ಮದುವೆ ಮನೆಯಲ್ಲಿ ಹೆಣ್ಣಿಗೆ ಗಂಡಿನ ಮೇಲೆ ಆಸೆ, ಗಂಡಿಗೆ ಹೆಣ್ಣಿನ ಮೇಲೆ ಆಸೆ, ಇನ್ನು ಮದುವೆಗೆ ಹೋದ ನಮ್ಮ, ನಿಮ್ಮಂತವರಿಗೆ ಮದುವೆ ಊಟದ ಮೇಲೆ ಆಸೆ. ಆಸೆ ಹೊತ್ತು ಹೋದವರ ಕತೆ ಹೇಗಿರುತ್ತೆ, ಅಂಕಣಕಾರ್ತಿ ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಮದುವೆ ಊಟದ ಕಿರಿಕಿರಿ’ ಕುರಿತು ಬರೆದಿದ್ದಾರೆ ತಪ್ಪದೆ ಮುಂದೆ ಓದಿ….
ಸಾಮಾನ್ಯವಾಗಿ ಮದುವೆ ಸೀಜನ್ ಬಂತೆಂದರೆ ಮದುಮಗನಿಗೂ ಮದುಮಗಳಿಗೂ ಸಂಭ್ರಮವೋ ಸಂಭ್ರಮ. ಅದರಲ್ಲೂ ಮದುವೆ ಹೆಣ್ಣಿಗೆ ಪ್ರತಿ ಈವೆಂಟ್ ಗೂ ವಿಭಿನ್ನ ಹಾಗೂ ಕಲಾತ್ಮಕ ಬಟ್ಟೆ ಒಡವೆ ಕೊಳ್ಳುವ ಸಡಗರ. ಈಗೀಗ ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದವರೂ ಆಗರ್ಭ ಶ್ರೀಮಂತರ ಸಮಾನವಾಗಿ ಮದುವೆ, ನಿಶ್ಚಿತಾರ್ಥಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ತಯಾರಾಗಿದ್ದಾರೆ. ಮೊನ್ನೆ ನಮಗೆ ಪರಿಚಯದ ಒಬ್ಬ ಮೇಡಂ ಮಗಳ ನಿಶ್ಚಿತಾರ್ಥಕ್ಕೆ ಹೋಗಿದ್ದೆವು. ಖರ್ಚು ಕೇಳಿ ದಂಗಾದೆವು. ಸುಮಾರು ಹದಿನೈದು ಲಕ್ಷದವರೆಗೂ ಖರ್ಚು ಮಾಡಿದ್ದರಂತೆ. ಇನ್ನು ಮದುವೆಗೆ ಎಷ್ಟು ಲಕ್ಷ ಖರ್ಚು ಮಾಡುತ್ತಾರೋ. ಸಾಲ ಸೋಲ ಮಾಡಿಯಾದರೂ ಸರಿ ಮದುವೆ ಗ್ರಾಂಡ್ ಆಗಿ ಆಗಬೇಕು ಎಂಬ ಹಂಬಲ ಎಲ್ಲರಲ್ಲೂ.
ಈಗಿನ ಕಾಲದ ಮದುವೆಗಳಲ್ಲಿ ಊಟದ ಬಗ್ಗೆ ಕೇಳುವುದೇ ಬೇಕಿಲ್ಲ ಎಂತಹ ಸಾಮಾನ್ಯ ಜನರ ಮದುವೆಗೆ ಹೋದರೂ ಊಟ ಭರ್ಜರಿಯಾಗಿಯೇ ಇರುತ್ತದೆ. ಲೆಕ್ಕವಿಲ್ಲದಷ್ಟು ಐಟಂಗಳು ಬಾಳೆ ಎಲೆಯ ಮೇಲೆ ಬಂದು ಬೀಳುತ್ತವೆ.

ಸಾಮಾನ್ಯವಾಗಿ ಮದುವೆ ಎಂದರೆ ಹೆಣ್ಣಿಗೆ ಗಂಡಿನ ಮೇಲೆ ಆಸೆ, ಗಂಡಿಗೆ ಹೆಣ್ಣಿನ ಮೇಲೆ ಆಸೆ, ಇನ್ನು ಮದುವೆಗೆ ಹೋದ ನಮ್ಮ, ನಿಮ್ಮಂತವರಿಗೆ ಮದುವೆ ಊಟದ ಮೇಲೆ ಆಸೆ. ಇದು ಸಹಜವೇ ತಾನೇ. ಮದುವೆ ಮುಗಿದ ನಂತರ ವೇದಿಕೆ ಹತ್ತಿ ಗಂಡು ಹೆಣ್ಣಿಗೆ ಶುಭ ಕೋರಿ ಪ್ರಸೆಂಟೇಷನ್ ಕೊಟ್ಟು ಊಟದ ಹಾಲ್ ಕಡೆಗೆ ಹೆಜ್ಜೆ ಹಾಕುತ್ತೇವೆ. ಅಲ್ಲಿ ಸಾಕಷ್ಟು ರಷ್ ಇರುತ್ತದೆ. ಒಬ್ಬರಿಗೊಬ್ಬರು ತಳ್ಳಾಡಿಕೊಂಡು ಹೇಗೋ ಒಳಗೆ ಹೋಗಿ ಕಷ್ಟಪಟ್ಟು ಸೀಟ್ ಗಿಟ್ಟಿಸಿಕೊಂಡು ಊಟಕ್ಕೆ ಕುಳಿತುಕೊಳ್ಳುತ್ತೇವೆ. ಊಟಕ್ಕೆ ಬಾಳೆ ಎಲೆ ಹಾಕುತ್ತಾರೆ, ಎಲೆಯನ್ನು ತೊಳೆದಿದ್ದರೂ ನಾವು ಮತ್ತೆ ತೊಳೆಯುವ ಶಾಸ್ತ್ರ ಮಾಡಿ ಊಟ ಮಾಡಲು ಸಿದ್ದರಾಗುತ್ತೇವೆ. ಪಟಪಟನೆ ಉಪ್ಪಿನಿಂದ ಹಿಡಿದು ಎಲ್ಲಾ ಐಟಂಗಳು ಎಲೆ ಮೇಲೆ ಬಂದು ಬೀಳುತ್ತವೆ. ತಿನ್ನಲು ಶುರು ಮಾಡುತ್ತೇವೆ. ಆದರೆ ಪಕ್ಕದಲ್ಲಿರುವವರು ಸುಮ್ಮನೆ ಇದ್ದರೆ ನಾವು ಕೂಡ ಸುಮ್ಮನಿರಬೇಕಾಗುತ್ತದೆ. ಕೆಲವರು ಎಲ್ಲಾ ಐಟಂಗಳು ಎಲೆಗೆ ಬಿದ್ದ ಮೇಲೆ ಕೈ ಹಾಕುವುದು. ಅದು ಅವರ ಸಂಪ್ರದಾಯ. ನಾವೇನಿದ್ದರೂ ಒಂದು ಐಟಂ ಬಿದ್ದ ತಕ್ಷಣ ಒಂದೊಂದೇ ಖಾಲಿ ಮಾಡುವುದು ನಮ್ಮ ಸಂಪ್ರದಾಯ. ಆದರೆ ಪಕ್ಕದಲ್ಲಿರುವವರು ಎಲೆಗೆ ಕೈ ಊರದೇ ಸುಮ್ಮನಿದ್ದರೆ ನಾವು ಅನಿವಾರ್ಯವಾಗಿ ಅವರನ್ನೇ ಅನುಸರಿಸಬೇಕಾಗುತ್ತದೆ. ಇದು ಒಂದು ರೀತಿಯ ಕಿರಿಕಿರಿ.

ಬಾಳೆ ಎಲೆಗೆ ಎಲ್ಲ ತಿಂಡಿ ತಿನಿಸುಗಳು ಬಡಿಸಿದ ಕೂಡಲೇ ಇನ್ನೇನು ಎಲೆಗೆ ಕೈ ಹಾಕಿ ತುತ್ತನ್ನು ಬಾಯಿಗೆ ಇಟ್ಟುಕೊಳ್ಳಬೇಕು ಎನ್ನುವಷ್ಟರಲ್ಲಿ ಅದೆಲ್ಲಿಂದಲೋ ಫೋಟೋಗ್ರಾಫರ್, ವಿಡಿಯೋಗ್ರಾಫರ್ ಬಂದು ನಮ್ಮ ಎಲೆಯ ಮುಂದೆ ಪ್ರತ್ಯಕ್ಷವಾಗುತ್ತಾರೆ. ನಾವು ತಿನ್ನುವಂತೆಯು ಇಲ್ಲ ಬಿಡುವಂತೆಯೂ ಇಲ್ಲ. ಬಾಯಿಯವರೆಗೂ ಹೋಗಿದ್ದ ಕೈ ತನ್ನಿಂದ ತಾನಾಗಿ ಕೆಳಕ್ಕೆ ಇಳಿದುಬಿಡುತ್ತದೆ. ನಾವು ಊಟ ಮಾಡುವಾಗ ವಿಡಿಯೋ ತೆಗೆಯುವುದು ತುಂಬಾ ಮುಜುಗರ ಎನಿಸುತ್ತದೆ. ಅದು ಖಾಸಗಿಯಾಗಿದ್ದರೆ ಚಂದ. ಎಲ್ಲರ ಮುಂದೆ ವಿಡಿಯೋ ಪ್ರದರ್ಶನವಾದಾಗಲೆಲ್ಲ ನಾವು ಹೇಗೆ ಊಟ ಮಾಡಿದ್ವಿ ಏನು ತಿನ್ನುತ್ತಿದ್ದೇವೆ,ಹೇಗೆ ತಿನ್ನುತ್ತಿದ್ದೇವೆ ಎಂಬುದನ್ನು ನೋಡಿ ನಗುವವರು, ಆಡಿಕೊಳ್ಳುವವರಿಗೇನು ಕಮ್ಮಿ ಇಲ್ಲ. ವಿಡಿಯೋ ಒಂದೇ ಸಾಕು ಎಂದು ಸುಮ್ಮನಾಗುವುದಿಲ್ಲ. ಮತ್ತೆ ಫೋಟೋಗ್ರಾಫರ್ ಕೂಡ ಹಿಂದೆಯೇ ಬರುತ್ತಾನೆ. ಹೀಗೆ ಫೋಟೋ, ವೀಡಿಯೋ ತೆಗೆಯುವವರೆಗೂ ನಾವು ಕಾಯಬೇಕು .
ಅವರು ಹಾಗೇ ಮುಂದಕ್ಕೆ ಹೋದ ನಂತರ ನಾವು ನಿಟ್ಟುಸಿರು ಬಿಟ್ಟು ನಿರಾಳವಾಗಿ ಊಟ ಮಾಡುತ್ತೇವೆ. ಇನ್ನೂ ಕೆಲವರು ಫೋಟೋ ಆದ್ರೂ ತೆಗೆದುಕೊಳ್ಳಲೀ, ವಿಡಿಯೋ ಆದ್ರೂ ತೆಗೆದುಕೊಳ್ಳಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಪಾಡಿಗೆ ಅವರು ಬ್ಯಾಟಿಂಗ್ ಶುರು ಮಾಡಿಯೇ ಬಿಡುತ್ತಾರೆ. ಪಾಪ ಅವರದ್ದು ತಪ್ಪಿಲ್ಲ. ಊಟಕ್ಕಾಗಿ ಎಷ್ಟು ಹೊತ್ತು ಅಂತ ಕಾಯುವುದು, ಏನಾದರೂ ಮಾಡಿಕೊಳ್ಳಲಿ ನಮ್ಮ ಎಲೆಗೆ ಊಟ ಬಿದ್ದಿದೆಯಲ್ಲ , ಅಷ್ಟು ಸಾಕು ತಿಂದು ಮುಗಿಸುವುದೇ ನಮ್ಮ ಕೆಲಸ ಎಂದು ಕೊಂಡಿರುತ್ತಾರೆ. ಹಾಗೆ ನೋಡಿದರೆ ಫೋಟೋಗ್ರಾಫರ್ ದು ಏನೇನೂ ತಪ್ಪಿರುವುದಿಲ್ಲ.ಮದುವೆಯ ಯಜಮಾನರು ಯಾವ ರೀತಿ ನಿರ್ದೇಶನ ಕೊಟ್ಟಿರುತ್ತಾರೋ ಆ ರೀತಿ ಫೋಟೋ ತೆಗೆಯುತ್ತಾರೆ. ಮದುವೆಗೆ ಬಂದವರು, ಊಟಕ್ಕೆ ಕುಳಿತವರು ಯಾರು ಯಾರು ಎಂಬುದನ್ನು ತಿಳಿಯಲು ಅವರು ಫೋಟೋ ತೆಗೆಯಬೇಕಾಗುತ್ತದೆ. ಆದರೆ ನಮಗೆ ಊಟ ಮಾಡುವಾಗ ವಿಡಿಯೋ ತೆಗೆಯುವುದು ಅಂದರೆ ಒಂದು ರೀತಿಯ ಮುಜುಗರ ಕಿರಿಕಿರಿ, ಅಭ್ಯಂತರ. ಸಹಜವಾಗಿ ಊಟ ಮಾಡಲು ಆಗುವುದಿಲ್ಲ. ಆದರೆ ಏನು ಮಾಡಲು ಸಾಧ್ಯವಿಲ್ಲ, ಒಂದೈದು ನಿಮಿಷ ತಾಳ್ಮೆಯಿಂದ ಅವರು ಮುಂದಕ್ಕೆ ಹೋಗುವವರೆಗೂ ಕಾಯಬೇಕಷ್ಟೇ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ‘ಚೌಚೌ ಬಾತ್’ ಅಂಕಣ (ಭಾಗ – ೨೫)- ‘ವಿಚಿತ್ರ ಬಾಲಕ’
- ‘ಚೌಚೌ ಬಾತ್’ ಅಂಕಣ (ಭಾಗ – ೨೬)- ದೆಹಲಿಯ ಸುತ್ತಮುತ್ತ
- ‘ಚೌಚೌ ಬಾತ್’ ಅಂಕಣ (ಭಾಗ – ೨೭) – ಅತಿಮಾನುಷ ಶಕ್ತಿಯ ಅನುಭವ
- ‘ಚೌಚೌ ಬಾತ್’ ಅಂಕಣ (ಭಾಗ – ೨೮) – ಸಬ್ಬಸಿಗೆ ಸೊಪ್ಪು
- ಸರ್ವಮಂಗಳ ಜಯರಾಮ್ – ಗೌರಿಬಿದನೂರು.
