‘ಚೌಚೌ ಬಾತ್’ ಅಂಕಣ (ಭಾಗ –೨೦)

ಪುಟ್ಟ ಲಿಂಗಪ್ಪ ರಾತ್ರಿ ಕುರಿ ಕಳ್ಳರು ಬಂದಿದ್ದರು ಎಂದ ಅದಕ್ಕೆ ಅಪ್ಪನು ಯಾರೋ ಇಬ್ಬರು ಕಳ್ಳರು ಕುರಿ ಕದಿಯೋಕೆ ಹೊಂಚು ಹಾಕ್ತಿದ್ರು. ಆ ಕುರಿ ಕಳ್ಳರು ಯಾರು ಅಂತ ಗೊತ್ತಾ ?… ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಕುರಿ ಕಳ್ಳರು’, ತಪ್ಪದೆ ಮುಂದೆ ಓದಿ …

ನಾವು ಚಿಕ್ಕವರಿದ್ದಾಗ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಆಗ ಬೇಸಿಗೆ ಕಾಲ ಮಾರ್ಚ್, ಏಪ್ರಿಲ್ ತಿಂಗಳ ಬಿರು ಬೇಸಿಗೆಯ ಕಾಲ. ರಾತ್ರಿ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಹೊರಗಡೆಯೇ ಮಲಗುತ್ತಿದ್ದರು. ನಮ್ಮ ಅಣ್ಣಂದಿರಿಬ್ಬರು ನಮ್ಮ ತಾತ ಹೊರಗಡೆಯ ವರಾಂಡದಲ್ಲಿ ಮಲಗುತ್ತಿದ್ದರು. ಆಗ ಪರೀಕ್ಷೆಗಳು ಮುಗಿದು ರಜಾ ಕಾಲವಾದ್ದರಿಂದ ಓದುವುದು, ಬರೆಯುವುದು ಯಾವುದು ಇರಲಿಲ್ಲ. ಆರಾಮವಾಗಿ ಅಮ್ಮ ಮಾಡಿದ ರುಚಿಕರ ಅಡುಗೆ ತಿಂಡಿ ತಿಂದುಕೊಂಡು ಓಡಾಡಿಕೊಂಡು ಇರುವುದು ಇಷ್ಟೇ ಕೆಲಸವಾಗಿತ್ತು.

ನಮ್ಮ ಅಣ್ಣಂದಿರು ಹೈಸ್ಕೂಲ್ನಲ್ಲಿ ಓದುತ್ತಿದ್ದರು. ಅವರಿಗೆ ಸಿನಿಮಾ ಖಯಾಲಿ ಹೆಚ್ಚು. ಅವರ ಸಿನಿಮಾ ಹುಚ್ಚು ಎಷ್ಟಿತ್ತೆಂದರೆ ಪ್ರತಿದಿನವೂ ಸಿನಿಮಾ ನೋಡುವ ಹಂಬಲ. ಮೊಬೈಲ್ ಇಲ್ಲದ ಆ ಕಾಲದಲ್ಲಿ ಸಿನಿಮಾ, ನಾಟಕ ನೋಡುವುದೇ ಮನರಂಜನೆ. ಮಧ್ಯಾಹ್ನದ ಮ್ಯಾಟಿನಿ ಶೋಗೆ ಹೋದರೆ ಅಪ್ಪನಿಗೆ ಗೊತ್ತಾಗಿ ಬೈಯುತ್ತಿದ್ದರು. ಆದ್ದರಿಂದ ಅವರು ರಾತ್ರಿ ಫಸ್ಟ್ ಶೋಗೆ ಹೋಗಲು ಕಾಯುತ್ತಿದ್ದರು. ಇನ್ನೊಂದು ವಿಷಯ ಏನೆಂದರೆ ಸಿನಿಮಾಗೆ ಹೋಗಲು ಇವರು ದುಡ್ಡು ಹೊಂದಿಸುವಂತಿರಲಿಲ್ಲ. ಥಿಯೇಟರ್ ನ ಓನರ್ ಅಪ್ಪನ ಆತ್ಮಿಯ ಸ್ನೇಹಿತರು. ಹಾಗಾಗಿ ನಾವು ಎಷ್ಟು ಬಾರಿ ಸಿನಿಮಾಗೆ ಹೋದರೂ ಉಚಿತ ಟಿಕೆಟ್. ಹಾಗೆಂದು ಪದೇ ಪದೇ ಸಿನಿಮಾಗೆ ಹೋಗಲು ಅಪ್ಪ ಬಿಡುತ್ತಿರಲಿಲ್ಲ. ಆದ್ದರಿಂದ ಅವರಿಗೆ ಕಾಣದಂತೆ ಒಂದು ಬಾರಿ ಕಂಡಂತೆ ಒಂದು ಬಾರಿ, ಹೀಗೆ ಅವರಿಗೆ ಕಣ್ ತಪ್ಪಿಸಿ ಮೂರ್ನಾಲ್ಕು ಬಾರಿ ಒಂದು ಸಿನಿಮಾವನ್ನು ನೋಡುತ್ತಿದ್ದರು. ವಾರಕ್ಕೊಮ್ಮೆಯಾದರೂ ನಾವು ಸಿನಿಮಾ ಗೆ ಹೋಗುತ್ತಿದ್ದೆವು. ಆದರೆ ಅಪ್ಪನ ಕಣ್ತಪ್ಪಿಸಿ ಸಿನಿಮಾಗೆ ಹೋಗುವಷ್ಟು ಸಾಹಸ ಮಾಡುತ್ತಿರಲಿಲ್ಲ.

ಫೋಟೋ ಕೃಪೆ : google

ಒಂದು ದಿನ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದರು. ಅಣ್ಣಂದಿರು ಈಚೆ ಕಡೆ ವರಾಂಡದಲ್ಲಿ ಚಾಪೆ ಹಾಸಿ ಮಲಗಿದ್ದರು. ಅಪ್ಪ ಬಾಗಿಲು ಹಾಕಿಕೊಂಡು ಒಳಗೆ ಬಂದರು. ಮಲಗಿದಂತೆ ನಟಿಸುತ್ತಿದ್ದ ಅಣ್ಣಂದಿರು ಎದ್ದಿದ್ದಾರೆ. ದಿಂಬುಗಳನ್ನು ಚಾಪೆಯ ಮೇಲೆ ಜೋಡಿಸಿ ಮೇಲೆ ಬೆಡ್ ಶೀಟ್ ಹೊದಿಸಿ ಸಿನಿಮಾ ನೋಡಲು ಹಳೆಯೂರಿನ ಕಡೆ ಓಟ ಕಿತ್ತಿದ್ದಾರೆ. ಸಿನಿಮಾ ರಾತ್ರಿ 9:30 ಕ್ಕೆ ಶುರುವಾಗುತ್ತಿತ್ತು. ನಮೋ ವೆಂಕಟೇಶ ಸಾಂಗ್ ಹಾಕಿದರೆಂದರೆ ಸಿನಿಮಾ ಪ್ರಾರಂಭ ಎಂದರ್ಥ. ಆ ಹಾಡು ಮುಗಿಯುವಷ್ಟರಲ್ಲಿ ಅಣ್ಣಂದಿರಿಬ್ಬರೂ ಥಿಯೇಟರ್ ನ ಬಳಿ ಇರುತ್ತಿದ್ದರು. ನಮ್ಮ ಹೊಸಕೆರೆ ಗ್ರಾಮದಿಂದ ಹಳೆ ಊರಿಗೆ ಸುಮಾರು ಅರ್ಧ ಕಿಲೋ ಮೀಟರ್ ದೂರ.

ಸಿನಿಮ ನೋಡಿ ಅಣ್ಣಂದಿರಿಬ್ಬರು ರಾತ್ರಿ ಹನ್ನೆರಡರ ಸುಮಾರಿಗೆ ವಾಪಸ್ ಆಗಿದ್ದಾರೆ. ಮನೆ ಮುಂದಿನ ವರಾಂಡಕ್ಕೆ ಬರಲು ಮುಂದೆ ಇದ್ದ ಕಾಂಪೌಂಡ್ ಗೋಡೆ ಜಂಪ್ ಮಾಡಿ ಕೊಂಡು ಬರಬೇಕು. ಏಕೆಂದರೆ ರಾತ್ರಿ ಗೇಟ್ ಬೇಗ ಹಾಕಿರುತ್ತಿದ್ದರು. ಇನ್ನೇನು ಜಂಪ್ ಮಾಡಬೇಕು ಎನ್ನುವಷ್ಟರಲ್ಲಿ ಅಪ್ಪ ಮೂತ್ರಕ್ಕೆ ಹೋಗಲು ಬಾಗಿಲು ತೆರೆದಿದ್ದಾರೆ. ಒಳಗಡೆ ಟಾಯ್ಲೆಟ್ ರೂಮ್ ಇದ್ದರು ಹೊರಗಡೆ ಹೋಗುವುದು ಹಳ್ಳಿಯಲ್ಲಿ ಸಾಮಾನ್ಯವಾಗಿತ್ತು. ಅಪ್ಪ ಹೊರ ಬರುವುದನ್ನು ನೋಡಿ ಅಣ್ಣಂದಿರು ಅಲ್ಲಿಯೇ ಕಾಂಪೌಂಡ್ ಗೋಡೆಯ ಹಿಂಬದಿಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಅಪ್ಪ ಹೊರಗಡೆ ಬಂದು ತಮ್ಮ ಕೆಲಸ ಮುಗಿಸಿ ಹೊರಡುವಾಗ ಅಣ್ಣಂದಿರ ಗುಸು ಗುಸು ಪಿಸ ಪಿಸ ದನಿಯನ್ನು ಕೇಳಿಸಿಕೊಂಡಿದ್ದಾರೆ. ಮಾತುಗಳು ಅಸ್ಪಷ್ಟವಾಗಿ ಕೇಳಿಸುತ್ತಿದ್ದವು. ಯಾರಿರಬಹುದು ಎಂದು ಸುತ್ತಲೂ ನೋಡಿದ್ದಾರೆ. ಕತ್ತಲಲ್ಲಿ ಯಾರೂ ಕಾಣಿಸಿಲ್ಲ. ಅಪ್ಪನಿಗೆ ಯಾಕೋ ಭಯವಾದಂತಾಗಿ ಬೇಗ ಬೇಗನೆ ಹೆಜ್ಜೆ ಹಾಕಿ ಒಳಬಂದು ಬಾಗಿಲು ಹಾಕಿಕೊಂಡಿದ್ದಾರೆ.ಅಪ್ಪ ಒಳ ಹೋಗುತ್ತಲೇ ಅಣ್ಣಂದಿರು ಕಾಂಪೌಂಡ್ ಎಗರಿ ಕತ್ತಲಲ್ಲಿ ಪಕ್ಕದ ಮನೆಯ ಮುಂದಿನ ಕೊಟ್ಟಿಗೆಯ ಬಳಿಗೆ ಎಗರಿದ್ದಾರೆ. ಕೊಟ್ಟೆಗೆಯಲ್ಲಿದ್ದ ಕುರಿ, ಮೇಕೆಗಳು ಇವರ ಶಬ್ದಕ್ಕೆ ಗಾಬರಿಯಾಗಿ ಕಿರುಚಿಕೊಂಡಿವೆ. ಅವುಗಳ ಕಿರುಚಾಟಕ್ಕೆ ಮನೆಯವರು ಎದ್ದು ನೋಡಿದ್ದಾರೆ. ಅಷ್ಟರಲ್ಲಿ ಅಣ್ಣಂದಿರು ವರಾಂಡದಲ್ಲಿದ್ದ ದಿಂಬುಗಳನ್ನು ತೆಗೆದು ಚಾಪೆಯ ಮೇಲೆ ಮಲಗಿ ಬೆಡ್ ಶೀಟ್ ಹೊದ್ದುಕೊಂಡಿದ್ದಾರೆ. ಪಕ್ಕದ ಮನೆಯವರು ಮನೆ ಮುಂದೆಯೇ ಕುರಿ ಕೊಟ್ಟಿಗೆ ಮಾಡಿಕೊಂಡಿದ್ದರು.ಆಗ ಬೇಸಿಗೆಯಲ್ಲಿ ಕಳ್ಳರ ಕಾಟ ಸ್ವಲ್ಪ ಜಾಸ್ತಿ ಇತ್ತು. ಹಾಗಾಗಿ ಕುರಿ ಕಳ್ಳರು ಬಂದಿರಬಹುದೆಂದು ಅಲ್ಲೆಲ್ಲ ಹುಡುಕಾಡಿದ್ದಾರೆ. ಯಾರೂ ಕಾಣದೆ ಒಳಗೋಗಿ ಮಲಗಿದ್ದಾರೆ.

ಮರುದಿನ ಬೆಳಿಗ್ಗೆ ಎದ್ದು ಪಕ್ಕದ ಮನೆಯ ಪುಟ್ಟ ಲಿಂಗಪ್ಪ ರಾತ್ರಿ ಕುರಿ ಕಳ್ಳರು ಬಂದಿದ್ದರೆಂದು ನಾನು ನೋಡಿದ್ದಕ್ಕೆ ಓಡಿ ಹೋದರೆಂದು ಹೇಳುತ್ತಿದ್ದ. ಕುರಿ ಕಳ್ಳರು ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಅಪ್ಪ ಅಲ್ಲಿಗೆ ಹೋಗಿ” ಹು ಕಣೋ ಪುಟ್ನಿಂಗ ರಾತ್ರಿ ಹನ್ನೆರಡು ಗಂಟೆಗೆ ನಾನು ಈಚೆ ಕಡೆ ಬಂದಿದ್ದೆ. ಆಗ ಯಾರೋ ಇಬ್ಬರು ಕಳ್ಳರು ಕುರಿ ಕದಿಯೋಕೆ ಹೊಂಚು ಹಾಕ್ತಿದ್ರು. ನಾನು ಗದರಿಕೊಂಡಿದ್ದಕ್ಕೆ ಓಡಿ ಹೋದ್ರು, ಬಡ್ಡಿ ಮಕ್ಕಳು” ಎಂದು ಹೇಳಿದರು. ಅವರ ಮಾತನ್ನು ಕೇಳಿಸಿಕೊಂಡು ಬಂದು ಅಣ್ಣಂದಿರು ನಮ್ಮ ಮುಂದೆ ನಕ್ಕಿದ್ದೆ ನಕ್ಕಿದ್ದು. ಅಮ್ಮ ” ಅದೇನು ಅಂತ ಹೇಳಿ ನಗ್ರಿ ಸುಮ್ನೆ ನಕ್ಕಿದ್ರೆ ನಮಗೆ ಹೆಂಗ್ ಗೊತ್ತಾಗಬೇಕು” ಅಂದಾಗ ಅಣ್ಣ ನಡೆದ ಘಟನೆಯನ್ನು ವಿವರಿಸಿದ್ದ. ಆಗ ನಾವೆಲ್ಲ ನಕ್ಕಿದ್ದೇ ನಕ್ಕಿದ್ದು. ನಂತರ ಅಪ್ಪನಿಗೂ ವಿಷಯ ತಿಳಿದು ಅವರು” ಓಹೋ ಇವರೇನಾ ಕುರಿ ಕಳ್ಳರು” ಎಂದು ಅವರೂ ನಕ್ಕಿದ್ದರು. ಹೀಗೆ ಅಂದಿನ ಬಾಲ್ಯದ ದಿನಗಳ ನೆನಪು ಇಂದಿಗೂ ಹಚ್ಚ ಹಸಿರು.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಮ್ –  ಶಿಕ್ಷಕಿ, ಗೌರಿಬಿದನೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading