ಪೂರ್ಣಮಿ, ಅಮಾವಾಸ್ಯೆ ಬಂತೆಂದರೆ ಮನೆಯ ಮೇಲೆ ಮುಂಜಾನೆಯೇ ಹೋಮ, ಹವನ ಮಾಡುತ್ತಿದ್ದರು. ತೀರ ಪಕ್ಕದಲ್ಲೇ ನಮ್ಮ ಮನೆ ಇದ್ದಿದ್ದರಿಂದ ಎಲ್ಲಾ ಸ್ಪಷ್ಟವಾಗಿ ಅಲ್ಲಿನ ಆಗು ಹೋಗುಗಳು ನಮಗೆ ಕಾಣುತ್ತಿದ್ದವು. ಕೆಳಗಡೆ ಮನೆಯಲ್ಲಿದ್ದ ಆಂಟಿ ಯಾವತ್ತು ಆ ಮನೆಗೆ ಹೋಗುತ್ತಿರಲಿಲ್ಲ. ಹೋದರೂ ಮೇಲಿನ ಮನೆ ಹೆಂಗಸನ್ನು ಮಾತನಾಡಿಸುತ್ತಿರಲಿಲ್ಲ. ಮುಂದೇನಾಯಿತು, ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಅತಿಮಾನುಷ ಶಕ್ತಿಯ ಅನುಭವ’, ತಪ್ಪದೆ ಮುಂದೆ ಓದಿ …
ಖಂಡಿತವಾಗಿಯೂ ಮನುಷ್ಯನಿಗೆ ಮೀರಿದ ಒಂದು ಅಂತಃ ಶಕ್ತಿ ಈ ಭೂಮಿ ಮೇಲೆ ಇದ್ದೇ ಇದೆ ಎಂದು ಹೇಳಬಹುದು. ಅದು ಧನಾತ್ಮಕವಾಗಿಯೂ ಇರಬಹುದು, ಋಣಾತ್ಮಕವಾಗಿಯೂ ಇರಬಹುದು. ಇದು ಸಮಯ ಸಂದರ್ಭಾನುಸಾರ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಾರಿ ಅನುಭವಕ್ಕೆ ಬಂದೇ ಇರುತ್ತದೆ. “ಅತಿ ಮಾನುಷ ಶಕ್ತಿಯ ಅನುಭವ” ವಿಷಯ ಕೇಳಿದರೇನೇ ಒಂದು ರೀತಿಯ ಭಯ, ಭಕ್ತಿ ಹಾಗೂ ರೋಮಾಂಚನದ ಅನುಭವ ಆಗುವಂತಹ ವಿಚಾರ. ಈ ವಿಷಯದಲ್ಲಿ ನನಗಾದ ಒಂದೆರಡು ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ನನ್ನ ನಾದಿನಿಗೆ ಒಂಬತ್ತನೇ ತಿಂಗಳಲ್ಲಿ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದೆವು. ಪದ್ಧತಿಯಂತೆ ಚೊಚ್ಚಲ ಬಾಣಂತನವನ್ನು ತವರು ಮನೆಯವರೇ ಮಾಡ ಬೇಕಾಗಿರುವುದರಿಂದ ನಾವು ಅವಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದೆವು. ನನ್ನ ನಾದಿನಿಯ ಅತ್ತೆ ಅವಳನ್ನು ತುಂಬಾ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಅವರಿಗೆ ತಮ್ಮ ಸೊಸೆಯನ್ನು ತವರಿಗೆ ಕಳಿಸಲು ಸ್ವಲ್ಪವೂ ಇಷ್ಟ ಇರಲಿಲ್ಲ. ಏಕೆಂದರೆ ಅವರಿಗೆ ತಮ್ಮ ವಂಶದ ಕುಡಿಯನ್ನು ಹೊತ್ತ ಸೊಸೆಯ ಆರೋಗ್ಯ ತುಂಬಾ ಮುಖ್ಯವಾಗಿತ್ತು.

ಫೋಟೋ ಕೃಪೆ : google
ಇಲ್ಲೇ (ಬೆಂಗಳೂರಿನಲ್ಲಿ) ಎಲ್ಲಾ ಸೌಲಭ್ಯ ಇರುವ ಹಾಸ್ಪಿಟಲ್ ಗಳಿವೆ, ಇಲ್ಲೇ ಹೆರಿಗೆಯಾಗಲಿ ಎಂಬುದು ಅವರ ಆಸೆ. ಆದರೆ ನಮಗೆ ನಮ್ಮ ಮನೆ ಮಗಳ ಮೊದಲ ಬಾಣಂತನ ನಮ್ಮ ಮನೆಯಲ್ಲಿ ಆಗಬೇಕೆಂಬ ಬಯಕೆ. ಯಾಕೆಂದರೆ ಮುಂದೊಂದು ದಿನ ಅದೇ ವಿಷಯವನ್ನು ಅವರ ಅತ್ತೆ ಆಡಿಕೊಳ್ಳಬಾರದು. ಈಗೇನೋ ಎಲ್ಲ ಚೆನ್ನಾಗಿದೆ, ಯಾವ ಮಾತೂ ಬರುವುದಿಲ್ಲ. ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತೆ. ಹೊಸ ಹೆಂಡತಿಯನ್ನು ಕಸ ಗುಡಿಸಲು ಬಿಡುವುದಿಲ್ಲ ಎಂಬಂತೆ. ಅದಕ್ಕೆಂತಲೇ ಎಷ್ಟೇ ಕಷ್ಟ ಆದರೂ ಚಿಂತೆ ಇಲ್ಲ ಎಂದು ನಾವೇ ಮುಂದೆ ನಿಂತು ಅವಳನ್ನು ಕರೆತಂದೆವು. ಹೆರಿಗೆಯ ದಿನ ಸಮೀಪಿಸುತ್ತಿದ್ದಂತೆ ಅವಳನ್ನು ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿದೆವು. ಅವಳನ್ನು ಪರೀಕ್ಷಿಸಿದ ವೈದ್ಯರು ಸಹಜ ಹೆರಿಗೆ ಆಗುತ್ತದೆ ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. ಆದರೆ ಅವಳಿಗಿಂತ ಹೆಚ್ಚಾಗಿ ನನಗೆ ಆತಂಕ ಶುರುವಾಗಿತ್ತು. ಹೆರಿಗೆ ನೋವು ತಾಳಲಾರದೆ ಅವಳು ಒದ್ದಾಡುತ್ತಿದ್ದಳು.ಅವಳ ಯಾತನೆ ನೋಡಲಾರದೆ ಕಣ್ಣುಮುಚ್ಚಿ ಒಂದೆರಡು ಗಳಿಗೆ ನಮ್ಮ ಮನೆ ದೇವರನ್ನು ಮನದಲ್ಲಿ ನೆನೆದು, ದೇವರೇ ನಿನ್ನ ಇರುವಿಕೆ ನಿಜವಾದರೆ, ಇವಳನ್ನು ಕಷ್ಟದಿಂದ ಪಾರು ಮಾಡು ತಂದೆ ಎಂದು ಬೇಡಿಕೊಂಡೆ. ಅಷ್ಟರಲ್ಲಿ ನವಜಾತ ಶಿಶುವಿನ ಸುಶ್ರಾವ್ಯ ಅಳುವಿನ ದನಿ ಕಿವಿ ತುಂಬಿತು. ಮೇಡಂ ಕಣ್ಬಿಡಿ… ನಿಮಗೆ ಅಳಿಯ ಹುಟ್ಟಿದ್ದಾನೆ ಎಂದರು ನರ್ಸ್. ಅಂದು ನಡೆದ ಇದೊಂದೇ ಘಟನೆಯಿಂದ ದೇವರ ಅಸ್ಮಿತೆಯನ್ನು ನಾನು ಇಂದಿಗೂ ನಂಬುತ್ತೇನೆ.
ಒಮ್ಮೆ ಬೇಸಿಗೆ ರಜೆಯಲ್ಲಿ ಕೇರಳದ ತಿರುವನಂತಪುರಂಗೆ ಕುಟುಂಬ ಸಮೇತ ಪ್ರವಾಸ ಹೋಗಿದ್ದೆವು. ಸುತ್ತಮುತ್ತ ಇರುವ ಸ್ಥಳಗಳನ್ನು ನೋಡಿಕೊಂಡು ರಾತ್ರಿ ಸುಮಾರು 2 ಗಂಟೆಗೆ ಅಲ್ಲಿಗೆ ಹೋದೆವು. ಅಲ್ಲಿ ದೇವಸ್ಥಾನದ ಆವರಣದಲ್ಲೇ ಇರುವ ಕಲ್ಯಾಣಿಯಲ್ಲಿ ಸ್ನಾನ ಮುಗಿಸಿಕೊಂಡು ದೇವರ ದರ್ಶನಕ್ಕೆ ಹೋಗುವ ವೇಳೆಗೆ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಅರ್ಲಿ ಮಾರ್ನಿಂಗ್ ಆಗಿದ್ದರಿಂದ ರಷ್ ಕಡಿಮೆ ಇತ್ತು. ಭಕ್ತಾದಿಗಳು ತುಂಬಾ ಕಡಿಮೆ ಇದ್ದಿದ್ದರಿಂದ ಸಾವಕಾಶವಾಗಿ ದೇವರ ದರ್ಶನ ಆಯಿತು. ಯಾವುದೇ ಗಲಾಟೆ ಗದ್ದಲ ಇಲ್ಲದೆ ಪ್ರಶಾಂತವಾಗಿ ಅನಂತ ಪದ್ಮನಾಭನ ವಿಗ್ರಹವನ್ನು ಕಣ್ತುಂಬಿ ಕೊಂಡೆವು. ಬೃಹತ್ತಾದ ಏಕ ಶಿಲೆಯಲ್ಲಿ ನಿರ್ಮಿಸಲಾದ ಅನಂತ ಪದ್ಮನಾಭನು ಏಳೆಡೆ ಸರ್ಪವನ್ನೇ ಹಾಸಿಗೆಯನ್ನಾಗಿಸಿ ಕೊಂಡು ಮಲಗಿ ನಿದ್ರಿಸುತ್ತಿರುವ ನಿರ್ಮಲ ಮುಖ ಭಾವದ ಶೇಷ ಶಯನನನ್ನು ಕಂಡು ಒಂದರೆ ಗಳಿಗೆ ಎದೆ ನಡುಗಿತು. ಮೈಯೆಲ್ಲಾ ರೋಮಾಂಚನವಾಯಿತು. ಪ್ರತ್ಯಕ್ಷವಾಗಿ ಆ ದೇವರು ನನ್ನ ಕಣ್ಮುಂದೆ ಬಂದಂತೆ ಭಾಸವಾಗಿ ಬೆವೆತುಬಿಟ್ಟೆ. ಇಷ್ಟಕ್ಕೆ ಮುಂಚೆ ಎಂದೂ ಈ ರೀತಿಯ ಅನುಭವ ಆಗಿರಲಿಲ್ಲ. ದೇವರ ಸನ್ನಿಧಿಯಲ್ಲಿ ಇದೊಂದು ಅದ್ಭುತ ಅನುಭವ ನನ್ನದು.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಗೌರಿಬಿದನೂರಿನ ಒಂದು ಬಡಾವಣೆಯಲ್ಲಿ ನಾವು ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು. ಆ ಏರಿಯ ನಮಗೆ ತುಂಬಾ ಹೊಸದು. ಓನರ್ ಕೆಳಗಿನ ಮನೆಯಲ್ಲಿದ್ದರು. ನಾವು ಮೇಲಿನ ಮನೆಯಲ್ಲಿ ಇದ್ದೆವು. ನಮ್ಮ ಪಕ್ಕದ ಮನೆಯ ಆಂಟಿ ನನ್ನನ್ನು ನೋಡಿದಾಗಲೆಲ್ಲ ನಗುತ್ತಾ ಮಾತನಾಡಿಸುತ್ತಿದ್ದರು. ನಾನು ಸಹ ನಗುತ್ತಾ ಮಾತನಾಡಿಸುತ್ತಿದ್ದೆ. ಆ ಮನೆಗೆ ಯಾರ್ಯಾರೋ ಬಹಳ ಜನ ಬಂದು ಹೋಗುತ್ತಿದ್ದರು. ಅವರ ಮನೆ ಮೇಲಿನ ಮನೆಯಲ್ಲಿ ಒಬ್ಬ ಹೆಂಗಸು ವಾಸವಿದ್ದರು. ನೋಡಲು ತುಂಬಾ ಸುಂದರವಾದ ಮಹಿಳೆ. ಅವರು ಯಾವುದಕ್ಕೂ ಕೆಳಗಡೆ ಇಳಿದು ಬರುತ್ತಿರಲಿಲ್ಲ. ಎಲ್ಲವನ್ನು ಆ ಮನೆಯ ಓನರ್ ಅಂಕಲ್ ಮೇಲಕ್ಕೆ ಸಪ್ಲೈ ಮಾಡುತ್ತಿದ್ದರು. ಒಟ್ಟಿನಲ್ಲಿ ನಮಗೆ ಆ ಮನೆಯು ಒಂದು ರೀತಿಯ ನಿಗೂಢ ರಹಸ್ಯವಾಗಿತ್ತು.

ಫೋಟೋ ಕೃಪೆ : google
ಇನ್ನು ಪೂರ್ಣಮಿ, ಅಮಾವಾಸ್ಯೆ ಬಂತೆಂದರೆ ಮನೆಯ ಮೇಲೆ ಮುಂಜಾನೆಯೇ ಹೋಮ, ಹವನ ಮಾಡುತ್ತಿದ್ದರು. ಆ ಮನೆಯ ಓನರ್ ಅಂಕಲ್ ಮಹಾನ್ ಮಂತ್ರವಾದಿಯಂತೆ ಕಾಣಿಸುತ್ತಿದ್ದ. ಆತನನ್ನು ನೋಡಿದರೆ ಒಂದು ರೀತಿಯ ಭಯ ಉಂಟಾಗುತ್ತಿತ್ತು. ಬಾಲನಾಗಮ್ಮ ಸಿನಿಮಾದ ಮಂತ್ರವಾದಿಯಂತೆ ಆತನು ಕಾಳಿ ಮಾತೆಯ ಆರಾಧಕನಾಗಿದ್ದ. ವಿಶೇಷ ದಿನಗಳಲ್ಲಿ ಆತನು ನಡೆಸುತ್ತಿದ್ದ ಹೋಮ ಯಜ್ಞಗಳಿಗೆ ಮೇಲಿನ ಮನೆಯ ಹೆಂಗಸು ಸಹಾಯಕಿ ಆಗಿದ್ದಳು. ತೀರ ಪಕ್ಕದಲ್ಲೇ ನಮ್ಮ ಮನೆ ಇದ್ದಿದ್ದರಿಂದ ಎಲ್ಲಾ ಸ್ಪಷ್ಟವಾಗಿ ಅಲ್ಲಿನ ಆಗು ಹೋಗುಗಳು ನಮಗೆ ಕಾಣುತ್ತಿದ್ದವು. ಕೆಳಗಡೆ ಮನೆಯಲ್ಲಿದ್ದ ಆಂಟಿ ಯಾವತ್ತು ಮೇಲಕ್ಕೆ ಹೋಗುತ್ತಿರಲಿಲ್ಲ. ಹೋದರೂ ಮೇಲಿನ ಮನೆ ಹೆಂಗಸನ್ನು ಮಾತನಾಡಿಸುತ್ತಿರಲಿಲ್ಲ. ಇಷ್ಟರಿಂದಲೇ ತಿಳಿಯುತ್ತಿತ್ತು ಮೇಲಿನ ಮನೆ ಆಂಟಿ ಓನರ್ ಅಂಕಲ್ನ ಸೆಕೆಂಡ್ ಸೆಟಪ್ ಇರಬಹುದು ಎಂದು. ಆಕೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆದರೆ ಕೆಳಗಿನ ಮನೆ ಆಂಟಿ ನಮ್ಮೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದರು. ಒಮ್ಮೆ ವರಮಹಾಲಕ್ಷ್ಮಿ ಹಬ್ಬಕ್ಕೆ ಕುಂಕುಮಕ್ಕೆ ಕರೆಯಲು ಅವರ ಮನೆಗೆ ಹೋದೆ. ಅವರು ನಗುತ್ತಾ ನನ್ನನ್ನು ಸ್ವಾಗತಿಸುತ್ತಾ ಒಳ ಕರೆದು ಕುಳಿತುಕೊಳ್ಳಲು ಹೇಳಿ ಒಳಗೆ ಹೋದರು. ಅವರ ಮನೆಯ ಹಾಲ್ ನಲ್ಲಿ ದೊಡ್ಡದೊಂದು ಪರದೆ ಹಾಕಿದ್ದರು. ಕುತೂಹಲದಿಂದ ನಾನು ಪರದೆ ಸರಿಸಿದೆ. ಸುಮಾರು ಹತ್ತು ಹನ್ನೆರಡು ಅಡಿಯ ಕಾಳಿ ವಿಗ್ರಹವನ್ನು ನೋಡಿ ಹೃದಯವೇ ಬಾಯಿಗೆ ಬಂದಂತೆ ಆಯಿತು. ವಿಗ್ರಹದ ನೆತ್ತಿ ಮೇಲಿಂದ ನೀಲಿ ಬಣ್ಣದ ಬಲ್ಬ್ ನಿಂದ ಚೆಲ್ಲಿದ ಬೆಳಕಿನಲ್ಲಿ ಮಹಾಕಾಳಿ ನಾಲಿಗೆ ಹೊರ ಚಾಚಿ ಭಯಂಕರವಾಗಿ ನೋಡುತ್ತಿರುವ ದೃಶ್ಯ ನನಗೆ ಕಾಲುಗಳಲ್ಲಿ ನಡುಕ ಉಂಟಾಯಿತು, ಅಷ್ಟರೊಳಗೆ ಆ ಮನೆಯ ಆಂಟಿ ಬಂದು ಕುಂಕುಮ ಕೊಟ್ಟರು.ಕುಂಕುಮ ತೆಗೆದುಕೊಂಡು ಎದ್ದೆನೋ ಬಿದ್ದೆನೋ ಎಂಬಂತೆ ಬೇಗಬೇಗನೆ ಮನೆಗೆ ಬಂದು ಬಿಟ್ಟೆ. ನಂತರ ಮಾರನೇ ದಿನ ನಮ್ಮ ಓನರ್ ಆಂಟಿಗೆ ಈ ವಿಷಯ ತಿಳಿಸಿದೆ.
ಆಗ ಅವರು ಅಯ್ಯೋ ಅವರ ಮನೆಗೆ ಯಾಕ್ ಹೋದ್ರಿ, ಅದು ಮಂತ್ರವಾದಿಗಳ ಮನೆ. ನಾವು ಯಾರು ಹೋಗಲ್ಲ. ಅವರು ಕಾಳಿಮಾತೆಯ ಆರಾಧಕರು. ಮಾಟ ಮಂತ್ರ ಎಲ್ಲ ಮಾಡ್ತಾರೆ. ಹೀಗೇ ಒಮ್ಮೆ ಒಬ್ಬ ಹೆಂಗಸು ತನ್ನ ಗಂಡ ಇನ್ನೊಬ್ಬಳನ್ನು ಇಟ್ಟುಕೊಂಡಿದ್ದಾನೆ, ಅವರಿಗೂ ಅವಳಿಗೂ ಆಗಿ ಬರದಂತೆ ಏನಾದರೂ ಮಾಟ ಮಾಡಿಸಿ ಎಂದು ಬಂದಿದ್ದ ಹೆಂಗಸನ್ನೇ ಅವಳು ತುಂಬಾ ಚೆನ್ನಾಗಿ ಇದ್ದಿದ್ದರಿಂದ ಅವಳನ್ನು ವಶೀಕರಣ ಮಾಡಿಕೊಂಡು, ಅವಳಿಗೆ ತನ್ನ ಗಂಡ ಮಕ್ಕಳ ನೆನಪಾಗದಂತೆ ಮಾಡಿ ಇಲ್ಲೇ ಮೇಲಿನ ಮನೆಯಲ್ಲಿ ಅವಳನ್ನು ಇಟ್ಟುಕೊಂಡಿದ್ದಾನೆ. ಅವರ ಮೇಲಿನ ಮನೆಯಲ್ಲಿ ಇದ್ದಾಳೆ ನೋಡಿ ಆ ಹೆಂಗಸು ಎಂದು ಹೇಳಿದರು. ನನಗೆ ಬಿಗ್ ಶಾಕ್, ಇಂತಹ ಕಾಲದಲ್ಲೂ ಮಾಟ,ಮಂತ್ರ , ವಶೀಕರಣ ಇವೆಲ್ಲ ಇವೆಯಾ ಎಂದು ನನ್ನ ಕಣ್ಣನ್ನು ನಾನೇ ನಂಬದಾದೆ. ಆದರೆ ಇದೆಲ್ಲ ಸತ್ಯವೇ ಆಗಿತ್ತು. ಇಂತಹ ನಕಾರಾತ್ಮಕ ಅತಿ ಮಾನುಷ ಶಕ್ತಿ ಇದೆ ಎಂದು ಗೊತ್ತಾಗಿದ್ದು ಅಂದೇ. ಅಂದಿನಿಂದ ಅಪ್ಪಿ ತಪ್ಪಿಯೂ ಯಾವತ್ತೂ ನಾನು ಅವರ ಮನೆ ಕಡೆ ತಲೆ ಹಾಕಲಿಲ್ಲ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ‘ಚೌಚೌ ಬಾತ್’ ಅಂಕಣ (ಭಾಗ – ೨೫)- ‘ವಿಚಿತ್ರ ಬಾಲಕ’
- ‘ಚೌಚೌ ಬಾತ್’ ಅಂಕಣ (ಭಾಗ – ೨೬)- ದೆಹಲಿಯ ಸುತ್ತಮುತ್ತ
- ಸರ್ವಮಂಗಳ ಜಯರಾಮ್ – ಶಿಕ್ಷಕಿ. ಗೌರಿಬಿದನೂರು.
