ಕವಿ ಶರಣಗೌಡ ಬಿ ಪಾಟೀಲ ತಿಳಗೂಳ ಅವರ ಲೇಖನಿಯಲ್ಲಿ ಅರಳಿದ ಕವನವನ್ನು ತಪ್ಪದೆ ಮುಂದೆ ಓದಿ…
ಸ್ವರಾಜ್ಯಕ್ಕಾಗಿ
ಮನೆ ಮಠ,
ಸಂಸಾರವ ಬಿಟ್ಟು
ಮಾನ ,ಪ್ರಾಣ
ಪಣಕ್ಕಿಟ್ಟು
ಹೋರಾಡಿದ
ಅಸಂಖ್ಯ ವೀರರು
ಅಂದು ಪರಕಿಯರ ಎದುರಿಸಿ
ಗೆದ್ದು ಬೀಗಿದರು!,
ತಕ್ಕಡಿ ಹಿಡಿದು
ಬಂದವರು
ಅಧಿಕಾರ ದಾಹಕ್ಕೆ
ಕೋವಿ ಹಿಡಿದು
ಮೋಸ ವಂಚನೆ
ಕ್ರೌರ್ಯದ
ಜಾಲ ಬೀಸಿದರು!
ಸಾವಿರಾರು ಮನೆ
ಮುರಿದು ಅರಮನೆ
ಕಟ್ಟಿ ಸುಖದ
ಸುಪ್ಪತ್ತಿಗೆಯಲಿ
ತೇಲಾಡಿದರು !
ಅನ್ನ ನೀಡಿದವರ
ಮನೆಗೆ ಕನ್ನ ಹಾಕಿ
ಸ್ವಾಭಿಮಾನದ
ಕಿಚ್ಚು ಹಚ್ಚಿದರು!
ಶತ ಶತಮಾನಗಳ
ಕಾಲ ಅಮಾನವೀಯ
ವರ್ತನೆ ತೋರಿ
ಕ್ರೌರ್ಯ ಮೆರಿದರು!
ಕೋಟಿ ಕೋಟಿ
ಸ್ವಾಭಿಮಾನದ ಕೂಗಿಗೆ
ತಲೆಯ ಬಾಗಿ
ಅಧಿಕಾರ ತೊರೆದು
ಹೊರಟು ಹೋದರು!
ಮರೆಯಲಾಗದ
ಆ ಇತಿಹಾಸ!
ಸುರಾಜ್ಯವಾಗಿ
ಮೂಡಲಿ ಎಲ್ಲರ
ಮುಖದಲಿ ಮಂದಹಾಸ!!
- ಶರಣಗೌಡ ಬಿ ಪಾಟೀಲ ತಿಳಗೂಳ
