ಸುಮ್ಮನೇ ದಕ್ಕುವುದಿಲ್ಲ ಕವಿತೆ…ಹಾದಿ ಬದಿಯ ಬೇಲಿ ಹೂಗಳಂತೆ…ಕವಿಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಕವಿತೆಯ ಒಡನಾಟದ ಕುರಿತು ಲೇಖಕರಾದ ನಾಗೇಶ್ ಜೆ. ನಾಯಕ ಅವರು ಓದುಗರಿಗೆ ಪರಿಚಯಿಸಿದ್ದಾರೆ ತಪ್ಪದೆ ಓದಿ…
ಸುಮ್ಮನೇ ದಕ್ಕುವುದಿಲ್ಲ ಕವಿತೆ
ಆಸರೆಯಾಗಬೇಕಿದ್ದ ಅಪ್ಪ
ಬೇಲಿಯಾಗಿ ಸಹ ನಿಲ್ಲಲಿಲ್ಲ
ತುಳಸಿಯಂತಿದ್ದ ಅಮ್ಮ
ಬೃಹತ್ ಆಲವಾದಳು
ಹೊಣೆಗಾರಿಕೆಯಿಂದ ಬದುಕಿನ ನಾವೆಯನ್ನು ದಡ ಸೇರಿಸಬೇಕಿದ್ದ ಅಪ್ಪ, ಜವಾಬ್ದಾರಿ ಮರೆತು ಕಣ್ಮರೆಯಾದಾಗ ಆಲದಂತೆ ಆಸರೆಗೆ ನಿಂತವಳೇ ಅಮ್ಮ. ಅಮ್ಮನ ತ್ಯಾಗ, ಶ್ರಮ, ಕಷ್ಟಸಹಿಷ್ಣುತೆಯನ್ನು ಅಭಿವ್ಯಕ್ತಿಸುವ ಈ ಸಾಲುಗಳು ಸುಮತಿ ಕೃಷ್ಣಮೂರ್ತಿ ಅವರದ್ದು. ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನವರಾದ ಇವರು ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಸದ್ಯ ಜಿ. ಎಸ್. ಡಬ್ಲ್ಯೂ. ಕಮರ್ಶಿಯಲ್ ಡಿಪಾರ್ಟ್‍ಮೆಂಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ಓದಿನ ಹವ್ಯಾಸಿಯಾಗಿರುವ ಇವರು ಕನ್ನಡ ವ್ಯಾಕರಣ ತಿಳಿಯದ ಭಾವಯಾನದಲ್ಲಿ ಸಂಚರಿಸುವ ಹವ್ಯಾಸಿ ಕವಯಿತ್ರಿ. ಸ್ಥಳೀಯ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದು ಇತ್ತೀಚಿನ ಕೆಲವು ಕವಿತೆಗಳು ಯೂ ಟ್ಯೂಬ್ ಚಾನಲ್‍ನಲ್ಲಿ ಹಾಡಾಗಿ ಪ್ರಸಾರಗೊಂಡಿವೆ. ಅವಧಿ, ಬುಕ್‍ಬ್ರಹ್ಮ, ವಿಶ್ವವಾಣಿ, ಉದಯಕಾಲ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿವೆ. ಬುಕ್ ಬ್ರಹ್ಮ ಝೂಮ್‍ನಲ್ಲಿ ಇವರ ಸಂದರ್ಶನ ಪ್ರಸಾರವಾಗಿದ್ದು, 2023 ರಲ್ಲಿ ಪ್ರಕಟವಾದ ಪ್ರಥಮ ಕವನ ಸಂಕಲನ ‘ಹೆಣ್ಣಾದ ಮರ’ ಸಾಹಿತ್ಯವಲಯದಲ್ಲಿ ತುಂಬ ಜನಪ್ರಿಯವಾಗಿದೆ. 2023 ರ ಕಾವ್ಯ ಶ್ರೀಧರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ಖುಷಿ, ನೆಮ್ಮದಿಗಾಗಿ ಹವ್ಯಾಸವಾಗಿಸಿಕೊಂಡಿದ್ದ ಕವಿತೆ ಬರವಣಿಗೆಯಿಂದಲೇ ಇಂದು ಜನರ ಮಧ್ಯೆ ಗುರುತಿಸಿಕೊಳ್ಳುವಂತಾಗಿದ್ದಾರೆ.

ವಶ
ಸುಮ್ಮನೇ ದಕ್ಕುವುದಿಲ್ಲ ಕವಿತೆ
ಹಾದಿ ಬದಿಯ ಬೇಲಿ ಹೂಗಳಂತೆ…
ದುಂಡು ಮಲ್ಲಿಗೆಯ ತೋಟಕ್ಕೆ ನುಗ್ಗಬೇಕು
ಅಡರಿಸುವ ಬೇರುಗಳ ದಾಟಬೇಕು
ಒಂದೊಂದೇ ಮೊಗ್ಗುಗಳನ್ನು ಬಿಡಿಸಿ
ಪ್ರೇಮದಾರವ ತಂದು ಮಾಲೆ ಕಟ್ಟಬೇಕು
ಸುಮ್ಮನೇ ದಕ್ಕುವುದಿಲ್ಲ ಕವಿತೆ
ತೋಟದಂಚಿನಲ್ಲಿ ಕೈಗೆಟಕುವ ಬೋರೆ ಹಣ್ಣಿನಂತೆ…
ವಿಧಿ ಬೀಸುವ ಕವಣೆ ಹೊಡೆತಗಳನೆದುರಿಸಬೇಕು
ನೋವುಗಳ ಸೋಪಾನ ಏರಬೇಕು
ನೆನಪುಗಳ ಜೋಪಾನ ಮಾಡಬೇಕು
ಗಾಯಗಳ ಸವರುತ್ತಾ ಒಮ್ಮೊಮ್ಮೆ ಬಿಕ್ಕಬೇಕು
ಸುಮ್ಮನೇ ದಕ್ಕುವುದಿಲ್ಲ ಕವಿತೆ
ದುಕಾನುಗಳು ಬಿಡುಬೀಸಾಗಿ ಹೊರಗಿಟ್ಟ ಉಪ್ಪಿನಂತೆ…
ಜಾತಿ ಧರ್ಮಗಳನ್ನು ಮೀರಬೇಕು|
ಲಿಂಗ ತನ್ನದಾವುದೆಂದು ಮರೆಯಬೇಕು|
ಹೆಸರಿನ ಗೋಜಲಿಗೆ ಬೀಳದಂತೆ
ಅನಾಮಿಕನಾಗಿಯೇ ಉಳಿದು ಬಿಡಬೇಕು
-ಸುಮತಿ ಕೃಷ್ಣಮೂರ್ತಿ
“ಮಹಲುಗಳ ನುಣುಪು ಕಲ್ಲಿನ ಮೇಲೆ/ಸುಖಾಸೀನ ಹಾಸಿಗೆಯಲ್ಲಿ/ಕವಿತೆ ಕಾಣಸಿಗಲಿಲ್ಲ/ಗುಡಿಸಲಿನ ನೆಲದ ಹಾಸಿನಲ್ಲಿ/ಕಮ್ಮಗೆ ನಿದ್ರಿಸುತ್ತಿತ್ತು ಕವಿತೆ” ಕವಿ ಹೇಳಿದ ಹಾಗೆ, ಕವಿತೆಗಳು ಅರಳುವುದು ಬಡತನದ ಬೇಲಿಯಲ್ಲಿ. ಕಷ್ಟದ ಕುಲುಮೆಯಲ್ಲಿ ಕುದ್ದು, ತೇವಗೊಂಡ ಕಣ್ಣಿನಲ್ಲಿ ನಿಲ್ಲದೆ ಕವಿತೆಗಳು ಅವತರಿಸುತ್ತವೆ. ಕವಿತೆ ಎಂದಿಗೂ ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಮೈಚಾಚಿ ನಕ್ಕ ಉದಾಹರಣೆಗಳೇ ಇಲ್ಲ. ಮಗು ಹೆರುವ ಸಂಕಟ ತಾಯಿಗಷ್ಟೇ ಗೊತ್ತಿರುವಂತೆ, ಕವಿತೆ ಬರೆದು ನಿರಾಳವಾಗುವ ದರ್ದು ಕವಿಯಲ್ಲದೆ ಮತ್ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯ? ಹಾಗೆಂದೇ ಇಲ್ಲಿ ಕವಯಿತ್ರಿ ಸುಮತಿ ಕೃಷ್ಣಮೂರ್ತಿ ಅವರು ಅಷ್ಟು ಸುಲಭಕ್ಕೆ ಕಾವ್ಯಕನ್ನಿಕೆಯನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಒಂದಷ್ಟು ತ್ಯಾಗ, ತಪನೆ, ಶೃದ್ಧೆ, ಸಹನೆ ಬೇಕಾಗುತ್ತದೆ ಎನ್ನುತ್ತಾರೆ. ಸುಲಭಕ್ಕೆ ಎಲ್ಲವೂ ದಕ್ಕಿದರೆ ಅದಕ್ಕೆ ಬೆಲೆಯಿರುವುದಿಲ್ಲ, ಸಂಘರ್ಷ, ಹೋರಾಟಗಳಿಂದ ಅದನ್ನು ಪಡೆದರೆ ಅದರ ಮೌಲ್ಯ ಗೊತ್ತಾಗುತ್ತದೆ. ನಿಮಗೂ ಕಾವ್ಯಕನ್ನಿಕೆ ಪರವಶಳಾಗಬೇಕೆ? ಹಾಗಿದ್ದರೆ ಕವಯಿತ್ರಿ ನೀಡುವ ಅರ್ಥಪೂರ್ಣ ಸಾಲುಗಳನ್ನು ಒಳಗಿಳಿಸಿಕೊಳ್ಳಿ.
ದಾರಿಯ ಇಕ್ಕೆಲಗಳಲ್ಲಿ ಅರಳಿ ನಿಂತ ಹೂಗಳು ಕೈಚಾಚಿದರೆ ಸಿಗುವಷ್ಟು ಸುಲಭವಾಗಿ ಕವಿತೆ ಕೈಗೆಟಕುವುದಿಲ್ಲ. ಅದಕ್ಕೊಂದಿಷ್ಟು ಶ್ರಮ ಬೇಕು. ಎಲ್ಲ ಅಡೆತಡೆಗಳನ್ನು ದಾಟಿ ತೋಟದಲ್ಲಿರುವ ಮಲ್ಲಿಗೆಯ ಮೊಗ್ಗುಗಳನ್ನು ಬಿಡಿಸಿ, ಒಂದೊಂದನ್ನೇ ದಾರದಲ್ಲಿ, ಪ್ರೇಮದಿಂದ ಪೋಣಿಸಿದಾಗ ಮಾಲೆ ಸಿದ್ಧವಾಗುತ್ತದೆ. ಹಾಗೆಯೇ ಒಳಗೊಳಗೆ ಕಾವ್ಯದ ಸಾಲು ಮೊಳೆಯಬೇಕು, ಪಕ್ವವಾಗಬೇಕು, ಧ್ಯಾನಿಸಬೇಕು ನಂತರ ಅಕ್ಷರದ ಮಾಲೆಯಲ್ಲಿ ಪೋಣಿಸಿ ಕವಿತೆಯ ಹಾರವಾಗಿಸಬೇಕು. ಸಲೀಸಾಗಿ ಸಿಕ್ಕುವ ತೋಟದ ಹಣ್ಣಿನಂತೆ ಕವಿತೆ ಕೈಹಿಡಿಯುವುದಿಲ್ಲ. ಬದುಕು ಕೊಡುವ ಪೆಟ್ಟುಗಳನ್ನು ತಾಳಿಕೊಳ್ಳಬೇಕು, ಕಷ್ಟ ಮೆಟ್ಟಿ ಸಾಗಬೇಕು. ನೋವುಗಳನ್ನು ಅವುಡುಗಚ್ಚಿ ನುಂಗಬೇಕು. ಎಲ್ಲ ನೆನಪುಗಳನ್ನು ಜತನವಾಗಿಟ್ಟುಕೊಳ್ಳಬೇಕು. ನಮ್ಮೆದೆಯ ಗಾಯಕ್ಕೆ ನಾವೇ ಮುಲಾಮು ಸವರುತ್ತಾ ಕಣ್ಣು ತೋಯಿಸಿಕೊಳ್ಳಬೇಕು. ಕವಿತೆ ಮಡಿಲ ಮಗುವಾಗಿ ನಗುತ್ತದೆ. ಸುಮ್ಮನೆ ಒಲಿಯಲು ಕವಿತೆಯೇನು ಅಂಗಡಿಯ ಹೊರಗೆ ಸಾಲಾಗಿಟ್ಟ ಉಪ್ಪಿನ ಮೂಟೆಯೆಂದುಕೊಂಡಿರಾ? ಖಂಡಿತ ಇಲ್ಲ. ಜಾತಿಯ ಹಂಗು ಹರಿದು, ಧರ್ಮಗಳ ಗೊಡವೆಗೆ ತಲೆ ಕೊಡದೆ ಸಮತೆಯ ತೋಳ ತೆಕ್ಕೆಯಲ್ಲಿ ಸರ್ವರನ್ನೂ ಬಿಗಿದಪ್ಪಬೇಕು. ಗಂಡು, ಹೆಣ್ಣೆಂಬ ಭಿನ್ನತೆ ತಲೆಯಿಂದ ಹೊರಗಿಡಬೇಕು. ಹೆಸರಿನ ಹಪಹಪಿಗೆ ಬೀಳದೆ, ಶ್ರೇಷ್ಠತೆಯ ವ್ಯಸನಕ್ಕೆ ಬಲಿಯಾಗದೆ ನಿಶ್ಚಿಂತನಾಗಿರಬೇಕು. ಇವು ಕಾವ್ಯವನ್ನು ಒಲಿಸಿಕೊಳ್ಳುವ ಪರಿ ನೋಡಾ ಎಂದು ಸುಮತಿ ಕೃಷ್ಣಮೂರ್ತಿ ಅವರು ತಿಳಿ ಹೇಳುತ್ತಾರೆ.
ಕವಿತೆ ಬರೆಯುವುದು ಸುಲಭ ಎಂದುಕೊಂಡವರಿಗೆ, ಕಾವ್ಯವನ್ನು ಸಿದ್ಧಿಸಿಕೊಳ್ಳುವುದು ಹೇಗೆ ಎಂದು ಆಲೋಚಿಸುವವರಿಗೆ, ಕಾವ್ಯ ದಕ್ಕುವ ಬಗೆಯನ್ನು ಅರಹುವ ಕವಿತೆ ಇಷ್ಟವಾಗುತ್ತದೆ. ಜಗದ ನೋವನ್ನು ಗಂಟಲಿಗೆ ಬಸಿದುಕೊಂಡು ಹಾಡಾಗಿಸುವ ಹರಕತ್ತೇ ಕವಿತೆ ಎನ್ನುವ ಸತ್ಯ ಅರ್ಥ ಮಾಡಿಸುತ್ತದೆ. ಕವಯಿತ್ರಿಗೆ ನಮನಗಳು.
- ನಾಗೇಶ್ ಜೆ. ನಾಯಕ
