‘ಚೌಚೌ ಬಾತ್’ ಅಂಕಣ (ಭಾಗ – ೩೧)

ಒಳ್ಳೆ ಕೆಲಸ ಬರೆಯುವ ಪುಸ್ತಕವೊಂದಿತ್ತು, ಆ ಪುಸ್ತಕದಲ್ಲಿ ಬರೆಯಲು ನಿತ್ಯವೂ ಒಂದೊಂದು ಪರೋಪಕಾರಿ ಕೆಲಸಗಳಲ್ಲಿ ತೊಡಗುತ್ತಿದ್ದೆವು. ನಾಳೆ ಬರೆಯುವುದಕ್ಕಾಗಿ ಹಿಂದಿನ ದಿನವೇ ನಾಳೆ ಯಾವ ಕೆಲಸ ಮಾಡಬೇಕು ಎಂದು, ಯಾರಿಗೆ ಸಹಾಯ ಮಾಡಬೇಕು ಎನ್ನುವ ವಿಷಯಗಳ ಬಗ್ಗೆ ಚರ್ಚಿಸುತಿದ್ದೆವು.ಅಂಕಣಕಾರ್ತಿ ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಸಂಸ್ಕಾರ ಕಲಿಸಿದ ಪುಸ್ತಕ’ ಕುರಿತು ಬರೆದಿದ್ದಾರೆ ತಪ್ಪದೆ ಮುಂದೆ ಓದಿ….

ನಾನಾಗ ಐದೋ ಆರನೇ ತರಗತಿಯಲ್ಲೋ ಓದುತ್ತಿರಬಹುದು. ನಮಗಾಗ ನಮ್ಮ ಶಿಕ್ಷಕರು ಡೈಲಿ ಹೋಂವರ್ಕ್ ಜೊತೆಗೆ ನಾವು ಮಾಡಿದ ಒಂದೊಳ್ಳೆ ಕೆಲಸ ಬರೆದುಕೊಂಡು ಬರಲು ಹೇಳುತ್ತಿದ್ದರು. ಅಂದರೆ ನಾವು ಪ್ರತಿನಿತ್ಯ ಮಾಡುವ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ಬರೆದುಕೊಂಡು ಹೋಗಬೇಕಾಗಿತ್ತು. ಅದಕ್ಕೆಂತಲೇ ಚಿಕ್ಕ ಪಾಕೆಟ್ ನೋಟ್ ಬುಕ್ ಅನ್ನು ಇಟ್ಟಿದ್ದೆವು. ಒಳ್ಳೆ ಕೆಲಸ ಬರೆಯುವ ಪುಸ್ತಕ ಅದು. ಅದರಲ್ಲಿ ದಿನನಿತ್ಯ ನಾವು ದಿನಾಂಕ ನಮೂದಿಸಿ ಅಮ್ಮನಿಗೆ ಮಾಡಿದ ಸಹಾಯವನ್ನೋ ಅಪ್ಪನಿಗೆ ಮಾಡಿದ ಸಹಾಯವನ್ನೋ ಅದರಲ್ಲಿ ಬರೆಯುತ್ತಿದ್ದೆವು.

ಉದಾಹರಣೆಗೆ ಅಮ್ಮನಿಗೆ ಇಂದು ಒಂದು ಬಿಂದಿಗೆ ಕುಡಿಯುವ ನೀರು ತಂದು ಕೊಟ್ಟೆ. ಪಾತ್ರೆ ತೊಳೆದು, ಮನೆಯ ಮುಂದೆ ಕಸಗುಡಿಸಿದೆ, ಶಾಲೆಗೆ ಬರುವಾಗ ದಾರಿಯಲ್ಲಿ ಬಿದ್ದಿದ್ದ ಮುಳ್ಳನ್ನು ತೆಗೆದು ಪಕ್ಕಕ್ಕೆ ಹಾಕಿದೆ. ಒಬ್ಬ ಅಜ್ಜಿಯನ್ನು ರಸ್ತೆ ದಾಟಿಸಿದೆ. ನಮ್ಮ ತಾತನಿಗೆ ಕುಡಿಯಲು ನೀರು ಕೊಟ್ಟೆ, ಶಾಲೆಯ ಮುಂದಿನ ಕಸ ಎತ್ತಿ ಹಾಕಿದೆ, ಹೀಗೆ ನನ್ನ ಒಳ್ಳೆಯ ಕೆಲಸಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿತ್ತು. ಮೊನ್ನೆ ಅಮ್ಮನ ಮನೆಗೆ ಹೋಗಿದ್ದಾಗ ಹಳೆಯ ಪುಸ್ತಕಗಳನ್ನು ಇಟ್ಟಿದ್ದ ಒಂದು ಕಬ್ಬಿಣದ ಟ್ರಂಕ್ ನಲ್ಲಿ ಈ ಸಣ್ಣ ಪುಸ್ತಕ ಸಿಕ್ಕಿತು. ಅದನ್ನು ಓದಿ ನಾನಂತೂ ನಕ್ಕಿದ್ದೆ ನಕ್ಕಿದ್ದು. ಅಷ್ಟೊಂದು ಮುಗ್ದತೆ ಆಗಿನ ಕಾಲದ ಮಕ್ಕಳಾದ ನಮ್ಮಲ್ಲಿ. ಶಿಕ್ಷಕರು ಏನೋ ಹೇಳಿದರೆಂದು ಅದನ್ನು ನಿರ್ಲಕ್ಷಿಸದೆ ಒಂದು ದಿನವೂ ಚಾಚೂ ತಪ್ಪದೇ, ಮರೆಯದೆ ಒಳ್ಳೆಯ ಕೆಲಸ ಮಾಡಿ ಪುಸ್ತಕದಲ್ಲಿ ಬರೆದಿಡುತ್ತಿದ್ದೆವು. ಆ ಒಳ್ಳೆ ಕೆಲಸದ ಪುಸ್ತಕದಲ್ಲಿ ಬರೆದಿಡಲ್ಲಿಕ್ಕಾದರೂ ನಾವು ದಿನನಿತ್ಯ ಒಂದೊಳ್ಳೆ ಕೆಲಸ ಮಾಡುತ್ತಿದ್ದೆವು. ಗುರು ಹಿರಿಯರು ಹೇಳಿದ ಕೆಲಸವನ್ನು ಅಷ್ಟೊಂದು ಆಸಕ್ತಿಯಿಂದ ಬದ್ಧತೆಯಿಂದ ಮಾಡುತ್ತಿದ್ದೆವು.

ಫೋಟೋ ಕೃಪೆ : google

ಆ ಕಾಲದ ಗುರುಹಿರಿಯರಲ್ಲಿ ಎಷ್ಟು ಒಳ್ಳೆಯ ಸಂಸ್ಕಾರ ಇತ್ತು. ಮಕ್ಕಳಿಗೆ ಚಿಕ್ಕಂದಿನಲ್ಲೇ ಉತ್ತಮ ನಡೆ-ನುಡಿ ಆಚಾರ ವಿಚಾರಗಳನ್ನು ಕಲಿಸಿಕೊಟ್ಟರೆ ಅವು ಮುಂದೆ ಅವರ ಬಾಳಿನಲ್ಲಿ ದಾರಿ ದೀಪವಾಗುತ್ತವೆ ಎಂಬುದು ಅವರ ಉದ್ದೇಶ. ಆದ್ದರಿಂದಲೇ ಗುರುಗಳು ಪ್ರತಿದಿನ ಒಂದೊಂದು ಒಳ್ಳೆಯ ಕೆಲಸ ಮಾಡುವಂತೆ ನಮ್ಮನ್ನು ಪ್ರೇರೆಪಿಸುತ್ತಿದ್ದರು. ಮೂರು ವರ್ಷದಲ್ಲಿ ಕಲಿತದ್ದು ನೂರು ವರ್ಷದವರೆಗೆ ಎಂಬಂತೆ ಚಿಕ್ಕಂದಿನಲ್ಲಿ ನಾವು ಮಕ್ಕಳಿಗೆ ಏನನ್ನು ಅಭ್ಯಾಸ ಮಾಡಿಸುತ್ತೇವೆಯೋ ಮಕ್ಕಳು ಅದನ್ನೇ ಕಲಿಯುತ್ತಾರೆ. ಮಕ್ಕಳ ಮನಸ್ಸು ಪರಿಶುದ್ಧವಾದ ಬಿಳಿಯ ಹಾಳೆ ಇದ್ದಂತೆ. ಆ ಹಾಳೆಯಲ್ಲಿ ಮೂಡುವ ಚಿತ್ರಗಳು ಸುಂದರ ಹಾಗೂ ಉತ್ತಮ ಸಂದೇಶ ಹೊತ್ತ ಚಿತ್ರಗಳಾಗಿರಬೇಕು. ಆಗ ಮಾತ್ರ ಮಕ್ಕಳ ವ್ಯಕ್ತಿತ್ವ ಉನ್ನತ ಮಟ್ಟದ್ದಾಗಿರುತ್ತದೆ. ನಾವು ಕಲಿಸುವ ಸಂಸ್ಕಾರ, ಸಂಸ್ಕೃತಿಗಳು ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತವೆ.

ಆ ಕಾಲದಲ್ಲಿ ನಮಗೆ ನಮ್ಮ ಶಿಕ್ಷಕರು ಒಳ್ಳೆಯ ಕೆಲಸದ ಪುಸ್ತಕವನ್ನು ಬರೆದು ದಾಖಲಿಸುವಂತೆ ಹೇಳುವುದರ ಮೂಲಕ ಸನ್ನಡತೆಯನ್ನು ಸನ್ಮಾರ್ಗವನ್ನು ತೋರಿದರು. ಅದರಂತೆ ನಡೆದು ನಾವು ಇಂದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇವೆ. ವರ್ಣಮಾತ್ರಂ ಕಲಿಸಿದಾತಂ ಗುರು ಎಂಬಂತೆ ಒಂದು ಅಕ್ಷರವನ್ನು ಕಲಿಸಿದವನು ಗುರುವಾಗುತ್ತಾನೆ. ಒಂದು ನುಡಿಯನ್ನು ಕಲಿಸಿದವನು ಗುರುವಾಗುತ್ತಾನೆ.

ಫೋಟೋ ಕೃಪೆ : google

ಆಗ ನಾವು ಆ ಪುಸ್ತಕದಲ್ಲಿ ಬರೆಯಲು ನಿತ್ಯವೂ ಒಂದೊಂದು ಪರೋಪಕಾರಿ ಕೆಲಸಗಳಲ್ಲಿ ತೊಡಗುತ್ತಿದ್ದೆವು. ನಾಳೆ ಬರೆಯುವುದಕ್ಕಾಗಿ ಹಿಂದಿನ ದಿನವೇ ನಾಳೆ ಯಾವ ಕೆಲಸ ಮಾಡಬೇಕು ಎಂದು, ಯಾರಿಗೆ ಸಹಾಯ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುತಿದ್ದೆವು. ಅಕ್ಷರದೋಷವೇನಾದರೂ ಕಂಡುಬಂದರೆ ನಮ್ಮ ಶಿಕ್ಷಕರು ತಿದ್ದಿ ಹೇಳುತ್ತಿದ್ದರು. ಆಗ ನಾವು ಸರಿಪಡಿಸಿಕೊಂಡು ಮುಂದೆ ತಪ್ಪಾಗದಂತೆ ಎಚ್ಚರ ವಹಿಸುತ್ತಿದ್ದೆವು. ಅಂದು ನಮ್ಮ ಶಿಕ್ಷಕರು ತಿದ್ದಿ ತೀಡಿ ಹಾಕಿಕೊಟ್ಟ ಅಕ್ಷರದ ಅಡಿಪಾಯ ಸುಭದ್ರವಾಗಿರುವುದರಿಂದ ಇಂದು ಭವ್ಯವಾದ ಅಕ್ಷರದ ಮಹಲನ್ನು ನಿರ್ಮಿಸಲು ಸಾಧ್ಯವಾಗುತ್ತಿದೆ. ಹಾಗೆಯೇ ನೂರಾರು ಜನ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವ ಸೌಭಾಗ್ಯವೂ ನನ್ನದಾಗಿದೆ. ಎಲ್ಲಾ ದಾನಕ್ಕಿಂತ ಶ್ರೇಷ್ಠವಾದದ್ದು ವಿದ್ಯಾದಾನ. ಅಂತಹ ಶ್ರೇಷ್ಠ ದಾನ ವಿದ್ಯಾದಾನ ಮಾಡುವ ಅದೃಷ್ಟ ನನ್ನ ಪಾಲಿಗೆ ದೊರೆತಿದೆ. ವಿದ್ಯೆಯು ಮಾನವನನ್ನು ಸುಸಂಸ್ಕೃತ ನಾಗರಿಕನನ್ನಾಗಿ ರೂಪಿಸುವುದಲ್ಲದೆ ಭವಿಷ್ಯ ಜೀವನವನ್ನು ಉತ್ತಮಗೊಳಿಸುತ್ತದೆ. ಜೀವನಕ್ಕೆ ಆಧಾರವಾಗುತ್ತದೆ. ಹಾಗೆಯೇ ನಾವು ಓದುವ ಉತ್ತಮ ಪುಸ್ತಕಗಳು ಸಂಸ್ಕಾರವನ್ನು ಕಲಿಸುತ್ತವೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW