ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ

ಜಗತ್ತಿನಾದ್ಯಂತದ ಜೂನ್ 21 ಮಾತ್ರ ಯೋಗ ದಿನವೇ?ಯೋಗವೆನ್ನುವುದು ಒಂದು ದಿನಕ್ಕೆ ಸೀಮಿತವಾದದ್ದೆ? ಹಾಗಾದರೆ ಯೋಗ ಅಂದರೆ ಏನು? ವ್ಯಾಯಾಮ ಒಂದು ಯೋಗವೇ, ದೈಹಿಕ ಸಾಧನೆಯೇ ಯೋಗವೇ?..ಯೋಗದ ಮಹತ್ವದ ಕುರಿತು ಯೋಗ ಗುರು ಲಕ್ಷ್ಮಣ ಜಿ ಬೋಡಕೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಜೂನ್ 21 ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯು ಯೋಗಾಸಕ್ತರಿಗೆ ಒಂದು ರೀತಿಯ ಹಬ್ಬದ ಸಡಗರವನ್ನು ತಂದು ಕೊಡುತ್ತದೆ.ಅಂತರಾಷ್ಟ್ರಿಯ ಯೋಗ ದಿನದಂದು ಜಗತ್ತಿನಾದ್ಯಂತ ಯೋಗದ ಬಗ್ಗೆ ಕಾರ್ಯಕ್ರಮ, ಚರ್ಚೆಗಳು ಹಾಗೂ ಸಾಮೂಹಿಕ ಯೋಗ ಪ್ರದರ್ಶನ ನಡೆಯುತ್ತದೆ. ಜಗತ್ತಿಗೆ ಯೋಗವನ್ನು ನೀಡಿದ ಹೆಗ್ಗಳಿಕೆ ಭಾರತದ್ದು, ಯೋಗ ಭಾರತದ ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ.ಭಾರತವೂ ಸೇರಿದಂತೆ ಜಗತ್ತಿನಾದ್ಯಂತದ ಜೂನ್ 21 ಮಾತ್ರ ಯೋಗ ದಿನವೇ?ಯೋಗವೆನ್ನುವುದು ಒಂದು ದಿನಕ್ಕೆ ಸೀಮಿತವಾದದ್ದೆ? ಹಾಗಾದರೆ ಯೋಗ ಅಂದರೆ ಏನು? ವ್ಯಾಯಾಮ ಒಂದು ಯೋಗವೇ, ದೈಹಿಕ ಸಾಧನೆಯೇ ಯೋಗವೇ?

ಯೋಗ ಎಂದರೆ ಜೋಡಿಸು,ಕೂಡಿಸುವ,ಒಂದಾಗಿಸು, ಸಂಬಂಧ, ಉಪಾಯ, ಜ್ಞಾನ, ಸಂಗತಿ, ಸೇರುವುದು, ಯುಕ್ತಿ ಹೀಗೆ ಅನೇಕ ಬಗೆಯ ಅರ್ಥಗಳನ್ನು ಕೊಡುತ್ತದೆ.ಯೋಗ ಪಿತಾಮಹ ಪತಂಜಲಿ ಮಹರ್ಷಿಗಳು “ಯೋಗಃ ಚಿತ್ತ ವೃತ್ತಿ ನಿರೋಧ:”ಎಂಬ ಸೂತ್ರದ ಮುಖಾಂತರ ವಿವರಿಸಿದ್ದಾರೆ.ಮನಸ್ಸು ಎಲ್ಲಾ ಇಂದ್ರಿಯಗಳ ವ್ಯಾಪಾರಕ್ಕೂ ಕಾರಣವಾಗುತ್ತದೆ.ಅಂತಹ ಮನಸ್ಸನ್ನು ವಿಷಯಾಂತರ ಆಗದಂತೆ ನಿಗ್ರಹಿಸಿ ಅಂತರ್ಮುಖಗೊಳಿಸುವ ಸಾಧನವೇ ಯೋಗ. “ಕಟೋಪನಿಷ್ಯತ್ತಿನಲ್ಲಿ ತಾಂ ಯೋಗಮಿತಿ ಮನ್ಯಂತೆ ಸ್ಥಿರಮೀಂದ್ರಿಯ ಧಾರಣಂ” ಅಂದರೆ ಬಾಹ್ಯವಾದ ವಿಷಯಾಂತರಗಳಲ್ಲಿ ಹೋಗದೇ ಇಂದ್ರಿಯಗಳನ್ನು ಅಂತರಾತ್ಮದಲ್ಲಿ ನೆಲೆ ನಿಲ್ಲಿಸುವ ಮಾರ್ಗವೇ ಯೋಗ ಎಂದು ಹೇಳಲಾಗಿದೆ.ಹೇಗೆ ತಾಮ್ರದ ಪಾತ್ರೆಯನ್ನು ನಿತ್ಯವೂ ತೊಳೆದಾಗ ಹೊಳಪು ಬರುವುದೋ ಹಾಗೆ ನಿತ್ಯ ನಿಯಮಿತ ನಿರಂತರವಾಗಿ ಯೋಗಾಭ್ಯಾಸವನ್ನು ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಮಾಡಿದಾಗ ಮಾತ್ರ ನಾವುಗಳು ಯೋಗದ ಆಳವನ್ನು ಅರಿತು ಅದನ್ನು ಸಿದ್ಧಿಮಾಡಿಕೊಳ್ಳಬಹುದಾಗಿದೆ.

ಪತಂಜಲಿ ಮಹರ್ಷಿಗಳು ಈ ಅತ್ಯುತ್ತಮವಾದ ಸಾಧನೆಯನ್ನು ಮಾಡುವುದಕ್ಕೆ ಅಷ್ಟಾಂಗ ಯೋಗದ 8 ಮೆಟ್ಟಿಲುಗಳನ್ನು ವಿವರಿಸಿದ್ದಾರೆ.ಯಮ,ನಿಯಮ,ಆಸನ, ಪ್ರಾಣಾಯಾಮ, ಪ್ರತ್ಯಾಹಾರ,ಧಾರಣ, ಧ್ಯಾನ ಹಾಗೂ ಸಮಾಧಿ ಈ ಎಂಟು ಸೂತ್ರಗಳ ಮೂಲಕ ಅತ್ಯುನ್ನತವಾದ ಸಾಧನೆಯನ್ನು ಸಾಧಿಸಬಹುದು ಎಂದು ತಿಳಿಸಿದ್ದಾರೆ.ಇವುಗಳಲ್ಲಿ ಮೊದಲ 5 ಬಹಿರಂಗ ಸಾಧನೆ ಹಾಗೂ ಕೊನೆಯ 3 ಅಂತರಂಗ ಸಾಧನೆಯ ಹಂತಗಳು ಎಂದು ವಿಂಗಡಿಸಬಹುದಾಗಿದೆ.

ಬಹಿರಂಗ ಸಾಧನೆ:ಯಮ ಮತ್ತು ನಿಯಮಗಳೆರಡೂ ಐದೈದು ಅಂಶಗಳನ್ನು ಹೊಂದಿದ್ದು ಇವು ಯೋಗ ಸಾಧನೆ ಮಾಡುವ ವ್ಯಕ್ತಿಯ ಸಾಧನೆಗೆ ನೈತಿಕ ತಳಹದಿಯನ್ನು ಹಾಕಿ ಕೊಡುತ್ತದೆ.ಸಧೃಢ ಶರೀರ , ಪ್ರಾಣಾಯಾಮ ಅಭ್ಯಾಸ,ಧ್ಯಾನಾಭ್ಯಾಸಕ್ಕಾಗಿ ಸ್ಥಿರವಾಗಿ, ಸುಖವಾಗಿ, ಕುಳಿತುಕೊಳ್ಳುವ ಅಂಗವಿನ್ಯಾಸವೇ ಆಸನ.ಉಸಿರಿನ ನಿಯಂತ್ರಣದ ಮೂಲಕ ದೇಹಂತರ್ಗತವಾದ ಪ್ರಾಣ ಶಕ್ತಿ ಮತ್ತು ಮನಸ್ಸನ್ನು ನಿಯಂತ್ರಿಸುವ ಸಾಧನವೇ ಪ್ರಾಣಾಯಾಮ.ಇಂದ್ರಿಯಗಳ ನಿಗ್ರಹವೇ ಪ್ರತ್ಯಾಹಾರವಾಗಿದೆ.

ಅಂತರಂಗ ಸಾಧನೆ:ಧಾರಣ, ಧ್ಯಾನ ಮತ್ತು ಸಮಾಧಿ ಇವುಗಳು ಒಂದೇ ಸಾಧನೆಯ ಮೂರು ಹಂತಗಳಾಗಿವೆ.ಆದ್ದರಿಂದ ಈ ಮೂರನ್ನು ಸಂಯಮ ಎಂದು ನಿರ್ದೇಶಿಸಲಾಗಿದೆ.ಒಮ್ಮೆ ಈ ಸಂಯಮವನ್ನು ಸಿದ್ಧಿಸಿದರೆ, ಚಿತ್ತವನ್ನು ಯಾವ ವಸ್ತುವಿನ ಮೇಲಾದರೂ ನೆಲೆ ನಿಲ್ಲಿಸಿ ಸಂಯಮವನ್ನು ಸಾಧಿಸಬಹುದಾಗಿದೆ.

ಯಮ ನಿಯಮಗಳ ಅಂಗ, ಉಪಾಂಗಗಳನ್ನು ಅಭ್ಯಾಸ ಮಾಡಬೇಕಾದರೆ ಮೊದಲು ಶರೀರವು ರೋಗ,ಋಣ, ದಾರಿದ್ರ್ಯಗಳಿಗೆ ಬಲಿಯಾಗಬಾರದು.”ಶರೀರ ಮಾಧ್ಯಮ ಖಲು ಧರ್ಮ ಸಾಧನಂ” ಎಂಬ ಭಗವದ್ಗೀತೆಯ ಉಕ್ತಿಯಂತೆ ಶರೀರವನ್ನು ಯಾವುದೇ ರೋಗಾದಿ ಉಪದ್ರವಗಳು ಬಾರದಂತೆ ತಡೆದು,ಶರೀರ,ಇಂದ್ರಿಯ ಹಾಗೂ ಮನಸ್ಸನ್ನು ಧೃಢಗೊಳಿಸಬೇಕು.ನಿರಂತರವಾದ ಆಸನಗಳ ಅಭ್ಯಾಸದಿಂದ ಶರೀರವನ್ನು ಸದೃಢಗೊಳಿಸಲು ಸಾಧ್ಯವಾಗುತ್ತದೆ.

ಯೋಗವು ವ್ಯಕ್ತಿ,ಸಮಾಜ ಮತ್ತು ಇಡೀ ಬ್ರಹ್ಮಾಂಡದ ಒಂದು ಅಂಶವಾಗಿದೆ.ಇಂದು ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಯೋಗವು ಅತ್ಯವಶ್ಯಕವಾಗಿದೆ.ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ ಮಾನವಿಯ ಮೌಲ್ಯಗಳು ಮತ್ತು ಸಂಸ್ಕಾರವನ್ನು ನಾವೇ ತಿಳಿಸಿ ಕೊಡಬೇಕಾಗಿದೆ.ನಮ್ಮ ಪೂರ್ವಜರು ನಮಗೆ ಕೊಟ್ಟಂತಹ ಅಮೂಲ್ಯವಾದ ಹಾಗೂ ಬೆಲೆ ಕಟ್ಟಲಾಗದಂತಹ ಸಂಸ್ಕಾರ ಭರೀತ ಜೀವನ ಪದ್ದತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದೇ ಆಗಿದೆ.ಯೋಗದಿಂದ ಆರೋಗ್ಯ, ಆರೋಗ್ಯದಿಂದ ಮಾನಸಿಕ ಹಾಗೂ ದೈಹಿಕ ನೆಮ್ಮದಿಯ ಜೀವನವನ್ನು ಸಾಗಿಸಬಹುದಾಗಿದೆ.ಜೊತೆಗೆ ಆರೋಗ್ಯವಂತ ಸ್ವಸ್ಥ ಸಮಾಜ ನಿರ್ಮಾಣ ಮಾಡಲು Each One Teach One ಅನ್ನುವ ಹಾಗೆ ಪ್ರತಿಯೊಬ್ಬರೂ ಯೋಗವನ್ನು ಕೇವಲ ವ್ಯಾಯಾಮವಾಗಿ ಕಾಣದೆ, ಜಗತ್ತಿಗೆ ಭಾರತವು ನೀಡಿರುವ ಅಷ್ಟಾಂಗ ಯೋಗವು ನಮ್ಮೇಲ್ಲರ ಜೀವನ ಪದ್ದತಿಯಾಗಬೇಕಾಗಿದೆ.


  • ಲಕ್ಷ್ಮಣ ಜಿ ಬೋಡಕೆ – ಯೋಗ ಶಿಕ್ಷಕ, ಧಾರವಾಡ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW