‘ಪರಿಸರ ದೇವತೆ’ ಕವನ –  ಶಿವದೇವಿ ಅವನೀಶಚಂದ್ರ

ಪರಿಸರ ಪ್ರೀತಿಯು ಇಲ್ಲದ ಮನುಜನು ಕಳೆದುಕೊಳ್ಳುವ ದೇವರಿತ್ತ ಸ್ವಸ್ಥ ಜೀವನದ ಅನುದಾನ!…ಪರಿಸರ ದಿನಾಚರಣೆ ದಿನದಂದು ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಕಣ್ಣಿಗೆ ಕಾಣುವ ದೇವರ ಮರೆತು
ಗುಡಿಗುಂಡಾರಗಳಿಗಲೆಯುವೆಯೇಕೆ
ಹಸಿರಿನ ಉಸಿರನು ಉಣಿಸುವ ದೈವವ
ನೀ ಕಡೆಗಣಿಸುವಿಯೇಕೆ

ಬಿರುಬಿಸಿಲಿನ ಬೇಗೆಗೆ ಕಂಗೆಡಲು ನೀ
ನೆರಳು ನೀಡುತ ರಮಿಸುವುದು
ಮರವೆಂಬ ದೈವದ ಹಸಿರು ಪತ್ರ
ಇನಿತೇನನು ಅಪೇಕ್ಷಿಸದೆ ಸಂತೈಸುವುದು
ತಂಗಾಳಿಯ ಕರುಣೆಯ ಹಸ್ತ

ವಿಷಪ್ರಾಶನಗೈಯದ ಹಣ್ಣು ಕಾಯಿಗಳ
ನೀಡುವುದೊಲವಿನಲಿ
ರೆಂಬೆಕೊಂಬೆಗಳಲಿ ಮಧುರ ಗೀತೆಯ
ಹೊಮ್ಮಿಸುವುವು ಹಕ್ಕಿಗಳ ಉಲಿ

ಉದಯಾಸ್ತಗಳ ಚೆಲುವನು ಬೀರಿ
ಮನಕೆರೆವುದು ಉಲ್ಲಾಸ
ಎಲ್ಲೆಡೆ ನೋಟಕೆ ದಕ್ಕುವುದದೊ
ಬಣ್ಣಬಣ್ಣದ ಸೊಬಗಿನ ಹೂ ಹಾಸ

ಪಚ್ಚೆಯ ಗಾದಿಯ ಮೇಲೆ ನಡೆದಿದೆ
ಧಾರಿಣಿಯ ಒಡ್ಡೋಲಗದೈಸಿರಿಯು
ಹೊಲಗದ್ದೆಗಳಲಿ ಅಂಕುರಿಸಿದೆ
ನಾಳಿನ ಧಾನ್ಯದ ಸಮೃದ್ಧತೆಯ ಭರವಸೆಯು

ಜುಳುಜುಳಿಸುವ ಹೊನಲಿನ ಉಲ್ಲಾಸವು
ತುಂಬಿದೆ ಬಾಳಿಗೆ ಚೇತನವ
ಧುಮ್ಮಿಕ್ಕುವ ಜಲಪಾತದ ಓಘವು ಕಲಿಸಿದೆ
‌ಸುಖದು:ಖಗಳ ಜೀವನ ಪಾಠವ

ಪರಿಸರವೆಂದರೆ ಪಂಚಭೂತಗಳ
ಸಮೃದ್ಧಿಯ ಭಂಡಾರ
ತುಸು ನಿಧಾನಿಸಿ ಸವಿಯಲು
ಸೌಂದರ್ಯದೌತಣವ ಬಾಳೇ ಸುಖಸಾರ

ಕಡೆಗಣಿಸದೆ ಪೂಜಿಸಲು ಅದುವೆ ಜೀವಕೆ
ವರದಾನ
ಪರಿಸರ ಪ್ರೀತಿಯು ಇಲ್ಲದ ಮನುಜನು
ಕಳೆದುಕೊಳ್ಳುವ
ದೇವರಿತ್ತ ಸ್ವಸ್ಥ ಜೀವನದ ಅನುದಾನ!


  •  ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕವಿಯತ್ರಿ, ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading