ಎಳೆ ಕಿರಣದ ಹೂ ಬಿಸಿಲಿಗೆ ಮುಗುಳು ನಗುವ ಮಲ್ಲಿಗೆ…ನಾಗರಾಜ ಬಿ. ನಾಯ್ಕ ಅವರ ಲೇಖನದಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಮೂಡಣದಿ ಹೊನ್ನಿನ ತೇರು
ಬಣ್ಣಗಳ ಹರಡಿ ಹೊರಟಂತೆ
ಹಸಿರೆಲೆಗೂ ಚಿನ್ನದ ತಳಿರು
ಯಾರೋ ಬಣ್ಣ ಎರಚಿದಂತೆ
ಎಳೆ ಕಿರಣದ ಹೂ ಬಿಸಿಲಿಗೆ
ಮುಗುಳು ನಗುವ ಮಲ್ಲಿಗೆ
ಮಣ್ಣ ಕಣದ ಸಾರ ಎಳೆಗೆ
ಎಲ್ಲೆಡೆಯೂ ಹರಡಿಹ ಸಂಪಿಗೆ
ತಂಪು ತಂಗಾಳಿಗೆ ಹಸಿರ ಉಯ್ಯಾಲೆ
ಇಳೆ ತುಂಬಿಹ ನವಿಲು ನೈದಿಲೆ
ಚಪ್ಪರವ ಹಾಸಿಹ ಹಚ್ಚ ಹಸಿರೆಲೆ
ಮೋಡದ ನಡುವೆ ಬುವಿ ವನಮಾಲೆ
ಗರಿಕೆ ಹಸಿರಿಗೂ ಉಸಿರ ಹಂಬಲ
ಜೀವ ಜಾಲದ ಒಲವಿಗೆ
ನಲಿವ ಬದುಕ ಬೆಳಗು ಚೆಲುವಿಗೆ
ಒಳಿತು ಸಾರುವ ಗೆಲುವಿಗೆ
- ನಾಗರಾಜ ಬಿ. ನಾಯ್ಕ- ಹುಬ್ಬಣಗೇರಿ, ಕುಮಟಾ.
