ನಕ್ಷತ್ರ ಹಣ್ಣಿಗೆ ಕಮರಾಕ್ಷಿ, ಕಮರಿಕೆ, ಬಿಂಬೋಲ, ಫಿರಂಗಿ, ಕೊಬ್ಬರಿ ಕಾಯಿ, ಕ್ಯಾರಂಬೂಲ ಮುಂತಾದ ಹಲವಾರು ಪ್ರಾದೇಶಿಕ ಹೆಸರುಗಳು. ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಗುಣವನ್ನು ಹೊಂದಿದೆ. ಇದರ ಮಹತ್ವದ ಕುರಿತು ಮಂಜುನಾಥ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇದು ನಾವುಗಳು ಅಪರೂಪಕ್ಕೆ ಎಂಬಂತೆ ನೋಡುವ, ಅದರಲ್ಲೂ ಗೌರಿ ಗಣಪತಿ ಹಬ್ಬದ ಸಮಯದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಸಿಗುವ, ಹಬ್ಬಕ್ಕೆ ಬೇಕಾದ ಹುಳಿ ಮಿಶ್ರಿತ ನಕ್ಷತ್ರದ ಆಕಾರದ ರಸಭರಿತ ಹಣ್ಣು. ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಆಸೆಪಟ್ಟು ತಿನ್ನುವ ವಿಶಿಷ್ಟ ಬಗೆಯ ಸುವಾಸನೆಯುಳ್ಳ ಹಣ್ಣು.
ಈ ನಕ್ಷತ್ರ ಹಣ್ಣು ನೋಡಲು ಅರ್ಜುನ ( ಹೊಳೆಮತ್ತಿ / Terminalia arjuna ) ತರಹ ಕಾಣುತ್ತೆ ಆದರೆ ಇದು ಹೆಚ್ಚು ಮೃದು ಮತ್ತು ರಸಭರಿತವಾಗಿರುತ್ತೆ ಅಲ್ಲದೇ ಹೊಳೆಮತ್ತಿ ದೊಡ್ಡ ಮರ ಅದರ ಹಣ್ಣು ತಿನ್ನಲು ಬರುವುದಿಲ್ಲ.
ಇದಕ್ಕೆ ಕಮರಾಕ್ಷಿ, ಕಮರಿಕೆ, ಬಿಂಬೋಲ, ಫಿರಂಗಿ, ಕೊಬ್ಬರಿ ಕಾಯಿ, ಕ್ಯಾರಂಬೂಲ ಮುಂತಾದ ಹಲವಾರು ಪ್ರಾದೇಶಿಕ ಹೆಸರುಗಳಿದ್ದರೂ, ನಕ್ಷತ್ರ ಹಣ್ಣು ಎಂದೇ ಪ್ರಸಿದ್ದಿ. ಇದರ ಸಸ್ಯ ಶಾಸ್ತ್ರೀಯ ಹೆಸರು Averrhoa carambola – Oxalidaceae ಕುಟುಂಬಕ್ಕೆ ಸೇರಿದ, ಸದಾ ಹಸಿರಾಗಿರುವ, ಸಾಧಾರಣವಾಗಿ ವರ್ಷಪೂರ್ತಿ ಹಣ್ಣು ಬಿಡುವ ಸುಮಾರು 15 – 25 ಅಡಿ ಬೆಳೆಯುವ ಮರ ( ಚಿತ್ರ ನೋಡಿ ).

ಫೋಟೋ ಕೃಪೆ : google
ಇದರಲ್ಲಿ ಎರಡು ಬಗೆಯ ಹಣ್ಣುಗಳಿವೆ. ಹಳದಿ ಬಣ್ಣದ್ದು ಸ್ವಲ್ಪ ಹುಳಿ ಅಂಶ ಜಾಸ್ತಿ. ಮತ್ತೊಂದು ಸ್ವಲ್ಪ ಕೆಂಪು ಬಣ್ಣದ್ದು. ಇದರಲ್ಲಿ ಸಿಹಿ ಅಂಶ ಜಾಸ್ತಿ. ಹಾಗೆಯೇ ತಿನ್ನಲು ಚೆನ್ನಾಗಿರುತ್ತದೆ.
ತೀರ ಸುಡುಬಿಸಿಲು ಇರುವ ಜಾಗ ಬಿಟ್ಟು, ಪ್ರಪಂಚದಲ್ಲಿ ಎಲ್ಲಾಕಡೆ ಬೆಳೆಯುವುದಾದರು, ನಮ್ಮ ದೇಶದಲ್ಲಿ ತೀರ ಅಪರೂಪ. ಪಕ್ಕದ ಕೇರಳ ಹಾಗೂ ತಮಿಳುನಾಡಿನಲ್ಲಿ ಮಾತ್ರ ಮಾರಾಟಕ್ಕಾಗಿ ಬೆಳೆಸುವುದನ್ನು ನೋಡಿದ್ದೇನೆ. ಇನ್ನು ಮನೆ ಮಟ್ಟಿಗೆ ಅಡುಗೆಗೆ, ಹುಣಸೆಹಣ್ಣು ಬದಲು ಉಪಯೋಗಿಸಲು ಒಂದೆರಡು ಮರ ಬೆಳೆಸಿರುವುದು ಕಾಣಬಹುದು.
ಶೇಕಡ 65 % ಗಿಂತಲೂ ಹೆಚ್ಚು ರಸ ( juice ) ಹಾಗೂ 57 % ವಿಟಮಿನ್ ಸಿ ಇರುವ ಹಣ್ಣುಗಳಿಂದ ಜಾಮ್, ಜೆಲ್ಲಿ ಜ್ಯೂಸ್ ಮುಂತಾದವುಗಳನ್ನು ದೊಡ್ಡ ವಿದೇಶಿ ಕಂಪನಿಗಳು ತಯಾರಿಸುತ್ತಿದ್ದಾರೆ. ಹಾಗಾಗಿ ಇದರ ಹಣ್ಣುಗಳಿಗೆ ಸದಾ ಬೇಡಿಕೆ ಇದೆ.
ಹಣ್ಣಿನ ಜ್ಯೂಸ್ ಅಥವಾ ಪಾನಕ ತುಂಬಾ ತಂಪು. ಬೇಸಿಗೆಯಲ್ಲಿ ಸೇವಿಸುವುದರಿಂದ ಆಯಾಸ ಪರಿಹಾರ ಆಗುತ್ತೆ. ಅಲ್ಲದೆ ಪಿತ್ತ ನಿವಾರಕ. ವಿಟಮಿನ್ C ಜೊತೆಗೆ ವಿಟಮಿನ್ A ಸಹಾ ಇರುವುದರಿಂದ ಎಲ್ಲಾ ತರಹ ಚರ್ಮದ ತೊಂದರೆಗಳು ನಿವಾರಣೆಯಾಗಿ ಚರ್ಮ ಕಾಂತಿಯುತವಾಗುತ್ತೆ ಹಾಗೂ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜ್ವರದ ತಾಪ ಕಡಿಮೆಯಾಗುತ್ತೆ.
ನಕ್ಷತ್ರ ಹಣ್ಣಿನಲ್ಲಿ Gallic acid ಮತ್ತು Quercetin ಎಂಬ ಉತ್ಕೃಷ್ಟವಾದ antioxidants ಗಳಿದ್ದು ಇವು ಅತ್ಯುತ್ತಮ ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ನೀಡುವುದು, ಅಲರ್ಜಿ ತೊಂದರೆಗಳು, ಪ್ರಯಾಣದಲ್ಲಿ ಹೊಟ್ಟೆ ತೋಳಿಸಿ ವಾಂತಿಯಾಗುವುದು, ಮರೆವಿನ ಖಾಯಿಲೆ, ವಿಷ ಕೀಟಗಳ ಕಡಿತದ ಉರಿ ಮೊದಲಾದ ತೊಂದರೆಗಳು ನಿವಾರಣೆಯಾಗುತ್ತೆ.
ಅಧಿಕ ರಕ್ತದೊತ್ತಡ ಸಹಜ ಸ್ಥಿತಿಗೆ ಬರುವುದು ಅಲ್ಲದೇ ಸಕ್ಕರೆ ಕಾಯಿಲೆ ( Diabetes ) ಇರುವವರು ಸಹ ಹಣ್ಣು ಮತ್ತು ಜ್ಯೂಸ್ ಗಳನ್ನು ಯಾವುದೇ ತೊಂದರೆಗಳು ಇಲ್ಲದೆ ಸೇವಿಸಬಹುದು.
ಸಾಕಷ್ಟು ನಾರಿನಂಶ ಸಹಾ ಇರುವುದರಿಂದ ಮೂಲವ್ಯಾಧಿ ( piles ) ಗೆ ಒಳ್ಳೆಯ ಪರಿಹಾರ. ಹೇರಳವಾಗಿ Oxalic acid ಇರುವುದರಿಂದ ಇತರೆ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತೆ.

ಫೋಟೋ ಕೃಪೆ : google
ಸೂಚನೆ : ಈ ಹಣ್ಣಿನಲ್ಲಿ Caramboxin ಎಂಬ neurotoxin ಇದೆ. ಹಾಗಾಗಿ ಕಿಡ್ನಿ ತೊಂದರೆಗಳು ಇರುವವರು ಹಾಗೂ dialysis ನಲ್ಲಿ ಇರುವವರು ಸೇವನೆ ಮಾಡಿದಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಅಂತವರು ಈ ಹಣ್ಣಿನಿಂದ ದೂರವಿರಿ.
ನಮ್ಮ ಮಲೆನಾಡು, ಕೊಡಗು, ಆಗುಂಬೆ, ಸಕಲೇಶಪುರ ಅಲ್ಲದೆ ಬೆಂಗಳೂರು ಸುತ್ತ ಮುತ್ತ ಚೆನ್ನಾಗಿ ಬೆಳೆಯುತ್ತದೆ. ಸಸಿ ನೆಟ್ಟ ವರ್ಷದಲ್ಲೇ ಮೊದಲ ಬೆಳೆ ಸಿಗುತ್ತೆ. ಮನೆಯಲ್ಲಿ ಹೂ ಕುಂಡದಲ್ಲಿ ಬೆಳೆದ ಸಸ್ಯದ ಚಿತ್ರ ಹಾಕಿದ್ದೇನೆ ಗಮನಿಸಿ. ಬೋನ್ಸಾಯ್ ಗಿಡ ಬೆಳಸುವ ಹವ್ಯಾಸ ಇರುವವರಿಗೆ ಒಂದು ಉತ್ತಮ ಪುಟ್ಟ ಮರ. ನೀವೂ ಬೆಳೆಯುತ್ತೀರಾ…? ಆನ್ಲೈನ್ ನಲ್ಲಿ ಬೀಜಗಳನ್ನು / ಸಸಿಗಳನ್ನು ಮಾರುವವರು ಇದ್ದಾರೆ.
ಬೆಂಗಳೂರಿನಲ್ಲಿ ಇರುವವರು ಲಾಲ್ ಬಾಗ್ ( Lalbagh) ಬಳಿ ಇರುವ ನರ್ಸರಿಗಳಲ್ಲಿ ಸಿಗುತ್ತೆ. ( Bangalore Agrico ಫೋನ್ 91 – 95357 71669 ) ಅಥವಾ ಒಂದು ಬಲಿತ ರೆಂಬೆ ಸಿಕ್ಕರೆ ತಂದು ನೆಟ್ಟರೂ ಸಹಾ ಚಿಗುರಿಕೊಳ್ಳುತ್ತೆ. ತರಿಸಿ ಬೆಳಸಿ…
- ಚಿತ್ರ ಲೇಖನ : ಮಂಜುನಾಥ್ ಪ್ರಸಾದ್
