‘ಗುಲಾಬಿ ಮತ್ತು ಗ್ಯಾಂಗ್’ ಕೃತಿ ಪರಿಚಯ

ಅಂಜಲಿ ರಾಮಣ್ಣ ಅವರ ‘ಗುಲಾಬಿ ಮತ್ತು ಗ್ಯಾಂಗ್’ ಪುಸ್ತಕದ ವಿಶೇಷತೆ ಏನೆಂದರೆ, ಮನುಷ್ಯ ಜೀವನದ ವಿವಿಧ ಘಟ್ಟಗಳ ವಿಶ್ಲೇಷಣೆಯನ್ನು ವಿಭಿನ್ನ ಆಯಾಮಗಳಲ್ಲಿ ಚಿತ್ರಿಸಿದ್ದಾರೆ. ಕೃತಿಯ ಕುರಿತು ಡಾ. ಜ್ಯೋತಿ ಎಸ್ ಅವರ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು : ಗುಲಾಬಿ ಮತ್ತು ಗ್ಯಾಂಗ್
ಲೇಖಕರು : ಅಂಜಲಿ ರಾಮಣ್ಣ
ಪ್ರಕಾಶಕರು : ಮಹಿಮಾ ಪ್ರಕಾಶನ, ಮೈಸೂರು
ಬೆಲೆ : 300/- ರೂಪಾಯಿಗಳು

ಸಮಕಾಲೀನ ಪ್ರಪಂಚದ ಆಗುಹೋಗುಗಳನ್ನು ತಮ್ಮ ಲೇಖನಗಳಲ್ಲಿ, ಸೂಕ್ಷ್ಮವಾಗಿ, ಸ್ಪಷ್ಟವಾಗಿ ಮತ್ತು ಮಾನವೀಯತೆಯ ಸ್ಪರ್ಶದಿಂದ ನಿರಂತರವಾಗಿ ವಿಶ್ಲೇಷಿಸುವ, ಸ್ತ್ರಿಸಂವೇದನೆಯ ಸಮಾಜಮುಖಿ ಅಂಕಣಕಾರರಾದ ಅಂಜಲಿ ರಾಮಣ್ಣ, ಕನ್ನಡದ ಓದುಗರಿಗೆ ಚಿರಪರಿಚಿತ ಹೆಸರು.

ಅವರ ‘ಗುಲಾಬಿ ಮತ್ತು ಗ್ಯಾಂಗ್’ ಪುಸ್ತಕದ ವಿಶೇಷತೆ ಏನೆಂದರೆ, ಮನುಷ್ಯ ಜೀವನದ ವಿವಿಧ ಘಟ್ಟಗಳ ವಿಶ್ಲೇಷಣೆಯನ್ನು ವಿಭಿನ್ನ ಆಯಾಮಗಳಲ್ಲಿ ಚಿತ್ರಿಸಿದ್ದಾರೆ. ವೃತ್ತಿಯಲ್ಲಿ, ಮಹಿಳೆ ಮತ್ತು ಮಕ್ಕಳ ವಕೀಲೆಯಾದ ಅವರ ಕಾನೂನು ಪರಿಣಿತಿಯನ್ನು ಸಹಜವಾಗಿ ಗುರುತಿಸಬಹುದು. ಜೊತೆಗೆ, ಅವರು ನಿರಂತರವಾಗಿ ಕೈಗೊಳ್ಳುವ ದೇಶ-ವಿದೇಶಗಳ ಪ್ರವಾಸಾನುಭವಗಳ ಸಮೃದ್ಧ ಚಿತ್ರಣ, ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಮುಖಾಮುಖಿಯಾದ ವೈವಿಧ್ಯಮಯ ಹಿನ್ನೆಲೆಯ ಜನರ, ವಿಶೇಷವಾಗಿ ಮಹಿಳೆಯರ ಕುರಿತಂತೆ ವಸ್ತುನಿಷ್ಠ, ಅಷ್ಟೇ ಅಂತಃಕರಣದಿಂದ ಕೂಡಿದ ವ್ಯಕ್ತಿ ಚಿತ್ರಣಗಳಿವೆ.

ಮನುಷ್ಯ ತನ್ನ ಬದುಕನ್ನು ಹಸನಾಗಿಸಲು ಕಟ್ಟಿಕೊಂಡ ವ್ಯವಸ್ಥೆಯಲ್ಲಿ ಕಾಲಕ್ರಮೇಣ ಸೇರಿಕೊಂಡ ಹಲವಾರು ಅನಿಷ್ಟಗಳನ್ನು, ಅಂಜಲಿ ಅವರು ತಮ್ಮ ಅರಿವಿನ ಪಯಣದಲ್ಲಿ ಸಿದ್ದಿಸಿಕೊಂಡ ಸ್ವತಂತ್ರ ಮನೋಭಾವದ, ಜೀವಪರ ವಿಶ್ಲೇಷಣೆಯ ಮೂಲಕ ದಿಟ್ಟತನದಿಂದ ಪ್ರಶ್ನಿಸುತ್ತಾರೆ ಮತ್ತು ಹೊಸ ಸಾಧ್ಯತೆಗಳನ್ನೂ ಚರ್ಚಿಸುತ್ತಾರೆ. ಹಾಗೆಯೆ, ಪ್ರವಾಸಾನುಭವದಲ್ಲಿ ಗುರುತಿಸಿದ ನೂತನ ವಿಷಯಗಳ ಮಾಹಿತಿಯನ್ನು ಕನ್ನಡಿಗರಿಗೆ ಪರಿಚಯಿಸುತ್ತಾರೆ.

ಇಲ್ಲಿರುವ ಲೇಖನಗಳನ್ನು ಒಬ್ಬ ಮಹಿಳೆಯಾಗಿ ಓದುವಾಗ, ಅಂಜಲಿ ಅವರ ಮಹಿಳಾಪರ ಅನನ್ಯ ಕಾಳಜಿ ಓದಿನ ಆಪ್ತತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅವರು ಓದುಗರಲ್ಲಿ ತನ್ನ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿ ಕೊಳ್ಳುತ್ತಾ, ಸಂವಾದದ ಧಾಟಿಯಲ್ಲಿ ಪ್ರಶ್ನೆಗಳನ್ನು ಹಾಕುತ್ತಾ, ಯೋಚನೆಗೆ ಹಚ್ಚಿಸುತ್ತಾ, ಓದುಗರನ್ನು ತಮ್ಮ ಚಿಂತನಾಲಹರಿ ಎಂಬ ಪಯಣದ ಜೊತೆಗಾರರನ್ನಾಗಿಸುತ್ತಾರೆ. ಈ ಲೇಖನಗಳ ಗುಚ್ಛವು, ತಮ್ಮ ಪ್ರಬುದ್ಧ ಮತ್ತು ಸ್ವತಂತ್ರ ಚಿಂತನೆ ಉದ್ದೀಪನಗೊಳಿಸ ಬಯಸುವ, ತನ್ನದೇ ಅಸ್ಮಿತೆ ಕಟ್ಟಿಕೊಳ್ಳಬಯಸುವ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸದಿಂದ ಮುನ್ನೆಡೆಯಲು ಪ್ರೇರೇಪಿಸುತ್ತದೆ.

ಈ ಪುಸ್ತಕದಲ್ಲಿ ಚರ್ಚೆಗೆ ಆರಿಸಿಕೊಂಡಿರುವ ಬಹುತೇಕ ವಿಷಯಗಳು ಗಂಭೀರಸ್ವರೂಪದ್ದಾದರೂ, ಬರವಣಿಗೆಯಲ್ಲಿ ಒಂದು ಹದವಾದ ಪಾಕವನ್ನು ಗುರುತಿಸಬಹುದು-ಇಲ್ಲಿ ಲಘುಧಾಟಿಯಿದೆ, ಹಾಸ್ಯಪ್ರಜ್ಞೆಯಿದೆ, ಸಿನಿಮಾ ಹಾಡುಗಳ ಪ್ರಸ್ತಾಪವಿದೆ. ಇವೆಲ್ಲವೂ, ಓದುಗರ ಕುತೂಹಲವನ್ನು ಕಾಯಿದಿರಿಸಿಕೊಂಡು ಕೊನೆಯ ವಿಷಯದವರೆಗೆ ಓದಿಸುತ್ತಾ ದಡ ಮುಟ್ಟಿಸುವಲ್ಲಿ ಜೊತೆಯಾಗುತ್ತವೆ. ಇಲ್ಲಿ ವಿಶ್ಲೇಷಣೆಗೆ ಆಯ್ದುಕೊಂಡಿರುವ ವಿಷಯಗಳಲ್ಲಿ ವೈವಿದ್ಯತೆಯಿದೆ, ವಿಸ್ತಾರವಿದೆ. ಇದು, ತೀರಾ ಸಾಮಾನ್ಯ ವಿಷಯದಿಂದ ಹಿಡಿದು ಅಸಾಮಾನ್ಯದವರೆಗೆ ತನ್ನ ವ್ಯಾಪ್ತಿ ಮತ್ತು ಆಳವನ್ನು ಹೊಂದಿದೆ.

ಈ ಪುಸ್ತಕದ ಶೀರ್ಷಿಕೆಯನ್ನಾಗಿ ಆಯ್ದುಕೊಂಡಿರುವ ಮೊದಲ ಲೇಖನವು, ಹೆಸರಾಂತ ‘ಗುಲಾಬಿ ಗ್ಯಾಂಗ್’ ಸಂಸ್ಥಾಪಕಿ ಸಂಪತ್ ಪಾಲ್ ಅವರನ್ನು ಸಂದರ್ಶನದ ರೂಪದಲ್ಲಿ ವಸ್ತು ನಿಷ್ಠ ವಿಮರ್ಶೆಯೊಂದಿಗೆ ಪರಿಚಯಿಸುತ್ತದೆ. ಇಲ್ಲಿ, ‘ಹಿಂಸೆ ಮನುಷ್ಯನನ್ನು ಹೇಗೆ ಒರಟು ಮಾಡಿ ಬಿಡುತ್ತದೆ’ ಎನ್ನುವ ಮಾತು, ವ್ಯಕ್ತಿತ್ವ ರೂಪಿಸುವಲ್ಲಿ ಸುತ್ತಲಿನ ಸಮಾಜದ ಪಾತ್ರಕ್ಕೆ ಕನ್ನಡಿ ಹಿಡಿದಂತಿದೆ. ಈ ಲೇಖನವು, ಒಂದು ರೀತಿಯಲ್ಲಿ ಪುಸ್ತಕಕ್ಕೆ ಉತ್ತಮ ಪೀಠಿಕೆಯಾಗಿ ಕೆಲಸಮಾಡಿ, ಓದುಗರು ಈ ಪುಸ್ತಕದಲ್ಲಿ ಇಂತಹದ್ದೇ ವಿಭಿನ್ನ, ಹೆಚ್ಚು ಚರ್ಚಿತವಾಗದ ವಿಷಯಗಳ, ವ್ಯಕ್ತಿತ್ವಗಳ ಮಾಹಿತಿ, ವಿಶ್ಲೇಷಣೆ, ಮತ್ತು ಅನುಸಂಧಾನವನ್ನು ನಿರೀಕ್ಷಿಸಬಹುದೆನ್ನುವ ಸುಳಿವು ನೀಡುತ್ತದೆ. ಈ ಮೂಲಕ, ಅಂಜಲಿ ಅವರ ಬರವಣಿಗೆಯ ಶೈಲಿ, ವಸ್ತುನಿಷ್ಠ ನಿರೂಪಣೆ, ಮತ್ತು ಜೀವಪರ ನಿಲುವಿನ ಒಂದು ಮುನ್ನೋಟ ಸಿಗುತ್ತದೆ. ಒಟ್ಟಿನಲ್ಲಿ, ಈ ಎಲ್ಲಾ ಲೇಖನಗಳು ಸುತ್ತಲಿನ ಸಮಾಜದಲ್ಲಿ ಆಗಿರುವ, ಆಗುತ್ತಿರುವ ಮತ್ತು ಆಗುವ ಸಾಧ್ಯತೆಯಿರುವ, ಒಳ್ಳೆಯ ಮತ್ತು ಕೆಟ್ಟ ಬದಲಾವಣೆಗಳು, ಇವುಗಳ ನಡುವೆ ಮನುಷ್ಯನ ಬದುಕನ್ನು ಸುಂದರವಾಗಿಸುವ ಅಂಶಗಳನ್ನು ಮುಕ್ತವಾಗಿ ಚರ್ಚಿಸುತ್ತವೆ.

ಇಲ್ಲಿರುವ ಕೆಲವು ಲೇಖನಗಳನ್ನು ವಿಶೇಷವಾಗಿ ಗುರುತಿಸಿ ಸ್ಪಂದಿಸುವುದಾದರೆ- ‘ಸಂಬಂಧಗಳು ಅಹಂ ತಣಿಸುವ ಕಾರ್ಖಾನೆಗಳಲ್ಲ’, ಮನುಷ್ಯ ಸಂಬಂಧಗಳ ನಡುವೆ ಪರಸ್ಪರ ಸಂಶಯ, ಅಪನಂಬಿಕೆ ಹೇಗೆ ವೃದ್ಧಿಯಾಗುತ್ತಾ ನಾವು ದ್ವೀಪಗಳಂತಾಗಿದ್ದೇವೆ ಎನ್ನುವುದನ್ನು ತಿಳಿಸುತ್ತದೆ; ‘ಅಮ್ಮ, ಅಮ್ಮ, ಅಕ್ಕ, ತಂಗಿ’ ಸಂಸಾರದಲ್ಲಿ ಬೆಂದು ಬೆಂಡಾಗಿರುವ ಹೆಣ್ಣು ಮಕ್ಕಳ ಸ್ವಗತಗಳು, ನಿಟ್ಟುಸಿರುಗಳು, ಪ್ರಶ್ನೆಗಳು ಮನಸ್ಸಿನಲ್ಲಿಯೇ ಮೂಡಿ ಆವಿಯಾಗುವ ಅಥವಾ ಗಡ್ಡೆಗಳಾಗಿಯೇ ಉಳಿದುಬಿಡುವ ಸುಪ್ತ ಕಥನಗಳು; ‘ಒಲಿಯುವ ಪರಿ’, ಗಂಡು-ಹೆಣ್ಣಿನ ಸಂಬಂಧವು, ಮುಕ್ತವಾಗಿ ತೆರೆದ ಮನಸ್ಸು, ಮತ್ತು ಹೃದಯದಿಂದ ಕೂಡಿರಬೇಕೆಂದು ಹೇಳುತ್ತದೆ, ‘ಒಲಿದ ಮನಸ್ಸಿನ ಹೆಣ್ಣು ದೇಹವನ್ನೊಮ್ಮೆ ಅನುಭವಿಸಿ ನೋಡು’, ಎನ್ನುವುದು ಬಹಳ ಅರ್ಥಪೂರ್ಣ ಮಾತು…

ಮುಂದುವರಿದಂತೆ, ಇಲ್ಲಿ ನಮಗೆ ಮುಖಾಮುಖಿಯಾಗುವ ಚಿಂತನಾರ್ಹ ವಿಚಾರಗಳೆಂದರೆ- ದಾಂಪತ್ಯದಲ್ಲಿ ಸಾಮರಸ್ಯ ಮೂಡಿಸಲು ಗಂಡ-ಹೆಂಡತಿ ಇಬ್ಬರೂ ಸಮಾನ ಜವಾಬ್ದಾರರು; ಹೆಣ್ಣು ಮಗು ಹುಟ್ಟಿತೆಂದು ಅಸಡ್ಡೆ ತೋರಿಸುವ ಹೆತ್ತವರಿಗೆ ತಮ್ಮ ಸಾಧನೆಯ ಮೂಲಕವೇ ಉತ್ತರ ನೀಡುವ ದಿಟ್ಟ ಹೆಣ್ಣು ಮಕ್ಕಳು; ಸಮಾಜಕ್ಕೆ ಅಂಜಿ ತಮ್ಮಿಚ್ಛೆಯಂತೆ ಬದುಕಲಾಗದವರು; ಪ್ರೀತಿಯೆಂಬ ಹೂವಿನ ಕನಸು ಮತ್ತು ನಿಷ್ಠುರದ ವಾಸ್ತವದ ನಡುವೆ ಬದುಕನ್ನು ಸಹನೀಯವಾಗಿಸುವುದು ಹೇಗೆನ್ನುವ ಜಿಜ್ಞಾಸೆ; ವರ್ತಮಾನದಲ್ಲಿ ಲಿಂಗ ಆಧಾರಿತ ಪಾತ್ರ ನಿರ್ವಹಣೆಯ ಸವಾಲುಗಳು; ಹೆಣ್ಣಿನ ದೈಹಿಕ ಸಹಜ ಪ್ರಕ್ರಿಯೆಗಳಿಗೆ ಮೂಢನಂಬಿಕೆಗಳನ್ನು ಅಂಟಿಸಿ ಹೆಣ್ಣಿನ ಬದುಕನ್ನು ನರಳಿಸುವ ಮನಸ್ಥಿತಿಗಳು; ಹೆಣ್ಣು ಮಕ್ಕಳಿಗೆ ಸ್ವಚ್ಛ ಶೌಚಾಲಯದ ಮಹತ್ವ; ಅಪರಿಚಿತ ಸ್ಥಳಗಳಲ್ಲಿ ಮನುಷ್ಯರನ್ನು ಒಂದಾಗಿಸುವ ಮಾತೃಭಾಷೆ; ಹೆಚ್ಚು ಚರ್ಚಿತವಾಗದ, ಗಂಡು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು; ಹಾಕುವ ಬಟ್ಟೆ ಹಾಕಿಕೊಂಡವರ ಪ್ರಾಶಸ್ತ್ಯ ಎನ್ನುವ ದಿಟ್ಟ ನಿಲುವು; ಮಹಿಳೆಗೆ ಸಂಬಂಧಿಸಿದ ಮುತ್ತೈದೆ/ವೈಧವ್ಯದ ಸ್ಥಾನಮಾನದ ಅನಗತ್ಯ ವೈಭವೀಕರಣ, ಈ ಪ್ರಾರಬ್ಧಗಳನ್ನು ವಿದ್ಯಾವಂತ ಮಹಿಳೆಯರೇ ಮುಂದುವರಿಸಿಕೊಂಡು ಹೋಗುತ್ತಿರುವ ಶೋಚನೀಯ ಸ್ಥಿತಿ; ಸಾಭಿಮಾನಿ/ ಸ್ವಾವಲಂಬಿ ಮಹಿಳೆಯರ ವ್ಯಕ್ತಿಚಿತ್ರಣಗಳು; ‘ಗೃಹಿಣಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ಮಹಿಳೆಯರು; ಲಿಂಗ ಸೂಕ್ಷ್ಮತೆಯನ್ನು ಗಂಡುಮಕ್ಕಳಿಗೆ ಕಲಿಸಬೇಕಾದ ಹೆತ್ತವರು; ಹೆಂಡತಿಯ ಸಾಧನೆಗೆ ಬೆಂಬಲ ನೀಡಬೇಕಾದ ಗಂಡಂದಿರು; ಬಾಲ್ಯದಲ್ಲಿ ಮಕ್ಕಳ ಮನಸ್ಸಿನಲ್ಲಿ ಮರೆಯಲಾರದ ಮುದ್ರೆಯೊತ್ತುವ ಶಿಕ್ಷಕರು; ಶಾಲೆಗಳಲ್ಲಿ ಸ್ವಚ್ಛ ಶೌಚಾಲಯದ ಅಗತ್ಯ ಮತ್ತು ಬರಿಗಾಲಲ್ಲಿ ನಡೆದಾಡುವ ವಿದ್ಯಾರ್ಥಿಗಳ ಕುರಿತು ಮಾನವೀಯ ಸ್ಪಂದನೆ, ವಿದೇಶಿ ಸಂಸ್ಕ್ರತಿಯಿಂದ ನಾವು ಕಲಿಯಬಹುದಾದ ಉತ್ತಮ ಮೌಲ್ಯಗಳು; ಜನರಲ್ಲಿ ಕಣ್ಮರೆಯಾಗುತ್ತಿರುವ ಹಾಸ್ಯಪ್ರಜ್ಞೆ; ಆರೋಗ್ಯಕ್ಕೆ ಹಿತಕರವಾದ ಸೈಕಲ್ ಸವಾರಿ; ಹೊಸ ಬೆಳವಣಿಗೆಯೊಂದರಂತೆ ತಮ್ಮ ಮದುವೆಗೆ ಮೊದಲು ಕಾನೂನಿನ ಆಪ್ತ ಸಲಹೆ ಪಡೆಯ ಬಯಸುವ ಹೆಣ್ಣುಮಕ್ಕಳು; ಸುರಕ್ಷಿತ ಬಾಲ್ಯಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳು; ಹಿಂಸಾತ್ಮಕ ಬಾಳಸಂಗಾತಿಗಳು; ವಿದೇಶಗಳಲ್ಲಿ ಅಸ್ತಿತ್ವ ಕಾಣುತ್ತಿರುವ ‘ಯೂನಿವರ್ಸಿಟಿ ಆಫ್ ದಿ ಥರ್ಡ್ ಏಜ್’ ಸಂಘಟನೆಗಳು; ಸುದ್ದಿ.


  • ಡಾ. ಜ್ಯೋತಿ ಎಸ್ – ಇಂಗ್ಲಿಷ್ ಪ್ರಾಧ್ಯಾಪಕರು, ತುಮಕೂರು ವಿಶ್ವವಿದ್ಯಾಲಯ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW