ಹಿರಿಯ ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರು ಸಾಹಿತ್ಯಕ್ಕೆ ಅವರ ಸೇವೆ ಅಪಾರವಾಗಿದೆ. ಕಂದ ಪದ್ಯ, ರಗಳೆಗಳು, ರುಬಾಯಿ, ಗಝಲ್, ವಚನಗಳು ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಅವರ ಕವನಗಳನ್ನು ಕಾಣಬಹುದು. ಅವರ ರಚನೆಯ ‘ಜವ್ವನೆ’ ಕವನ ತಪ್ಪದೆ ಮುಂದೆ ಓದಿ…
ಸೋಲಿಗರ ಹೆಣ್ಣೊಂದು ನಸುನಾಚಿ ನಿಂತಾಗ
ಸಾಲಿಗನು ಮರೆಯುವನು ತನ್ನ ಕಾರ್ಯ
ನೂಲಿನೆಳೆ ಖಾದಿಯಲು ಕೇದಿಗೆಯ ಮೈಬಣ್ಣ
ಮೇಲಾಗಿ ಮಿಂಚುತಿಹ ಬಾಲ ಸೂರ್ಯ
ಕುರುಳುಗಳ ಬಿಗಿದಿಟ್ಟು ಗಂಟುಕಟ್ಟಿದ ಚೆಂದ
ಸರಳಸುಂದರಿ ಶಿರಕೆ ಸೊಬಗಿತ್ತಿದೆ
ಕರಗಳಿಗೆ ಮೆರುಗಿತ್ತ ಸಾಣೆ ಕೆಂಪಿನ ಬಳೆಯು
ಕೊರಳಲ್ಲಿ ಪತ್ತಾಕೆ ಹೊಳಪಿತ್ತಿದೆ
ಯಾರ ನೆನಪಿನ ಗುಂಗು ಕಚಗುಳಿಯನಿಟ್ಟಿಹುದೊ
ತಾರೆ ಕಂಗಳು ಮುಚ್ಚಿ ದೇನಿಸುತಿದೆ
ಮೋರೆ ಹೊನ್ನಿನ ವರ್ಣ ಕೆನ್ನೆ ಕೇಸರಿ ಬಣ್ಣ
ನಾರಿ ಮೊಗ ಚಂದ್ರ ತಂಪಿಳಿಸಿದೆ
ಬಿರಿದ ತೊಂಡೆಯತುಟಿಗೆ ಕುಂದರದನೆಯ ಚೆಲುವು
ಹರಿವ ನಗುವಿನ ಲಹರಿ
ತುಂಬಿ ತಂಪು
ಬೆರಳ ಹೊಸೆದಿಹ ಕರವ ಕೆನ್ನೆಗಾನಿಸಿ ನಿಂತ
ವರದೆ ಲಕುಮಿಯ ಚೆಲುವ ತೆರದಲಿಂಪು
ಮರುಳುಗೊಂಡಿಹ ಚಿತ್ತ ಚಂಚಲವ ಗೈದಿಹುದು
ಸೆರೆಹಿಡಿದು ಹೃದಯವನು ದೋಚುತಿಹುದು
ತರಣಿ ಸೂಸಿದ ಕಿರಣ ಪಚ್ಚೆ ಪೈರಿನ ನಡುವೆ
ತರುಣಿ ಕೋಮಲತನುವು ಬಳುಕುತಿಹುದು
- ಬಿಟ್ಟೀರ ಚೋಂದಮ್ಮ, ಬೆಂಗಳೂರು.
