ಮಳೆಗಾಲದ ಒಂದು ದಿನ ಪಶುವೈದ್ಯನ ಬದುಕು

ತೀರ್ಥಹಳ್ಳಿಯ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಡಗಿನಮಕ್ಕಿ ಎಂಬ ಗ್ರಾಮವಿದೆ. ಬಹುತೇಕ ಕುವೆಂಪು ರಕ್ಷಿತಾರಣ್ಯದ ವ್ಯಾಪ್ತಿಯೊಳಗೆ ಹುದುಗಿ ಹೋಗಿರುವಂತೆ ಭಾಸವಾಗುವ ಕುಗ್ರಾಮವದು. ದಟ್ಟಾರಣ್ಯವನ್ನು ಭೇದಿಸಿಕೊಂಡು ಹೋಗುವ ಕಾಲುದಾರಿಯಲ್ಲಿ ಸಾಗಿದರೆ ಇರುವುದು ಕೇವಲ 8 ಮನೆಗಳು. ಮುಂದೇನಾಯಿತು ಡಾ.ಯುವರಾಜ ಹೆಗಡೆ ತಪ್ಪದೆ ಮುಂದೆ ಓದಿ…

ಅದು 2007 ರ ಸಮಯ , ನಾನು ದೇವಂಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅದೇಕೋ ಆ ವರ್ಷದ ಆಗಸ್ಟ್ ತಿಂಗಳ ಜಡಿಮಳೆ ಹಿಂದೆಂದಿಗಿಂತಲೂ ತುಸು ಹೆಚ್ಚೇ ಎನ್ನುವಷ್ಟು ಸುರಿದು, ಹಾದಿಯೆಲ್ಲಾ ಹಸಿರುಗಟ್ಟಿದ ಪಾಚಿಯಂತಾಗಿತ್ತು. ಸಂಜೆ 4.30 ರ ಸಮಯಕ್ಕೆ ನಾನು ಕೆಲಸ ಪೂರೈಸಿ ಹೊರಡುವ ಸಮಯಕ್ಕೆ ಹಡಗಿನಮಕ್ಕಿಯ ರೈತರೊಬ್ಬರಿಂದ ಫೋನ್ ಕರೆ ಬಂದಿತ್ತು. ಸಾರ್, ಜಾನುವಾರುಗಳಿಗೆಲ್ಲಾ ಮಳೆ ಹೆಚ್ಚಾಗಿ ಥಂಡಿಯಾಗಿದೆ. ಹಾಲು ಕೊಡುವ ಎಮ್ಮೆಯ ಗಂಟಲು ಬಾತಿದೆ. ಉಸಿರಾಡುವಾಗ ಗರ್ ಗರ್ ಶಬ್ದ ಬರುತ್ತಿದೆ .ಬೆಳಗಿನವರೆಗೂ ಉಳಿಯುವುದು ಕಷ್ಟ. ನೀವು ಸಾದ್ಯವಾದರೆ ಇವತ್ತೇ ಬಂದು ಹೋಗಬಹುದೆ? ಎಂದು ಹೇಳಿದ್ದು ತುಂಡಾಗುತ್ತಿದ್ದ ಮೊಬೈಲ್ ಸಿಗ್ನಲ್ ನಲ್ಲಿ ಅಸ್ಪಷ್ಟವಾಗಿ ಕೇಳಿಸಿತ್ತು . ಅವರು ಹೇಳಿದ್ದನ್ನು ಸೂಕ್ಷ್ಮವಾಗಿ ಗಮನಿಸಿದೆ. “ಗಂಟಲು ಬಾತಿದೆ, ಉಸಿರಾಡುವಾಗ ಗರ ಗರ ಶಬ್ದ”. ಓಹ್ , ಇದು ಮಳೆಗಾಲದಲ್ಲಿ ಜಾನುವಾರುಗಳಿಗೆ ಕಾಡುವ ಮಾರಣಾಂತಿಕ ಗಂಟಲು ಬೇನೆರೋಗ ಇರಬಹುದು!!! ನಾಳೆ ಅನಾಹುತವಾಗುವುದು ಬೇಡ, ಕತ್ತಲಾಗುವ ಮುನ್ನವೇ ಹಿಂದಿರುಗುವ ಎಂದು ಹಡಗಿನಮಕ್ಕಿಯೆಡೆ ಬೈಕ್ ಓಡಿಸಿದೆ. ದೇವಂಗಿಯಿಂದ ಕೊಪ್ಪ ರಸ್ತೆಯಲ್ಲಿ ಸಾಗಿದರೆ, ಕುಪ್ಪಳ್ಳಿ ತಲುಪುವ ಮೊದಲೇ ಎಡಭಾಗದಲ್ಲಿ ಹಡಗಿನಮಕ್ಕಿ ಊರು ಸಿಗುತ್ತದೆ . ಅಲ್ಲಿ ಬಸ್ ನಿಲ್ದಾಣದ ಸ್ವಲ್ಪ ಮುಂದೆ ಬೈಕ್ ನಿಲ್ಲಿಸಿ ಹಳ್ಳದಾಟಬೇಕಾಗುತ್ತದೆ. ಸುಮಾರು 17 ವರ್ಷದ ಕೆಳಗೆ ಆ ಹಳ್ಳಕ್ಕೆ ಸೇತುವೆ ಇರಲಿಲ್ಲ. ಬಿದಿರು ಅಥವಾ ಮರಮಟ್ಟುಗಳನ್ನು ಕಟ್ಟಿದ “ಸಾರ” ವನ್ನು ಕಾಲು ಸೇತುವೆಯಾಗಿ ಹಳ್ಳದ ದಂಡೆಯ ಮೇಲಿಟ್ಟು ಓಡಾಡುತ್ತಿದ್ದರು. ಅದನ್ನು ದಾಟಿ ಸುಮಾರು ಮುನ್ನೂರು ಮೀಟರ್ ಕಾಡಿನೊಳಗಿನ ಕಾಲುದಾರಿಯಲ್ಲಿ ಮೆಡಿಸಿನ್ ಕಿಟ್ ಹೊತ್ತು ಸಾಗಿದೆ. ಮಳೆ ಧಾರಾಕಾರವಾಗಿ ಸುರಿಯತೊಡಗಿತ್ತು. ರೈನ್ ಕೋಟ್ ಹೊದಿಕೆಯೊಳಗೆಲ್ಲಾ ನೀರು ನುಗ್ಗಿ ಒದ್ದೆ ಮುದ್ದೆಯಾಗಿದ್ದು ಒಂದು ಕಡೆಯಾದರೆ, ಕಾರ್ಮೋಡಗಳು ಕವಿದು ಸಂಜೆ 5 ಗಂಟೆಗಾಗಲೇ ಕತ್ತಲು ಕವಿದಂತೆ ಭಾಸವಾಗುತ್ತಿತ್ತು. ಇನ್ನು ಮಲೆನಾಡಿನಲ್ಲಿ ಮಳೆಗಾಲದ ಕಾಡುದಾರಿಯ ಪಯಣ ಕೇಳಬೇಕೆ!!! ರಕ್ತ ಹೀರುವ ಇಂಬಳಗಳ(ಜಿಗಳೆ) ದಂಡು ನನ್ನನ್ನು ಆಕ್ರಮಿಸಿ ನೋವಿಲ್ಲದ ರಕ್ತದೋಕುಳಿ ಹರಿಸಿ ಹಿರಿಹಿರಿ ಹಿಗ್ಗಿದವು. ದೇಹ ಏರಿದ ಇಂಬಳಗಳನ್ನು ತೆಗೆಯುವ ಮಾತೆಲ್ಲಿ? ಅವಿನ್ನು ರಕ್ತಹೀರಿ ದುಂಡಾಗಿ, ಉದುರಿ ಬೀಳುವವರೆಗೂ ಕಾಯುವುದೇ ನನ್ನ ಅಂದಿನ ಭಾಗ್ಯವಾಗಿತ್ತು.
ಉದ್ಯೋಗ ಪಡೆದು ಕೆಲವೇ ವರ್ಷಗಳಾಗಿ ಹುರುಪಿನಲ್ಲಿದ್ದ ನಾನು, ಅಂದು ಎದುರಾಗಿದ್ದ ಸಂಕಷ್ಟವನ್ನು ನಿಭಾಯಿಸಿ , ಆದಷ್ಟು ಬೇಗ ಕೆಲಸ ಪೂರೈಸಿ ಪಟ್ಟಣ ಸೇರುವ ತವಕದಲ್ಲಿ ಮುಂದುವರೆದೆ.

ಸಾಕಷ್ಟು ದೂರ ಕಾಲುದಾರಿಯಂತಿದ್ದ ರಸ್ತೆಯಲ್ಲಿ (ಅಸಲಿಗೆ ಅದೇ ಆ ಊರಿಗೆ ಆ ಹೊತ್ತಿಗಿದ್ದ ರಾಜಮಾರ್ಗ) ಸಾಗಿದ ನಂತರ ನನಗೆ ಕರೆ ಮಾಡಿದ ಜಾನುವಾರು ಮಾಲಿಕನ ಮನೆ ಸಿಕ್ಕಿತು. “ ಈ ಮಳೇಲಿ ಹ್ಯಾಂಗೆ ಬಂದ್ರೀ ಸಾರ್ , ಬೆಳಗ್ಗೆ ಬರ್ತಿರೇನೋ ಮಾಡಿದ್ದೆ ,ನೆರೆ ಮಳೆ ನೆರೆ ಮಳೆ… ” ಎಂದರು.

ಸಮಯ ವ್ಯರ್ಥ ಮಾಡದೆ ಅನಾರೋಗ್ಯಕ್ಕೀಡಾದ ಎಮ್ಮೆಯನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿದೆ. ಕೊಟ್ಟಿಗೆಯಲ್ಲಿದ್ದ ಉಳಿದ ಜಾನುವಾರುಗಳೆಡೆ ನೋಟ ಬೀರಿದೆ. ಎಲ್ಲವೂ ಒದ್ದೆಯಾಗಿ ಚಳಿ ಹಿಡಿದಂತೆ ರೋಮ ನೆಟ್ಟಗಾಗಿಸಿ, ಮುದ್ದೆಯಾಗಿ ನಿಂತಿದ್ದವು. ಆ ಸಮಯದಲ್ಲಿ ಆಸ್ಪತ್ರೆಗಳಿಗೆ ಘಮ ಘಮಿಸುವ ಶುಂಠಿ ಪುಡಿಯನ್ನು ಸರಭರಾಜು ಮಾಡುತ್ತಿದ್ದರು. ಅರ್ಧ ಕೆ.ಜಿ ಶುಂಠಿ ಪುಡಿಯನ್ನು ಮಾಲಿಕರ ಕೈಗಿತ್ತು, ಸ್ವಲ್ಪ ಕಾಳು ಮೆಣಸು ಸೇರಿಸಿ ಎಲ್ಲಾ ಹಸುಗಳಿಗೂ 50-100 ಗ್ರಾಂ ನಂತೆ ತಿನ್ನಿಸಲು ಹೇಳಿದೆ .ಇದರಿಂದ ದೇಹದ ಉಷ್ಣಾಂಶ ತುಸು ಏರುವುದು. ಅಷ್ಟರಲ್ಲಿ ಬಚ್ಚಲ ಹಂಡೆಗೆ ಹಾಕಿದ್ದ ಬೆಂಕಿ, ಒದ್ದೆಯಾಗಿ ಮರಗಟ್ಟಿದ ನನ್ನನ್ನು ಕೈ ಬಿಸಿ ಕರೆದಂತಾಯಿತು. ಹತ್ತು ನಿಮಿಷ ಬೆಂಕಿಯ ಬಳಿ ನಿಂತು ಹಿತವಾಗಿ ಕಾಯಿಸಿಕೊಂಡು ಅಲ್ಲೇ ಒಲೆಯ ಬುಡದಲ್ಲಿ ಇಟ್ಟಿದ್ದ ಒಂದಷ್ಟು ಹಲಸಿನ ಬೀಜಗಳನ್ನು ಸುಟ್ಟು ತಿಂದು, ಕಾಫಿ ಹೀರಿ ಹೊರಡುವಾಗ ಸಮಯ 6.00 ಗಂಟೆಯಾಗಿತ್ತು. ಕಣ್ಣಿಗೆ ಬಿದ್ದಷ್ಟು ರಕ್ತ ಹೀರಿದ ಇಂಬಳಗಳನ್ನು ಕಿತ್ತು ತೆಗೆದು ಬಂದ ದಾರಿ ಹಿಡಿದೆನು.

ಹಿಂದಿರುಗಿ ಬಂದವನಿಗೆ ಆಘಾತವೊಂದು ಕಾದಿತ್ತು. ನೆರೆ ಬಂದು ಹಳ್ಳ ಉಕ್ಕಿದ್ದರಿಂದಲೋ ಅಥವಾ ಹಳ್ಳದ ದಂಡೆಯ ಮಣ್ಣು ಮೆದುವಾಗಿ ಕುಸಿದಿದ್ದರಿಂದಲೋ, ಹಳ್ಳವನ್ನು ದಾಟಲು ಹಾಕಿದ್ದ ಸಾರ ನೀರಿನಲ್ಲಿ ಕೊಚ್ಚಿಹೋಗಿತ್ತು!!! ಈಗ ಮುಂದೇನು? ಹಳ್ಳ ದಾಟಿಯೇ ಆಚೆ ದಡದಲ್ಲಿ ಇಟ್ಟಿದ್ದ ಬೈಕ್ ಏರಬೇಕು .ಇಲ್ಲವೇ ಹಿಂದಿರುಗಿ ಚಿಕಿತ್ಸೆ ನೀಡಿದ ರೈತನ ಮನೆಯಲ್ಲೇ ರಾತ್ರಿ ತಂಗಬೇಕು ಎರಡೇ ದಾರಿಗಳು. ಆ ಊರಿನಿಂದ ಹೊರಬರಲು ಬೇರೆಯ ಮಾರ್ಗಗಳು ಇರಲಿಲ್ಲ .

ನನ್ನ ಆಯ್ಕೆ ಮೊದಲನೆಯದೇ ಆಗಿತ್ತು. ಏಕೆಂದರೆ ಸಂಕೋಚದ ಸ್ವಭಾವದವನಾದ ನಾನು ಅವರ ಮನೆಯಲ್ಲಿ ತಂಗುವುದು ಸಾದ್ಯವಿರಲಿಲ್ಲ. ಹಾಗಾಗಿ ಹಳ್ಳದ ಬುಡದಲ್ಲಿ ಕುಳಿತು ನೀರಿನ ಮಟ್ಟ ತಗ್ಗಲು ಅರ್ಧ ಗಂಟೆಗಳವರೆಗೆ ಕಾದೆ. ಮಳೆ ಇಳಿಮುಖವಾಗಿ ಹೊಳವು ನೀಡಿತ್ತು . ನೀರು ಸಾಕಷ್ಟು ಇಳಿಯಲಾರಂಭಿಸಿತು. ಬೇಸಿಗೆಯಲ್ಲಿ ಇದೇ ಹಳ್ಳದ ಮುಖಾಂತರ ಬೈಕಲ್ಲಿ ಓಡಾಡಿ ಅಭ್ಯಾಸವಿದ್ದ ನನಗೆ ಎಲ್ಲೆಲ್ಲಿ ಆಳ ಹಾಗೂ ಅಪಾಯವಿದೆ ಎಂಬ ಸ್ವಲ್ಪ ಮಟ್ಟಿನ ಅರಿವಿತ್ತು. ಒಂದು ಅಂದಾಜಿನ ಮೇರೆಗೆ ಹಳ್ಳದಲ್ಲಿ ನನ್ನ ಸೊಂಟದ ಎತ್ತರಕ್ಕೆ ನೀರು ಇರಬಹುದಾದ ಜಾಗವನ್ನು ಗ್ರಹಿಸಿ, ಅಗಲ ಹೆಚ್ಚಿದ್ದು ಆಳ ಕಡಿಮೆ ಇರುವ ಮಾರ್ಗದಲ್ಲಿ ಹಳ್ಳದಾಟುವ ನಿರ್ಧಾರ ಕೈಗೊಂಡೆ. ಈಜು ಬರುತ್ತದೆ ಎಂಬ ಭಂಡ ಧೈರ್ಯ ಬೇರೆ ನನ್ನಲ್ಲಿತ್ತು (ಆದರೆ ಈಜದೆ ಹತ್ತು ವರ್ಷಗಳು ಕಳೆದಿದ್ದವು).

ಮೆಡಿಸಿನ್ ಕಿಟ್ ಅನ್ನು ತಲೆಯ ಮೇಲಿರಿಸಿಕೊಂಡು ಹಳ್ಳದಾಟಲು ಪ್ರಾರಂಬಿಸಿದೆ. ಅಬ್ಬಬ್ಬಾ ಮಳೆಗಾಲದಲ್ಲಿ ಹಳ್ಳದ ನೀರು ಅದೆಂತಹ ಕೊರೆಯುವ ಶೀತ. ಅರ್ಧ ಹಳ್ಳ ದಾಟಿರಬಹುದು, ಮೇಲ್ಬಾಗದಲ್ಲಿ ಅಂದರೆ ಕುಪ್ಪಳ್ಳಿ ಭಾಗದಲ್ಲಿ ಬೀಳುತ್ತಿದ್ದ ಮಳೆಯ ಪರಿಣಾಮವೋ ಅಥವಾ ನಾನು ಹಳ್ಳದ ಆಳವನ್ನು ತಪ್ಪಾಗಿ ಗ್ರಹಿಸಿದೆನೋ ತಿಳಿಯದು, ನೀರು ನನ್ನ ಎದೆಯ ಮಟ್ಟಕ್ಕೆ ಏರಲಾರಂಭಿಸಿತು. ನೀರಿನ ಸೆಳತವೂ ಹೆಚ್ಚಾಗಿ ನಾನು ಅಂದುಕೊಂಡಿದ್ದಕ್ಕಿಂತ ನಾಲ್ಕೈದು ಮೀಟರ್ ದೂರ ದೂರಕ್ಕೆ ನನ್ನನ್ನು ಎಳೆದೊಯಿತು. ಒಮ್ಮೆಲೇ ದೇಹದ ಉಷ್ಟಾಂಶವೇ ತಗ್ಗಿದ ಅನುಭವವಾಗಿ, ಸಮತೋಲನ ಕಳೆದುಕೊಂಡು ಮುಳುಗುವ ಸಾದ್ಯತೆ ಕಂಡು ಬಂದಾಗ ತೆಲೆಯ ಮೇಲಿದ್ದ ಮೆಡಿಸಿನ್ ಕಿಟ್ ನೀರುಪಾಲಾಯಿತು . ನಂತರ ಎರಡೂ ಕೈಗಳಿಂದ ನೀರನ್ನು ತಳ್ಳುತ್ತಾ ಮುಂದುವರೆದು ಆಚೆಯ ದಡದ ಸಮೀಪ ಬಂದಾಗ ಹುಲ್ಲಿನ ಜಡ್ಡುಗಳನ್ನು ಹಿಡಿದು ದಡ ಏರಿದೆ. ನನ್ನ ಸ್ಥಿತಿಯನ್ನು ನೋಡಿ ನನಗೆ ನಾನೆ ಶಪಿಸಿಕೊಂಡೆ. ಮಳೆಯಲ್ಲಿ ಮಿಂದೆದ್ದು ಮಿಲನದ ಖುಷಿಯಲ್ಲಿ ಸಂಭ್ರಮಿಸುತ್ತಿದ್ದ ಮಂಡೂಕಗಳ ಸ್ವರವೂ ನನಗೊದಗಿ ಬಂದ ಪರಿಸ್ಥಿತಿಯನ್ನೇ ನೋಡಿ ಕುಹಕವಾಡಿದಂತೆ ತೋರುತ್ತಿತ್ತು.ಕ್ಷಣ ಕಾಲ ದಿಗ್ಭ್ರಾಂತನಾಗಿ ಹಳ್ಳವನ್ನೇ ದಿಟ್ಟಿಸಿ ನೋಡುತ್ತಾ ದಂಡೆಯ ಮೇಲೆ ಕುಸಿದುಹೋದೆ.

ಈಗ 17 ವರ್ಷಗಳಲ್ಲಿ ಆ ಹಳ್ಳದ ಆಳ, ಅಗಲ, ಚಹರೆ ಬದಲಾಗಿದೆ. ‘ಸಾರ’ದ ಬದಲು ಅಚ್ಚುಕಟ್ಟಾದ ಸೇತುವೆ, ಕಾಲ ದಾರಿಯಂತಿದ್ದ ರಸ್ತೆ ವಾಹನ ಹೋಗುವಷ್ಟು ಅಗಲವಾಗಿದೆ. ಇತ್ತೀಚೆಗೆ ಬೇಟಿ ನೀಡಿದಾಗ ಅರೇ , ನಾ ದಾಟಿದ ಹಳ್ಳ ಇದೇನಾ !!! ಅನ್ನುವಷ್ಟು ಹಡಗಿನಮಕ್ಕಿಯಲ್ಲಿ ಬದಲಾವಣೆ ಕಂಡೆ. ಆ ಊರಿನಲ್ಲಿ ತಲತಲಾಂತರದಿಂದ ಬದುಕಿ ಬಾಳಿದ ಕುಟುಂಬಗಳಿಗೆ ಅದು ಅವಶ್ಯಕ ಕೂಡ.

ಈ ಘಟನೆಯ ಕುರಿತು ಇದುವರೆಗೂ ಯಾರಲ್ಲಿಯೂ ಹಂಚಿಕೊಂಡಿರಲಿಲ್ಲ. ಇಂದಿಗೂ ಗಡಿಕಲ್ಲು, ಕುಪ್ಪಳ್ಳಿ ಕಡೆ ಹೋಗುವಾಗ ಹಡಗಿನಮಕ್ಕಿ ಸಮೀಪಿಸಿದಂತೆ ಅಂದಿನ ಮಳೆಗಾಲದ ದಿನವನ್ನು ನೆನೆಯುತ್ತಲೇ, ನನ್ನನ್ನು ಮುಳುಗಿಸಿದ ಆ ಹಳ್ಳದತ್ತ ಒಮ್ಮೆ ನೋಡಿದಾಗ ಚಳಿಯಲ್ಲಿ ಮೈಕೊಡವಿದಂತಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಪಶುವೈದ್ಯರಿಗೆ ಇಂತಹ ಹಲವು ಸಂಘರ್ಷಗಳು ಎದುರಾಗುತ್ತವೆ. ಅವುಗಳನ್ನು ಮೆಟ್ಟಿ ನಿಂತು ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ. ಅನೇಕ ಹಿರಿಯ ಪಶುವೈದ್ಯರು, ಸೈಕಲ್ ಏರಿ ಹಳ್ಳಿ
ಸುತ್ತಿ ಚಿಕಿತ್ಸೆ ನೀಡಿದಾಗ ಆದ ಅನುಭವಗಳನ್ನು ಕೇಳಿದಾಗ ರೋಮಾಂಚನವಾಗುತ್ತದೆ.

ಕಾಲಾನಂತರದಲ್ಲಿ ಹಲವಾರು ಬದಲಾವಣೆ ಕಂಡಿವೆ, ಪರಿಸ್ಥಿತಿ ಉತ್ತಮಗೊಂಡಿವೆ. ಆಗಿನ ಪ್ರತಿಕೂಲ ಪರಿಸ್ಥಿತಿಗಳು ಈಗಿಲ್ಲ. ಬದಲಾವಣೆ ಜಗದ ನಿಯಮ.

ಚಿತ್ರ ಕೃಪೆ- ನಟರಾಜ್ ಅರಳಸುರಳಿ ಸರ್


  • ಡಾ.ಯುವರಾಜ ಹೆಗಡೆ – ಪಶುವೈದ್ಯರು , ತೀರ್ಥಹಳ್ಳಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading