ವಿಳಾಸ ತಪ್ಪಿದ ಪತ್ರ

ವಿಷಯ ಹೇಳಿದರೆ ತಾನೆ ಗೊತ್ತಾಗೋದು ಅಂತ ಪುನಃ ಪ್ರಶ್ನಿಸಿದಳು. ಆಗ ಮೌನ ಮುರಿದು . ಪಲ್ಲವಿಗೆ ಯಾರೋ ಬೆಂಗಳೂರಿನಿಂದ ಪತ್ರ ಬರೆದಿದ್ದಾರೆ, ಯಾರು? ಯಾಕೆ ಬರೆದರು ಅಂತ ಗೊತ್ತಾಗ್ತಿಲ್ಲ ಅಂತ ಮುಖ ಸಪ್ಪಗೆ ಮಾಡಿ ಹೇಳಿದ.ಶರಣಗೌಡ ಬಿ.ಪಾಟೀಲ ಅವರ ಕುತೂಹಲಕಾರಿ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಅವತ್ತು ಬಸವರಾಜ ದೊಡ್ಡ ಆಲದ ಮರದ ಕೆಳಗೆ ನಾಲ್ಕು ಜನರ ಜೊತೆ ದೇಶಾವರಿ ಮಾತಾಡುತ್ತ ಕುಳಿತಾಗ ಪೋಸ್ಟಮನ್ ಪದ್ಮಣ್ಣ ಅವಸರವಾಗಿ ಬಂದು ನಿನಗೊಂದು ಪತ್ರ ಬಂದಿದೆ ಅಂತ ಕೈಗಿಟ್ಟ.

“ನನಗ್ಯಾವ ಪತ್ರ ಬರ್ತಾದೆ? ನನಗೆ ಪತ್ರ ಬರೆಯೋರು ಯಾರಿದ್ದಾರೆ, ಯಾವ ಬೀಗರು ನೆಂಟರು ಸಂಬಂಧಿಕರೂ ಇಲ್ಲ ಅಂತ ಗಾಬರಿಯಾಗಿ ಆ ಪತ್ರದ ಮೇಲೆ ಕಣ್ಣಾಡಿಸ ತೊಡಗಿದ. ಪತ್ರ ಬಂದಿವೆ ಅಂದ್ರೆ ಯಾಕೆ ಗಾಬರಿ ? ಯಾರದೋ ಇದ್ದಿರಬೇಕು ಅಂತ ಪಕ್ಕದಲ್ಲಿ ಕುಳಿತ ಚನ್ನವೀರ ಹೇಳಿದಾಗ ಪತ್ರ ಬಂದಿದ್ದು ಮುಖ್ಯವಲ್ಲ ಇಲ್ಲಿಯ ತನಕ ನನಗ್ಯಾವ ಪತ್ರವೂ ಬಂದಿಲ್ಲ ಇದೇ ಮೊದಲ ಪತ್ರ ಅಂತ ವಾಸ್ತವ ಹೇಳಿದ.

” ಈ ಪತ್ರವೂ ಇವನ ಹೆಸರಿಗೂ ಬಂದುದ್ದಲ್ಲ ಮಗಳು ಪಲ್ಲವಿ ಹೆಸರಿಗೆ ಬಂದಿದ್ದು ಅಂತ ಪೋಸ್ಟ ಮ್ಯಾನ್ ಹೇಳಿದಾಗ

“ಮನೆಯ ಯಜಮಾನ ಇವನೇ ಇದ್ದ ಮೇಲೆ ಮಗಳ ಹೆಸರಿಗೆ ಯಾಕೆ ಬಂದಿದೆ?” ಅಂತ ಸೋಮರಾಯ ಅನುಮಾನ ಹೊರ ಹಾಕಿ ಪ್ರಶ್ನಿಸಿದ.

” ಬಹುಶಃ ಪಲ್ಲವಿಯ ಗೆಳತಿಯರು ಯಾರೋ ಪತ್ರ ಬರೆದಿರಬೇಕು ಅದಕ್ಕೆ ಇವನ ಹೆಸರಿನ ಬದಲಾಗಿ ಅವಳ ಹೆಸರು ಬರೆದಿದ್ದಾರೆ ” ಅಂತ ನಿಂಗಪ್ಪ ಸಮಜಾಯಿಸಿ ನೀಡಲು ಮುಂದಾದ.

“ಪಲ್ಲವಿಗ್ಯಾರು ಪತ್ರ ಬರೀತಾರೆ? ಅವಳೇನು ಅಷ್ಟು ದೊಡ್ಡವಳಾ? ಇನ್ನೂ ಹೈಸ್ಕೂಲ ಓದುವ ಹುಡುಗಿ, ಬೇರೆ ಕಡೆ ಇವಳಿಗ್ಯಾರು ಗೆಳತಿಯರಿದ್ದಾರೆ. ಮನೆ ಬಿಟ್ಟರೆ ಶಾಲೆ, ಶಾಲೆ ಬಿಟ್ಟರೆ ಮನೆ ಇವೆರಡೇ ಗೊತ್ತು, ಊರ ಬಿಟ್ಟು ಒಂದಿನ ಕೂಡ ಬೇರೆ ಕಡೆ ಹೋದೋಳಲ್ಲ ಅಂತ ವೀರಣ್ಣ ಹೇಳಿದಾಗ ನಿನ್ನ ಮಾತು ಸತ್ಯ ಅಂತ ಉಳಿದವರು ಕೂಡ ತಲೆಯಾಡಿಸಿದರು.

“ದಿನಾ ಒಂದೂ ಪತ್ರ ಬರೋದಿಲ್ಲ ಖಾಲೀ ಬ್ಯಾಗೇ ಬರ್ತಾದೆ ಇವತ್ತು ಇದೊಂದೇ ಪತ್ರ ಬಂದಿದೆ ” ಅಂತ ಪೋಸ್ಟ ಮ್ಯಾನ್ ನಿಟ್ಟುಸಿರು ಬಿಟ್ಟು ಹೇಳಿದ.

“ಈಗಿನ ಜಮಾನಾದಾಗ ಯಾರು ಪತ್ರ ಬರೀತಾರೆ ಮೊಬೈಲ್ ಬಂದ ಮ್ಯಾಲ ಪತ್ರದ ಕತೆ ಮುಗಿದೇ ಹೋಗಿದೆ, ಏನಾದರು ವಿಷಯ ತಿಳಿಸುವದಿದ್ದರೆ ಮೊಬೈಲ್ ಮೂಲಕವೇ ತಿಳಸ್ತಾರೆ” ಅಂತ ಚನ್ನವೀರ ವಾಸ್ತವ ಹೇಳಿದ.

ಫೋಟೋ ಕೃಪೆ : google

“ಮೊದಲೆಲ್ಲ ನೂರಾರು ಪತ್ರಗಳು ಬ್ಯಾಗ ತುಂಬಿ ಬರುತ್ತಿದ್ದವು. ಅವೆಲ್ಲ ಪದ್ಮಣ್ಣ ಬೇರ್ಪಡಿಸಿ, ಊರ ತುಂಬಾ ತಿರುಗಾಡಿ ಹಂಚುತಿದ್ದ. ಈಗ ಪತ್ರಾನೂ ಬರೋದಿಲ್ಲ ಹಂಚೋದೂ ಇಲ್ಲ ಅಂತ ವೀರಣ್ಣ ಹಿಂದಿನದನ್ನು ನೆನಪಿಸಿದ. ಸಧ್ಯ ನನಗೆ ಕೆಲಸವೇ ಇಲ್ಲದಂತಾಗಿದೆ ಮುಂಜಾನೆಯಿಂದ ಸಂಜೆ ತನಕ ಕಛೇರಿ ತೆರೆದುಕೊಂಡು ಸುಮ್ಮನೇ ಕೂಡತೀನಿ ಅಂತ ಪದ್ಮಣ್ಣ ಬೇಸರ ಹೊರ ಹಾಕಿದ.

“ಏನು ಮಾಡೋದು ಕಾಲ ಬದಲಾಗಿದೆ, ಹಿಂದಿನ ಜಮಾನಾ ಇಂದಿಲ್ಲ, ಇಂದಿನ ಜಮಾನಾ ನಾಳೆ ಇರೋದಿಲ್ಲ ದಿನ ಕಳೆದಂತೆ ಬದಲಾವಣೆ ಆಗ್ತಾನೇ ಇರ್ತಾದೆ ಇನ್ನೂ ಏನೇನು ಬದಲಾವಣೆ ಬರ್ತಾವೋ ಏನೋ ಯಾರಿಗೆ ಗೊತ್ತು ಅಂತ ಸೋಮರಾಯ ಭವಿಷ್ಯದ ಬಗ್ಗೆ ಯೋಚಿಸಿದ.

” ದಿಲ್ಲಿಯಿಂದ ಹಳ್ಳಿತನಕ ಎಲ್ಲಾ ಸುದ್ದಿ ಕಣ್ಣು ಮುಚ್ಚಿ ಕಣ್ಣು ತೆರಿಯುವದರಲ್ಲೇ ಗೊತ್ತಾಗಿ ಬಿಡ್ತಿವೆ ಜಗತ್ತಿನಲ್ಲಿ ಏನು ನಡೆದರೂ ಕ್ಷಣ ಮಾತ್ರದಲ್ಲೇ ತಿಳೀತಾದೆ ಇದೆಲ್ಲ ತಂತ್ರಜ್ಞಾನದ ಪ್ರಭಾವ ಇಂಥಹ ಅಧುನಿಕ ಯುಗದಲ್ಲಿ ಪತ್ರ ಬರೆಯುವ ಆ ಹಳೆಯ ಪದ್ದತಿ ಯಾರು ಅನುಸರಿಸ್ತಾರೆ, ಪತ್ರ ಬರೆದರೂ ಅವರಿಗೆ ಹೋಗಿ ಮುಟ್ಟಲು ಸುಮಾರು ದಿನಗಳೇ ಬೇಕು, ಸಧ್ಯ ಹೆಚ್ಚಿನ ಖರ್ಚಿಲ್ಲದೆ ಸಮಯ ವ್ಯರ್ಥವಿಲ್ಲದೇ ಮೋಬೈಲ ಮೂಲಕ ಎಲ್ಲಾ ವಿಷಯ ತಿಳಿಸಬಹುದು. ಎಲ್ಲರ ಮನೆಯಲ್ಲೂ ಮೂರು ನಾಲ್ಕು ಮೋಬೈಲಗಳಿವೆ ಯಾರೂ ಪತ್ರ ವ್ಯವಹಾರದ ಗೋಜಿಗೆ ಹೋಗೋದಿಲ್ಲ ಅಂತ ವೀರಣ್ಣ ಮೊಬೈಲ್ ಮಹಿಮೆ ವಿವರಿಸಿ ಮಾತು ಮುಂದುವರಿಸಿದ.

“ಎಲ್ಲರ ಬಳಿ ಮೊಬೈಲ್ ಇದ್ದರೂ ಬಸವರಾಜನ ಹತ್ತಿರ ಮೋಬೈಲ ಎಲ್ಲಿದೆ ? ಒಂದು ಮೊಬೈಲ್ ಖರೀದಿಸು ಅಂತ ಸುಮಾರು ಸಲ ಹೇಳಿದೆ “ನನಗ್ಯಾಕ ಬೇಕು ಮೊಬೈಲ್, ನನಗ್ಯಾವ ಬೀಗರು ನೆಂಟರು ಸಂಬಂಧಿಕರಿದ್ದಾರೆ? ಅಂತ ಹೇಳ್ತಾನೆ ಏನಾದ್ರು ಅರ್ಜಂಟ ಇದ್ದರೆ ನಮ್ಮ ನಿಮ್ಮ  ಮೊಬೈಲ್ ನಿಂದ ಮಾತಾಡ್ತಾನೆ ಅಂತ ಸೋಮರಾಯ ಹೇಳಿದ.

“ಇವನಿಗೆ ಮಾತಾಡಲು ಪುರುಸೊತ್ತಾದರು ಎಲ್ಲಿ ಸಿಗ್ತಾದೆ? ಯಾವಾಗಲೂ ಕೆಲಸಾ ಅಂತಿರ್ತಾನೆ ಬೆವರೊಸಿಕೊಳ್ಳಲು ಕೂಡ ಪುರುಸೊತ್ತು ಸಿಗೋದಿಲ್ಲ ಅಂತ ವೀರಣ್ಣ ಹೇಳಿದಾಗ ಅದು ನಿಜ ಅಂತ ಎಲ್ಲರೂ ತಲೆಯಾಡಿಸಿದರು. ಬಸವರಾಜ ಮಾತ್ರ ಅವರ ಮಾತಿನ ಕಡೆ ಗಮನ ಕೊಡದೆ ಬಂದಿರುವ ಆ ಪತ್ರದ ಬಗ್ಗೆಯೇ ಯೋಚಿಸತೊಡಗಿದ.

“ಇದು ನನ್ನ ಮಗಳ ಹೆಸರಿಗೆ ಯಾಕೆ ಬಂದಿದೆ? ಅವಳಿನ್ನು ಹೈಸ್ಕೂಲ ಓದುವ ಹುಡುಗಿ ಅವಳಿಗ್ಯಾರು ಪತ್ರ ಬರೀತಾರೆ?

ಅದಲ್ಲದೆ ಇದು ಬೆಂಗಳೂರಿನಿಂದ ಬೇರೆ ಬಂದಿದೆ ಬರೆದವರ ಹೆಸರು ಪ್ರತಾಪ ಅಂತ ಇದೆ , ಏನು ವಿಷಯ ಇರಬೇಕು ? ಪ್ರತಾಪ ಯಾರು? ಅಂತಲೇ ಗೊತ್ತಿಲ್ಲ, ನನ್ನ ಮಗಳು ಮನೆ ಬಿಟ್ಟರೆ ಶಾಲೆ, ಶಾಲೆ ಬಿಟ್ಟರೆ ಮನೆ, ಅಂತ ಇರ್ತಾಳೆ ಹೊರಗಿನ ಪ್ರಪಂಚವೇ ಗೊತ್ತಿಲ್ಲ ಅಂತ ಶೂನ್ಯ ದಿಟ್ಟಿಸಿದ.

” ಸುಮ್ಮನೇ ಕುಳಿತಿಯಲ್ಲ ಮಾರಾಯ! ಏನಾದರು ಮಾತಾಡು ಹಿಂಗ ಕುಂತರ ನಮಗ ಹ್ಯಾಂಗ ಗೊತ್ತಾಗಬೇಕು ಅಂತ ಚನ್ನವೀರ ಪ್ರಶ್ನಿಸಿದ. ಆತನ ಮಾತಿಗೆ ಬಸವರಾಜ ಉತ್ತರ ಕೊಡದೆ ನನಗೆ ಸ್ವಲ್ಪ ಅರ್ಜಂಟ ಕೆಲಸಾ ಇದೆ ಆಮ್ಯಾಲ ಬಂದು ಎಲ್ಲಾ ವಿಷಯ ಹೇಳ್ತೀನಿ ಅಂತ ಅಲ್ಲಿಂದ ಎದ್ದು ಸೀದಾ ಮನೆ ಕಡೆ ಹೆಜ್ಜೆಹಾಕಿದ ದಾರಿಯುದ್ದಕ್ಕೂ ಆ ಪತ್ರದ ಯೋಚನೆಯೇ ಕಾಡಿತು. ಮನಸ್ಸಿಗೆ ಸಮಾಧಾನವೇ ಆಗಲಿಲ್ಲ, ಮನೆಗೆ ಬಂದು ಹೊರ ಪಡಸಾಲೆ ಗೋಡೆಗೆ ಬೆನ್ನು ಹಚ್ಚಿ ಯೋಚನೆಯಲ್ಲಿ ಮುಳುಗಿದ.

” ಏನು ವಿಷಯ ಹೊರಗೆ ಹೋದವನು ಇಷ್ಟು ಜಲ್ಲಿ ಮನೆಗೆ ಬಂದಿಯಲ್ಲ ಅಂತ ಹೆಂಡತಿ ಮನೆಗೆಲಸ ಬಿಟ್ಟು ಪ್ರಶ್ನಿಸಿದಳು ಅವಳಿಗೆ ಯಾವ ಉತ್ತರ ಕೊಡದೇ ಕುಳಿತಾಗ

” ವಿಷಯ ಹೇಳಿದರೆ ತಾನೆ ಗೊತ್ತಾಗೋದು ಅಂತ ಪುನಃ ಪ್ರಶ್ನಿಸಿದಳು. ಆಗ ಮೌನ ಮುರಿದು . ಪಲ್ಲವಿಗೆ ಯಾರೋ ಬೆಂಗಳೂರಿನಿಂದ ಪತ್ರ ಬರೆದಿದ್ದಾರೆ, ಯಾರು? ಯಾಕೆ ಬರೆದರು ಅಂತ ಗೊತ್ತಾಗ್ತಿಲ್ಲ ಅಂತ ಮುಖ ಸಪ್ಪಗೆ ಮಾಡಿ ಹೇಳಿದ.

” ಬೆಂಗಳೂರಿಂದ ಪತ್ರ ಬಂದಿದೆಯಾ ? ಅಲ್ಲಿ ಇವಳಿಗ್ಯಾರು ಪರಿಚಯದವರಿದ್ದಾರೆ? ಏನೋ ವಿಳಾಸ ತಪ್ಪಿ ಬಂದಿರಬೇಕು ಇವಳದೇ ಅಂತ ಹ್ಯಾಂಗ ಹೇಳೋದು? ಸರಿಯಾಗಿ ನೋಡು ಇಲ್ಲದಿದ್ದರೆ ಪದ್ಮಣ್ಣನಿಗೆ ವಾಪಸ್ ಕೊಟ್ಟರಾಯಿತು ಅಂತ ಸಲಹೆ ನೀಡಿದಳು.

ಫೋಟೋ ಕೃಪೆ : google

ವಿಳಾಸ ಸರಿಯಾಗೇ ಇದೆ ಅಂತ ಜೇಬಿನಿಂದ ಆ ಪತ್ರ ಹೊರ ತೆಗೆದು ಅದರ ಅಂಚು ಹರಿದು ಒಂದೊಂದೇ ಅಕ್ಷರ ಓದತೊಡಗಿದ. ಅದೊಂದು ಪ್ರೇಮ ಪತ್ರವಾಗಿದ್ದು ಗೊತ್ತಾಗುತ್ತಿದ್ದಂತೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಯೋಚಿಸಿ ಮುಖ ಕೆಂಪಗೆ ಮಾಡಿ ಮಗಳ ಮೇಲೆ ಕೋಪ ತಾಪ ಹೊರ ಹಾಕಲು ಆರಂಭಿಸಿದ.

” ಪಲ್ಲವಿ ಶಾಲೆಯಿಂದ ಬರಲಿ ಬಂದ್ಮೇಲೆ ವಿಚಾರಿಸೋಣ ಅವಸರ ಮಾಡಿ ಏನೇನೋ ಯೋಚನೆ ಮಾಡೋದು ಬೇಡ ನಮ್ಮ ಮಗಳು ಎಂಥವಳು ಅಂತ ನಮಗೆ ಸರಿಯಾಗಿ ಗೊತ್ತು. ಅವಳ ಗುಣ ಸ್ವಭಾವದ ಬಗ್ಗೆ ಎಲ್ಲರು ತಾರೀಫ ಮಾಡ್ತಾರೆ, ಓದಿನಲ್ಲಿ ಅವಳು ಎಲ್ಲರಿಗಿಂತ ಮುಂದಿದ್ದಾಳೆ ಶಾಲೆಯಲ್ಲಿ ಶಿಕ್ಷಕರೂ ಹೇಳ್ತಾರೆ , ಓದು ಬಿಟ್ಟು ಬೇರೆ ಯಾವ ವಿಚಾರವು ಅವಳಿಗೆ ಗೊತ್ತಿಲ್ಲ. ಅಂತ ಸಮಜಾಯಿಸಿ ನೀಡಲು ಮುಂದಾದಳು .

‘ ಯಾವದೂ ನಂಬೋಕೆ ಆಗೋದಿಲ್ಲ, ಈ ಪ್ರೀತಿ ಪ್ರೇಮದಿಂದ ಏನೇನೋ ಅವಾಂತರ ಸೃಷ್ಟಿಯಾಗ್ತಿವೆ ಯಾವದಕ್ಕೂ ಜಾಗೃತಿ ವಹಿಸಬೇಕು. ಏನಾದರು ಹೆಚ್ಚು ಕಡಿಮೆ ಆದರೆ ಜನ ನೂರು ಮಾತಾಡ್ತಾರೆ ಅಂತ ಹೇಳಿದ.

ಸಾಯಂಕಾಲ ಐದು ಗಂಟೆ ಸುಮಾರಿಗೆ ಪಲ್ಲವಿ ಶಾಲೆಯಿಂದ ಮನೆಗೆ ಬಂದು ಕೈಕಾಲು ಮುಖ ತೊಳೆದು ಹೋಮವರ್ಕ ಮಾಡುವಲ್ಲಿ ನಿರತಳಾದಳು ಆಗ ಬಸವರಾಜ ಪುನಃ ಮಗಳ ಮೇಲೆ ಕೋಪ ಹೊರ ಹಾಕಲು ಆರಂಭಿಸಿದ ಅಪ್ಪನ ವರ್ತನೆ ಪಲ್ಲವಿಗೆ ಗಾಬರಿ ಹುಟ್ಟಿಸಿತು.

” ಅಪ್ಪ ನನ್ನ ಮೇಲೆ ಯಾಕೆ ಕೋಪಗೊಂಡಿದ್ದಾನೆ ಅಂತ ತಕ್ಷಣ ಅಮ್ಮನ ಹತ್ತಿರ ಹೋಗಿ ಪ್ರಶ್ನಿಸಿದಳು. ಪತ್ರದ ವಿಷಯ ಹೇಳಿದಾಗ ದಿಕ್ಕೇ ತೋಚದಂತಾಯಿತು.

“ಪತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಅಂತ ಒಂದೇ ಸವನೆ ಅಳಲು ಶುರು ಮಾಡಿದಳು.

“ನೀನೇನೂ ಮನಸ್ಸಿಗೆ ಹಚ್ಚಿಕೊಳ್ಳಬೇಡ ,ನಿನ್ನ ಮೇಲೆ ನನಗೆ ಭರವಸೆ ಇದೆ ಅಂತ ಅಮ್ಮ ಸಮಾಧಾನ ಮಾಡಲು ಮುಂದಾದಳು ಆದರೆ ಪಲ್ಲವಿಯ ಕಣ್ಣೀರ ಧಾರೆ ಮಾತ್ರ ಕಡಿಮೆಯಾಗಲಿಲ್ಲ.

“ಒಬ್ಬಳೇ ಮಗಳು ಅಂತ ಯಾವ ಕೊರತೆ ಆಗದಂತೆ ನೋಡಿಕೊಂಡೆ ಸರಿಯಾಗಿ ಶಿಕ್ಷಣ ಕೊಡಿಸಬೇಕು ಅಂತ ನಿರ್ಧಾರ ಮಾಡಿದೆ ಆದರೆ ಇವಳು ಹೀಗೆ ಮಾಡಿದಳು ಅಂತ ಬಸವರಾಜ ಪುನಃ ಹೆಂಡತಿಯ ಮುಂದೆ ನೋವು ತೋಡಿಕೊಂಡ .ಇವನಿಗೆ ಹೇಗೆ ಸಮಾಧಾನ ಮಾಡೋದು ಅಂತ ಅವಳಿಗೂ ತಿಳಿಯದಂತಾಯಿತು. ಅಂದು ಪಲ್ಲವಿ ಊಟವೂ ಮಾಡದೇ ನಿದ್ದೆಯೂ ಮಾಡದೆ ಇಡೀ ರಾತ್ರಿ ಈ ಪತ್ರಕ್ಕೂ ನನಗೂ ಯಾವ ಸಂಬಂಧವಿಲ್ಲ ಯಾಕೆ ಹಿಂಗಾಯಿತು ಅಂತ ಯೋಚಿಸಿದಳು.

ನಿಮ್ಮ ಅಪ್ಪನ ಮಾತು ಮನಸ್ಸಿಗೆ ಹಚ್ಕೋಬೇಡ ಆ ವಿಷಯ ಮರೆತು ಓದಿನ ಕಡೆ ಗಮನ ಕೊಡು ಬೇಗ ತಯ್ಯಾರಾಗಿ ಶಾಲೆಗೆ ಹೊರಡು ಅಂತ ಮರುದಿನ ಅಮ್ಮ ಸಲಹೆ ನೀಡಿದಳು ಆದರೆ ಪಲ್ಲವಿಗೆ ಶಾಲೆಗೆ ಹೋಗಲು ಕೂಡ ಮನಸ್ಸಾಗಲಿಲ್ಲ. ಎರ್ಡ್ಮೂರು ದಿನ ಹಾಗೇ ಕಳೆದು ಹೋದವು ಪಲ್ಲವಿ ಶಾಲೆಗೆ ಬರದೇ ಇರುವದು ಶಿಕ್ಷಕರಿಗೂ ಯೋಚನೆಯಾಯಿತು ಯಾಕೆ ಬರ್ತಿಲ್ಲ ಒಂದಿನ ಕೂಡ ಶಾಲೆ ತಪ್ಪಿಸಿದವಳಲ್ಲ ಇಡೀ ಕ್ಲಾಸಿನಲ್ಲೇ ಬುದ್ಧಿವಂತ ಹುಡುಗಿ ಹೇಳದೇ ಕೇಳದೇ ಶಾಲೆ ಬಿಟ್ಟರೆ ಹೇಗೆ? ಅಂತ ಪರಸ್ಪರ ಚರ್ಚಿಸಿ ಇವಳ ಅಕ್ಕ ಪಕ್ಕದ ಮನೆಯ ವಿದ್ಯಾರ್ಥಿಗಳಿಗೂ ವಿಚಾರಿಸಿದರು ಆದರೆ ವಿಷಯ ಮಾತ್ರ ಗೊತ್ತಾಗಲಿಲ್ಲ.

“ನಾವೇ ಅವಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರಬೇಕು ಅಂತ ಶಿಕ್ಷಕರೊಬ್ಬರು ಸಲಹೆ ನೀಡಿದಾಗ ಉಳಿದವರು ಸಮ್ಮತಿಸಿ ಒಂದಿನ ಮುದ್ದಾಮ ಇವರ ಮನೆಗೆ ಬಂದು, “ನಿಮ್ಮ ಮಗಳು ಓದಿನಲ್ಲಿ ಹುಶಾರಿದ್ದಾಳೆ ಇಂತಹ ಹುಡುಗಿಗೆ ಶಾಲೆ ಬಿಡಿಸಿದರೆ ಹೇಗೆ ? ನಾಳೆಯಿಂದ ತಪ್ಪದೇ ಶಾಲೆಗೆ ಕಳಿಸಿ ಅಂತ ಬಸವರಾಜನಿಗೆ ಕೇಳಿಕೊಂಡರು.

“ನಾನು ಇನ್ಮುಂದೆ ಮಗಳಿಗೆ ಶಾಲೆಗೆ ಕಳಿಸುವದಿಲ್ಲ . ಕಲಿಯೋದೇ ಸಾಕು. ಶಾಲೆ ಕಲಿಸಿ ಮಾಡೋದಾದರು ಏನಿದೆ” ಅಂತ ಖಡಕ್ಕಾಗಿ ಹೇಳಿದ. ಆತನ ಮಾತು ಎಲ್ಲರಿಗು ಗಾಬರಿ ಮೂಡಿಸಿತು ಅವರೆಲ್ಲ, ನಾನಾ ರೀತಿ ಸಲಹೆ ಸಮಜಾಯಿಷಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು ಆದರೆ ಆತ ಮಾತ್ರ ತನ್ನ ಪಟ್ಟು ಸಡಿಲಿಸಲಿಲ್ಲ.

ಅಪ್ಪನ ನಿರ್ಧಾರ ಪಲ್ಲವಿಗೆ ಅಡ್ಡಕತ್ತರಿಯಲ್ಲಿ ಸಿಲುಕಿಸಿತು. ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಿದಂತಾಗಿದೆ ಹೀಗಾಗುತ್ತದೆ ಅಂತ ಕನಸು ಮನಸ್ಸಿನಲ್ಲೂ ಯೋಚನೆ ಮಾಡಿರಲಿಲ್ಲ ನಾನು ಸರಿಯಾಗಿ ಓದಿ ಇಡೀ ಕ್ಲಾಸಿಗೇ ಫಸ್ಟ್ ಬರಬೇಕು ಮುಂದೆ ಕಾಲೇಜು ಸೇರ ದೊಡ್ಡ ಸಾಧನೆ ಮಾಡಬೇಕು ಅಂತ ಏನೇನೋ ಕನಸು ಕಂಡಿದ್ದೆ ಅಂತ ಕಣ್ತುಂಬ ನೀರು ತಂದಳು. ಅಂದು ಆಕಸ್ಮಿಕವಾಗಿ ಪೋಸ್ಟ ಮ್ಯಾನ ಇವರ ಮನೆಗೆ ಬಂದು ಆಶ್ಚರ್ಯದ ಜೊತೆ ಗಾಬರಿಯೂ ಮೂಡಿಸಿದ. ಆತನ ಕಡೆ ಎಲ್ಲರೂ ಪ್ರಶ್ನಾರ್ಥಕವಾಗಿ ನೋಡಿದರು .

“ಯಾಕೆ ಬಂದೆ ಮತ್ತೇನಾದರು ಪತ್ರ ಬಂದಿದೆಯಾ ? ಅಂತ ಬಸವರಾಜ ತೀಕ್ಷ್ಣವಾಗಿ ಪ್ರಶ್ನಿಸಿದ.

“ಇಲ್ಲ ಯಾವ ಪತ್ರವೂ ಬಂದಿಲ್ಲ ಮೊನ್ನೆ ಬಂದ ಪತ್ರ ನಿಮ್ಮದಲ್ಲ , ವಿಳಾಸ ಬದಲಾಗಿದೆ. ಅದು ದೊಡ್ಡ ಮನಿ ಬಸವಣ್ಣನ ಮಗಳು ಪಲ್ಲವಿಗೆ ಬಂದಿದ್ದು ಅವಳಿಗೆ ಬೆಂಗಳೂರಿನ ಹುಡುಗನ ಜೊತೆ ನಿಶ್ಚಿತಾರ್ಥವಾಗಿದೆ ಆ ಹುಡುಗನೇ ಪತ್ರ ಬರೆದಿದ್ದಾನೆ. ವಿಷಯ ಆಮೇಲೆ ಗೊತ್ತಾಯಿತು . ಇಬ್ಬರ ಹೆಸರು ಒಂದೇ ಆಗಿದ್ದರಿಂದ ಈ ಗೊಂದಲ ಮೂಡಿದೆ ಅಂತ ವಾಸ್ತವ ಹೇಳಿದ. ವಿಷಯ ತಿಳಿದು ಮಗಳ ಮೇಲಿನ ಬಸವರಾಜನ ಸಿಟ್ಟು ಏಕಾಎಕಿ ತಣ್ಣಗಾಗಿ ಯೋಚಿಸತೊಡಗಿದ.

“ಈಗಲಾದರು ಸತ್ಯ ಗೊತ್ತಾಯಿತಲ್ಲ” ಅಂತ ಹೆಂಡತಿ ಆತನಿಗೆ ಪ್ರಶ್ನಿಸಿದಳು. ಉತ್ತರ ಕೊಡದೇ ಮೌನವಾದ.

“ನಾನು ಮಗಳ ಮೇಲೆ ಅನುಮಾನ ಪಟ್ಟು ತಪ್ಪು ಮಾಡಿದೆ ಅಂತ ಪಶ್ಚಾತ್ತಾಪ ಹೊರ ಹಾಕಿದ. ಅಪ್ಪನಿಗೆ ಈಗಲಾದರು ಸತ್ಯ ಗೊತ್ತಾಯಿತಲ್ಲ ಅಷ್ಟೇ ಸಾಕು ಅಂತ ಪಲ್ಲವಿ ಆನಂದಬಾಷ್ಪ ಸುರಿಸತೊಡಗಿದಳು.


  • ಶರಣಗೌಡ ಬಿ.ಪಾಟೀಲ ತಿಳಗೂಳ ಕಲ್ಬುರ್ಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading