ಮಹಾನಗರಗಳಲ್ಲಿ ಕೆಲಸ ಮಾಡುವ ಅನೇಕ ಅಪ್ಪಂದಿರು ಮಗಳ ಏಳು ಬಿಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ.ಅಪ್ಪನ ಹೃದಯದಲ್ಲಿ ಅಡಗಿದ ಪ್ರೀತಿಯನ್ನು ಸ್ವತಃ ಒಬ್ಬ ಅಪ್ಪನೇ ಹೇಳಿದಾಗ …
ಹೆಣ್ಣು ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಅಮ್ಮನ ವಿರುದ್ಧ ಸುಳ್ಳುಸುಳ್ಳೇ ದೂರು ಹೇಳಲು,ಅಣ್ಣನ ಜಗಳದ ಕಂಪ್ಲೀಟ್ ಡೀಟೇಲ್ಸ್ ಒಪ್ಪಿಸಲು, ಸಂಜೆ ತರುವ ಮಿಠಾಯಿ ಪೊಟ್ಟಣಗಳಿಗಾಗಿ ಕಾಯಲು, ನಾನಿವತ್ತು ಸ್ಕೂಲಿಗೆ ಹೋಗಲ್ಲ ಎನ್ನುತ್ತಲೇ ಎದೆಮೇಲೆ ಮುಖವಿಟ್ಟು ನಿದ್ರೆ ಬಂದಂತೆ ಕಣ್ಮುಚ್ಚಿ ಮಲಗಲು ಅವಳಿಗೆ ಅಪ್ಪನೇ ಬೇಕು. ಅವನೇ ಅವಳ ಪಾಲಿನ ಪ್ರಪಂಚ….!!
ಸಾವಿರ ಸಂಕಟಗಳನ್ನು ಮತ್ತು ಸಂತಸಗಳನ್ನೊತ್ತು ಮನೆಗೆ ಬಂದರೂ ಅದನ್ನು ಇಳಿಸಿಕೊಳ್ಳಲು ಮಗಳೆ ಬೇಕು, “ಅಪ್ಪ ಬಂದರು….”ಎಂಬ ಆ ಧ್ವನಿಯೊಂದು ಸಾಕು ಆತನಿಗೆ ನಿರುಮ್ಮಳನಾಗಲು, ಜೀವಚೈತನ್ಯಗೊಳ್ಳಲು!!
ಮನೆಯಲ್ಲಿ ಎಲ್ಲರ ಪಾಲಿಗೆ ಅಪ್ಪ ಕಾಠಿಣ್ಯ ಅನ್ನಿಸಿದರೂ ಮಗಳ ಪಾಲಿಗೆ ಮಾತ್ರ ಅವನೊಬ್ಬ ಕಾರುಣ್ಯ ಸಿಂಧು. ಮಗಳಿಗೆ ಅಪ್ಪ ಕಾವಲುಗಾರನಂತೆ ನಿಂತು ಬಿಡುತ್ತಾನೆ. ಯಾರಲ್ಲಿಯೂ ಹೇಳಲಾಗದ್ದನ್ನು ಮಗಳಲ್ಲಿ ಹೇಳಿಕೊಳ್ಳುತ್ತಾನೆ. “ಗತಿಸಿಹೋದ ಅಮ್ಮನ ರೂಪದಲ್ಲಿ ನೀನು ಬಂದೆ ಮಗಳೇ” ಎಂದು ಗದ್ಗದಿತನಾಗುತ್ತಾನೆ.

ಫೋಟೋ ಕೃಪೆ : google
ಯಾವುದೋ ತಪ್ಪಿಗೆ ಅಮ್ಮ ಮಗಳನ್ನು ಬೈಯುತ್ತಿದ್ದರೆ “ಅಯ್ಯೋ ಸುಮ್ನಿರು ಎಷ್ಟಂತ ಹೇಳ್ತೀಯ, ಅಂತಹ ತಪ್ಪು ಅವಳೇನು ಮಾಡಿದ್ದಾಳೆ” ಎಂದು ಮಗಳ ಬೆಂಬಲಕ್ಕೆ ನಿಲ್ಲುವವನು ಅಪ್ಪನೇ..!!
ಆದರೆ ಮಹಾನಗರಗಳಲ್ಲಿ ಹೋಟೆಲುಗಳನ್ನು ನಡೆಸುವವರು ಅಲ್ಲಿ ಕೆಲಸ ಮಾಡುವವರು, ಮಾಧ್ಯಮ ಕ್ಷೇತ್ರದಲ್ಲಿ ದಿನರಾತ್ರಿ ಎನ್ನುವ ವ್ಯತ್ಯಾಸವೇ ತಿಳಿಯದೇ ಕಾರ್ಯಮಗ್ನ
ರಾಗುವವರು, ಪೊಲೀಸ್ ಇಲಾಖೆಯಲ್ಲಿರುವ ಅನೇಕ ಅಪ್ಪಂದಿರು ಈ ಖುಷಿಯಿಂದ ವಂಚಿತರಾಗಿರುತ್ತಾರೆ.
ಇತ್ತೀಚೆಗೆ ಮುಂಬೈಯ ಒಬ್ಬರು ಯಶಸ್ವಿ ಹೋಟೆಲು ಮಾಲೀಕರ ಎದುರು ಕುಳಿತಿದ್ದೆ, ತಿಂಗಳ ಹಿಂದೆಯಷ್ಟೇ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು, ಆ ಮದುವೆಗೆ ನಾನೂ ಹೋಗಿದ್ದೆ. ಹುಲಿಯಂತೆ ಬದುಕಿದ, ಎಂದೂ ಯಾವತ್ತೂ ಒಂದಿನಿತೂ ಬದುಕ ಪಲ್ಲಟಕ್ಕೆ ಅಲುಗಾಡದ ಗಟ್ಟಿಜೀವದ ಅವರು, ಮಗಳನ್ನು ಧಾರೆ ಎರೆದು ಬೀಳ್ಕೊಡುವ ಸಮಯ ಬಂದಾಗ ಬಿಕ್ಕಿಬಿಕ್ಕಿ ಅಳತೊಡಗಿದರು, ಮಗಳು ಗಂಡನ ಮನೆಗೆ ಹೋದ ಅರ್ಧಗಂಟೆಯವರೆಗೂ ಅಲ್ಲೇ ಮಂಟಪದ ಎದುರುಗಡೆ ಮೌನವಾಗಿಯೇ ನಿಂತಿದ್ದರು.
“ನೋಡು ಉದಯ್, ಸಮಾಜ ನನ್ನನ್ನೊಬ್ಬ ಯಶಸ್ವಿ ಉದ್ಯಮಿ ಎನ್ನುತ್ತದೆ, ಆದರೆ ಅದಕ್ಕಾಗಿ ನನ್ನೊಳಗಿನ ಆನಂದವನ್ನು ಕಳೆದುಕೊಂಡೆ. ಹೋಟೆಲು ಕೆಲಸ ಮುಗಿಸಿ ಮನೆಗೆ ಹೋದಾಗ ಮಕ್ಕಳು ಮಲಗಿರುತ್ತಿದ್ದರು, ಎಬ್ಬಿಸಲು ಮನಸಾಗ್ತ ಇರಲಿಲ್ಲ, ಬೆಳಿಗ್ಗೆ ಎದ್ದು ಬರುವಾಗಲೂ ಅವರು ಮಲಗೇ ಇರುತ್ತಿದ್ದರು. ಇದು ನಿತ್ಯದ ದಿನಚರಿ, ಎತ್ತಿ ಮುದ್ದಾಡುವ ಭಾಗ್ಯ ಸಿಗಲಿಲ್ಲ, ಮಕ್ಕಳು ದೊಡ್ಡವರಾದರು, ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುವಾಗ ನೋವಿನ ಕಟ್ಟೆ ಒಡೆಯಿತು.ಆ ಸಂಪತ್ತಿಗಾಗಿ ಈ ಸಂಪತ್ತನ್ನು ಕಳೆದುಕೊಂಡು ಬಿಟ್ಟೆ ಎನ್ನುವಾಗ ಅವರು ಥೇಟು ಬುಡಕಡಿದ ಮರದಂತಾಗಿದ್ದರು.
ಇದು ಒಬ್ಬರ ಕಥೆಯಲ್ಲ.ಅನೇಕ ಅಪ್ಪಂದಿರ ನೋವು. ಹಗಲಿರುಳನ್ನು ಒಂದು ಮಾಡಿಕೊಂಡು ಬೆವರು ಸುರಿಸಿ ದುಡಿಯುತ್ತಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಇನ್ನೇನು ಎಲ್ಲವೂ ಸರಿ ಆಯಿತು ಎನ್ನುವಷ್ಟರಲ್ಲಿ ಮಕ್ಕಳು ಇನ್ನೊಂದು ಮನೆಯನ್ನು ಬೆಳಗಲು ಹೊರಟು ನಿಂತಿರುತ್ತಾರೆ.
ಅಂತಹ ಹೊತ್ತಲ್ಲಿ ಮಗಳನ್ನು ಅಪ್ಪಿ ಹಿಡಿದು ಅಳುತ್ತಾ ನಿಲ್ಲುವ ಅಪ್ಪ ಮಗುವಾಗುತ್ತಾನೆ, ಮಗಳು ಅಮ್ಮನಾಗುತ್ತಾಳೆ. “ಮಗಳೇ ನಿನ್ನನ್ನು ಒಂದಿನವೂ ಎತ್ತಿ ಮುದ್ದಾಡಿಲ್ಲ, ನಿನ್ನಿಷ್ಟದ ಆಟವನ್ನು ನಿನ್ನೊಂದಿಗೆ ಆಡಿಲ್ಲ, ನನ್ನ ಹೆಗಲ ಮೇಲೆ ನಿನ್ನ ಕುಳ್ಳಿರಿಸಿ ಊರು ಸುತ್ತಿ ಬಂದಿಲ್ಲ, ನಿನ್ನ ಕಾಯುವಿಕೆಯ ತಪನೆಗೆ ನಾನು ಬೆಲೆ ಕೊಟ್ಟಿಲ್ಲ, ಕ್ಷಮಿಸಿ ಬಿಡು ಕಂದಾ, ಹುಟ್ಟಿದ ಮನೆಗೆ ನೀನು ಚಿನ್ನವಾದೆ, ಮೆಟ್ಟಿದ ಮನೆಗೆ ವಜ್ರವಾಗಿ ಹೊಳೆಯಬೇಕು”ಎನ್ನುವ ತಂದೆ ಅಳಿಯನ ಕಡೆಗೆ ದೈನ್ಯತೆಯಿಂದ ನೋಡುವ ರೀತಿಯಲ್ಲೇ ಅರ್ಥ ಆಗ್ತದೆ “ನಾನು ನಿಮ್ಮ ಕೈಗೆ ನನ್ನ ಹೃದಯದ ಒಂದು ಭಾಗವನ್ನೇ ಕತ್ತರಿಸಿ ಕೊಡುತ್ತಿದ್ದೇನೆ, ಅವಳಿಗೆ ನೋವಾದರೆ ಕಣ್ಣೀರು ನನಗೆ”ಎನ್ನುವ ಭಾವದಲ್ಲೇ ದುಃಖ ಉಮ್ಮಳಿಸಿ ಬರುವಾಗ ಮಗಳು ಆ ಕ್ಷಣಕ್ಕೆ ತಂದೆಯನ್ನು ಮಗುವಂತೆ ಸಂತೈಸುತ್ತಾಳೆ ತಾಯಿಯ ವಾತ್ಸಲ್ಯ ಹರಿಸಿ ಬಿಡುತ್ತಾಳೆ.
ಹೌದು! ಮನುಷ್ಯನ ಯಶಸ್ಸು ಕೇವಲ ಹಣದಲ್ಲಿ ಇರುವುದಿಲ್ಲ, ಅದುವೇ ಅಂತಿಮ ಅಂದುಕೊಂಡು ಮುಂದುವರೆದರೆ ನೋವು ತಪ್ಪಿದ್ದಲ್ಲ, ಮೂರು ಹೊತ್ತಿನ ಊಟ ಸಂಪಾದಿಸುವುದು ಕಷ್ಟವಲ್ಲ, ಅದನ್ನು ತನ್ನವರ ಜೊತೆಗೆ ಕುಳಿತು ಉಣ್ಣುವ ಭಾಗ್ಯ ದೊಡ್ಡದು.
ಆ ಸೌಭಾಗ್ಯ ಎಲ್ಲರಿಗೂ ಸಿಗಲಿ..
ಹೌದು ಮಗಳೇ,
ನೀ ತುಂಬಾ ನೆನಪಾದೆ ಇವತ್ತು.
- ಉದಯ್ ಕುಂದಾಪುರ
