‘ಚೌಚೌ ಬಾತ್’ ಅಂಕಣ (ಭಾಗ –೧೭)

ಶಬಾನ ಮಾನಸಿಕವಾಗಿ ನೊಂದು ಬ್ಲೇಡಿನಿಂದ ಕೈ ಕೊಯ್ದುಕೊಂಡು ಪ್ರಾಣ ಕಳೆದುಕೊಳ್ಳುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾಳೆ. ಶಾಲೆಯಲ್ಲಿ ಶಿಕ್ಷಕರು ಯಾರೂ ಇಲ್ಲದಿದ್ದಾಗ ಇಂತಹ ಅನಾಹುತ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಶಬಾನ ಕತೆ ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ತಾಳ್ಮೆ ಇಲ್ಲದ ಜೀವನ.’ ತಪ್ಪದೆ ಮುಂದೆ ಓದಿ …

ಒಮ್ಮೆ ನಾನು 9ನೇ ತರಗತಿಯ ಬಿ ವಿಭಾಗದಲ್ಲಿ ಪಾಠ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಪಕ್ಕದ ತರಗತಿಯಿಂದ ಇಬ್ಬರು ಹುಡುಗಿಯರು ಬಂದರು. ಒಬ್ಬಳ ಕೈಯ ಮುಂಭಾಗವನ್ನು ಒತ್ತಿ ಹಿಡಿದಿದ್ದ ಇನ್ನೊಬ್ಬಳು ಅನುಮತಿ ಕೇಳಿ ಒಳ ಬಂದರು. ನಾನು ಗಾಬರಿಯಿಂದ ಏನಾಯಿತು ಎಂದು ಕೇಳಿದೆ ಅದರಲ್ಲಿ ಒಬ್ಬಳು “ಮಿಸ್ ಇವಳು ಬ್ಲೇಡಿನಿಂದ ಕೈ ಕೊಯ್ದು ಕೊಳ್ತಾ ಇದ್ದಾಳೆ, ರಕ್ತ ಬರ್ತಿದೆ” ಯಾಕೆ ಅಂತ ಕೇಳಿದರೆ ಹೇಳುತ್ತಿಲ್ಲ ಎಂದು ಹೇಳಿದಳು. ಅವಳ ಕೈ ತೆಗೆಸಿ ನೋಡಿದರೆ ಎರಡು ಮುಂಗೈಗಳಲ್ಲಿ ರಕ್ತ ಒಸರುತ್ತಿದೆ. ಬ್ಲೇಡಿನಿಂದ ಕೈ ಕೊಯ್ದುಕೊಂಡ ಗೀರುಗಳು ಎದ್ದು ಕಾಣುತ್ತಿವೆ. ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿದೆ. ಒಂದೇ ಸಮನೆ ಅಳುತ್ತಿದ್ದಾಳೆ. ಯಾಕೆ ಎಂದು ಕೇಳಿದರೆ ಏನೂ ಹೇಳುತ್ತಿಲ್ಲ.ಆಗ ಸ್ಟ್ಯಾಫ್ ರೂಂ ಗೆ ಕರೆದುಕೊಂಡು ಹೋಗಿ ನಿಧಾನಕ್ಕೆ ವಿಚಾರಿಸಿದೆ.

ಅವಳ ಹೆಸರು ಶಬಾನ. (ಹೆಸರು ಬದಲಾಯಿಸಲಾಗಿದೆ) 9ನೇ ತರಗತಿಯ ವಿಭಾಗದಲ್ಲಿ ಓದುತ್ತಿದ್ದಾಳೆ. ಓದಿನಲ್ಲಿ ತುಂಬಾ ಚೂಟಿ, ಎಲ್ಲದರಲ್ಲೂ ಮುಂದಾಳತ್ವ ವಹಿಸಿಕೊಳ್ಳುವಳು. ಅಂತಹ ಬುದ್ಧಿವಂತ ಹುಡುಗಿ ಫಿಟ್ಸ್ (ಮೂರ್ಛೆ ರೋಗ) ಕಾಯಿಲೆಯಿಂದ ಬಳಲುತ್ತಿದ್ದಳು. ಮನೆ ಕಡೆ ತುಂಬಾ ಬಡತನ. ಅಮ್ಮ ಯಾವುದೋ ಪ್ಲಾಸ್ಟಿಕ್ ಬಿಂದಿಗೆ ತಯಾರಿ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ದಿನವೊಂದಕ್ಕೆ 200 ರೂ ಸಂಪಾದನೆ ಮಾಡುತ್ತಿದ್ದಳು. ಶಬಾನಳ ಅಪ್ಪ ಅವಳು ಚಿಕ್ಕವಳಿದ್ದಾಗಲೇ ಅವಳ ಅಮ್ಮನನ್ನು ತೊರೆದು ಬೇರೆ ಮದುವೆಯಾಗಿದ್ದರಂತೆ. ಪರಿಸ್ಥಿತಿ ಹೀಗಿರುವಾಗ ಜೀವನ ನಡೆಸುವುದೇ ಕಷ್ಟವಾಗಿತ್ತು ಅವಳ ತಾಯಿಗೆ. ಶಬನಳ ತಾಯಿ ಫಾತಿಮಾ ಅನಕ್ಷರಸ್ಥಳಾದ್ದರಿಂದ ತನ್ನ ಮಗಳಾದರೂ ಎಸ್ ಎಸ್ ಎಲ್ ಸಿ ವರೆಗೂ ಓದಲಿ ಎಂಬ ಆಶಯ ಹೊತ್ತು ನಮ್ಮ ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದ್ದಳು.

ಫೋಟೋ ಕೃಪೆ :google

ನಮ್ಮ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದ್ದೆವು. ಪ್ರವಾಸಕ್ಕೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಿದ್ದೆವು. ಅದರಂತೆ ಅವರು ಸಾಕಷ್ಟು ಜನ ವಿದ್ಯಾರ್ಥಿಗಳು ಹಣ ಕೊಟ್ಟ ನಂತರ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವಾಸ ಬರಲು ಇಚ್ಚಿಸುವವರಿಗೆ ಅವಕಾಶ ನೀಡಲಾಗಿತ್ತು. ಯಾರನ್ನೂ ಒತ್ತಾಯಪೂರ್ವಕವಾಗಿ ಬರಲು ಹೇಳಿರಲಿಲ್ಲ. ಅವರ ಪೋಷಕರು ಒಪ್ಪಿದರೆ ಮಾತ್ರ ಪ್ರವಾಸಕ್ಕೆ ಬರಬಹುದು ಎಂದು ಹೇಳಿದ್ದೆವು. ಅದರಂತೆ 9ನೇ ತರಗತಿಯ ಬಹುತೇಕ ವಿದ್ಯಾರ್ಥಿಗಳು ಶಬಾನಳ ಸ್ನೇಹಿತರು ಪ್ರವಾಸಕ್ಕೆ ಹೊರಟಿದ್ದರು. ಶಬಾನಳಿಗೂ ಪ್ರವಾಸಕ್ಕೆ ಬರಲು ಎಲ್ಲಿಲ್ಲದ ಉತ್ಸಾಹ, ಆಸೆ, ಆದರೆ ಅವರ ಮನೆಯಲ್ಲಿ ಆರ್ಥಿಕ ಸಮಸ್ಯೆ. ಅಲ್ಲದೆ ಅವಳಿಗೆ ಆರೋಗ್ಯ ಸಮಸ್ಯೆಯೂ ಇತ್ತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಶಬಾನಳ ತಾಯಿ ಫಾತಿಮಾ ಪ್ರವಾಸಕ್ಕೆ ಕಳುಹಿಸಲು ಒಪ್ಪಿಲ್ಲ. ಆದರೆ ಇದೆಲ್ಲ ಮುಗ್ಧ ಮನಸ್ಸಿನ ಶಬಾನಾಳಿಗೆ ಅರ್ಥವಾಗಿಲ್ಲ.ನನ್ನ ಗೆಳತಿಯರೆಲ್ಲ ಪ್ರವಾಸಕ್ಕೆ ಹೋಗುತ್ತಿದ್ದಾರೆ, ನಾನು ಹೋಗಬೇಕು ಎಂಬುದು ಅವಳ ಹಠ. ಎಲ್ಲೆಂದರಲ್ಲಿ ಹೊತ್ತು ಗೊತ್ತಿಲ್ಲದೆ ಮೂರ್ಛೆರೋಗದಿಂದ ಪ್ರಜ್ಞೆ ತಪ್ಪಿ ಬೀಳುವ ವಯಸ್ಸಿಗೆ ಬಂದ ಮಗಳನ್ನು ಒಂಟಿಯಾಗಿ ಪ್ರವಾಸಕ್ಕೆ ಕಳುಹಿಸಲು ಯಾವ ತಾಯಿ ತಾನೇ ಒಪ್ಪುತ್ತಾಳೆ. ಬಿಲ್‌ಕುಲ್ ಆಗುವುದಿಲ್ಲ ಎಂದು ಅವಳ ಅಮ್ಮ ಹೇಳಿದ್ದಾಳೆ. ಆಗ ಶಬಾನ ಮಾನಸಿಕವಾಗಿ ನೊಂದು ಬ್ಲೇಡಿನಿಂದ ಕೈ ಕೊಯ್ದುಕೊಂಡು ಪ್ರಾಣ ಕಳೆದುಕೊಳ್ಳುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾಳೆ. ಶಾಲೆಯಲ್ಲಿ ಶಿಕ್ಷಕರು ಯಾರೂ ಇಲ್ಲದಿದ್ದಾಗ ಇಂತಹ ಅನಾಹುತ ಮಾಡಿಕೊಳ್ಳಲು ಮುಂದಾಗಿದ್ದಾಳೆ. ತಕ್ಷಣವೇ ಇಬ್ಬರು ಹುಡುಗಿಯರನ್ನು ಜೊತೆ ಮಾಡಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು.

ಮಾರನೇ ದಿನ ಅವಳನ್ನು ಕರೆದು ಕುಳ್ಳಿರಿಸಿಕೊಂಡು ” ನಿನಗೆ ಆರೋಗ್ಯ ಸರಿಯಾಗಿಲ್ಲದ ಕಾರಣ ನೀನು ಎಲ್ಲೆಂದರಲ್ಲಿ ಪ್ರಜ್ಞೆ ತಪ್ಪಿ ಬೀಳುವುದರಿಂದ ನಿನ್ನ ಅಮ್ಮ ಪ್ರವಾಸಕ್ಕೆ ಕಳಿಸಲು ಒಪ್ಪಿಲ್ಲ, ಅಲ್ಲದೆ ಪ್ರವಾಸಕ್ಕೆ ಹೋಗುವ ಹಣದಲ್ಲಿ ಒಂದು ತಿಂಗಳು ಜೀವನ ನಡೆಸಬಹುದು ನೀವು. ನಿನ್ನ ಅಮ್ಮನಿಗೆ ಹಣಕಾಸಿನ ವಿಚಾರದಲ್ಲಿ ತುಂಬಾ ತೊಂದರೆ ಇದೆ. ನಿಮ್ಮ ಅಪ್ಪ ಬೇರೆ ನಿಮ್ಮ ಜೊತೆ ಇಲ್ಲ ಅಂತೀಯಾ ನಿಮ್ಮ ಅಮ್ಮನಿಗೆ ತುಂಬಾ ಕಷ್ಟ ಆಗುತ್ತೆ ಅಲ್ವಾ ಜೀವನ ನಡೆಸುವುದು. ಅದಕ್ಕೆ ಅವರು ಪ್ರವಾಸಕ್ಕೆ ಕಳಿಸಲು ಒಪ್ಪಿಲ್ಲ . ನೀನು ಮುಂದಿನ ವರ್ಷ 10ನೇ ತರಗತಿಗೆ ಬರುತ್ತೀಯ. ಆಗ ಖಂಡಿತ ನಿನ್ನನ್ನು ಕರೆದುಕೊಂಡು ಹೋಗುತ್ತೇವೆ. ನೀನು ಕೂಡ ಈಗಿನಿಂದಲೇ ಹಣ ಕೂಡಿಡಲು ಪ್ರಾರಂಭಿಸು, ಅಮ್ಮ ಕೊಟ್ಟ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಿ ಎತ್ತಿಡು. ಒಂದೇ ಸಲಕ್ಕೆ ಎರಡು ಮೂರು ಸಾವಿರ ಹೊಂದಿಸುವುದು ನಿಮ್ಮ ಅಮ್ಮ ನಿಗೆ ಕಷ್ಟವಾಗಬಹುದು ಎಂದು ಹೇಳಿ ಸಮಾಧಾನ ಮಾಡಿ ಕಳಿಸಿಕೊಟ್ಟೆವು.

ಫೋಟೋ ಕೃಪೆ : google

ಇಂದಿನ ಹದಿಹರೆಯದ ಮಕ್ಕಳಿಗೆ ತಾಳ್ಮೆಯೇ ಇಲ್ಲದಂತಾಗಿದೆ. ಎಲ್ಲವೂ ತಕ್ಷಣವೇ ಕೈಗೆಟಕುವಂತಿರಬೇಕು. ಕೇಳಿದ್ದು ತಕ್ಷಣದಲ್ಲಿಯೇ ಸಿಗಬೇಕೆಂಬ ಹಠ. ದೊರೆಯದಿದ್ದಾಗ ಇನ್ನು ಬದುಕೇ ಇಲ್ಲವೇನೋ ಎಂಬಂತೆ ಹತಾಶೆ, ನಿರಾಶೆ. ಇದು ಕೇವಲ ಒಬ್ಬ ಶಬಾನಳ ಕಥೆಯಲ್ಲ. ಎಲ್ಲರ ಮನೆಯಲ್ಲೂ ಇಂತಹ ಶಬಾನ ಇದ್ದೇ ಇರುತ್ತಾಳೆ. ಬಹುತೇಕ ಹದಿಹರೆಯದ, ಮಕ್ಕಳ, ಯುವಕ ಯುವತಿಯರ ಕಥೆ ಇದು. ದಿನನಿತ್ಯ ಒಂದಲ್ಲ ಒಂದು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲೂ ಟೀನೇಜ್ ಯುವಕ ಯುವತಿಯರೇ ಹೆಚ್ಚು.

ಗಾಡಿ ಕೊಡಿಸಲಿಲ್ಲವೆಂದೋ, ಮೊಬೈಲ್ ಕೊಡಿಸಲಿಲ್ಲವೆಂದೋ, ಶಿಕ್ಷಕರು ಎಲ್ಲರೆದುರು ಹೋಂವರ್ಕ್ ಮಾಡಿಲ್ಲದ್ದಕ್ಕೆ ಬೈದರೆಂದೂ, ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಅವರ ಅಣ್ಣ ಬಂದು ಎಲ್ಲರೆದುರು ಹೊಡೆದನೆಂದೂ, ಮನೆಯಲ್ಲಿ ಅಪ್ಪ ಅಮ್ಮ ಬೈದರೆಂದು ಈ ರೀತಿ ಕ್ಷುಲ್ಲಕ ಕಾರಣಗಳಿಗೆ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುವ ಹುಚ್ಚರು ಹೆಚ್ಚಾಗಿದ್ದಾರೆ.ಇಂದಿನ ಮಕ್ಕಳದ್ದು ತಾಳ್ಮೆ ಇಲ್ಲದ ಜೀವನವಾಗಿದೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading