ಶಾರದೆಯ ಕಾಡು….- ಗಿರಿಜಾ ಶಾಸ್ತ್ರೀ

ಆಶ್ರಮದಂತಿರುವ ‘ಧ್ವನ್ಯಾಲೋಕ’ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸಾಗಿತ್ತು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್ ವೆಲ್ತ್ ಸಾಹಿತ್ಯದ ಬೆಳವಣಿಗೆಗೆ ಕಾರಣರಾದವರು ಅದನ್ನು ಈಗ ಅವರ ಮಗನಾದ ಪ್ರೊ ಶ್ರೀನಾಥ್ ಅವರು ವಿಭಿನ್ನ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ, ಇನ್ನಷ್ಟು ವಿಷಯವನ್ನು ಲೇಖಕಿ ಗಿರಿಜಾ ಶಾಸ್ತ್ರೀ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಮೈಸೂರಿನ ‘ಧ್ವನ್ಯಾಲೋಕ’ ಶಾರದೆಯ ಒಂದು ಸಹಜ ಕಾಡು. ನೂರಕ್ಕಿಂತ ಹೆಚ್ಚು ಜಾತಿಯ ಮರಗಳಿವೆ. ಮೂರುವರೆ ಎಕರೆಗಳ ಈ ಕಾಡನ್ಮು ಸಮವಾಗಿ ಕತ್ತರಿಸಿ ರಿಸಾರ್ಟ್ ಮಾಡಲಾಗಿಲ್ಲ. ಕಾಡನ್ನು ಕಾಡಿನಂತೆಯೇ ಉಳಿಸಿಕೊಂಡು ಅದರೊಳಗೆ ಒಂದು ಜ್ಞಾನ ದೇಗುಲವನ್ನು ರೂಪಿಸಲಾಗಿದೆ. ಇಲ್ಲಿ ಹಗಲೂ ಇರುಳೂ ಕಾಡಿನ ಕಲರವ.

ಜ್ಞಾನದಾಹಿಗಳು ಇಲ್ಲಿ ಕಳೆದು ಹೋಗಬಲ್ಲಂಥ ಗ್ರಂಥಾಲಯವಿದೆ. ಅಪರೂಪದ ಗ್ರಂಥಗಳಿಂದ ತುಂಬಿರುವ ಇದರ ಒಳ ಹೊಕ್ಕರೆ ಸಾಕು ಅನಂತ ಪ್ರಾಚೀನತೆ ಮೂಗಿಗೆ ಬಡಿಯುತ್ತದೆ. ಕೇವಲ ಪರ್ವತ ಮತ್ತು ಸಾಗರಗಳ ಮುಂದೆ ನಿಂತಾಗ ಮಾತ್ರ ಭೂಮಾನುಭೂತಿಯಾಗುವುದಿಲ್ಲ. ಅಪೂರ್ವ ಗ್ರಂಥಾಲಯ ಹೊಕ್ಕಾಗಲೂ ಆಗುತ್ತದೆ. ಅದರೊಳಗೆ ಹೊಕ್ಕ ಪಾಮರರು ನಾವು ನಮ್ಮ ಸ್ಥಾನ ನಿರ್ದೇಶನಕ್ಕೆ ತಡಕಾಡುತ್ತಾ ಕಳವಳ ಪಡುತ್ತೇವೆ. ನಮ್ಮ ಭ್ರಮೆ ಹರಿಯುತ್ತದೆ. ೧೯೫೨ ರಿಂದಲೂ ಲಿಟರರಿ ಕ್ರೈಟೀರಿಯಾನ್ ಎನ್ನುವ ಶಾಣ್ಮಾಸಿಕ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೇಯಸ್ಸು ಈ ಗ್ರಂಥಾಲಯಕ್ಕಿದೆ. ಸುಮಾರು ೨೩ ವರುಷಗಳಿಂದ ಅನುವಾದಕ್ಕೆಂದೇ ಇರುವ ಸಾರಸ ಎಂಬ ಪತ್ರಿಕೆಯನ್ನು ಶ್ರೀನಾಥ್ ಅವರು ನಡೆಸಿಕೊಂಡು ಬರುತ್ತಿದ್ದಾರೆ.

ಒಂದು ರಂಗಮಂದಿರವಲ್ಲದೇ ರಾಜೀವ ಗಾಂಧೀ ಹೆಸರಿನ‌ ಬಯಲು ರಂಗಮಂದಿರ ಕೂಡ ಇದೆ.

ಮರಗಳು ರೂಪಿಸಿದ ದಾರಿಯಲ್ಲೇ ನೆಲದ ಹಾಸುಗಳನ್ನು ನೆಡಲಾಗಿದೆ. ” ನೆಲ ಹಾಸುವುದಕ್ಕಾಗಿ ಒಂದು ಸಣ್ಣ ಗಿಡವನ್ನೂ ಘಾಸಿಗೊಳಿಸಿಲ್ಲ” . ಎಂದು ನಳಿನಾ ಅವರು ಹೇಳುತ್ತಾರೆ. ಇಲ್ಲಿ ಹಲವಾರು ತೆಂಗಿನಮರಗಳಿವೆ . ಬಿದ್ದ ಗರಿಗಳನ್ನು ಕಾಯಿಗಳನ್ನು ಯಾರು ಒಯ್ಯುತ್ತಾರೆ? ಗೊತ್ತಿಲ್ಲ ಈ ನಳಿನಾ ಅಕ್ಕನಿಗೆ. ಒಡೆತನವನ್ನು ಸ್ಥಾಪಿಸುವ ಮನಸ್ಸಿಗೆ ಸದಾ ಇದೇ ಆತಂಕವಲ್ಲವೇ? ನನ್ನ ನೆಲದ ಫಲವನ್ನು ಯಾರೋ ಸಂಬಂಧವಿಲ್ಲದವರು ಉಣ್ಣುತ್ತಾರೆ. ಹಾಗೆ ಉಣ್ಣುವವರು ಕಳ್ಳರು. “ಯಾರೋ ತೊಗೊಂಡು ಹೋಗ್ತಾರೆ ಬಿಡಿ” ಎಂದು ಯಾರು ತಿಂದರೆ ತಾನೆ ಏನು? ಎನ್ನುವಂತೆ ನಳಿನಿಯವರು ತಣ್ಣಗೆ ಹೇಳಿದಾಗ ನನಗೆ ಆಶ್ಚರ್ಯ ವಾಯಿತು.

ಆಶ್ರಮದಂತಿರುವ ಈ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್ ವೆಲ್ತ್ ಸಾಹಿತ್ಯದ ಬೆಳವಣಿಗೆಗೆ ಕಾರಣರಾದವರು ಅದನ್ನು ಈಗ ಅವರ ಮಗನಾದ ಪ್ರೊ ಶ್ರೀನಾಥ್ ಅವರು ವಿಭಿನ್ನ ರೀತಿಯಲ್ಲಿ (ಅನುವಾದ ಸಾಹಿತ್ಯ ಕುರಿತಾದ ವಿಚಾರ ಸಂಕಿರಣಗಳು, ಕಮ್ಮಟಗಳು) ಮುನ್ನಡೆಸುತ್ತಿದ್ದಾರೆ. ಮತ್ತು ಬೆಳೆಸುತ್ತಿದ್ದಾರೆ . ಇನ್ನೂ ಬಹಳಷ್ಟು ಯೋಜನೆಗಳಿವೆ. ಶ್ರೀಮತಿ ನಳಿನಾ ಶ್ರೀನಾಥ್ ಅವರ ಬೆನ್ನಿಗಿದ್ದಾರೆ.

ಸಿ.ಡಿ.ಎನ್. ಅವರ ಪ್ರತಿಭಾವಂತ ಮಗ, ಅವರ ಬಹಳ ಭರವಸೆಯ ಮಗ ಸಂಜಯ ಅಕಾಲಿಕ ಮರಣಕ್ಕೆ ತುತ್ತಾದರು. ಅವರ ನೆನಪಿನಲ್ಲಿ ಒಂದು ವಿಚಾರ ಮಂಟಪ ಧ್ವನ್ಯಾಲೋಕದ ಹೊಸ್ತಿಲಲ್ಲೇ ನಮಗೆ ಎದುರಾಗುತ್ತದೆ. ಇಲ್ಲಿಯೇ ವಾಸವಾಗಿರುವ ಅವರ ಶ್ರೀಮತಿ ಜಯಶ್ರೀ ಅವರೂ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು. ಇಡಿಯ ಕುಟುಂಬವೇ ಇಂಗ್ಲಿಷ್ ಪ್ರಾಧ್ಯಾಪಕರುಗಳದ್ದು. English is our Business ಎಂದು ಸಿ.ಡಿ. ಎನ್ ಅವರು ತಮಾಷೆ ಮಾಡುತ್ತಿದ್ದರಂತೆ.

ಸಂಜಯ ವಿಚಾರ ಮಂಟಪದಲ್ಲಿ ನಾಟಕದ ತಾಲೀಮುಗಳು, ಕವಿ ಕಲಾವಿದರ ಸಂದರ್ಶನಗಳು ನಡೆಯುತ್ತವೆ. ಸಂಶೋಧಕರು ತಿಂಗಳು ಗಟ್ಟಲೆ ಇಲ್ಲಿ ಬಂದು ತಂಗುತ್ತಾರೆ, ಸಿನಿಮಾ ಚಿತ್ರಕಥೆ ಬರೆಯುವವರೂ ಬರುತ್ತಾರೆ. ಹಾಗೆ ಬಂದವರಿಗೆ ಉಳಿದುಕೊಳ್ಳಲು ಇಲ್ಲಿ ಸರಳವಾದ ಕೋಣೆಗಳಿವೆ. ಉಣಬಡಿಸುವ ಮೆಸ್ ಇದೆ. ಈ ವಿಷಯ ಹೆಚ್ಚಿನ ಮೈಸೂರಿಗರಿಗೇ ಗೊತ್ತಿಲ್ಲ.

This slideshow requires JavaScript.

ಹಾಸನದ ರಾಜಾರಾಯರು ಮತ್ತು ಆರ್ . ಕೆ. ನಾರಾಯಣ್ ಅವರ ಘಮಲು ಈ ಧ್ವನ್ಯಾಲೋಕದಲ್ಲಿ ಸುಳಿದಾಡುತ್ತದೆ. ನಿಜಿಮ್ ಎಜಕ್ಕಿಲ್, ಬಾಲಚಂದ್ರ ನೆಮಾಡೆ, ಕಂದಸ್ವಾಮಿ ಮುಂತಾದವರೆಲ್ಲಾ ಮುಂಬಯಿಯಿಂದ ಬಂದು ಹೋಗಿದ್ದಾರೆ. ಭಾರತದ ಎಲ್ಲಾ ಭಾಗಗಳಿಂದಲೂ ಜ್ಞಾನಾಕಾಂಕ್ಷಿಗಳಾದ ಜನ ಬರುತ್ತಾರೆ. ಇದರ ಹೆಸರೇ “center for Indian studies” ಎಂದು. ನಾನು ಹತ್ತು ವರುಷಗಳ ಹಿಂದೆ ಇಂಡಿಯನ್ ಇಂಗ್ಲಿಷ್ ಲೇಖಕಿಯರ ಬಗೆಗೆ ಸಂಶೋಧನೆಯನ್ನು ಕೈಗೊಂಡಾಗ ನನಗೆ ತೋರುಗಂಬವಾಗಿದ್ದು ಈ ಸಂಸ್ಥೆಯೇ !

ನಾವು ಧ್ವನ್ಯಾಲೋಕದೊಳಗೆ ಹೊಕ್ಕಾಗ ಇಲ್ಲಿನ ಮ್ಯಾನೇಜರ್ ಸುಭಾಷ್ ಅವರು ನಮ್ಮ ಲಗ್ಗೇಜುಗಳನ್ನು ಹೊತ್ತು ತಂದು ನಮ್ಮ ಕೋಣೆಗೆ ತಲಪಿಸಿದರು. ಮೆಟ್ಟಿಲು ಏರುತ್ತಿದ್ದಾಗ “ಬನ್ನಿ ಊಟ ಮಾಡಿ ” ಎಂಬ ದನಿ ಕೇಳಿಸಿತು. ಹಿಂದೆ ನಳಿನಾ ಅವರು ನಿಂತಿದ್ದರು. ಒಳ ಹೋದಾಗ ಕೂರಿಸಿ ಬಡಿಸಿದರು. ಯಾರೋ ಕ್ಯಾಂಟೀನಿನ ಪಾರುಪತ್ತೆಗಾರರಿರಬೇಕು ಎಂದು ಕೊಂಡೆ. ಅವರೇ ಈ ವಿದ್ಯಾಸಂಸ್ಥೆಯ ಒಡತಿ ಎಂದು ತಿಳಿಯಲಿಲ್ಲ. ಹಾಗೆ ಗುರುತಾದ ನಳಿನಾ‌ ಅವರು ಹಿರಿಯಕ್ಕನಂತೆ ಎಲ್ಲೆಲ್ಲಿ ಏನೇನೆಂದು ಅಕ್ಕಪಕ್ಕ ಪರಿಚಯಿಸಿದರು. ಎದುರಾದಾಗಲೆಲ್ಲ ಇವತ್ತೇನು ಮಾಡಿದಿರಿ? ಯಾರನ್ನ ಭೇಟಿಯಾದಿರಿ ? ಹೀಗೆ ಉಭಯಕುಶಲ. ಆಗಾಗ ಸಂಸಾರದ ಕಷ್ಟ ವ್ಯಸನ ಸಂತೋಷಗಳ ವಿನಿಮಯ. ಕಂಡಾಗಲೆಲ್ಲ ನಮ್ಮನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳಿ ಮುಜುಗರಗೊಳಿಸುತ್ತಿದ್ದರು. ಅವರೂ ಪ್ರವಾಸಿಗರ ತಂಗುವ ಕೋಣೆಯಲ್ಲೇ ಇರುವುದು. ಕೆಳಗಿನ ಮೆಸ್ ನಲ್ಲಿಯೇ ಊಟ. ಅವರ ಪತಿ ಶ್ರೀನಾಥ್ ಮಿತಭಾಷಿ. ಅಂತಹವರೂ ಕೂಡ ವಾಕ್ ಮಾಡುತ್ತಿದ್ದ ನಮ್ಮ ಬಳಿಗೆ ಬಂದು ನನ್ನ ‘ಸಂಗೀತದ ಒಸಗೆ’ ಪುಸ್ತಕದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಹೆಚ್ಚಾಗಿಯೇ ಆಡಿದರು. ಬರೆದು ಕೊಟ್ಟರು. ಬಿಡುಗಡೆಗೆ ಮುನ್ನವೇ ನನ್ನ ಪುಸ್ತಕಕ್ಕೆ ಬಂದ ಮೊತ್ತ ಮೊದಲ ಮಹತ್ವದ ಪ್ರತಿಕ್ರಿಯೆ ಅದು. ರಘುನಾಥ್, ಅವರ ಹಾಗೂ ಅವರ ತಂದೆಯ ಪುಸ್ತಕಗಳ ಬಗ್ಗೆ ಬರೆದಾಗ ಮೆಲುದನಿಯಲ್ಲೇ ಸಂತೋಷ ವ್ಯಕ್ತಪಡಿಸಿದರು. “ಇನ್ನೂ ಸ್ವಲ್ಪದಿನ ಇರಿ. ಈಗಲೇ ಯಾಕೆ ಹೋಗುತ್ತೀರ” ಗಂಭೀರ ಸ್ವಭಾವದ ಅವರಿಂದ ಈ ಮಾತುಗಳನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ( ಇವರೊಡನೆ ನಡೆಸಿದ ಸಂದರ್ಶನವನ್ನು ಪ್ರತ್ಯೇಕ ಹಂಚಿಕೊಳ್ಳುವೆ) ಅಲ್ಲಿ ನಾವು ತಂಗಿದ್ದು ಬರೋಬ್ಬರಿ ಹನ್ನೆರೆಡು ದಿನಗಳು. ಎಲ್ಲಿಯೂ ನಾವು ಒಂದು ಕಡೆ ಇಷ್ಟು ದಿನಗಳು ತಂಗಿದ ನೆನಪೇ ಇಲ್ಲ. ಕಾಲ ಹೇಗೆ ಹೋಯಿತೆಂದು ತಿಳಿಯಲೇ ಇಲ್ಲ. ಹೊರಡುವ ದಿನ ನಮಗೆ ಶ್ರೀನಾಥ್ ದಂಪತಿಯಿಂದ ಮೈಲಾರಿ ಹೊಟೆಲ್ ನಲ್ಲಿ ಆತಿಥ್ಯ. ತಾವೇ ಬಿಡಿಸಿದ ಒಂದು ಕಲಾತ್ಮಕ ಆಕರ್ಷಕ ಹೂದಾನಿಯನ್ನು ನನಗೆ ಉಡುಗೊರೆಯಾಗಿ ಇತ್ತರು

ನಾನು ಸಂಶೋಧನೆಗೆಂದು ಅನೇಕ ವಿಶ್ವವಿದ್ಯಾಲಯಗಳ ಮೆಟ್ಟಿಲು ಹತ್ತಿದ್ದೇನೆ, ಪ್ರವಾಸವೆಂದು ಅನೇಕೆ ಹೋಟೆಲ್ ವಸತಿ ಗೃಹಗಳಲ್ಲಿ ತಂಗಿದ್ದೇನೆ. ಎಲ್ಲಾ ಕಡೆ, ಒಂದು ಅಂತರವನ್ನಿಟ್ಟುಕೊಂಡು ವ್ಯಾಪಾರದ ಬಿಗುವಿನಲ್ಲೇ ಮಾತನಾಡಿಸಿದ್ದಾರೆ. ಆದರೆ ಧ್ವನ್ಯಾಲೋಕದ ಅನುಭವವೇ ಬೇರೆ. ಮೈಸೂರು ನನ್ನ ತವರೂರು. ನಮ್ಮ ಧ್ವನ್ಯಾಲೋಕದ ವಾಸ್ತವ್ಯ ಅದನ್ನು ಮತ್ತೆ ಮತ್ತೆ ನೆನಪುಮಾಡಿಕೊಟ್ಟಿತು. ಬಹಳ ಉತ್ಸಾಹೀ ಮಹಿಳೆ ಶ್ರೀಮತಿ ಜಯಂತಿ ರಾಮಚಂದ್ರನ್ ಎಂಬ ಅಪರೂಪದ ಗೆಳತಿ ಸಿಕ್ಕಿದ್ದು ಇಲ್ಲಿಯೇ. ಪ್ರಸನ್ನ ಸಂತೇ ಕಡೂರು ಅವರು ನಮ್ಮನ್ನು ನೋಡಲು ಬಂದಾಗ ನಾವೆಲ್ಲಾ ಒಟ್ಟಿಗೆ ಸೇರಿ ಸಾಹಿತ್ಯಕ ಹುಯಿಲೆಬ್ಬಿಸಿದ್ದು ಅವಿಸ್ಮರಣೀಯ.

ಅಲ್ಲಲ್ಲೇ ಮರಗಳ ಕೆಳಗೆ ಕಲ್ಲು ಬೆಂಚುಗಳು. ತಂಪಾದ ಗಾಳಿ, ಬೆಚ್ಚನೆ ಬಿಸಿಲು , ರಾತ್ರಿಹೊತ್ತು ತಲೆಯೆತ್ತಿ ನೋಡಿದರೆ ಚಂದ್ರತಾರೆಗಳು ! ಜೀರುಂಡೆ ಕೂಗು! ಪ್ರೀತಿಯಿಂದ ಎದುರುಗೊಳ್ಳುವ ಮಂದಿ! ಸುಖ ಎಂದರೆ ಮತ್ತೇನು?


  • ಗಿರಿಜಾ ಶಾಸ್ತ್ರೀ – ಇಂಗ್ಲಿಷ್ ಉಪನ್ಯಾಸಕರು,ಲೇಖಕರು, ಮುಂಬೈ 

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW