ಕೋರನಾ ಬಂದಾಗ ಕಂಪನಿ ರಂಗಭೂಮಿ ಕಲಾವಿದರ ಬದುಕು ನೂರಾಬಟ್ಟೆಯಾಗಿ ಹೋಗಿತ್ತು. ಅದರಿಂದ ಸುಧಾರಿಸಿಕೊಂಡ ಕಂಪನಿ ಮಾಲೀಕ ಮಾಲತೇಶ ಮತ್ತೆ ನಾಟಕಕ್ಕೆ ಧೈರ್ಯ ಮಾಡಿ ಎಲ್ಲ ಕಲಾವಿದರನ್ನು ಸೇರಿಸಿ ನಾಟಕ ಪ್ರದರ್ಶನವಾಗಬೇಕು ಅಷ್ಟೋತ್ತಿಗೆ ಸರಕಾರಿ ವಾಹನದಿಂದ ಕೆಲವು ವ್ಯಕ್ತಿಗಳು ಕಂಪನಿ ಮಾಲಕನ ಮಾಲತೇಶನ ಹತ್ತಿರ ಬಂದರು, ಮುಂದೇನಾಯಿತು ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಸಣ್ಣಕತೆಯಲ್ಲಿ ಕಲಾವಿದರ ಬದುಕಿನ ಚಿತ್ರಣವಿದೆ, ತಪ್ಪದೆ ಮುಂದೆ ಓದಿ…
ಬಶೀರ್ ಆಟೋದಲ್ಲಿ ಕುಳಿತು ತಮ್ಮ ಕಂಪನಿಯಿಂದ ಇದೇ ಮೊದಲ ಬಾರಿಗೆ ಮಾಡುತ್ತಿರುವ ಪೌರಾಣಿಕ ‘ಕುರುಕ್ಷೇತ್ರ’ ಹೊಸ ನಾಟಕದ ಅಬ್ಬರದ ಪ್ರಚಾರವನ್ನ್ಲು ಮಾಡುತ್ತಾ ಸಾಗಿದ್ದನು. ಬನಶಂಕರಿ ದೇವಸ್ಥಾನದ ರಥದ ಬೀದಿ ಹಾಗೂ ದೇವಸ್ಥಾನದ ಇತರೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲೂ ಜಾತ್ರೆಗಾಗಿ ಹಾಕಿದ ವಿವಿಧ ಅಂಗಡಿಗಳ ಜನಸಂದಣಿಯ ಹಾದಿಯಲ್ಲಿ ಆಟೋ ನಿಧಾನವಾಗಿ ನಡೆದಿತ್ತು. ಆಟೋದಲ್ಲಿ ಕುಳಿತು “ನಮ್ಮ ಕಂಪನಿಯಿಂದ ಆಡುವ ನಾಟಕ ಕುರುಕ್ಷೇತ್ರ…ಕುರುಕ್ಷೇತ್ರ..ಕುರುಕ್ಷೇತ್ರ. ಒಮ್ಮೆ ನೋಡಿದ್ರ ಮತ್ತೊಮ್ಮೆ..ಮತ್ತೊಮ್ಮೆ ನೋಡಿದ್ರ ಮಗದೊಮ್ಮೆ ನೋಡೊವಂತಾ ನಾಟ್ಕಾ ಕುರುಕ್ಷೇತ್ರ. ಜಾತ್ರಾಗ ಇದೊಂದ ಪೌರಾಣಿಕ ನಾಟಕಾರಿ ಕಾಕಾರ. ಖರೇ ಖರೇ ಕುದರಿ ಸ್ಟೇಜ್ ಮ್ಯಾಲ ನೋಡಬೇಕ್ರಿ ನೀವು ಅಬಬಾಬಾ..ನಿಮ್ಮ ನೆಚ್ಚಿನ ಸಿರಿಯಲ್ ನಟಿ ಕಮಲಾ ದ್ರೌಪದಿ ಪಾತ್ರ ಮಾಡ್ಯಾರ್ರಿ ಅಕ್ಕಾರ. ಬರೇ ನೀವಷ್ಟ ನೋಡೂದಲ್ರಿ ನಾಟ್ಕಾ. ನಿಮ್ಮ ಮನಿ ಮಂದೇಸಿ ಕರ್ಕೊಂಡ ಬಂದ ತೋರಿಸುವಂತಾ ನಾಟ್ಕಾ ಕುರುಕ್ಷೇತ್ರ.. ದಿನಾಲೂ ಮೂರ ಆಟರಿ..ಬರ್ರಿ ಅಕ್ಕಾರ ಬರ್ರಿ ಮಾವಾರ..ಬರ್ರಿ ತಂಗ್ಯಾರ…ನಾಟ್ಕಾ ನೋಡ್ದ ನಿರಾಸಾ ಆಗಬ್ಯಾಡ್ರೀ. ಎಂತಾ ನಾಟ್ಕಾ ಅಂತಿರಿ…ಇಂತಾ ನಾಟ್ಕಾ ನೀವ ಯಾವತ್ತೂ ನೋಡಿಲ್ಲ. ಮುಂದು ನೋಡಂಗಿಲ್ಲ ಅಂತಾ ರಾಯಲ್ ನಾಟ್ಕಾ …ಕುರುಕ್ಷೇತ್ರ…ಕುರುಕ್ಷೇತ್ರ…ಕುರುಕ್ಷೇತ್ರ” ಎನ್ನುತ್ತಾ ಮುಖ್ಯ ಬೀದಿಗಳಲ್ಲಿ ಅನೌನ್ಸ ಮಾಡುತ್ತಾ ಮುಂದೆ ನಡೆಯುವ ಜಾತ್ರೆಗಾಗಿ ಬಂದಂತಹ ಬಂಡಿ, ಟ್ರಾಕ್ಟರ್ ನಿಂತಿರುವ ದೊಡ್ಡ ಮೈದಾನದತ್ತ ನಡೆದನು.

ಬಶೀರ್ ಪ್ರಚಾರ ಮುಗಿಸಿ ನಾಟಕಕ್ಕೆ ಹಾಕಿದ ಟೆಂಟ್‍ಗೆ ಬಂದಾಗ ಆಗಲೇ ರಾತ್ರಿ ಒಂಬತ್ತು ಗಂಟೆ. ನಾಟಕ ಪ್ರಾರಂಭವಾಗಲು ಇನ್ನೂ ನಾಲ್ಕು ದಿನ ಇತ್ತು. ಹೀಗಾಗಿ ಥೇಟರ್ ಟೆಂಟ್ ಹಾಕುವ ಕಾರ್ಯ ಇನ್ನೂ ಸಂಪೂರ್ಣವಾಗಿರಲಿಲ್ಲ. ಮೇಲೆ ತಗಡಿನ ಶೀಟ್ ಹಾಕಿ ಅದರ ಕೆಳಗೆ ಬಣ್ಣದ ಬಟ್ಟೆಗಳಿಂದ ಶೀಟು ಕಾಣದಂತೆ ಮಾಡಲಾಗಿತ್ತು. ನಾಲ್ಕು ಬದಿಯಲ್ಲೂ ಕೇವಲ ತಗಡಿನ ಶೀಟಿನ ಗೋಡೆಯನ್ನು ನಿರ್ಮಿಸಿತ್ತು. ಟೆಂಟಿನ ಒಳಗಡೆ ಎರಡು ಭಾಗ ಮಾಡಿ ಕುರ್ಚಿ ಹಾಕಲು ನೆಲವನ್ನು ಸಮತಟ್ಟು ಮಾಡುವ ಕೆಲಸವು ಸಾಗಿತ್ತು. ಲೈಟ್, ಫ್ಯಾನ್‍ಗಳನ್ನು ಜೋಡಿಸುವ ಕೆಲಸ ಇನ್ನೂ ಮಾಡಬೇಕಾಗಿತ್ತು. ಅದಾದ ನಂತರ ಕುರ್ಚಿಗಳನ್ನು ಜೋಡಿಸುವ ಕಾರ್ಯವಾಗಬೇಕಾಗಿತ್ತು. ಆದರೆ, ಈಗಾಗಲೇ ನಾಟಕ ಮಾಡುವ ವೇದಿಕೆಯನ್ನು ನಿರ್ಮಿಸಿ ಅದರ ಎರಡು ಬದಿಯಲ್ಲೂ ಕಲಾವಿದರ ಅನುಕೂಲಕ್ಕಾಗಿ ಎರಡು ದೊಡ್ಡ ರೂಮುಗಳನ್ನು ಮಜಬೂತಾಗಿಯೇ ನಿರ್ಮಿಸಲಾಗಿತ್ತು. ಯಾಕೆಂದರೆ ಪೌರಾಣಿಕ ನಾಟಕವಾದ್ದರಿಂದ ಅವುಗಳಲ್ಲಿ ತಾಲೀಮು, ವಿಶ್ರಾಂತಿ ಮಾಡಲು, ಪ್ರಸಾದನಕ್ಕಾಗಿ ಮಾಲತೇಶ ತಾನೇ ಖುದ್ದಾಗಿ ಮುಂದೆ ನಿಂತು ಚೆನ್ನಾಗಿ ಮಾಡಲು ಹೇಳುತ್ತಿದ್ದನು. ತಾಲೀಮು, ವಿಶ್ರಾಂತಿ ಹಾಗೂ ಪ್ರಸಾದನದಂತಹ ಎಲ್ಲ ಕಾರ್ಯಗಳಿಗೂ ಅವುಗಳನ್ನು ಬಳಸುತ್ತಿದ್ದರಿಂದ ಕಲಾವಿದರಿಗೆ ಆ ರೂಮಗಳೆ ‘ಗ್ರೀನ್‍ರೂಮ್’ಗಳಾಗಿದ್ದವು.
ಬಶೀರ್ ಕೆಲಸ ಮಾಡಿಸುತ್ತ ನಿಂತಿದ್ದ ಮಾಲತೇಶನನ್ನು ನೋಡಿ “ನಮಸ್ಕಾರ ಮಾಲಕ್ರ..” ಎಂದು ಆತನೊಂದಿಗೆ ಮಾತಿಗಿಳಿದ.
ಮಾಲತೇಶ “ಹ್ಞಾಂ ನಮಸ್ಕಾರ ಬಶೀರ…ಹೆಂಗ ನಡದೈತಿ ನಿನ್ನ ಪ್ರಚಾರ. ಅಂದಾಂಗ ಹೊಸ ನಾಟಕಕ ಮಂದಿ ಪ್ರತಿಕ್ರಿಯಾ ಹೆಂಗ ಐತಿ..” ಎಂದು ಪ್ರಶ್ನಿಸಿದ.
“ಸಾವಕಾರ್ರ ಜಾತ್ರಾಗ ಹತ್ತ ಹನ್ನೆರಡ ನಾಟ್ಕಾಗೋಳ ಪ್ರಚಾರ ನಡೂದ್ರೂ ಖರೆವಂದ್ರ ನಮ್ಮ ಕಂಪನಿ ನಾಟಕಾದ ಬಗ್ಗಿನ ಮಾತ ನಡದೈತಿ ನೋಡ್ರಿ..”ಎಂದನು.
“ಅದೆಂಗೋ ಬಶೀರ ಹೀಂಗ ಅಂತಿ. ಎಲ್ಲಾ ಛಲೋ ಕಂಪನಿ ನಾಟಕಾನ ಅದಾವಲಾ”
“ಹೌದ್ರಿ ಮಾಲಕರ ಎಲ್ಲಾ ಕಂಪನಿಯಂಗ ನಾವೂನು ಸಾಮಾಜಿಕ ನಾಟಕಾ ಆಡಿದ್ರ ಈ ಮೆಚ್ಚಿಗಿ ಮಾತ ಬರ್ತಿರಲಿಲ್ಲ. ಆದ್ರ ಪೌರಾಣಿಕ ನಾಟಕಾ ಇದ್ದದಕ ಇದೆಲ್ಲಾ ನೋಡ್ರಿ. ಅದರಾಗ ನೀವ ಸ್ಟೇಜ್ ಮ್ಯಾಲ ಕುದರಿ, ಒಂಟಿ ತರಾಕ ಹತ್ತೀರಿ. ಅದಕ ಎಲ್ಲಾ ಮಂದಿನೂ ಭಾರೀ ಇದ್ದಂಗ ಐತೆಪಾ ನಿಮ್ಮ ನಾಟಕಾ ಅನ್ನಕತ್ಯಾರ್ರಿ ಅದರಾಗ ಇಂತಾ ನಾಟಕಾ ನೋಡೆ ಬಾಳ ದಿನಾ ಆತ. ಯಾವತಿಂದ ಶುರುಪಾ… ಅಂತ ರಗಡ ಮಂದಿ ಕೇಳಾಕತ್ಯಾರ್ರಿ. ಅಲ್ದ ಎರಡ್ಮೂರ ವರ್ಷ ಆತು ಈ ಕರೋನಾದಸಿಂದ ನಾಟ್ಕಾ ಅನ್ನೂದ ಬಂಗಾರ ಆಗೇತಿ.. ಅದರಾಗ ಕುರುಕ್ಷೇತ್ರ ನಾಟ್ಕಾ ಮಾಡಾಕತ್ತಿರಿ ಬ್ಹಾಳ ಛಲೋ ಮಾಡಿರಿ ನೋಡ್ರೆಪಾ ಅಂತಾರ್ರಿ”
“ಅಡ್ಡಿಯಿಲ್ಲ ಹಂಗಾರ, ಇಲ್ಲ ಖರ್ಚ ಮಾಡಿ ಅದೂ ಪೌರಾಣಿಕ ನಾಟ್ಕಾ ಮಾಡೋ ರಿಸ್ಕ ತಗೊಂಡಿದ್ದಕ್ಕೂ ಸಾರ್ಥಕ ಆಗೂವಾಂಗ ಕಾಣತೈತಿ. ಎಲ್ಲಿ ಇಂತಾ ಪೌರಾಣಿಕ ನಾಟಕಾ ನೋಡ್ತಾರೋ ಇಲ್ಲೋ ಅನ್ನೋ ಅಂಜಿಕಿ ಇತ್ತ ನೋಡೋ..”
“ಅಲ್ರಿ ಸಾವಕಾರ್ರಿ, ನಾಟ್ಕದ ಪ್ರೇಮದಿಂದ ಅಲ್ಲನ.. ನೀವ ಬ್ಯಾರೆ ಕಂಪನಿ ನಾಟಕಗಿಂತ ನಮ್ಮ ಕಂಪನಿ ನಾಟ್ಕ ಬದಲಿ ಇರಲಿಂತ ಇಂತ ದ್ವಡ್ಡ ನಾಟಕಾಕ ಕೈ ಹಾಕಿದ್ದು. ಅದಲ್ಲದ ಎಂಟ್ಹತ್ತ ಪಾತ್ರ ಇರೋ ನಾಟಕ ಆಡಿ, ಅದರಾಗ ರೊಕ್ಕ ಮಾಡೋ ಕಂಪನಿ ಮುಂದ
ಇಪ್ಪತ್ತ ಮೂವತ್ತ ಪಾತ್ರ ಇರೋ ಇಂತ ನಾಟ್ಕ ಮಾಡಿ ಬಡೂ ಕಲಾವಿದರಿಗೆ ಅವಕಾಶ ಕೊಟ್ಟ ಎರಡ ಹೊತ್ತ ಊಟಾ ಸಿಗೂವಂಗ ಮಾಡಿರಲಾ.. ಕರೋನಾ ಕಾಲಕ ಎಲ್ಲಾ ಸಂಕಟ ಅನುಭವಿಸ್ರಾರ ಅನ್ನೂದು ಪಾಪ ಬಡೂ ನಾಟಕ ಮಂದಿಗೆ ಗೊತ್ರಿ. ಈ ವರ್ಷ ನೀವ ಇಂತ ದ್ವಡ್ಡ ನಾಟಕಾ ಸುರು ಮಾಡಿ ಎಷ್ಟ ಕಲಾವಿದರ ಹೊಟ್ಟಿ ಹಸಿವ ಇಲ್ದಂಗ ಮಾಡಿರಿ ಸಣ್ಣ ಕೆಲಸನ ಮಾಲಿಕ್ರ”
“ದೇವ್ರ ನಮಗ ಛಲೋ ಇಟ್ಟಾನ ಅಂದ್ರ ನಾವೂನು ನಮ್ಮ ಕೈಲಾದ ಮಟ್ಟಿಗೆ ಛಲೋ ಮಾಡಬೇಕಪಾ..”
“ನಿಮ್ಮ ಮಾತ ಖರೇ ಐತಿ ನೋಡ್ರಿ. ಎರಡ್ಮೂರ ವರ್ಷ ಕರೋನಾದಸಿಂದ ನಾಟಕಾ ಆಡದಿದ್ರೂ ಕಲಾವಿದರು ಹಸಿವಿನಿಂದ ಇರಬಾರದ ಅನ್ನೂ ಕಾರಣಕ ಎಷ್ಟ ಕಲಾವಿದರಿಗೆ ಮದತ್ ಮಾಡಿರಿ ಮಾಲಕ್ರ. ಇಂತಾ ಗುಣ ಬರೀ ನಾಟ್ಕಾ ಆಡಿಸಿ ರೊಕ್ಕ ಮಾಡೋ ಮಂದಿಗೆ ಎಲ್ಲಿ ಬರತೈತ್ರಿ. ಎಲ್ಲೋ ನಿಮ್ಮಂತ ಹೂವ ಮನಸ ಇರೂರಿಗಷ್ಟ ಇಂತಾ ಪ್ರೀತಿ ಇರತೈತಿ. ದೊಡ್ಡ ಅಪ್ಪಾರೂ ಹಿಂಗ ಇದ್ರ ನೋಡ್ರಿ. ಯಾರಿಗಾರ ಸ್ವಲ್ಪ ತ್ರಾಸ ಅಂದ್ರ ಸಾಕ. ಅಂತಹ ಕಲಾವಿದರ ಕಷ್ಟಕ ಅವ್ರ ಮನಸು ಮರಗತಿತ್ತ..” ಎಂದು ಮಹಾರುದ್ರಪ್ಪನವರ ಗುಣಗಾನ ಮಾಡತೊಡಗಿದನು.
“ಆತ ನಡಿಪಾ. ನೀ ನಮ್ಮ ಮನಿತನದ ಬಗ್ಗೆ ಹೊಗಳದಿದ್ರ ಉಂಡ ತುತ್ತ ಗಂಟಲಕ ಇಳಿಯವಂಗ ಕಾಣಂಗಿಲ್ಲ”
“ಮಾಲಕ್ರ ತಾರೀಫ ಅಲ್ರಿ ಇದು, ಹಕಿಕತ್ ಐತಿ. ಕಷ್ಟಂತ ಬಂದ್ರ ಎಷ್ಟ ಕುಟುಂಬಕ ನೀವಾಗಲಿ, ಅಪ್ಪಾರಾಗಲಿ ಮದತ್ ಮಾಡಿಲ್ಲಾ. ನನ್ನಂತಾವನು ನಿಮ್ಮ ಮನಿ ಮಗನಂಗ ಬೆಳಸಿರ್ರಿ. ಮದವಿ ಮಾಡಿ, ನನ್ನ ಮಕ್ಕಳ ದೇಖರೇಕಿ ನನಗಿಂತ ಹೆಚ್ಚ ನೀವ ಮಾಡಿರಿ. ಆಸರ ನೀಡಿದವ್ರ ನೆನಸಕೊದಿದ್ರ ಭಗವಾನ ಮೆಚ್ಚಕೋದಿಲ್ಲ”
“ಆತು, ಎಲ್ಲಾರಿಗಿ ಅನಕೂಲ ಆಗಲೆಂತ ತಗೊಂಡ ನಿರ್ಧಾರ ಎಲ್ಲಾರಿಗೂ ಛಲೋ ಆದ್ರ ಸಾಕ. ಅಂದಾಂಗ ಒಳಗಡೆ ರೂಮಿಂದ ಲೈಟ್ ಕೆಲಸ ಏನ ಆತು ನೋಡ ನೀನು..” ಎಂದು ಮಾಲತೇಶ ಗ್ರೀನ್‍ರೂಮ್ ಕೆಲಸದತ್ತ ಗಮನ ಹರಿಸಲು ಅವನನ್ನು ಕಳಿಸುತ್ತಾ ತಾನು ಬೇರೆ ಕೆಲಸದಲ್ಲಿ ಮಗ್ನನಾದನು.
***
ಮಾಲಿಕ ಮಾಲತೇಶ ಮೂಲತಃ ಹಾವೇರಿಯವನು. ಸುಮಾರು ನಲವತ್ತು ನಲವತೈದು ವಯಸ್ಸು. ಅವರ ತಂದೆ ಮಹಾರುದ್ರಪ್ಪನವರು ಕಟ್ಟಿ ಬೆಳೆಸಿಕೊಂಡ ಬಂದ ನಾಟಕ ಕಂಪನಿಯನ್ನು ತಂದೆಯಂತೆ ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದನು. ಆದರೆ ಆತ ತಂದೆಯಂತೆ ನಾಟಕಗಳಲ್ಲಿ ಪಾತ್ರ ಮಾಡದೆ ಇದ್ದರೂ ಅವರಿಂದ ನಾಟಕ ಕಂಪನಿ ನಡೆಸಿಕೊಂಡು ಹೋಗಲು ಬೇಕಾಗುವ ಎಲ್ಲ ಪಟ್ಟುಗಳನ್ನು ಕಲಿತಿದ್ದನು. ಮಹಾರುದ್ರಪ್ಪನವರು ಕಂಪನಿಯ ಆರಂಭದ ಕಾಲದಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ನಾಟಕ ಆಡುತ್ತಿದ್ದರೂ ಕಾಲಕ್ರಮೇಣ ಪ್ರೇಕ್ಷಕರ ಅಭಿರುಚಿ ಕಡಿಮೆಯಾದಂತೆ ಸಾಮಾಜಿಕ ಹಾಗೂ ಕೌಟುಂಬಿಕ ನಾಟಕಗಳತ್ತ ಮುಖ ಮಾಡಿದರು. ಜೊತೆಗೆ ಪೌರಾಣಿಕ ನಾಟಕಗಳ ಖರ್ಚು ವೆಚ್ಚಗಳು ಅಧಿಕವಾಗುತ್ತಿದ್ದರಿಂದ ಅಂತಹ ನಾಟಕಗಳನ್ನು ಆಡುವುದನ್ನೆ ಬಿಟ್ಟರು. ನಾಟಕಗಳ ಕಲಾವಿದರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರಿಂದ ಹೆಸರಾಂತ ನಟರೆಲ್ಲ ಇವರ ಕಂಪನಿಯಲ್ಲಿ ಪಾತ್ರವಹಿಸಲು ತಾವೇ ಮುಂದೆ ಬಂದು ಇವರ ಕಂಪನಿಯನ್ನು ಸೇರುತ್ತಿದ್ದರು. ಜೊತೆಗೆ ಸಾತ್ವಿಕ ಸ್ವಭಾವದ ಮಹಾರುದ್ರಪ್ಪ ತಾವೆಂದೂ ಮಾಲಿಕನೆಂಬ ಸೊಕ್ಕನ್ನು ತೋರುತ್ತಿರಲಿಲ್ಲ. ಅದರಲ್ಲೂ ಸ್ತ್ರೀ ಕಲಾವಿದರ ಬಗ್ಗೆ ತುಂಬ ಗೌರವದಿಂದ ನಡೆದುಕೊಳ್ಳುತ್ತಿದ್ದರಿಂದ ಸ್ತ್ರೀ ಕಲಾವಿದರು ತಮ್ಮ ಮನೆಯಲ್ಲಿಯೇ ಇರುವಂತÀಹ ಸುರಕ್ಷತೆಯ ಭಾವನೆ ಹೊಂದಿದ್ದರು.
ಮಹಾರುದ್ರಪ್ಪ ಕಾಲವಾದ ನಂತರ ಆ ಕಂಪನಿಯನ್ನು ಮಗ ಮಾಲತೇಶ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದನು. ಮೇಲಾಗಿ ತಂದೆಯ ಗರಡಿಯಲ್ಲಿ ಪಳಗಿದ್ದ ಮಾಲತೇಶ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದನಲ್ಲದೆ, ಮೊದಲಿನಿಂದಲೂ ಅವರ ಕಂಪನಿಯ ನಾಟಕಗಳೆಂದರೆ ಅವನ ತಂದೆಯ ಕಾಲದಿಂದಲೂ ಇಡೀ ನಾಡಿನಲ್ಲಿಯೇ ಒಂದು ಹೆಸರಿದ್ದದ್ದು ಅವನಿಗೆ ಅನುಕೂಲವೆ ಆಗಿತ್ತು. ಆತನ ಕಂಪನಿಯಲ್ಲಿ ಬೇರೆ ಬೇರೆ ಊರುಗಳಲ್ಲಿ ನಾಟಕವಾಡಲು ಅನುಕೂಲವಾಗಲೆಂದೆ ಎಂಟತ್ತು ನಾಟಕಗಳನ್ನು ಕಲಿತಿದ್ದರು. ಮುಖ್ಯವಾಗಿ ಸಾಮಾಜಿಕ ನಾಟಕಗಳನ್ನೆ ಆಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಅಪಾರ ವೆಚ್ಚದಲ್ಲಿ ಪೌರಾಣಿಕ ನಾಟಕ ಕುರುಕ್ಷೇತ್ರ ಮಾಡಬೇಕೆಂದು ಯೋಚಿಸಿ ಅದರಂತೆ ಸಾಕಷ್ಟು ತಯಾರಿನೂ ಮಾಡಿಸಿದ್ದನು. ಕೆಲವೊಂದು ಪಾತ್ರಗಳನ್ನು ನುರಿತ ಕಲಾವಿದರಿಂದಲೇ ಮಾಡಿಸಬೇಕೆಂದು ಈಗಾಗಲೇ ತನ್ನ ಕಂಪನಿಯಲ್ಲಿ ಇರುವ ಕಲಾವಿದರೊಂದಿಗೆ ಬೇರೆ ಕಡೆಯಿಂದಲೂ ಕರೆದುಕೊಂಡು ಬಂದಿದ್ದನು. ಆತನ ಕಂಪನಿಯು ಮುಖ್ಯವಾಗಿ ಬಾದಾಮಿ ಬನಶಂಕರಿ, ಮೈಲಾರ, ಸವದತ್ತಿ, ಕೊಪ್ಪಳದಂತಹ ಬಹು ದಿನದವರಿಗೆ ನಡೆಯುವ ಜಾತ್ರೆಗಳಲ್ಲಿ ಕ್ಯಾಂಪ್ ಮಾಡಿ ನಾಟಕ ಆಡುವುದು ಆತನ ತಂದೆಯ ಕಾಲದಿಂದಲೂ ಬಂದ ವಾಡಿಕೆ. ಸುಮಾರು ಹದಿನೈದು ಇಪ್ಪತ್ತು ಜನ ಕಲಾವಿದರು ಹಾಗೂ ನಾಟಕದ ಟೆಂಟ್, ಲೈಟಿಂಗ್, ಮೇಕಪ್‍ಗೆಂದು ಇತರೆ ಕೆಲಸಗಳಿಗಾಗಿ ಹದಿನೈದು ಇಪ್ಪತ್ತು ಜನ ಇರುತಿದ್ದರು. ಜೊತೆಗೆ ಕಲಾವಿದರು, ತಂತ್ರಜ್ಞರ
ಮಕ್ಕಳು ಮರಿ ಸೇರಿದಂತೆ ಐವತ್ತು ಅರವತ್ತು ಜನಗಳು ದೊಡ್ಡ ಕಂಪನಿ ಅವನದು.
ಬಶೀರ್ ಈ ಕಂಪನಿಗೆ ಸೇರಿದಾಗ ಬಹುಶ ಆತನಿಗೆ ಹದಿನಾರು ವರ್ಷವಿರಬಹುದು. ಮಾಲತೇಶನ ತಂದೆ ಮಹಾರುದ್ರಪ್ಪನವರ ಕಾಲದಿಂದಲೂ ಆ ಕಂಪನಿಯಲ್ಲಿ ಆತ ನಾಟಕದ ಪ್ರಚಾರವನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದ. ಇತರರಂತೆ ಅಲ್ಲದ ಆತನ ಕನ್ನಡದ ಉಚ್ಚಾರ ತುಂಬಾ ಸ್ಪಷ್ಟವಾಗಿತ್ತು. ಅದಕ್ಕಾಗಿಯೇ ಕಂಪನಿಯ ಪ್ರತಿ ನಾಟಕಗಳ ಪ್ರಚಾರ ಅವನಿಂದಲೇ ನಡೆಯುತ್ತಿತ್ತು. ಈಗ ಅವನಿಗೆ ಮೂವತೈದು ವರ್ಷಗಳಾದರೂ ಆತ ಆ ಕೆಲಸವನ್ನು ತುಂಬಾ ಶೃದ್ಧೆಯಿಂದ ಮಾಡುತ್ತಿದ್ದನು. ಅಲ್ಲದೆ ಪ್ರಚಾರವಿಲ್ಲದ ವೇಳೆಯಲ್ಲಿ ಎಲೆಕ್ಟ್ರಿಸಿಟಿ ಕೆಲಸ ಗೊತ್ತಿದ್ದರಿಂದ ಟೆಂಟ್ ಹಾಕುವ ವೇಳೆಯಲ್ಲಿ ಅಂತಹ ಕೆಲಸ ಮಾಡುವ ಜನರೊಂದಿಗೆ ತಾನು ಸೇರಿ ಆ ಕೆಲಸ ಮಾಡುತ್ತಿದ್ದನು.
***
ಬಶೀರ್ ಗ್ರೀನ್‍ರೂಮಿಗೆ ಬಂದಾಗ ತಾಲೀಮು ಜೋರಾಗಿ ನಡೆದಿತ್ತು. ದ್ರೌಪದಿ ಪಾತ್ರದಾರಿ ಕಮಲಾ ಅರ್ಜುನ ಪಾತ್ರಧಾರಿ ನಟರಾಜ ಜೊತೆ ಸಂಭಾಷಣೆಯಲ್ಲಿ ತೊಡಗಿದ್ದರೆ, ಸುಭದ್ರೆಯ ಪಾತ್ರಧಾರಿ ಸುಕನ್ಯೆ ತನ್ನ ಸಂಭಾಷಣÉಯನ್ನು ನೋಡಿಕೊಳ್ಳುತ್ತಿದ್ದಳು. ಶಕುನಿ ಪಾತ್ರದ ಫಕೀರೇಶ ತನ್ನ ಸಂಭಾಷಣೆಗಳನ್ನು ಎದುರಿನ ಪಾತ್ರಧಾರಿಗೆ ಹೇಳುತ್ತಿದ್ದನು. ಬಶೀರ್ ಬಂದದನ್ನು ನೋಡಿ “ಏನೋ ಬಶೀರ್ ಪ್ರಚಾರ ಮುಗಿಸಿ ಬಂದಂಥ ಅನಸ್ತದ. ಹೆಂಗ ನಡೆದೈತಿ ಕೆಲಸ” ಎಂದನು.
“ಛಲೋ ನಡದೈತಿ ಅಣ್ಣಾ..ಎಲ್ಲಾ ಭಗವಾÀನನ ಕೃಪಾ. ಅಂದಾಂಗ ನಿನ್ನ ತಾಲೀಮ ಹೆಂಗ ನಡದೈತಿ. ಊರಾಗ ಎಲ್ಲಾ ಆರಾಮ ಅದಾರ..?”
“ಆರಾಮ ಅನ್ನೂದು ಅಷ್ಟ. ಬಶೀರ್ ಜೀವ್ನ ನಡಿಯೊದ ಕಷ್ಟ ಐತಿ..” ಎಂದು ತನ್ನ ಹಿಂದಿನ ದಿನಗಳ ಕತೆ ಹೇಳತೊಡಗಿದನು.
ಫಕೀರೇಶ ಚಿಕ್ಕ ವಯಸ್ಸಿನಲ್ಲಿಯೇ ಮನೆಯಲ್ಲಿನ ಬಡತನದಿಂದ ಮೆಟ್ರಿಕ್‍ವರೆಗೆ ಶಾಲೆ ಕಲಿತು ಮುಂದೆ ಕಲಿಯಲಾರದೆ ಊರಲ್ಲಿ ಸಣ್ಣಪುಟ್ಟ ಕೂಲಿ ಮಾಡುತ್ತಿದ್ದನು. ಆದರೆ ಊರಲ್ಲಿ ನಾಟಕ ನಡೆಯುತ್ತಿದ್ದರೆ ಆತನಿಗೆ ಕೆಲಸದ ಪರಿವೆ ಇರುತ್ತಿರಲಿಲ್ಲ. ಹಗಲು ರಾತ್ರಿ ತಾಲೀಮ ಕೋಣೆಯಲ್ಲಿ ತಾಲೀಮು ನೋಡುತ್ತ ಪಾತ್ರಧಾರಿಗಳಿಗೆ ಎಲೆ, ಚುಟ್ಟಾ ತರುವುದು. ಕೆಲವೊಮ್ಮೆ ಪಾತ್ರಧಾರಿಗಳ ಮನೆಗಳಿಂದ ಬುತ್ತಿ ಕಟ್ಟಿಸಿಕೊಂಡು ಬರುತ್ತಿದ್ದ. ಅವರೊಂದಿಗೆ ಊಟ ಮಾಡಿ ತಾಲೀಮು ಕೋಣೆಯಲ್ಲಿಯೇ ಮಲಗುತ್ತಿದ್ದ.
ಕೆಲವೊಮ್ಮೆ ನಾಟಕದ ಪಾತ್ರಧಾರಿಗಳು ಬಾರದಿದ್ದಾಗ ಅವರ ಡೈಲಾಗ್‍ಗಳನ್ನು ತಾನೇ ಸುಂದರವಾಗಿ ಹಾವಭಾವದಿಂದ ನಟಿಸಿ ಪಾತ್ರಧಾರಿಗಳಿಗಿಂತ ಚೆನ್ನಾಗಿ ಅಭಿನಯ ಮಾಡಿ ತಾಲೀಮು ನಡೆಯುವಂತೆ ಮಾಡುತ್ತಿದ್ದರಿಂದ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದನು. ನಾಟಕದ ಸೀಸನ್‍ದಲ್ಲಿ ಕೆಲಸಕ್ಕೆ ಹೋಗದ ಅವನನ್ನು ಅವನಪ್ಪ ಚೆನ್ನಾಗಿ ಬೈಯುತ್ತಿದ್ದನು. ಆತನ ಬೈಗಳ ಕೇಳಿ ಒಂದೆರೆಡು ದಿನ ಕೆಲಸಕ್ಕೆ ಹೋದರೂ ಮಾರನೆ ದಿನ ಮತ್ತೇ ಯಥಾಸ್ಥಿತಿಯೇ. ಕೊನೆಗೆ ಅವರಪ್ಪ ಇದು ನಾಯಿಬಾಲವೇ ಎಂದುಕೊಂಡು ಆತನ ಹಣೆಬರಹದಲ್ಲಿ ಬರೆದಂತೆ ಆಗಲಿ ಎಂದು ಸುಮ್ಮನಾಗಿಬಿಟ್ಟನು.
ಮುಂದಿನ ವರ್ಷದ ನಾಟಕ ವೇಳೆಯಲ್ಲಿ ನಾಟಕ ನಾಡಿದ್ದು ಇದೇ ಎಂದಾಗ ಮುಖ್ಯ ನಟನೊಬ್ಬ ತೀರಿಕೊಂqನು. ನಾಟಕ ಮಂಡಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ಏನೂ ಮಾಡಬೇಕೆಂಬುವುದೆ ತೋಚದಾದಾಗ ಅವರು ಫಕೀರೇಶನಿಗೆ ಆತನ ಪಾತ್ರ ಮಾಡಲು ಕೇಳಿದಾಗ ಆತ ಸ್ವಲ್ಪ ಅಳುಕಿನಿಂದಲೇ ಒಪ್ಪಿಕೊಂಡನು. ಯಾಕೆಂದರೆ ಆತನಿಗೆ ಸಂಭಾಷಣೆ, ಅಭಿನಯ ಬಗ್ಗೆ ಚಿಂತೆ ಇರಲಿಲ್ಲ. ಆದರೆ, ಅಷ್ಟು ಪ್ರೇಕ್ಷಕರ ಮುಂದೆ ಮಾಡಲು ಸಾಧ್ಯವೇ ಎಂದು ಭಯವಿತ್ತು ಅμÉ್ಟೀ. ಆದರೆ, ನಾಟಕದ ದಿನ ಆತನ ಅಭಿನಯ, ಸಂಭಾಷಣೆ ಹೇಳುವ ಆ ಶೈಲಿ ನೋಡುಗರನ್ನು ಶಿಳ್ಳೆ ಹೊಡೆದು ಹುಚ್ಚೆಬ್ಬಿಸುವಂತೆ ಮಾಡಿತು. ಅಂದೆ ಫಕೀರೇಶ ಎಂಬ ಹೊಸ ನಾಟಕ ತಾರೆ ಹುಟ್ಟಿಕೊಂಡಿತ್ತು. ಯಾವುದೋ ಕಾರಣದಿಂದ ಅಂದು ಆ ಊರಿಗೆ ಬಂದಿದ್ದ ಮಹಾರುದ್ರಪ್ಪನವರು ಆತನ ಅಭಿನಯ ಕಂಡು ಮರುದಿನವೇ ಆತನ ತಂದೆಗೆ ಭೇಟಿಯಾಗಿ ಆತನನ್ನು ತನ್ನ ನಾಟಕ ಕಂಪನಿಗೆ ಕರೆದುಕೊಂಡು ಹೋಗುವುದಾಗಿ ಅದಕ್ಕೆ ಒಪ್ಪಿಗೆ ನೀಡಲು ಕೇಳಿದ. ಆಗ ಆತನ ತಂದೆ ಕಳಿಸಲು ಹಿಂದು ಮುಂದು ನೋಡಿದಾಗ “ನೋಡು ಹಿರಿಯ, ಕಲಾದೇವತೆ ಎಲ್ಲಾರಿಗೂ ಒಲಿಯೋದಿಲ್ಲ. ಆದ್ರ ಆ ದೇವತೆ ನಿನ್ನ ಮಗನಿಗೆ ಒಲದಾಳ. ಮಗನನ್ನು ಕಳಸ. ಇನ್ನು ಮುಂದ ಆಂವ ನನ್ನ ಮಗ” ಎಂದು ಹೇಳಿ ಆತನನ್ನು ಒಪ್ಪಿಸಿ ಆತನಿಗೆ ಮುಂಗಡ ಹಣವನ್ನು ಕೊಟ್ಟು ಕರೆದುಕೊಂಡು ಹೋದನು.
ಮುಂದೆ ಆ ಕಂಪನಿಯಿಂದ ಮಾಡುತ್ತಿದ್ದ ಎಲ್ಲ ನಾಟಕಗಳಲ್ಲಿ ಫಕೀರೇಶನಿಗೆ ನಾಯಕನ ಪಾತ್ರವೇ ಖಾಯಂ ಆಗಿಹೋಯಿತು. ಎಂತಹ ಪಾತ್ರವೇ ಆದರೂ ಲೀಲಾಜಾಲವಾಗಿ ಅಭಿನಯಿಸಿ ಜೀವ ತುಂಬುವ ಆತನ ನಟನೆ ನಾಟಕಗಳು ಜನಪ್ರಿಯಗೊಳ್ಳುವಂತೆ ಮಾಡಿತು.ಗ್ರೀನ್‍ರೂಮಿನಲ್ಲಿ ಎಲ್ಲ ಪಾತ್ರಧಾರಿಗಳಿಗೆ ಈತನೇ ಗುರುವಾಗಿಬಿಟ್ಟ. ಫಕೀರೇಶ ಇದ್ದಾನೆಂದರೆ ಆ ನಾಟಕ ಎಲ್ಲಿಯೇ ಇದ್ದರೂ ಪ್ರೇಕ್ಷಕರಿಂದ ಥೇಟರ್ ತುಂಬಿ ಹೋಗುತ್ತಿತ್ತು. ಇದರಿಂದ ಆತ ಮಹಾರುದ್ರಪ್ಪನವರಿಗೆ ಅಚ್ಚುಮೆಚ್ಚಿನವನಾಗಿಬಿಟ್ಟ. ಮುಂದೆ ಅವರ
ಮರಣಾಂತರವೂ ಮಾಲತೇಶನ ಜೊತೆ ಉತ್ತಮ ಸಂಬಂಧ ಹೊಂದಿದ್ದನು. ಜೊತೆಗೆ ಮಾಲತೇಶನು ಅವನ ಹಿರಿತನಕ್ಕೆ ತುಂಬಾ ಗೌರವ ಕೊಡುತ್ತಿದ್ದನು. ಇಬ್ಬರೂ ಮಕ್ಕಳನ್ನು ತನ್ನೂರಲ್ಲಿ ಬಿಟ್ಟಿದ್ದ ಫಕೀರೇಶ ನಾಟಕಗಳಿಲ್ಲದ ವೇಳೆಯಲ್ಲಿ ಊರಲ್ಲಿಯೇ ಇರುತ್ತಿದ್ದ. ಜಾತ್ರೆಗಳಲ್ಲಿ ನಾಟಕದ ಕ್ಯಾಂಪ್‍ಗಳು ಇದ್ದಾಗ ಊರೂರು ಸುತ್ತಬೇಕಾಗುತ್ತಿತ್ತು. ಆದರೆ, ಬರಬರುತ್ತ ಸಿನೇಮಾ, ಟಿ.ವಿ.ಧಾರಾವಾಹಿಗಳ ಹಾವಳಿಗೆ ನಾಟಕ ನೋಡುವ ಜನ ಕಡಿಮೆಯಾದರೂ ಮಾಲತೇಶ ಪ್ರತಿ ವರ್ಷವೂ ಜಾತ್ರೆಗಳಲ್ಲಿ ಐದಾರು ತಿಂಗಳು ಕ್ಯಾಂಪ್ ಮಾಡಿ ನಾಟಕ ಮಾಡುವುದರ ಮೂಲಕ ಅನೂಚಾನವಾಗಿ ತಮ್ಮ ಕುಟುಂಬಕ್ಕೆ ಬಂದಂತಹ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದನು.
ತನ್ನ ಕಂಪನಿಯ ನಾಟಕಗಳು ಚೆನ್ನಾಗಿ ನಡೆಯುತ್ತಿದ್ದರಿಂದ ಕಲಾವಿದರೂ ಕಷ್ಟಕ್ಕೆ ಈಡಾಗಬಾರದೆಂದು ಉತ್ತಮ ಸಂಭಾವನೆಯನ್ನು ನೀಡುತ್ತಿದ್ದನು. ಆದರೆ ಎರಡ್ಮೂರು ವರ್ಷ ಜಗತ್ತನ್ನೆ ಕಾಡಿದ ಕರೋನಾದಿಂದ ಜಾತ್ರೆ, ಉತ್ಸವಗಳೆ ನಿಂತು ಹೋಗಿ ನಾಟಕಗಳ ಕ್ಯಾಂಪ್‍ಗಳು ಇಲ್ಲವಾಗಿ ಕಲಾವಿದರೆಲ್ಲ ನರಳುವಂತಾಯಿತು. ಫಕೀರೇಶ ನಗರದಲ್ಲಿ ಮಕ್ಕಳ ಶಾಲಾ ಫೀಜು ಹೆಚ್ಚಾಗುವುದೆಂದು ತನ್ನೂರಿನಲ್ಲಿನ ಒಂದು ಖಾಸಗಿ ಶಾಲೆಗೆ ಸೇರಿಸಿದ್ದನು. ಆದರೆ, ಕರೋನಾ ಕಾರಣದಿಂದ ಇತ್ತ ನಾಟಕಗಳು ಇಲ್ಲ, ಅತ್ತ ಸಂಭಾವನೆಯು ಇಲ್ಲ. ಮಾಡಬೇಕೆಂದರೆ ಬೇರೆ ಯಾವ ಕೆಲಸವೂ ಆತನಿಗೆ ಗೊತ್ತಿಲ್ಲ. ಪ್ರಾರಂಭದ ವರ್ಷ ಅವನ ಕಷ್ಟ ನೋಡಿ ಮಾಲತೇಶ ಹಣಕಾಸಿನ ಸಹಾಯ ಮಾಡಿದ್ದನು. ಎರಡನೆ ವರ್ಷ ಫಕೀರೇಶ ಪಡಬಾರದ ಕಷ್ಟ ಪಡಬೇಕಾಯಿತು. ಮಕ್ಕಳ ಫೀಜು ಕಟ್ಟಲಿಲ್ಲವೆಂದು ಅವರನ್ನು ಶಾಲೆಗೆ ಸೇರಿಸಿಕೊಳ್ಳಲಿಲ್ಲ. ಫಕೀರೇಶ ಹೆಡ್ ಮಾಸ್ತರ್‍ಗೆ ಎಷ್ಟು ಬೇಡಿಕೊಂಡರೂ ಫೀಜು ಕಟ್ಟದೆ ಮಕ್ಕಳನ್ನು ಶಾಲೆಗೆ ಕಳಿಸಬಾರದೆಂದು ತಾಕೀತು ಮಾಡಿದಾಗ, ಕೊನೆಗೆ ಶಾಲಾ ಛೇರಮನ್‍ಗೆ ಭೇಟಿ ಮಾಡಿ ಕೇಳಿಕೊಂಡರೂ ಆತನೂ ಒಪ್ಪಲಿಲ್ಲ. ಕೊನೆಗೆ ಇಬ್ಬರೂ ಮಕ್ಕಳನ್ನು ಶಾಲೆಗೆ ಕಳಿಸದ ಸಂದಿಗ್ಧತೆಗೆ ಸಿಲುಕಿಕೊಂಡನು. ಮಾಲತೇಶನಿಗೆ ಕೇಳಿದರೆ ಕೊಡುತ್ತಿದ್ದನೇನೋ ಆದರೆ ಆತನ ಮಗನೊಬ್ಬ ಕರೋನಾಗೆ ಬಲಿಯಾಗಿ ಆತನೆ ದುಃಖದಲ್ಲಿರುವಾಗ ಕೇಳುವುದು ಸೂಕ್ತವಲ್ಲವೆಂದು ಸುಮ್ಮನಾಗಿಬಿಟ್ಟ. ಕೊನೆಗೆ ಇಬ್ಬರೂ ಮಕ್ಕಳನ್ನು ಆ ಶಾಲೆ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಟಿ.ಸಿ.ಕೇಳಿದರೆ ಮೊದಲಿನ ಶಾಲೆಯವರು ಟಿ.ಸಿ.ಕೊಡದೆ ಸತಾಯಿಸಿದರು. ದೂರು ಕೊಟ್ಟರೂ ಏನು ಆಗದಿದ್ದಾಗ ಏನೂ ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟ. ಜೊತೆಗೆ ಹೆಂಡತಿ, ಇಬ್ಬರ ಮಕ್ಕಳ ಸಂಸಾರ ನಡೆಸುವುದೇ ಕಷ್ಟವಾಯಿತು. ಒಂದೊಂದು ದಿನ ಊಟವಿಲ್ಲದೆ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮಕ್ಕಳ
ಗೋಳನ್ನು ನೋಡದೆ “ಯಾಕಪ್ಪಾ ತಂದೆ ಇಂತಹ ದುಸ್ಕಾಲ ತಂದೆ ನೀನು..” ಎಂದು ದೇವರನ್ನು ಶಪಿಸುವಂತಾಗಿತ್ತು ಆತನ ಬದುಕು.
ಕರೋನಾ ಲಾಕ್ಡೌನ್ ವೇಳೆಯಲ್ಲಿ ಫಕೀರೇಶನ ಬಾಳಿನ ಸ್ಥಿತಿ ಹೀಗಾಗಿದ್ದರೆ ಸುಭದ್ರ ಪಾತ್ರದ ಸುಕನ್ಯೆಯ ಬಾಳಿನ ಗೋಳು ಇನ್ನೂ ಗಂಭೀರವಾಗಿತ್ತು. ಮೂಲತಃ ಯಲಬುರ್ಗಾದವಳಾದ ಅವಳು ಮಾಲತೇಶ ಕಂಪನಿಯ ಒಡೆಯ ಅದಾಗಿನಿಂದಲೂ ವಿವಿಧ ನಾಟಕಗಳಲ್ಲಿ ಅಭಿನಯಿಸುತ್ತಿದ್ದಳು. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಅವಳು ಮಲತಾಯಿಯ ಕಿರಿಕಿರಿಯಲ್ಲಿಯೇ ಬೆಳೆದವಳು. ಅವಳ ಬಗ್ಗೆ ತಂದೆಗೂ ಏನೂ ಹೇಳುವಂತಿಲ್ಲದ ದುಃಖದ ಸ್ಥಿತಿ ಅವಳದು. ಹೇಳಿದರೆ ಅವನಿಲ್ಲದಾಗ ಮಲತಾಯಿಯಿಂದ ಹೊಡೆತ ತಿಂದು ನರಳುವದಕ್ಕಿಂತ ಹೇಳದಿರುವುದೆ ವಾಸಿಯೆಂದು ಅವಳು ಹೇಳಿದಂತೆ ನಡೆದುಕೊಂಡು ಹೋಗುತ್ತಿದ್ದಳು. ಮುಂದೆ ಎಸ್ ಎಸ್ ಎಲ್ ಸಿ ಅದ ನಂತರ ಕಾಲೇಜಿಗೆ ಹೋಗಬೇಕೆಂದರೂ ಮಲತಾಯಿಯ ಹಠದಿಂದ ಸಾಧ್ಯವಾಗಲಿಲ್ಲ. ಆದರೆ, ಮನೆಯಲ್ಲಿ ಮೈ ಮುರಿದು ದುಡಿದರೂ ಮಲತಾಯಿಯಿಂದ ಬೈಗುಳ ತಪ್ಪುತ್ತಿರಲಿಲ್ಲ. ಅವಳ ಈ ದುಸ್ಥಿತಿಯನ್ನು ಕಂಡ ಊರಿನ ಹಿರಿಯರೊಬ್ಬರು ಶಾಲೆಯಲ್ಲಿ ಅವಳ ಹಲವಾರು ನಾಟಕಗಳನ್ನು ನೋಡಿದ್ದ ಅವಳನ್ನು ಮಾಲತೇಶನ ಕಂಪನಿಗೆ ಸೇರಿಸಿದ್ದನು. ಮಲತಾಯಿಯಂತೂ “ಪೀಡೆ ತೊಲಗಿತು”ಎಂದು ಸಂತೋಷ ಪಟ್ಟಳು.
ಕಂಪನಿಗೆ ಸೇರಿದ ಸುಕನ್ಯೆಯು ತನಗೆ ನೀಡಿದ ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಇದರಿಂದ ಕಂಪನಿಯಲ್ಲಿ ಅವಳಿಗೆ ನೆಮ್ಮದಿ ಜೀವನಕ್ಕೆ ನಾಂದಿಯಾಯಿತು. ಬೇರೆ ಬೇರೆ ಊರುಗಳಲ್ಲಿನ ಕ್ಯಾಂಪ್‍ಗಳ ನಾಟಕಗಳಲ್ಲಿ ಅವಳು ಹಾಸ್ಯ ಪಾತ್ರದಿಂದ ಮನೆ ಮಾತಾದಳು. ಅವಳ ಹಾಸ್ಯ ಪಾತ್ರ ನೋಡಲೆಂದೆ ನಾಟಕಕ್ಕೆ ಲಗ್ಗೆ ಹಾಕುವ ಪ್ರೇಕ್ಷಕರ ವರ್ಗವಿತ್ತು. ಐದಾರು ವರ್ಷ ಚಂದವಾಗಿ ನಡೆದ ಅವಳ ಜೀವನ ಕರೋನಾ ಹೊಡೆತದಿಂದ ಬಿರುಗಾಳಿಗೆ ಸಿಲುಕಿದ ತರಗೆಲೆಯಂತಾಗಿತ್ತು. ಅವಳಿಗೂ ಆರಂಭದ ವರ್ಷದಲ್ಲಿ ಮಾಲತೇಶ ಸಹಾಯ ಮಾಡಿದನು. ಆದರೆ ಮುಂದಿನ ವರ್ಷಗಳಲ್ಲಿ ಅದೂ ಸಾಧ್ಯವಾಗದಿದ್ದಾಗ ಸುಕನ್ಯಾ ಸಾಕಷ್ಟು ದುಃಖವನ್ನು ಅನುಭವಿಸುವಂತಾಯಿತು. ನಾಟಕಗಳಿಲ್ಲದೆ ಕೈಯಲ್ಲಿ ಕಾಸಿಲ್ಲ. ಜೀವನ ನಡೆಸುವುದೆ ದುರ್ಲಭವಾಯಿತು. ಊರಲ್ಲಿ ಸಹಾಯ ಕೋರುವ ಮಾತೇ ಇಲ್ಲ. ಬೇರೆ ಉದ್ಯೋಗ ಗೊತ್ತಿಲ್ಲ. ಆದರೆ, ಹೊಟ್ಟೆ ಕೇಳಬೇಕಲ್ಲ. ಕೊನೆಗೂ ನಾಟಕ ನೋಡಲೂ ಬಂದಿದ್ದ ಪರಿಚಿತರ ಮನೆಯಲ್ಲಿ ಕಸ ಮುಸುರೆ ಮಾಡುವಂತಹ ಕೆಲಸಕ್ಕೂ ಒಪ್ಪಬೇಕಾಯಿತು. ನಾಟಕಗಳಲ್ಲಿ ಶ್ರೀಮಂತರ
ಮಗಳಾಗಿ ಮೆರೆದಾಡಿದಂತಹ ನಟಿಯೊಬ್ಬಳ ಬದುಕು ಈ ರೀತಿ ಬೀದಿಗೆ ಬಂದಿದ್ದು ಕಾಲದ ಮಹಿಮೆ ಮಹಿಮೆ. ಆದರೆ, ಮಾನದಿಂದ ಬದುಕಲು ಯಾವ ಕೆಲಸವಾದರೇನು ಎಂದು ಆ ಕೆಲಸವನ್ನೇ ಅವಳು ಶ್ರದ್ದೆಯಿಂದ ಮಾಡಿ ಬದುಕನ್ನು ಸಾಗಿಸಿದಳು.
ಎರಡ್ಮೂರು ವರ್ಷ ಇದೇ ಕೆಲಸ ಮಾಡಿದ ಅವಳು ಕರೋನಾದ ಕಾರ್ಮೋಡ ಕರಗಿ ಮತ್ತೇ ರಂಗ ಚಟುವಟಿಕೆ ಗರಿಗೆದರಿದಾಗ ಮಾಲತೇಶ ಫೋನ್ ಮಾಡಿ ನಾಟಕ ಪ್ರಾರಂಭಿಸುವುದಾಗಿ ಬರಲು ಹೇಳಿದನು. ಅವಳಿಗೆ ಅದಕ್ಕಿಂತ ಉತ್ತಮ ದಾರಿ ಇರಲಿಲ್ಲ. ಮತ್ತೇ ಕಂಪನಿಯತ್ತ ಹೆಜ್ಜೆ ಹಾಕಿದಳು. ಕರೋನಾ ಕಾಲದ ಕಲಾವಿದರ ಬದುಕಿನ ಬವಣೆ ಕೇಳಿ ಮಾಲತೇಶ ಮರುಗಿದನಲ್ಲದೆ ಅಂತಹ ಪರಿಸ್ಥಿತಿಯಲ್ಲಿ ತನ್ನನ್ನು ಯಾಕೆ ಕೇಳಲ್ಲಿಲ್ಲವೆಂದು ಅವರಿಗೆಲ್ಲ ತರಾಟೆಗೆ ತೆಗೆದುಕೊಂಡನು. ತಾನು ಫೋನ್ ಮಾಡಿದರೂ ಕೆಲವೊಬ್ಬ ಕಲಾವಿದರ ಫೋನ್ ಗಳು ಸ್ವಿಚ್‍ಆಫ್ ಆದ ಬಗ್ಗೆ ಹೇಳಿದನು. ಹಲವಾರು ನಟರು ರೀಚಾರ್ಜ್ ಮಾಡಿಸಲು ತಮ್ಮಲ್ಲಿ ಹಣವಿಲ್ಲದಾಗಿ ಹೇಳಿದಾಗ ಅವನಿಗೆ ಅರಿವಿಲ್ಲದೆ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಅದರ ಪರಿಣಾಮವೇ ಮಾಲತೇಶ ಹೆಚ್ಚಿನ ಕಲಾವಿದರಿಗೆ ಅನುಕೂಲವಾಗಲೆಂದು ಹೆಚ್ಚಿನ ಪಾತ್ರದ ‘ಕುರುಕ್ಷೇತ್ರ’ ನಾಟಕವನ್ನು ಶುರು ಮಾಡಿದ್ದು.
~~~
ಇನ್ನೇನು ನಾಳೆ ಮಧ್ಯಾಹ್ನದಿಂದ ಅಂಕದ ಪರದೆ ಎದ್ದು ನಾಟಕಗಳ ಪ್ರದರ್ಶನ ಶುರುವಾಗಬೇಕು. ಕರೋನಾ ಕಾರಣದಿಂದ ಮೂರು ವರ್ಷಗಳ ನಂತರ ಈ ವರ್ಷ ರಂಗಸಜ್ಜಿಕೆ ನವ ವಧುವಿನಂತೆ ಅಲಂಕರಿಸಿಕೊಂಡು ಸಿದ್ಧವಾಗಿದೆ. ಪಾತ್ರಧಾರಿಗಳೆಲ್ಲ ಅತೀವ ಉತ್ಸಾಹದಿಂದ ತಾಲೀಮು ನಡೆಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ತಾವು ಅನುಭವಿಸಿದ ಕಷ್ಟಗಳಿಗೆ ಕೊನೆಗೂ ಅಂತ್ಯ ಬಂದಿತಲ್ಲ ಎಂದು ಎಲ್ಲರ ಮುಖಗಳಲ್ಲೂ ಖುಷಿಯು ತಾಂಡವವಾಡುತ್ತಿದೆ. ನಾಳೆ ಗ್ರೀನ್ ರೂಮಗಳೆರೆಡು ಪ್ರಸಾದನ, ವಸ್ತ್ರ ವೈಭವಗಳಿಂದ ಕಳೆಗಟ್ಟುವುದೊಂದೆ ಬಾಕಿ. ಮಾಲತೇಶ ಎಲ್ಲವೂ ಸಿದ್ಧವಾಗಿರುವುದೆಂದು ಮನಗಂಡು ಸಂಜೆ ಟಿಕೇಟ್ ಕೌಂಟರ್‍ಗಳನ್ನು ನಿರ್ಮಿಸುತ್ತಿದ್ದ ಜನರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದನು.
ಅಷ್ಟರಲ್ಲಿ ನಾಲ್ಕೈದು ಜನ ಗ್ರೀನ್ ರೂಮ್ ಕಡೆಯಿಂದ ಸರಕಾರಿ ವಾಹನದಿಂದ ಇಳಿದು ತಮ್ಮತ್ತ ಬರುತ್ತಿರುವುದನ್ನು ಕಂಡನು. ಅವರು ಬಂದು ಮಾಲಿಕರು ಯಾರೆಂದು ಪ್ರಶ್ನಿಸಿ ಅವನೇ ಮಾಲಿಕನೆಂದು ತಿಳಿದಾಗ “ನೋಡಿ, ನಾನು ತಾಲೂಕಾಧಿಕಾರಿ. ಇಡೀ ತಾಲೂಕಿನಲ್ಲಿ ಹೊಸ ವೈರಸ್ ಹರಡಿ ಸಾರ್ವಜನಿಕರ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಇದೂ ಕೂಡಾ ಡೆಡ್ಲಿ ವೈರಸ್. ಜನರ ಗುಂಪಿನ ನಡುವೆ ತುಂಬ ಬೇಗ ಹರಡುವಂತಹದ್ದು. ಯಾವುದೆ ಸಾರ್ವಜನಿಕ ಸಭೆ, ಮನರಂಜನಾ ಕಾರ್ಯಕ್ರಮ ನಡೆದರೆ ಇನ್ನೂ ಹೆಚ್ಚು ಹರಡುವುದು. ಆ ಕಾರಣ ಎಲ್ಲ ನಾಟಕ, ಸಿನೇಮಾ ಪ್ರದರ್ಶನ ರದ್ಧುಪಡಿಸುವಂತೆ ಆದೇಶವಾಗಿದೆ. ನಾಳೆಯ ಜಾತ್ರೆ ಕೂಡಾ ರದ್ದು ಮಾಡಿದೆ. ಅದಕ್ಕಾಗಿ ಈ ಹಿಂದೆ ನಿಮಗೆ ನೀಡಿದ ನಾಟಕದ ಪರವಾನಿಗೆಯನ್ನು ರದ್ಧುಮಾಡಿದೆ. ತಮ್ಮ ನಾಟಕ ಪ್ರದರ್ಶನ ಮಾಡಬೇಡಿ” ಎಂದು ಬಂದ ಅಧಿಕಾರಿ ಹೇಳಿದ.
ಅದಕ್ಕೆ ಮಾಲತೇಶ “ಅಲ್ರಿ ಸಾಹೇಬ್ರ, ಈಗಾಗ್ಲೆ ಖರ್ಚ ಮಾಡಿ ಎಲ್ಲ ತಯಾರಿ ಮಾಡಕೊಂಡಿವಿ. ಈಗ ಹಿಂಗ ಒಮ್ಮೆಲೆ ಬಂದ್ ಮಾಡಿದ್ರ ನಮ್ಮ ಹೆಡಕ ಮುರಿತೈತ್ರಿ. ಹಂಗ ಮಾಡಬ್ಯಾಡ್ರಿ” ಎಂದು ವಿನಂತಿಸಿಕೊಂಡನು.
“ನೋಡ್ರಿ ನಿಮ್ಮ ಕಷ್ಟ ನನಗೂ ಅರ್ಥ ಆಗುತ್ತೆ. ಆದರೆ, ಏನೂ ಮಾಡೋಕಾಗಲ್ಲ. ನಾವು ಆದೇಶ ಪಾಲನೆ ಮಾಡಬೇಕು” ಎಂದು ಅಧಿಕಾರಿ ಅನುಮತಿ ರದ್ದು ಆದೇಶ ಅವನಿಗೆ ನೀಡಿ ಹೋಗುವಾಗ ಮಾಲತೇಶ “ಸಾಹೇಬ್ರ ಕಡಿಕ ನಾಲೈದ ಪ್ರದರ್ಶನ ಮಾಡಾಕರ ಅನುಕೂಲ ಮಾಡ್ರಿ. ಅದರಿಂದ ಕಲಾವಿದರ ಹೊಟ್ಟಿ ತುಂಬತೈತಿ. ಇಲ್ಲಂದ್ರ ಕಲಾವಿದರಿಗೆ ಬಾಳ ತ್ರಾಸ ಆಗತೈತಿ” ಎಂದು ಧೈನ್ಯತೆಯಿಂದ ಕೈ ಮುಗಿದನು.
“ನೋಡ್ರಿ, ನೀವು ದೊಡ್ಡವ್ರು ಹಾಗೆಲ್ಲ ಮಾಡಬೇಡಿ. ಬೇಕಾದರೆ ಬೇರೆ ಜಿಲ್ಲೆಯಲ್ಲಿ ಕ್ಯಾಂಪ್ ಮಾಡಿದರೆ ಅಲ್ಲಿಯ ಅಧಿಕಾರಿಗಳಿಗೆ ಹೇಳಿ ಎಲ್ಲ ರೀತಿಯ ಅನುಕೂಲ ಮಾಡಲು ಹೇಳುವೆ” ಎಂದು ಹೇಳುತ್ತಾ ಗ್ರೀನ್‍ರೂಮ್ ಕಡೆಯಿಂದ ತಮ್ಮ ವಾಹನದತ್ತ ನಡೆದರು.
ಅವರು ಹೋಗುವಾಗ ಗ್ರೀನ್‍ರೂಮಿನಿಂದ ದುರ್ಯೋಧನನು ದರ್ಪದಿಂದ ಡೈಲಾಗ್ ಹೇಳುತ್ತಿರುವುದು ಕೇಳಿ ಬರುತ್ತಿತ್ತು. “ಅನುಜ.. ಈ ಕೌರವ ಕುಲತಿಲಕನ ಪ್ರತಾಪದ ಆಟವನ್ನು ಅದಾರೋ ತಡೆವರೋ ನಾನೂ ನೋಡುವೆ. ಆ ಯದುನಂದನನೋ..? ಆ ಗದಾಧರನೋ..? ಇಲ್ಲಾ ಆ ಫಲ್ಗುಣನೋ..? ಈ ಕೌರವೇಶ್ವರನ ಪರಾಕ್ರಮದ ಎದುರು ನಿಲ್ಲುವಂಥ ಯಾವ ಜೀವಿಯೂ ಭೂಮಂಡಲದಲ್ಲಿ ಇಲ್ಲ. ಸಕಲ ಚರಾಚರವೂ ನನ್ನ ಪಾದದಡಿ ಬಿದ್ದಿರಬೇಕು. ಕೌರವ ಸಂಜಾತನ ದಿಗ್ವಿಜಯವನ್ನು ಯಾರೂ ತಡೆಯಲಾರರು”
- ಮಲ್ಲಿಕಾರ್ಜುನ ಶೆಲ್ಲಿಕೇರಿ
