ನಿಸರ್ಗ ಪ್ರೇಮಿ ಕುಟುಂಬ –  ಡಾ.ಯುವರಾಜ ಹೆಗಡೆ

ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುನ್ನೂರು ಗ್ರಾಮದ ಶ್ರೀ ಜಯಂತ ಕುನ್ನೂರು ಕುಟುಂಬ ಕಾಡಿನ ಮೇಲಿನ ಪ್ರೀತಿ ಅಲ್ಲಿನ ಪರಿಸರದ ಕುರಿತು ಪಶುವೈದ್ಯ ಡಾ.ಯುವರಾಜ ಹೆಗಡೆ ಅವರು ಬರೆದಿರುವ ಒಂದು ಲೇಖನ, ತಪ್ಪದೆ ಓದಿ…

ಚಿಕಿತ್ಸೆಗೆಂದು ಊರೂರು ಅಲೆಯುವ ಈ ಕಿನ್ನರಿಗೆ ಭಾನುವಾರದ ದಿನ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುನ್ನೂರು ಗ್ರಾಮಕ್ಕೆ ಭೇಟಿ ನೀಡುವ ಅವಕಾಶ ಒದಗಿತು. ಕೆಲಸದ ಒತ್ತಡ, ಜಂಜಾಟದ ಬದುಕಿನ ನಡುವೆ ಸಮಯ ಹೊಂದಿಸಿಕೊಂಡು ಭಾನುವಾರ ಮಧ್ಯಾಹ್ನ ಶ್ರೀ ಜಯಂತ ಕುನ್ನೂರು ಅವರ ಮನೆಗೆ ಭೇಟಿ ನೀಡಿ ಮೂರು ಶ್ವಾನಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದ ನಂತರ, ಮನೆಯ ಸುತ್ತಲಿನ ನನ್ನಿಷ್ಟವಾದ ಪರಿಸರ ವೀಕ್ಷಣೆಯತ್ತ ದೃಷ್ಟಿ ಬೀರಿದೆ.

ಅದೊಂದು ಸಂರಕ್ಷಿಸಲ್ಪಟ್ಟ ನೈಸರ್ಗಿಕ ಅರಣ್ಯ ಪ್ರದೇಶ.ಮನೆಯ ಸುತ್ತಲೂ ಮೂರು ದಿಕ್ಕುಗಳಲ್ಲಿ ಮಾನವನ ಹಸ್ತಕ್ಷೇಪ ಕಡಿಮೆ ಇರುವ ದಟ್ಟವಾದ ಕಾಡು. ಅದು “ಹರಿದ್ರಾವತಿ ಕಾಯ್ದಿಟ್ಟ ಅರಣ್ಯ”ದ ಒಂದು ಭಾಗ. ಮತ್ತೊಂದೆಡೆ ಕಾಡಿನ ಪ್ರಕೃತಿಯ ಮಡಿಲಿನ ತಪ್ಪಲಿನಲ್ಲಿ ಕೃಷಿ ಹಾಗೂ ಪಶುಪಾಲನೆಯಲ್ಲಿ ತೊಡಗಿರುವ ಜಯಂತ ಅವರ ಕುಟುಂಬ ಬದುಕು ಕಟ್ಟಿಕೊಂಡಿದೆ.

ಎಲ್ಲೆಂದೆಡೆ ಅಕೇಶಿಯಾ ಕೃತಕ ಕಾಡಿನಿಂದ ಬೇಸತ್ತಿದ್ದ ಮನಸ್ಸಿಗೆ ಮಲೆನಾಡಿನಲ್ಲಿ ಕೂಡ ಅಪರೂಪವೆಂಬಂತೆ ಇರುವ ದಟ್ಟಾರಣ್ಯವು ಮುದ ನೀಡಿತು. ಅರಣ್ಯದ ಮೇಲ್ಪದರಕ್ಕೆ ಬೀಳುವ ಮಳೆ ನೀರು ಭೂಗರ್ಭದಾಳಕ್ಕೆ ಇಳಿದು ವರ್ಷವಿಡೀ ಅಬ್ಬಿ ನೀರಾಗಿ ಹರಿದು ಬರುವ ಜಲಧಾರೆ ಎರಡು ನೈಸರ್ಗಿಕ ಕೊಳಗಳನ್ನು ಸೃಷ್ಟಿಸಿದೆ. ಕೊಳಗಳಿಗೆ ಜಯಂತರು ಮಣ್ಣು ಜರಿಯದಂತೆ ಕಲ್ಲಿನ ಕಟ್ಟಣೆ ಕಟ್ಟಿದ್ದು, ಕೊಳದ ಸುತ್ತಲೂ ಎರಡು ಅಡಿಯ ತೆಡೆಗೋಡೆ ನಿರ್ಮಿಸಿ ಸುರಕ್ಷತೆಯ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಕೊಳ 13 ಅಡಿಗಳಿದ್ದು ಅದರ ತಳದಲ್ಲಿ 4 ಅಡಿಯ ಬಾವಿಯೂ ಇದೆಯಂತೆ. ಈ ನೈಸರ್ಗಿಕ ಕೊಳದಲ್ಲಿ ನೀರು ಅದೆಷ್ಟು ಪಾರದರ್ಶಕವಾಗಿದೆಯೆಂದರೆ ಕನ್ನಡಿಯಲ್ಲಿ ನೋಡಿದಂತೆ ನಮ್ಮ ಪ್ರತಿಬಿಂಬವನ್ನು ನೋಡಬಹುದು . ಅಷ್ಟೇ ಏಕೆ, ನೂರಡಿ ದೂರದಲ್ಲಿಯ ಕಾಡಿನ ಚಿತ್ರಣ ಕೊಳದ ತಿಳಿನೀರಿನಲ್ಲಿ ಕಾಣುತ್ತದೆ ಎಂದರೆ ಅಲ್ಲಿಯ ಪರಿಸರ ಅದೆಷ್ಟು ಸ್ವಚ್ಛವಾಗಿದೆ ಎಂಬುದರ ಪ್ರತೀಕವಾಗಿದೆ. ಅವರ ತೋಟ, ಮನೆ ಬಳಕೆ , ಜಾನುವಾರಗಳ ಉಪಯೋಗಕ್ಕೆ ವರ್ಷವಿಡೀ ಬತ್ತದೇ ಇರುವ ಇದೇ ಕೊಳದ ನೀರು ಬಳಕೆಯಲ್ಲಿದೆ.

This slideshow requires JavaScript.

 

ಜಾನುವಾರಗಳ ಕುರಿತಾಗಿ ವಿಶೇಷ ಪ್ರೀತಿ ಹೊಂದಿರುವ ಇವರ ಕುಟುಂಬವು ಕೊಳದ ಪಕ್ಕದಲ್ಲಿ “ಶ್ರೀ ವೇಣು ಗೋಪಾಲ ಸ್ವಾಮಿ” ದೇವಸ್ಥಾನವನ್ನು ನಿರ್ಮಿಸಿ ಕೃಷ್ಣಾರಾಧನೆ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ ದೇವಸ್ಥಾನದ ಗೋಡೆಯ ಮೇಲೆ “ವನ್ಯ ಪ್ರಾಣಿಗಳನ್ನು ಕಾಪಾಡಿ” “ಕಾಡು ಉಳಿಸಿ” ಎಂಬ ಸಂದೇಶಗಳನ್ನು ಸಾರುವ ಸಾಲುಗಳಿದ್ದು ಇವರ ಕುಟುಂಬವು ಪ್ರಕೃತಿಯನ್ನು ಎಷ್ಟು ಆರಾಧಿಸುತ್ತದೆ ಎಂಬುದನ್ನು ತೋರುತ್ತದೆ. ನಾನು ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ “ಕೆಂದಳಿಲ” ಸಂಸಾರವೊಂದು ದೇವಸ್ಥಾನದ ಸಮೀಪದ ಮರಗಳಲ್ಲಿ ಆಟವಾಡುತ್ತಿದ್ದವು. ಅಪರಿಚಿತನಾದ ನನ್ನನ್ನು ನೋಡಿದೊಡೆ ಗದ್ದಲ ಎಬ್ಬಿಸಿ ಕೂಗೂತ್ತಾ ಮರದಿಂದ ಮರಕ್ಕೆ ಹಾರಿ ವಿಚಿತ್ರ ಶಬ್ದ ಮಾಡುತ್ತಾ ನನ್ನನ್ನು ಹೆದರಿಸುವ ಪ್ರಯತ್ನ ಮಾಡಿದವು. ಆಗ ಜಯಂತ ಅವರು “ಇವು ನಮ್ಮ ಕುಟುಂಬದ ಸದಸ್ಯರನ್ನು ನೋಡಿದಾಗ ಹೀಗೆ ಮಾಡುವುದಿಲ್ಲ, ಹೊರಗಡೆಯವರನ್ನು ನೋಡಿದರೆ ರಗಳೆ ಮಾಡುತ್ತವೆ.” ಎಂದಾಗ ವನ್ಯಜೀವಿಗಳಿಗೂ ಇವರೆಷ್ಟೂ ಆಪ್ತರಾಗಿದ್ದಾರೆ ಎಂಬುದನ್ನು ತೋರುತ್ತದೆ. ಅವರೇ ಹೇಳುವಂತೆ ಈ ಭಾಗದಲ್ಲಿ ವನ್ಯ ಜೀವಿಗಳ ಬೇಟೆ ಮಾಡದಂತೆ ನಿಗಾವಹಿಸಿದ್ದು ಬೇಟೆಗಾರರಿಗೆ ಕಾನೂನು ರುಚಿ ತೋರುವ ಎಚ್ಚರಿಕೆಯನ್ನು ಹಲವಾರು ಬಾರಿ ನೀಡಿರುವ ಕಾರಣ ಈ ಭಾಗದಲ್ಲಿ ವನ್ಯಜೀವಿಗಳಿಗೂ ನೆಮ್ಮದಿಯಿಂದ ಬದುಕು ಕಟ್ಟಿಕೊಂಡಿವೆ. ಸುತ್ತಲಿನ ಸಂರಕ್ಷಿಸಲ್ಪಟ್ಟ ಅರಣ್ಯ ಹಾಗೂ ಪರಿಸರದಿಂದಾಗಿ ಇವರ ತೋಟವೂ ಸಮೃದ್ಧವಾಗಿದ್ದು ಇಳುವರಿಯೂ ಉತ್ತಮವಾಗಿದೆ.

ಪ್ರಾಣಿ ಪ್ರಿಯರಾದ ಇವರ ಮನೆಯಲ್ಲಿ 25 ಕ್ಕೂ ಹೆಚ್ಚು ಜಾನುವಾರುಗಳಿದ್ದು ಮಲೆನಾಡು ಗಿಡ್ಡ, ಗಿರ್, ಸಾಹಿವಾರ್ ಜರ್ಸಿಯಂತಹ ರಾಸುಗಳನ್ನು ಸಾಕಾಣಿಕೆ ಮಾಡಿದ್ದಾರೆ. ಜಾನುವಾರು ಸಾಕಾಣಿಕೆ ಈಗ ಬೆರಳಣಿಕೆಯಷ್ಟು ತಗ್ಗಿರುವ ಕುಟುಂಬಗಳು ಇರುವಾಗ 25 ರ ಸಂಖ್ಯೆಯಲ್ಲಿ ಇರುವ ಉತ್ತಮ ತಳಿಗಳ ಜಾನುವಾರುಗಳು ಹಾಗೂ ಅವುಗಳ ಆರೋಗ್ಯವನ್ನು ಗಮನಿಸಿದಾಗ ಇವರ ಪಶುಪಾಲನೆಯ ಆಸಕ್ತಿ ಎಷ್ಟಿದೆ ಎಂಬುದು ಸಾಬೀತಾಗುತ್ತದೆ. ಶ್ವಾನಗಳಿಗೆ ಕಾಳಜಿ ತೋರುವ ಇವರ ಮನೆಯಲ್ಲಿ ರಕ್ಷಿಸಲ್ಪಟ್ಟ ಏಳೆಂಟು ನಾಯಿಗಳಿದ್ದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಸಂತತಿ ಬೆಳೆಯದಂತೆ ನಿಗಾವಹಿಸಿದ್ದಾರೆ ಹಾಗೂ ಅವುಗಳಿಗೆ ರೇಬಿಸ್ ಸೇರಿದಂತೆ ಅಗತ್ಯ ಲಸಿಕೆಯನ್ನು ಮಾಡಿಸಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಉತ್ತಮ ಜೇನು ಕೃಷಿಕರೂ ಆಗಿರುವ ಇವರು ತಮ್ಮ ಜಮೀನಿನ ಸುತ್ತಲೂ ಇಪ್ಪತ್ತಕ್ಕೂ ಅಧಿಕ ಜೇನು ಪೆಟ್ಟಿಗೆಗಳನ್ನು ನಿರ್ವಹಿಸಿದ್ದಾರೆ.

ಪಟ್ಟಣ ಜೀವನವನ್ನು ಬೇಸತ್ತು ಒತ್ತಡ ನಿಗ್ರಹಿಸಲು ಜನರ ಗುಂಪು ಆಗಾಗ ಇಲ್ಲಿಗೆ ಭೇಟಿ ನೀಡಿ ಪ್ರಕೃತಿ ಸೊಬಗನ್ನು ಸವಿಯುತ್ತಾರೆ. ಭೇಟಿ ನೀಡುವವರಿಗೆ ಮುಕ್ತ ಅವಕಾಶವಿದೆಯಾದರೂ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯ ಕಾಪಾಡುವ ಜವಾಬ್ದಾರಿ ಪ್ರವಾಸಿಗರ ಮೇಲಿದೆ. ಹುಂಚ (ಹೊಂಬುಜ ಕ್ಷೇತ್ರ) ಕ್ಕೆ ಭೇಟಿ ನೀಡುವವರು ಸಮಯವಿದ್ದಲ್ಲಿ ಈ ಪ್ರದೇಶವನ್ನು ನೋಡಬಹುದಾಗಿದೆ.


  •  ಡಾ.ಯುವರಾಜ ಹೆಗಡೆ, ಪಶುವೈದ್ಯರು, ತೀರ್ಥಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW