ಮದರಂಗಿ, ಹೆನ್ನಾ ( Henna ) ಅಥವಾ ಗೋರಂಟಿ. ಎಂಬ ಹೆಸರು ಹೆಚ್ಚು ಪ್ರಚಲಿತ. ಮಾನವ ಕುಲದ ಮೊದಲ ಸೌಂದರ್ಯ ವರ್ಧಕ. ಉತ್ತರ ಆಫ್ರಿಕಾ ಮೂಲದ ಈ ಸಸ್ಯ ಸುಮಾರು 5,000 ವರ್ಷಗಳ ಕೆಳಗೆ ಪರ್ಶಿಯ ದೇಶದಲ್ಲಿ ಅತ್ಯಂತ ಪ್ರಚಲಿತವಿದ್ದ ಅಂದಿನ ಹೆಣ್ಣು ಮಕ್ಕಳ ಸೌಂದರ್ಯ ಸಾಧನ. ನಂತರ ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಭಾರತದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿದ್ದು.
ಸಸ್ಯ ಶಾಸ್ತ್ರೀಯ ಹೆಸರು Lawsonia inermis. ಕುಟುಂಬ – Lythraceae.
ಈ ಸಸ್ಯದಲ್ಲಿ ಚರ್ಮಕ್ಕೆ ಹಾಗೂ ಕೂದಲಿಗೆ ದೀರ್ಘಕಾಲ ಅಂಟಿಕೊಳ್ಳುವ ವಿಶಿಷ್ಟ ಗುಣದ ಬಣ್ಣದಿಂದಾಗಿ ಹಾಗೂ ಸ್ವಲ್ಪ ಸುವಾಸನೆಯಿಂದಾಗಿ ಈ ಗೋರಂಟಿ ತನ್ನದೇ ಆದ ಸ್ಥಾನ ಪಡೆದಿದೆ. ಈ ವಿಶಿಷ್ಟವಾದ ಬಣ್ಣಕ್ಕೆ ಕಾರಣ ಇದರಲ್ಲಿರುವ Lawsone ಎಂಬ ರಾಸಾಯನಿಕ.

ಆಗತಾನೆ ಗಿಡದಿಂದ ಕಿತ್ತು ತಂದ ತಾಜಾ ಎಲೆಗಳನ್ನು ನುಣ್ಣಗೆ ರುಬ್ಬಿ ಅದಕ್ಕೆ ಕಾಫಿ, ಟೀ, ವೀಳೆಯದೆಲೆ, ಅಡಕೆ, ಸುಣ್ಣ, ನಿಂಬೆರಸ, ಬೀಟ್ರೂಟ್ ರಸ ಹೀಗೆ ಏನೇನೋ ಬೆರೆಸುವುದು ಇದೆ. ಕೈ ಕಾಲುಗಳಿಗೆ ಅಥವಾ ತಲೆ ಕೂದಲಿಗೆ ಹಚ್ಚಿ ಒಂದು ಘಂಟೆ ಬಿಟ್ಟು ತೋಳೆದುಕೊಂಡರೆ ಇದರ ಘಾಡವಾದ ಬಣ್ಣ ನೋಡಲು ಚೆಂದ.
ಬರೀ ಬಣ್ಣಕ್ಕೆ ಮಾತ್ರವಲ್ಲದೇ ಈ ಮದರಂಗಿ ಅತ್ಯಂತ ಪರಿಣಾಮಕಾರಿಯಾದ antibacterial, antifungal ಹಾಗೂ ಒಂದು ಅತ್ಯುತ್ತಮ ನರ ರೋಗ ನಿವಾರಕ.
ಮದರಂಗಿಯಲ್ಲಿರುವ Coumarin, Naphthoquinone, Flavonoids, Sterol ಹಾಗೂ Tannins ರಾಸಾಯನಿಕಗಳು ಯಾವುದೇ ರೀತಿಯ ಚರ್ಮದ ಒಳ ಹಾಗೂ ಹೊರ ತೊಂದರೆಗಳನ್ನು ನಿವಾರಿಸಬಲ್ಲದು. ಉದಾ :- ಸರ್ಪಸುತ್ತು ( Herpes ) , ಕುರು, ಉಗುರುಸುತ್ತು, ಕೀವು ಗುಳ್ಳೆಗಳು, ಮೊಡವೆ, ಅಷ್ಟೇ ಅಲ್ಲ ಕುಷ್ಠ ರೋಗ ಸಹ ನಿವಾರಿಸಬಲ್ಲದು.
ಕೆಲವು ವಿಶಿಷ್ಟ ವಸ್ತುಗಳನ್ನು ಗೋರಂಟಿಗೆ ಬೆರೆಸಿ ಮಾಡಿದ ಚೂರ್ಣವನ್ನು ಬಿಳಿ ತೊನ್ನು ನಿವಾರಣೆಗೆ ಹಚ್ಚಲು ಆಯುರ್ವೇದ ವೈದ್ಯರು ಕೊಡುತ್ತಾರೆ.
ನಿಂಬೆರಸದ ಜೊತೆ ಎಲೆಗಳನ್ನು ರುಬ್ಬಿ ಅಂಗೈ ಅಂಗಾಲುಗಳಿಗೆ ಹಚ್ಚಿಕೊಂಡರೆ, ಉಷ್ಣದ ಉರಿ ಕಡಿಮೆಯಾಗುತ್ತದೆ.
ಎಲೆಗಳ ಕಷಾಯ ಸೇವನೆಯಿಂದ ಗಂಟಲು ನೋವು ಹಾಗೂ ಊತ ಕಮ್ಮಿಯಾಗುತ್ತೆ. ಅಲ್ಲದೆ ಈ ಕಷಾಯ ಕಾಮಾಲೆಗೆ ( Jaundice ) ಮನೆಮದ್ದು.
ಎಲೆಗಳ ಕಷಾಯ ಸೇವನೆ ದೇಹದಲ್ಲಿ ಸೇರಿರುವ toxins ಗಳನ್ನು ಹೊರಹಾಕುತ್ತದೆ ಮತ್ತು ಲಿವರ್ ತೊಂದರೆಗಳನ್ನು ನಿವಾರಿಸುತ್ತದೆ. ತಲೆನೋವು ಮತ್ತು ಮೈಗ್ರೇನ್ ಗೆ ಪರಿಹಾರ.
ಮದರಂಗಿಯ ಎಲೆಗಳ ಅಥವಾ ಕಾಯಿಗಳಿಂದ ಮಾಡಿದ ಕಷಾಯ ಸೇವನೆ ( ಕುದಿಸಿ ಮಾಡಿದ ಅಥವ ರಾತ್ರಿಯಿಡೀ ನೆನೆಸಿಟ್ಟು ಶೋಧಿಸಿಕೊಂಡ ) ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತನಾಳಗಳ ಗೋಡೆಗೆ ಅಂಟಿರುವ ಕೊಬ್ಬು ( Plaques ) ಕರಗಿಸಿ, ಹೃದಯಕ್ಕೆ ರಕ್ತವನ್ನು ಸಮರ್ಥವಾಗಿ ಸಾಗಲು ಸಹಾಯ ಮಾಡಿ ಹೃದಯಾಘಾತ ಮತ್ತು ಪಾರ್ಶ್ವವಾಯು ಬರುವುದನ್ನು ತಡೆಗಟ್ಟುತ್ತದೆ.

ರುಬ್ಬಿಕೊಂಡ ಮದರಂಗಿ ಎಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ, ಆರಿಸಿ ಶೋಧಿಸಿಕೊಂಡ ಎಣ್ಣೆಯನ್ನು ಹಚ್ಜಿ ಮಸಾಜ್ ಮಾಡುವುದರಿಂದ ಮಂಡಿನೋವು ( Arthritis ) ಮತ್ತು ಇತರ ಮೂಳೆಗಳ ನೋವು ( Rheumatism ) ನಿವಾರಣೆಯಾಗುತ್ತೆ.
ಸುಮಾರು 250 ಗ್ರಾಮ್ ಸಾಸುವೆ ಎಣ್ಣೆ ( Mustard oil ) ನಲ್ಲಿ 75 ಗ್ರಾಮ್ ನಷ್ಟು ಮದರಂಗಿ ಎಲೆಗಳನ್ನು ಚೆನ್ನಾಗಿ ದಪ್ಪ ತಳದ ಪಾತ್ರೆಯಲ್ಲಿ ಕುದಿಸಿ, ಶೋಧಿಸಿಕೊಂಡು ಇಟ್ಟುಕೊಂಡು ಪ್ರತೀದಿನ ತಲೆಗೆ ಹಚ್ಚುತ್ತಿದ್ದಲ್ಲಿ ಕೂದಲಬೇರುಗಳು ಗಟ್ಟಿಯಾಗಿ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ತಲೆಕೂದಲು ಸೊಂಪಾಗಿ ಬೆಳೆಯುತ್ತದೆ. ( ವಿಶೇಷವಾಗಿ ಹೆಣ್ಣುಮಕ್ಕಳ baldness ಗೆ ಮತ್ತು ಅಮೋನಿಯ ಹಾಕಿದ chemical dye ಬಹಳ ಕಾಲದಿಂದ ಹಾಕಿದ ಕಾರಣ ಕೂದಲು ಉದುರಿದ್ದರೆ ಉತ್ತಮ ಪರಿಹಾರ ).
ಇದೇ ರೀತಿಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಮೆಂತ್ಯೆ ಸಹಾ ಹಾಕಿಕೊಳ್ಳಬಹುದು. ಇದು ಸಹ ಕೂದಲು ಸೊಂಪಾಗಿ ಬೆಳೆಯಲು ಸಹಾಯಕ.
ಇದೇ ಎಣ್ಣೆಗೆ ನಿಂಬೆರಸ ಸೇರಿಸಿಕೊಂಡರೆ ತಲೆ ಕೆರೆತ ಕಡಿಮೆಯಾಗುತ್ತದೆ.
ಕರಿಬೇವು ( curry leaves ) ಹಾಕಿಕೊಂಡರೆ ಕೂದಲು ಕಪ್ಪಾಗುತ್ತೆ. ಕಹಿಬೇವಿನ ಎಲೆಗಳನ್ನು ( Neem ) ಸೇರಿಸಿಕೊಂಡರೆ ತಲೆಹೊಟ್ಟು ಹೋಗುತ್ತದೆ. ಕಾಫಿ ಡಿಕಾಕ್ಷನ್ ಸೇರಿಸಿಕೊಂಡರೆ ತಲೆಕೂದಲಿಗೆ ಹೊಳಪು ಬರುತ್ತೆ.

ಅದೇ ನೆಲ್ಲಿಕಾಯಿ, ಸೀಗೆಕಾಯಿ, ತುಳಸಿ, ಬೃಂಗರಾಜ ಗಳನ್ನು ಸಮಪ್ರಮಾಣದಲ್ಲಿ ಮದರಂಗಿ ಜೊತೆ ಸೇರಿಸಿ ಕೊಬ್ಬರಿಎಣ್ಣೆ ಮಾಡಿಟ್ಟು ನಿತ್ಯಾ ಉಪಯೋಗಿಸುತ್ತಿದ್ದರೆ ಕೂದಲು ಸೀಳುವುದು, ನೆರೆಯಾಗುವುದು, ಉದುರುವುದು, ಒಣ ನೆತ್ತಿ ಮುಂತಾದ ಅನೇಕ ತೊಂದರೆಗಳು ನಿವಾರಣೆಯಾಗುತ್ತೆ.
ತಲೆಯ ಹೇನು ಹಾಗೂ ಸೀರುಗಳ ತೊಂದರೆ ನಿವಾರಣೆಗೆ ಮದರಂಗಿ ಎಲೆಗಳನ್ನು ಸ್ವಲ್ಪ ಕರ್ಪೂರ ಸೇರಿಸಿ ರುಬ್ಬಿ ತಲೆಗೆ ಹಚ್ಚಿಕೊಳ್ಳಬೇಕು.
ಹಲ್ಲುಗಳು ನೋವಿನಿಂದ ಪಾರಾಗಲು ಹಾಗೂ ಹುಳುಕು ಹಲ್ಲು ನಿವಾರಿಸಲು ಮದರಂಗಿಯ ತೊಗಟೆಯ 2 – 3 ಇಂಚಿನಷ್ಟು ಚೂರು ತೆಗೆದುಕೊಂಡು ಸ್ವಲ್ಪ ಕಚ್ಚಿ ನೋವಿರುವ ಹಲ್ಲುಗಳ ಮದ್ಯೆ 20 – 25 ನಿಮಿಷ ಇಟ್ಟುಕೊಳ್ಳಬೇಕು. ಅಥವಾ ಎಲೆಗಳನ್ನು ಕುದಿಸಿದ ನೀರಿನಿಂದ ಬಾಯಿ ಮುಕ್ಕಳಿಸುತ್ತಿದ್ದರೆ ನೋವು ನಿವಾರಣೆಯಾಗುತ್ತೆ. ಅಥವ ನಾಲ್ಕಾರು ಎಲೆಗಳನ್ನು ಹುಳುಕು ಇದ್ದ ಜಾಗದಲ್ಲಿ ಉಗುಳನ್ನು ನುಂಗದೆ ಇಟ್ಟುಕೊಂಡರು ಹಲ್ಲು ನೋವು ಕಮ್ಮಿಯಾಗುತ್ತೆ.
ಮದರಂಗಿ ರುಬ್ಬಿ ಕೈ ಕಾಲುಗಳಿಗೆ ಹಚ್ಚಿಕೊಂಡರೆ ಮಾನಸಿಕ ಒತ್ತಡ ಕಮ್ಮಿಯಾಗುತ್ತೆ (ಇದೇ ಕಾರಣಕ್ಕೆ ಮದುವೆಯ ಸಮಯದಲ್ಲಿ ಮದುಮಗಳಿಗೆ ಮೆಹಂದಿ ಹಚ್ಚುವುದು )
ಮದರಂಗಿ ಎಲೆಗಳನ್ನು ರುಬ್ಬಿಕೊಂಡು ತಲೆಗೆ ಹಚ್ಚಿಕೊಂಡರೆ ತುಂಬಾ ತಂಪು. ಉಷ್ಣ ಕಡಿಮೆಯಾಗುತ್ತದೆ. ಆದರೆ ಬಿಳಿ ಕೂದಲು ಕೆಂಪು / ಮೆಜಂಟ ಬಣ್ಣ ಆಗುತ್ತೆ.
ಅದರೆ ಮೆಹೆಂದಿ ಹಚ್ಚಿಯೂ ಸಹ ಕೂದಲು ಘಾಡಕಪ್ಪುಅಗಬೇಕೆಂದರೆ ಹೀಗೆ ಮಾಡಿ. ಮೆಹೆಂದಿ ಹಚ್ಚಿಕೊಂಡ ಮಾರನೇ ದಿನ ಸಮಪ್ರಮಾಣ ನೀಲ ( Indigo – Indigofera tinctoria – ಚಿತ್ರ ನೋಡಿ. ಹಳ್ಳಿಗಳಲ್ಲಿ, ಬಯಲಲ್ಲಿ ಎಲ್ಲಾ ಕಡೆ ಬೆಳೆದಿರುತ್ತೆ ಅಥವಾ ಮಾಲ್ ಗಳಲ್ಲಿ ಒಣಗಿಸಿದ ಪುಡಿ ಸಿಗುತ್ತೆ ) ಎಲೆಗಳ ಜೊತೆಗೆ ಸ್ವಲ್ಪ ಹುಳಿ ಮೊಸರು, ಚಿಟಿಕೆ ಉಪ್ಪು ಸೇರಿಸಿ, ರುಬ್ಬಿಕೊಂಡು ರಾತ್ರಿಯಿಡೀ ನೆನೆಯಲು ಬಿಟ್ಟು ನಂತರ ಮೆಹೆಂದಿ ಹಚ್ಚಿದ ಕೂದಲಿಗೆ ಬುಡದಿಂದ ಹಚ್ಜಿ, ಒಂದು ಘಂಟೆ ಬಿಟ್ಟು ತಲೆ ತೊಳೆದುಕೊಳ್ಳಿ. ಹೀಗೆ ಕಡು ಕಪ್ಪು ಕೂದಲು ಹೊಂದಬಹುದು ( natural black dye ).
ಸೂಚನೆ : ಮನೆಮದ್ದಾಗಿ ಉಪಯೋಗಿಸುವವರು ತಮ್ಮ ವೈದ್ಯರ ಸಲಹೆ ಪಡೆಯಿರಿ. ನಿಮಗೆ ಸಸ್ಯಗಳು ಅಥವ ready to use ಪುಡಿ ಬೇಕಾದಲ್ಲಿ ನಿಮ್ಮ ಹತ್ತಿರದ ನರ್ಸರಿಗಳಲ್ಲಿ ಕೇಳಿ/ ಗೂಗಲ್ ಮಾಡಿ ಹುಡುಕಿ ಅಥವ online ನಲ್ಲಿ ತರಿಸಿಕೊಳ್ಳಿ. ಈಗ ಮಾಲ್ ಗಳಲ್ಲೂ ಸಿಗುತ್ತದೆ.
- ಮಂಜುನಾಥ್ ಪ್ರಸಾದ್
