ಮನಸು ಮಾರಿಕೊಂಡವರ ಲೋಕವಿದು, ಕನಸು ನೋಡುತ್ತಿಲ್ಲ… ಕವಿ ಸಿದ್ದೇಶ್ ಸಿದ್ದನಮಠ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ಪೂರ್ತಿಯಾಗಿ ಓದಿ…
ಹಗಲ ಸಂತೆಯಲಿ
ಕನಸು ಮಾರುತ್ತಿದ್ದಾಳೆ
ಅವನು ಕತ್ತಲೊಳಗೆ
ಬಿಟ್ಟು ಹೋದ ತಪ್ಪಿಗೆ
ಮನಸು ಮಾರಿಕೊಂಡವರ
ಲೋಕವಿದು ಕನಸು ನೋಡುತ್ತಿಲ್ಲ
ಸಂತೆಗೆ ಬಂದ ತಪ್ಪಿಗೆ
ಯಾರೋ ಕೂಗುತ್ತಿದ್ದಾರೆ
ಬೊಗಸೆ ಹಿಡಿದು ಈಗೀಗ
ಕನಸು ಕಲಬೆರಿಕೆಯಾಗಿವೆಯೆಂದು
ಹೇಗೆ ಹೇಳಬೇಕು ಮನಸೇ
ಇಲ್ಲದವರಿಗೆ ಕನಸಿನ ಕಥೆ
ಅವನು ಬಿಟ್ಟು ಹೋದ ತಪ್ಪಿಗೆ
ಎಂಥಾ ಸಂತೆ ಇದು
ಕನಸಿಗೂ ಬೆಲೆಯಿಲ್ಲ
ಹಗಲೆಂದರೆ ಅದಕ್ಕೆ ಬೇಸರ
ಕನಸಿಗೆ ಹೇಗೆ ಕೈ ಹಿಡಿದು
ಕೇಳಲಿ ಮನಸ್ಸಿಲ್ಲದವರಿಗೆ
ಬದುಕಿನ ಹಸಿವು ಅವನು
ಬಿಟ್ಟು ಹೋದ ತಪ್ಪಿಗೆ
ನೋಡಲ್ಲಿ ನನ್ನಂತೆ ದುಃಖಿಸುತಿದೆ
ಅರಳಿ ನಿಂತ ಹೂ ಒಂದು
ಕನಸು ಕೊಂಡುಕೊಳ್ಳುವವರಿಲ್ಲವೆಂದು
ಹೇಗೆ ನಂಬಲಿ ಸಂತೆಗೆ
ಬಂದವರಿಗೆ ಸೆರಗಿನೊಳಗೆ
ಕೆಂಡವ ಕಟ್ಟಿಕೊಂಡು
ಅವನು ಬಿಟ್ಟು ಹೋದ ತಪ್ಪಿಗೆ
ಯಾರೋ ನನ್ನ ನೋಡುತ್ತಿದ್ದಾರೆ
ನುಂಗುವಂತೆ ತನ್ನೊಳಗಿನ ಕನಸು
ಮರೆತು ಸಂತೆ ಕರಗಿದಂತೆ
ಹೇಗೆ ತಿಳಿಸಿ ಹೇಳಲಿ
ಇವರಿಗೆ ಕನಸು ಖರೀದಿಸಿದರೆ
ಮನಸು ಹಗುರಾದಿತೆಂದು
ಅವನು ಬಿಟ್ಟು ಹೋದ ತಪ್ಪಿಗೆ
- ಸಿದ್ದೇಶ್ ಸಿದ್ದನಮಠ – ಪೊಲೀಸ್ ಅಧಿಕಾರಿಗಳು, ಲೇಖಕರು.
