ಶ್ರೀ ಶಂಕರ ಭಗವತ್ಪಾದರು : ಸುಜಾತಾ ರವೀಶ್

ವೈದಿಕ ಸಂಸ್ಕೃತಿಯೇ ಹಿಂದುತ್ವ ಅಥವಾ ಹಿಂದೂ ಸಂಸ್ಕೃತಿ. ಇದರ ಆಚರಣೆಯೇ ಸನಾತನ ಧರ್ಮ.ಶಂಕರರ ಕಾಲದಲ್ಲಿ ಭಾರತವು ರಾಜಕೀಯವಾಗಿ ಹರಿದು ಹಂಚಿ ಹೋಗಿತ್ತು. ಸ್ವಾರ್ಥ ದುರಾಸೆಯ ಪರಿಸ್ಥಿತಿಯಲ್ಲಿ ಅಧಿಕಾರಕ್ಕಾಗಿ ಸ್ಪರ್ಧೆ ನಡೆಯುತ್ತಿತ್ತು. ಶ್ರೀ ಶಂಕರ ಜಯಂತಿ ಪ್ರಯುಕ್ತ ಲೇಖಕಿ ಸುಜಾತಾ ರವೀಶ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಶಂಕರಂ ಶಂಕರಾಚಾರ್ಯ ಬ್ರಹ್ಮಜ್ಞಾನ ಪ್ರವರ್ತಕಂ
ವಂದೇಹಂ ಗುರುವರಂ ಶ್ರೀಕರಂ ಕರುಣಾಕರಂ

ವೇದ ಹಿಂದುಗಳ ಪ್ರಮುಖ ಪವಿತ್ರ ಆಧಾರಗ್ರಂಥ. ಈ ವೇದ ವಾಙ್ಮಯ ಗುರು ಶಿಷ್ಯ ಪರಂಪರೆಯಿಂದ ಕಲಿತು ಕಂಠಪಾಠ ಮಾಡಿ ರಕ್ಷಿಸುತ್ತಾ ಉಳಿಸಿಕೊಂಡು ಬಂದಿದೆ. ವೈದಿಕ ಸಂಸ್ಕೃತಿಯೇ ಹಿಂದುತ್ವ ಅಥವಾ ಹಿಂದೂ ಸಂಸ್ಕೃತಿ. ಇದರ ಆಚರಣೆಯೇ ಸನಾತನ ಧರ್ಮ. ಚತುರ್ಮುಖ ಬ್ರಹ್ಮನಿಂದ ಬಂದ ಈ ವೇದಗಳನ್ನು ಕೀಳಾಗಿ ಕಾಣುವ ಪ್ರವೃತ್ತಿ ಬೆಳೆದು ಬಂದು ಬೆಳಕಿನಿಂದ ಕತ್ತಲಿನೆಡೆಗೆ ನಡೆಯುವ ಪರಿಸ್ಥಿತಿ ಉದ್ಭವಿಸಿತು . ವೇದಗಳನ್ನು ಖಂಡಿಸುವ, ಕೀಳಾಗಿ ಕಾಣುವ ಚಾರ್ವಾಕ ದರ್ಶನ, ಬೌದ್ಧದರ್ಶನ, ಜೈನ ದರ್ಶನ, ಸಾಂಖ್ಯ, ಪೂರ್ವಮೀಮಾಂಸಕ ಮೊದಲಾದ ಮತ ಪದ್ಧತಿಗಳು ಬೆಳೆದು ಬಂದು ಸನಾತನ ಧರ್ಮಕ್ಕೆ ಸಂಕಟ ಬಂದೊದಗಿತು. ವೈದಿಕ ಪರಂಪರೆ ನಶಿಸಿಹೋಗುವ ಪರಿಸ್ಥಿತಿ! “ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂಬ ಭಗವಂತನ ಉಕ್ತಿಯಂತೆ ಧರ್ಮಕ್ಕೆ ಅವಸಾನ ಸಂಭವಿಸುವ ಸಮಯದಲ್ಲಿ ಪ್ರಪಂಚದಲ್ಲಿ ದೇವರು ನರನ ರೂಪದಲ್ಲಿ ಅವತಾರವೆತ್ತುತ್ತಾನೆ . ಹೀಗೆ ಈ ಸಂದರ್ಭದಲ್ಲಿ ಎತ್ತಿದ ಶಿವನ ಅವತಾರವೇ ಶಂಕರಾಚಾರ್ಯರು.

ಶಂಕರರ ಕಾಲದಲ್ಲಿ ಭಾರತವು ರಾಜಕೀಯವಾಗಿ ಹರಿದು ಹಂಚಿ ಹೋಗಿತ್ತು. ಸ್ವಾರ್ಥ ದುರಾಸೆಯ ಪರಿಸ್ಥಿತಿಯಲ್ಲಿ ಅಧಿಕಾರಕ್ಕಾಗಿ ಸ್ಪರ್ಧೆ ನಡೆಯುತ್ತಿತ್ತು. ವೇದಗಳ ಸಂದೇಶ ಮರೆತು ಶಬ್ದಕ್ಕೆ ಅಂಟಿ ಬಿದ್ದಿದ್ದ ಶಬ್ದಾರ್ಥವಾದಿಗಳು ಕರ್ಮವಾದಿಗಳು ಇದ್ದರು. ಅಧಿಕಾರಕ್ಕಾಗಿ ಬೇರೆಬೇರೆ ದರ್ಶನಗಳ ಪ್ರತಿಪಾದಕರಲ್ಲಿ ಕಚ್ಚಾಟ ಸಾಮಾನ್ಯವಾಗಿತ್ತು ಹೀಗೆ ಇಂತಹ ಗೊಂದಲದ ಪರಿಸ್ಥಿತಿಯಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ಶಂಕರರು ಜನ್ಮ ತಳೆದರು. ತಮ್ಮ ಅತ್ಯಲ್ಪಕಾಲದ ಆಯುಸ್ಸನ್ನು ಮಾನವ ಹೃದಯದ ಮತ್ತು ಮನಸ್ಸಿನ ಗಾಯಗಳನ್ನು ವಾಸಿ ಮಾಡುತ್ತಾ ಆಧ್ಯಾತ್ಮಿಕ ಆರೋಗ್ಯ ವಿವೇಕಗಳ ಹಾದಿಯನ್ನು ತೋರಿಸುತ್ತಾ ಮುನ್ನಡೆದರು.

ಕೇರಳದ ಕಾಲಟಿ ಎಂಬ ಗ್ರಾಮದಲ್ಲಿ ಶಿವಗುರು ಮತ್ತು ಆರ್ಯಾಂಬ ಎಂಬ ದೈವ ಭಕ್ತರಾದ ದಂಪತಿಗಳು ವಾಸಿಸುತ್ತಿದ್ದರು. ಇವರಿಗೆ ಬಹಳ ಕಾಲ ಮಕ್ಕಳಿರಲಿಲ್ಲ ಶಿವನಲ್ಲಿ ಪ್ರಾರ್ಥಿಸಿದ ಅನೇಕ ವ್ರತಾದಿಗಳನ್ನು ಮಾಡಿದ ನಂತರ ಇವರಿಗೆ ಒಂದು ಗಂಡು ಮಗು ಜನಿಸಿತು. ಶಂಕರರು ಬಹಳ ಚಿಕ್ಕ ಮಗುವಾಗಿದ್ದಾಗಲೇ ಅವರಿಗೆ ಪಿತೃವಿಯೋಗವಾಯಿತು. ನಂತರ ಒಂದು ಸಂಸ್ಕೃತ ವೇದ ಗುರುಕುಲಕ್ಕೆ ಉಪನಯನದ ನಂತರ ಅವರನ್ನು ಕಳಿಸಲಾಯಿತು. ಸ್ವಾಭಾವಿಕವಾಗಿ ಮೇಧಾವಿಗಳಾದ ಇವರು ಅವೆಲ್ಲವನ್ನು ಬಹಳ ಬೇಗನೆ ಕಲಿತು ೮ನೆಯ ವರ್ಷದಲ್ಲೇ ಮನೆಗೆ ಮರಳಿದರು. ಇವರ ಬುದ್ಧಿಮತ್ತೆಯ ಬಗ್ಗೆ ಹೇಳುವ ಶ್ಲೋಕ ಈ ರೀತಿ ಇದೆ

ಅಷ್ಟ ವರ್ಷೇ ಚತುರ್ವೇದಿ ದ್ವಾದಶೇ ಸರ್ವಶಾಸ್ತ್ರವಿತ್
ಷೋಡಷೇ ಕೃತವಾನ್ ಭಾಷ್ಯಃ ದ್ವೈತ್ರಿಂಷ್ಯತೇ ಮುನಿರಭ್ಯಗಾತ್

ಶ್ರೀ ಶಂಕರಾಚಾರ್ಯರು 8 ವರ್ಷದವರಿರುವಾಗ ನಾಲ್ಕು ವೇದಗಳನ್ನು ಕಲಿತಿದ್ದರು 12ನೆಯ ವರ್ಷದಲ್ಲಿ ಸರ್ವಶಾಸ್ತ್ರ ಗಳನ್ನು ಬಲ್ಲವರಾಗಿದ್ದರು 16ನೆಯ ವಯಸ್ಸಿನಲ್ಲಿ ಭಾಷೆಯನ್ನು ರಚಿಸಿದರು ತಮ್ಮ 32ನೆಯ ವರ್ಷದಲ್ಲಿ ತಿರೋಧಾನವನ್ನೈದಿದರು.

ಅಸಾಮಾನ್ಯ ಬುದ್ಧಿಶಕ್ತಿಯ ಶಂಕರರಿಗೆ ಅವತಾರ ಉದ್ದೇಶ ಸಾಧನೆಗಾಗಿ ಆಧ್ಯಾತ್ಮದ ಕಡೆ ಸನ್ಯಾಸತ್ವದ ಕಡೆ ಮನಸಾಯಿತು. ಆದರೆ ತಾಯಿ ಆರ್ಯಾಂಬೆಗೆ ಇದು ಸಮ್ಮತವಿರಲಿಲ್ಲ. ಒಮ್ಮೆ ಸ್ನಾನಕ್ಕೆಂದು ಮನೆಯ ಬಳಿ ಇದ್ದ ಪೂರ್ಣ ನದಿಗೆ ಹೋದಾಗ ಶಂಕರರ ಕಾಲನ್ನು ಒಂದು ಮೊಸಳೆಯು ಹಿಡಿಯಿತು. ಶಂಕರರ ಕೂಗು ಕೇಳಿ ಹೊರಬಂದ ಆರ್ಯಾಂಬೆಗೆ ಶಂಕರರು ಸನ್ಯಾಸವನ್ನು ಸ್ವೀಕರಿಸಲು ಸಮ್ಮತಿಸಿದರೆ ಜೀವ ಉಳಿಯುವುದಾಗಿ ಹೇಳಿದಾಗ ಆರ್ಯಾಂಬೆ ಒಪ್ಪುತ್ತಾರೆ. ನಂತರ ಮೊಸಳೆಯು ಕಾಲು ಬಿಟ್ಟು ಶಂಕರರು ಸನ್ಯಾಸತ್ವ ಸ್ವೀಕಾರಕ್ಕೆ ಮುನ್ನ ಅಕ್ಕಪಕ್ಕದಲ್ಲಿದ್ದ ತಮ್ಮ ತಾಯಿ ದಾಯಾದಿಗಳಿಗೆ ತಾಯಿಯ ಯೋಗಕ್ಷೇಮದ ಹೊಣೆಯನ್ನು ಹೊರೆಸಿ ತೆರಳುತ್ತಾರೆ. ಹಾಗೆಯೇ ಆಕೆಯ ಅಂತ್ಯಕಾಲದಲ್ಲಿ ತಾವು ಬಂದು ಕರ್ಮಾದಿಗಳನ್ನು ತಾವೇ ಮಾಡುವುದಾಗಿ ಭಾಷೆಯನ್ನು ಕೊಡುತ್ತಾರೆ.

ಮುಂದೆ ನರ್ವದಾ ನದಿ ತೀರದಲ್ಲಿದ್ದ ಗುಹೆಯಲ್ಲಿದ್ದ ಗೌಡಪಾದರ ಶಿಷ್ಯರಾದ ಗೋವಿಂದ ಭಗವದ್ಪಾದ ಅವರಲ್ಲಿ ದಶಶ್ಲೋಕಿ ಎಂಬ ಹತ್ತು ಶ್ಲೋಕಗಳಲ್ಲಿ “ನಿಜವಾದ ನಾನು” ಎಂಬ ಪರಬ್ರಹ್ಮ ಸ್ವರೂಪವನ್ನು ನಿರೂಪಿಸಿದಾಗ ಸಂತುಷ್ಟರಾದ ಅವರು ಶಂಕರರನ್ನು ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ. ಅಲ್ಲಿ ಅದ್ವೈತ ಸಿದ್ದಾಂತದ ಬಗ್ಗೆ ಅಭ್ಯಸಿಸುತ್ತಾರೆ. ಒಮ್ಮೆ ನರ್ಮದೆಯಲ್ಲಿ ಪ್ರವಾಹ ಬಂದಾಗ ಜಲಾಕರ್ಷಣ ಮಂತ್ರವನ್ನು ಜಪಿಸಿ ನದಿಯ ಪ್ರವಾಹವನ್ನು ಇಳಿಯುವಂತೆ ಮಾಡಿದರು. ಈ ಹಿಂದೆ ವ್ಯಾಸ ಋಷಿಗಳು ನರ್ಮದೆಯ ಪ್ರವಾಹವನ್ನು ಮಂತ್ರಶಕ್ತಿಯಿಂದ ಶಮನಗೊಳಿಸುವ ವ್ಯಕ್ತಿ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆಯಲು ತಕ್ಕವನೆಂದು ಭವಿಷ್ಯ ನುಡಿದಿದ್ದರು. ಇದನ್ನು ತಿಳಿದಿದ್ದ ಗೋವಿಂದ ಗುರುಗಳು ಇತರ ರೀತಿಯ ಶಂಕರರ ಮಹಿಮೆಯನ್ನು ಅರಿತುಕೊಂಡಿದ್ದರಿಂದ ಶಂಕರರು ಕಾಶಿಗೆ ಹೋಗಿ ಬ್ರಹ್ಮಸೂತ್ರದ ಅರ್ಥವನ್ನು ಪ್ರತಿಪಾದಿಸಬೇಕೆಂದು ಹಾಗೂ ಇತರ ಎರಡು ಪ್ರಸ್ಥಾನಗಳಾದ ಉಪನಿಷತ್ತು ಮತ್ತು ಭಗವದ್ಗೀತೆ ಇವುಗಳ ಅರ್ಥವನ್ನು ಪ್ರತಿಪಾದಿಸಬೇಕೆಂದು ಅಪ್ಪಣೆ ಮಾಡಿದರು.

ಹೀಗೆ ಗುರುಗಳ ಆಣತಿಯಂತೆ ಕಾಶಿಗೆ ಹೊರಟ ಶಂಕರರಿಗೆ ಅಲ್ಲಿ ಅವರ ಪ್ರಥಮ ಶಿಷ್ಯ ಸನಂದನ ದೊರಕಿದರು. ದ್ವಿತೀಯ ಶಿಷ್ಯರಾಗಿ ಪದ್ಮಪಾದರೂ, ಮೂಕನಾಗಿದ್ದ ಪ್ರಭಾಕರರು ಆತ್ಮದ ಸಂಬಂಧ ಸಮರ್ಪಕ ಉತ್ತರಗಳ ಉತ್ತರಗಳನ್ನು ನೀಡಿ ಹಸ್ತಾಮಲಕ ಎಂಬ ಶಿಷ್ಯರಾದರು. ಹಾಗೆಯೇ ಮತ್ತೊಬ್ಬ ಶಿಷ್ಯರು ಕಾಲನಾಥರು.

ಕಾಶಿಯಲ್ಲಿ ಇರುವಾಗಲೇ ಶಿವನು ಚಂಡಾಲನ ರೂಪವನ್ನು ಧರಿಸಿ ನಾಲ್ಕು ನಾಯಿಗಳನ್ನು ಹಿಡಿದು ಶಂಕರರ ಮುಂದೆ ಬಂದು ಇವರಿಬ್ಬರ ನಡುವೆ ಆತ್ಮದ ಸ್ವರೂಪದ ಬಗ್ಗೆ ಚರ್ಚೆ ಉಂಟಾಗುತ್ತದೆ ಶಂಕರರಿಗೆ ಶಿವನೇ ಚಾಂಡಾಲನ ರೂಪದಲ್ಲಿ ಇದ್ದಾನೆಂದು ಅರಿವಾಗುತ್ತದೆ .”ಮಾನಿಷ ಪಂಚಕ” ಎಂಬ ಈ ಐದು ಶ್ಲೋಕಗಳು ಅದ್ವೈತದ ಪರಮ ಸತ್ಯ ಪ್ರದರ್ಶನಕ್ಕೆ ಒಂದು ಸಾಧನವಾಗಿ ಪರಿಣಮಿಸುತ್ತದೆ . ಗುರು ಶಿಷ್ಯ ತಂದೆ ಮಗ ಮುಂತಾದ ಬೇರೆ ಬೇರೆ ರೂಪಗಳಲ್ಲಿ ಕಾಣುವುದು ಒಂದೇ ಸತ್ಯ. ಚಂಡಾಲನು ಶಂಕರರು ಇಬ್ಬರು ಪರಮಶಿವನ ಬೇರೆಬೇರೆ ಸ್ವರೂಪಗಳು ಎಂಬುದು ಇಲ್ಲಿ ನಿರೂಪಿಸಲ್ಪಡುತ್ತದೆ.

ಮುಂದೆ ಪರಶಿವನ ಆಣತಿಯಂತೆ ಶಂಕರರು ಹಿಮಾಲಯದಲ್ಲಿದ್ದ ಬದರಿಕಾಶ್ರಮಕ್ಕೆ ಪ್ರಯಾಣ ಮಾಡಿ ವ್ಯಾಸ ಮಹರ್ಷಿಗಳು ಹಾಗೂ ಪರಮ ಗುರುಗಳಾದ ಗೌಡಪಾದರನ್ನು ಕಂಡು ಅವರ ಆಶೀರ್ವಾದ ಪಡೆದರು .ನಂತರ ಮತ್ತೆ ಕಾಶಿಗೆ ಹೋಗಿ ಅಲ್ಲಿಯೇ ತಮ್ಮ ಭಾಷ್ಯಗಳನ್ನು ಇತರ ಸ್ವಂತ ಸ್ತೋತ್ರ ಗ್ರಂಥಗಳನ್ನು ಬರೆದರು . ಭಕ್ತಿಪೂರ್ಣವಾಗಿಯೂ ಹಾಗೂ ಸಾಹಿತ್ಯಕ್ಕಾಗಿಯು ಶ್ರೇಷ್ಠವಾದ ಇವರ ಸ್ತೋತ್ರ ರಚನೆಗಳು ಸೌಂದರ್ಯ ಲಹರಿ ಶಿವಾನಂದ ಲಹರಿ ಇದೇ ಮೊದಲಾದ ಸ್ತೋತ್ರಗಳು ಇಂದಿಗೂ ಭಕ್ತರಿಂದ ಪೂಜಿಸಲ್ಪಟ್ಟು ಅಭ್ಯಸಿಸಲ್ಪಡುತ್ತಿವೆ. ಅವರು ತಮ್ಮ ಗ್ರಂಥಗಳನ್ನು ಕಾಶಿಯ ಮುಕ್ತಿಮಂಟಪ ಮತ್ತು ಮಣಿಕರ್ಣಿಕ ಘಟ್ಟದಲ್ಲಿ ಬರೆದರೆಂದು ಅಲ್ಲಿಯೇ ತಮ್ಮ ಶಿಷ್ಯರಿಗೆ ಅವುಗಳನ್ನು ಬೋಧಿಸಿದರೆಂದು ಹೇಳಲಾಗುತ್ತದೆ .ಶಂಕರರು ಮೊದಲು ವಿಷ್ಣು ಸಹಸ್ರನಾಮದ ಮೇಲೆ ಭಾಷ್ಯವನ್ನು ಬರೆದು ಆನಂತರ ಉಪನಿಷತ್ತು ಭಗವದ್ಗೀತೆ ಬ್ರಹ್ಮ ಸ್ಥಾನಗಳೆಂಬ ಪ್ರಸ್ಥಾನತ್ರಯದ ಬಗ್ಗೆ ಭಾಷ್ಯಗಳನ್ನು ಬರೆದರು.

ವ್ಯಾಕರಣದ ಸೂತ್ರಗಳನ್ನು ಕಲಿಯುತ್ತಿದ್ದ ವೃದ್ಧ ವೈಯಾಕರಣಿಗೆ ಮುಕ್ತಿಯ ಮಾರ್ಗವನ್ನು ಸೂಚಿಸುವ ದ್ವಾದಶ ಮಂಜರಿಕಾ ಸ್ತೋತ್ರದಲ್ಲಿ ಶಂಕರರು ಹೀಗೆ ಹೇಳುತ್ತಾರೆ ” ದೈವ ಸಾನಿಧ್ಯದಿಂದ ವೈರಾಗ್ಯವನ್ನುಂಟು ಮಾಡುತ್ತದೆ ವೈರಾಗ್ಯದಿಂದ ಮಾಯೆಯಿಂದ ಮುಕ್ತಿ ಉಂಟಾಗುತ್ತದೆ ಮಾಯ ಮುಕ್ತಿಯಿಂದ ಶ್ರದ್ದೆ ಬೆಳೆಯುತ್ತದೆ ಶ್ರದ್ಧೆಯಿಂದ ಜೀವನ್ ಮುಕ್ತಿ ಉಂಟಾಗುತ್ತದೆ”.

ಮುಂದೆ ತಮ್ಮ ವಿಜಯ ಯಾತ್ರೆಯನ್ನು ಕೈಗೊಂಡ ಶಂಕರರು ಪೂರ್ವ ಮೀಮಾಂಸಕ ವಾದಿಗಳಾಗಿದ್ದ ಮಂಡನ ಮಿಶ್ರರನ್ನು ವಾದದಲ್ಲಿ ಸೋಲಿಸಿ ಅವರನ್ನು ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸುತ್ತಾರೆ. ಆನಂತರ ತಮ್ಮ ತಾಯಿಯ ಅವಸಾನ ಕಾಲ ಸಮೀಪಿಸಿದ್ದನ್ನು ತಿಳಿದು ಕಾಲಟಿಗೆ ಮರಳಿ ಬಂದು ತಾಯಿಗೆ ಗುರುವಾಗಿ ಆಧ್ಯಾತ್ಮದಲ್ಲಿ ಆಕೆಗೆ ತಿಳುವಳಿಕೆಯನ್ನಿತ್ತು ಸಾವಿಗೆ ಸಿದ್ಧಪಡಿಸಿದರು. ಶಂಕರರ ನೆಂಟರು ಅವರ ತಾಯಿಯ ಅಪರ ಕರ್ಮವನ್ನು ಮಾಡಬಾರದೆಂದು ಅಡ್ಡಿ ಒಡ್ಡಿದರು. ಆದರೂ ತಾಯಿಯ ಅಪರ ಕರ್ಮಗಳನ್ನು ಏಕಾಂಗಿಯಾಗಿಯೇ ಪೂರೈಸಿ ತಾವು ತಮ್ಮ ತಾಯಿಗೆ ಕೊಟ್ಡಿದ್ದ ಮಾತನ್ನು ನೆರವೇರಿಸಿದರು.

ಶಂಕರರು ಇಡೀ ದೇಶವನ್ನು ಮೂರು ಬಾರಿ ಸಂಚಾರ ಮಾಡಿದರು. ಹೋದೆಡೆಯಲ್ಲ ಜನರನ್ನು ಉದ್ದರಿಸಿದರು .ಅವರು ವಿರೋಧಿಗಳನ್ನು ಎದುರಿಸಿ ಗೆಲ್ಲಬೇಕಾಯಿತು .ತಮ್ಮ ಪ್ರಿಯವಾದ ತಾರ್ಕಿಕವಾದದಿಂದಲೂ ಮತ್ತು ಸಂಪೂರ್ಣ ಅನುಭವದಿಂದ ಇದನ್ನು ಸಾಧಿಸಿದರು. ಸಾಮಾನ್ಯ ಜನರನ್ನು ನಾಸ್ತಿಕವಾದಿಗಳು ದಾರಿ ತಪ್ಪಿಸುತ್ತಿದ್ದ ಕಾಲದಲ್ಲಿ ಶಂಕರರು ಉಪನಿಷತ್ತಿನ ವೇದಾಂತ ಔನ್ನತ್ಯವನ್ನು ಮುಟ್ಟಿ ಅಲ್ಲಿಂದ ಮಾನವತೆಯ ಉದ್ಧಾರಕ್ಕಾಗಿ ಶ್ರಮಿಸಿದರು.

ಅದ್ವೈತ ಪ್ರತಿಪಾದನೆಗಾಗಿ ಹಾಗೂ ಭಾರತದ ಸಾಂಸ್ಕೃತಿಕ ಐಕ್ಯತೆಯ ರಕ್ಷಣೆಗಾಗಿ ಆಧ್ಯಾತ್ಮಿಕ ಧ್ಯೇಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಶಂಕರರು ಮಠದ ಸನ್ಯಾಸಿ ವರ್ಗಗಳನ್ನು ಪೀಠಗಳನ್ನು ಸ್ಥಾಪಿಸಿದರು .ಒಟ್ಟು ಈ ರೀತಿಯ ಸನ್ಯಾಸಿ ವರ್ಗಗಳು 10 ಇದ್ದು ಪ್ರತಿಯೊಂದು ವರ್ಗಕ್ಕೂ ಸನ್ಯಾಸ ನಾಮಗಳ ಮುಂದೆ ಸೇರುವ ಅಂಕಿತದ ಪ್ರತ್ಯಯ ದಲ್ಲಿ ಮಾತ್ರ ವ್ಯತ್ಯಾಸವಿದೆ ಈ 10 ವರ್ಗಗಳನ್ನು ಒಟ್ಟು ದಶನಾಮಿ ಎಂದು ಕರೆಯುತ್ತಾರೆ . ಈ ಮುಂದೆ ಸೇರುವ ಅಂಕಿತಗಳು ಹೀಗಿದೆ ಸರಸ್ವತಿ ಪುರೀ ಭಾರತೀ ವನ ಅರಣ್ಯ ತೀರ್ಥ ಆಶ್ರಮ ಗಿರಿ ಪರ್ವತ ಮತ್ತು ಸಾಗರ. ಈ ಅನೇಕ ಮಠಗಳಲ್ಲಿ ಮುಖ್ಯವಾದದ್ದು ಬದರಿ ಕ್ಷೇತ್ರ ದ್ವಾರಕಾಪುರಿ ಜಗನ್ನಾಥಪುರಿ ಶೃಂಗೇರಿ ಮತ್ತು ಕಂಚಿ. ನಂತರ ಕಾಶ್ಮೀರ ದೇಶದಲ್ಲಿ ಸಮಸ್ತ ವಿದ್ವಾಂಸರನ್ನು ವಾದದಲ್ಲಿ ಜಯಸಿ ಸರ್ವಜ್ಞ ಪೀಠವನ್ನೇರಿ ಎಲ್ಲರಿಂದಲೂ ಸಮ್ಮಾನಿತರಾದರು.

ಆಮೇಲೆ ಶಂಕರ ಭಗವತ್ಪಾದರು ಏಕಾಂಗಿಯಾಗಿ ಬದರಿ ಕಾರ್ಯಕ್ರಮಕ್ಕೆ ತೆರಳಿ ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಾ ಕೆಲವು ದಿನಗಳಿದ್ದು ನಂತರ ಕೇದಾರದಲ್ಲಿ ಕೇದಾರೇಶ್ವರರನ್ನು ಧ್ಯಾನಿಸುತ ಸ್ವಲ್ಪ ಕಾಲ ಅಲ್ಲಿದರು. ತಮಗೆ 32 ವರ್ಷ ಕಳೆಯುತ್ತಿರಲಾಗಿ ಭಗವತ್ಪಾದರು ನಿರ್ವಿಕಲ್ಪಕ ಸಮಾಧಿಯನ್ನೇರಿ ಮರ್ತ್ಸ್ಯದೇಹವನ್ನು ವಿಸರ್ಜಿಸಿ ಪರಬ್ರಹ್ಮದಲ್ಲಿ ಲೀನರಾದರು.

ಶಂಕರ ಸಾಧನೆಗಳನ್ನು ಆದ ಲೋಕೋಪಕಾರಿ ಕಾರ್ಯಗಳನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು . ವೈದಿಕ ಸಿದ್ಧಾಂತದ ಪುನರ್ಜೀವನ ಈ ಸೂಕ್ಷ್ಮ ದೃಷ್ಟಿಯ ಪರಿಣಾಮವಾಗಿ ಇನ್ನು ಪುರಾತನ ವೇದವೃಕ್ಷವು ಜೀವಂತವಾಗಿ ಉಳಿದಿದೆ. ರಾಷ್ಟ್ರೈಕತಾ ದೃಢೀಕರಣ. ಹಲವು ಭಾಷೆ ಮತಗಳ ಮಧ್ಯೆ ವಿಚ್ಛಿದ್ರವಾಗಿದ್ದ ರಾಷ್ಟ್ರವನ್ನು ವೇದ ಹಾಗೂ ಸಂಸ್ಕೃತ ಭಾಷೆಗಳ ಮೂಲಕ ಒಗ್ಗೂಡಿಸಿ ಒಂದಾಗಿ ಸಿದ್ದು ಮುಂದೆ ಅನೇಕ ಇತರ ಧರ್ಮಗಳ ದಾಳಿಯ ಮುಂದೆ ಹಿಂದುತ್ವ ಗಟ್ಟಿಯಾಗಿ ಉಳಿಯಲು ಬಲ ನೀಡಿತು.‌

ಭಾರತದ ರಾಷ್ಟ್ರಪತಿಗಳಾಗಿದ್ದ ಶ್ರೀ ಎಸ್ ರಾಧಾಕೃಷ್ಣನ್ ಅವರ ನುಡಿಗಳಲ್ಲಿ ಶಂಕರರನ್ನು ಹೀಗೆ ಬಣ್ಣಿಸುತ್ತಾರೆ

He (shankara) is a philosopher and poet,a savant and a saint, a mystic and religious reformer….There have been few minds more universal than his.

ಶಂಕರಾಚಾರ್ಯರ ಸಿದ್ದಾಂತಗಳು ಎಂದಿಗೂ ಅಮರ ಅವರು ಭಕ್ತ ಮಾನಸದಲ್ಲಿ ಸದಾ ಕಾಲ ತಮ್ಮ ಗ್ರಂಥಗಳಿಂದ ಬೋಧನೆಗಳಿಂದ ಹಾಗೂ ಜೀವನ ಆದರ್ಶದಿಂದ ಸದಾ ನೆಲೆಸಿರುತ್ತಾರೆ ಅವರಿಗೆ ಅವಸಾನವೆಂಬುದಿಲ್ಲ ಅವರು ಸರ್ವಾಂತರ್ಯಾಮಿಯಾದ ಶಾಶ್ವತವಾದ ಅದ್ವೈತವಾದ ಚಿನ್ಮಯ ಆನಂದಗಿರಿ ಹೇಳುವಂತೆ “ಸರ್ವಾಂತರ್ಯಾಮಿ ಯಾದ ಚೇತನದಲ್ಲಿ ಅವರು ಇಂದೂ ಇದ್ದಾರೆ ಸಜ್ಜನರಿಗೆ ಮೋಕ್ಷವನ್ನು ಕೊಡುವ ಗುರು ಶಂಕರಾಚಾರ್ಯರು ಅವರೇ.”

ಶೃತಿಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ
ನಮಾಮಿ ಭಗವದ್ಪಾದ ಶಂಕರಂ ಲೋಕ ಶಂಕರಂ


  • ಸುಜಾತಾ ರವೀಶ್ – ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW