‘ಪ್ರೇಮ ಪರಿಣಯ’ ಸಣ್ಣಕತೆಗಳು

ರೂಮಿನ ಕದ ತಟ್ಟಿದ ಶಬ್ಧ…ಮಲಗಿದೀನಿ ಅಮ್ಮ, ಪ್ಲೀಸ್ ಡಿಸ್ಟರ್ಬ್ ಮಾಡಬೇಡ ಅಂತ ಮಲಗಿದಲ್ಲೇ ಕೂಗಿದ. ಆದರೂ ನಿಲ್ಲಲಿಲ್ಲ ಶಬ್ಧ. ಕೋಪದಿಂದ ಎದ್ದು ಬಾಗಿಲು ತೆರೆದ ಸಂದೇಶ್…ಎದುರಿಗೆ ಬಂದದ್ದು ಅಮ್ಮ ಅಲ್ಲ, ಮತ್ಯಾರು?.. ಕತೆಗಾರ್ತಿ ಶೋಭಾ‌ ನಾರಾಯಣ ಹೆಗಡೆ ಅವರ ‘ಪ್ರೇಮ ಪರಿಣಯ’ ಸಣ್ಣಕತೆಯನ್ನು ಪ್ರಕಟಿಸುವುದರ ಮೂಲಕ ಶೋಭಾ ಅವರಿಗೆ ಹುಟ್ಟುಹಬ್ಬ ಶುಭಾಶಯವನ್ನು ಆಕೃತಿಕನ್ನಡ ಕೋರುತ್ತದೆ.

ಛೀ ಛೀ ಏನಿದು ಕೊಳೆ ಇಷ್ಟೊಂದು. ಎಷ್ಟು ದಿನ ಆಯಿತು ನಿನ್ನ ಮೇಲಿನ ಬಟ್ಟೆ ತೊಳೆಯದೇ.‌ ಬಾಡಿದ ಮಲ್ಲಿಗೆ, ಸುಕ್ಕು ಹಿಡಿದ ಬೆಡ್ ಶೀಟ್,ಸಿಕ್ಕಾಪಟ್ಟೆ ಹೊಲಸು ನೀನೀಗ ಮೂಗು ಮುಚ್ಚಿ ಉಲಿಯಿತು ತಲೆ ದಿಂಬು. ಆಹಾ…ನೀನೇನ್ ಕಮ್ಮಿ? ನೋಡಲ್ಲಿ, ಎಣ್ಣೆ ಜಿಡ್ಡು.. ಕಂಪು ವಾಸನೆ ಬರ್ತಿದೆ ಹೇಗೆ…ಅಂತ ಮಂಚದ ಧಿಮಾಕು.

ಏನ್ ಆತರ ಕಚ್ಚಾಡ್ತಿದೀರಾ?ಹೌದು,ಈ ರೂಮಿನಲ್ಲಿ ಇರುವವರೆಲ್ಲರೂ ಕೊಳಕು…ಯಾರು ನೀಟಾಗಿ, ಸ್ವಚ್ಛ ಇದೀವಿ ಹೇಳಿ?ಗಂಡ ಹೆಂಡಿರ ಜಗಳದಲ್ಲಿ ನಾವು ಬಲಿಪಶು ಆಗಿದೀವಿ.ಗೋಡೆ ಅಂದಾಗ,ಮಂಚ ಮತ್ತು ತಲೆದಿಂಬುಗಳಿಗೆ ಅಹುದು ಎನಿಸಿತು ಈ ಮಾತು.ಇದೆಲ್ಲಾ ನೋಡುತ್ತಿದ್ದ ಕನ್ನಡಿ ಅಳುವುದಕ್ಕೆ ಶುರು ಮಾಡಿತು. ನಿಂಗೇನಾಯ್ತು, ಎಲ್ಲಾ ಒಕ್ಕೋರಲಿನಿಂದ ಕೂಗಿಕೊಂಡವು.

 

ದಿನಾಲೂ ಒಡತಿಯ ಅಲಂಕಾರಕ್ಕೆ ನಾನೇ ಬೇಕಿತ್ತು. ಈಗ ನನ್ನ ನೋಡಲು ಯಾರೂ ಇಲ್ಲ ಎಂದು ಕಂಬನಿ ಸುರಿಸಿತು ಕನ್ನಡಿ..ನಿಜ, ಮಲ್ಲಿಗೆಯ ಘಮ ರೂಮಿನ ತುಂಬಾ. ಕಾಲ ಗಜ್ಜೆಯ ಝಣ ಝಣ.ಒಡತಿಯ ರಂಗೇರಿದ ಕೆನ್ನೆ, ಆಹಾ…ಅಂತ ಮಂಚ, ವರ್ಣಿಸುತ್ತಿದ್ದರೆ, ಸ್ಟಾಪ್… ಸ್ಟಾಪ್… ನಾಲ್ಕು ಗೋಡೆಯ ನಡುವೆ ಇರುವ ಗುಟ್ಟಿದು. ಶ್!!ಎಂದು ನಿಶ್ಯಬ್ದ ಸೃಷ್ಟಿಸಿತು ಗೋಡೆ. ಇವರೆಲ್ಲರ ಮಾತುಗಳ ಕಲರವದ ನಡುವೆ, ಸಿಗರೇಟಿನ ಹೊಗೆ ಸುರುಳಿಯಾಕಾರದಲ್ಲಿ ತೇಲಿ ಬಂತು ರೂಮಿಗೆ.

ಏಯ್ ಸುಮ್ಮನೆ ಇರಿ… ಒಡೆಯನ ಆಗಮನ ಆಗ್ತಿದೆ ಎಂದಿತು ತಲೆದಿಂಬು. ಎಲ್ಲರೂ ಉಸಿರು ಬಿಗಿ ಹಿಡಿದು ಕುಳಿತವು. ಸಂದೇಶ್ ಒಳ ಬಂದ. ಕೈಯಲ್ಲಿ ಸಿಗರೇಟ್ ಪ್ಯಾಕ್… ಮಂಚದ ಮೇಲೆ ಅಂಗಾತ ಮಲಗಿದ. ಯಾರಿಗೋ ಒಂದೇ ಸಮನೆ ಪೋನ್ ಮಾಡ ತೊಡಗಿದ. ಪಿಕ್ ದ ಪೋನ್.. ಸ್ವೀಟಿ, ಪ್ಲೀಸ್… ಅಂತ ಟೆನ್ಷನ್ ಮಾಡ್ಕೋತ ಮೇಲಿಂದ ಮೇಲೆ ಪೋನ್ ಮಾಡ್ತಿದ್ದ. ಆದರೆ ಆ ಕಡೆಯಿಂದ ಮಾತ್ರ ನಿರುತ್ತರ. ರೊಪ್ಪನೆ ಫೋನ್ ಒಗೆದ ಹತಾಶೆಯಿಂದ. ದುಃಖದ ಛಾಯೆ ಮೊಗದಲ್ಲಿ ಅಚ್ಚೊತ್ತಿತ್ತು. ಒಂದಾದರೊಂದರಂತೆ ಸಿಗರೇಟ್ ಸೇದಿ, ಪ್ಯಾಕ್ ಖಾಲಿ ಮಾಡತೊಡಗಿದ. ಇದನ್ನು ನೋಡಿ ಕನ್ನಡಿಗೆ ತಡೆಯಲಾಗಲಿಲ್ಲ. ಅವನ ಗಮನ ಸೆಳೆಯಲು ತನ್ನ ಜೊತೆಗೆ ಇದ್ದ ಬಾಚಣಿಕೆಯನ್ನು ಕೆಳ ಬೀಳಿಸಿತು. ಬಿದ್ದ ಶಬ್ಧ ಕೇಳಿ ಕನ್ನಡಿಯನ್ನು ನೋಡಿದ ಸಂದೇಶ್. ಶೇವ್ ಮಾಡದ ಮೊಗ, ಕೆದರಿದ ಕೂದಲು, ಒಳ್ಳೆ ಹುಚ್ಚನಂತೆಯೇ ಕಾಣುತ್ತಿದ್ದ. ಏನು ನೀನೂ… ನನ್ನ ಅಪಹಾಸ್ಯ ಮಾಡ್ತೀಯಾ? ಅಂತ ಕನ್ನಡಿಯನ್ನು ದಿಟ್ಟಿಸುತ್ತಾ, ವ್ಯಂಗ್ಯ ನಗೆ ನಕ್ಕ. ಗೋಡೆ ಕನ್ನಡಿಯನ್ನು ಸುಮ್ಮನೆ ಇರುವಂತೆ ಕಣ್ಣಿನಲ್ಲೇ ಗದರಿತು. ಕನ್ನಡಿ ಅಲ್ಲಿಗೆ ಗಪ್ ಚುಪ್ ಆಗಿ ನಿಂತಿತು.

ರೂಮಿನ ಕದ ತಟ್ಟಿದ ಶಬ್ಧ…ಮಲಗಿದೀನಿ ಅಮ್ಮ, ಪ್ಲೀಸ್ ಡಿಸ್ಟರ್ಬ್ ಮಾಡಬೇಡ ಅಂತ ಮಲಗಿದಲ್ಲೇ ಕೂಗಿದ. ಆದರೂ ನಿಲ್ಲಲಿಲ್ಲ ಶಬ್ಧ. ಕೋಪದಿಂದ ಎದ್ದು ಬಾಗಿಲು ತೆರೆದ ಸಂದೇಶ್. ಯಾರು ಎಂದು ನೋಡುವ ಮೊದಲೇ,ತನ್ಮಯಿ ಸಂದೇಶನನ್ನು ತಬ್ಬಿಕೊಂಡು ಅಳುತ್ತಿದ್ದಳು… ಪ್ಲೀಸ್ ರೀ, ನನ್ನ ಕ್ಷಮಿಸಿ.. ಹುಡುಗು ಬುದ್ಧಿ, ಹಠಮಾರಿ ತನದಿಂದ,ನಿಮಗೆ ನೋವು ಕೊಟ್ಬಿಟ್ಟೆ.ಇನ್ನು ಎಂದಿಗೂ ನಿಮ್ಮ ಬಿಟ್ಟು ಹೋಗೋಲ್ಲಾ ಸಂದೇಶ್..ಏನೂ ಬೇಡ ನನಗೆ, ನೀವಿದ್ರೆ ಸಾಕು..ನಿಮಗಿಂತ ಹೆಚ್ಚಿನದು ಏನೂ ಇಲ್ಲ ನನಗೆ..ಒಂದೇ ಸಮನೆ ಅಳುತ್ತಿದ್ದಳು ತನ್ಮಯಿ. ಅವಳನ್ನು ನೋಡಿ ಖುಷಿ, ಆಶ್ಚರ್ಯ, ದುಃಖ ಒಟ್ಟೊಟ್ಟಿಗೆ ಒತ್ತರಿಸಿತು ಸಂದೇಶ್ ಗೆ.ತನು ನೀನೇನಾ?ಮತ್ತೆ ಬರಲ್ಲ ಅಂದ್ಯಲ್ಲೋ,ನೀನಿನ್ನು ಮುಗಿದ ಅಧ್ಯಾಯ ಅಂದುಕೊಂಡಿದ್ದೆ ನನ್ನ ಬಾಳಲ್ಲಿ.. ಏನಿದು ಬದಲಾವಣೆ.. ಕೇಳುತ್ತಾ, ಅಕ್ಕರೆಯಿಂದ ರೂಮೊಳಗೆ ಕರೆ ತಂದ ಅವಳನ್ನು.

ರೂಮಿನಲ್ಲಿ ಬರೀ ಸಿಗರೇಟಿನ ಘಾಟು ತುಂಬಿತ್ತು..ಏನಿದು ರೀ,ಸಿಗರೇಟು ಬಿಟ್ಟವರು ಮತ್ತೆ ಶುರು ಮಾಡಿದೀರಾ?ಮತ್ತೆ ಅಳು ಜೋರಾಯಿತು.. ನೀನಿಲ್ಲ ಅಂದ ಮೇಲೆ ಇನ್ನೇನು ಉಳಿದಿತ್ತು ನನಗೆ. ಅಂದ, ಮೇಲೆ ಛಾವಣಿ ದಿಟ್ಟಿಸುತ್ತಾ. ಈಗ ಬಂದಿದೀನಲ್ಲ,ಇನ್ಮೇಲೆ ಇದಕ್ಕೆ ಗುಡ್ ಬಾಯ್ ಹೇಳಬೇಕು ಸಂದೇಶ್….ನಿಜ,ನಾನು ದುಡುಕಿದೆ.ಹಳ್ಳಿಗಿಂತ, ಸಿಟಿ ಚಂದ ಅನ್ನುವ ಅಮಲು ನನ್ನ ತಲೆಗೇರಿತ್ತು.ಆದರೆ ನನ್ನ ಗೆಳತಿಯ ಜೀವನ ನನ್ನ ಕಣ್ಣು ತೆರೆಸಿತು.ಅವಳು ಇದ್ದದ್ದು ದುಬೈನಲ್ಲಿ.. ಈಗ ಕರೋನಾ ಬಂದು ಅವಳ ಮನೆಯ ಸುತ್ತ ಇರುವ ಪ್ಯಾಮಿಲಿಗೂ ತಟ್ಟಿದೆಯಂತೆ.ಆ ಕಡೆ ಇರಲಾಗದೇ,ಈ ಕಡೆ ಬರಲೂ ಆಗದೇ,ಪಾಪ,ಜೀವಭಯದಿಂದ ಒದ್ದಾಡುತ್ತಿದಾಳೆ…ನನ್ನ ಕಥೆ ಕೇಳಿ ಬಾಯಿ ಬಂದ ಹಾಗೇ ಬೈದಳು.ಹಳ್ಳಿ ಸ್ವರ್ಗ ಕಣೇ.ಅದು ಬಿಟ್ಟು ಸಿಟಿ ಅಂತ ನರಕಕ್ಕೆ ಬರ್ತೀಯಾ ಅಂತ.

ಇಲ್ಲಿ ನಮಗೇನೂ ಕೊರತೆ ಇಲ್ಲ. ಬೇಕಾದಷ್ಟು ಆಸ್ತಿ ಇದೆ.ಈಗ ನನ್ನ ತಲೆಯಲ್ಲಿ ಸಿಟಿ ಚಂದ ಅನ್ನುವ ಭ್ರಮೆ,ಲವಲವೇಶವೂ ಇಲ್ಲಾರೀ…ನಿಮ್ಮಿಷ್ಟದ ಬದುಕೇ ನನ್ನ ಇಷ್ಟ… ಅತ್ತೆ,ಮಾವನ ಜೊತೆಯಲ್ಲಿ ಚಂದದ ಬದುಕು ಬಾಳೋಣ ಅಂತ ಹೇಳುತ್ತಾ,ತನ್ಮಯಿ ಸಂದೇಶನ ಎದೆಗೊರಗಿದಾಗ,ಅವನ ಕಣ್ಣಂಚಿನಲ್ಲಿ ಮತ್ತೆ ಪ್ರೀತಿಯ ಕೋಲ್ಮಿಂಚು ಮಿಂಚಿತು….ಬಿರುಕು ಬಿಟ್ಟ ದಾಂಪತ್ಯ ,ಮತ್ತೆ ಒಂದಾಗಿದ್ದು ನೋಡಿ ಇಡೀ ರೂಮೇ ಸಂಭ್ರಮದಲ್ಲಿ ತೇಲಾಡಿತು…ಕನ್ನಡಿ ಅವರ ಪ್ರೇಮ ನೋಡಿ ನಸು ನಾಚಿತು…ಮಂಚ ಖುಷಿಯಿಂದ ತೇಲಿತು.ದಿಂಬು ಇಬ್ಬರಿಗೂ ಆಸರೆಯಾಗಿ ನೆಮ್ಮದಿಯ ಉಸಿರ ಚೆಲ್ಲಿತು.ಗೋಡೆ ,ನಾಲ್ಕು ಗೋಡೆಗಳ ನಡುವೆ ನಡೆವ ಪ್ರೇಮ ಪರಿಣಯಕ್ಕೆ, ಸಾಕ್ಷಿಯಾಗಲು ಸಜ್ಜಾಗತೊಡಗಿತು…


  • ಶೋಭಾ‌ ನಾರಾಯಣ ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading