ಪಾಪ ಅಜ್ಜಿಗೆ ಒಂಟಿತನ ಹಾಗೂ ಅಭದ್ರ ಭಾವ ಕಾಡುತ್ತೇನೋ ನನ್ನ ಬಳಿ ಹೇಳಿಕೊಂಡು ಹಗುರಾದಳು. ಇನ್ನೂ ಏನೇನೋ ಹೇಳುತ್ತಿದ್ದಳು, ನಾನು ಸುಮ್ಮನೆ ಅವಳ ಮಾತಿಗೆ ಕಿವಿಯಾದೆ. ಆದರೆ ಆ ಅಜ್ಜಿಯ ಒಂದೇ ಒಂದು ಪದ ನನ್ನನ್ನು ದಶಕಗಳ ಹಿಂದಿನ ನೆನಪಿನ ಲೋಕಕ್ಕೆ ಒಯ್ದಿತ್ತು. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ನಚ್ಚಗಾಗುವುದೆಂದರೆ ….’, ತಪ್ಪದೆ ಮುಂದೆ ಓದಿ …
ಮೊನ್ನೆ ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ಬಸ್ ನಲ್ಲಿ ಬರುತ್ತಿದ್ದೆ. ಬಸ್ ತುಂಬಾ ರಶ್ ಏನೂ ಇರಲಿಲ್ಲ. ಅಲ್ಲಲ್ಲಿ ಕೆಲವು ಸೀಟುಗಳು ಖಾಲಿ ಇದ್ದವು. ನಾನು ಒಬ್ಬ ಅಜ್ಜಿಯ ಪಕ್ಕದ ಸೀಟಿನಲ್ಲಿ ಕುಳಿತೆ. ಅಜ್ಜಿಯ ಬ್ಯಾಗ್ ನಿಂದ ಏನೋ ತಗುಲಿ ಕೈಗೆ ತರಚಿದಂತಾಯಿತು. ಏನೆಂದು ನೋಡಿದೆ, ಒಂದು ರೀತಿಯ ನಾಲ್ಕು ಬೆರಳುಗಳನ್ನು ಮಡಿಚಿದಂತೆ ಇರುವ ಒಂದು ಮರದ ಸಾಮಗ್ರಿ. ನೋಡಲು ಸೇಮ್ ಕೈ ತರಾನೆ ಇತ್ತು. ನಾನು ಅಜ್ಜಿಯನ್ನು ಏನಿದು ಅಜ್ಜಿ ಎಂದು ಕೇಳಿದೆ. ಆಗ ಅಜ್ಜಿ “ಅಯ್ಯೋ….. ಬೆನ್ನು ಕೆರ್ಕಂಬಾದು ಕಣಮ್ಮಯ್ಯ, ತಿರುಪತಿಯಿಂದ ತಂದಿದೀನಿ. ಏನ್ ಮಾಡಾದು ಹೇಳು , ಮನೆಯಾಗೆ ನಾನೊಬ್ಬಳೇ ಇರೋದು. ನೀರು ಹುಯ್ಕಂಬುವಾಗ ಬೆನ್ನು ಉಜ್ಜೋರು ಯಾರೂ ಇಲ್ಲ, ಅದಿಕ್ಕೆ ಬೆನ್ನು ಕಡೀತಾ ಇರ್ತೈತೆ. ಆವಾಗ ಇಂತದು ತಕಂಡು ಕೆರ್ಕಂಡ್ರೆ ನಚ್ಚಗಾಗ್ತೈತೆ , ಅದಿಕ್ಕೆ ತಕಬಂದೆ ” ಎಂದು ಇಷ್ಟುದ್ದ ಭಾಷಣ ಬಿಗಿದಳು. ಅವಳ ಮಾತುಗಳನ್ನು ಕೇಳಿ ಅಕ್ಕಪಕ್ಕ ದಲ್ಲಿದ್ದವರು ಮುಸಿ ಮುಸಿ ನಗುತ್ತಿದ್ದರು. ನನಗೂ ನಗು ಬಂತು. ಪಾಪ ಅಜ್ಜಿಗೆ ಒಂಟಿತನ ಹಾಗೂ ಅಭದ್ರ ಭಾವ ಕಾಡುತ್ತೇನೋ ನನ್ನ ಬಳಿ ಹೇಳಿಕೊಂಡು ಹಗುರಾದಳು. ಇನ್ನೂ ಏನೇನೋ ಹೇಳುತ್ತಿದ್ದಳು, ನಾನು ಸುಮ್ಮನೆ ಅವಳ ಮಾತಿಗೆ ಕಿವಿಯಾದೆ. ಆದರೆ ಆ ಅಜ್ಜಿಯ ಒಂದೇ ಒಂದು ಪದ ನನ್ನನ್ನು ದಶಕಗಳ ಹಿಂದಿನ ನೆನಪಿನ ಲೋಕಕ್ಕೆ ಒಯ್ದಿತ್ತು.

ನಮ್ಮ ನಂಜಮ್ಮಜ್ಜಿ ( ಅಪ್ಪನ ಅಮ್ಮ ) ನಾವು ರಜೆಯಲ್ಲಿ ಹಳ್ಳಿಗೆ ಹೋದಾಗ ಮನೆಯ ಮುಂದಿನ ಪಡಸಾಲೆಯಲ್ಲಿ ಎತ್ತೊಲೆ ಇಟ್ಟು ಕಡಲೆಕಾಯಿಯನ್ನೋ , ಹುರುಳಿ ಕಾಳುಗಳನ್ನೋ ಹುರಿದು ಕೊಡುತ್ತಿದ್ದಳು. ನಮಗೆ ಆ ಕಾಲಕ್ಕೆ ತಿನ್ನಲು ಅದೇ ಸ್ನ್ಯಾಕ್ಸ್. ನಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಮುತ್ತಿನ ಜೋಳ ಹುರಿದು ಅವಲು ಮಾಡಿ ಕೊಡುತ್ತಿದ್ದಳು. ಬಿರು ಬೇಸಿಗೆಯಲ್ಲಿ ಸೌದೆ ಒಲೆಯ ಮುಂದೆ ಕುಳಿತ ಅಜ್ಜಿಗೆ ಬೆವರು ಹರಿದು ಬೆನ್ನಿನಗುಂಟ ಇಳಿಯುತ್ತಿದ್ದವು. ಆಗ ಬೆನ್ನಿನಲ್ಲಿ ತುರಿಕೆಯಾಗಿ ಅಲ್ಲೇ ಬಾಗಿಲಿನ ಹಿಂದೆ ಇದ್ದ ಪೊರಕೆ ತೆಗೆದುಕೊಂಡು ಉಲ್ಟಾ ಮಾಡಿ ಪರಪರನೆ ಕರೆದುಕೊಳ್ಳುತ್ತಿದ್ದಳು. ನಾವು “ಏನಜ್ಜಿ ….ಇದು” ಎಂದರೆ ಅಯ್ಯಾ…. ಸುಮ್ನಿರು ಬೆನ್ನಾಗೆ ಕಡಿತಾ…ಐತೆ, ಪರ್ಕೆಗೆ ಗೀರ್ಕಂಡ್ರೆ ನಚ್ಚಗಾಗ್ತೈತೆ ಎನ್ನುತ್ತಿದ್ದಳು. ಆದರೆ ಚಿಕ್ಕ ಮಕ್ಕಳಾದ ನಮಗೆ ಆಗ ನಚ್ಚಗಾಗುವುದೆಂದರೆ ಏನೆಂದು ತಿಳಿದಿರಲಿಲ್ಲ.
ಇನ್ನೊಮ್ಮೆ ನಮ್ಮ ತಾತ ಕೋಳಿ ಪುಕ್ಕದ ಗರಿ ತೆಗೆದುಕೊಂಡು ಮುಂದಿನ ಪುಕ್ಕ ಮಾತ್ರ ಇರಿಸಿ ಹಿಂದಿನ ಗರಿಗಳನ್ನೆಲ್ಲ ಕಿತ್ತುಹಾಕಿ ಮುಂದೆ ಚೂಪು ಮಾಡಿಕೊಂಡು ಕಿವಿಗೆ ಇಟ್ಟುಕೊಂಡು ತಿರುಗಾಡಿಸುತ್ತಿದ್ದ . ನಾವು ಅದು ಏನೆಂದು ಕೇಳಿದರೆ…. ” ಕೋಳಿ ಪುಕ್ಕ ಕಣಮ್ಮ, ಕಿವಿಗೆ ಇಟ್ಕಂಡು ತಿರುಗಿಸು ನಚ್ಚಗಾಗ್ತೈತೆ ಎನ್ನುತ್ತಿದ್ದ. ತಾತ ಹೇಳಿದಂತೆ ನಾವು ಮಾಡುತ್ತಿದ್ದೆವು. ನಿಜಕ್ಕೂ ಅದೆಷ್ಟು ಅದ್ಭುತ ಅನುಭೂತಿ ಎಂದರೆ ಹೇಳಲು ಅಸಾಧ್ಯ . ಒಂಥರ ಹಿತವಾದ ಅನುಭವ. ಇದನ್ನೇ ಹಿಂದಿನ ಕಾಲದವರು ನಚ್ಚಗಾಗುವುದು ಎನ್ನುತ್ತಿದ್ದರೇನೋ .ಅಂತೂ ಇಂತೂ ದಶಕಗಳ ಹಿಂದಿನ ಗ್ರಾಮೀಣ ಸೊಗಡಿನ ಪದ ಮತ್ತೆ ನೆನಪಾಯ್ತು. ನನ್ನ ಪಕ್ಕ ಬಸ್ಸಿನಲ್ಲಿ ಕುಳಿತ ಅಜ್ಜಿ ನಚ್ಚಗಾಗ್ತೈತೆ ಅಂದ ಕೂಡಲೇ ನನ್ನ ಕಿವಿ ನೆಟ್ಟಗಾಗಿದ್ದವು. ಈ ಅಜ್ಜಿ ಕೂಡ ನಮ್ಮ ಅಜ್ಜಿ ಕಾಲದವಳೆ ಇರಬಹುದು ಅಂದುಕೊಂಡೆ.
ತಲೆಮಾರುಗಳು ಕಳೆದಂತೆ ಹೆಚ್ಚಿನ ಬಳಕೆ ಇಲ್ಲದೆ ಇಂತಹ ಅದೆಷ್ಟೋ ಗ್ರಾಮೀಣ ಸೊಗಡಿನ ಪದಗಳು ಕಣ್ಮರೆಯಾಗಿವೆ, ಕಣ್ಮರೆಯಾಗುತ್ತಿವೆ. ಇಂತ ದೇಸಿ ಪದಗಳನ್ನು ಮಾತನಾಡುವ ಹಿರಿಯರು ಹಳ್ಳಿಯಲ್ಲಿ ಮಾತ್ರ ಕಾಣಿಸಿಗುತ್ತಾರೆ. ಅವರ ನಂತರ ಅವರ ಭಾಷಾ ಸಂಸ್ಕೃತಿ ನಶಿಸಿಹೋಗುತ್ತದೆ. ಹಾಗಾಗದಂತೆ ಅವರ ಮುಂದಿನ ಪೀಳಿಗೆಗೆ ಅವರಾಡುವ ಭಾಷೆಯಿಂದ ಹಿಡಿದು ಆಚರಿಸುವ ಹಬ್ಬ ಹರಿದಿನಗಳು, ಸಾಂಸ್ಕೃತಿಕ ಉತ್ಸವಗಳು ಮುಂತಾದ ವಿಚಾರಧಾರೆಗಳು ಹರಿದು ಬರುವಂತಾಗಬೇಕು. ಅಲ್ಲದೆ ಈಗಿನ ಪೀಳಿಗೆಯು ಹಿಂದಿನ ಪೀಳಿಗೆಯ ಸಂಸ್ಕೃತಿಯ ಭಾಗವಾದ ಭಾಷೆಯನ್ನು ಉಳಿಸಲು ಮುಂದಾಗಬೇಕು. ಹಾಗಾದಾಗ ಮಾತ್ರ ನಾಡಿನ ಸಾಂಸ್ಕೃತಿಕ ಪರಂಪರೆ, ನೆಲೆಗಟ್ಟು ಸ್ಥಿರವಾಗಿ ಉಳಿಯುತ್ತದೆ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ಸರ್ವಮಂಗಳ ಜಯರಾಮ್ – ಶಿಕ್ಷಕಿ ಗೌರಿಬಿದನೂರು.
