ತರಕಾರಿಯ ಬೆಲೆ ಹೆಚ್ಚಾಯಿತೇ!?

ತರಕಾರಿಯ ಬೆಲೆ ಅತಿ ಕಡಿಮೆಯಾಗುವುದು ಬೇಡ ಹಾಗಂತ ಗಗನೇಕ್ಕೇರುವುದು ಬೇಡ ಎಂದು ಆಶಿಸೋಣ. ನ್ಯಾಯಯುತ ಬೆಲೆಯಲ್ಲಿ ಸಿಗಲಿ. ತರಕಾರಿ ಬೆಲೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಅದರ ಕುರಿತು ಸ್ನೇಹಾ ಆನಂದ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ರೀ ಕೇಳಿದ್ರಾ ತರಕಾರಿಯ ಬೆಲೆ ಗಗನೇಕ್ಕೇರಿದೆಯಂತೆ!ಈಗ ಟೀವಿಯಲ್ಲಿ ಹೇಳ್ತಿದ್ದರು, ಹೀಗಾದರೆ ಹೇಗೆ ಜೀವನ ಮಾಡಬೇಕು ಕಣ್ರಿ ಎಂದಳು ಸರಿತಾ ಪತಿಯ ಮುಖವನ್ನೇ ಆತಂಕದಿಂದ ನೋಡುತ್ತಾ!

ಆಗ ನಗುತ್ತಾ ಪತ್ನಿಯ ಕಡೆಗೆ ತಿರುಗಿ ಗಿರೀಶನು, ಅಲ್ವೇ ನನ್ನ ಪಗಾರ ಮೊದಲು ಎಷ್ಟಿತ್ತು ಹೇಳು ಈಗ ಎಷ್ಟಾಗಿದೆ, ಮನೆಗೆ ಬರುವ ಕೆಲಸದವರಿಗೆ ಈಗ ನಾವು ಮೊದಲಿನಷ್ಟೇ ಕೊಡುತ್ತಿದ್ದೇವೆ ಏನು! ನೂರರ ಲೆಕ್ಕದಲ್ಲಿ ಕೊಡುವವರು ಈಗ ಸಾವಿರದ ಲೆಕ್ಕದಲ್ಲಿ ಕೊಡುತ್ತೇವೆ, ಅದೇ ರೀತಿ ತರಕಾರಿಯ ಬೆಲೆ ಹೆಚ್ಚು ಕಡಿಮೆ ಆಗುತ್ತದೆ ಅಷ್ಟೇ ಎಂದನು!
ಒಂದೊಂದು ವಿಷಯದಲ್ಲಿ ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ, ತರಕಾರಿ , ಹೂವು,ಹಣ್ಣುಗಳ ಬೆಲೆ ಜಾಸ್ತಿ ಆದಾಗ ನಾವು ಅತಿಯಾಗಿ ಕಿರಿಕಿರಿ ಮಾಡಿಕೊಳ್ಳುತ್ತೇವೆ ಮನಸ್ಸಿಗೆ! ‌‌

ಹೀಗಾದರೆ ನಾವು ಏನು ತಿನ್ನಬೇಕು ಹೀಗೆಯೇ ಬೆಲೆ ಏರುತ್ತಾ ಹೋದರೆ ಅನಿಸಿ ಬಿಡುತ್ತದೆ ಮನಸ್ಸಿಗೆ ತಕ್ಷಣ! ಆದರೆ ರೈತರ ಪರಿಶ್ರಮಕ್ಕೆ ನಾವು ಗೌರವ ಕೊಡಲೇ ಬೇಕು, ಮಳೆ ಸರಿಯಾಗಿ ಬರದೆ ಅಥವಾ ಅಕಾಲಿಕ ಗಾಳಿ ಮಳೆಯಿಂದಾಗಿ ಬೆಳೆ ಸರಿಯಾಗಿ ಬರದೆ ರೈತನಿಗೆ ಆರ್ಥಿಕ ಸ್ಥಿತಿ ಗತಿಗೆ ಹೊಡೆತ ಬೀಳುತ್ತದೆ ಎಷ್ಟೋ ಸಲ!

ಬೆಳೆ ಸರಿಯಾಗಿ ಬರಲು ನಿರ್ದಿಷ್ಟ ಸಮಯದಲ್ಲಿ ಸರಿಯಾಗಿ ಆ ಬೆಳೆಗೆ ನೀರು ಸಿಗಬೇಕು , ನೀರಾವರಿ ಭೂಮಿಯಲ್ಲಿ ಹೇಗೋ ಬೆಳೆ ಬಂದು ಬಿಡಬಹುದು ಮಳೆ ಇಲ್ಲದೇ, ಆದರೆ ಮಳೆಯನ್ನೇ ಅವಲಂಬಿಸಿದ ಭೂಮಿಗೆ ಕಷ್ಟ ಸಾಧ್ಯ! ಎಷ್ಟೋ ಸಲ ಮಳೆ ಬಾರದೆ ಬಿಸಿಲಿಗೆ ನೆಟ್ಟ ಸಸಿ ಒಣಗಿದರೆ, ಮತ್ತೊಂದು ಸಲ ಅಕಾಲಿಕ ಮಳೆ ಬಂದು ಗಾಳಿ ಮಳೆಯ ಅಬ್ಬರದಿಂದ ಸಸಿ ಮುರುಟಿ ಹೋಗುತ್ತವೆ! ಹೀಗಾಗಿ ಜಮೀನನ್ನೇ ಅವಲಂಬಿಸಿ ಜೀವನ ಮಾಡುವವರ ಬೆಳೆ ಒಂದು ರೀತಿಯಲ್ಲಿ ಅವರಿಗೆ ಬಂಗಾರವೇ ಸರಿ! ಎಲ್ಲ ರೀತಿಯ ಹವಾಮಾನವನ್ನು ದಾಟಿ ಬೆಳೆ ನಳನಳಿಸಿತ್ತಾ ಓಲಾಡಿದಾಗ ರೈತನ ಮುಖದಲ್ಲಿ ಸಾರ್ಥಕ ಭಾವನೆ !

ಫೋಟೋ ಕೃಪೆ : google

ಆದರೆ ಮಳೆ,ಬೆಳೆ ಸರಿಯಾಗಿ ಬರದೆ ತರಕಾರಿಯ ಬೆಲೆ ಅತಿ ಕಡಿಮೆಯಾಗಿ ರೈತ ಮಾನಸಿಕವಾಗಿ ಕುಗ್ಗಿ ಜೀವಕ್ಕೂ ಅಪಾಯ ತಂದು ಕೊಳ್ಳುವ ಪರಿಸ್ಥಿತಿ ಎಷ್ಟು ಸಲ ಓದಿಲ್ಲ, ಕೇಳಿಲ್ಲ, ಕಣ್ಣಾರೆ ಕಂಡಿಲ್ಲ! ನಾವು ರೈತರ ಪರಿಸ್ಥಿತಿಯನ್ನು ತಿಳಿಯದೇ ತರಕಾರಿಯ ಬೆಲೆ ಕಡಿಮೆ ಆದ ಬಗ್ಗೆ ಮಾತ್ರ ಖುಷಿ ಪಡುತ್ತೇವೆ ,ಅವರ ಮಾನಸಿಕ ಸ್ಥಿತಿ, ಆರ್ಥಿಕ ಸ್ಥಿತಿ ಆ ದೇವರೇ ಬಲ್ಲ ಆ ಸಮಯದಲ್ಲಿ!

ನಿಜವಾಗಿ ಹೇಳಬೇಕೆಂದರೆ ರೈತರಿಂದ ನಾವು ನೇರವಾಗಿ ತೆಗೆದುಕೊಂಡರೆ ಅವರಿಗೆ ಸ್ವಲ್ಪವಾದರೂ ಲಾಭ ಸಿಗಬಹುದು, ಮಾರುವವನಿಗೂ ಜಾಸ್ತಿ ಏನೂ ಲಾಭ ಸಿಗುವುದಿಲ್ಲ, ರೈತ ಮತ್ತು ಮಾರುವವನ ನಡುವಿನಲ್ಲಿರುವ ಮಾರುಕಟ್ಟೆಗೆ ತರುವ ಮಧ್ಯವರ್ತಿಗಳಿಗೆ ಮಾತ್ರ ಇದರ ಲಾಭ ಜಾಸ್ತಿ!

ಒಂದು ಕ್ಷಣ ವಿಚಾರ ಮಾಡಿ ನೋಡು ಹೋಟೆಲಿನಲ್ಲಿ ತಿಂದ ಒಂದೇ ಒಂದು ದೋಸೆಗೆ ನೂರು ರೂಪಾಯಿ ಸಲೀಸಾಗಿ ಜೇಬಿನಿಂದ ಚೌಕಾಸಿ ಮಾಡದೆ ಕೊಡುತ್ತೇವೆ! ಒಂದು ವೆಜಿಟೇಬಲ್ ಕರಿ ತೆಗೆದುಕೊಂಡರೆ ಮುನ್ನೂರು,ನಾನ್ನೂರು ರೂಪಾಯಿ ಅದು ಇಬ್ಬರಿಗೆ ಸಾಕಾಗುವಷ್ಟು ಮಾತ್ರ, ಅದಕ್ಕೆ ಯಾವುದೇ ಲೆಕ್ಕ ಹಾಕುವುದಿಲ್ಲ ನಾವು!

ಒಂದು ಕೇಜಿ ತರಕಾರಿಗೆ ನೂರು ರೂಪಾಯಿ ಕೊಟ್ಟು ತಂದು ಬಳಸಲು ಜಾಸ್ತಿ ದುಬಾರಿ ಆಯ್ತಲ್ವಾ ಎಂದು ಲೆಕ್ಕ ಹಾಕ್ತೀವಿ, ಒಂದು ಕೇಜಿಗೆ ಪಲ್ಯ ಚಪಾತಿ , ಅನ್ನಕ್ಕೆ ಏಳೆಂಟು ಜನರು ನಂಜಿಕೊಂಡು ಆರಾಮವಾಗಿ ಖುಷಿಯಿಂದ ತಿನ್ನಬಹುದು ಅಲ್ಲವೇ ಎಂದಾಗ ಗಿರೀಶ! ಹೌದು ನೀವು ಹೇಳುವುದು ಖಂಡಿತಾ ಸರಿಯಾಗಿದೆ ಎಂದಳು ಸರಿತಾ!

ಆಗ ಮಹೇಶನು ಹೇಗೆಂದರೆ ಸರಿತಾ ನಮ್ಮ ಸ್ವಭಾವ, ಆಧುನಿಕ ,ಆಡಂಬರದ, ವಾತಾವರಣದಲ್ಲಿದ್ದರೆ ದುಡ್ಡು ಲೆಕ್ಕ ಹಾಕುವುದಿಲ್ಲ, ಹೋಟೆಲ್ನಲ್ಲಿ ಐವತ್ತು ರೂಪಾಯಿ ಜಾಸ್ತಿ ಇಟ್ಟು ನಮಗೆ ಹತ್ತು ನಿಮಿಷವೇ ಸರ್ವ್ ಮಾಡಿದವರಿಗೆ ಟಿಪ್ಸ್ ಅಂತ ಕೊಟ್ಟು ಬರ್ತಿವಿ, ಅದು ನಮಗೆ ಒಂದು ರೀತಿಯ ಪ್ರೆಸ್ಟೀಜ್ ವಿಷಯ! ಅದೇ ರೈತ ಕಷ್ಟಪಟ್ಟು ಬಿಸಿಲಲ್ಲಿ ನಿಂತು ಬೆಳೆಸಿದ ಬೆಳೆ, ತರಕಾರಿಯನ್ನು ಬಿಸಿಲಲ್ಲಿ ಖಡಿ ನಿಂತು ಮಾರುವವನಿಗೆ ಇಪ್ಪತ್ತು ರೂಪಾಯಿ ಚೌಕಾಸಿ ಮಾಡಿ ಕಾಲರ್ ಎರಸ್ತೀವಿ ನೋಡು ನಾವು ಹೆಂಗೆ ಅಂತ!

ಇದು ಒಬ್ಬಿಬ್ಬರ ಸ್ವಭಾವವಲ್ಲ, ನಮ್ಮೆಲ್ಲರ ಸಹಜ ಸ್ವಭಾವ, ಸ್ವಲ್ಪ ಬದಲಾಯಿಸಲು ಪ್ರಯತ್ನಿಸಬಹುದು ನಾವಾಗೇ ಇಷ್ಟ ಪಟ್ಟರೆ ಮಾತ್ರ! ಏಕೆಂದರೆ ಸಾವಿರ ರೂಪಾಯಿ ಕೊಟ್ಟು ತಂದ ವಿವಿಧ ತರಕಾರಿಗಳನ್ನು ಎಂಟ್ಹತ್ತು ದಿನಗಳ ಕಾಲ ಆರಾಮವಾಗಿ ಬಳಸಬಹುದು, ಅದೇ ಸಾವಿರ ರೂಪಾಯಿ ಕೊಟ್ಟು ತಿಂದ ಹೋಟಲ್ ತಿಂಡಿ , ಊಟ ಆ ಸಮಯಕ್ಕೆ, ಆ ಕ್ಷಣಕ್ಕೆ ಮುಗಿದು ಹೋಗುತ್ತದೆ ಅಷ್ಟೇ!

ಫೋಟೋ ಕೃಪೆ : google

ಅಂದ ಮೇಲೆ ತರಕಾರಿಯ ಬೆಲೆ ಸ್ವಲ್ಪ ಹೆಚ್ಚಳವಾಗಿ ಹೆಚ್ಚೆನಿಸಿದರೂ ನಾವು ಈಗೀನ ಕಾಲದಲ್ಲಿ ಮಾಡುವ ಹೋಟೆಲ್ ಖರ್ಚಿನಷ್ಟಲ್ಲ ಅಲ್ಲವೇ! ಹೆಚ್ಚೆಂದರೆ ಅತಿ ದುಬಾರಿ ಅನಿಸುವ ಒಂದು ತರಕಾರಿಯನ್ನು ಸ್ವಲ್ಪ ದಿನದ ಮಟ್ಟಿಗೆ ಕಡಿಮೆ ಮಾಡಬಹುದು ಹೊರತು, ಕಡಿಮೆಗೆ ಕೊಡಿ ಎಂದು ಅವರನ್ನು ಒತ್ತಾಯಿಸುವುದು ಸರಿಯಲ್ಲ ಅನಿಸುತ್ತೆ! ಈ ಚಟದಿಂದ ನೀನೂ ನಾನೂ ಕೂಡ ಹೊರತಲ್ಲ ಅಲ್ಲವೇ!

ಹೂಂರೀ ನಾನೂ ಇದಕ್ಕೆ ಹೊರತಲ್ಲ! ನೀವು ಹೇಳುವುದು ನೂರಕ್ಕೆ ನೂರು ಸತ್ಯ ಕಾಲ ಬದಲಾದಂತೆ ಹೊರಗಡೆಗೆ ಹೋಗಿ ಮನ ಬಂದಂತೆ ತಿಂದು ಲೆಕ್ಕ ಹಾಕಿದೆ ದುಡ್ಡು ಖರ್ಚು ಮಾಡುವ ನಾವು ತರಕಾರಿಗೆ ಐವತ್ತು ರೂಪಾಯಿ ಏರಿದಾಗ ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಡುತ್ತೇವೆ !

ತರಕಾರಿಯ ಬೆಲೆ ಅತಿ ಹೆಚ್ಚಾದಾಗ ಅದರ ಬಿಸಿ ತಟ್ಟುವುದು ಬಡವರು ಮತ್ತು ತೀರಾ ಕೆಳ ಮಧ್ಯಮವರ್ಗದ ಜನರಿಗೆ ಮಾತ್ರ! ಹೊರತು ಸಲೀಸಾಗಿ ಹೋಟೆಲ್ಗೆ ಹೋಗಿ ತಿಂದು ಖರ್ಚು ಮಾಡಿ ಬರುವವರಿಗಂತೂ ಅಲ್ಲವೇ ಅಲ್ಲ ಅಲ್ಲವೇ !!!

ಹಣ್ಣು, ಹೂವುಗಳು, ತರಕಾರಿಗಳು ಒಂದೆರಡು ದಿನಗಳಲ್ಲಿ ಬಾಡಿ ಹೋಗುತ್ತವೆ ಜಾಸ್ತಿ ಖರ್ಚಾಗಿದೆ ಉಳಿದಾಗ ಆಗ ಆಗ ತುಂಬಾ ಕಡಿಮೆ ಬೆಲೆಗೆ ಮಾರುವ ಪರಿಸ್ಥಿತಿ ವ್ಯಾಪಾರಿಯದು! ಅದೇ ರೀತಿ ತರಕಾರಿಯ ಬೆಲೆ ಅತಿ ಕಡಿಮೆಯಾದಾಗ ರೈತನ ಮನ ರೋಸಿ ಹೋಗಿ ರಸ್ತೆಗೆ ಚೆಲ್ಲುವುದು ನಾವು ಕಂಡಿದ್ದೇವೆ!

ಹೀಗೆ ರೈತ ಹಾಗು ವ್ಯಾಪಾರಿಗಳ ಕಷ್ಟ ಸುಖ ನಮಗೆ ಗೊತ್ತಾಗುವುದಿಲ್ಲ,ಅವರಿಗೆ ಸಂಬಳದಂತೆ ತಿಂಗಳ ಪಗಾರವಿಲ್ಲ, ರೈತ ವರ್ಷಕ್ಕೊಂದು ಸಲ ಕೃಷಿಯಲ್ಲಿ ಬರುವ ಆದಾಯವನ್ನೇ ವರ್ಷ ಪೂರ್ತಿ ಲೆಕ್ಕವಿಟ್ಟು ಖರ್ಚು ಮಾಡಬೇಕು, ಮತ್ತೇ ಹೊಸ ಬೆಳೆ ಬೆಳೆಯಲು ಕಳೆ ತೆಗೆದು ಗದ್ದೆಯನ್ನು ಸರಿಯಾಗಿ ಹಸನುಗೊಳಿಸಿ ಹೊಸ ಬೀಜವನ್ನು ಬಿತ್ತಬೇಕು, ಮುಂಗಾರಿನ ಮಳೆಗಾಗಿ ಕಾಯಬೇಕು,ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಂದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ! ಇಲ್ಲವಾದರೆ ಕಷ್ಟ ರೈತನಿಗೆ ಕಟ್ಟಿಟ್ಟ ಬುತ್ತಿ ಅಲ್ಲವೇ ಎಂದಳು ಸರಿತಾ!

ಹೌದು ಸರಿತಾ ನಿಜ ನಿನ್ನ ಮಾತು, ಮಧ್ಯವರ್ತಿಗಳು ಮಾರುಕಟ್ಟೆಗೆ ತರುವ ತರಕಾರಿಯ ಲಾಭವನ್ನು ವ್ಯಾಪಾರಿಗಿಂತ ಜಾಸ್ತಿ ಪಡೆಯುತ್ತಾರೆ ಹೇಗೆಂದರೆ ರೈತನಿಂದ ಒಂದು ಸಲ ತಂದು ಮಧ್ಯವರ್ತಿಗಳು ತರಕಾರಿಗಳನ್ನು ವ್ಯಾಪಾರಿಗೆ ಒಪ್ಪಿಸಿ ಬಿಡುತ್ತಾರೆ ಅದನ್ನು ಕೆಡದಂತೆ ನೋಡಿಕೊಳ್ಳುವುದು ವ್ಯಾಪಾರಿಯ ಜವಾಬ್ದಾರಿ!

ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಮಾರುಕಟ್ಟೆಗೆ ಹೋಗಿ ಮಧ್ಯವರ್ತಿಗಳಿಂದ ತರಕಾರಿಯನ್ನು ಖರೀದಿಸಿ ಕಷ್ಟಪಟ್ಟು ತಂದ ಹಣ್ಣು ತರಕಾರಿಗಳನ್ನು ಸರಿಯಾದ ರೀತಿಯಲ್ಲಿ ಮಾರಾಟ ಮಾಡುವ ನೈಪುಣ್ಯತೆ,ಜಾಣತನ, ವ್ಯವಹಾರ ಜ್ಞಾನ ವ್ಯಾಪಾರಿಯಲ್ಲಿರಬೇಕು! ಅವನು ಸ್ವಲ್ಪ ಸೋಮಾರಿತನ ಹೊಂದಿದರೂ ತರಕಾರಿ , ಹಣ್ಣು,ಹೂವು ನೆಲಕಚ್ಚುತ್ತವೆ !

ಹೀಗಾಗಿ ತರಕಾರಿ ನಳನಳಿಸುತ್ತಾ ತಾಜಾ ಇರುವಾಗಲೇ ಅವುಗಳನ್ನು ಗ್ರಾಹಕರಿಗೆ ಮಾರಲು ಚುರುಕಿನ ವ್ಯಾಪಾರ ಮಾಡುವ ಮನೋಭಾವ ವ್ಯಾಪಾರಿಯ ಸ್ವಭಾವದಲ್ಲಿ ಇರಲೇಬೇಕು! ಗ್ರಾಹಕರನ್ನು ತನ್ನ ಮಾತಿನ ಮೋಡಿಯಲ್ಲಿ ಮುಳಗಿಸಿ ಆದಷ್ಟು ಬೇಗ ತರಕಾರಿಗಳನ್ನು ಖಾಲಿ ಮಾಡಿ ಮತ್ತೇ ತಾಜಾ ತರಕಾರಿಗಳನ್ನು ಇಡುವ ವ್ಯವಸ್ಥೆ ಮಾಡಬೇಕು, ಈ ಕಾರ್ಯಾಚರಣೆ ನಿರಂತರವಾಗಿ ವಿಶ್ರಾಂತಿ ಇಲ್ಲದೇ ಅವಿರತವಾಗಿ ಸಾಗುತ್ತಲೇ ಇರಬೇಕು. ಆಗ ಮಾತ್ರ ಒಬ್ಬ ವ್ಯಾಪಾರಿ ತನ್ನ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಾ ಹೋಗುತ್ತಾನೆ!
ಹೀಗಾಗಿ ಗ್ರಾಹಕನು ತರಕಾರಿ ಕೊಂಡಷ್ಟು ಸುಲಭವಲ್ಲ ವ್ಯಾಪಾರಿಯ ಹಾಗು ರೈತನ ಕಷ್ಟಾನಷ್ಟಗಳು!

ತರಕಾರಿಯ ಬೆಲೆ ಅತಿ ಕಡಿಮೆಯಾಗುವುದು ಬೇಡ ಹಾಗಂತ ಗಗನೇಕ್ಕೇರುವುದು ಬೇಡ ಎಂದು ಆಶಿಸೋಣ! ನಾವು ನ್ಯಾಯಯುತ ಬೆಲೆಯನ್ನು ಕೊಟ್ಟು ಖರೀದಿಸೋಣ ಆಗ ಒಂದು ಸಂಸಾರಕ್ಕೆ ನಾವು ನಮ್ಮ ಕಡೆಯಿಂದ ಸರಿಯಾದ ಕೊಡುಗೆ ಕೊಟ್ಟ ಹಾಗೆ, ಸಮಾಜಕ್ಕೆ ನಮ್ಮಿಂದ ಸಹಾಯ ಮಾಡಿದ ಹಾಗೆ ಅಂದಾಗ ಮಹೇಶನು, ನೀವು ಹೇಳಿದ್ದು ಸರಿಯಾಗಿದೆ ಇನ್ನು ಮುಂದೆ ನಾನು ತರಕಾರಿಯಲ್ಲಿ ಜಾಸ್ತಿ ಚೌಕಾಸಿ ಮಾಡುವುದಿಲ್ಲ ಎಂದಳು ಖಡಾ ಖಂಡಿತವಾಗಿ ಸರಿತಾ!


  • ಸ್ನೇಹಾ ಆನಂದ್ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading