‘ನವೀನ ಮಾದರಿಯ ಅಪರಾಧಗಳು’ ಅಂಕಣ (ಭಾಗ-೧)

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮೋಸದ ಬಲೆಗಳು ನವೀನ ರೀತಿಯಲ್ಲಿ ಹೇಗಿರುತ್ತೆ ಅನ್ನೋದನ್ನ ‘ನವೀನ ಮಾದರಿಯ ಅಪರಾಧಗಳು’ ಅಂಕಣದ ಮೂಲಕ ಪೊಲೀಸ್ ಹಾಗೂ ಲೇಖಕರು ಆದ ತಾರೇಶ ಡಿ ಈ ಅವರು ಓದುಗರಿಗೆ ತಿಳಿಸಿಕೊಡಲಿದ್ದಾರೆ, ಆಕೃತಿಕನ್ನಡದಲ್ಲಿ ತಪ್ಪದೆ ಅಂಕಣವನ್ನು ಓದಿ…

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ, ಮನುಷ್ಯನ ಅತೀ ಆಸೆ ಹಾಗೂ ಆದಷ್ಟು ಶೀಘ್ರವಾಗಿ ಸಿರಿವಂತರಾಗಬೇಕೆನ್ನುವ ದುರಾಸೆಗಳಿಂದಾಗಿ ಇಂದು ಜನ ಮೋಸಹೋಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಮುಗ್ಧರು ಯಾವುದೇ ದುರಾಸೆ ಇಲ್ಲದೇ ಹೋದರೂ ತಮ್ಮ ಮುಗ್ಧತೆಯ ಕಾರಣದಿಂದಾಗಿ ಮೋಸಹೋಗುತ್ತಿರುವುದು ದುರಾದೃಷ್ಟಕರ. ನಮ್ಮ ನಡುವೆ ನಡೆಯುತ್ತಿರುವ ನವೀನ ಮಾದರಿಯ ಅಪರಾಧಗಳು.

 

ಮೊಬೈಲ್ ಮೆಸೇಜ್‍ಗಳ ಮುಖಾಂತರ : ಇಂದು ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್ ಫೋನ್‍ಗಳು ಸಾಮಾನ್ಯವಾಗಿವೆ.

• ಮೊದಲನೆಯದಾಗಿ ಈ ಮೆಸೇಜ್ ಅನ್ನು 10 ಜನಕ್ಕೆ ಕಳುಹಿಸಿ ಅಥವಾ 15 ಜನಕ್ಕೆ ಕಳುಹಿಸಿ ಇಲ್ಲವಾದಲ್ಲಿ ಶನಿದೇವರು ನಿಮಗೆ ಒಳ್ಳೆಯದು ಮಾಡುವುದಿಲ್ಲ ಹಾಗೆ ಹೀಗೆ ಎಂದು ಪ್ರತಿ ನಿತ್ಯ ಮೆಸೇಜ್‍ಗಳು ಬರ್ತಾ ಇರುತ್ತವೆ ಇದರಿಂದ ನಮಗೆ ಯಾವುದೇ ನಷ್ಟಗಳು ಇಲ್ಲದಿದ್ದರೂ ಕಿರಿ ಕಿರಿ ಅಂತೂ ತಪ್ಪಿದ್ದಲ್ಲ.

• ಯಾವುದೋ ಫೋಟೊ ಹಾಕಿ ಇವರು ಕಾಣೆಯಾಗಿದ್ದಾರೆ, ಇವರು ತಲುಪುವವರೆಗೂ ಶೇರ್ ಮಾಡಿ..

• ಕಂಗ್ರಾಜ್ಯುಲೇಷನ್ ನಿಮ್ಮ ನಂಬರ್ ಸೆಲೆಕ್ಟ್ ಆಗಿದೆ, ನಿಮಗೆ ಈ ಗಾಡಿ ಲಾಟರಿ ಬಂದಿದೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ನೊಡಿ, ಲಿಂಕ್‍ಗೆ ಹೋದರೆ ಮುಗೀತು ನಿಮ್ಮ ಕತೆ ಗೋವಿಂದ.

• ಲಕ್ಕಿ ಕೂಪನ್‍ನಲ್ಲಿ ನಿಮ್ಮ ನಂಬರ್ ಸೆಲೆಕ್ಟ್ ಆಗಿದೆ, ಐವತ್ತು ಸಾವಿರ ಮೌಲ್ಯದ ಬೆಳ್ಳಿ ಆಭರಣಗಳನ್ನು ಕೇವಲ ನಿಮಗೆ ಐದು ಸಾವಿರ ರೂಗಳಿಗೆ ನೀಡುತ್ತಿದ್ದೇವೆ. ನೀವು ವಸ್ತುಗಳನ್ನು ಕೊರಿಯರ್ ಮುಖಾಂತರ ಪಡೆಯುವಾಗ ಹಣ ನೀಡಿದರೆ ಸಾಕು, ಹಣ ನೀಡಿ ಪಡೆದರೆ ಅಲ್ಲಿ ನಕಲಿ ಆಭರಣಗಳಿರುತ್ತವೆ.

• ಪ್ರಧಾನ ಮಂತ್ರಿಗಳ ಈ ಯೋಜನೆಯಲ್ಲಿ ಉಚಿತವಾಗಿ ಎಲ್ಲರಿಗೂ 5000 ರೂಗಳನ್ನು ನೀಡಲಾಗುತ್ತಿದೆ ಕೂಡಲೇ ಈ ಕೆಳಗಿನ ಲಿಂಕ್‍ನಲ್ಲಿ ಲಾಗ್ ಇನ್ ಆಗಿ, ಲಾಗ್ ಇನ್ ಆದ ನಂತರ ಈ ಮೆಸೇಜ್ ಅನ್ನು ಕನಿಷ್ಟ 10 ಜನರಿಗೆ ಕಳುಹಿಸಿ ನಂತರ ನಮ್ಮ ಕಾಂಟಾಕ್ಟ್‍ನಲ್ಲಿರುವ ಎಲ್ಲಾ ನಂಬರ್‍ಗೂ ಆ ಮೆಸೇಜ್ ಆಟೋಮ್ಯಾಟಿಕ್ ಆಗಿ ರವಾನೆಯಾಗಿ ಮೊಬೈಲ್ನಲ್ಲಿ ಇದ್ದ ಕರೆನ್ಸಿ ಎಲ್ಲಾ ಖಾಲಿಯಾಗಿರುತ್ತದೆ.

• ಯಾರಿಗೋ ಕಿಡ್ನಿ ಯ ಅಥವಾ ಹೃದಯದ ಸಮಸ್ಯೆ ಇದೆ ಈ ಸಂದೇಶವನ್ನು ಹತ್ತು ಜನರಿಗೆ ಕಳುಹಿಸಿದರೆ ವಾಟ್ಸಪ್ ಕಂಪೆನಿ ಒಂದು ಸಂದೇಶಕ್ಕೆ ಇಂತಿಷ್ಟು ಹಣದಂತೆ ಸವiಸ್ಯೆ ಇರುವವರಿಗೆ ಹಣ ನೀಡುತ್ತದೆ ಇತ್ಯಾದಿ..

ಇವು ಮೊಬೈಲ್ ಕರೆನ್ಸಿ ಜೊತೆಗೆ ನಮ್ಮ ನೆಮ್ಮದಿ ಹಾಳು ಮಾಡುವವುಗಳಾದರೆ ನಮ್ಮ ಅಕೌಂಟ್‍ನಲ್ಲಿರುವ ನಮ್ಮ ಹಣವನ್ನೆಲ್ಲವನ್ನು ದೋಚುವ ಜನರೂ ಕೂಡ ಇದ್ದಾರೆ.

ಬ್ಯಾಂಕ್ ಖಾತೆಗೆ ಬೀಳುವ ಕನ್ನದ ವಿಧಾನಗಳು :

• ಯಾರೋ ಒಬ್ಬ ವ್ಯಕ್ತಿ ನಿಮ್ಮ ನಂಬರ್‍ಗೆ ಕರೆ ಮಾಡಿ ನಾನು ನಿಮ್ಮ ಬ್ಯಾಂಕ್ ಮ್ಯಾನೆಜರ್ ಮಾತನಾಡುತ್ತಿದ್ದೇನೆ ಎಂದು ತನ್ನ ಪರಿಚಯ ಮಾಡಿಕೊಂಡು ನಿಮ್ಮ ನಂಬಿಕೆ ಗಳಿಸಿ ನಂತರ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂತಲೋ ಅಥವಾ ನಿಮ್ಮ ಎ.ಟಿ.ಎಂ ಕಾರ್ಡ್‍ನಲ್ಲಿ ಏನೋ ಸಮಸ್ಯೆ ಆಗಿದೆ ಎಂತಲೋ ಹೇಳಿ ಎಂದು ನಿಮಗೆ ನಂಬಿಕೆ ಬರಲು ನಿಮ್ಮ ಎ.ಟಿ.ಎಂ ಕಾರ್ಡಿನ ಮೊದಲ ಕೆಲವು ಸಂಖ್ಯೆಗಳನ್ನು ಹೇಳುತ್ತಾರೆ ನೀವು ನಂಬಿಕೆ ಬಂದು ಉಳಿದ ನಂಬರ್‍ಗಳನ್ನು ಹೇಳುವಂತೆ ಪುಸಲಾಯಿಸುತ್ತಾನೆ ನಂತರ ಕೆಲವು ನಿಮಿಷಗಳ ನಂತರ ನಿಮ್ಮ ಅಕೌಂಟ್‍ನಲ್ಲಿ ಇದ್ದ ಹಣವೆಲ್ಲಾ ಖಾಲಿ ಆಗಿರುತ್ತದೆ.

• ಕೆಲಸಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ವ್ಯಕ್ತಿಯೊಬ್ಬರಿಗೆ ಒಂದು ಕರೆ ಬರುತ್ತದೆ ಯಾವುದೋ ಪ್ರತಿಷ್ಟಿತ ಕಂಪೆನಿಯ ಹೆಸರೇಳಿಕೊಂಡು ಪರಿಚಯಿಸಿಕೊಳ್ಳುವ ವ್ಯಕ್ತಿ ನೀವು ಯಾವುದೋ ದೇಶಕ್ಕೆ ಹೊರಡಲು ಸಿದ್ದರಾಗಿ ಎಂದು ಕರೆ ಕೊನೆಗೊಳ್ಳುತ್ತದೆ. ಕೆಲವು ನಿಮಿಷಗಳ ನಂತರ ಮತ್ತೆ ಕರೆ ಬರುತ್ತದೆ ನೀವು ಹೊರಡಬೇಕಿರುವ ವಿಮಾನದ ಟಿಕೆಟ್ ಹಣಕ್ಕಾಗಿ ನೀವು ಒಂದಷ್ಟು ಮುಂಗಡ ಹಣ ನಿಡಬೇಕೆಂದು ಹೇಳಲಾಗುತ್ತದೆ. ಹಣ ನೀಡಿದ ನಂತರ ನಂಬರ್ ಸ್ವಿಚ್ ಆಫ್.

• ಮ್ಯಾಟ್ರಿಮೊನಿ ವೆಬ್‍ಸೈಟ್/ಫೇಸ್‍ಬುಕ್‍ಗಳಲ್ಲಿ ಪರಿಚಯವಾಗುವ ಹೆಣ್ಣುಮಕ್ಕಳು ಏನಾದರೂ ನೆಪಹೇಳಿ ಲಕ್ಷಾಂತರ ರೂಪಾಯಿಗಳನ್ನು ದೋಚಿರುವ ಹಲವಾರು ಉದಾಹರಣೆಗಳಿವೆ. ನಾನು ಈ ಲೇಖನವನ್ನು ಸಿದ್ದಪಡಿಸುವ ಹೊತ್ತಿಗೆ ಮಡಿಕೇರಿಯ ಒಬ್ಬ ವಕೀಲರಿಂದ ಮಹಿಳೆಯೊಬ್ಬಳು ಮೂವತೈದು ಲಕ್ಷ ರೂ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು.

• ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಖಾಸಗಿ ಫೋಟೊಗಳನ್ನು ಪಡೆದು ಅದರ ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಗೇನು ಕಡಿಮೆಯಿಲ್ಲ.

• ಫೇಸ್‍ಬುಕ್‍ನಲ್ಲಿ ಪರಿಚಯವಾಗುವ ವ್ಯಕ್ತಿಗಳು ಮುಂದೆ ಆಪ್ತರಾಗಿ ಫೋನ್ ನಂಬರ್‍ಗಳನ್ನು ಪಡೆದುಕೊಂಡು ಗಿಫ್ಟ್‍ಗಳನ್ನು ಕಳುಹಿಸುವ ನೆಪದಲ್ಲಿ ಸ್ನಾನದ ಕೊಠಡಿಗೆ/ನಿಮ್ಮ ಖಾಸಗಿ ಕೊಠಡಿಗೆ ಇಡಲು ಯಾವುದೋ ವಸ್ತುವನ್ನು ಕೊಡುವಂತೆ ನಟಿಸಿ ಅದರೊಳಗೆ ಸಿ.ಸಿ ಕ್ಯಾಮೆರಾವನ್ನು ಇಟ್ಟು ನಿಮ್ಮ ಖಾಸಗಿ ಫೋಟೊಗಳನ್ನು ತೆಗೆದು ಅದರಿಂದ ನಿಮಗೆ ತೊಂದರೆಗಳನ್ನು ನೀಡಬಹುದು.

• ನಿಮ್ಮ ಖಾತೆಗೆ ಒಂದೆರಡು ಸಾವಿರ ರೂಗಳನ್ನು ಹಾಕಿ ಅದನ್ನು ಕೈತಪ್ಪಿನಿಂದ ಹಾಕಿರುವುದಾಗಿ ಹೇಳಿ ವಾಪಸ್ಸು ಅವರ ಖಾತೆಗೆ ಹಾಕುವಂತೆ ಪುಸಲಾಯಿಸಬಹುದು ಆಗ ನೀವು ನಿಮ್ಮ ಮೊಬೈಲ್ ಮುಖಾಂತರ ಹಣವನ್ನು ವಾಪಸ್ಸು ಹಾಕುವಾಗ ನಿಮ್ಮ ಪಿನ್ ಪಡೆದು ನಿಮ್ಮನ್ನು ವಂಚಿಸುವ ಅವಕಾಶಗಳು ಹೇರಳವಾಗಿರುತ್ತವೆ.

ಇದುವರೆವಿಗೂ ವಾಟ್ಸಪ್‍ಗಳಲ್ಲಿ ಮೆಸೇಜ್ ಫಾರ್ವರ್ಡ್ ಮಾಡಿರುವುದರಿಂದ ಯಾರಿಗಾದರೂ ಹಣ ಬಂದಿದೆಯೇ ಎಂದರೆ ಇಲ್ಲ… ಯಾವುದಾದರು ಸರ್ಕಾರದ ಸಂಸ್ಥೆಗಳು ಅಥವಾ ಖಾಸಗಿ ಸಂಸ್ಥೆಗಳು ಕಳುಹಿಸುವ ಲಿಂಕ್‍ನಿಂದ ನಿಮಗೆ ಕರೆನ್ಸಿ ಅಥವಾ ಹಣ ನಿಮ್ಮ ಖಾತೆಗೆ ಬಂದಿದೆಯೇ ಎಂದರೆ ಇಲ್ಲ ಆದರೂ ಜನ ಸರಳವಾಗಿ ಮೋಸ ಹೋಗುತ್ತಾರೆ ಮೆಸೇಜ್‍ಗಳನ್ನು ಫಾರ್ವರ್ಡ್ ಮಾಡಿಬಿಡುತ್ತಾರೆ. ಇವುಗಳಿಂದ ಸ್ವಲ್ಪ ಮಟ್ಟಿಗಿನ ಮಾನಸಿಕ ನೆಮ್ಮದಿ ಹಾಳಾಗಬಹುದಾಗಿದೆ ಆದರೆ ಒಂದು ವೇಳೆ ನಮ್ಮ ಬ್ಯಾಂಕ್ ಖಾತೆಯಿಂದ ನಾವು ಕಷ್ಟಪಟ್ಟು ದುಡಿದಿರುವ ಹಣವೆಲ್ಲಾ ಹೊರಟುಹೋದರೆ ಏನಾಗಬಹುದು ? ನಮ್ಮ ಖಾಸಗಿ ಫೋಟೊಗಳನ್ನು ಯಾರಾದರೂ ಪಡೆದು ಅವುಗಳ ಮುಖಾಂತರ ನಮ್ಮನ್ನು ಬ್ಲಾಕ್‍ಮೇಲ್ ಮಾಡಲು ಪ್ರಾರಂಭಿಸಿದರೆ ಏನಾಗಬಹುದು ? ಎಂತಹುದೇ ಸನ್ನಿವೇಶಗಳಲ್ಲಿ ನೀವು ಅಪರಿಚಿತರ ಬಳಿ ನಿಮ್ಮ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳದಿರಿ ಒಂದು ವೇಳೆ ಕೈತಪ್ಪಿನಿಂದ ಅಥವಾ ಮೈಮರೆತು ನಿಮ್ಮ ಯಾವುದೇ ಮಾಹಿತಿ ಯಾರಿಗಾದರೂ ದೊರೆತು ಅವರು ನಿಮಗೆ ಮೋಸ ಮಾಡಲು/ತೊಂದರೆ ನೀಡಲು ಪ್ರಾರಂಭಿಸಿದ್ದಾರೆಂದು ತಿಳಿದ ತಕ್ಷಣ ಅವರ ಮೋಸದ ಬಲೆಗೆ ಬೀಳದೇ ಪೊಲೀಸರಿಗೆ ದೂರು ನೀಡಿ…

ಅತಿ ಆಸೆ ಗತಿ ಗೇಡು ಅನ್ನುವ ನಾಣ್ಣುಡಿ ನೆನಪಿನಲ್ಲಿರಲಿ, ಸದಾ ಜಾಗೃತರಾಗಿರಿ. ಆಧುನಿಕತೆ ಮತ್ತು ತಂತ್ರಜ್ಞಾನದ ಪರಿಣಾಮದಿಂದ ಹೊಸ ಹೊಸ ಅಪರಾಧಗಳು ಸೃಷ್ಠಿಯಾಗುತ್ತಲಿರುತ್ತವೆ. ತುಂಬಾ ಲಾಭದ ಆಮಿಷ ಬಂದ ತಕ್ಷಣ ಜಾಗೃತರಾಗಿ.


  • ತಾರೇಶ ಡಿ ಈ – ಪೊಲೀಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading