೇಶ ಯಾರಿಗೆಲ್ಲ ಮಾಡಬೇಕು.ಉಪದೇಶ ಪಡೆದವರು ಅನುಸರಿಸುವ ಕ್ರಮಗಳ ವಿವರಣೆ.
5) ವೈಜ್ಞಾನಿಕವಾಗಿ ಗ್ರಹಗಳು, ಅನ್ಯಗ್ರಹಗಳು ಅಲ್ಲಿ ಜೀವಿಸುವ ಜೀವಿಗಳ ಜೀವನ ಕ್ರಮ ಅಣು, ಕಣಗಳ ಕುರಿತು.
6) ಡಿಸೋಜರವರ ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ನಯನ ಅನ್ನುವ ಪಾತ್ರ ಸೃಷ್ಟಿಯ ಕಾರಣ ಬೇಧಿಸಿ ಅದನ್ನ ಸೂಕ್ತ ಸಂದರ್ಭದಲ್ಲಿ ಮಾನಸ, ರಾಘವ್ ನಿಗೆ ಮನವರಿಕೆ ಮಾಡಿಕೊಡುವುದು.
7) ವಿಭ0ಕರ ಮಿಶ್ರ ಅವರ ಪವಾಡ ಬಯಲು ಮಾಡುವ ವಿಧಾನ ಕೊನೆಯಲ್ಲಿ ಮಗಳಿಗಾಗಿ ತಾವು ದೇವರಲ್ಲಿ ಮೊರೆ ಹೋಗೋದು ದೀಕ್ಷಿತ್ ರ ಮಂತ್ರಿಸಿದ ಕುಂಕುಮದಿಂದ ಮಗಳ ಪ್ರಾಣ ಉಳಿದ ನಂತರ ಅವರ ನಂಬಿಕೆಯಲ್ಲಿ ಬದಲಾವಣೆ ಆಗಿದ್ದು.
8) ವಿಜ್ಞಾನ ಎಷ್ಟೇ ಮುಂದುವರೆದರೂ ದೇವರೆನ್ನುವ ಅದ್ಬುತ ಶಕ್ತಿಯಿಂದಲೇ ಸೃಷ್ಟಿಯ ಪ್ರತಿ ಕಾರ್ಯಗಳೂ ನೆಡೆಯುತ್ತಿವೆ. ಅವರು ದೇವರಿಲ್ಲ ಎಂದು ಸಾಬೀತು ಪಡಿಸಿಯೂ ಪ್ರತಿ ಉಡಾವಣೆಯಲ್ಲೂ ವಿಜ್ಞಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುವಲ್ಲಿ ಅವರೂ ಕೂಡ ನಮ್ಮನ್ನ ನಿಯಂತ್ರಿಸುವ ಶಕ್ತಿ ಒಂದಿದೆ ಅನ್ನುವ ನಂಬಿಕೆ.
9) ಪಿಂಡಾ0ಡ ಪಾತ್ರದ ಹೇಳಿಸಿರುವ ಆಧ್ಯಾತ್ಮಿಕ ವಿವರಣೆ ಹೃದಯ ಸ್ಪರ್ಶಿ.
10) ಸಮಯ, ಸಂದರ್ಭ, ಸನ್ನಿವೇಶಗಳು ಮನುಷ್ಯನಲ್ಲಿ ಮಹತ್ತರ ಬದಲಾವಣೆ ತರುತ್ತವೆ ಯಾವುದೂ ನಾವು ಅಂದುಕೊಂಡಂತೆ ಇರುವುದಿಲ್ಲ. ಎಲ್ಲವೂ ಪೂರ್ವ ನಿರ್ಧಾರಿತ ಯಾವ ಘಳಿಗೆಗೆ ಏನು ಆಗಬೇಕು ಅಂತ ಇರುತ್ತದೆಯೋ ಅದೇ ಆಗುವುದು ಇವೆಲ್ಲವುಗಳ ಪರಿಚಯ ಪದ್ಮ, ಸಾವು, ರಾಘವ್ ನ ಸಂಸಾರಿಕ ವಿರಸ, ಮಿಶ್ರ ಅವರ ಮಗಳು ಬದುಕಿ ಉಳಿದ ಸನ್ನಿವೇಶ. ಹೀಗೆ ಬಹಳಷ್ಟು ಅಂಶಗಳು ಕಣ್ಣ ಮುಂದೆ ಸುಳಿಯುತ್ತವೆ.
- ಪಾರ್ವತಿ ಜಗದೀಶ್
