ರಿಷಬ್ ಶೆಟ್ಟಿ ಎಂಬ ಮಾಯಕಾರ

ರಿಷಬ್ ಅವರ ನಿಜ ನಾಮಧೇಯ ಪ್ರಶಾಂತ ಶೆಟ್ಟಿ. ಪ್ರಶಾಂತ ಎಂಬುದು ಹೆಸರಾಗಿದ್ದಾಗ ಬದುಕು ಪ್ರಕ್ಷುಬ್ಧ. ಹೆಸರನ್ನು ರಿಷಬ್ ಎಂದು ಬದಲಿಸಿಕೊಂಡಾಗ ಅದು ನಿರುಮ್ಮಳ! ಈಗ ಮನಸ್ಸು ಪ್ರಶಾಂತ; ನಿರಾಳ! ರಿಷಬ್ ಶೆಟ್ಟಿ ಬೆಂಕಿಯಲ್ಲಿ ಅರಳಿದ ಹೂವು. ಆಗಿನ ಹೋಟೆಲ್ ಮಾಣಿ ಕನ್ನಡದ ಕಣ್ಮಣಿಯಾದ ಕಥನವನ್ನು ಲೇಖಕರಾದ ಕೆ. ರಾಜಕುಮಾರ್ ಅವರ ಲೇಖನಿಯಲ್ಲಿ ತಪ್ಪದೆ ಮುಂದೆ ಓದಿ…

ಕೋಟಿ ಕೋಟಿ ಕನ್ನಡಿಗರ ಪೂಜಾಫಲ ಫಲಿಸಿದೆ. ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟನೆಂದು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ರಿಷಬ್ ನಿರ್ದೇಶನದ ಕಾಂತಾರ ದೇಶದ ಶ್ರೇಷ್ಠ ಮನರಂಜನಾ ಚಿತ್ರ ಎಂಬ ಪುರಸ್ಕಾರಕ್ಕೂ ಭಾಜನವಾಗಿದೆ. ರಿಷಬ್ ಅವರಿಗೆ ಒಮ್ಮೆಲೇ ಎರಡು ಪ್ರಶಸ್ತಿಗಳು! ಅವರಿಗೆ ಶುಭಾಭಿನಂದನೆಗಳು

ಇಡೀ ಭಾರತವನ್ನು ಸಮೂಹ ಸನ್ನಿಯಂತೆ ಆವರಿಸಿಕೊಂಡ ಚಿತ್ರ ಕಾಂತಾರ. ಅದು ರಿಷಬ್ ಶೆಟ್ಟಿ ಎಂಬ ಕನ್ನಡ ಕುವರನ ಮೆದುಳ ಕೂಸು. ಅವರದೇ ಪರಿಕಲ್ಪನೆ, ನಟನೆ; ನಿರ್ದೇಶನ.

ರಿಷಬ್ ಅವರ ನಿಜ ನಾಮಧೇಯ ಪ್ರಶಾಂತ ಶೆಟ್ಟಿ. ಆ ಹೆಸರು ಆಗಿಬರಲಿಲ್ಲ. ಮನಸ್ಸು ಪ್ರತಿಕ್ಷಣವೂ ನೊರೆಗರೆದು ಕುದಿವ ಕಡಲಾಯಿತು. ಸದಾ ಸಂಕಷ್ಟದ ಸರಮಾಲೆ. ಸರಣಿ ಸೋಲುಗಳು ಸಾಲುಗಟ್ಟಿದವು. ಅವರಲ್ಲಿನ ಉತ್ಸಾಹದ ಊಟೆ ಬತ್ತಿಹೋಯಿತು. ಜಯಮಾಲೆ ಕೊರಳಿಗೆ ಬೀಳಲಿಲ್ಲ. ಯಾರೋ ನೀಡಿದ ಸಲಹೆಯಂತೆ ತೆರೆಯ ಮೇಲಿನ ನಾಮ್-ನಿಶಾನ್ ಬದಲಿಸಿದರು. ಪ್ರಶಾಂತ ಶೆಟ್ಟಿ ರಿಷಬ್ ಶೆಟ್ಟಿ ಆದರು.

ರಿಷಬ್; ವೃಷಭ ವಾಹನನಾದ ಮೇಲೆ ಗೆಲುವು ಹಿಂಬಾಲಿಸಲಿಲ್ಲ; ಅಟ್ಟಿಸಿಕೊಂಡು ಬಂತು! ಶುಭವು ತಾನಾಗಿ ಕದ ಬಡಿದು ಕೈಹಿಡಿಯಿತು. ಪ್ರಶಾಂತ ಎಂಬುದು ಹೆಸರಾಗಿದ್ದಾಗ ಬದುಕು ಪ್ರಕ್ಷುಬ್ಧ. ಹೆಸರನ್ನು ರಿಷಬ್ ಎಂದು ಬದಲಿಸಿಕೊಂಡಾಗ ಅದು ನಿರುಮ್ಮಳ! ಈಗ ಮನಸ್ಸು ಪ್ರಶಾಂತ; ನಿರಾಳ! ಇದು ಅಪೇಕ್ಷಣೀಯ ವ್ಯೆರುಧ್ಯ. ಇದು ರಿಷಬ್ ಅವರ ಗಾಢ ನಂಬಿಕೆ. ನಂಬಿ ಕೆಟ್ಟವರಿಲ್ಲವೋ ಹರಿ, ನಂಬದೆ ಕೆಟ್ಟರೆ ಕೆಡಲಿ ಎಂಬ ಪುರಂದರದಾಸರ ಪದ ನೆನಪಾಯಿತು.

ಫೋಟೋ ಕೃಪೆ : google

ರಿಷಬ್ ಶೆಟ್ಟಿ ಬೆಂಕಿಯಲ್ಲಿ ಅರಳಿದ ಹೂವು. ಬದುಕನ್ನು ಕಟ್ಟಿಕೊಳ್ಳಲು ಬೀಡಿ ಕಟ್ಟಿದರು. ಕುಟುಂಬದ ನೊಗ ಹೊರಲು ನೀರಿನ ಕ್ಯಾನು ಹೊತ್ತರು. ಬದುಕನ್ನು ಸರಿತಿದ್ದಿಕೊಳ್ಳಲು ಹೋಟೆಲಿನ ಟೇಬಲ್ ಸಹ ಒರೆಸಬೇಕಾದ ಅನಿವಾರ್ಯ. ಹೀಗೆ ಉದರ ನಿಮಿತ್ತಕ್ಕಾಗಿ ಬಹುಕೃತ ವೇಷ ಧರಿಸಿದರು. ಆಗಿನ ಹೋಟೆಲು ಮಾಣಿ ಇಂದು ಕನ್ನಡಿಗರೆಲ್ಲರ ಕಣ್ಮಣಿ. ಕರುನಾಡಿನಾಚೆಗೂ ಅವರ ಹೆಸರು ಈಗ ಜನಜನಿತ.

ಅವರ ಶ್ವೇತ ವಸ್ತ್ರಸಂಹಿತೆ ಕಂಡು ಗೌರವ ಮೂಡುತ್ತದೆ. ಅವರ ದೇಹಭಾಷೆಯಿಂದ ಉಡಾಳರು ಕಲಿಯುವುದು ಸಾಕಷ್ಟಿದೆ. ಅವರ ನಮ್ರತೆ ನೋಡಿ ಮಂದಿ ಬೆರಗಾಗಿದ್ದಾರೆ. ಯಶೋ ಶಿಖರದ ತುದಿಯಲ್ಲಿ ಕೂತಾಗಲೂ ತಲೆ ಭುಜದ ಮೇಲೆಯೇ ನಿಂತಿದೆ. ಕತ್ತನ್ನು ತುಸು ಕೆಳಕ್ಕೆ ಬಾಗಿಸಿ, ಮಂದಸ್ಮಿತರಾಗಿ, ತುಸು ಸಂಕೋಚ ಬೆರೆಸಿ ಮಾತಾಡುವುದು ಕಂಡಾಗ ತಾವು ಕ್ರಮಿಸಿದ ಹಾದಿಯನ್ನು ಮರೆತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬದುಕು ಅವರಿಗೆ ಬಹಳಷ್ಟನ್ನು ಕಲಿಸಿದೆ. ಮಾತಿನಲ್ಲಿ ಕೊಚ್ಚಿಕೊಳ್ಳದ ಸ್ವಭಾವ. ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂಬ ಬಸವಪಥ ಈ ಬಂಟರ ಯುವಕನದು.

ಆತ್ಮರತಿ ಇಣುಕಿದ್ದನ್ನು ಕಂಡವರೇ ಇಲ್ಲ. ಧಾರ್ಷ್ಟ್ಯವೆಂದರೆ ಗೊತ್ತೇ ಇಲ್ಲ. ಅಹಂ ಅನ್ನು ಗಾವುದ, ಗಾವುದ ದೂರವಿಟ್ಟಿದ್ದಾರೆ. ಕಾಂತಾರದ ಗಲ್ಲಾಪೆಟ್ಟಿಗೆಯಲ್ಲಿ ದಿನದಿನವೂ ಕನಕವರ್ಷದ ಕುಂಭದ್ರೋಣ. ಆದರೂ ಇವರ ಸಂಯಮ ದೊಡ್ಡದು. ಬೀಗಿ ನಡೆಯುತ್ತಿಲ್ಲ. ಬೆಟ್ಟದಡಿಯ ಹುಲ್ಲಿನಂತೆ ಬಾಗುವ, ಮುದುರುವ ವಿನೀತ ಸ್ವಭಾವ. ವಿಶ್ವದೆಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ. ಚಿತ್ರಕಾರಣಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲ ಘಟಾನುಘಟಿಗಳ ಪ್ರಶಂಸೆಗೆ ಅವರು ಪಾತ್ರರಾಗಿದ್ದಾರೆ. ಆದರೆ ಅದರ ತೀವ್ರ ಹರಿವಿಗೆ ರಿಷಬ್ ಕೊಚ್ಚಿಹೋಗಿಲ್ಲ. ಅವರು ಅದನ್ನು ಸಹಜವಾಗಿ ಮೆಟ್ಟಿನಿಂತ ಗಟ್ಟಿ ಅಣೆಕಟ್ಟು. ಅವರು ಬರಿಯ ಚೇತನರಲ್ಲ. ಅದಮ್ಯ ಚೇತನರು.

ಡಾ. ರಾಜ್ ಜನಮಾನಸದೊಳಕ್ಕೆ ಬೇರು-ಬಿಳಲು ಬಿಡಲು ಕಾರಣವಾಗಿದ್ದು ಇಂತಹುದೇ ಸರಳವಂತಿಕೆ. ಲೇಖಕಿ-ಚಿಂತಕಿ-ಸಮಾಜ ಸೇವಕಿ ಡಾ. ಸುಧಾಮೂರ್ತಿ ಅವರು ಜನರಲ್ಲಿ ನಂಬಿಕೆ ಮೂಡಿಸಿ, ವಿಶ್ವಾಸದ ರೆಂಬೆಕೊಂಬೆ ಚಾಚಲು ನೆರವಾಗಿದ್ದು ಇಂತಹುದೇ ವಸ್ತ್ರಸಂಹಿತೆ ಮತ್ತು ನೇರವಂತಿಕೆ. ಡಾ. ರಾಜಕುಮಾರರಂತೆ ರಿಷಬ್ ಅವರದು ಸಹ ಸೋಗಿನ ನಡೆಯಲ್ಲ. ಚಂದನವನಕ್ಕೊಬ್ಬ ಚೆಂದದ ನಡೆ-ನುಡಿಯ, ನಟ-ನಿರ್ದೇಶಕ ದೊರೆತ ಪರ್ವಕಾಲವಿದು.

ಈ ಸಲದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ನಟ ಪ್ರಶಸ್ತಿಗೆ ರಿಷಬ್ ಪಾತ್ರರಾಗಿದ್ದಾರೆ. ಅವರ ಜಶದ ಹಾದಿ ಮತ್ತಷ್ಟು ತೆರೆದುಕೊಳ್ಳಲಿ. ಮುಂದಿನ ಜನವರಿಯಲ್ಲಿ ಅವರಿಗೆ ಪದ್ಮ ಪ್ರಶಸ್ತಿಯೊಂದು ಒಲಿಯಲಿ. ಕರ್ನಾಟಕ ಸರ್ಕಾರ ಹಾಗೂ ಕನ್ನಡ ಮಹಾಜನತೆ ಪದ್ಮಪುರಸ್ಕಾರಕ್ಕೆ ಅವರ ಹೆಸರನ್ನು ಮರೆಯದೆ ಸೂಚಿಸಲಿ. ಹೆಸರು ಸೂಚಿಸಲು ಸೆಪ್ಟೆಂಬರ್ 15 ಕಡೆಯ ದಿನ.

#ಕಾಂತಾರಕ್ಕೆ #ಆಸ್ಕರ್ ಪ್ರಶಸ್ತಿ(ಗಳು) ದೊರೆತರೆ ಸ್ವತಃ ಆಸ್ಕರಿನ ಘನತೆ ಗೌರವ ಹೆಚ್ಚುತ್ತದೆ. ಮುಕ್ಕಾಗಿರುವ ಅದರ ಜನಪ್ರಿಯತೆ ಮರಳಿ ಸರಿಹಾದಿಗೆ ಬರುತ್ತದೆ. ಕಾಂತಾರ ಮತ್ತು ಆಸ್ಕರ್ ಸರಿಯಾದ ಜೋಡಿ! ಭಾರತದ, ಏಷ್ಯದ ಬದುಕು; ಅದರ ರೀತಿ, ನೀತಿ, ನಂಬಿಕೆ, ಆಚರಣೆ ಸಂಪ್ರದಾಯಗಳನ್ನು ಆಸ್ಕರ್ ಎಂದೂ ಮನ್ನಿಸಿದ್ದೇ ಇಲ್ಲ; ಪುರಸ್ಕರಿಸಿದ್ದೇ ಇಲ್ಲ. ತನ್ನ ಪಾಪದ ಕೊಳೆಯನ್ನು, ಮೈಲಿಗೆಯನ್ನು ತೊಳೆದುಕೊಳ್ಳಲು ಆಸ್ಕರ್.ಗೆ ಇದೊಂದು ಒಳ್ಳೆಯ ಅವಕಾಶ. ಈ ಸಲವೂ ಅದು ಭಾರತೀಯ ಚಿತ್ರಗಳ ಬಗೆಗೆ ಎಂದಿನಂತೆ ಅನಾದರ ತೋರಿದರೆ, ನಮ್ಮ ಅಸೀಮ ಸಾಹಸಗಳನ್ನು ಕಂಡು ಉರಿದುಕೊಂಡು ಬಿದ್ದರೆ; ಅದರ ಮುಕುಟ ಉಲ್ಕೆಯಂತೆ ಉದುರುವುದು ಖಂಡಿತ. ಗದ್ದುಗೆ ಉರುಳುವುದು ಖಚಿತ. ಹಾಗಾಗಿ ಕಾಂತಾರಕ್ಕೆ ಆಸ್ಕರ್ ಒಲಿದು ಬರಲಿ. ಆಸ್ಕರ್ ಕಾಂತಾರವನ್ನು ವರಿಸಲಿ.

ಫೋಟೋ ಕೃಪೆ : google

ಕಾಂತಾರ ಕುರಿತು ಮಾತು-ಮಂಥನ, ಚರ್ಚೆ-ವಿಮರ್ಶೆ, ಸಂವಾದ-ಸಂದರ್ಶನ ಎರಡು ವರ್ಷದಿಂದ ನಡೆಯುತ್ತಲೇ ಇವೆ. ಅದು 60 ದಿನಗಳಲ್ಲಿ ಸುಮಾರು ರೂ. 400 ಕೋಟಿ ಗಳಿಸಿದೆ ಎಂಬುದು ಎಲ್ಲರಿಗೂ ಅಜೀಬ್ ಕಿ ಬಾತ್ ಆಗಿದೆ. ಭಾರತದ ಅಂದಿನ ವಾಣಿಜ್ಯ ಸಚಿವ ಪೀಯುಷ್ ಗೋಯಲ್ ಅವರಿಗೆ ಕಾಂತಾರ ಅದೊಂದು ಫಕರ್ ಕಿ ಬಾತ್! ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇದು ಕರಾವಳಿಯ ಶ್ರೀಮಂತ ಪರಂಪರೆಯನ್ನು ಸಾದರಪಡಿಸಿರುವ ಚೆಂದದ ಚಿತ್ರ. ಇದು ಅವರಿಗೆ ಫಿಕರ್ ಕಿ ಬಾತ್ ಅಲ್ಲ; ಬಾ ಇಸ್ಸೇ ಫಕರ್! ಹಾಗೆಂದರೆ ಹೆಮ್ಮೆಯ ಸಂಗತಿ ಎಂದರ್ಥ. ಹಾಗಾಗಿ ಕಾಂತಾರದ ವಿಮರ್ಶೆಯ ಅಂಶಗಳನ್ನು ನಾನು ಪುನರುಕ್ತಿಸಿಲ್ಲ.

ನನಗೆ ಅಚ್ಚರಿ ಅಂತನಿಸಿದ್ದು ಸರಳತೆಗೇ ಪಾಠ ಹೇಳಿಕೊಡುವಂತಹ ಸಾಮರ್ಥ್ಯ ಪಡೆದ ರಿಷಬರ ಧೀಮಂತ ವ್ಯಕ್ತಿತ್ವ. ನೀವೂ ಕೊರಳಿಗೆ ಕೊರಳು ಸೇರಿಸಿ. ಗಳಕ್ಕೆ ಗಳ ಸೇರಿದರೆ ಬಹುಗಳವಾಗುತ್ತದೆ. ಕೋಟಿ ಕೋಟಿ ಕಂಠ ಕಲಕಲ ನಿನಾದವಾಗುತ್ತದೆ.

ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ರಿಷಬ್ ಸಿನಿಮಾ ಕಾರ್ಮಿಕರಾಗಿದ್ದರು. ಕ್ಲಾಪ್ ಬಾಯ್ ಸಹ ಆಗಿದ್ದರು. ಅದೇ ಕ್ಲಾಪ್ ಬಾಯ್.ನ ಸಾಧನೆಗಾಗಿ ಇದೀಗ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಜರ್ಮನಿ, ಅರಬ್ ರಾಷ್ಟ್ರಗಳನ್ನೂ ಒಳಗೊಂಡಂತೆ ಇಡೀ ಜಗತ್ತು ಸೂರು ಮುಟ್ಟುವಂತೆ, ಛತ್ ಹಾರುವಂತೆ ಚಪ್ಪಾಳೆ ತಟ್ಟುತ್ತಿದೆ. ಕ್ಲಾಪ್ ಬಾಯ್.ನ ಕಿವಿಗಳಲ್ಲಿ ಚಪ್ಪಾಳೆಗಳದ್ದೇ ಅನುರಣನ.

ಶಾಲಾ ಪರೀಕ್ಷೆಗಳಲ್ಲಿ 30–35% ಅಂಕ ಪಡೆಯಲು ಹೆಣಗಾಡುತ್ತಿದ್ದವರು ರಿಷಬ್. ಚಲನಚಿತ್ರಗಳ ಯಶಸ್ಸಿನ ಮಾಪಕ IMDb. ಅದರಲ್ಲಿ 10ಕ್ಕೆ 9.3 ಅಂಕ ಪಡೆದು ಇಡೀ ಭಾರತದಲ್ಲಿ ಯಾವ ಭಾಷೆಯ ಚಿತ್ರವೂ ಮಾಡದ ಸಾಧನೆಯನ್ನು ರಿಷಬ್ ನಿರ್ದೇಶನದ ಕಾಂತಾರ ಮಾಡಿದೆ! ಕನ್ನಡಿಗರಾದ ನಾವೂ ಸಹ ಕರತಾಡನ ಮಾಡೋಣ; ಜಯಘೋಷವನ್ನು ಮೊಳಗಿಸೋಣ. ಹಿಂದಿಯೊಂದೇ ದೇಶವನ್ನು ಜೋಡಿಸುವ ಭಾಷೆ ಎಂದರು ಅಮಿತ್ ಶಾ. ಈಗ ಕನ್ನಡವನ್ನೂ ‘ಜೋಡನೇಕಿ’ ಭಾಷಾ ಎಂದು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯವನ್ನು ಕಾಂತಾರ ಸೃಷ್ಟಿಸಿದೆ!


  •  ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading