ಸವಿತಾ ರಮೇಶ್ ಅವರ ಮೊದಲ ಕಾದಂಬರಿ ‘ಬೆಂಕಿಯಲ್ಲಿ ಅರಳಿದ ತಾವರೆ’ ಯಲ್ಲಿ ಬರುವ ಒಂದೊಂದು ಸನ್ನಿವೇಶದ ಚಿತ್ರಣ ಕಣ್ಮುಂದೆ ಬರುತ್ತದೆ. ಶಿಕ್ಷಕರಾದ ಹೆಚ್.ಡಿ. ದಿವಾಕರ್ ಅವರು ಈ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಬೆಂಕಿಯಲ್ಲಿ ಅರಳಿದ ತಾವರೆ
ಲೇಖಕರು : ಸವಿತಾ ರಮೇಶ್
ಪ್ರಕಾರ : ಕಾದಂಬರಿ
ಸಂದೇಶ ಸಾರುವ ಕಾದಂಬರಿ ಲೇಖಕಿ ಸವಿತಾ ರಮೇಶ್ ಅವರ ಮೊದಲ ಕಾದಂಬರಿ ” ಬೆಂಕಿಯಲ್ಲಿ ಅರಳಿದ ತಾವರೆ” ನೋಡಿದಾಗ ಲೇಖಕಿ ಈ ಕಾದಂಬರಿಯನ್ನು ಅವರಿಗೆ ಒಳ್ಳೆಯ ಸಂಸ್ಕಾರ ನೀಡಿ, ಇವರಲ್ಲಿ ಸಾಹಿತ್ಯ ಪ್ರೇಮ ತುಂಬಿದ ತಮ್ಮ ತಂದೆ ತಾಯಿಗೆ ಪುಸ್ತಕ ಸಮರ್ಪಣೆ ಮಾಡಿರುತ್ತಾರೆ.
ಲೇಖಕಿ ಪ್ರಸ್ತಾವನೆಯಲ್ಲಿ ತಮ್ಮ ಮನದಾಳದ ಮಾತುಗಳಿಂದ ತಾವು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ಬಂದ ದಾರಿ ಹಾಗೂ ಈ ಪುಸ್ತಕ ಹೊರಬರಲು ಸಹಕರಿಸಿರುವ ಎಲ್ಲರಿಗೂ ಧನ್ಯವಾದ ಹೇಳಿ, ಓದುಗರ ಪ್ರೋತ್ಸಾಹಕ್ಕೆ ಮನವಿ ಮಾಡಿದ್ದಾರೆ.
ಇದಕ್ಕೆ ಮುನ್ನುಡಿ ಬರೆದಿರುವ ರಮಾ ಸುದರ್ಶನ್ ಮತ್ತು ಕೃಷ್ಣ ಪ್ರಿಯ ಕಲಾ ಬಳಗದ ಸಂಸ್ಥಾಪಕರಾದ ಎ.ಎಸ್. ದಿವ್ಯಜಾ ಬಾಲಾಜಿ ಇವರುಗಳ ಮುನ್ನುಡಿ ಓದಿ ತುಂಬಾ ಸಂತೋಷವಾಯಿತು.
ಮಧುರಾ ದೊಡ್ಡ ತೊಟ್ಟಿಯ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಸಂಪ್ರದಾಯ ಕುಟುಂಬದ ಹುಡುಗಿ. ತಂದೆ ತಾಯಿ ತೀರಿಕೊಂಡ ನಂತರ ಇವಳ ಅಕ್ಕ ಮನೆಯ ಅಡಿಗೆ ತಿಂಡಿ ಮನೆಯ ಜವಾಬ್ದಾರಿ ಹೊತ್ತಳು. ಅವಳ ಮದುವೆಯ ನಂತರ ಮಧುರ ತನ್ನ ಅಣ್ಣಂದಿರಿಗೆ ಅಡಿಗೆ ತಿಂಡಿ ಮಾಡುವುದು ಮನೆಯ ಕೆಲಸದಿಂದ ಮುಂದೆ ಓದುವುದು ಸಾಧ್ಯವಾಗುವುದಿಲ್ಲ. ಮಧುರ ತುಂಬಾ ಕಪ್ಪು ಬಣ್ಣದ ಹುಡುಗಿ ಮತ್ತು ಲಕ್ಷಣವಾಗಿಯೂ ಇರದ ಕಾರಣ ಯಾರು ಇವಳನ್ನು ಮದುವೆ ಆಗುವುದಿಲ್ಲ ಎಂಬ ತಿರಸ್ಕಾರ ಭಾವದಿಂದ ನೋಡುತ್ತಿದ್ದರು. ಯಾರೂ ಪ್ರೀತಿಸುವುದಿಲ್ಲ ಮತ್ತು ಮಾತನಾಡಿಸುವುದಿಲ್ಲ, ಎಂಬ ನಿಂದನೆಗೆ ಗುರಿಯಾಗುತ್ತಾಳೆ. ನನ್ನನ್ನು ಯಾರೂ ಮದುವೆಯಾಗುವುದಿಲ್ಲ ಎಂಬ ಕೊರತೆ ಇವಳಲ್ಲಿ ಕಾಡತೊಡಗಿತು.ಇದನ್ನು ಲೇಖಕಿ ಸೊಗಸಾದ ಮಾತುಗಳಿಂದ ತಿಳಿಸಿದ್ದಾರೆ. ಮಧುರಳ ಮನೆಯ ಕೆಲಸಕ್ಕೆ ಬರುತ್ತಿದ್ದ ಸುಶೀಲೆಯ ಮಗ ಊರಿಗೆ ಬಂದಾಗ ಇವಳನ್ನು ಬೇಟಿ ಮಾಡಿ “ನೀನು ಕೃಷ್ಣ ಸುಂದರಿ, ನೀನು ತುಂಬಾ ಚೆನ್ನಾಗಿದ್ದೀಯ ಎಂಬ ಒಂದೆರಡು ಮಾತುಗಳಿಗೆ ಮಧುರ ಮರುಳಾಗುವಂತೆ ಮಾಡುತ್ತಾನೆ. ನಾನು ಬಾಂಬೆಯಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ ನೀನು ಒಪ್ಪಿಕೊಂಡರೆ ನಿನ್ನನು ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸುತ್ತಾನೆ. ಇದು ನಿಜವಾದ ಪ್ರೀತಿ ಎಂದು ನಂಬಿ ಮನೆಯವರಿಗೆ ಹೇಳದೆ ಅನ್ಯಜಾತಿಯ ಹುಡುಗನಾದರೂ ಪರವಾಗಿಲ್ಲ ಮನೆಯವರು ನನ್ನನ್ನು ಮಾತನಾಡಿಸುವುದಿಲ್ಲ ಹಾಗೂ ಮನೆಗೂ ಸೇರಿಸುವುದಿಲ್ಲ ಎಂದು ತಿಳಿದು ಸುಶೀಲೆಯ ಮಗ ಚಂದ್ರನ ಜೊತೆ ಬಾಂಬೆಗೆ ಹೊರಟು ಹೋಗುತ್ತಾಳೆ.ಆ ಊರಿನಲ್ಲಿ ಈವಿಷಯ ಇವಳ ಸ್ನೇಹಿತೆ ವಸಂತಳಿಗೆ ಮಾತ್ರ ತಿಳಿಸಿರುತ್ತಾಳೆ.

ಮಧುರ ಬಾಂಬೆಗೆ ಹೋದಾಗ ಒಂದು ಪುಟ್ಟ ಮನೆ ಕಾಲು ನೀಡಿ ಮಲಗಲೂ ಸಹ ಆಗುವುದಿಲ್ಲ. ಇವನು ಕೆಲಸಕ್ಕೂ ಸರಿಯಾಗಿ ಹೋಗದೆ ಕೆಟ್ಟ ಅಭ್ಯಾಸ ಮಾಡುವುದು ಎಲ್ಲಾ ಇವಳಿಗೆ ತಿಳಿಯುತ್ತದೆ. ತನ್ನ ಒಡವೆ ಮತ್ತು ತಂದಿದ್ದ ಸ್ವಲ್ಪ ಹಣ ಕೂಡ ಕೊಡುವ ಸ್ಥಿತಿ ಬರುತ್ತದೆ. ನಂತರ ಮಧುರ ಬೇರೆಯವರ ಮನೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಸುಖವಾಗಿ ಬೆಳೆದಿದ್ದು ಈಗ ಇವನನ್ನು ನಂಬಿ ಅಣ್ಣಂದಿರು ಅಕ್ಕ ಬಂಧುಗಳ ಸಂಬಂಧವನ್ನು ಕಳೆದು ಕೊಂಡೆ ಎಂದು ದುಃಖಿಸುತ್ತಾಳೆ. ಚಂದ್ರನು ತನ್ನ ತಾಯಿಗೆ ನಾನು ಮಧುರಳನ್ನು ಮದುವೆಯಾಗಿದ್ದೇನೆ ಎಂದು ವಿಷಯ ತಿಳಿಸಿದಾಗ ಆ ವಿಷಯ ಇವಳ ಅಣ್ಣಂದಿರಿಗೆ ತಿಳಿದು ತುಂಬಾ ದುಃಖಿಸಿ ನಮ್ಮ ಕುಟುಂಬದ ಮಾನ ಮರ್ಯಾದೆ ತೆಗೆದು ಹೋದಳು. ಅವಳು ನಮ್ಮ ಪಾಲಿಗೆ ಸತ್ತುಹೋದಳೆಂದು ನಿರ್ಧರಿಸುತ್ತಾರೆ.
ಇಲ್ಲಿ ಚಂದ್ರನ ಸ್ನೇಹಿತನ ಹೆಂಡತಿ ಅರುಣ ಧೈರ್ಯ ಹೇಳಿ ಒಂದು ಮನೆಗೆ ಮನೆ ಕೆಲಸಕ್ಕೆ ಸೇರಿಸುತ್ತಾಳೆ. ಇವಳ ಕೈಯಲ್ಲಿ ದುಡಿಸಿ ತಿನ್ನುತ್ತಿರುತ್ತಾನೆ. ಇವಳ ಮೇಲೆ ಸ್ವಲ್ಪವೂ ಪ್ರೀತಿ ಇರುವುದಿಲ್ಲ. ಸುಕನ್ಯಾ ಎಂಬುವವರ ಮನೆಯ ಕೆಲಸ ಮಾಡಲು ಪ್ರಾರಂಭಿಸುತ್ತಾಳೆ. ಸುಕನ್ಯಾ ಅವರಿಗೆ ಮಧುರಳನ್ನು ಕಂಡರೆ ತುಂಬಾ ಮಮತೆ. ತುಂಬಾ ಒಳ್ಳೆಯವರು. ಅರುಣಳಿಂದ ಮಧುರಳ ಕಷ್ಟ ಏನು ಮತ್ತು ಚಂದ್ರ ಮೋಸ ಮಾಡಿದ ವಿಷಯ ತಿಳಿದಿರುತ್ತದೆ.
ಮಧುರ ತಾಯಿ ಆಗುತ್ತಿರುವ ವಿಷಯ ಚಂದ್ರನಿಗೆ ತಿಳಿಯುತ್ತದೆ. ತುಂಬಾ ಹಿಂಸೆ ಕೊಡಲು ಪ್ರಾರಂಭಿಸಿದ. ಮತ್ತು ಇವಳನ್ನು ಸಾಹಿಸಿ ಹೆಚ್ಚು ವರದಕ್ಷಿಣೆ ಕೊಡುವ ಹುಡುಗಿಯನ್ನು ಮದುವೆಯಾಗಲು ಇಚ್ಛಿಸಿದ ತನ್ನ ತಾಯಿ ಸುಶೀಲೆಗೂ ಈ ವಿಷಯ ತಿಳಿಸಿದ ಇದಕ್ಕೆ ತಾಯಿಯ ಬೆಂಬಲ ಸಿಗುತ್ತದೆ. ಚಂದ್ರ ಮಧುರಳಿಗೆ ಹೊಟ್ಟೆ ನೋವಿಗೆ ಈ ಮಾತ್ರೆ ತೆಗೆದುಕೊ ಎಂದು ಕೊಡುತ್ತಾನೆ. ಆದರೆ ಮಧುರ ಆ ಮಾತ್ರೆಯನ್ನು ತಾನು ಕೆಲಸ ಮಾಡುವ ಸುಕನ್ಯಾ ಅವರಿಗೆ ತೋರಿಸಿದಾಗ ಅವರು ಇದನ್ನು ತೆಗೆದುಕೊಳ್ಳಬೇಡ ನಿನ್ನ ಮಗುವಿಗೆ ಅಪಾಯ ಎಂದು ಹೇಳಿದಾಗ. ಅರುಣ ಹೌದು ಮೇಡಂ ಚಂದ್ರ ಮತ್ತು ಅವನ ತಾಯಿ ಇವಳನ್ನು ಸಾಯಿಸಿ ವರದಕ್ಷಿಣೆ ಕೊಡುವ ಹುಡುಗಿಯನ್ನು ಮದುವೆಯಾಗಲು ತೀರ್ಮಾನಕ್ಕೆ ಬಂದಿದ್ದಾರೆ. ನನ್ನ ಗಂಡನ ಬಳಿ ಚಂದ್ರ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡು ಮಧುರಳಿಗೆ ಹೇಳಿದೆ ಎಂದು ಹೇಳಿದಾಗ, ಸುಕನ್ಯಾ ಹೆದರಬೇಡ ಮಧುರ ನಾನು ನಿನಗೆ ರಕ್ಷಣೆ ನೀಡುತ್ತೇನೆ ಎಂದು ಹೇಳಿದಾಗ ಮಧುರಳಿಗೆ ಸ್ವಲ್ಪ ಸಮಾಧಾನವಾಯಿತು. ಚಂದ್ರನು ನಾನು ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟು ಹೋದನು. ಬಾಂಬೆಯಲ್ಲಿ ಮಳೆ ಜೋರಾಯಿತು. ಮಧುರ ಇದ್ದ ಬಳಿ ಅನೇಕರು ಮಳೆಯ ಅಬ್ಬರಕ್ಕೆ ಸಿಲುಕಿ ಸತ್ತರು. ಇದೇ ಸಮಯ ಅರುಣ ಸತ್ತವರ ಪಟ್ಟಿಗೆ ಮಧುರಳ ಹೆಸರನ್ನು ಸೇರಿಸಿ ,ಮಧುರಳನ್ನು ಸುಕನ್ಯಾ ಮನೆಗೆ ಕರೆದುಕೊಂಡು ಬಂದಳು. ಸುಕನ್ಯಾ ಇವಳಿಗೆ ರಕ್ಷಣೆ ನೀಡಲು ತನ್ನ ತಾಯಿ ಮನೆ ಬೆಂಗಳೂರಿಗೆ ರೈಲಿನಲ್ಲಿ ಕಳಿಸಿದಳು. ಮಧುರ ರೈಲಿನಲ್ಲಿ ಹೋಗುವಾಗ ಮಧುರ ಮಧುವಂತಿಯಾದಳು ಅಂದರೆ ಹೆಸರು ಬದಲಾಯಿಸಿ ಕೊಂಡಳು. ಪತ್ರಿಕೆಯಲ್ಲಿ ಪ್ರಕಟವಾದ ಸತ್ತವರ ಪಟ್ಟಿಯಲ್ಲಿ ಮಧುರಳ ಹೆಸರನ್ನು ನೋಡಿ ಊರಿನವರು ಇವಳ ಅಣ್ಣಂದಿರು ಮಧುರ ಸತ್ತಳೆಂದು ಇದಕ್ಕೆ ಚಂದ್ರನೆ ಕಾರಣನಾದ ಎಂದು ಕೊಂಡರು. ಇಲ್ಲಿ ಮಧುವಂತಿ ಸುಕನ್ಯಾ ಅವರ ತಾಯಿ ಮನೆ ಮಧುಕೇಶ್ವರ ಮತ್ತು ಕಾವೇರಮ್ಮನ ಮನೆಗೆ ಬಂದು ಸೇರುತ್ತಾಳೆ. ಸುಕನ್ಯಾ ತನ್ನ ತಾಯಿಗೆ ಮಧುರಳ ಎಲ್ಲಾ ವಿಷಯವನ್ನು ತಿಳಿಸಿದ್ದರಿಂದ ಕಾವೇರಮ್ಮ ಮತ್ತು ಮಧುಕೇಶ್ವರ ಇವಳನ್ನು ತುಂಬಾ ಪ್ರೀತಿಯಿಂದ ಮಗಳಂತೆ ನೋಡಿಕೊಳ್ಳುತ್ತಾರೆ. ಚಂದ್ರು ಮತ್ತು ಅವನ ತಾಯಿ ಬಾಂಬೆಗೆ ಬಂದು ಎಷ್ಟು ಹುಡುಕಿದರೂ ಮಧುರ ಸಿಗುವುದಿಲ್ಲ. ಅವರೂ ಪತ್ರಿಕೆಯಲ್ಲಿ ಮಧುರಳ ಹೆಸರನ್ನು ನೋಡಿ ಸತ್ತಳೆಂದು ಹಿಂದಿರುಗುತ್ತಾರೆ.

ಮಧುರ ಚಿಕ್ಕವಳಿದ್ದಾಗ ಅವರ ದೊಡ್ಡಪ್ಪನ ಹತ್ತಿರ ಕುಳಿತು ತೊಟ್ಟಿಮನೆ ಹೇಗಿರಬೇಕು, ವಾಸ್ತು ಪ್ರಕಾರ ಯಾವುದು ಎಲ್ಲಿ ಇರಬೇಕು, ನೋಡಲು ಸುಂದರವಾಗಿ ಕಾಣಲು ಏನು ಮಾಡಬೇಕು, ಎಂಬುದನ್ನು ದೊಡ್ಡಪ್ಪ ನಕ್ಷೆ ಬಿಡಿಸುವುದನ್ನು ಇವಳು ಅಲ್ಪ ಸ್ವಲ್ಪ ತಿಳಿದಿದ್ದಳು. ಕಾವೇರಮ್ಮನ ಮಗ ಮತ್ತು ಸೊಸೆಗೆ ತುಂಬಾ ಸಂತೋಷವಾಯಿತು ಮತ್ತು ಸಹಾಯವಾಯಿತು. ಅನೇಕರು ಇವಳು ಹಾಕಿದ ನಕ್ಷೆಯನ್ನು ಇಷ್ಟಪಟ್ಟರು. ಒಬ್ಬರು ಮಿನಿಸ್ಟರ್ ಸಹ ಅದೇ ರೀತಿಯಲ್ಲಿ ಮನೆ ಕಟ್ಟಿಸಿದರು . ಮಧುವಂತಿಯ ತೊಟ್ಟಿಮನೆ ನಕ್ಷೆ ಪ್ರಸಿದ್ದಿಯಾಯಿತು. ಮಧುವಂತಿ ಭಾಷೆಗಳನ್ನು ಕಲಿತಳು, ಉಡುಗೆ ತೊಡುಗೆ ಎಲ್ಲಾ ಮಾಡ್ರನ್ ಆಯಿತು ಇವಳನ್ನು ನೋಡಿದರೆ ಯಾರು ಸಹ ಮಧುರಾ ಎಂದು ಗುರುತಿಸಲು ಸಾಧ್ಯವಿಲ್ಲ ಸ್ಟೈಲ್ ಬದಲಾಯಿತು. ಮಧುವಂತಿ ಕನ್ಸ್ಟ್ರಕ್ಷನ್ ಆಫೀಸ್ ಪ್ರಾರಂಭಿಸಿದಳು. ಮಧುವಂತಿಯ ಮಗ ಸುಮಂತ್ ತಾಯಿಗೆ ಸಹಾಯಕನಾಗಿ ನಿಂತನು. ಸುಮಂತನಿಗೆ ಮದುವೆಯನ್ನು ಮಾಡಿದಳು.ಸ್ವಂತ ಮನೆಯಾಯಿತು. ಕಾರು ಬಂದಿತು. ಮುಂದೆ ಮಧುವಂತಿ ಕನ್ಸ್ಟ್ರಕ್ಷನ್ ದೊಡ್ಡ ಕಂಪನಿಯಾಗಿ ಬೆಳೆಯಿತು. ಸುಕನ್ಯಾ ಕುಟುಂಬದವರಿಗೆ ತುಂಬಾ ಸಂತೋಷವಾಯಿತು. ಸುಕನ್ಯಾ ಸಂತೋಷ ತಡೆಯದೆ ವರುಣಳಿಗೆ ಈ ವಿಷಯ ತಿಳಿಸಿದಳು. ಈ ವಿಷಯ ಮಧುರ ಬದುಕಿರುವ ಹಾಗೂ ಎತ್ತರಕ್ಕೆ ಬೆಳೆದಿರುವ ವಿಷಯ ಅಣ್ಣಂದಿರಿಗೆ ತಿಳಿದು ಊರಿನವರಿಗೆಲ್ಲಾ ತುಂಬಾ ಸಂತೋಷವಾಯಿತು ಅಣ್ಣಂದಿರು ಫೋನ್ ಮಾಡಿ ಊರಿಗೆ ಕರೆದಾಗ ಮಧುವಂತಿಗೆ ತುಂಬಾ ಸಂತೋಷವಾಯಿತು. ಮಧುವಂತಿ ಮಗ ಸೊಸೆ ಎಲ್ಲರೂ ಊರಿಗೆ ಬಂದಾಗ ಅಣ್ಣಂದಿರ ಕಣ್ಣುಗಳಲ್ಲಿ ಆನಂದ ಭಾಷ್ಪ ತುಂಬಿ ಬಂತು. ಅವರು ಕ್ಷಮೆ ಕೇಳಿದರು. ಮಧುವಂತಿಯೂ ಸಹ ನಾನು ಸಹ ತಪ್ಪು ಮಾಡಿದೆ ಎಂದಳು. ಚಂದ್ರನು ಸತ್ತುಹೋದ ಮತ್ತು ಅವನ ತಾಯಿ ಊರು ಬಿಟ್ಟು ಹೋದಳು ಎಂಬ ವಿಷಯ ತಿಳಿಯಿತು. ನಮ್ಮ ಊರಿಗೆ ಒಳ್ಳೆಯ ಹೆಸರು ತಂದಳೆಂದು ಮತ್ತು ಉನ್ನತ ಸ್ಥಾನಕ್ಕೆ ಬಂದಿರುವುದಕ್ಕೆ. ಊರಿನವರೆಲ್ಲ ಸೇರಿ ಮಧುವಂತಿಯನ್ನು ಸನ್ಮಾನಿಸಿ ಗೌರವಿಸಿದರು ಹಾಗೂ ನಮ್ಮೂರ ಹೆಣ್ಣು ಮಕ್ಕಳಿಗೆ ಒಂದೆರಡು ಹಿತ ನುಡಿ ಹೇಳಬೇಕೆಂದರು. ಆಗಲಿ ಎಂದು ಮಧುವಂತಿ ಹೇಳುವ ಮಾತುಗಳನ್ನು ಓದುಗರು ಪುಸ್ತಕದಲ್ಲಿ ಓದಿದರೆ ಚೆಂದ. ಲೇಖಕಿ ಇಲ್ಲಿ ಒಳ್ಳೆಯ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನೊಂದು ಬೆಂದು ಮಾನಸಿಕವಾಗಿ ದೈಹಿಕವಾಗಿ ನೋವನು ಕಂಡು, ಛಲದಿಂದ ಬದುಕಿ ಭಾಷೆಗಳನ್ನು ಕಲಿತು ಉನ್ನತ ಸ್ಥಾನಕ್ಕೆ ಏರಿದ ಮಧುರ ಅಲ್ಲ ಮಧುವಂತಿ ಬೆಂಕಿಯಲ್ಲಿ ಅರಳಿದ ತಾವರೆಯಾದಳು. ಒಂದು ಹೆಣ್ಣು ಮೋಸ ಹೋದರೂ ಸಹ ಹೇಗೆ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಲೇಖಕಿ ಸವಿತಾ ರಮೇಶ್ ತಮ್ಮ ಕಾದಂಬರಿಯಲ್ಲಿ ತೋರಿಸಿಕೊಟ್ಟಿದ್ದಾರೆ.
ಬೆಂಕಿಯಲ್ಲಿ ಅರಳಿದ ತಾವರೆ ಕಾದಂಬರಿಯಲ್ಲಿ ಬರುವ ಒಂದೊಂದು ಸನ್ನಿವೇಶದ ಚಿತ್ರಣ ಕಣ್ಮುಂದೆ ಬರುತ್ತದೆ. ಯಾವುದನ್ನು ವೈಭವೀಕರಿಸುವ ಪ್ರಯತ್ನ ಮಾಡದೆ ಕಲ್ಪನೆಗೆ ಅವಕಾಶ ನೀಡದೆ. ಯಾವುದೇ ಪ್ರಶ್ನೆಯೂ ಮನದಲಿ ಉಳಿಯದೆ, ನೈಜವಾಗಿ ಉತ್ತಮ ಶೈಲಿಯಲ್ಲಿ ಬರೆದಿರುತ್ತಾರೆ. ಇದರಲ್ಲಿ ಬರುವ ಪಾತ್ರಗಳಲ್ಲಿ. ವಸಂತಿ ಸುಕನ್ಯಾ, ಮಧುಕೇಶ್ವರ, ಕಾವೇರಮ್ಮ ಸುಂದರ, ವೀಣಾ, ಸುಮಂತ್,ತನ್ಮಯಿ, ನಿಂಗಮ್ಮ, ಇವರುಗಳ ಮಾನವೀಯ ಗುಣಗಳು ಕಾದಂಬರಿಗೆ ಶೋಭೆಯನ್ನು ತಂದಿದೆ.
ಹಾಗೂ ಮಾನವೀಯತೆಯ ದೃಷ್ಟಿಯಿಂದ ಸಂದೇಶ ಸಾರುವ ನಿಟ್ಟಿನಲ್ಲಿ ಈ ಪಾತ್ರಗಳು ಮನಮುಟ್ಟುತ್ತದೆ. ಮಧುರ ಮಧುವಂತಿಯಾಗಿ ಹೆಸರು ಬದಲಾಗುವ ಕಾಲಘಟ್ಟದಲ್ಲಿ ಮಧುರ ಮಾನಸಿಕವಾಗಿ ದೈಹಿಕವಾಗಿ ಪಡುವ ವೇದನೆ ಮತ್ತು ಮಧುವಂತಿಯಾಗಿ ಹೆಸರು ಬದಲಾಯಿಸಿಕೊಂಡು ಬೆಳೆದ ರೀತಿ, ನಲವತ್ತು ವರ್ಷಗಳ ನಂತರ ತನ್ನ ಊರಿಗೆ ಬಂದಾಗ ಸತ್ತಳೆಂದು ತಿಳಿದಿದ್ದ ಜನರು ಅವಳನ್ನು ಗೌರವಿಸುವ ಮನೋಭಾವ ಇವುಗಳನ್ನು ಓದುವುದರ ಮೂಲಕ ತಿಳಿದರೆ ಭಾವನೆಗಳು ತಿಳಿಯುತ್ತದೆ. ಎಲ್ಲಾ ಓದುಗರಿಗೂ ಈ ಪುಸ್ತಕ ಹೊರ ಬರಲು ಸಹಕರಿಸಿರುವ ಎಲ್ಲರಿಗೂ ಹಾಗೂ ಲೇಖಕಿ ಸವಿತಾ ರಮೇಶ್ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತ, ಲೇಖಕಿ ಸವಿತಾ ರಮೇಶ್ ಅವರ ಇನ್ನೂ ಅನೇಕ ಕೃತಿಗಳು ಪ್ರಕಟಗೊಂಡು ಓದುಗರ ಮನ ಗೆಲ್ಲಲಿ ಎಂದು ಹಾರೈಸುತ್ತೇನೆ.
- ಹೆಚ್.ಡಿ. ದಿವಾಕರ್ – ಶಿಕ್ಷಕ, ಲೇಖಕ, ಅರಸೀಕೆರೆ
