ಮಕ್ಕಳು ದೇವರ ಪ್ರತಿರೂಪ, ಮಕ್ಕಳಿಗೆ ನೈವೇದ್ಯ ಕೊಡುವುದರಿಂದ ಯಾವ ದೋಷವು ಇಲ್ಲ. ನೀನು ಚಿಂತಿಸಬೇಡ ಸುಮ್ಮನಿರು” ಎಂದು ತೆಲುಗಿನಲ್ಲಿ ತನ್ನ ಆ ವೃದ್ದ ಹೆಂಡತಿಗೆ ತಿಳಿ ಹೇಳಿದ. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ದೇವರ ಪ್ರತಿರೂಪ’, ತಪ್ಪದೆ ಮುಂದೆ ಓದಿ …
ನನ್ನ ಮಗ ಆಗಿನ್ನು ಹನ್ನೊಂದು ತಿಂಗಳ ಚಿಕ್ಕ ಪಾಪು. ನಮ್ಮ ಮನೆ ದೇವರಾದ ಎಲ್ಲೋಡಿನ ಆದಿನಾರಾಯಣ ಸ್ವಾಮಿ ಸನ್ನಿಧಿಗೆ ಅವನ ಮೊದಲ ಮುಡಿ ಕೊಡಲು ಹೋಗಿದ್ದೆವು. ನಮ್ಮ ಪಾಪು ಆಗ ಅಂಬೆಗಾಲಿಕ್ಕುತ್ತ ನಾಲ್ಕು ಕಾಲಿನಲ್ಲಿ ಅಂದರೆ ಮಂಡಿಯೂರಿ ಮುಂದಕ್ಕೆ ತೆವಳುತ್ತಿದ್ದ. ದೇವಾಲಯದ ತುಂಬೆಲ್ಲಾ ಓಡಾಡುತ್ತಿದ್ದ. ನನಗಂತೂ ಅವನನ್ನು ಹಿಡಿದು ಹಿಡಿದು ಸಾಕಾಗುತ್ತಿತ್ತು. ಅಂದು ಭಾನುವಾರ ಬೇರೆ. ವಿಪರೀತ ರಶ್ಶು. ಆಂಧ್ರದ ಕಡೆಯವರು ತುಂಬಾ ಜನ ಭಕ್ತರು ಆ ದೇವರಿಗೆ. ಅಲ್ಲಿನ ಒಂದು ವಿಶೇಷವೇನೆಂದರೆ ಅಲ್ಲಿ ಕೇವಲ ಭಾನುವಾರ ಮಾತ್ರ ಆದಿನಾರಾಯಣನಿಗೆ ಪೂಜೆ. ಬಾಕಿ ಉಳಿದ ದಿನಗಳಲ್ಲಿ ದೇವಸ್ಥಾನದ ಬಾಗಿಲು ಹಾಕಿರುತ್ತದೆ. ಹಾಗಾಗಿ ಭಾನುವಾರ ಒಂದೇ ದಿನ ದೇವರ ದರ್ಶನ ಸಿಗುವುದರಿಂದ ಅಂದು ನೂರಾರು ಜನ ಭಕ್ತರು ದೂರದ ಊರುಗಳಿಂದ ಆಗಮಿಸುತ್ತಾರೆ.

ಫೋಟೋ ಕೃಪೆ :google
ಮೊದಲು ಪಾಪುಗೆ ಮುಡಿ ತೆಗೆಸಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ದೇವರ ದರ್ಶನಕ್ಕೆ ಹೋದೆವು. ದೇವರ ದರ್ಶನಕ್ಕೆ ಹೋಗುವಾಗ ಅಕ್ಕಿ ಹಿಟ್ಟು ಹಾಗೂ ಬೆಲ್ಲದಿಂದ ಆರತಿ ತಂಬಿಟ್ಟು ತಯಾರಿಸಿಕೊಂಡು ಹೋಗಬೇಕು. ಅದನ್ನು ಅಲ್ಲಿಯೇ ದೇವಸ್ಥಾನದ ಆವರಣದಲ್ಲಿಯೇ ತಯಾರಿಸಬೇಕು. ತಂಬಿಟ್ಟಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಹೊಂದಿಸಿಕೊಂಡು ಹೋಗಿದ್ದೆವು. ನಮ್ಮ ಮಾವನವರು ಒಂದು ಮರದ ಕೆಳಗೆ ಬ್ಯಾಗಿನಿಂದ ಎಲ್ಲಾ ಸಾಮಗ್ರಿಗಳನ್ನು ತೆಗೆದು ಇಡುತ್ತಿದ್ದರು. ಅಷ್ಟರಲ್ಲಿ ಅದೆಲ್ಲಿಂದ ಬಂತೋ ಒಂದು ಕೋತಿ ಅಕ್ಕಿ ಹಿಟ್ಟಿನ ಕವರನ್ನು ಎತ್ತಿಕೊಂಡು ಛಂಗನೆ ಹಾರಿ ಮರ ಏರಿಬಿಟ್ಟಿತ್ತು. ನಮ್ಮ ಅದೃಷ್ಟಕ್ಕೆ ಬೆಲ್ಲದ ಕವರ್ ಮುಟ್ಟಿರಲಿಲ್ಲ. ಆಗ ನಮ್ಮ ಅತ್ತೆಯವರು ದೇವರಿಗೆ ಅಂತ ತಂದಿದ್ದು ದೇವರಿಗೆ ಸಮರ್ಪಣೆಯಾಗಿದೆ ಬಿಡ್ರಿ ಎಂದರು.
ಅಕ್ಕಿ ಹಿಟ್ಟಿಗೆ ಪರ್ಯಾಯವಾಗಿ ಕಡಲೆ ಹಿಟ್ಟು ಬಳಸಿ ಆರತಿ ತಂಬಿಟ್ಟು ಮಾಡಿದೆವು. ಪೂಜೆಯ ನಂತರ ಪ್ರಸಾದವಾಗಿ ಹಂಚಲು ತಂದಿದ್ದ ಕಡಲೆ ಹಿಟ್ಟನ್ನು ಅನಿವಾರ್ಯವಾಗಿ ಬಳಸಬೇಕಾಯಿತು.ಒಟ್ಟಿನಲ್ಲಿ ಆರತಿ ತಂಬಿಟ್ಟು ರೆಡಿ ಮಾಡಿಕೊಂಡು ಇನ್ನೊಂದು ತಟ್ಟೆಯಲ್ಲಿ ಪೂಜಾ ಸಾಮಗ್ರಿಗಳನ್ನು ಜೋಡಿಸಿಕೊಂಡು ದೇವಸ್ಥಾನದ ಪ್ರಾಂಗಣಕ್ಕೆ ಪ್ರವೇಶಿಸಿದೆವು. ಅಷ್ಟೊತ್ತಿಗಾಗಲೇ ದೇವಸ್ಥಾನದ ಒಳಗೆ ತುಂಬಾ ಜನ ತುಂಬಿಕೊಂಡಿದ್ದರು. ಅಂದು ಯಾರೋ ಆಂಧ್ರದ ಹಿಂದೂಪುರ ಕಡೆಯ ವೃದ್ಧ ದಂಪತಿಗಳು ದೇವರಿಗೆ ವಿಶೇಷ ಪೂಜೆ ಏರ್ಪಡಿಸಿದ್ದರು.
ದೇವರಿಗೆ ನೈವೇದ್ಯವಾಗಿ ಏಳೆಂಟು ಬಗೆಯ ಹಣ್ಣುಗಳನ್ನು ತಟ್ಟೆಯಲ್ಲಿ ಜೋಡಿಸಿಕೊಂಡು ಕುಳಿತಿದ್ದರು. ಪೂಜೆಯು ಸಾಂಗವಾಗಿ ನೆರವೇರುತ್ತಿತ್ತು. ನಾವೂ ಒಂದು ಕಡೆ ಜಾಗ ಮಾಡಿಕೊಂಡು ಕುಳಿತೆವು.ನನ್ನ ಮಗನನ್ನು ಕೆಳಕ್ಕೆ ಬಿಟ್ಟಿದ್ದೇ ತಡ ಸೀದ ಆ ಹಣ್ಣುಗಳಿದ್ದ ತಟ್ಟೆಯ ಬಳಿ ಅಂಬೆಗಾಲಿಕ್ಕುತ್ತಾ ಹೋದ. ಹೋದವನೇ ಹಣ್ಣಿನ ತಟ್ಟೆಗೆ ಕೈ ಹಾಕಿದ. ಆಗ ಅಲ್ಲೇ ಇದ್ದ ಹಿರಿಯರು ಇವನನ್ನು ನೋಡಿ ಒಂದೆರಡು ದಾಳಿಂಬೆ ಕಾಳುಗಳನ್ನು ಬಿಡಿಸಿ ಇವನ ಕೈಗಿತ್ತರು.ಅಷ್ಟರಲ್ಲಿ ನಾನು ಹೋಗಿ ಅವನನ್ನು ಎತ್ತಿಕೊಂಡು ಬಂದೆ.

ಫೋಟೋ ಕೃಪೆ :google
ಆ ವೃಧ್ಧರ ಹೆಂಡತಿ ತೆಲುಗಿನಲ್ಲಿ ತನ್ನ ಗಂಡನನ್ನು ಬೈಯುತ್ತಿದ್ದಳು. ದೇವರಿಗೆ ಇಟ್ಟಿರುವ ನೈವೇದ್ಯದಲ್ಲಿ ಆ ರೀತಿ ಎಲ್ಲಾ ಕೊಡಬಾರದು, ಎಂಜಲು ಮಾಡಿದಂತೆ ಆಗುವುದಿಲ್ಲವೇ ಎಂದು ಗಂಡನನ್ನು ಗದರುತ್ತಿದ್ದಳು. ನನಗೆ ಅವರ ಭಾಷೆ ಅರ್ಥವಾಗುತ್ತಿತ್ತು. ಆ ವೃದ್ಧರು ಏನೊಂದು ಮಾತನಾಡದೆ ಮೌನವಾಗಿದ್ದರು. ಮಕ್ಕಳಿಗೆ ಬಣ್ಣ ಬಣ್ಣದ ವಸ್ತುಗಳೆಂದರೆ ಎಲ್ಲಿಲ್ಲದ ಆಕರ್ಷಣೆ. ಹಾಗಾಗಿ ನನ್ನ ಮಗನಿಗೆ ಆ ಬಣ್ಣ ಬಣ್ಣದ ಹಣ್ಣಿನ ತಟ್ಟೆಯ ಮೇಲೆ ಗಮನ ಕೇಂದ್ರೀಕೃತವಾಗಿತ್ತು. ಅವನಿಗೆ ಬುದ್ಧಿ ಹೇಳಿ ಹೊಡೆದು ಬಡಿದು ಮಾಡಲು ಪಾಪ ಇನ್ನೂ ಚಿಕ್ಕವನು. ಹಾಗಾಗಿ ನಾನು ಏನು ಮಾಡಲಾಗದೆ ಸುಮ್ಮನಿದ್ದೆ. ಆ ವೃದ್ಧರು ತಿನ್ನಲು ಕೊಟ್ಟಿದ್ದ ನಾಲ್ಕಾರು ದಾಳಿಂಬೆ ಕಾಳುಗಳು ಮುಗಿಯುತ್ತಿದ್ದಂತೆ ಮತ್ತೊಮ್ಮೆ ಹಣ್ಣಿನ ತಟ್ಟೆಗೆ ಮುಗಿ ಬಿದ್ದಿದ್ದ. ನಾನು ತಕ್ಷಣ ಎಳೆದುಕೊಳ್ಳಬೇಕೆನಿಸುವಷ್ಟರಲ್ಲಿ ತಟ್ಟೆಗೆ ಕೈ ಹಾಕಿದ್ದ. ಈ ಸಾರಿ ತಾತನವರು ನಮ್ಮ ಪಾಪುವಿಗೆ ಒಂದೆರಡು ದ್ರಾಕ್ಷಿ ಹಣ್ಣುಗಳನ್ನು ಬಿಡಿಸಿಕೊಟ್ಟರು. ತಾತನ ಹೆಂಡತಿಯ ಮುಖ ನೋಡಲಾಗುತ್ತಿಲ್ಲ. ಏಮಂಡಿ……ಏಮಂಡಿ ಇದಿ ( ಏನ್ರೀ…. ಏನ್ರೀ ಇದು)ಎನ್ನುತ್ತಾ ಅಲವತ್ತು ಕೊಳ್ಳುತ್ತಿದ್ದಳು. ಆಗ ತಾತ ” ಮಕ್ಕಳು ದೇವರ ಪ್ರತಿರೂಪ, ಮಕ್ಕಳಿಗೆ ನೈವೇದ್ಯ ಕೊಡುವುದರಿಂದ ಯಾವ ದೋಷವು ಇಲ್ಲ. ನೀನು ಚಿಂತಿಸಬೇಡ ಸುಮ್ಮನಿರು” ಎಂದು ತೆಲುಗಿನಲ್ಲಿ ತನ್ನ ಹೆಂಡತಿಗೆ ತಿಳಿ ಹೇಳುತ್ತಿದ್ದರು. ಆ ವೃದ್ಧರು ಹೇಳಿದ ಮಾತುಗಳು ಅದೆಷ್ಟು ಸತ್ಯವಾಗಿದ್ದವು.
ನಿಜ…… ಮಕ್ಕಳು ದೇವರ ಪ್ರತಿರೂಪ. ಯಾವುದೇ ಭೇದ ಭಾವ ಎಣಿಸದ , ಕಪಟತನ ಅರಿಯದ, ಮುಗ್ಧತೆಯೇ ಮೈವೆತ್ತಂತೆ ಇರುವ ಮಕ್ಕಳು ದೇವರಿಗೆ ಸಮಾನರಲ್ಲದೆ ಇನ್ನೇನು ? ಅದನ್ನೇ ಆ ವೃದ್ಧರು ತಮ್ಮ ಅನುಭವದ ಮೂಲಕ ಕಂಡುಕೊಂಡ ಸತ್ಯವನ್ನು ಹೆಂಡತಿಗೆ ಹೇಳುತ್ತಿದ್ದರು.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ಸರ್ವಮಂಗಳ ಜಯರಾಂ – ಶಿಕ್ಷಕಿ. ಗೌರಿಬಿದನೂರು.
