ಮಗುವಿನ ತೂಕವು ಏರಿಕೆಯಾಗುತ್ತಿಲ್ಲ ಎನ್ನುವ ಯೋಚನೆ ಮಗುವಿನ ತಂದೆ ತಾಯಿಗೆ ಸಹಜವಾಗಿಯೇ ಕಾಡುವ ಪ್ರಶ್ನೆ. ಪ್ರಜ್ಞಾ ರವೀಶ್ ಅವರು ಮಗುವಿನ ತೂಕದ ಆರೈಕೆಯ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ….
ಮೊದಲು ಬರುವ ಎದೆ ಹಾಲಿನಲ್ಲಿ ನೀರಿನಾಂಶ ಜಾಸ್ತಿ ಇರುವ ಕಾರಣ ಅದರಲ್ಲಿ ಮಗುವಿಗೆ ಏನೂ ಪೌಷ್ಟಿಕಾಂಶ ದೊರಕದು ಹಾಗಾಗಿ ಪೌಷ್ಟಿಕಾಂಶಯುತ ಆಹಾರಕ್ಕಾಗಿ ನಂತರ ಬರುವ ಹಾಲನ್ನು ಕೊಡಬೇಕು ಎನ್ನುತ್ತಾರೆ. ಎರಡೂ ಮೊಲೆಗಳಲ್ಲಿನ ಹಾಲು ಕೊಡಬೇಕಾಗುತ್ತದೆ ಅಲ್ಲದೇ ಇದ್ದರೆ ಹಾಲು ಜಾಸ್ತಿಯಾಗಿ ಮೊಲೆ ನೋವು ಬರುವ ಸಾಧ್ಯತೆಗಳಿರುತ್ತವೆ.
ನವಜಾತ ಶಿಶುಗಳು ಬಾರಿ ಬಾರಿ ಮಲ ವಿಸರ್ಜನೆ, ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಆರೋಗ್ಯವಾಗಿದೆ ಎಂದು ತಿಳಿದುಕೊಳ್ಳಬೇಕು, ಜಾಸ್ತಿ ಪ್ರಮಾಣದಲ್ಲಿ ಹಾಲು ಕುಡಿಸಿದಾಗ ಮಲ ವಿಸರ್ಜನೆ, ಮೂತ್ರ ವಿಸರ್ಜನೆಯೂ ಕೂಡ ಜಾಸ್ತಿಯಾಗುತ್ತದೆ.

ಮಗುವಿನ ತೂಕದಲ್ಲಿ ಏರಿಕೆಯಾಗುತ್ತಿದೆಯೇ ಎಂದು ನೋಡಬೇಕಾಗುತ್ತದೆ, ತೂಕದಲ್ಲಿ ಏರಿಕೆಯಾದರೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಠಿಕ ಆಹಾರವು ದೊರಕಿದೆ ಇಲ್ಲವಾದರೆ ಅಪೌಷ್ಟಿಕತೆಯಿಂದ ತೂಕದಲ್ಲಿ ಏರಿಕೆ ಕಂಡು ಬರುವುದಿಲ್ಲ. ಮೊದಲು ಬರುವ ಹಾಲಿನಲ್ಲಿ ನೀರಿನ ಅಂಶ ಜಾಸ್ತಿ ಇರುವ ಕಾರಣ 10 ನಿಮಿಷ ಮಾತ್ರ ಹಾಲನ್ನು ಕುಡಿಸಿದರೆ, ಮಗುವಿಗೆ ನೀರಿನ ಅಂಶ ಮಾತ್ರ ಲಭಿಸಿ ಬಾರಿ ಬಾರಿ ಮೂತ್ರ ಮಾಡಬಹುದೇ ಹೊರತು ತೂಕದಲ್ಲಿ ಏರಿಕೆಯಾಗದು.
ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕಾಂಶ ದೊರೆತರೂ ಕೂಡ ಮಗು ಅಳುತ್ತಿದೆ ಎಂದಾದರೆ ಒಂದೋ ಮಗುವಿಗೆ ಕಿವಿ ನೋವು ಅಥವಾ ಹೊಟ್ಟೆ ನೋವು ಆಗಿದೆ ಎಂದು ಅರ್ಥ, ಸರಿಯಾಗಿ ಪರಿಶೀಲಿಸಿ ಮಗು ಏಕೆ ಅಳುತಿದೆ ಎಂದು ಕಂಡುಹಿಡಿಯಬೇಕಾಗುತ್ತದೆ.
ಹಾಗಾಗಿ ನವಜಾತ ಶಿಶುವಿನ ಆರೈಕೆಯಲ್ಲಿ ತಾಯಿಯ ಆರೈಕೆ, ಆರೋಗ್ಯ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಸಾಕಷ್ಟು ಪ್ರಮಾಣದಲ್ಲಿ ನೀರು, ಹಾಲು ಮುಂತಾದ ದ್ರವ ಪದಾರ್ಥಗಳ ಸೇವನೆಯಿಂದ ಎದೆ ಹಾಲು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವುದರ ಜೊತೆಗೆ ಮಗುವಿನ ತೂಕ, ಆರೋಗ್ಯ, ಪೌಷ್ಟಿಕತೆಗೂ ಕೂಡ ಉತ್ತಮ.
- ಪ್ರಜ್ಞಾ ರವೀಶ್
