
ಫೋಟೋ ಕೃಪೆ : google
ಮಕ್ಕಳನ್ನು ಮೊದಲು ಓದುವ ಹವ್ಯಾಸದ ಕಡೆಗೆ ಆಕರ್ಷಿಸಬೇಕು. ಓದುವ ಹವ್ಯಾಸ ಬೆಳೆಸಲು ನಾವುಗಳು ಸಾಧ್ಯವಾದಷ್ಟು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಮನೆಯಲ್ಲಿ ತಂದು ಓದುವ ಹವ್ಯಾಸ ಬೆಳೆಸಿಕೊಂಡರೆ ಮಕ್ಕಳು ಅದನ್ನೆ ಅನುಸರಿಸುತ್ತಾರೆ. ಚಿಕ್ಕಮಕ್ಕಳಿಗೆ ಅವರುಗಳಿಗೆ ಆಸಕ್ತಿ ಹುಟ್ಟಿಸುವಂತಹ ಕತೆ ಪುಸ್ತಕಗಳನ್ನು, ಮಕ್ಕಳ ಹಾಡುಗಳ ಪುಸ್ತಕಗಳನ್ನೂ ಕೊಡಿಸುವ ಮೂಲಕ ಓದುವ ಹವ್ಯಾಸಕ್ಕೆ ಪ್ರೇರೇಪಿಸಬಹುದು. ಮುಖ್ಯವಾಗಿ ಮಕ್ಕಳಿಗೆ ನೀನು ನಿನ್ನ ಭವಿಷ್ಯದಲ್ಲಿ ಏನಾಗಬೇಕೆಂದು ಕೊಂಡಿದ್ದೀಯ ಎಂಬುದರ ಬಗ್ಗೆ ಪ್ರಶ್ನಿಸಿಕೊಳ್ಳುವಂತೆ ಮಾಡಬೇಕು ಅಂದರೆ ಉದಾಹರಣೆಗೆ ಒಬ್ಬ ಜವಾಬ್ದಾರಿಯುತ ಅಧಿಕಾರಿ/ನೌಕರ ಆಗಿ ಉತ್ತಮ ಸಂಬಳ ಪಡೆದು, ಉತ್ತಮ ವಾಹನ ಹೊಂದಿ ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು, ನೀನು ಆಸೆಪಟ್ಟಿದನ್ನೆಲ್ಲಾ ಕೊಂಡುಕೊಂಡು ಸುಖಸಂತೋಷದಿಂದ ಬಾಳಬೇಕು, ನಿನ್ನ ಭವಿಷ್ಯದ ಜೀವನ ತುಂಬಾ ಚೆನ್ನಾಗಿರಬೇಕು ಎಂದರೆ ಏನು ಮಾಡಬೇಕು ಎಂದು ಪ್ರಶ್ನಿಸಿ ಅದು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುವಂತೆ ಮಾಡಬೇಕು. ಆಗ ಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ತಮ್ಮ ಶಾಲಾ/ಕಾಲೇಜು ಅವಧಿಯಲ್ಲಿ ಉತ್ತಮವಾಗಿ ಅಭ್ಯಾಸಮಾಡುವ ಮನಸ್ಥಿತಿಗೆ ಬರಬಹುದು. ನಾವುಗಳು ಕತ್ತಿಯನ್ನು ಆಗಾಗ ಹರಿತಮಾಡಲು ಶಾಣೆ ಹಿಡಿಸುವಂತೆ ವಿದ್ಯಾರ್ಥಿಗಳಿಗೆ ಆಗಾಗ ಕೆಲವೊಂದು ದೃಷ್ಠಾಂಗಳ ಮುಖಾಂತರ ಅವರನ್ನು ಅವರುಗಳ ಉತ್ತಮ ಭವಿಷ್ಯದ ಕನಸ್ಸನ್ನು ತೋರಿಸಿ ಓದಿನ ಕಡೆಗೆ ಪ್ರೇರೆಪಿಸುತ್ತಿರಬಹುದು.

ಫೋಟೋ ಕೃಪೆ : google
ಕೇವಲ ಪ್ರೇರೆಪಣೆಯಿದ್ದರಷ್ಟೇ ಓದಲು ಸಾಧ್ಯವಿಲ್ಲ, ಕೆಲವು ಮಕ್ಕಳು ನಾನು ಎಷ್ಟು ಓದಿದರೂ ನನಗೆ ತಲೆಗೆ ಹತ್ತುವುದಿಲ್ಲ, ನನಗೆ ಐ.ಕ್ಯೂ ಕಡಿಮೆ ಇರಬಹುದು, ದಡ್ಡ ಇರಬಹುದು ಮತ್ತಿತರೆ ಮನಸ್ಥಿತಿಗಳಿಂದಲೂ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಓದುವ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಓದಲು ಮತ್ತು ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಕೆಲವೊಂದು ವಿಧಾನಗಳಿವೆ ಅವುಗಳೆಂದರೆ :
• ಯಾವುದೇ ವಿದ್ಯಾರ್ಥಿಯು ತನ್ನ ಓದಿನ ವಿಷಯಗಳ ಬಗ್ಗೆ ಒಂದು ವೇಳಾಪಟ್ಟಿಯನ್ನು ಕಡ್ಡಾಯವಾಗಿ ತಯಾರಿಸಿಟ್ಟುಕೊಳ್ಳಬೇಕು…
• ವೇಳಾಪಟ್ಟಿ ತಯಾರಿಸಿಕೊಳ್ಳುವಾಗ ಆಸಕ್ತಿಯಿರುವ ವಿಷಯಗಳು ಮತ್ತು ಕ್ಷಿಷ್ಟಕರ ವಿಷಯಗಳನ್ನು ಹೊಂದಾಣಿಕೆಯಿಂದ ತಯಾರು ಮಾಡಿಕೊಳ್ಳಬೇಕು ಬೆಳಗ್ಗೆ ಎದ್ದ ತಕ್ಷಣ ಮೊದಲ ಅವಧಿಯಲ್ಲಿ ಕ್ಷಿಷ್ಟಕರ ವಿಷಯಗಳನ್ನು ಓದಿ ಮನದಟ್ಟು ಮಾಡಿಕೊಳ್ಳಬಹುದು.
• ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನಗಳು :
• ಓದುವ ಸ್ಥಳವನ್ನು ಬದಲಿಸುವುದರಿಂದ,
• ಪುಸ್ತಕದ ಕೋನವನ್ನು ಬದಲಿಸುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಮೆದುಳು ಹಾಗೂ ಮನಸ್ಸು ಹೊಸತನಕ್ಕಾಗಿ ಹಾತೊರೆಯುತ್ತಿರುತ್ತದೆ.
• ಒಂದು ಅಧ್ಯಾಯವನ್ನು ಓದಿದ ನಂತರ ಮತ್ತೊಮ್ಮೆ ಅದೇ ಅಧ್ಯಾಯವನ್ನು ಓದುವುದು.
• ಓದುವಾಗ ಗಮನಿಸಿದ ಮುಖ್ಯಾಂಶಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳುವುದು.
• ಒಂದು ಅಧ್ಯಾಯವನ್ನು ಓದಿದ ನಂತರ ಅದನ್ನು ಮನಸ್ಸಿನಲ್ಲಿ ಮನನ ಮಾಡಿಕೊಳ್ಳುವುದು.
• ಚರ್ಚೆಗಳು ಕೂಡ ವಿಷಯವನ್ನು ಅಥೈಸಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಉತ್ತಮ ವಿಧಾನ.
• ಅಂದಿನ ಪಾಠವನ್ನು ಅಂದೇ ಓದುವುದು ಸಹ ಉತ್ತಮ ವಿಧಾನ.
• ತರಗತಿಯಲ್ಲಿ ಗುರುಗಳು ಹೇಳಿಕೊಡುವ ಪಾಠಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುವುದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯಬಲ್ಲದು.
• ತರಗತಿಯಲ್ಲಿ ಪಾಠವನ್ನು ಗಮನವಿಟ್ಟು ಕೇಳಿ ಮನೆಗೆ ಬಂದು ಮತ್ತೊಮ್ಮೆ ಅಧ್ಯಯನ ಮಾಡಿ ಒಂದು ಕಡೆ ಮುಖ್ಯಾಂಶಗಳನ್ನು ಬರೆದಿಟ್ಟುಕೊಂಡು ನಂತರ ಮನಸ್ಸಿನಲ್ಲಿ ಮನನ ಮಾಡಿದರೆ ಖಂಡಿತವಾಗಿ ಆ ವಿಷಯ ಮೆದುಳಿನಲ್ಲಿ ಬೇರೂರಿ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಹಕಾರಿಯಾಗಬಲ್ಲದು.
• ವಿಷಯದ ಮುಖ್ಯಾಂಶಗಳನ್ನು ಜೋರಾಗಿ ಹೇಳುತ್ತಾ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಕೇಳಿಸಿಕೊಳ್ಳಬಹುದು.
• ಓದುತ್ತಾ ಕುಳಿತಿರುವಾಗ ನಮಗರಿವಿಲ್ಲದ ಹಾಗೆ ಮನಸ್ಸು ಎಲ್ಲಿಗೊ ಹೋಗುವ ಅನುಭವ ಎಲ್ಲರಿಗೂ ಆಗಿರುತ್ತದೆ. ಅದಕ್ಕಾಗಿ ಒಂದು ಪೆನ್ನು ಅಥವಾ ಪೆನ್ಸಿಲ್ ಅಥವಾ ಬೆರಳನ್ನು ಹಿಡಿದುಕೊಂದು ಓದುತ್ತಾ ಹೋಗುವ ಹವ್ಯಾಸ ಮಾಡಿಕೊಂಡರೆ ಈ ರೀತಿಯ ಸಮಸ್ಯೆಯಿಂದ ಬಿಡುಗಡೆ ಸಾಧ್ಯವಿದೆ.
• ಮನುಷ್ಯನ ಮನಸ್ಸು ಚಂಚಲವಾದದ್ದು ನೀವು ಏನೇ ಮಾಡಿದರೂ ಪುಸ್ತಕ ಹಿಡಿದು ಓದುತ್ತಾ ಕುಳಿತಿದ್ದಾಗ ಬೇರೆ ಚಟುವಟಿಕೆಗಳ ಕಡೆಗೆ ಮನಸ್ಸು ವಾಲುತ್ತಿರುತ್ತದೆ. ಅದಕ್ಕಾಗಿ ನೀವು ಓದುವ ಸ್ಥಳದಲ್ಲಿ ನಿಮ್ಮ ಗುರಿಯನ್ನು ನೆನಪಿಸುವ ಯಾವುದಾದರೂ ವಸ್ತು/ಚಿತ್ರಪಟ ಅಥವಾ ಇನ್ನಾವುದಾದರೂ ಒಂದು ಅಂಶವನ್ನು ಇರಿಸಿಕೊಳ್ಳಬೇಕು ಆ ಪದಾರ್ಥವನ್ನು ನೋಡಿದ ತಕ್ಷಣ ನಿಮ್ಮ ಲಕ್ಷ್ಯ ಓದಿನ ಕಡೆಗೆ ಬರುವಂತಿರಬೇಕು.
• ದಿನವೆಲ್ಲಾ ಓದುತ್ತಾ ಕುಳಿತರೂ ಮೆದುಳು ನಿಮಗೆ ಸಹಕರಿಸಲಾರದು. ವಿದ್ಯಾರ್ಥಿ ಜೀವನದಲ್ಲಿ ಎಲ್ಲಾ ವಿಚಾರಗಳಲ್ಲೂ ತೊಡಗಿಸಿಕೊಂಡಿರಬೇಕು. ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು, ಸ್ನೇಹಿತರ ಜೊತೆ ಸಮಯ ಕಳೆಯುವುದು ಇತ್ಯಾದಿ ಎಲ್ಲಾ ವಿಚಾರಗಳಲ್ಲೂ ತೊಡಗಿಸಿಕೊಳ್ಳಬೇಕು. ಯಾವುದೇ ಕೆಲಸ ಮಾಡುವಾಗಲೂ ಶ್ರದ್ದೆಯಿಂದ ಮಾಡಿದಾಗ ಯಶಸ್ಸುಗಳಿಸಲು ಸಾಧ್ಯ. ಓದುವಾಗ ಆಟದ ಬಗ್ಗೆ ಚಿಂತೆ, ಆಟವಾಡುವಾಗ ಯಾವುದೋ ಸಿನಿಮಾದ ಗುಂಗು, ಸ್ನೇಹಿತರ ಜೊತೆಯಲ್ಲಿದಾಗ ಅಯ್ಯೋ ಇಂದು ಓದಿಯೇ ಇಲ್ಲವಲ್ಲ ಎಂದು ಚಿಂತೆ ಮಾಡುತ್ತಿದ್ದರೆ ಯಾವ ಕಡೆಯಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ. ಕೇವಲ ಪುಸ್ತಕದ ಹುಳುಗಳಾಗದೇ ಎಲ್ಲಾ ವಿಭಾಗಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಾಗ
ಮೆದುಳು ಮತ್ತು ಮನಸ್ಸು ಉಲ್ಲಾಸದಿಂದ ಕೆಲಸ ಮಾಡುತ್ತದೆ.
- ತಾರೇಶ್ ಗೌಡ
