ಮೆಸೆಂಜರ್ ನಲ್ಲಿ ಆ ಯುವಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ನಾನು ಸುಮ್ಮನಿದ್ದೆ. ಆದರೆ ಆ ಹುಡುಗ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಳ್ಳಿ ಪ್ಲೀಸ್ ಎಂದ ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ವಿಚಿತ್ರ ಬಾಲಕ’, ತಪ್ಪದೆ ಮುಂದೆ ಓದಿ …
ಒಮ್ಮೆ ಮೊಬೈಲ್ ತೆಗೆದುಕೊಂಡು ಫೇಸ್ ಬುಕ್ ನಲ್ಲಿ ಹಾಗೇ ಕಣ್ಣಾಡಿಸುತ್ತಿದ್ದಾಗ ಸಡನ್ಲಿ ಒಂದು ಫ್ರೆಂಡ್ ರಿಕ್ವೆಸ್ಟ್ ಬಂತು. ನೋಡಿದರೆ ಯಾರೋ ಯುವಕ ರಿಕ್ವೆಸ್ಟ್ ಕಳಿಸಿದ್ದ. ಆಮೇಲೆ ನೋಡಿದರಾಯ್ತು ಎಂದುಕೊಂಡು ಸುಮ್ಮನಾದೆ. ಆಗ ತಕ್ಷಣ ಮೆಸೆಂಜರ್ ನಲ್ಲಿ ಅದೇ ಯುವಕ ಕಾಣಿಸಿಕೊಂಡು ಮೇಡಂ ನಮಸ್ತೆ…. ನಾನು ನಿಮ್ಮ ಸ್ಟೂಡೆಂಟ್, ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಳ್ಳಿ ಪ್ಲೀಸ್ ಎಂದು ಮೆಸೇಜ್ ಮಾಡಿದ. ನಾನು ಅವನ ಪ್ರೊಫೈಲ್ ಓಪನ್ ಮಾಡಿ ನೋಡಿದೆ. ಹೌದು ಅದೇ ಹುಡುಗ ಇಪ್ಪತ್ತೈದು ವರ್ಷಗಳ ವರ್ಷಗಳ ಹಿಂದೆ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ನಾನು ಕೆಲಸ ಮಾಡುತ್ತಿದ್ದಾಗ ನನ್ನ ವಿದ್ಯಾರ್ಥಿಯಾಗಿದ್ದ. ಈಗ ಗುರುತೇ ಸಿಗದಷ್ಟು ಬೆಳೆದು ದೊಡ್ಡವನಾಗಿ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದೆ.
ಆಗ ನಾನಿನ್ನೂ ಕೆಲಸಕ್ಕೆ ಸೇರಿದ ಹೊಸತು.ಆಗ ಈ ಹುಡುಗ ಒಂದನೇ ತರಗತಿಗೆ ದಾಖಲಾಗಿದ್ದ. ಅವನ ಹೆಸರು ಸತೀಶ. ( ಹೆಸರು ಬದಲಾಯಿಸಲಾಗಿದೆ) ಸತೀಶ ಎಲ್ಲ ಮಕ್ಕಳಂತೆ ನಾರ್ಮಲ್ ಇರಲಿಲ್ಲ. ಅವನ ವರ್ತನೆ ಸ್ವಲ್ಪ ವಿಚಿತ್ರವಾಗಿತ್ತು. ಅಂದರೆ ಅವನು ಎಲ್ಲಾ ಮಕ್ಕಳಂತೆ ಬಟ್ಟೆ ತೊಟ್ಟು ಶಾಲೆಗೆ ಬರುತ್ತಿರಲಿಲ್ಲ. ಕೇವಲ ಮೇಲಂಗಿ ಮಾತ್ರ ಹಾಕುತ್ತಿದ್ದ. ನಾನು ಇದೇಕೆ ಈ ಹುಡುಗ ಈ ರೀತಿ ಬರುತ್ತಾನಲ್ಲ….ನಿಕ್ಕರ್ ಅಥವಾ ಚಡ್ಡಿ ಹಾಕಲು ಬಡತನವೇ ಎಂದುಕೊಂಡು ಅವರ ಅಮ್ಮನನ್ನು ಕರೆದು ವಿಚಾರಿಸಿದಾಗ ” ಏನ್ ಮಾಡೋದು ಮೇಡಂ ಇವನು ಚಿಕ್ಕವನಾಗಿದ್ದಾಗಿನಿಂದಲೂ ಇದೇ ಗೋಳು. ಮೈಮೇಲೆ ಬಟ್ಟೆ ಸೋಕಿಸುವಂತಿಲ್ಲ. ಅತ್ತು ಕರೆದು ರಂಪಾಟ ಮಾಡಿ ಬಟ್ಟೆ ಬಿಚ್ಚಿ ಬಿಸಾಕುತ್ತಾನೆ. ಯಾರು ಎಷ್ಟು ಹೇಳಿದರು ಕೇಳುವುದಿಲ್ಲ. ಹಠ ಮಾಡುತ್ತಾನೆ, ಎಂತಹ ಚಳಿಗಾಲವೇ ಆದರೂ ಮೈಮೇಲೆ ಬಟ್ಟೆ ಹಾಕಿಸಿಕೊಳ್ಳಲ್ಲ. ಮೊದಲು ಶರ್ಟ್ ಕೂಡ ಹಾಕಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಶಾಲೆಗೆ ಹೋಗಬೇಕು ನೀನು, ಹಾಗೆಲ್ಲ ಹೋಗಬಾರದು ಮೇಷ್ಟ್ರು ಮೇಡಂ ಹೊಡಿತಾರೆ ಎಂದು ಹೇಳಿ ಹೇಳಿ ಶರ್ಟ್ ಹಾಕಿಕೊಳ್ಳುವುದನ್ನು ರೂಢಿ ಮಾಡಿಸಿದ್ದೇನೆ ಎಂದಳು.

ಫೋಟೋ ಕೃಪೆ : google
ಆಗ ನಾನು ಹಾಗೆಯೇ ನಿಕ್ಕರ್ ಕೂಡ ಹಾಕಿಕೊಳ್ಳುವುದನ್ನು ರೂಢಿ ಮಾಡಿಸಬೇಕಮ್ಮ ನೀವು, ಮೊದಲಿನಿಂದಲೂ ನೀವು ಅದನ್ನು ಅಭ್ಯಾಸ ಮಾಡಿಸಿಲ್ಲ ಅದಕ್ಕೆ ಹೀಗಾಗಿದೆ, ಪಾಪ ಮಕ್ಕಳು….. ಅವರಿಗೆ ಏನು ಗೊತ್ತಾಗುತ್ತೆ , ನಾವೇ ಎಲ್ಲಾ ಅಭ್ಯಾಸ ಮಾಡಿಸಬೇಕು. ಈಗೇನೋ ಚಿಕ್ಕ ಹುಡುಗ ಪರವಾಗಿಲ್ಲ, ಮುಂದೆ ದೊಡ್ಡವನಾದರೆ ಹೇಗೆ ? ಎಂದೆ.
ಅದೇ ಚಿಂತೆಯಾಗಿದೆ ಮೇಡಮ್ಮೋರೇ…… ಎಲ್ಲ ಮಕ್ಕಳು ಪ್ಯಾಂಟು ಶರ್ಟು ನಿಕ್ಕರ್ ಅಂತ ಹೊಸ ಹೊಸ ಬಟ್ಟೆ ತೆಗೆದುಕೊಂಡು ಹಾಕ್ಕೋತಾರೆ. ನಮ್ಮ ಮನೆಯಲ್ಲಿ ಇವನಿಗೆ ಕೊಡಿಸಿರುವ ಪ್ಯಾಂಟು ನಿಕ್ಕರುಗಳು ಎಲ್ಲಾ ಹಾಗೇ ಉಳಿದಿವೆ. ಹೊಡೆದು ಬಡಿದು ಮಾಡಿ ಬಲವಂತವಾಗಿ ನಿಕ್ಕರ್ ಹಾಕಿದರೆ ಒಂದು ಕ್ಷಣವೂ ಇರಿಸಿಕೊಳ್ಳುವುದಿಲ್ಲ. ಎಷ್ಟು ಹೊಡೆದರೂ ಹೊಡೆಸಿಕೊಂಡು ಅಳುತ್ತಾನೆ , ನಿಕ್ಕರ್ ಮಾತ್ರ ಹಾಕಿಸಿಕೊಳ್ಳುವುದಿಲ್ಲ. ಅದೇನು ವಿಚಿತ್ರ ಕಾಯಿಲೆಯೋ ಏನೋ. ನನಗಂತೂ ಸಾಕಾಗಿ ಹೋಗಿದೆ. ನಮ್ಮ ಮನೆಯಲ್ಲಿ ಯಾರೂ ಈ ರೀತಿ ಇಲ್ಲ. ಮಾತನಾಡುವುದು, ಊಟ ಮಾಡುವುದು, ಆಟ ಆಡೋದು ಎಲ್ಲದರಲ್ಲೂ ಚೆನ್ನಾಗಿದ್ದಾನೆ. ಬಟ್ಟೆ ಮಾತ್ರ ಹಾಕಿಕೊಳ್ಳಲ್ಲ. ಬೇರೆ ಹುಡುಗರ ಜೊತೆ ನನ್ನ ಮಗನನ್ನು ನೋಡಿದರೆ ಹೊಟ್ಟೆಯಲ್ಲಿ ಸಂಕಟ ಆಗುತ್ತೆ, ಏನ್ ಮಾಡೋದು ಹೇಳಿ ಎಲ್ಲ ನಮ್ಮ ಕರ್ಮ, ಅದೆಷ್ಟು ದೇವರಿಗೆ ಹರಕೆ ಹೊತ್ತಿದ್ದೇನೋ ಏನೋ. ಯಾವ ದೇವರೂ ಅವನಿಗೆ ಬುದ್ಧಿ ಕೊಡಲಿಲ್ಲ ಎಂದು ಕಣ್ಣಲ್ಲಿ ನೀರು ಹಾಕಿಕೊಂಡಳು.

ಫೋಟೋ ಕೃಪೆ : google
ಅಳಬೇಡ ಸುಮ್ನಿರಮ್ಮ…. ನಿನ್ನ ಪ್ರಯತ್ನ ನೀನು ಮುಂದುವರಿಸು. ನಾನು ಅವನಿಗೆ ಬುದ್ಧಿ ಹೇಳುತ್ತೇನೆ. ಮಕ್ಕಳು ಹೀಗೇ ಇರಲ್ಲ, ಬದಲಾಗುತ್ತಾರೆ. ಬೆಳೆದು ದೊಡ್ಡವರಾದಂತೆ ಅವರಿಗೂ ಬುದ್ಧಿ ಬರುತ್ತದೆ. ಈಗ ತಾನೇ ಶಾಲೆಗೆ ಬರಲು ಪ್ರಾರಂಭಿಸಿದ್ದಾನೆ. ಜೊತೆಯಲ್ಲಿರುವ ಹುಡುಗರನ್ನು ನೋಡಿ ಕಲಿಯುತ್ತಾನೆ. ನೀನೇನು ಯೋಚಿಸಬೇಡ ನಾನು ಅವನಿಗೆ ಬುದ್ಧಿ ಹೇಳುತ್ತೇನೆ ಎಂದು ಹೇಳಿ ಕಳಿಸಿದೆ.
ಸತೀಶನನ್ನು ಹತ್ತಿರಕ್ಕೆ ಕರೆದು ” ನೋಡು ಸತೀಶ ನಿನ್ನ ಫ್ರೆಂಡ್ಸ್ ಎಲ್ಲರೂ ಶರ್ಟ್ ನಿಕ್ಕರ್ ಹಾಕಿಕೊಂಡು ಬಂದಿದ್ದಾರೆ. ನೀನು ಮಾತ್ರ ನಿಕ್ಕರ್ ಹಾಕಿಲ್ಲ. ಎಲ್ಲರೂ ನಿನಗೆ ಶೇಮ್ ಶೇಮ್ ಮಾಡುತ್ತಾರೆ. ಹೀಗೆಲ್ಲಾ ಶಾಲೆಗೆ ಬರಬಾರದು. ನಾಳೆಯಿಂದ ಚಡ್ಡಿ ಹಾಕಿಕೊಂಡು ಬರಬೇಕು ತಿಳಿತಾ ” ಎಂದೆ. ಹು ಎಂದು ತಲೆ ಆಡಿಸಿದ. ಅಷ್ಟರಲ್ಲಿ ಆ ಶಾಲೆಯಲ್ಲಿ ಕಡಿಮೆ ಮಕ್ಕಳಿದ್ದರಿಂದ ನನ್ನನ್ನು ಬೇರೊಂದು ಶಾಲೆಗೆ ನಿಯೋಜಿಸಿದರು. ಆಮೇಲೆ ಎರಡು ಮೂರು ವರ್ಷ ಅದೇ ಶಾಲೆಗೆ ಡೆಪ್ಟೇಷನ್ ಕಂಟಿನ್ಯೂ ಆಯ್ತು. ಮತ್ತೆ ಸತೀಶ ನನಗೆ ಸಿಗಲೇ ಇಲ್ಲ. ಈಗ ಫೇಸ್ಬುಕ್ನಲ್ಲಿ ಸುಸಂಸ್ಕೃತ ನಾಗರಿಕನಾಗಿ ಸಿಕ್ಕಿದ್ದ. ತುಂಬಾ ಹೆಮ್ಮೆ ಅನಿಸಿತು.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ಸರ್ವಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.
